Tag: Missile Attack

  • Israel-Iran Conflict | ಇಸ್ರೇಲ್‌ ಮಿಸೈಲ್‌ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಬಲಿ

    Israel-Iran Conflict | ಇಸ್ರೇಲ್‌ ಮಿಸೈಲ್‌ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಬಲಿ

    – ಇರಾನ್‌ನ 170ಕ್ಕೂ ಹೆಚ್ಚು ಸ್ಥಳ, 720 ಮಿಲಿಟರಿ ನೆಲೆಗಳ ಮೇಲೆ ಏರ್‌ಸ್ಟ್ರೈಕ್‌

    ಟೆಲ್‌ ಅವಿವ್‌/ಟೆಹ್ರಾನ್‌: ಆಪರೇಷನ್‌ ʻರೈಸಿಂಗ್‌ ಲಯನ್‌ʼ ಬಳಿಕ ಇಸ್ರೇಲ್‌-ಇರಾನ್‌ ನಡುವಿನ ಸಂಘರ್ಷ (Israel-Iran Conflict) ತೀವ್ರ ಸ್ವರೂಪ ಪಡೆದುಕೊಂಡಿದೆ. ಇರಾನ್‌ ಮಿಸೈಲ್‌ ದಾಳಿಗೆ ಇಸ್ರೇಲ್‌ (Israel) ಕೂಡ ಮಿಸೈಲ್‌ಗಳ ಸುರಿಮಳೆಯನ್ನೇ ಸುರಿಸಿದೆ.

    ಅಣ್ವಸ್ತ್ರ (Nuclear Site), ಮಿಲಿಟರಿ ನೆಲೆಗಳ ಬಳಿಕ ಇರಾನ್‌ನ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ ಮಾಡಲು ಶುರು ಮಾಡಿದೆ. ಇರಾನ್‌ನಲ್ಲಿ ಒಟ್ಟು 170ಕ್ಕೂ ಹೆಚ್ಚು ಸ್ಥಳಗಳು 720 ಮಿಲಿಟರಿ ಮೂಲ ಸೌಕರ್ಯಗಳ ಮೇಲೆ ದಾಳಿ ಮಾಡಿದೆ. ಇದನ್ನೂ ಓದಿ: ನಮ್ಮ ತಂಟೆಗೆ ಬಂದ್ರೆ ಹಿಂದೆಂದೂ ನೋಡಿರದ ಮಿಲಿಟರಿ ಬಲವನ್ನು ಎದುರಿಸಬೇಕಾಗುತ್ತೆ – ಇರಾನ್‌ಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

    ಈವರೆಗಿನ ದಾಳಿಯಲ್ಲಿ ಇರಾನಿನ ಉನ್ನತ ಅಧಿಕಾರಿಗಳು ಮತ್ತು ಅಣ್ವಸ್ತ್ರ ವಿಜ್ಞಾನಿಗಳು ಸೇರಿದಂತೆ ಈವರೆಗೆ 14 ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಅತ್ತ ಇರಾನ್‌ ಕೂಡ ಇಸ್ರೇಲ್‌ ಮೇಲೆ 200 ಖಂಡಾಂತರ ಕ್ಷಿಪಣಿಗಳು ಹಾಗೂ 100 ಡ್ರೋನ್‌ಗಳಿಂದ ಭೀಕರ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿದೆ. ಟೆಲ್‌ ಅವಿವ್‌, ಜೆರುಸಲೆಮ್‌ ಸೇರಿದಂತೆ ಮಿಲಿಟರಿ ಮತ್ತು ಸಾರ್ವಜನಿಕ ಸ್ಥಳಗಳ ಮೇಲೆ ದಾಳಿ ನಡೆಸಿದೆ. ಹೀಗಾಗಿ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ 4ನೇ ದಿನವೂ ಮುಂದುವರಿದಿದೆ. ಇದನ್ನೂ ಓದಿ: ಚೆನ್ನೈಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ ಡ್ರೀಮ್‌ಲೈನರ್‌ನಲ್ಲಿ ತಾಂತ್ರಿಕ ದೋಷ – ಮರಳಿ ಲಂಡನ್‌ನಲ್ಲಿ ಲ್ಯಾಂಡಿಂಗ್‌!

    ಕದನ ವಿರಾಮ ಮಾತುಕತೆ ತಿರಸ್ಕಾರ
    ಇತ್ತ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಟೆಹ್ರಾನ್‌ ಹೊತ್ತಿ ಉರಿಯಯತ್ತೆ, ನಿರಂತರ ದಾಳಿ ಇರಾನ್‌ ಮೇಲೆ ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅತ್ತ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್‌ ಮೇಲೆ ಬೃಹತ್‌ ದಾಳಿ ನಡೆಸುವ ಸೂಚನೆ ಕೊಟ್ಟಿದೆ. ಜೊತೆಗೆ ಇಸ್ರೇಲ್‌ನಿಂದ ದಾಳಿ ಮುಂದುವರಿಯುವವರೆಗೂ ನಾವು ಕದನ ವಿರಾಮದ ಬಗ್ಗೆ ಮಾತನಾಡುವುದಿಲ್ಲ ಎಂದು ಒಮನ್ ಮತ್ತು ಕತಾರ್‌ನ ಮಧ್ಯಸ್ಥಿಕೆಯನ್ನು ಇರಾನ್‌ ತಿರಸ್ಕರಿಸಿದೆ.

    ಇಸ್ರೇಲ್‌ ನಡೆಸಿದ ದಾಳಿಯಲ್ಲಿ 224 ಮಂದಿ ಸಾವನ್ನಪ್ಪಿದ್ದು, 1,277 ಜನರು ಗಾಯಗೊಂಡಿದ್ದಾರೆ. ಅದೇ ವೇಳೆ ಇರಾನ್‌ ನಡೆಸಿದ ದಾಳಿಯಲ್ಲಿ 14 ಇಸ್ರೇಲಿ ನಾಗರಿಕರು ಸಾವನ್ನಪ್ಪಿದ್ದು, 390 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಉತ್ತರಾಖಂಡ್‌ ಹೆಲಿಕಾಪ್ಟರ್‌ ಪತನ – 15 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಪೈಲಟ್‌ಗಿತ್ತು ಅಪಾರ ಅನುಭವ

  • S-500 ಏರ್ ಡಿಫೆನ್ಸ್ ಸಿಸ್ಟಂ ಬಂದ್ರೆ ವಿಶ್ವದಲ್ಲಿ ಭಾರತವೇ ಪವರ್‌ಫುಲ್‌

    S-500 ಏರ್ ಡಿಫೆನ್ಸ್ ಸಿಸ್ಟಂ ಬಂದ್ರೆ ವಿಶ್ವದಲ್ಲಿ ಭಾರತವೇ ಪವರ್‌ಫುಲ್‌

    ಬೆಂಗಳೂರು/ನವದೆಹಲಿ: ʻಆಪರೇಷನ್‌ ಸಿಂಧೂರʼರಲ್ಲಿ (Operation Sindoor) ಭಾರತದ ಸೇನಾ ಸಾಮರ್ಥ್ಯ ಕಂಡು ಇಡೀ ಜಗತ್ತೇ ಅಚ್ಚರಿಗೊಂಡಿದೆ. ಹೀಗಾಗಿ ಭಾರತದ ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ನಡುವೆ ಭಾರತದ ರಕ್ಷಣಾ ವ್ಯವಸ್ಥೆ ಇನ್ನಷ್ಟು ಬಲಿಷ್ಠವಾಗುತ್ತಿರುವ ಬಗ್ಗೆ ರಕ್ಷಣಾ ಕ್ಷೇತ್ರದ ವಿಶ್ಲೇಷಕ ಗಿರೀಶ್ ಲಿಂಗಣ್ಣ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿದ್ದಾರೆ.

    ಸದ್ಯ ಇಸ್ರೇಲ್‌ನ ಐರನ್ ಡೋಮ್, ರಷ್ಯಾದ S-400, ಅಮೆರಿಕ ಅಭಿವೃದ್ಧಿಪಡಿಸಿರುವ ಥಾಢ್ ಏರ್ ಡಿಫೆನ್ಸ್ ಸಿಸ್ಟಂ, ಡೇವಿಡ್ ಸಿಲ್ಲಿಂಗ್ ಏರ್ ಡಿಫೆನ್ಸ್ ಸಿಸ್ಟಂ ಜಗತ್ತಿನ ಶಕ್ತಿಶಾಲಿ ವಾಯುರಕ್ಷಣಾ ವ್ಯವಸ್ಥೆಗಳಾಗಿ ಗುರುತಿಸಿಕೊಂಡಿವೆ. ಆದ್ರೆ ಎಸ್-500 ಏರ್ ಡಿಫೆನ್ಸ್ ಸಿಸ್ಟಂ ಭಾರತಕ್ಕೆ ಬಂದರೆ ಜಗತ್ತಿನಲ್ಲಿ ಭಾರತದ ಸೇನಾ ಶಕ್ತಿ ಮತ್ತಷ್ಟು ಬಲಿಷ್ಠವಾಗಲಿದೆ. ಜೊತೆಗೆ ಅಮೆರಿಕ, ರಷ್ಯಾ ದೇಶಗಳ ವಾಯುರಕ್ಷಣಾ ವ್ಯವಸ್ಥೆಯನ್ನೂ ಹಿಂದಿಕ್ಕಲಿದೆ ಎಂದು ತಿಳಿಸಿದ್ದಾರೆ.

    Akash missile defence system

    ಎಸ್‌-500 ರಕ್ಷಣಾ ವ್ಯವಸ್ಥೆಯು ಎಸ್‌-400ನ ಮುಂದುವರಿದ ಭಾಗವಾಗಿದೆ. 600 ಕಿಮೀ ದೂರದಿಂದಲೇ ಶತ್ರುಗಳ ಡ್ರೋನ್, ಫೈಟರ್‌ ಜೆಟ್, ಮಿಸೈಲ್‌ಗಳನ್ನ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ.

    ಮತ್ತಷ್ಟು ಸುದರ್ಶನ ಚಕ್ರಕ್ಕೆ ಭಾರತ ಬೇಡಿಕೆ
    ಆಪರೇಷನ್ ಸಿಂಧೂರದ ಕಾರ್ಯಾಚರಣೆ ವೇಳೆ ಪಾಕ್‌ನಿಂದ ಬರುತ್ತಿದ್ದ ಕ್ಷಿಪಣಿಗಳನ್ನು ಧ್ವಂಸಗೈದು ಭಾರತವನ್ನು (India) ರಕ್ಷಿಸಿದ್ದ S-400 ವಾಯು ರಕ್ಷಣಾ ಕ್ಷಿಪಣಿಗೆ ಬೇಡಿಕೆ ಹೆಚ್ಚಾಗಿದೆ. ಪಾಕ್‌ ನಡುವಿನ ಸಂಘರ್ಷದಲ್ಲಿ ಇದರ ಪ್ರಯೋಗ ಯಶಸ್ವಿಯಾದ ಬೆನ್ನಲ್ಲೇ ಭಾರತ ಮತ್ತಷ್ಟು S-400 ವಾಯು ರಕ್ಷಣಾ ಕ್ಷಿಪಣಿಗೆ ಬೇಡಿಕೆಯಿಟ್ಟಿದೆ ಎಂದು ವರದಿಗಳು ತಿಳಿಸಿವೆ.

  • ಭಾರತ-ಪಾಕ್ ʻಕದನ-ವಿರಾಮʼ ಮಾತುಕತೆ – ಇಂದು ಎರಡೂ ದೇಶಗಳ ಡಿಜಿಎಂಒಗಳ ಸಭೆ

    ಭಾರತ-ಪಾಕ್ ʻಕದನ-ವಿರಾಮʼ ಮಾತುಕತೆ – ಇಂದು ಎರಡೂ ದೇಶಗಳ ಡಿಜಿಎಂಒಗಳ ಸಭೆ

    ನವದೆಹಲಿ: ಭಾರತ – ಪಾಕಿಸ್ತಾನ (India vs Pakistan) ಸಂಘರ್ಷ ಮತ್ತು ಕದನ ವಿರಾಮದ ಬಳಿಕ ಇದೇ ಮೊದಲ ಬಾರಿಗೆ ಉಭಯ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMO) ಮಟ್ಟದ ಮಾತುಕತೆ ಸೋಮವಾರ (ಇಂದು) ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದೆ ಎಂದು ಭಾರತದ ಡಿಜಿಎಂಓ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಪ್ರಕಟಿಸಿದ್ದಾರೆ.

    ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎ.ಎನ್.ಪ್ರಮೋದ್ ಮತ್ತು ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ.ಭಾರ್ತಿ ಅವರು ಸುದ್ದಿಗೋಷ್ಠಿಯಲ್ಲಿದ್ದರು. ಆಪರೇಷನ್ ಸಿಂಧೂರ (Operation Sindoor) ಬಗ್ಗೆ ಸಮಗ್ರ ಮಾಹಿತಿಗಳನ್ನು ಮಾಧ್ಯಮಗಳ ಜತೆ ಹಂಚಿಕೊಳ್ಳುವ ಸಂದರ್ಭದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಇಂದಿನ ಉನ್ನತ ಮಟ್ಟದ ಸಭೆಯಲ್ಲಿ ಉಭಯ ರಾಷ್ಟ್ರ ನಾಯಕರು ಪರಿಸ್ಥಿತಿತಿಗಳ ಕುರಿತು ಅವಲೋಕಿಸಲಿದ್ದಾರೆ ಎಂದು ಸಹ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯುದ್ಧ ಭೀತಿ ನಡುವೆ ಮತ್ತೊಂದು ಶಾಕ್‌ – ಪಾಕಿಸ್ತಾನದ 51 ಸ್ಥಳಗಳ ಮೇಲೆ ಬಲೂಚ್‌ ಹೋರಾಟಗಾರರಿಂದ ದಾಳಿ

    ಇದೇ ವೇಳೆ ಭಾರತದ ಕಾರ್ಯಾಚರಣೆಯಲ್ಲಿ ಯೂಸಫ್ ಅಝರ್, ಅಬ್ದುಲ್ ಮಲಿಕ್ ರವೂಫ್ ಮತ್ತು ಮುದಾಸಿರ್ ಅಹ್ಮದ್ ಸೇರಿದಂತೆ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಆರ್ಟಿಲರಿ ಮತ್ತು ಶೆಲ್ ಚಕಮಕಿಯಲ್ಲಿ ಪಾಕಿಸ್ತಾನ ಸೇನೆಯ 35-40 ಸೈನಿಕರು ಮೃತಪಟ್ಟಿದ್ದಾರೆ ಎಂದು ವಿವರಿಸಿದರು.  ಇದನ್ನೂ ಓದಿ: ಉಗ್ರರ ಸಂಹಾರಕ್ಕೆ ಭಾರತೀಯ ಸೇನೆಗೆ ನೆರವಾಗಿದ್ದು ಬೆಂಗಳೂರಿನ ʻಇಸ್ರೋʼ

    ಪಾಕಿಸ್ತಾನದ ಒಳಗೆ 11 ವಾಯುನೆಲೆಗಳು ನಾಶವಾಗಿವೆ ಮತ್ತು ಆ ದೇಶದ ಮಿಲಿಟರಿ ಸಾಮರ್ಥ್ಯಕ್ಕೆ ವ್ಯಾಪಕ ಹಾನಿಯಾಗಿದೆ. ಆದ್ರೆ ಶನಿವಾರ ಕದನ ವಿರಾಮ ಘೋಷಣೆಯಾದ ಬಳಿಕವೂ ಪಾಕಿಸ್ತಾನ ಹಲವು ಬಾರಿ ಇದನ್ನು ಉಲ್ಲಂಘಿಸಿದೆ. ಶನಿವಾರ ರಾತ್ರಿ ಜಮ್ಮು ಪ್ರದೇಶದಲ್ಲಿ ಡ್ರೋನ್‌ಗಳು ಪತ್ತೆಯಾಗಿದ್ದು, ದೊಡ್ಡ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ತಿಳಿಸಿದರು.

    ಸಭೆಯಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ ಬಿಟ್ಟುಕೊಡಬೇಕು, ಜೊತೆಗೆ ಅಗತ್ಯವಿರುವ ಮೋಸ್ಟ್‌ ವಾಂಟೆಡ್‌ ಉಗ್ರರನ್ನ ಭಾರತಕ್ಕೆ ಹಸ್ತಾಂತರಿಸಬೇಕು ಎಂಬ ಷರತ್ತನ್ನು ಭಾರದ ವಿಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಜಮ್ಮು & ಕಾಶ್ಮೀರದ ವಾಯುಪ್ರದೇಶ ಮೂಲಕ ಹಾದುಹೋದ ಸ್ಟಾರ್‌ಲಿಂಕ್‌ ಉಪಗ್ರಹ – ಡ್ರೋನ್‌ ಅಂತ ಬೆಚ್ಚಿದ ಜನ

  • ಉಗ್ರರ ಸಂಹಾರಕ್ಕೆ ಭಾರತೀಯ ಸೇನೆಗೆ ನೆರವಾಗಿದ್ದು ಬೆಂಗಳೂರಿನ ʻಇಸ್ರೋʼ

    ಉಗ್ರರ ಸಂಹಾರಕ್ಕೆ ಭಾರತೀಯ ಸೇನೆಗೆ ನೆರವಾಗಿದ್ದು ಬೆಂಗಳೂರಿನ ʻಇಸ್ರೋʼ

    ಬೆಂಗಳೂರು: ಭಾರತೀಯ ಸೇನೆ ನಡೆಸಿದ ಕ್ರೂಸ್ ಕ್ಷಿಪಣಿ ದಾಳಿಯಲ್ಲಿ ಪಾಕಿಸ್ತಾನದ ಮಿಲಿಟರಿ ನೆಲೆಗಳಿಗೆ ಆಗಿರುವ ಹಾನಿಗಳ ಕುರಿತು ಸಾಕ್ಷಿ ಸಮೇತ ಓಪನ್ ಸೋರ್ಸ್ ಇಂಟೆಲಿಜೆನ್ಸ್ (OSINT) ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ. ಆದ್ರೆ ಸೇನೆಯ ಈ ಕಾರ್ಯಾಚರಣೆಗೆ ನೆರವಾಗಿದ್ದು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ನಮ್ಮ ಇಸ್ರೋ (ISRO) ಸಂಸ್ಥೆ ಅನ್ನೋದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

    ಹೌದು, ಭಾರತೀಯ ಸೇನೆಗೆ (Indian Army) ಉಗ್ರರ ನೆಲೆಗಳನ್ನ ತೋರಿಸಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ). ಯುದ್ಧದ ಸಂದರ್ಭ ನಿರ್ಮಾಣ ಆಗ್ತಿದ್ದಂತೆ ಭಾರತೀಯ ಸೇನೆ ಇಸ್ರೋ ಸಂಸ್ಥೆಯ ಸಹಾಯ ಕೇಳಿತ್ತು. ಹೀಗಾಗಿ 10 ಉಪಗ್ರಹಗಳಿಂದ ಸತತ ನಿಗಾ ವಹಿಸಿದ್ದ ಇಸ್ರೋ ಉಗ್ರರ ನೆಲೆ ಫೋಟೋಗಳನ್ನ ಕಳಿಸಿಕೊಟ್ಟಿತ್ತು. ಪಾಕಿಸ್ತಾನದ ಸೇನಾ ನೆಲೆಗಳು, ಡ್ರೋನ್‌ ಲಾಂಚ್‌ ಪ್ಯಾಡ್‌ಗಳ ಮಾಹಿತಿಯನ್ನು ಚಿತ್ರ ಸಮೇತ ಸಂಗ್ರಹಿಸಿಕೊಟ್ಟಿತ್ತು. ಹೀಗಾಗಿ ನಿಕರ ಗುರಿಯಿಟ್ಟ ಭಾರತೀಯ ಸೇನೆ ಉಗ್ಗರ ಸೇನಾ ನೆಲೆಗಳು ಹಾಗೂ ವಾಯು ನೆಲೆಗಳನ್ನು ಛಿದ್ರಗೊಳಿಸಿತ್ತು ಎಂದು ಇಸ್ರೋದ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಾಕ್‌ನಲ್ಲಿರುವ ಉಗ್ರರ ನೆಲೆಗಳಿಗೆ ಹೊಡೀತೀವಿ: ಅಮೆರಿಕಗೆ ಮೊದಲೇ ಹೇಳಿದ್ದ ಜೈಶಂಕರ್‌

    ಭಾರತವು ಪಾಕಿಸ್ತಾನದ ಪ್ರದೇಶದೊಳಗೆ ಆಯ್ದ ಮಿಲಿಟರಿ ಗುರಿಗಳ ಮೇಲೆ ನಿಖರ ದಾಳಿಗಳನ್ನು ನಡೆಸಿತು. ಇವುಗಳಲ್ಲಿ ರಫಿಕಿ, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಸಿಯಾಲ್‌ಕೋಟ್‌ನಲ್ಲಿರುವ ರಾಡಾರ್ ಸ್ಥಾಪನೆಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಮತ್ತು ಮದ್ದುಗುಂಡು ಡಿಪೋಗಳು ಸೇರಿವೆ. ಇದನ್ನೂ ಓದಿ: ಜಮ್ಮು & ಕಾಶ್ಮೀರದ ವಾಯುಪ್ರದೇಶ ಮೂಲಕ ಹಾದುಹೋದ ಸ್ಟಾರ್‌ಲಿಂಕ್‌ ಉಪಗ್ರಹ – ಡ್ರೋನ್‌ ಅಂತ ಬೆಚ್ಚಿದ ಜನ

    ಪಾಕಿಸ್ತಾನದ ಭೋಲಾರಿಯಲ್ಲಿರುವ ಪಿಎಎಫ್ ನೆಲೆಯ ಬಿಡಿಎ (ಬಾಂಬ್ ಹಾನಿ ಮೌಲ್ಯಮಾಪನ) ಚಿತ್ರವನ್ನು ಕಾವಾ ಸ್ಪೇಸ್ ಹಂಚಿಕೊಂಡಿದೆ. ಭಾರತೀಯ ಎಎಲ್‌ಸಿಎಂ (ವಾಯು-ಉಡಾವಣಾ ಕ್ರೂಸ್ ಕ್ಷಿಪಣಿ) ನಡೆಸಿದ ನಿಖರ ದಾಳಿಯ ಕುರಿತು ಸಾಕ್ಷಿ ಸಮೇತ ಮಾಹಿತಿ ಹಂಚಿಕೊಳ್ಳಲಾಗಿದೆ. ಪಿಎಎಫ್ (ಪಾಕಿಸ್ತಾನ ವಾಯುಪಡೆ) ಹ್ಯಾಂಗರ್ ಮೇಲೆ ಆಗಿರುವ ಎಫೆಕ್ಟ್‌ ಬಗ್ಗೆ ಸಾಕ್ಷಿ ಇದೆ. ಇದನ್ನೂ ಓದಿ: ಭಾರತೀಯ ಕ್ರೂಸ್ ಕ್ಷಿಪಣಿಗಳಿಂದ ಪಾಕ್ ವಾಯುನೆಲೆಗಳು ಧ್ವಂಸ – ಸೇನೆಯಿಂದ ಸಾಕ್ಷಿ ರಿಲೀಸ್‌

    ಸರ್ಗೋಧಾದಲ್ಲಿರುವ ಪಿಎಎಫ್ ನೆಲೆ ಮುಷಾಫ್‌ನ ಬಿಡಿಎ ವಿಶ್ಲೇಷಣೆ ಎಂಬ ಫೊಟೊವೊಂದನ್ನು ಒಸಿಂಟ್ ಹ್ಯಾಂಡಲ್ ಕಾವಾ ಸ್ಪೇಸ್ ಹಂಚಿಕೊಂಡಿದೆ. ದಾಳಿಯ ನಂತರದ ಚಿತ್ರಣ ವಿಶ್ಲೇಷಣೆಯು ಭಾರತೀಯ ಪಡೆಗಳಿಂದ ನಾಶವಾದ ರನ್‌ವೇಯನ್ನು ತೋರಿಸುತ್ತದೆ ಎಂದು ಕಾವಾ ಸ್ಪೇಸ್ ಹೇಳಿದೆ. ಜಾಕೋಬಾಬಾದ್‌ನಲ್ಲಿರುವ ಪಿಎಎಫ್ ಬೇಸ್ ಶಹಬಾಜ್‌ನ ಕಾವಾ ಸ್ಪೇಸ್ ನಡೆಸಿದ ಬಿಡಿಎ ವಿಶ್ಲೇಷಣೆಯು, ಪಿಎಎಫ್ ಹ್ಯಾಂಗರ್ ಮೇಲೆ ಭಾರತೀಯ ಎಎಲ್‌ಸಿಎಂ ನಡೆಸಿದ ನಿಖರ ದಾಳಿಯ ಪರಿಣಾಮವನ್ನು ತೋರಿಸುತ್ತದೆ.

  • ದೇಶದಲ್ಲಿ ಯುದ್ಧ ಭೀತಿ – ಕರ್ನಾಟಕದ ಪೊಲೀಸರಿಗೆ ರಜೆ ರದ್ದು: ಪರಮೇಶ್ವರ್‌

    ದೇಶದಲ್ಲಿ ಯುದ್ಧ ಭೀತಿ – ಕರ್ನಾಟಕದ ಪೊಲೀಸರಿಗೆ ರಜೆ ರದ್ದು: ಪರಮೇಶ್ವರ್‌

    ಬೆಂಗಳೂರು: ಭಾರತ-ಪಾಕಿಸ್ತಾನ (India – Pakistan) ನಡುವೆ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಕಾರಣ, ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಪೊಲೀಸರಿಗೆ ರಜೆ ಕೊಡುವುದಿಲ್ಲ ಎಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್‌ (G Parameshwar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಯುದ್ದ ಭೀತಿ ಇದೆ. ಗಡಿ ಭಾಗದಲಲ್ಲಿ ಚಟುವಟಿಕೆಗಳು ನಡೆಯುತ್ತಿದೆ. ಉಗ್ರರನ್ನು ನಮ್ಮ ಸೇನೆ ಸದೆಬಡಿಯುತ್ತಿದೆ. ಇಂದಿನ ಪರಿಸ್ಥಿತಿ ತೀವ್ರ ಆದ್ರೆ, ಯುದ್ಧ ಆಗಬಹುದು. ಹೀಗಾಗಿ ಕೇಂದ್ರ ಎಲ್ಲಾ ರಾಜ್ಯಗಳಿಗೆ ಎಚ್ಚರ ವಹಿಸುವಂತೆ ಸೂಚನೆ ಕೊಟ್ಟಿದೆ. ಈ ಹಿನ್ನೆಲೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಿದ್ದೇವೆ. ಬೇರೆ ಯಾವುದೇ ರೀತಿಯ ಚಟುವಟಿಕೆಗಳ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸ್‌ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

    ಒಂದು ವೇಳೆ ಯುದ್ಧದ ಸಮಯ ಬಂದರೆ ನೀರು, ಆಹಾರ ಪದಾರ್ಥ, ಅಗತ್ಯ ವಸ್ತುಗಳ ಸಂಗ್ರಹದ ಬಗ್ಗೆ ಕ್ರಮಕ್ಕೆ ತಯಾರಿ ಮಡೆಯುತ್ತದೆ. ಈ ಬಗ್ಗೆ ಸಿಎಂ ಜೊತೆಗೆ ಸಭೆ ನಡೆಸಿ ಚರ್ಚಿಸುತ್ತೇವೆ. ಮುಂದೆ ಕೇಂದ್ರದಿಂದ ಬರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುತ್ತೇವೆ. ದೇಶದಲ್ಲಿ ಈ ಪರಿಸ್ಥಿತಿ ಇರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದ ಪೊಲೀಸರಿಗೆ ರಜೆಗಳನ್ನು ಮಂಜೂರು ಮಾಡುವುದಿಲ್ಲ. ಕೇಂದ್ರ ಸರ್ಕಾರ ಎಲ್ಲವೂ ಸರಿಯಿದೆ ಎಂದು ಸೂಚನೆ ಕೊಡುವರೆಗೂ ನಮ್ಮ ಪೊಲೀಸರಿಗೆ ರಜೆ ಕೊಡಲ್ಲ ಎಂದು ಮಾಹಿತಿ ನೀಡಿದರು.

    ಅಲ್ಲದೇ ಕರಾವಳಿ ಭಾಗದಲ್ಲಿ ಪೊಲೀಸರು ಮತ್ತಷ್ಟು ಪರಿಣಾಮವಾಗಿ ಕೆಲಸ ಮಾಡಬೇಕು. ಅಲ್ಲಿ ಕೂಡ ಭದ್ರತೆ ನೀಡಲಾಗಿದೆ. ಕೋಸ್ಟಲ್ ಭಾಗದಲ್ಲಿ ನಮ್ಮ ಅಧಿಕಾರದಲ್ಲಿರೋ ಕಡೆ ಭದ್ರತೆ ಕೊಡ್ತೀವಿ, ನೌಕಾಪಡೆ, ಅಂತಾರಾಷ್ಟ್ರೀಯ ಗಡಿಯಲ್ಲಿ ಎಲ್ಲ ಕಡೆಯೂ ಭದ್ರತೆ ಹೆಚ್ಚಿಸಲಾಗಿದೆ. ಕೇಂದ್ರ ಏನಾದ್ರು ಬಾರ್ಡರ್ ನಲ್ಲಿ ಸೆಕ್ಯುರಿಟಿ ಕೊಡೋದಾದರೆ ಕೇಂದ್ರ ನಮಗೆ ಸೂಚನೆ ಕೊಡುತ್ತದೆ. ಅದನ್ನ ನಾವು ಪಾಲನೆ ಮಾಡ್ತೀವಿ ಎಂದು ಹೇಳಿದರು.

  • ಆಸ್ಪತ್ರೆ, ಮೂಲಸೌಕರ್ಯ ಗುರಿಯಾಗಿಸಿ ಪಾಕ್‌ ಮಿಸೈಲ್‌ ದಾಳಿ, ತಕ್ಕ ಉತ್ತರ ಕೊಟ್ಟಿದ್ದೇವೆ: ವ್ಯೋಮಿಕಾ ಸಿಂಗ್

    ಆಸ್ಪತ್ರೆ, ಮೂಲಸೌಕರ್ಯ ಗುರಿಯಾಗಿಸಿ ಪಾಕ್‌ ಮಿಸೈಲ್‌ ದಾಳಿ, ತಕ್ಕ ಉತ್ತರ ಕೊಟ್ಟಿದ್ದೇವೆ: ವ್ಯೋಮಿಕಾ ಸಿಂಗ್

    ನವದೆಹಲಿ: ಪಾಪಿ ಪಾಕಿಸ್ತಾನ (Pakistan) ಗಡಿ ಮೀರಿ ಭಾರತದ ಮೇಲೆ ದಾಳಿ ಮಾಡುತ್ತಿದೆ. ಶೆಲ್ ದಾಳಿ ನಡೆಸಿ ಅಮಾಯಕರನ್ನ ಗುರಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಾದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಹರಿಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಜಮ್ಮು-ಕಾಶ್ಮೀರದಲ್ಲಿ (Jammu And Kashmir) ಬೆಳಗ್ಗಿನವರೆಗೂ ಬ್ಲಾಕ್‌ಔಟ್ ಘೋಷಿಸಲಾಗಿತ್ತು.

    ಮೂಲಸೌಕರ್ಯಗಳಿಗೆ ಹಾನಿ:
    ಇಂದು ರಕ್ಷಣಾ ಸಚಿವಾಲಯ ನಡೆಸಿದ ಮಹತ್ವದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಂಗ್‌ ಕಮಾಂಡರ್‌ ವ್ಯೂಮಿಕಾ ಸಿಂಗ್‌ (Vyomika Singh), ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಅವರಂತಿಪುರ ಹಾಗೂ ಉಧಂಪುರದಲ್ಲಿರುವ ಆಸ್ಪತ್ರೆ, ಶಾಲೆ ಇತರ ಮೂಲ ಸೌಕರ್ಯಗಳ ಮೇಲೆ ದಾಳಿ ಮಾಡಿದೆ ಎಂದು ತಿಳಿಸಿದರು.

    ಅಲ್ಲದೇ ದಾಳಿ ನಡೆಸಲು ತನ್ನ ಸೈನ್ಯವನ್ನು ಮುಂದಕ್ಕೆ ಸಾಗಿಸುತ್ತಿದೆ, ಇದು ಪರಿಸ್ಥಿತಿಯನ್ನ ಮತ್ತಷ್ಟು ಉಲ್ಬಣಗೊಳಿಸುವ ಆಕ್ರಮಣಕಾರಿ ಉದ್ದೇಶವನ್ನ ಸೂಚಿಸುತ್ತದೆ. ಭಾರತೀಯ ಸಶಸ್ತ್ರ ಪಡೆಗಳು ಹೆಚ್ಚಿನ ಕಾರ್ಯಾಚರಣೆಯ ಸನ್ನದ್ಧತೆಯಲ್ಲಿವೆ. ಎಲ್ಲಾ ಪ್ರತಿಕೂಲ ಕ್ರಮಗಳನ್ನು ಪರಿಣಾಮಕಾರಿಯಾಗಿ ಎದುರಿಸಲಾಗಿದೆ ಮತ್ತು ದಿಟ್ಟ ಉತ್ತರ ಸಹ ನೀಡಲಾಗಿದೆ. ಪಾಕಿಸ್ತಾನ ಮತ್ತೂ ದಾಳಿಗೆ ಪ್ರೈತ್ನಿಸಿದ್ರೆ ನಮ್ಮ ಸೇನೆ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.

    ಪಾಕ್‌ ವಾಯುನೆಲೆಗಳು ಛಿದ್ರ:
    ಇನ್ನೂ ಭಾರತ ನಡೆಸಿದ ವಾಯುದಾಳಿಯಲ್ಲಿ ಸಿಯಾಲ್‌ಕೋಟ್, ಪಸ್ರೂರ್ ರಾಡಾರ್ ಸೈಟ್, ರಹೀಮ್ ಯಾರ್ ಖಾನ್, ಮುರಿದ್‌, ರಫೀಕ್, ಚುನಿಯನ್, ಚಕ್ಲಾಲಾ, ಸುಕ್ಕೂರ್ ಮೊದಲಾದ ಪಾಕಿಸ್ತಾನ ವಾಯುನೆಲೆಗಳನ್ನು ಧ್ವಂಸಗೊಳಿಸಿದೆ. ಜೊತೆಗೆ ಭಾರತದ ಮೇಲೆ ಪದೇ ಪದೇ ದಾಳಿಗೆ ಯತ್ನಿಸುತ್ತಿದ್ದ ಡ್ರೋನ್‌ ಲಾಂಚ್‌ಪ್ಯಾಡನ್ನೇ ಉಡೀಸ್‌ ಮಾಡಿದೆ ಎಂದು ಫೋಟೋ ಮತ್ತು ವಿಡಿಯೋ ಸಮೇತ ವಿವರಿಸಿದರು.

    ಅಮೃತಸರದಲ್ಲಿ ಪಾಕ್‌ ಡ್ರೋನ್‌ ಉಡೀಸ್‌:
    ಭಾರತೀಯ ಸೇನೆಯು ಪಾಕಿಸ್ತಾನದ ಡ್ರೋನ್‌ಗಳನ್ನು ಅಮೃತಸರದ ಖಾಸಾ ಕಂಟೋನ್ಮೆಂಟ್‌ನಲ್ಲಿ ಹೊಡೆದುರುಳಿಸಿದೆ. ಭಾರತದ ಸಾರ್ವಭೌಮತ್ವವನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಪಾಕಿಸ್ತಾನವು ಡ್ರೋನ್ ದಾಳಿಗಳ ಮೂಲಕ ಗಡಿಗಳಲ್ಲಿ ತೊಂದರೆ ಸೃಷ್ಟಿಸುತ್ತಿದೆ ಎಂದು ಭಾರತೀಯ ಸೇನೆ ಹೇಳಿದೆ. ಶನಿವಾರ ಮುಂಜಾನೆ 5 ಗಂಟೆಗೆ ಖಾಸಾ ಕಂಟೋನ್ಮೆಂಟ್ ಬಳಿ ಹಾರುತ್ತಿದ್ದ ಹಲವು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ.

    ಜೆ&ಕೆ ಗುರಿಯಾಗಿಸಿ ಡ್ರೋನ್ ದಾಳಿ
    ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸಿ ಪಾಕಿಸ್ತಾನ ಶನಿವಾರವೂ ಹಲವಾರು ಡ್ರೋನ್ ದಾಳಿಗಳನ್ನು ನಡೆಸಿದೆ. ಶನಿವಾರ ಬೆಳಗಿನ ಜಾವ ಪಾಕಿಸ್ತಾನವು ಜಮ್ಮು ವಾಯುನೆಲೆ ಮತ್ತು ಉಧಂಪುರ ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ, ಅಲ್ಲದೇ ಜಮ್ಮುವಿನ ಪ್ರಸಿದ್ಧ ಶಂಭು ದೇವಾಲಯದ ಮೇಲೂ ಕ್ಷಿಪಣಿ ದಾಳಿಗೆ ಪಾಕ್‌ ಯತ್ನಿಸಿದೆ. ಆದ್ರೆ ಭಾರತ ಈ ದಾಳಿಯನ್ನು ವಿಫಲಗೊಳಿಸಿದೆ. ಉಧಂಪುರದಲ್ಲಿ ಪಾಕಿಸ್ತಾನದ ಕ್ಷಿಪಣಿ ಬಿದ್ದಿದೆ. ಅದರ ಅವಶೇಷಗಳನ್ನು ಹೊರತೆಗೆಯಲಾಗಿದೆ.

  • ಶಕ್ತಿಶಾಲಿ ಅಸ್ತ್ರಗಳಿಂದಲೇ ಪಾಕ್‌ಗೆ ಶತಕೋಟಿ ಲಾಸ್‌ – ದಿವಾಳಿಯತ್ತ ʻಭಿಕಾರಿಸ್ತಾನʼ

    ಶಕ್ತಿಶಾಲಿ ಅಸ್ತ್ರಗಳಿಂದಲೇ ಪಾಕ್‌ಗೆ ಶತಕೋಟಿ ಲಾಸ್‌ – ದಿವಾಳಿಯತ್ತ ʻಭಿಕಾರಿಸ್ತಾನʼ

    ಭಾರತದ ʻಆಪರೇಷನ್‌ ಸಿಂಧೂರʼ (Operation Sindoor) ಎಫೆಕ್ಟ್‌ ಪಾಕಿಸ್ತಾನದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಭಾರತ ನಡೆಸಿದ ವಾಯುದಾಳಿಗೆ ಪತರುಗುಟ್ಟಿಹೋಗಿರುವ ಪಾಕ್‌ ತಾನು ನಂಬಿದ್ದ ಶಕ್ತಿಶಾಲಿ ಅಸ್ತ್ರಗಳಿಂದಲೇ ಶತಕೋಟಿ ನಷ್ಟ ಅನುಭವಿಸಿದೆ. ಇದರಿಂದ ಪಾಕಿಸ್ತಾನದ (Pakistan) ಆರ್ಥಿಕ ಸ್ಥಿತಿ ಈಗಾಗಲೇ ಅಧೋಗತಿ ತಲುಪಿದ್ದು, ದಿವಾಳಿಯ ಆಗುವ ಹಂತಕ್ಕೆ ತಲುಪಿದೆ.

    ಭಾರತದ (India) ವಿರುದ್ಧದ ಹೋರಾಟಕ್ಕೂ ಭಿಕ್ಷೆ ಬೇಡುವ ಪರಿಸ್ಥಿತಿಗೆ ತಲುಪಿದೆ. ಭಾರತದ ದಾಳಿಯಿಂದ ತನಗೆ ಭಾರೀ ನಷ್ಟವಾಗವಾಗಿದ್ದು ಸಾಲ ನೀಡುವಂತೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಬೇಡಿಕೆ ಇಟ್ಟಿದೆ. ಪಾಕಿಸ್ತಾನದ ಆರ್ಥಿಕ ಇಲಾಖೆಯ ಆರ್ಥಿಕ ವ್ಯವಹಾರಗಳ ವಿಭಾಗದ ಸಾಮಾಜಿಕ ಜಾಲತಾಣ ʻxʼ ಖಾತೆಯಲ್ಲಿ ಸಾಲಕ್ಕಾಗಿ ಅಧಿಕೃತ ಮನವಿ ಮಾಡಿಕೊಂಡಿದೆ. ಇದು ವಿಶ್ವಮಟ್ಟದಲ್ಲಿ ಟೀಕೆಗೆ ಒಳಗಾಗುತ್ತಿದ್ದಂತೆ ವರಸೆ ಬದಲಿಸಿದ ಪಾಕ್‌ ʻತನ್ನ ಎಕ್ಸ್‌ ಖಾತೆ ಹ್ಯಾಕ್‌ ಆಗಿದೆʼ ಎಂದು ಹೇಳಿಕೊಂಡಿದೆ. ಇದಾದ ಬಳಿಕ ಭಾರತದ ಆಕ್ಷೇಪದ ನಡುವೆಯೂ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) 2 ಕಂತುಗಳಲ್ಲಿ 19 ಸಾವಿರ ಕೋಟಿ ಸಾಲ ಮಂಜೂರು ಮಾಡಿದೆ. ಇದನ್ನೂ ಓದಿ: 44 ಸೆಕೆಂಡ್‌ನಲ್ಲಿ 72 ರಾಕೆಟ್ – ಏನಿದು ಪಿನಾಕಾ ರಾಕೆಟ್ ಲಾಂಚರ್?

    ಹಾಗಾದ್ರೆ ಆರ್ಥಿಕವಾಗಿ ಕಂಗೆಟ್ಟಿದ್ದ ಪಾಕ್‌ ಭಾರತದ ಒಂದೇ ಏರ್‌ಸ್ಟ್ರೈಕ್‌ಗೆ ಭಿಕ್ಷೆ ಬೇಡುವ ಸ್ಥಿತಿ ತಲುಪಿದ್ದು ಏಕೆ? ತಾನು ಸರ್ವಶ್ರೇಷ್ಠ ಹಾಗೂ ಶಕ್ತಿಶಾಲಿ ಎಂದು ನಂಬಿದ್ದ ಅಸ್ತ್ರಗಳೇ ಮುಳುವಾಗಿದ್ದು ಹೇಗೆ? ಭಾರತದ ದಾಳಿಯಲ್ಲಿ ಛಿದ್ರವಾದ ಪಾಕ್‌ನ ಫೈಟರ್‌ ಜೆಟ್‌ಗಳು ಯಾವುವು? ಅವುಗಳ ಬೆಲೆ ಎಷ್ಟು ಎಂಬೆಲ್ಲ ಮಾಹಿತಿ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಹೌದು… ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌ ಗಡಿ ಸೇರಿದಂತೆ ಭಾರತದ ಒಟ್ಟು 36 ಕಡೆ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಿತ್ತು. ಎರಡು ದಿನಗಳಲ್ಲಿ (ಮೇ 8, 9) 300-400 ಮಿಸೈಲ್‌ಗಳು, ಡ್ರೋನ್‌ಗಳಿಂದ ದಾಳಿ ನಡೆಸಿತ್ತು. ಈ ಎಲ್ಲ ದಾಳಿಗಳನ್ನ ಭಾರತ ವಿಫಲಗೊಳಿಸಿತು. ಜೊತೆಗೆ ಪಾಕಿಸ್ತಾನ ಮಿಲಿಟರಿಯಲ್ಲಿ ಶಕ್ತಿಶಾಲಿ ಅಸ್ತ್ರಗಳೆಂದು ಕರೆಯುತ್ತಿದ್ದ F-16, JF-17, J-10 ಮತ್ತು Saab-2000 Erieye AWACS (ವಾಯುಗಾಮಿ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ) ‌ವಿಮಾನವನ್ನು ಛಿದ್ರಗೊಳಿಸಿ, ಶತಕೋಟಿ ನಷ್ಟ ಉಂಟುಮಾಡಿತು. ಇದು ಮೊದಲೇ ಕುಸಿದಿರುವ ಪಾಕ್‌ ಆರ್ಥಿಕತೆಗೆ ಮತ್ತಷ್ಟು ಹೊಡೆತ ಕೊಟ್ಟಿದೆ. ಇದನ್ನೂ ಓದಿ: ಭಾರತದ 36 ಕಡೆ 400 ಮಿಸೈಲ್‌ನಿಂದ ಪಾಕ್ ದಾಳಿ: ಕರ್ನಲ್ ಸೋಫಿಯಾ ಖುರೇಷಿ

    JF-17 ವಿಶೇಷತೆ ಏನು – ಬೆಲೆ ಎಷ್ಟು?

    ಜೆಎಫ್-17 ಥಂಡರ್ (JF 17 Thunder) ಪಾಕಿಸ್ತಾನ ಮತ್ತು ಚೀನಾದ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಬಹುಪಯೋಗಿ ಯುದ್ಧ ವಿಮಾನ. ಇದನ್ನು ಪಾಕಿಸ್ತಾನ್ ಏರೋನಾಟಿಕಲ್ ಕಾಂಪ್ಲೆಕ್ಸ್ (PAC) ಮತ್ತು ಚೆಂಗ್ಡು ಏರ್‌ಕ್ರಾಫ್ಟ್ ಕಾರ್ಪೊರೇಷನ್ (CAC) ಜಂಟಿಯಾಗಿ ಅಭಿವೃದ್ಧಿಪಡಿಸಿವೆ. 1990ರ ದಶಕದಲ್ಲಿ ಅಮೆರಿಕ ಪರಮಾಣು ಒಪ್ಪಂದದ ಬಳಿಕ ಪಾಕಿಸ್ತಾನಕ್ಕೆ ಎಫ್-16 ಪೂರೈಕೆ ನಿಲ್ಲಿಸಿತ್ತು. ಆಗ 1992ರಲ್ಲಿ ಚೀನಾ ಜೊತೆಗಿನ ಒಪ್ಪಂದಕ್ಕೆ ಪಾಕ್‌ ಸಹಿ ಹಾಕಿತು. ಬಳಿಕ 1995ರಲ್ಲಿ ಜೆಫ್‌-17 ಯುದ್ಧವಿಮಾನ ತಯಾರಿಸುವ ಯೋಜನೆ ಶುರುವಾಯಿತು.

    2009ರಲ್ಲಿ ಮೊದಲ ಜೆಫ್‌-17 ಯುದ್ಧ ವಿಮಾನವನ್ನು ಪಾಕಿಸ್ತಾನ ವಾಯುಪಡೆಗೆ ಸೇರ್ಪಡೆಗೊಳಿಸಿತು. ಇದೀಗ ಪಾಕ್‌ ಬಳಿ 150ಕ್ಕೂ ಹೆಚ್ಚು ವಿಮಾನಗಳಿವೆ. ಇದು ಹಗುರ ಮತ್ತು ವೇಗದ ಫೈಟರ್‌ ಜೆಟ್‌ ಆಗಿದ್ದು, ಗರಿಷ್ಠ ತೂಕ 13,500 ಕೆಜಿಯಷ್ಟು ಇರಲಿದೆ. ಜೆಫ್‌-17 ಬೆಲೆ ಸುಮಾರು 15 ದಶಲಕ್ಷ ಡಾಲರ್‌ ಅಂದ್ರೆ ಸುಮಾರು 120 ಕೋಟಿ ರೂ. ಇದೆ, ಇದರ ಬ್ಲಾಕ್‌-3 ರೂಪಾಂತರದ ಬೆಲೆ 25-30 ದಶಲಕ್ಷ ಡಾಲರ್‌ನಷ್ಟಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: `ಆಪರೇಷನ್ ಸಿಂಧೂರ’ಕ್ಕೆ ತತ್ತರಿಸಿ ಮಿತ್ರರಾಷ್ಟ್ರಗಳ ಬಳಿ ಸಾಲಕ್ಕಾಗಿ ಅಂಗಲಾಚಿದ ಪಾಕ್ – ಟ್ರೋಲ್

    F-16 ವಿಶೇಷತೆ ಏನು, ಬೆಲೆ ಎಷ್ಟು?

    ಎಫ್-16 ಅಮೆರಿಕದ ರಕ್ಷಣಾ ಕಂಪನಿ ಜನರಲ್ ಡೈನಾಮಿಕ್ಸ್ (ಈಗ ಲಾಕ್ಹೀಡ್ ಮಾರ್ಟಿನ್) ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಯುದ್ಧವಿಮಾನ. 1981ರಲ್ಲಿ ಪಾಕಿಸ್ತಾನವು ಅಮೆರಿಕದಿಂದ 40 ಎಫ್‌-16 ಯುದ್ಧ ವಿಮಾನಗಳನ್ನು ಆರ್ಡರ್‌ ಮಾಡಿತು. 1983-87ರ ಅವಧಿಯಲ್ಲಿ ಈ ಯುದ್ಧ ವಿಮಾನಗಳನ್ನು ʻಪೀಸ್‌ ಗೇಟ್‌-1, ಗೇಟ್‌-2ʼ ಶಾಂತಿ ಒಪ್ಪಂದಗಳ ಅಡಿಯಲ್ಲಿ ಅಮೆರಿಕ ಪೂರೈಕೆ ಮಾಡಿತು. ಆಗ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಮಾತ್ರ ಎಫ್‌-16 ಬಳಸಬೇಕೆಂದು ಅಮೆರಿಕ ಷರತ್ತು ವಿಧಿಸಿತ್ತು, ಆದ್ರೆ ಭಾರತದ ವಿರುದ್ಧ ಪಾಕ್‌ ಈ ವಿಮಾನ ಪ್ರಯೋಗಿಸಿದೆ. ಮೊದಲ ಜೆಟ್‌ 1983ರ ಜನವರಿ 15ರಂದು ಪಾಕಿಸ್ತಾನ ತಲುಪಿತು.

    ಇದಾದ ಬಳಿಕ 1988ರಲ್ಲಿ ಪಾಕಿಸ್ತಾನವು ಇನ್ನೂ 11 ಎಫ್‌-16 ಯುದ್ಧ ವಿಮಾನಗಳಿಗೆ ಆರ್ಡರ್‌ ನೀಡಿತು. ಆದ್ರೆ 1990ರ ಪರಮಾಣು ಒಪ್ಪಂದದ ಮೇಲೆ ಅಮೆರಿಕ ಜೆಟ್‌ ಪೂರೈಕೆಗೆ ನಿರ್ಬಂಧ ಹೇರಿತ್ತು. ಇದಾದ 15 ವರ್ಷಗಳ ನಂತರ 2005ರಲ್ಲಿ ಮತ್ತೆ ಅಮೆರಿಕ ಎಫ್‌-16 ಖರೀದಿಗೆ ಪಾಕ್‌ಗೆ ಅವಕಾಶ ಮಾಡಿಕೊಟ್ಟಿತು. ಆಗ ಪಾಕಿಸ್ತಾನ 18 ಹೊಸ ಎಫ್‌-16 ಯುದ್ಧ ವಿಮಾನಗಳನ್ನು ಖರೀದಿ ಮಾಡಿತು. 2010ರ ವೇಳೆಗೆ ಪಾಕ್‌ ಆರ್ಡರ್‌ ಮಾಡಿದ್ದ ಅಷ್ಟೂ ವಿಮಾನಗಳನ್ನು ಅಮೆರಿಕ ಪೂರೈಕೆ ಮಾಡಿತು. ಸದ್ಯ ಪಾಕ್‌ ಸುಮಾರು 75 ರಿಂದ 85 ಎಫ್‌-16 ಯುದ್ಧ ವಿಮಾನಗಳನ್ನು ಹೊಂದಿದೆ. ಇದರಲ್ಲಿ A, B, C, D ನಂತೆ 4 ರೂಪಾಂತರಗಳಿವೆ. ಪ್ರತಿಯೊಂದರ ಬೆಲೆಯೂ ಅದರ ಮಾದರಿಯನ್ನು ಅವಲಂಬಿಸಿರುತ್ತದೆ. ಸದ್ಯ ಹೊಸ ಎಫ್-16 ಬೆಲೆ 40 ರಿಂದ 70 ದಶಲಕ್ಷ ಡಾಲರ್‌ನಷ್ಟಿದೆ. ಅಂದ್ರೆ ಸುಮಾರು 300 ರಿಂದ 500 ಶತಕೋಟಿ ರೂಪಾಯಿ ಇದೆ.

    AWACS ವಿಶೇಷತೆ ಏನು, ಬೆಲೆ ಎಷ್ಟು?

    AWACS ರೆಡಾರ್‌ ವ್ಯವಸ್ಥೆಯ ವಿಮಾನಗಳು ಯಾವುದೇ ದೇಶದ ವಾಯುಪಡೆಯ ರಕ್ಷಣಾ ವ್ಯವಸ್ಥೆಯ ಭಾಗವಾಗಿದೆ. ಹಾಗೆಯೇ ಪಾಕ್‌ ಸಹ ತನ್ನ ವಾಯುಸೇನೆಗೆ ಇದನ್ನು ಅಳವಡಿಸಿಕೊಂಡಿದೆ. ಇದರಲ್ಲಿರುವ ತಿರುಗುವ ರೆಡಾರ್ ವ್ಯವಸ್ಥೆಯು 400 ಕಿಮೀ ಗಿಂತಲೂ ಹೆಚ್ಚು ವ್ಯಾಪ್ತಿವರೆಗೂ ಶತ್ರುಗಳ ಮೇಲೆ ನಿಗಾ ಇಡುತ್ತದೆ. ಹಾಗಾಗಿ ಇದನ್ನ ʻಸ್ಕೈ ಐಸ್‌ʼ (ಆಕಾಶದ ಕಣ್ಣು) ಎಂದು ಕರೆಯುತ್ತಾರೆ. ಈ ವಿಮಾನಗಳು ಶತ್ರುಗಳ ಯುದ್ಧ ವಿಮಾನಗಳು, ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಸಮಯಕ್ಕೆ ಸರಿಯಾಗಿ ಪತ್ತೆ ಹಚ್ಚಿ ಆ ದೇಶದ ವಾಯುಪಡೆಗೆ ನಿರ್ದೇಶನ ನೀಡುವಲ್ಲಿ ಸಹಾಯ ಮಾಡುತ್ತವೆ. ಇದನ್ನೂ ಓದಿ: ಭಾರತದ ವಿರೋಧದ ನಡುವೆಯೂ ಪಾಕ್‌ಗೆ 19,000 ಕೋಟಿ ಸಾಲ ಕೊಟ್ಟ ಐಎಂಎಫ್‌

    ಪಾಕಿಸ್ತಾನವು ಒಟ್ಟು 9 ವಾಯುಗಾಮಿ ರೆಡಾರ್ ವ್ಯವಸ್ಥೆಗಳನ್ನು ಹೊಂದಿದೆ, ಅವುಗಳಲ್ಲಿ ಸ್ವೀಡನ್‌ನ ಸಾಬ್-2000 ಎರಿಯೇ ಮತ್ತು ಚೀನಾದ ZDK-03 ಕರಕೋರಂ ಈಗಲ್ ಸೇರಿವೆ. ಚೀನಾ ನಿರ್ಮಿತ ರೆಡಾರ್‌ ವ್ಯವಸ್ಥೆಗೆ ಪಾಕ್‌ 2024ರಲ್ಲೇ ಗುಡ್‌ಬೈ ಹೇಳಿಕೊಂಡಿದೆ. ಆದ್ರೆ ಈಗ ಭಾರತದ ದಾಳಿಯಲ್ಲಿ ಛಿದ್ರವಾದ ಪತನಗೊಂಡ ರೆಡಾರ್‌ ಚೀನಾದ್ದೆ ಎಂದು ಕೆಲ ವರದಿಗಳು ತಿಳಿಸಿವೆ.

    ಸಾಬ್-2000 ಎರಿಯೇ ಒಂದು ಮಧ್ಯಮ-ಶ್ರೇಣಿಯ ವಾಯುಗಾಮಿ ರೆಡಾರ್ ವ್ಯವಸ್ಥೆಯಾಗಿದೆ. ಇದರ ಬೆಲೆ ಸುಮಾರು 100 ರಿಂದ 150 ದಶಲಕ್ಷ ಡಾಲರ್‌ ಅಂದರೆ 830 ರಿಂದ 1,245 ಕೋಟಿ ರೂ.ಗಳ ವರೆಗೆ ಇರುತ್ತದೆ. ಇದಕ್ಕೆ ನಾವು ರೆಡಾರ್, ನಿಯಂತ್ರಣ ವ್ಯವಸ್ಥೆ, ತರಬೇತಿ ಮತ್ತು ಲಾಜಿಸ್ಟಿಕ್ಸ್ ಸೇರಿಸಿದ್ರೆ, ಅದರ ಒಟ್ಟು ವೆಚ್ಚ 200 ದಶಲಕ್ಷ ಡಾಲರ್‌ ಅಂದ್ರೆ 1,660 ಕೋಟಿ ರೂ.ಗಳಷ್ಟು ತಲುಪಬಹುದು ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ವಾಯುನೆಲೆಯ ಮೇಲೆ ಭಾರತ ದಾಳಿ – ಇಸ್ಲಾಮಾಬಾದ್‌, ರಾವಲ್ಪಿಂಡಿಯಲ್ಲಿ ಅಲ್ಲೋಲ ಕಲ್ಲೋಲ

  • ಭಾರತದ 36 ಕಡೆ 400 ಮಿಸೈಲ್‌ನಿಂದ ಪಾಕ್ ದಾಳಿ: ಕರ್ನಲ್ ಸೋಫಿಯಾ ಖುರೇಷಿ

    ಭಾರತದ 36 ಕಡೆ 400 ಮಿಸೈಲ್‌ನಿಂದ ಪಾಕ್ ದಾಳಿ: ಕರ್ನಲ್ ಸೋಫಿಯಾ ಖುರೇಷಿ

    – ಪಾಕ್‌ನ ಎಲ್ಲಾ ಮಿಸೈಲ್ ನಾಶ ಮಾಡಿದ್ದೇವೆ

    ನವದೆಹಲಿ: ಭಾರತದ 36 ಕಡೆ 400 ಮಿಸೈಲ್ ಬಳಸಿಕೊಂಡು (Missile Attack) ಗುರುವಾರ ರಾತ್ರಿ ಪಾಕಿಸ್ತಾನ ದಾಳಿ ನಡೆಸಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ( Colonel Sofiya Qureshi) ಅಧಿಕೃತ ಮಾಹಿತಿ ನೀಡಿದ್ದಾರೆ.

    ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರ ರಾತ್ರಿ 8ರಿಂದ 9 ಗಂಟೆಗೆ ಆರಂಭವಾಗಿ ಮಧ್ಯರಾತ್ರಿವರೆಗೂ ಭಾರತದ ಮೇಲೆ ಪಾಕಿಸ್ತಾನ ನಿರಂತರ ದಾಳಿ ನಡೆಸಿದೆ. 36 ಕಡೆ 300ರಿಂದ 400 ಪಾಕ್ ಡ್ರೋನ್ ಮಿಸೈಲ್ ದಾಳಿ ಮಾಡಿದೆ. ಪಾಕ್‌ನ ಎಲ್ಲಾ ಮಿಸೈಲ್‌ಗಳನ್ನು ನಾಶ ಮಾಡಲಾಗಿದೆ. ಅಲ್ಲದೇ ಗುಂಡಿನ ದಾಳಿಯನ್ನೂ ಮಾಡಿದೆ. ಪಾಕಿಸ್ತಾನ ಎಲ್‌ಒಸಿಯಲ್ಲಿ ಗುಂಡಿನ ದಾಳಿ ಮಾಡಿದೆ. ಪಂಜಾಬ್, ಭಟಿಂಡಾ ಸೇನಾ ನೆಲೆ ಮೇಲೆ ಪಾಕ್ ದಾಳಿಗೆ ಯತ್ನಿಸಿದೆ ಎಂದರು. ಇದನ್ನೂ ಓದಿ: ಪಾಕ್‌ನಿಂದ ಶೆಲ್ ದಾಳಿ – ಸ್ಥಳಾಂತರಗೊಂಡ ಜನರೊಂದಿಗೆ ಕ್ರಿಕೆಟ್ ಆಡಿದ ಜಮ್ಮು ಸಿಎಂ

    ಪಾಕಿಸ್ತಾನ ತನ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಸ್ಥಗಿತ ಮಾಡಿಲ್ಲ. ಪಾಕಿಸ್ತಾನ, ಭಾರತದ ಏರ್ ಸ್ಟೇಷನ್‌ಗಳ ಮೇಲೆ ದಾಳಿ ಮಾಡಲು ಯತ್ನಿಸಿದೆ. ತನ್ನ ನಾಗರಿಕ ವಿಮಾನ ಬಳಸಿಕೊಂಡು ಬೇಜವಾಬ್ದಾರಿತನ ತೋರಿದೆ. ಈ ಮೂಲಕ ಪಾಕಿಸ್ತಾನ ಅಂತಾರಾಷ್ಟ್ರೀಯ ನಿಯಮಗಳನ್ನ ಉಲ್ಲಘಂನೆ ಮಾಡಿದೆ. ಆದರೆ ಭಾರತ ನಾಗರಿಕರಿಗೆ ಧಕ್ಕೆಯಾಗದಂತೆ ಪ್ರತಿದಾಳಿ ಮಾಡಿದೆ. ಈ ಮೂಲಕ ಭಾರತ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಅಗತ್ಯ ಬಿದ್ದರೆ ಮದರಸಾದ ಮಕ್ಕಳನ್ನು ಯುದ್ಧಕ್ಕೆ ಬಳಸಿಕೊಳ್ತೀವಿ: ಪಾಕ್‌ ರಕ್ಷಣಾ ಸಚಿವ

    ಟರ್ಕಿಯ ಡ್ರೋನ್‌ಗಳನ್ನು ಬಳಸಿಕೊಂಡು ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಿದೆ. ಕೈನೆಟಿಕ್ ಮತ್ತು ನಾನ್ ಕೈನೆಟಿಕ್ ಎರಡೂ ರೀತಿಯಲ್ಲೂ ಪಾಕ್ ಡ್ರೋನ್‌ಗಳನ್ನು ನಾಶಪಡಿಸಲಾಗಿದೆ. ಡ್ರೋನ್‌ನ ಅವಶೇಷಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ವರದಿಯಲ್ಲಿ ಇದು ಟರ್ಕಿ ನಿರ್ಮಿತ ಡ್ರೋನ್‌ಗಳು ಎಂದು ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಭಾರತ-ಪಾಕ್ ಯುದ್ಧ ಭೀತಿ – ಕುತುಬ್ ಮಿನಾರ್ ಸೇರಿ ದೆಹಲಿಯ ಹಲವು ಐತಿಹಾಸಿಕ ತಾಣಗಳಿಗೆ ಬಿಗಿಭದ್ರತೆ

  • ವಾಯುಪಡೆಯ ಶೌರ್ಯ-ಸಾಹಸಕ್ಕೆ ಕನ್ನಡಿ ಹಿಡಿದ ಸಿನಿಮಾಗಳನ್ನ ನೀವೂ ನೋಡಿ….

    ವಾಯುಪಡೆಯ ಶೌರ್ಯ-ಸಾಹಸಕ್ಕೆ ಕನ್ನಡಿ ಹಿಡಿದ ಸಿನಿಮಾಗಳನ್ನ ನೀವೂ ನೋಡಿ….

    ಕಾಶ್ಮೀರದ ಪಹಲ್ಗಾಮ್‌ನ (Pahalgam) ಬೈಸರನ್‌ ಕಣಿವೆ ಪ್ರದೇಶದಲ್ಲಿ ಕಾಲ ಕಳೆಯುತ್ತಿದ್ದ ಪ್ರವಾಸಿಗರ ಮೇಲೆ ಏ.22ರಂದು ಸೈನಿಕರ ಸೋಗಿನಲ್ಲಿ ಬಂದ ಉಗ್ರರು ಅಮಾಯಕರನ್ನ ಗುಂಡಿಟ್ಟು ಕೊಂದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಬೇಕೆಂದೇ ಪಣ ತೊಟ್ಟಿದ್ದ ಭಾರತ ʻಆಪರೇಷನ್‌ ಸಿಂಧೂರʼ ಹೆಸರಿನಡಿ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರ (PoK) ಪ್ರದೇಶದಲ್ಲಿದ್ದ ಉಗ್ರ ನೆಲೆಗಳನ್ನ ಧ್ವಂಸ ಮಾಡಿತು. ಆದ್ರೂ ಮತ್ತೆ ಕಿತಾಪತಿ ಮಾಡಿದ್ದ ಪಾಕ್‌, ಭಾರತದ 15 ನಗರಗಳ ಮೇಲೆ ದಾಳಿ ನಡೆಸಲು ಹೊಂಚುಹಾಕಿತ್ತು. ಇದನ್ನರಿತ ಭಾರತ ಪಾಕ್‌ ದಾಳಿಯನ್ನ ವಿಫಲಗೊಳಿಸಿದ್ದಲ್ಲದೇ ಲಾಹೋರ್‌ನಲ್ಲಿನ (Lahore) ರೆಡಾರ್‌ ಕೇಂದ್ರವನ್ನೇ ಛಿದ್ರ ಛಿದ್ರ ಮಾಡಿತು. ಈ ಬೆನ್ನಲ್ಲೇ ದೇಶದ ಜನ ವಾಯುಪಡೆಯ ಶೌರ್ಯಸಾಹಸವನ್ನು ಕೊಂಡಾಡುತ್ತಿದ್ದಾರೆ. ಆದ್ರೆ ಈ ವಾಯುದಾಳಿ ಹೇಗಿರುತ್ತೆ ಎಂಬುದನ್ನು ನೋಡಿರದ ಜನರು ಈ ಸಿನಿಮಾಗಳ ಮೂಲಕ ನೋಡಿ ತಿಳಿಯಬಹುದಾಗಿದೆ. ಅಲ್ಲದೇ ವಾಯುಪಡೆಯ ಶೌರ್ಯ ಸಾಹಸ ಕೂಡ ಅರ್ಥ ಮಾಡಿಕೊಳ್ಳಬಹುದಾಗಿದೆ. ಆ ಸಿನಿಮಾಗಳು ಯಾವುದು ಅಂತ ನೋಡೋದಾದ್ರೆ..

    ಸ್ಕೈಫೋರ್ಸ್‌:
    ಭಾರತದ ಐತಿಹಾಸಿಕ ಮೊದಲ ವಾಯುದಾಳಿಯ ಕುರಿತು ಮಾಡಿದ ಸಿನಿಮಾ ಇದಾಗಿದೆ. ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಮತ್ತು ವೀರ್‌ ಪಹರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು 1965ರ ಇಂಡೋ-ಪಾಕಿಸ್ತಾನಿ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಸರ್ಗೋಧಾ ವಾಯುನೆಲೆ ಮೇಲೆ ಮಾಡಿದ ದಾಳಿಯನ್ನು ಆಧರಿಸಿದೆ. ಪ್ರಸಕ್ತ ವರ್ಷದಲ್ಲಿ ತೆರೆಕಂಡ ಈ ಸಿನಿಮಾ ಒಟಿಟಿ ಪ್ಲಾಟ್‌ಫಾರಂಗಳಲ್ಲೂ ಲಭ್ಯವಿದೆ. ಸ್ಕ್ವಾಡ್ರನ್ ಲೀಡರ್ ಆಗಿದ್ದ ನಮ್ಮ ಮಡಿಕೇರಿಯ ಅಜ್ಜಮಾಡ ದೇವಯ್ಯ ಬೋಪಯ್ಯ ಅವರು 1965ರ ಇಂಡೋ-ಪಾಕಿಸ್ತಾನಿ ಯುದ್ಧದ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಯುದ್ಧದಲ್ಲಿ ಸಾವನಪ್ಪಿದ್ದ ಅಜ್ಜಮಾಡ ದೇವಯ್ಯ ಬೋಪಯ್ಯರಿಗೆ 23 ವರ್ಷಗಳ ನಂತರ, ಅಂದರೆ 1988ರಲ್ಲಿ ಮಹಾ ವೀರ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಕೊಡಗಿನ ಯೋಧ ಅಜ್ಜಮಾಡ ದೇವಯ್ಯ ಸಾಹಸಗಾಥೆಯ ʻಸ್ಕೈ ಫೋರ್ಸ್ʼ ಬಾಲಿವುಡ್ ಸಿನಿಮಾ‌ ಜ.24 ರಂದು ತೆರೆಗೆ

    ಗುಂಜನ್‌ ಸಕ್ಸೇನಾ: ದಿ ಕಾರ್ಗಿಲ್‌ (2020)
    ಶರಣ್‌ ಶರ್ಮಾ ನಿರ್ದೇಶನದಲ್ಲಿ 2020ರಲ್ಲಿ ತೆರೆಕಂಡ ಗುಂಜನ್‌ ಸಕ್ಸೇನಾ ಭಾರತದ ವಾಯುಪಡೆಯ ಶೌರ್ಯ ಸಾಹಸ ಹಾಗೂ ಸಾಹಿಸಿ ಮಹಿಳೆಯರ ಯಶೋಗಾಥೆಯನ್ನು ಆಧರಿಸಿದೆ. ಪಂಕಜ್‌ ತ್ರಿಪಾಠಿ ಈ ಚಿತ್ರದಲ್ಲಿ ಜಾನ್ವಿ ಕಪೂರ್‌ ಅವರ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಕಾರ್ಗಿಲ್‌ ಯುದ್ಧದ ಸಮಯದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಪೈಲಟ್‌ ಗುಂಜನ್‌ ಸಕ್ಸೇನಾ ಅವರ ಜೀವನವನ್ನು ಆಧರಿಸಿದ ಚಿತ್ರ ಇದಾಗಿದೆ. ಗುಂಜನ್‌‌ ಸಕ್ಸೇನಾ ಅವರು 1999ರ ಕಾರ್ಗಿಲ್‌ ಯುದ್ಧದ ಸಮಯದಲ್ಲಿ ಯುದ್ಧ ವಲಯದಲ್ಲಿ ಹಾರಾಟ ನಡೆಸಿದ ಭಾರತದ ಮೊದಲ ಮಹಿಳಾ ಅಧಿಕಾರಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.

    ಭುಜ್‌: ಪ್ರೈಡ್‌ ಆಫ್‌ ಇಂಡಿಯಾ
    ಅಭಿಷೇಕ್‌ ದುದೈಯಾ ನಿರ್ದೇಶನದ ಭುಜ್‌: ಪ್ರೈಡ್‌ ಆಫ್‌ ಇಂಡಿಯಾ ಸಿನಿಮಾ 2021ರಲ್ಲಿ ತೆರೆ ಕಂಡಿತು. ಅಜಯ್‌ ದೇವಗನ್‌ ನಾಯಕನಟನಾಗಿ ಅಭಿನಯಿಸಿದ್ದಾರೆ. ʻಬುಜ್ʼ 1971ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸಮಯದಲ್ಲಿ ಭುಜ್ ವಿಮಾನ ನಿಲ್ದಾಣದ ಉಸ್ತುವಾರಿ ವಹಿಸಿದ್ದ ವಿಂಗ್ ಕಮಾಂಡರ್ ಆಗಿ ವಿಜಯ್ ಕಾರ್ಣಿಕ್ ಪಾತ್ರದಲ್ಲಿ ಅಜಯ್ ಆಗಿ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನದಿಂದ ಭಾರೀ ಬಾಂಬ್ ದಾಳಿ ಎದುರಿಸುತ್ತಿದ್ದರೂ 50 ವಾಯುಪಡೆ ಮತ್ತು 60 ರಕ್ಷಣಾ ಭದ್ರತಾ ಅಧಿಕಾರಿಗಳೊಂದಿಗೆ ವಾಯುನೆಲೆ ಮೇಲೆ ನಿಯಂತ್ರಣ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಂತಹ ದೇಶಭಕ್ತಿಯ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ, ಅಜಯ್ ದೇವಗನ್ ಜೊತೆ ಸಂಜಯ್ ದತ್, ಸೋನಾಕ್ಷಿ ಸಿನ್ಹಾ ನೋರಾ ಫತೇಹಿ ಮತ್ತು ಅಮ್ಮಿ ವಿರ್ಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಫೈಟರ್‌
    ಬಾಲಿವುಡ್ ನಟ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ, ಕರಣ್‌ ಸಿಂಗ್‌ ಗ್ರೋವರ್‌ ಅಭಿನಯದ ‘ಫೈಟರ್’ ಸಿನಿಮಾ ಕಳೆದ 2024ರ ಜನವರಿಯಲ್ಲಿ ರಿಲೀಸ್ ಆಗಿತ್ತು. ಸಿದ್ಧಾರ್ಥ್ ಆನಂದ್ ನಿರ್ದೇಶನದ ಸಿನಿಮಾ ರಿಲೀಸ್ ಆಗಿ ಭಾರತದ ಅತಿದೊಡ್ಡ ಆ್ಯಕ್ಷನ್ ಸಿನಿಮಾ ಎಂದೆನಿಸಿಕೊಂಡಿತ್ತು. ಇದು ನಮ್ಮ ದೇಶದ ಫೈಟರ್‌ ಪೈಲಟ್‌ಗಳ ಸಾಹಸ, ವಾಯುಪಡೆಯ ಶಕ್ತಿ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದ ಸಿನಿಮಾ ಆಗಿದೆ. 2019ರಲ್ಲಿ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಬಾಲಾಕೋಟ್‌ ಸರ್ಜಿಕಲ್‌ ಸ್ಟ್ರೈಕ್‌ ಘಟನೆಗಳ ಮೇಲೇ ಕೇಂದ್ರೀಕೃತವಾದ ಸಿನಿಮಾ ಇದಾಗಿದೆ.

    ಉರಿ: ದಿ ಸರ್ಜಿಲ್‌ ಸ್ಟ್ರೈಕ್‌
    2019 ರಲ್ಲಿ ಬಿಡುಗಡೆಯಾದ ʻಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರ. ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರವು 2016 ರಲ್ಲಿ ಉರಿ ದಾಳಿಯ ಸೇಡು ತೀರಿಸಿಕೊಳ್ಳಲು ಭಾರತೀಯ ವಾಯುಪಡೆಯು ಪಾಕಿಸ್ತಾನದ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನ ನೈಜ ಕಥೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್, ಯಾಮಿ ಗೌತಮ್, ಪರೇಶ್ ರಾವಲ್, ಮೋಹಿತ್ ರೈನಾ, ಕೀರ್ತಿ ಕುಲ್ಹಾರಿ ಮುಂತಾದ ಅನೇಕ ತಾರೆಯರು ನಟಿಸಿದ್ದಾರೆ.

    ತೇಜಸ್‌
    ಕಂಗನಾ ರಣಾವತ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಸರ್ವೇಶ್‌ ಮೇವಾರಾ ನಿರ್ದೇಶನದ ತೇಜಸ್ ಸಿನಿಮಾವು ಆಕಾಶ ಮತ್ತು ಭೂರಾಜಕೀಯದ ಏಳುಬೀಳಿನ ಸವಾರಿಗೆ ನಮ್ಮನ್ನು ಕರೆದೊಯ್ಯುತ್ತದೆ. ಪಾಕಿಸ್ತಾನದ ಹೊರಠಾಣೆಯಲ್ಲಿ ಪ್ರಮುಖ ರಕ್ಷಣಾ ಕಾರ್ಯಾಚರಣೆಯ ಸುತ್ತ ತೇಜಸ್ ನಿರೂಪಣೆ ಸುತ್ತುತ್ತದೆ. ಇದು ಜನಪ್ರಿಯ ಚಲನಚಿತ್ರ ಉರಿ ನೆನಪಿಸುವಂತೆ ಇದೆ. ಈ ಕಾರ್ಯಾಚರಣೆಯಲ್ಲಿ ಶತ್ರುವನ್ನು ಮೂರ್ಖನಂತೆ ಬಿಂಬಿಸಲಾಗಿದೆ. ಮುಂದೇ ಏನಾಗುತ್ತದೆ ಎಂಬ ನಿರೀಕ್ಷೆ ಮತ್ತು ಉದ್ವೇಗದ ಕ್ಷಣಗಳನ್ನು ಸೃಷ್ಟಿಸುವಲ್ಲಿ ಸಿನಿಮಾ ಯಶಸ್ವಿಯಾಗಿದೆ.

  • India’s Strike | ಪಾಕ್‌ ಮೇಲೆ ಭಾರತ ಪ್ರಯೋಗಿಸಿದ 3 ರಾಷ್ಟ್ರಗಳ ಶಸ್ತ್ರಾಸ್ತ್ರಗಳು ಎಷ್ಟು ಪವರ್‌ಫುಲ್?‌

    India’s Strike | ಪಾಕ್‌ ಮೇಲೆ ಭಾರತ ಪ್ರಯೋಗಿಸಿದ 3 ರಾಷ್ಟ್ರಗಳ ಶಸ್ತ್ರಾಸ್ತ್ರಗಳು ಎಷ್ಟು ಪವರ್‌ಫುಲ್?‌

    ನವದೆಹಲಿ: ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ಡ್ರೋನ್‌, ಫೈಟರ್‌ ಜೆಟ್‌ (Fighter Jets) ಹಾಗೂ ಕ್ಷಿಪಣಿ ದಾಳಿಯನ್ನು ಭಾರತೀಯ ಸಶಸ್ತ್ರ ಪಡೆಗಳು ಸಮರ್ಥವಾಗಿ ಹಿಮ್ಮೆಟ್ಟಿಸಿವೆ. ಜೊತೆಗೆ ಪ್ರತೀಕಾರದ ದಾಳಿ ನಡೆಸಿರುವ ಭಾರತ ಸ್ವದೇಶಿ ನಿರ್ಮಿತ ʻಆಕಾಶ್‌ʼ ಕ್ಷಿಪಣಿ (Akash Missile) ಸೇರಿ ಒಟ್ಟು ಮೂರು ರಾಷ್ಟ್ರಗಳು ತಯಾರಿಸಿದ ಕ್ಷಿಪಣಿಗಳನ್ನು ಪರಿಣಾಮಕಾರಿಯಾಗಿ ಬಳಸಿ ದಾಳಿ ನಡೆಸಿರುವುದಾಗಿ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

    ಹೌದು.. ಆಪರೇಷನ್‌ ಸಿಂಧೂರ (Operation Sindoor) ಪಾರ್ಟ್‌-1 ಮತ್ತು ಪಾರ್ಟ್‌-2ನಲ್ಲಿ ರಷ್ಯಾ, ಇಸ್ರೇಲ್ ಹಾಗೂ ನಾವು (ಭಾರತ) ನಿರ್ಮಿಸಿದ ಮೂರು ರಾಷ್ಟ್ರಗಳ ವೆಪನ್‌ ಬಳಸಿ ಪಾಕ್‌ ಉಗ್ರರ ತಾಣಗಳು, ಬಂದರು ಇತರ ಪ್ರಮುಖ ನೆಲೆಗಳನ್ನು ಛಿದ್ರ, ಛಿದ್ರ ಮಾಡಿವೆ. 1971ರ ಬಳೀಕ ಕರಾಚಿ ಬಂದರಿನ ಮೇಲೂ ದಾಳಿ ನಡೆಸಿ, ಶತ್ರುಗಳಲ್ಲಿ ನಡುಕ ಹುಟ್ಟಿಸಿವೆ. ಚೀನಾ ನಿರ್ಮಿತ ಪವರ್‌ಫುಲ್‌ ಶಸ್ತ್ರಾಸ್ತ್ರಗಳನ್ನು (Chinese weapon) ಭೇಸಿದಿ ಪಾಕ್‌ ಪತರುಗುಟ್ಟುವಂತೆ ಮಾಡಿದ್ದು ಈ ಅಸ್ತ್ರಗಳೇ ಅನ್ನುವುದು ಗಮನಾರ್ಹ.

    ಯಾವ ಅಸ್ತ್ರ – ಯಾವ ದೇಶ ನಿರ್ಮಿಸಿದ್ದು?
    1. ಸುದರ್ಶನ್ ಚಕ್ರ – S-400 ಮಿಸೈಲ್‌ – ರಷ್ಯಾ ನಿರ್ಮಿತ
    2. ಕಾಮಿಕಾಜ್ ಡ್ರೋನ್‌ – ಭಾರತ ನಿರ್ಮಿತ
    3. ಏರ್‌ ಮಿಸೈಲ್ – ಭಾರತ ನಿರ್ಮಿತ
    4. ಹಾರ್ಪಿ ಡ್ರೋನ್ – ಇಸ್ರೇಲ್ ನಿರ್ಮಿತ
    5. ಡೀಪ್ ಸ್ಟ್ರೈಕ್ ಕ್ರೂಸರ್ ಕ್ಷಿಪಣಿ – ಭಾರತ ನಿರ್ಮಿತ

    2ಕ್ಕೂ ಹೆಚ್ಚು ಫೂಟರ್‌ ಜೆಟ್‌ ಉಡೀಸ್‌:
    ಕ್ಷಿಪಣಿ ದಾಳಿಗಷ್ಟೇ ನಿಲ್ಲದ ಭಾರತೀಯ ಸೇನೆಯ ಪರಾಕ್ರಮ ಇನ್ನೂ ಮುಂದುವರಿಯಿತು. ಚೀನಾ ನಿರ್ಮಿತ ಜೆಎಫ್‌-10, JF-17 ಅಮೆರಿಕ ನಿರ್ಮಿತ ಎಫ್‌-16 ಶಕ್ತಿಶಾಲಿ ಫೈಟರ್‌ಜೆಟ್‌ ಹಾಗೂ ಡ್ರೋನ್‌, ಕ್ಷಿಪಣಿಗಳನ್ನ ಸಾಲು ಸಾಲಾಗಿ ಹೊಡೆದುರುಳಿಸಿತು. ಈ ಕಾರ್ಯಾಚರಣೆಯಲ್ಲಿ ಭಾರತ ಈ ಕಾರ್ಯಾಚರಣೆಯಲ್ಲಿ L-70 ಗನ್‌, ಆಕಾಶ್, MRSAM, Zu-23, L-70 ಮತ್ತು ಶಿಲ್ಕಾ ಡಿಫೆನ್ಸ್‌ ಸಿಸ್ಟಮ್‌ಗಳನ್ನ ಬಳಕೆ ಮಾಡಿತ್ತು. ಶತ್ರುಗಳ ವಾಯುದಾಳಿಗಳನ್ನು ಸಮರ್ಥವಾಗಿ ಎದುರಿಸಬಲ್ಲ ಈ ರಕ್ಷಣಾ ವ್ಯವಸ್ಥೆಗಳು ಪಾಕ್‌ಗೆ ದಿಟ್ಟ ಉತ್ತರ ನೀಡುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದವು.

    ಗುರುವಾರ ಭಾರತೀಯ ನಗರಗಳನ್ನ (Indian Cities) ಟಾರ್ಗೆಟ್‌ ಮಾಡಿದ್ದ ಪಾಕ್‌ಗೆ ದಿಟ್ಟ ಉತ್ತರ ನೀಡಿದ್ದ ಭಾರತೀಯ ವಾಯುಸೇನೆ, ಲಾಹೋರ್‌ನಲ್ಲಿರುವ ರೆಡಾರ್‌ ಕೇಂದ್ರವನ್ನೇ ಧ್ವಂಸ ಮಾಡಿತ್ತು. ಶೇಖ್‌ಪುರ, ಸಿಯಾಲ್‌ ಕೋಟ್‌, ಗುಜರನ್‌ ವಾಲಾ ಮತ್ತು ನರೊವಾಲಾ ಮತ್ತ ಚಕ್ವಾಲ್‌ ಮೇಲೂ ಭಾರತದ ಕಾಮಕಾಜಿ ಡ್ರೋನ್‌ ದಾಳಿ ನಡೆಸಿತ್ತು. ಒಟ್ಟು 25 ಕ್ಷಿಪಣಿಗಳನ್ನು ಭಾರತ ಹಾರಿಸಿತ್ತು, ಇದರಲ್ಲಿ 7 ಇಸ್ಲಾಮಾಬಾದ್‌ ಮತ್ತು ರಾವಲ್ಪಿಂಡಿಯನ್ನ ಗುರಿಯಾಗಿಸಿದ್ದವು. ಆದರೂ ಕಿತಾಪತಿ ಬಿಡದ ಪಾಕಿಸ್ತಾನ ರಾತ್ರಿ ವೇಳೆಗೆ ಜಮ್ಮುವಿನ ಮೇಲೆ 100 ಕ್ಷಿಪಣಿಗಳಿಂದ ದಾಳಿ ನಡೆಸಿತ್ತು. ಇದಕ್ಕೆ ಕೆರಳಿ ಕೆಂಡವಾದ ಭಾರತ ಏಕಾಏಕಿ ನೂರಕ್ಕೂ ಹೆಚ್ಚು ಕ್ಷಿಪಣಿಗಳನ್ನ ಪಾಕ್‌ ಮೇಲೆ ಹಾರಿಸಿತು. ಇದರಿಂದ ಪಾಕ್‌ನ 16 ನಗರಗಳಲ್ಲಿ ಭಾರೀ ಹಾನಿ ಸಂಭವಿಸಿದೆ.