Tag: missing teen

  • ಕಣ್ಮರೆಯಾಗಿದ್ದ ಯುವಕ ಪತ್ತೆ: ಭಾರತೀಯ ಸೇನೆಗೆ ಚೀನಾ ಮಾಹಿತಿ

    ನವದೆಹಲಿ: ಅರುಣಾಚಲ ಪ್ರದೇಶದಿಂದ ಕಣ್ಮರೆಯಾಗಿದ್ದ 17 ವರ್ಷದ ಯುವಕ ಪತ್ತೆಯಾಗಿದ್ದಾನೆ ಎಂದು ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ)ಯು ಭಾರತೀಯ ಸೇನೆಗೆ ಮಾಹಿತಿ ನೀಡಿದೆ.

    ಯುವಕನ ಬಿಡುಗಡೆ ಹಾಗೂ ಭಾರತಕ್ಕೆ ವಾಪಸ್‌ ಕಳುಹಿಸುವ ಸಂಬಂಧ ಸೂಕ್ತ ಕಾರ್ಯವಿಧಾನ ಅನುಸರಿಸಲಾಗುತ್ತಿದೆ ಎಂದು ಭಾನುವಾರ ಪಿಎಲ್‌ಎ ಮಾಹಿತಿ ನೀಡಿರುವುದಾಗಿ ತೇಜ್‌ಪುರ ಗಡಿ ನಿಯಂತ್ರಣದ ರಕ್ಷಣಾ ಪಿಆರ್‌ಒ ಹರ್ಷವರ್ಧನ್‌ ಪಾಂಡೇ ತಿಳಿಸಿದ್ದಾರೆ. ಇದನ್ನೂ ಓದಿ: NDRF ಟ್ವಿಟ್ಟರ್ ಖಾತೆ ಹ್ಯಾಕ್

    ಪಿಎಲ್‌ಎ ಗಡಿ ಭಾಗದಲ್ಲಿ ನಿಯಂತ್ರಣ ಸಾಧಿಸಿದ್ದು, ಅಕ್ರಮವಾಗಿ ಚೀನಾ ನೆಲದೊಳಗೆ ಪ್ರವೇಶಿಸುವ ಮತ್ತು ಹೊರ ಹೋಗುವ ಚಟುವಟಿಕೆಗಳನ್ನು ಹತ್ತಿಕ್ಕುತ್ತಿದೆ ಎಂದು ಹೇಳಲಾಗಿತ್ತು. ನಾಪತ್ತೆಯಾಗಿದ್ದ ಯುವಕನನ್ನು ಹುಡುಕುವಲ್ಲಿ ನೆರವಾಗಬೇಕು ಎಂದು ಭಾರತೀಯ ಸೇನೆಯು ಪಿಎಲ್‌ಎಗೆ ಮನವಿ ಮಾಡಿತ್ತು.

    ಅರುಣಾಚಲ ಪ್ರದೇಶದ ಝಿಡೋದ 17 ವರ್ಷದ ಯುವಕ ಮಿರಾಮ್‌ ತಾರೋಮ್‌ ನಾಪತ್ತೆಯಾಗಿದ್ದಾನೆ ಎಂದು ಪೂರ್ವ ಅರುಣಾಚಲ ಸಂಸದ ತಾಪಿರ್‌ ಗಾವ್‌ ತಿಳಿಸಿದ್ದರು. ನಂತರ ಭಾರತೀಯ ಸೇನೆಯು ಪಿಎಲ್‌ಎ ಸಂಪರ್ಕಿಸಿ ಯುವಕನನ್ನು ಪತ್ತೆ ಹಚ್ಚಿ ಹಿಂದಿರುಗಿಸುವಂತೆ ಮನವಿ ಮಾಡಿತ್ತು. ಇದನ್ನೂ ಓದಿ: ಗಣರಾಜ್ಯೋತ್ಸವ ಆಚರಣೆಗೆ ರಾಜಪಥದಲ್ಲಿ ಸಿದ್ಧತೆ

    2020ರ ಸೆಪ್ಟೆಂಬರ್‌ನಲ್ಲಿ ಸುಬಾನ್ಸಿರಿ ಜಿಲ್ಲೆಯ ಐವರು ಬಾಲಕರನ್ನು ಪಿಎಲ್‌ಎ ಅಪಹರಿಸಿತ್ತು. ಒಂದು ವಾರದ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು. ಅದೇ ವರ್ಷದ ಮಾರ್ಚ್‌ನಲ್ಲೂ 21 ವರ್ಷದ ವ್ಯಕ್ತಿಯೊಬ್ಬನನ್ನು ಅಪಹರಿಸಿ, ಭಾರತೀಯ ಸೇನೆಯು ಸಂವಹನ ನಡೆಸುವ ಮೊದಲೇ ಬಿಡುಗಡೆ ಮಾಡಿತ್ತು.