Tag: mitra

  • ನನ್ನ ಸಿನಿ ಜರ್ನಿಯಲ್ಲೇ ಇಂಥದ್ದೊಂದು ಪಾತ್ರ ಮಾಡಿಲ್ಲ: ನಟ ಮಿತ್ರ

    ನನ್ನ ಸಿನಿ ಜರ್ನಿಯಲ್ಲೇ ಇಂಥದ್ದೊಂದು ಪಾತ್ರ ಮಾಡಿಲ್ಲ: ನಟ ಮಿತ್ರ

    ‘ಕರಾವಳಿ’ (Karavali) ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಸಿನಿಮಾ. ಪ್ರಜ್ವಲ್ ದೇವರಾಜ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾಗೆ ಗುರುದತ್ ಗಾಣಿಗ (Gurudutt Ganiga) ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚಿಗಷ್ಟೇ ನಾಯಕಿ ಸಂಪದ ಅವರನ್ನು ಪರಿಚಯಿಸಿದ್ದ ಸಿನಿಮಾ ತಂಡ ಇದೀಗ ಮತ್ತೊಂದು ಮಹತ್ವದ ಪಾತ್ರದ ಪರಿಚಯ ಮಾಡಿಕೊಡುವ ಮೂಲಕ ಸಿನಿಮ ಬಗ್ಗೆ ಮತ್ತಷ್ಟು ಕುತೂಹಲವನ್ನ ಹೆಚ್ಚಿಸಿದೆ. ಕರಾವಳಿ ಸಿನಿಮಾಗೆ ಖ್ಯಾತ ನಟ ಮಿತ್ರ (Mitra) ಎಂಟ್ರಿ ಕೊಟ್ಟಿದ್ದಾರೆ.

    ಇಂದು ಮಹಾಶಿವರಾತ್ರಿಯ ಪ್ರಯುಕ್ತ ಫಸ್ಟ್ ಲುಕ್  ರಿವೀಲ್ ಮಾಡುವ ಮೂಲಕ ನಟ ಮಿತ್ರ ಅವರನ್ನು ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಿದೆ ಕರಾವಳಿ ಸಿನಿಮಾತಂಡ. ಸಿನಿಮಾದಲ್ಲಿ ನಾಯಕ ನಾಯಕಿಯ ಹಾಗೆ ಪೋಷಕ ಪಾತ್ರಗಳು ಸಹ ಅಷ್ಟೇ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಕರಾವಳಿಯಲ್ಲಿ ನಟ ಮಿತ್ರ ಅವರು ನಿರ್ವಹಿಸುತ್ತಿರುವ ಪಾತ್ರ ಅಷ್ಟೇ ಮಹತ್ವದಾಗಿದೆ‌. ಸದ್ಯ ರಿಲೀಸ್ ಆಗಿರುವ ಫಸ್ಟ್ ಲುಕ್ ನಲ್ಲಿ ನಟ ಮಿತ್ರ ಎರಡು ಕೋಣಗಳನ್ನು ಹಿಡಿದು ನಿಂತಿದ್ದಾರೆ. ಅವರ ಹಿಂದೆ ಒಂದು ಲಾರಿ ನಿಂತಿದ್ದು ಅದರ ಮೇಲೆ ಮಾರಣಕಟ್ಟೆ ಎಂದು ಬರೆಯಲಾಗಿದೆ. ಈ ಲುಕ್ ನೋಡ್ತಿದ್ರೆ ಮಿತ್ರ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ದುಪ್ಪಟ್ಟಾಗಿಸಿದೆ. ಮಹಾಬಲ ಪಾತ್ರದಲ್ಲಿ ಮಿತ್ರ ಮಿಂಚಲಿದ್ದಾರೆ.

    ಇನ್ನೂ ಈ ಬಗ್ಗೆ ಮಾತನಾಡಿರುವ ಮಿತ್ರ, ‘ನನ್ನ ಸಿನಿ ಜೀವನದಲ್ಲಿಯೇ ನಾನು ಮಾಡಿರದ ವಿಭಿನ್ನವಾದ ಪಾತ್ರದಲ್ಲಿ  ಕಾಣಿಸಿಕೊಳ್ಳುತ್ತಿದ್ದೇನೆ. ನಿರ್ದೇಶಕ ಗುರುದತ್ ಗಾಣಿಗ ಅವರು ನನಗೆ ಅದ್ಭುತವಾದ ಪಾತ್ರವನ್ನು ನೀಡಿದ್ದಾರೆ. ಕರಾವಳಿ ಸಿನಿಮಾದಲ್ಲಿ ನಟಿಸುತ್ತಿರುವ ಖುಷಿ ನನಗಿದೆ’ ಎನ್ನುತ್ತಾರೆ.

    ಇತ್ತೀಚಿಗಷ್ಟೇ ಮುಹೂರ್ತ ಮಾಡಿಕೊಂಡು ಚಿತ್ರೀಕರಣಕ್ಕೆ ಹೊರಟಿರುವ ಸಿನಿಮಾ ತಂಡ ಕರಾವಳಿಯ ಸುತ್ತಮುತ್ತ ಶೂಟಿಂಗ್ ನಲ್ಲಿ ಬಿಸಿಯಾಗಿದೆ. ಚಿತ್ರಕ್ಕೆ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಅವರದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

    ಕರಾವಳಿ  ಮನುಷ್ಯ ಹಾಗೂ ಪ್ರಾಣಿಯ ಮಧ್ಯೆ ನಡೆಯುವ ಸಂಘರ್ಷದ ಕಥೆ. ಇದು ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಮೂಡಿ ಬರಲಿದೆ. ಕಂಬಳ ಪ್ರಪಂಚದಲ್ಲಿ ನಡೆಯುತ್ತಿರುವ ಕಥೆ. ಈ ಸಿನಿಮಾ ಸಂಪೂರ್ಣವಾಗಿ ಕಂಬಳದ ಬಗ್ಗೆ ಇರಲಿದೆ.  ಇನ್ನು ಕರಾವಳಿ ಸಿನಿಮಾಗೆ ಅಭಿಮನ್ಯು ಸದಾನಂದ್ ಕ್ಯಾರೆಮಾ ವರ್ಕ್ ಇದೆ,  ಸಚಿನ್ ಬಸ್ರೂರು ಸಂಗೀತ ಚಿತ್ರಕ್ಕಿದೆ. ಇನ್ನು ಉಳಿದಂತೆ ಈ ಸಿನಿಮಾದಲ್ಲಿ  ಟಿವಿ ಶ್ರೀಧರ್, ಜಿ ಜಿ, ನಿರಂಜನ್ ಸೇರಿದಂತೆ ಹಲವು ಪ್ರಖ್ಯಾತ ಕಲಾವಿದರು ನಟಿಸುತ್ತಿದ್ದಾರೆ.

  • ‘ಕರಾವಳಿ’ಯಲ್ಲಿ ಮಹಾಬಲನಾದ ಮಿತ್ರ

    ‘ಕರಾವಳಿ’ಯಲ್ಲಿ ಮಹಾಬಲನಾದ ಮಿತ್ರ

    ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಾವಳಿ (Karavali)ಸಿನಿಮಾದ ಮತ್ತೊಂದು ಮೆಗಾ ಪಾತ್ರ ರಿವೀಲ್ ಆಗಿದೆ. ಶಿವರಾತ್ರಿ ದಿನದಂದು ಅವನು ಎಂಟ್ರಿ ಕೊಡುತ್ತಿದ್ದಾನೆ ಎಂದು ಹೇಳುವ ಮೂಲಕ ಚಿತ್ರತಂಡ ಕುತೂಹಲ ಸೃಷ್ಟಿ ಮಾಡಿತ್ತು. ಇದೀಗ ಮಹಾಬಲ (Mahabala) ಪಾತ್ರದ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಈ ಪಾತ್ರದಲ್ಲಿ ಹೆಸರಾಂತ ಹಾಸ್ಯ ನಟ ಮಿತ್ರ (Mitra) ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಇಂಥದ್ದೊಂದು  ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರೆ.

    ಗುರುದತ್ ಗಾಣಿಗ (Gurudutt Ganiga) ನಿರ್ದೇಶದ ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ‘ಕರಾವಳಿ’ ಸಿನಿಮಾ ನಾನಾ ಕಾರಣಗಳಿಂದಾಗಿ ನಿರೀಕ್ಷೆ ಹೆಚ್ಚಿಸಿಕೊಳ್ಳುತ್ತಲೇ ಇದೆ. ಮೊನ್ನೆಯಷ್ಟೇ ಸಿನಿಮಾದಿಂದ ನಾಯಕಿ ಯಾರು ಎನ್ನುವ ಮಾಹಿತಿ ಬಹಿರಂಗವಾಗಿತ್ತು. ಕರಾವಳಿಗೆ ನಾಯಕಿ ಯಾರಾಗಲಿದ್ದಾರೆ? ಕನ್ನಡದವರಾ ಅಥವಾ ಪರಭಾಷೆಯ ನಟಿನಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಅದಕ್ಕೂ ತೆರೆ ಎಳೆದಿದ್ದಾರೆ.

    ನಟಿ ಸಂಪದಾ (Sampada) ಕರಾವಳಿ ಸಿನಿಮಾಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಮಿಂಚಿದ್ದ ಸಂಪದಾ ಇದೀಗ ಪ್ಜಜ್ವಲ್‌ಗೆ ನಾಯಕಿಯಾಗುವ ಮೂಲಕ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಕಿರುತೆರೆ ಬಳಿಕ ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳದ ಸಂಪದಾ ಇದೀಗ ಬಹುನಿರೀಕ್ಷೆಯ ಸಿನಿಮಾಗೆ ನಾಯಕಿಯಾಗಿ ಪದಾರ್ಪಣೆ ಮಾಡಿದ್ದಾರೆ. ಅಂದಹಾಗೆ ಸಂಪದಾಗೆ ಇದು  ಮೊದಲ ಸಿನಿಮಾವಲ್ಲ. ಈಗಾಗಲೇ ನಿಖಿಲ್ ಕುಮಾರ್ ನಟನೆಯ ರೈಡರ್ ಸಿನಿಮಾದಲ್ಲಿ ಸಂಪದಾ ನಟಿಸಿದ್ದರು. ಇದೀಗ ಕರಾವಳಿ ಕಥೆ ಕೇಳಿ ಇಂಪ್ರೆಸ್ ಆದ ಸಂಪದಾ ಪ್ರಜ್ವಲ್ ಜೊತೆ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಸಂಪದಾ ಕೆಂಪು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ  ಟೈಟಲ್ ಹೇಳುವ ಹಾಗೆ ಇದು ಪಕ್ಕಾ ಕರಾವಳಿ ಭಾಗದ  ಸಿನಿಮಾ. ಸಂಪೂರ್ಣ ಬ್ಯಾಕ್ ಡ್ರಾಪ್ ಕರಾವಳಿ ಭಾಗದ್ದೆ ಆಗಿರಲಿದೆ. ಸಂಪದಾ ಕೂಡ ಕರಾವಳಿ ಹುಡುಗಿಯಾಗಿ ಮಿಂಚಲಿದ್ದಾರೆ.

     

    ಕರಾವಳಿ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಪ್ರಜ್ವಲ್ ನಟನೆಯ 40ನೇ ಸಿನಿಮಾ ಇದಾಗಿದೆ. ಡೈನಾಮಿಕ್ ಪ್ರಿನ್ಸ್ ಈ ಸಿನಿಮಾದಲ್ಲಿ ಇದುವರೆಗೂ ಕಾಣಿಸಿಕೊಳ್ಳದೆ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಸದ್ಯ ಫಸ್ಟ್ ಮತ್ತು ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ  ಕರಾವಳಿ ಸಂಪೂರ್ಣ ಚಿತ್ರೀಕಣ ಮಂಗಳೂರು ಸುತ್ತಮುತ್ತ ನಡೆಯಲಿದೆ.

  • ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ ಹಾಸ್ಯ ನಟ ಮಿತ್ರ: ಇದು ಅನ್ನದ ಋಣವೆಂದು ನಟ

    ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ ಹಾಸ್ಯ ನಟ ಮಿತ್ರ: ಇದು ಅನ್ನದ ಋಣವೆಂದು ನಟ

    ಸಿನಿಮಾ ಅನ್ನೋದು ಅದ್ಭುತ ಪ್ರತಿಕ್ರಿಯೆ. ಸಿನಿಮಾ ಪ್ರೀತಿ ಮಾಡೋರಿಗೆ ಸದಾ ಅದರದ್ದೇ ಧ್ಯಾನ. ಕನ್ನಡ ಚಿತ್ರರಂಗ ಈಗ ಭಾರತೀಯ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಂಡಿದೆ. ಇಡೀ ಭಾರತೀಯ ಸಿನಿಮಾರಂಗವೇ ಹಾಗೊಮ್ಮೆ ಇತ್ತ ಕಣ್ಣಾಯಿಸುವಂತೆ ಮಾಡಿದ್ದು ಸುಳ್ಳಲ್ಲ. ಇಲ್ಲಿ ಸಿನಿಮಾ ಮಾಡೋದು ಎಷ್ಟು ಕಷ್ಟ-ಇಷ್ಟ ಅನ್ನೋದು ಅಲ್ಲಿ ಅನುಭವಿಸಿದವರಿಗಷ್ಟೇ ಗೊತ್ತು. ಸಿನಿಮಾ ಮಾಡೋದು ದೊಡ್ಡದ್ದಲ್ಲ. ಅದನ್ನು ರಿಲೀಸ್ ಮಾಡಿ, ವ್ಯಾಪಾರ ವಹಿವಾಟು ನಡೆಸೋದು ಮುಖ್ಯ. ಅದೆಷ್ಟೋ  ಸಿನಿಮಾಗಳು ತಯಾರಾಗಿ ರಿಲೀಸ್ ಅಗದೆ ಇಂದಿಗೂ ಆ ಪ್ರಯತ್ನದಲ್ಲಿವೆ. ಹಾಕಿದ ಹಣ ವಾಪಾಸ್ ಪಡೆಯೋದು ಕಷ್ಟ ಅನಿಸಿರುವ ಈ ಸಂದರ್ಭದಲ್ಲೊಂದು ಕನ್ನಡ ಸಿನಿಮಾ ನಿರ್ಮಾಪಕ, ನಿರ್ದೇಶಕರಿಗೆ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ.

    ಹೌದು, ಕನ್ನಡದ ಸದಭಿರುಚಿಯ ಸಿನಿಮಾಗಳನ್ನು ಖರೀದಿಸಿ, ಅವುಗಳಿಗೆ ಪ್ರಚಾರವನ್ನೂ ಮಾಡಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮೂಲಕ ಆ ನಿರ್ಮಾಪಕರಿಗೆ ಸಾಥ್ ನೀಡುವ ಸಂಸ್ಥೆಯೊಂದು ಹುಟ್ಟುಕೊಂಡಿದೆ. ಅಂದಹಾಗೆ, ಅದು ‘ಮನೀಶ್ ಅಂಡ್ ಮಿತ್ರ ಎಂಟರ್ಟೈನ್’ ಸಂಸ್ಥೆ. ಇದು ಕನ್ನಡ ಸಿನಿ ಜಗತ್ತಿನಲ್ಲಿ ಆರಂಭಗೊಂಡ ಹೊಸ ಸಂಸ್ಥೆ. ಇದು ಕನ್ನಡದ ಹಾಸ್ಯ ನಟ ಮಿತ್ರ (Mitra) ಅವರ ಸಾರಥ್ಯದಲ್ಲಿ ಉದ್ಯಮಿ ಮನೀಶ್ ಮೆಹ್ತಾ (Manish Mehta) ಮತ್ತು ಗೆಳೆಯರು ಸೇರಿ ಮಾಡಿರುವ ಸಂಸ್ಥೆ. ‘ಮನೀಶ್ ಅಂಡ್ ಮಿತ್ರ ಎಂಟರ್ಟೈನ್ ‘ ಎಂಬ ಬ್ಯಾನರ್ ಮೂಲಕ ಸದಭಿರುಚಿಯ ಸಿನಿಮಾಗಳ ರೈಟ್ಸ್ , ಅವುಗಳ ವಿತರಣೆ, ರಿಲೀಸ್ ಹೊಣೆ ಹಾಗು ಸಿನಿಮಾ ನಿರ್ಮಾಣ ಆಗಲಿದೆ. ಪ್ರಮುಖವಾಗಿ ಈ ಸಂಸ್ಥೆಯ ಉದ್ದೇಶ, ಕಂಟೆಂಟ್ ಮತ್ತು ಗುಣಮಟ್ಟದ ಸಿನಿಮಾಗಳ ರೈಟ್ಸ್ ಪಡೆದು ರಿಲೀಸ್ ಮಾಡುವ ಕೆಲಸಕ್ಕೆ ಕೈ ಹಾಕಿದೆ. ತಯಾರಾದ ಚಿತ್ರಗಳು, ತಯಾರಾಗದೆ ಸಮಸ್ಯೆಯಲ್ಲಿರುವ ಸಿನಿಮಾಗಳಿಗೂ ಸಾಥ್ ನೀಡುವ ಕೆಲಸ ಈ ಸಂಸ್ಥೆ ಮಾಡಲು ಮುಂದಾಗಿದೆ.

    ಈಗಾಗಲೇ ನಾಗತಿಹಳ್ಳಿ (Nagatihalli Chandrasekhar) ಸಿನಿ ಕ್ರಿಯೇಷನ್ಸ್ ನಡಿ ತಯಾರಾಗಿರುವ ‘ ಡೈಮಂಡ್ ಕ್ರಾಸ್’ (Diamond Cross) ಎಂಬ ಜಾಕಿಚಾನ್ ಮಾದರಿಯ ಕನ್ನಡದ ಆಕ್ಷನ್ ಸಿನಿಮಾವೊಂದರ ರೈಟ್ಸ್ ಪಡೆದು ರಿಲೀಸ್ ಮಾಡಲು ಮುಂದಾಗಿದೆ. ಇದರೊಂದಿಗೆ ಇನ್ನೂ ಹನ್ನೊಂದು ಸಿನಿಮಾಗಳ ರೈಟ್ಸ್ ಪಡೆದು ರಿಲೀಸ್ ಮಾಡುವ ತಯಾರಿಯಲ್ಲಿದೆ. ‘ಡೈಮಂಡ್ ಕ್ರಾಸ್’ ಚಿತ್ರವನ್ನು ನಾಗತಿಹಳ್ಳಿ ಅವರ ಅಕ್ಕನ ಮಗ ರಾಮ್ ದೀಪ್ ನಿರ್ದೇಶನ ಮಾಡಿದ್ದಾರೆ. ಉತ್ತರ ಕರ್ನಾಟಕದ ಪ್ರತಿಭೆ ಧ್ರುವ , ರೋಜರ್ ನಾರಾಯಣ್ ಸೇರಿದಂತೆ ಹಲವರು ಸಿನಿಮಾದಲ್ಲಿದ್ದಾರೆ. ಕನ್ನಡಕ್ಕೆ ಈ ರೀತಿಯ ಒಂದು ಫ್ಲಾಟ್ ಫಾರಂ ಕೊರತೆ ಇತ್ತು. ಅದನ್ನು ಮನೀಶ್ ಅಂಡ್ ಮಿತ್ರ ಎಂಟರ್ಟೈನ್ ಸಂಸ್ಥೆ ದೊಡ್ಡ ಪ್ರಯತ್ನಕ್ಕೆ ಮುಂದಾಗಿದೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ಈಗ ಸಿನಿಮಾ ಮಾಡಿ ರಿಲೀಸ್ ಮಾಡೋದು ಕಷ್ಟ ಸಾಧ್ಯ. ಅದರಲ್ಲೂ ಹಾಕಿದ ಬಂಡವಾಳ ಹಿಂದಕ್ಕೆ ಬಂದರೆ ಅದೇ ಗೆಲುವು. ಇಂತಹದರಲ್ಲಿ ಹೊಸಬರ ಕಂಟೆಂಟ್ ಸಿನಿಮಾಗಳು ಬಿಡುಗಡೆಗೆ, ವ್ಯಾಪಾರಕ್ಕೆ ಅಲೆದಾಡುವ ಸ್ಥಿತಿ ಇದೆ. ಅದನ್ನು ಗಮನದಲ್ಲಿಟ್ಟುಕೊಂಡು ಈ ಸಂಸ್ಥೆ ಸಿನಿಮಾಗಳ ಖರೀದಿಸಿ, ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ. ಇನ್ನು, ಎಲ್ಲಾ ಸಿನಿಮಾಗಳ ರೈಟ್ಸ್ ಅಸಾಧ್ಯ. ಇಲ್ಲೂ ಕೆಲ ಮಾನದಂಡಗಳಿವೆ. ಸಂಸ್ಥೆಯ ಮುಖ್ಯಸ್ಥ ಮನೀಶ್ ಅವರು ಹೇಳುವಂತೆ, ಸದಭಿರುಚಿಯ ಸಿನಿಮಾಗಳನ್ನು ಖರೀದಿಸಿ, ಅವರ ಸಿನಿಮಾಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ನಟ ಮಿತ್ರ ಅವರು ಸಿನಿಮಾ ವೀಕ್ಷಿಸಿ, ಅದರ ಕಂಟೆಂಟ್ ಹಾಗು ಕ್ವಾಲಿಟಿ ಪರಿಶೀಲಿಸಿ, ಅದು ಚೆನ್ನಾಗಿದೆ ಎಂದು ಸರ್ಟಿಫಿಕೇಟ್ ಕೊಟ್ಟ ಬಳಿಕವೇ ಆ ಸಿನಿಮಾ ರೈಟ್ಸ್ ಇತ್ಯಾದಿ ಬಗ್ಗೆ ಅಂತಿಮಗೊಳಿಸಲಾಗುತ್ತದೆ ಎನ್ನುತ್ತಾರೆ.

    ಮಿತ್ರ ಅವರ ಪ್ರಕರ, ಈ ವೇದಿಕೆ ಹುಟ್ಟುಹಾಕಿದ್ದೇ, ಹೊಸ ಪ್ರತಿಭೆಗಳಿಗಂತೆ. ಸಿನಿಮಾ ಮಾಡಿ ರಿಲೀಸ್ ಮಾಡಲಾಗದೆ, ವ್ಯಾಪಾರ ಮಾಲಾಗದೆ ಅಸಹಾಯಕರಾಗುವ ನಿರ್ಮಾಪಕರಿಗೆ ಸಾಥ್ ನೀಡಬೇಕೆಂಬ ಉದ್ದೇಶದಿಂದ. ಅದೀಗ ಸಾಕಾರವಾಗುತ್ತಿದೆ. ಈ ವೇದಿಕೆ ಮೂಲಕ ಕನ್ನಡದ ಒಂದಷ್ಟು ಪ್ರತಿಭಾವಂತರನ್ನು ಗಟ್ಟಿಗೊಳಿಸುವ ಸಣ್ಣ ಪ್ರಯತ್ನ ನಮ್ಮದು ಎನ್ನುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ಹಳ್ಳಿ ಘಮಲಿನ ‘ಚಂಪಾ’ಕಲಿಯಂಥಾ ‘ಪರಸಂಗ’!

    ಹಳ್ಳಿ ಘಮಲಿನ ‘ಚಂಪಾ’ಕಲಿಯಂಥಾ ‘ಪರಸಂಗ’!

    ಹೊಸಾ ಅಲೆ ಹಳೇ ಸೆಲೆಗಳೆಲ್ಲವೂ ಝಗಮಗಿಸುವ ಕಥೆಗಳ ಬೆಂಬೀಳೋದೇ ಹೆಚ್ಚಾದ್ದರಿಂದ ಹಳ್ಳಿ ಘಮಲಿನ ಕಥೆಗಳೇ ಅಪರೂಪವಾಗಿ ಬಿಟ್ಟಿವೆ. ಹಾಗೊಂದು ವೇಳೆ ಅಂಥಾ ಚಿತ್ರಗಳು ತೆರೆ ಕಂಡರೂ ಎಲ್ಲದರಲ್ಲಿಯೂ ವೀಕ್ ನೆಸ್ ಪ್ರಾಬ್ಲಮ್ಮಿನಿಂದ ಸೊರಗಿರುತ್ತವೆ. ಆದರೆ ಎಲ್ಲ ವಿಚಾರದಲ್ಲಿಯೂ ದಷ್ಟ ಪುಷ್ಟವಾಗಿರುವ ಮಿತ್ರಾ ಅಭಿನಯದ ಪರಸಂಗ ಎಲ್ಲ ವರ್ಗದ ಪ್ರೇಕ್ಷಕರನ್ನೂ ತಣಿಸುತ್ತಾ ಸಾರಾಸಗಟಾಗಿ ಎಲ್ಲರನ್ನು ಥೇಟರಿನತ್ತ ಸೆಳೆಯುತ್ತಿದೆ.

    ಪ್ರೇಕ್ಷಕರ ಬಾಯಿ ಮಾತಿಂದಲೇ ಥೇಟರು ತುಂಬಿಸಿಕೊಂಡ ಚಿತ್ರಗಳು ಗೆದ್ದವೆಂದೇ ಅರ್ಥ. ಸದ್ಯ ಪರಸಂಗವೂ ಅಂಥಾದ್ದೇ ವಾತಾವರಣ ಸೃಷ್ಟಿಸಿರೋದರಿಂದ ಇದು ಗೆದ್ದ ಲಕ್ಷಣ ಎಂಬುದನ್ನು ಸಪರೇಟಾಗಿ ಹೇಳೋ ಅವಶ್ಯಕತೆಯಿಲ್ಲ!

    ಯಾರಾದರೂ ಕಾಯಿಲೆ ಬಿದ್ದರೆ ಬೊಂಬೆಯೊಂದನ್ನು ತಯಾರಿಸಿ ಕಾಯಿಲೆಯನ್ನು ಅದರೊಳಗೆ ತುಂಬಿಸೋ ನಂಬಿಕೆಯಿಂದ ಅದನ್ನು ಗಡಿಯಾಚೆ ಬಿಟ್ಟು ಬರುವ ಒಂದು ಸಂಪ್ರದಾಯವಿದೆ. ಹಳ್ಳಿಗಾಡುಗಳಲ್ಲಿ ಇದು ಈಗಲೂ ಅಳಿದುಳಿದುಕೊಂಡಿದೆ. ಆ ಹಳ್ಳಿಯಲ್ಲಿ ತನ್ನ ವಿಧವೆ ತಾಯಿಯ ಜೊತೆ ಬದುಕುತ್ತಾ, ಊರ ಗೌಡನ ಮನೆಯಲ್ಲಿ ಚಾಕರಿ ಮಾಡಿಕೊಂಡಿರೋ ತಿಮ್ಮ ಕೂಡಾ ಗೊಂಬೆ ದಾಟಿಸುವ ವೃತ್ತಿಯನ್ನೂ ನಡೆಸಿಕೊಂಡು ಬಂದಿರುತ್ತಾನೆ. ಇಂಥವನಿಗೆ ಎತ್ತಣಿದ್ದೆಂತಲಿಂದಲೂ ಮ್ಯಾಚ್ ಆಗದ ಬೊಂಬೆಯಂಥಾ ಹುಡುಗಿಯೇ ಮಡದಿಯಾಗಿ ಬಂದು ಬಿಡುತ್ತಾಳೆ.

    ಚಂಪಾ ಹೆಸರಿನ ಈ ಚೆಲುವೆ ಪರಿಸ್ಥಿತಿಯ ಸಂಕೋಲೆಗೆ ಸಿಲುಕಿ ತನಗೆ ಹೊಂದದ ತಿಮ್ಮನನ್ನು ಮದುವೆಯಾಗುತ್ತಾಳೆ. ಈ ನಡುವೆ ತಿಮ್ಮ ಮಡದಿನ ಮಾತು ಕೇಳಿ ಚಂಪಾ ಚಾಟ್ಸ್ ಎಂಬ ಹೋಟೆಲು ಶುರುವಿಟ್ಟುಕೊಂಡೇಟಿಗೆ ಚಂಪಾಕಲಿಯಂಥಾ ಚಂಪಾಳ ಮೇಲೆ ಇಡೀ ಊರ ಕಣ್ಣು ಬೀಳುತ್ತದೆ. ಚಂಪಾ ಕೂಡಾ ಅಂಥಾ ಪಡ್ಡೆಗಳ ಜೊತೆ ಮೆತ್ತಗೆ ನವರಂಗಿಯಾಟ ಶುರು ಮಾಡಿಕೊಳ್ಳುತ್ತಾಳೆ.

    ಆದರೆ ಊರೆಲ್ಲ ಏನೇ ಹೇಳಿದರೂ ತಿಮ್ಮ ಮಾತ್ರ ತನ್ನ ಹೆಂಡತಿ ಪರಮ ಪತಿವ್ರತೆ ಎಂದೇ ನಂಬಿ ಕೂತಿರುತ್ತಾನೆ. ಹೀಗಿರುವಾಗಲೇ ಚಂಪಾ ಚಾಟ್ಸ್ ಎದುರಿಗೇ ಕ್ಲಿನಿಕ್ಕು ತೆರೆಯೋ ಸ್ಫುರದ್ರೂಪಿ ವೈದ್ಯನೂ ಚಂಪಾಳ ಬಾಧೆಗೆ ಟ್ರೀಟ್ ಮೆಂಟು ಶುರು ಮಾಡಿದಾಕ್ಷಣ ತಿಮ್ಮನ ಬದುಕಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತೆ. ಅದರಾಚೆಗಿನದ್ದು ಅಸಲೀ ಆಹ್ಲಾದ. ನಿರ್ದೇಶಕ ಕೆ.ಎಂ. ರಘು ತಾನೊಬ್ಬ ಅಪ್ಪಟ ಹಳ್ಳಿ ಘಮಲಿನ ಕಥೆ ಹೇಳೇ ಪಾರಂಗತ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಧೃಡಪಡಿಸಿದ್ದಾರೆ.

    ಹಾಸ್ಯ ನಟರಾಗಿ ಬ್ರ್ಯಾಂಡ್ ಆಗಿದ್ದ ಮಿತ್ರಾ ಈ ಹಿಂದೆ ರಾಗ ಚಿತ್ರದ ಮೂಲಕ ಆ ಸೀಮೆ ದಾಟಿಕೊಂಡಿದ್ದರು. ಪರಸಂಗ ಚಿತ್ರದ ತನ್ಮಯ ನಟನೆಯಿಂದ ಯಾವ ಪಾತ್ರಕ್ಕೂ ಸೈ ಎನಿಸಿದ ಓರ್ವ ಅಪ್ಪಟ ಕಲಾವಿದನಾಗಿ ಮಿತ್ರಾ ಪ್ರೇಕ್ಷಕರನ್ನು ಮುಟ್ಟಿದ್ದಾರೆ. ಇನ್ನು ನಾಯಕಿ ಅಕ್ಷತಾ ಈ ಪಾತ್ರವನ್ನು ಮೈ ಮನಸುಗಳಿಗೆ ತುಂಬಿಕೊಂಡು ನಟಿಸೋ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆ ನಿಲ್ಲವ ಕನಸನ್ನು ಖಂಡಿತಾ ನನಸು ಮಾಡಿಕೊಂಡಿದ್ದಾರೆ. ವೈದ್ಯನಾಗಿ ನಟಿಸಿರೋ ಮನೋಜ್, ಕನೆಕ್ಷನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಂದ್ರಪ್ರಭ ಸೇರಿದಂತೆ ಎಲ್ಲರದ್ದೂ ಮಾಗಿದ ನಟನೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡರದ್ದೂ ಮನಸಲ್ಲುಳಿಯುವ ಪಾತ್ರ. ನಿರ್ದೇಶಕ, ಕ್ಯಾಮೆರಾ, ಸಂಗೀತ ಸೇರಿದಂತೆ ತಾಂತ್ರಿಕವಾಗಿಯೂ ವಿಶಿಷ್ಟವಾದ ಫೀಲ್ ಕೊಡುವ ಮೂಲಕ ಪರಸಂಗ ಚಿತ್ರ ಗೆಲುವಿನತ್ತ ದಾಪುಗಾಲಿಡುತ್ತಿದೆ.

  • ಪರಸಂಗದ ಹುಡುಗಿ ಅಕ್ಷತಾ!

    ಪರಸಂಗದ ಹುಡುಗಿ ಅಕ್ಷತಾ!

    – ಇದು ಬಹುಕಾಲದಿಂದ ಬಯಸಿದ್ದ ಕಥೆಯಂತೆ!

    ಬೆಂಗಳೂರು: ಮಿತ್ರಾ ನಾಯಕನಾಗಿ ನಟಿಸಿರುವ ಪರಸಂಗ ಚಿತ್ರದ ನಾಯಕಿಯಾಗಿ ಸ್ಯಾಂಡಲ್ ವುಡ್‍ಗೆ ಎಂಟ್ರಿ ಕೊಡುತ್ತಿರುವಾಕೆ ಅಕ್ಷತಾ. ಮಂಗಳೂರು ಮೂಲದ ಅಕ್ಷತಾ ಈ ಹಿಂದೆ ಒಂದಷ್ಟು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸುತ್ತಲೇ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆಯಲು ವರ್ಷಾಂತರಗಳ ಕಾಲದಿಂದ ಹೊಂದಿದ್ದ ಆಸೆ ಪರಸಂಗದ ಮೂಲಕ ಕೈಗೂಡಿದೆ.

    ಪರಭಾಷಾ ಚಿತ್ರಗಲ್ಲಿ ನಟಿಸಿದ್ದ ಅಕ್ಷತಾಗೆ ಬಹು ಕಾಲದ ಕನಸಾಗಿದ್ದದ್ದು ಕನ್ನಡ ಚಿತ್ರರಂಗ. ಇಲ್ಲಿ ನಾಯಕಿಯಾಗಿ ನೆಲೆ ಕಂಡುಕೊಳ್ಳುವ ಉತ್ಕಟ ಬಯಕೆ ಹೊಂದಿದ್ದ ಆಕೆಗೆ ಒಂದೊಳ್ಳೆ ಪಾತ್ರದ ಮೂಲಕವೇ ಪರಿಚಯವಾಗೋ ಹಂಬಲವಿತ್ತು. ಈ ನಡುವೆ ಒಂದಷ್ಟು ಕಥೆಗಳನ್ನೂ ಕೇಳಿದ ಅಕ್ಷತಾಗೆ ತೃಪ್ತಿಯಾಗಿರಲಿಲ್ಲ. ತಾನು ಬಯಸುವಂಥಾ ವಿಶಿಷ್ಟವಾದ ಕಥೆ ಮತ್ತು ಪಾತ್ರ ಸಿಕ್ಕ ಮೇಲೆಯೇ ಕನ್ನಡಕ್ಕೆ ಎಂಟ್ರಿ ಕೊಡುವ ಅಚಲ ನಿರ್ಧಾರ ಮಾಡಿ ಕೂತಿದ್ದ ಅಕ್ಷತಾಗೆ ಮಿತ್ರಾ ಅವರ ಮೂಲಕ ಸಿಕ್ಕಿದ್ದು ಪರಸಂಗ ಚಿತ್ರದ ನಾಯಕಿಯಾಗೋ ಅವಕಾಶ!

    ಈ ಚಿತ್ರದ ಕಥೆ ಕೇಳಿದಾಕ್ಷಣವೇ ಅಕ್ಷತಾ ಇಂಪ್ರೆಸ್ ಆಗಿದ್ದರಂತೆ. ಅದರಲ್ಲಿಯೂ ವಿಶೇಷವಾಗಿ ಸಿದ್ಧಸೂತ್ರಗಳನ್ನು ಬದಿಗಿಟ್ಟು ಹೊಸತನಕ್ಕಾಗಿ ಹಾತೊರೆಯುತ್ತಿದ್ದ ಇಡೀ ಚಿತ್ರ ತಂಡದ ಎನರ್ಜಿ ಅವರಿಗಿಷ್ಟವಾಗಿ ಮರು ಮಾತಿಲ್ಲದೆ ಒಪ್ಪಿಕೊಂಡಿದ್ದರಂತೆ. ಪರಸಂಗ ಚಿತ್ರದಲ್ಲಿ ಅಕ್ಷತಾರದ್ದು ಎಲ್ಲ ಮಹಿಳೆಯರನ್ನೂ ಕಾಡುವಂಥಾ ಪಾತ್ರ. ನೆಗೆಟಿವ್ ಶೇಡ್ ಕೂಡಾ ಇರುವ ಈ ಪಾತ್ರ ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತದೆ ಎಂಬ ಭರವಸೆ ಅಕ್ಷತಾರದ್ದು.

    ನಾಯಕಿಯಾಗಬೇಕೆಂಬ ಆಸೆ ಹೊತ್ತು ಸಿಕ್ಕ ಕಥೆಯನ್ನೆಲ್ಲ ಒಪ್ಪಿಕೊಳ್ಳದೆ ತಾನು ಬಯಸೋ ಪಾತ್ರ ಅರಸಿ ಬರುವವರೆಗೂ ಅಚಲವಾಗಿ ಕಾದು ಕೂತಿದ್ದ ಅಕ್ಷತಾ ತನ್ನ ಪರಸಂಗದ ಪಾತ್ರವನ್ನು ಸ್ವೀಕರಿಸಿ ಹರಸುವಂತೆ ಕನಡದ ಪ್ರೇಕ್ಷಕರಲ್ಲಿ ಅರಿಕೆ ಮಾಡಿಕೊಂಡಿದ್ದಾರೆ.

    ಕೆ ಎಂ ರಘು. ನಿರ್ದೇಶನದ ಪರಸಂಗ ಚಿತ್ರದ ಪ್ರಧಾನ ಪಾತ್ರದಲ್ಲಿ ಮಿತ್ರ, ಅಕ್ಷತ ಶ್ರೀನಿವಾಸ್, ಮನೋಜ್, ತರುಣ್ ಸುಧೀರ್, ಕಾಮಿಡಿ ಕಿಲಾಡಿಗಳು ನಟರುಗಳಾದ ಗೋವಿಂದೇ ಗೌಡ, ಸಂಜು ಬಸಯ್ಯ, ಮಜಾ ಭಾರತ ಹಾಸ್ಯ ರಿಯಾಲಿಟಿ ಶೋ ಕಲಾವಿದೆ ಚಂದ್ರ ಪ್ರಭ ಇದ್ದಾರೆ. ಹರ್ಷ ವರ್ಧನರಾಜ್ ಸಂಗೀತ, ಸುಜೈ ಕುಮಾರ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ ಈ `ಪರಸಂಗ’ ಒಳಗೊಂಡಿದೆ.

  • ಬೀದಿಯಲ್ಲಿ ಅಲ್ಲ, ಕನ್ನಡ ಸಿನಿಮಾಗಳಿಗೆ ಥಿಯೇಟರ್‍ನಲ್ಲಿ ಹೋರಾಟ ಮಾಡ್ಬೇಕು: ಮಿತ್ರ ಬೇಸರ

    ಬೀದಿಯಲ್ಲಿ ಅಲ್ಲ, ಕನ್ನಡ ಸಿನಿಮಾಗಳಿಗೆ ಥಿಯೇಟರ್‍ನಲ್ಲಿ ಹೋರಾಟ ಮಾಡ್ಬೇಕು: ಮಿತ್ರ ಬೇಸರ

    ಬೆಂಗಳೂರು: ಕನ್ನಡ ಸಿನಿಮಾಗಳಿಗೆ ಹೋರಾಟದ ಮಾಡಬೇಕಾಗಿರುವುದು ಬೀದಿಯಲ್ಲಿ ಅಲ್ಲ. ಥಿಯೇಟರ್ ಗಳಲ್ಲಿ ಹೋರಾಟ ಮಾಡಬೇಕಿದೆ ಎಂದು ರಾಗಾ ಸಿನಿಮಾದ ನಟ ಮಿತ್ರ ಹೇಳಿದ್ದಾರೆ.

    ಥಿಯೇಟರ್ ಗಳಲ್ಲಿ ರಾಗಾ ಸಿನಿಮಾವನ್ನು ಎತ್ತಂಗಡಿ ಮಾಡಿದ್ದಕ್ಕೆ ಪಬ್ಲಿಕ್ ಟಿವಿಯಲ್ಲಿ ಬೆಳಗ್ಗೆ ನಡೆದ ವಿಶೇಷ ಜಿಂದಗಿ ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾವು ನೂರಾರು ಸ್ಕ್ರೀನ್ ಗಳನ್ನು ಕೇಳುತ್ತಿಲ್ಲ. ಕನ್ನಡಿಗರ ಸ್ವಾಭಿಮಾನ ಏನು ಎನ್ನುವುದೇ ಗೊತ್ತಿಲ್ಲ. ಒಂದು ವೇಳೆ ಚಿತ್ರ ಕಳಪೆಯಾಗಿದ್ದರೆ ನಾವು ಕೇಳುತ್ತಿರಲಿಲ್ಲ. ಅದು ನಮ್ಮ ಸ್ವಯಂಕೃತ ಅಪರಾಧವಾಗುತಿತ್ತು. ಆದರೆ ಚಿತ್ರ ನೋಡಿದವರು ಚೆನ್ನಾಗಿದೆ ಎಂದು ಹೇಳಿದ್ದಾರೆ. ಉತ್ತಮವಾಗಿ ಪ್ರದರ್ಶನ ನೀಡುತ್ತಿರುವಾಗಲೇ ಚಿತ್ರವನ್ನು ಎತ್ತಂಗಡಿ ಮಾಡಿದ್ದು ಎಷ್ಟು ಸರಿ ಎಂದು ಅವು ಪ್ರಶ್ನಿಸಿದ್ದಾರೆ.

    ಕಲಾವಿದನಿಗೆ ಭಾಷೆಯ ಮಿತಿ ಇಲ್ಲ. ನಾನು ಬಾಹುಬಲಿಯ ವಿರೋಧಿ ಅಲ್ಲ. ಆದ್ರೆ ರಾಗಾ ಚಿತ್ರ ತಮಿಳಿನಲ್ಲಿ ಬರುತ್ತಿದ್ದರೆ ಜನ್ರು ಕ್ಯೂನಲ್ಲಿ ನಿಂತುಕೊಂಡು ಥಿಯೇಟರ್‍ಗೆ ಬರುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

    ಇದೇ ವೇಳೆ ಕರ್ನಾಟಕ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಟಿಕೆಟ್ ಗಳಿಗೆ 200 ರೂ. ಗರಿಷ್ಟ ದರವನ್ನು ನಿಗದಿ ಮಾಡಿದ್ದಾರೆ. ಹೀಗಾಗಿ ಥಿಯೇಟರ್‍ಗಳಲ್ಲಿ ಬಾಹುಬಲಿಗೆ ಎಷ್ಟು ಕಲೆಕ್ಷನ್ ಆಗುತ್ತದೋ ಅಷ್ಟೇ ಕಲೆಕ್ಷನ್ ನಿಮ್ಮ ಚಿತ್ರದಿಂದಲೂ ಆಗುತ್ತದೆ ಆದರೂ ಯಾಕೆ ಹೀಗೆ ಎಂದು ಪ್ರಶ್ನಿಸಿದ್ದಕ್ಕೆ, ಈ ಪ್ರಶ್ನೆಯನ್ನು ಬಾಹುಬಲಿ ಬಿಡುಗಡೆಗೆ ವಿರೋಧಿಸಿದ ಕನ್ನಡಪರ ಹೋರಾಟಗಾರರಲ್ಲಿ ಕೇಳಬೇಕು. ಈ ಪ್ರಶ್ನೆಗೆ ಉತ್ತರ ಹೇಳಲು ಕಷ್ಟವಾಗುತ್ತದೆ ಎಂದು ತಿಳಿಸಿದರು.

    ರಾಗ ಸಿನಿಮಾ ಥಿಯೇಟರ್ ನಿಂದ ಎತ್ತಂಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್ ಗೆ ನಟ ನಿರ್ಮಾಪಕ ಮಿತ್ರ ಹಾಗೂ ನಿರ್ದೇಶಕ ಪಿ ಸಿ ಶೇಕರ್ ದೂರು ನೀಡಿದ್ದು, ಈಗ ಕೆಲ ಚಿತ್ರಗಳಲ್ಲಿ ಈ ಚಿತ್ರ ಪ್ರದರ್ಶನ ನಡೆಸಲು ಒಪ್ಪಿಗೆ ಸಿಕ್ಕಿದೆ.

    ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ಮಿತ್ರ ಅವರು, ನಾನು ಅಳಲನ್ನು ತೋಡಿಕೊಂಡೆ. ಹೀಗಾಗಿ ಈ ಕುರಿತು ನಮಗೆ ಸಾ ರಾ ಗೋವಿಂದು ಸಹಾಯ ಮಾಡಿದ್ದಾರೆ. 4 ಕಡೆಗಳಲ್ಲಿ ಶೋಗಳಿಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಮಾಧ್ಯಮದವರಿಗೆ, ಸಾರಾ ಗೋವಿಂದು ಅವರಿಗೆ ನನ್ನ ಧನ್ಯವಾದಗಳು. ನಾನು ಅವರಿಗೆ ಚಿರಋಣಿ ಎಂದು ತಿಳಿಸಿದರು.

    ರಾಗ ಒಂದು ಒಳ್ಳೆ ಸಿನಿಮಾ ಇದು. ಗೋಪಾಲನ್, ಐನಾಕ್ಸ್, ಮಂತ್ರಿ ಮಾಲ್ ಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಒಪ್ಪಿಗೆ ಸಿಕ್ಕಿದೆ. ನನಗೆ ನಂಬಿಕೆ ಇದೆ ಖಂಡಿತ ಕನ್ನಡಿಗರು ನನ್ನ ಸಿನಿಮಾ ಉಳಿಸುತ್ತಾರೆ. ಸಿಂಗಲ್ ಸ್ಕ್ರೀನ್ ಗಳಲ್ಲಿ ಚಿತ್ರ ಪ್ರದರ್ಶನಕ್ಕೆ ನಾನು ಜಯಣ್ಣ ಅವರ ಜೊತೆ ಮಾತನಾಡುತ್ತೇನೆ ಎಂದು ಮಿತ್ರ ಹೇಳಿದರು.

    ಒಬ್ಬ ನಿರ್ದೇಶಕನಿಗೆ ಚಿತ್ರ ದೊಡ್ಡ ಕನಸು. ರಾಗ ಚಿತ್ರ ಈ ರೀತಿ ಆಗಿರುವುದು ಬೇಸರ ತಂದಿದೆ. ಮಾತುಕಥೆಯ ನಂತ್ರ ಚಿತ್ರ ಪ್ರದರ್ಶಿಸಲು ಒಪ್ಪಿಗೆ ಸಿಕ್ಕಿದೆ. ಸಿಂಗಲ್ ಸ್ಕ್ರೀನ್ ಪ್ರದರ್ಶನದ ಬಗ್ಗೆ ಮಾತುಕಥೆ ನಡೆಯುತ್ತಿದೆ ಎಂದು ನಿರ್ದೇಶಕ ಪಿ ಸಿ ಶೇಖರ್ ತಿಳಿಸಿದರು.

    ಫಿಲಂ ಚೇಂಬರ್ ಅಧ್ಯಕ್ಷ ಸಾರಾ ಗೋವಿಂದ್ ಮಾತನಾಡಿ, ನಾನು ಯಾವತ್ತೂ ಹಿಂದೆ ಮುಂದೆ ಮಾತನಾಡುವವನಲ್ಲ. ಮಿತ್ರನ ಪ್ರಥಮ ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ಪರಭಾಷಾ ವ್ಯಾಮೊಹವೋ ಅಥವಾ ಕನ್ನಡ ಅಭಿಮಾನದ ಕೊರತೆಯೊ ಗೊತ್ತಿಲ್ಲ. ಒಳ್ಳೆಯ ಕನ್ನಡ ಚಿತ್ರಕ್ಕೆ ಪ್ರೇಕ್ಷಕರು ಬರುತ್ತಿಲ್ಲ. ನಾನು ಈ ಕುರಿತು ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತನಾಡುವಾಗ ಕಲೆಕ್ಷನ್ ಇಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ. ಹೀಗಾಗಿ ನಾನು ನಗರದ ಎಲ್ಲ ಮಲ್ಟಿಪ್ಲೆಕ್ಸ್‍ಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ. ಎಲ್ಲರೂ ಈ ಮನವಿಗೆ ಒಂದೊಂದು ಶೋ ಪ್ರದರ್ಶಿಸಲು ಒಪ್ಪಿದ್ದಾರೆ ಎಂದು ಹೇಳಿದರು.

    ಬಜೆಟ್‍ನಲ್ಲಿ ಘೋಷಣೆಯಾಗಿರುವ ಮಲ್ಟಿಪ್ಲೆಕ್ಸ್ ಥಿಯೇಟರ್ ಗರಿಷ್ಟ ಟಿಕೆಟ್ ದರ 200 ರೂ. ಯಾವಾಗ ಜಾರಿಯಾಗಲಿದೆ ಎನ್ನುವ ಪ್ರಶ್ನೆಗೆ, ಇಂದು ಅಥವಾ ನಾಳೆ ಯಾವುದೇ ಕ್ಷಣದಲ್ಲಿ ಈ ಅದೇಶ ಜಾರಿಯಾಗಬಹುದು ಎಂದು ಸಾರಾ ಗೋವಿಂದು ತಿಳಿಸಿದರು.

    ಇದನ್ನೂ ಓದಿ: ಮಲ್ಟಿಪ್ಲೆಕ್ಸ್ ಗಳಲ್ಲಿ ಗರಿಷ್ಟ ಟಿಕೆಟ್ ದರ 200 ರೂ. ಆಗಲು ಕಾರಣ ಏನು?

    https://www.youtube.com/watch?v=SScXGMbFhws

    https://www.youtube.com/watch?v=WboEqfigkRA