Tag: minor girl

  • ಉಡುಪಿಯಲ್ಲಿ ಅಪ್ರಾಪ್ತ ಬಾಲಕಿ ಅಪಹರಣ – ಠಾಣೆಗೆ ಹಿಂದೂ ಸಂಘಟನೆಗಳ ಮುತ್ತಿಗೆ

    ಉಡುಪಿಯಲ್ಲಿ ಅಪ್ರಾಪ್ತ ಬಾಲಕಿ ಅಪಹರಣ – ಠಾಣೆಗೆ ಹಿಂದೂ ಸಂಘಟನೆಗಳ ಮುತ್ತಿಗೆ

    ಉಡುಪಿ: ಅಪ್ರಾಪ್ತ ಬಾಲಕಿಯನ್ನು ಅನ್ಯಕೋಮಿನ ಯುವಕ ಅಪಹರಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಯ ಸದಸ್ಯರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟಿಸಿದ ಘಟನೆ ಉಡುಪಿ ಜಿಲ್ಲೆ ಹಿರಿಯಡ್ಕದಲ್ಲಿ ನಡೆದಿದೆ. ಘಟನೆ ನಡೆದು ಮೂರು ದಿನ ಕಳೆದರೂ ಬಾಲಕಿ ಪತ್ತೆಯಾಗದೆ ಇರುವುದನ್ನು ಖಂಡಿಸಿ ಹಿಂದೂ ಸಂಘಟನೆಗಳು ಬೀದಿಗಿಳಿದಿದೆ.

    ಹಿರಿಯಡ್ಕ ಪೊಲೀಸ್ ಠಾಣೆ ಮುಂಭಾಗ ಮುನ್ನೂರಕ್ಕೂ ಹೆಚ್ಚು ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ಜಮಾಯಿಸಿದ್ದರು. ಅಪ್ರಾಪ್ತ ಬಾಲಕಿಯನ್ನು ಅನ್ಯಕೋಮಿನ ಯುವಕ ಅಪಹರಣ ಮಾಡಿದ್ದಾನೆ. ಇದೊಂದು ಲವ್ ಜಿಹಾದ್ ಎಂದು ಸಂಘಟನೆಯ ಪ್ರಮುಖರು ಆಪಾದಿಸಿದ್ದಾರೆ. ಈ ಘಟನೆಗೆ ಯಾರೆಲ್ಲಾ ಕುಮ್ಮಕ್ಕು ನೀಡಿದ್ದಾರೆ ಎಲ್ಲರನ್ನೂ ತಕ್ಷಣಕ್ಕೆ ಬಂಧಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಉಪ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಮನವಿಯನ್ನು ಸಲ್ಲಿಸಲಾಯ್ತು.

    ಮನವಿ ಸ್ವೀಕರಿಸಿ ಉಪ ಪೊಲೀಸ್ ಅಧೀಕ್ಷಕ ಜೈಶಂಕರ್ ಮಾತನಾಡಿ, ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ಸಿಸಿಟಿವಿ ಫುಟೇಜ್ ಲಭ್ಯವಾಗಿದ್ದು ಆರೋಪಿಯ ಚಲನವಲನಗಳ ಬಗ್ಗೆ ನಿಗಾ ಇರಿಸಲಾಗಿದೆ. ತನಿಖೆಯ ಬಗ್ಗೆ ಈಗಾಲೇ ಏನು ಹೇಳಲಿಕ್ಕೆ ಆಗುವುದಿಲ್ಲ. ಇದರಿಂದ ಆರೋಪಗಳಿಗೆ ಅನುಕೂಲವಾಗಬಹುದು ಆರೋಪಿಯನ್ನು ತಕ್ಷಣ ಬಂಧಿಸುವ ವಿಶ್ವಾಸ ನಮಗಿದೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.

    ಆರೋಪಿ ಬಂಧನ ಶೀಘ್ರ ಆಗದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಪ್ರತಿಭಟನಾಕಾರರು ಕೊಟ್ಟರು. ಬಜರಂಗದಳ ಪ್ರಾಂತ ಸಂಚಾಲಕರು ಸುನಿಲ್ ಕೆ.ಆರ್. ಇದು ಲವ್ ಜಿಹಾದ್ ಷಡ್ಯಂತ್ರ ಇದರ ಹಿಂದೆ ಮತಾಂಧ ಸಂಘಟನೆಗಳ ಪಾತ್ರ ಇದೆ. ಯುವಕನ ಜೊತೆ ಕೈಜೋಡಿಸಿರುವ ವ್ಯಕ್ತಿಗಳನ್ನು ಮೊದಲು ಬಂಧಿಸಿ ವಿಚಾರಣೆ ನಡೆಸಿದ್ದರೆ ಬಾಲಕಿಯನ್ನು ಪತ್ತೆಹಚ್ಚಲು ಸುಲಭವಾಗುತ್ತದೆ. ಇನ್ನೆರಡು ದಿನದಲ್ಲಿ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

  • ಹತ್ರಾಸ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೃತ್ಯ – ತುಂಡರಿಸಿದ ಅಪ್ರಾಪ್ತೆಯ ಶವ ಪತ್ತೆ

    ಹತ್ರಾಸ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೃತ್ಯ – ತುಂಡರಿಸಿದ ಅಪ್ರಾಪ್ತೆಯ ಶವ ಪತ್ತೆ

    – ಜಮೀನಿನಲ್ಲಿ ಮೃತದೇಹದ ಭಾಗಗಳು ಪತ್ತೆ

    ಲಕ್ನೋ: ಹತ್ರಾಸ್ ಗ್ರಾಮದ ಸಂತ್ರಸ್ತೆ ಮೇಲಿನ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಮಧ್ಯೆಯೇ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ನಾಪತ್ತೆಯಾಗಿದ್ದ ಅಪ್ರಾಪ್ತೆಯ ಮೃತದೇಹ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಹತ್ರಾಸ್ ಗ್ಯಾಂಗ್‍ರೇಪ್ ಪ್ರಕರಣ ಸಿಬಿಐಗೆ ವರ್ಗಾವಣೆ

    ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯ ಹಳ್ಳಿಯಲ್ಲಿ ಸೆಪ್ಟೆಂಬರ್ 26 ರಂದು 15 ವರ್ಷದ ಹುಡುಗಿ ನಾಪತ್ತೆಯಾಗಿದ್ದಳು. ಆದರೆ ಇದೀಗ ಆಕೆಯ ಶವ ಜಮೀನೊಂದರಲ್ಲಿ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ಕುಟುಂಬದ ಇಬ್ಬರು ಸಂಬಂಧಿಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊಲೆ ಮಾಡುವ ಮೊದಲು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅಪ್ರಾಪ್ತೆಯ ಪೋಷಕರು ಆರೋಪಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರ ತಂಡ ಹೋಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಅಪ್ರಾಪ್ತೆಯ ಮೃತದೇಹದ ಭಾಗಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಈ ಕುರಿತು ತನಿಖೆ ಪೊಲೀಸರು ನಡೆಸುತ್ತಿದ್ದಾರೆ.

    ನಮ್ಮ ಕುಟುಂಬದಲ್ಲಿ ಭೂ ವಿವಾದವಿದೆ. ನಮ್ಮ ಮಗಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಅಪ್ರಾಪ್ತೆಯ ತಂದೆ ಹೇಳಿದ್ದಾರೆ. ಹೀಗಾಗಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಕೆ.ಕೆ.ಚೌಧಾರಿ ಹೇಳಿದ್ದಾರೆ.

    ಹತ್ರಾಸ್ ಪ್ರದೇಶದ ದಲಿತ ಯುವತಿ ಮೇಲಿನ ಗ್ಯಾಂಗ್‍ರೇಪ್ ಪ್ರಕರಣವನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಿಬಿಐಗೆ ವರ್ಗಾಯಿಸಿದ್ದಾರೆ. ಮುಖ್ಯಮಂತ್ರಿಗಳ ಕಚೇರಿ ಟ್ವೀಟ್ ಮೂಲಕ ಈ ಮಾಹಿತಿಯನ್ನು ಖಚಿತ ಪಡಿಸಿದೆ. ವಿಪಕ್ಷಗಳು ಸೇರಿದಂತೆ ದೇಶದ ಜನತೆ ಪ್ರಕರಣದ ತನಿಖೆಯನ್ನು ಸಿಬಿಐನಿಂದ ನಡೆಯಬೇಕೆಂದು ಆಗ್ರಹಿಸಿದ್ದವು. ಆದರೆ ಸಂತ್ರಸ್ತೆಯ ಕುಟುಂಬಸ್ಥರು ಸಿಬಿಐ ತನಿಖೆಗೆ ಆಗ್ರಹಿಸಿರಲಿಲ್ಲ ಎಂದು ವರದಿಯಾಗಿದೆ.

  • ಹಣಕೊಟ್ಟು ಅಪ್ರಾಪ್ತೆಯನ್ನ ಖರೀದಿಸಿ ಮದ್ವೆಯಾದ – 7 ತಿಂಗಳು ಲೈಂಗಿಕ ಕಿರುಕುಳ

    ಹಣಕೊಟ್ಟು ಅಪ್ರಾಪ್ತೆಯನ್ನ ಖರೀದಿಸಿ ಮದ್ವೆಯಾದ – 7 ತಿಂಗಳು ಲೈಂಗಿಕ ಕಿರುಕುಳ

    – ಪ್ರವಾಸದ ನೆಪದಲ್ಲಿ ಕರ್ಕೊಂಡು ಬಂದು ಮಾರಿದ ಸಂಬಂಧಿ
    – 2.20 ಲಕ್ಷಕ್ಕೆ ಖರೀದಿಸಿದ 30ರ ವ್ಯಕ್ತಿ

    ಜೈಪುರ: 30 ವರ್ಷದ ವ್ಯಕ್ತಿಯೊಬ್ಬ 13 ವರ್ಷದ ಅಪ್ರಾಪ್ತೆಯನ್ನು ಹಣಕೊಟ್ಟು ಖರೀದಿಸಿ ಬಲವಂತವಾಗಿ ಮದುವೆಯಾಗಿದ್ದಾನೆ. ನಂತರ ಅನೇಕ ತಿಂಗಳು ಕಾಲ ಲೈಂಗಿಕ ಕಿರುಕುಳ ನೀಡಿರುವ ಘಟನೆ ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಬಾಬ್ರಾನಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತೆಯನ್ನು ಉತ್ತರ ಪ್ರದೇಶದಿಂದ ಖರೀದಿಸಿ ಏಳು ತಿಂಗಳ ಹಿಂದೆ ಬಲವಂತವಾಗಿ ಮದುವೆಯಾಗಿದ್ದನು. ಅನೇಕ ತಿಂಗಳುಗಳ ನಂತರ ಅಪ್ರಾಪ್ತೆ ಮಕ್ಕಳ ಸಹಾಯವಾಣಿಗೆ ಫೋನ್ ಮಾಡಿದ್ದಾಳೆ. ನಂತರ ಆಕೆಯನ್ನು ರಕ್ಷಣೆ ಮಾಡಲಾಗಿದೆ. ರಾಜಸ್ಥಾನ ರಾಜ್ಯ ಮಕ್ಕಳ ಸಂರಕ್ಷಣಾ ಆಯೋಗದ ಸದಸ್ಯ ಡಾ.ಶೈಲೇಂದ್ರ ಪಾಂಡ್ಯ ಅವರಿಗೆ ಅಪ್ರಾಪ್ತೆ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ.

    ಏನಿದು ಪ್ರಕರಣ?
    ಅಪ್ರಾಪ್ತೆ ಉತ್ತರ ಪ್ರದೇಶದ ಮೂಲದವಳಾಗಿದ್ದು, ಅಲ್ಲಿ ತನ್ನ ಪೋಷಕರು, ಸಹೋದರ ಮತ್ತು ಇಬ್ಬರು ಸಹೋದರಿಯರೊಂದಿಗೆ ವಾಸಿಸುತ್ತಿದ್ದಳು. ಅಪ್ರಾಪ್ತೆಯ ಕುಟುಂಬದ ಸಂಬಂಧಿ ಲಕ್ಷ್ಮಿ ಎಂಬಾಕೆ ಸತ್ಯನಾರಾಯಣ್ ಜೊತೆ ಮದುವೆಯಾಗಿದ್ದಳು. ಫೆಬ್ರವರಿ 14 ರಂದು ಲಕ್ಷ್ಮಿ ಪ್ರವಾಸದ ನೆಪದಲ್ಲಿ ಅಪ್ರಾಪ್ತೆಯನ್ನು ಚಿತ್ತೋರ್‌ಗಢಕ್ಕೆ ಕರೆದುಕೊಂಡು ಬಂದಿದ್ದಾಳೆ. ಅಲ್ಲಿ ಆಕೆಯನ್ನು ಬಾಬ್ರಾನಾ ಗ್ರಾಮದ ಬಸಂತಿ ಲಾಲ್ ದಾದೀಚ್‍ಗೆ 2.70 ಲಕ್ಷ ರೂ.ಗೆ ಮಾರಾಟ ಮಾಡಿದ್ದಾಳೆ.

    ಹಣವನ್ನು ಪಾವತಿಸಿದ ನಂತರ ಬಸಂತಿ ಲಾಲ್ ದಾದೀಚ್ ಅಪ್ರಾಪ್ತೆಯನ್ನು ತನ್ನ ಹಳ್ಳಿಗೆ ಕರೆದುಕೊಂಡು ಹೋಗಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾಗಿದ್ದಾನೆ. ನಂತರ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪ್ರಾಪ್ತೆ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ. ಇದನ್ನ ತಿಳಿದು ಆರೋಪಿ ಲಾಲ್ ಮತ್ತು ಆತನ ಸಹೋದರ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಪೋಷಕರು ಲಾಕ್‍ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಮನೆಗೆ ಕರೆದುಕೊಂಡು ಬರುವುದಾಗಿ ಸಮಾಧಾನ ಮಾಡಿದ್ದಾರೆ ಎಂದು ಡಾ.ಶೈಲೇಂದ್ರ ಪಾಂಡ್ಯ ತಿಳಿಸಿದರು.

    ಕೊನೆಗೆ ಅಪ್ರಾಪ್ತೆ ಇವರ ಕಿರುಕುಳವನ್ನು ಸಹಿಸಲಾಗದೆ ಮಕ್ಕಳ ಸಹಾಯವಾಣಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾಳೆ. ಮಾಹಿತಿ ತಿಳಿದು ತಕ್ಷಣ ಅಪ್ರಾಪ್ತೆಯನ್ನು ರಕ್ಷಣೆ ಮಾಡಲಾಗಿದೆ. ಸದ್ಯಕ್ಕೆ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆ, ಬಾಲ್ಯವಿವಾಹ, ಮಕ್ಕಳ ಕಳ್ಳಸಾಗಣೆ ಸೇರಿದಂತೆ ಅನೇಕ ಪ್ರಕರಣವನ್ನು ದಾಖಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಅವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪಾಂಡ್ಯ ಹೇಳಿದರು.

  • ಅಪ್ರಾಪ್ತ ಬಾಲಕಿಯ ರೇಪ್, ಮರ್ಡರ್ ಆರೋಪ – ಸ್ಥಳೀಯರಿಂದ ಹೆದ್ದಾರಿಯಲ್ಲಿ ಪ್ರತಿಭಟನೆ

    ಅಪ್ರಾಪ್ತ ಬಾಲಕಿಯ ರೇಪ್, ಮರ್ಡರ್ ಆರೋಪ – ಸ್ಥಳೀಯರಿಂದ ಹೆದ್ದಾರಿಯಲ್ಲಿ ಪ್ರತಿಭಟನೆ

    – ಪೊಲೀಸ್ ವಾಹನ ಸೇರಿ ಮೂರು ಬಸ್ಸುಗಳಿಗೆ ಬೆಂಕಿ

    ಕೋಲ್ಕತ್ತಾ: ಅಪ್ರಾಪ್ತ ಬಾಲಕಿಯನ್ನು ರೇಪ್ ಮಾಡಿ ಮರ್ಡರ್ ಮಾಡಿದ್ದಾರೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳದ ಚೋಪ್ರಾ ಗ್ರಾಮದವರು ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡಿದ್ದಾರೆ.

    ಈಗ ತಾನೇ ಹತ್ತನೇ ತರಗತಿ ಪಾಸ್ ಆಗಿದ್ದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಸ್ಥಳೀಯರು ಮತ್ತು ಗ್ರಾಮಸ್ಥರು ಸೇರಿಕೊಂಡು ಕೋಲ್ಕತಾ ಮತ್ತು ಸಿಲಿಗುರಿ ನಡುವಿನ ನ್ಯಾಷನಲ್ ಹೈವೇ 32ನ್ನು ಬ್ಲಾಕ್ ಮಾಡಿದ್ದಾರೆ. ಜೊತೆಗೆ ಪೊಲೀಸ್ ವಾಹನ ಸೇರಿ ಮೂರು ಬಸ್ಸುಗಳಿಗೆ ಪ್ರತಿಭಟನಾಕರರು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

    ಮೃತಪಟ್ಟ ಬಾಲಕಿಯ ಸಹೋದರಿ ಮಾತನಾಡಿ, ಆಕೆ ಈಗ ತಾನೇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಳು. ಆದರೆ ಕಳೆದ ರಾತ್ರಿ ಆಕೆ ಕಾಣೆಯಾಗಿದ್ದಳು ಎಂದು ಹೇಳಿದ್ದಾರೆ. ಗ್ರಾಮದಲ್ಲಿ ಹುಡುಕಾಡಿದ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿಲ್ಲ. ಆದರೆ ಆಕೆಯ ಮೃತದೇಹ ಊರಹೊರಗಿನ ಮರದ ಕೆಳಗೆ ದೊರಕಿತ್ತು. ಘಟನಾ ಸ್ಥಳದಲ್ಲಿ ಎರಡು ಬೈಕ್ ಮತ್ತು ಮೊಬೈಲ್ ಫೋನ್ ಸಿಕ್ಕ ಕಾರಣ ಸ್ಥಳೀಯರು ಯಾರೋ ರೇಪ್ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ ಬಂಗಾಳದ ಪೊಲೀಸರು, ನಾವು ಸ್ಥಳಕ್ಕೆ ಹೋಗಿ ಮೃತ ಬಾಲಕಿಯ ಶವವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೆವು. ಆದರೆ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಹುಡುಗಿಯ ದೇಹದಲ್ಲಿ ವಿಷ ಇರುವುದು ಪತ್ತೆಯಾಗಿದೆ. ಜೊತೆಗೆ ಆಕೆ ಮೃತದೇಹದ ಮೇಲೆ ಯಾವುದೇ ಗಾಯಗಳಿಲ್ಲ. ಆದ್ದರಿಂದ ಈಕೆಯ ಮೇಲೆ ಅತ್ಯಾಚಾರ ಆಗಿರುವುದಿಲ್ಲ. ಆದರೆ ಗ್ರಾಮಸ್ಥರು ಅನುಮಾನಗೊಂಡು ಈ ರೀತಿ ಪ್ರತಿಭಟನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಘಟನಾ ಸ್ಥಳದಲ್ಲಿ ಬೈಕ್ ಮತ್ತು ಫೋನ್ ಸಿಕ್ಕ ಕಾರಣ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಅದಕ್ಕೆ ಪ್ರತಿಭಟನೆ ಮಾಡಿದ್ದಾರೆ. ಜೊತೆಗೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ. ಪೊಲೀಸ್ ಲಾಠಿ ಚಾರ್ಜ್ ಮಾಡಿ ಸತತ ಮೂರು ಗಂಟೆಯ ನಂತರ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬಾಲಕಿ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

  • ಅಪ್ರಾಪ್ತೆ ಜೊತೆ ಲವ್- ಪ್ರೇಯಸಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ಅಪ್ರಾಪ್ತೆ ಜೊತೆ ಲವ್- ಪ್ರೇಯಸಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    – ಟೀ ಕುಡಿಯಲು ಹೋಗಿ ಅಂಗಡಿ ಮಾಲೀಕನ ಮಗಳ ಜೊತೆ ಪ್ರೀತಿ

    ಚೆನ್ನೈ: ವ್ಯಕ್ತಿಯೊಬ್ಬ ಅಪ್ರಾಪ್ತೆ ಪ್ರೇಯಸಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ನಂತರ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆದಿದೆ.

    ತಿರುವಣ್ಣಾಮಲೈನ ಪ್ರದೇಶದಲ್ಲಿ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತನನ್ನು ಪಿ.ಥಾಮಸ್ ಎಂದು ಗುರುತಿಸಲಾಗಿದೆ. ಥಾಮಸ್ ಖಾಸಗಿ ಅಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಥಾಮಸ್ ತನ್ನ ಮನೆಯಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿರುವ ಟೀ ಅಂಗಡಿಗೆ ಪ್ರತಿದಿನ ಹೋಗುತ್ತಿದ್ದನು.

    34 ವರ್ಷದ ಥಾಮಸ್ ಟೀ ಅಂಗಡಿ ಮಾಲೀಕರ ಮಗಳನ್ನು ಪ್ರೀತಿಸುತ್ತಿದ್ದನು. 15 ವರ್ಷದ ಅಪ್ರಾಪ್ತೆ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಆಕೆಗೆ ಆರೋಪಿ ಮದುವೆಯಾಗುವುದಾಗಿ ಭರವಸೆ ನೀಡಿದ್ದನು. ಹೀಗಾಗಿ ಥಾಮಸ್ ಆಕೆಯನ್ನು ಹೊರಗೆ ಕರೆದುಕೊಂಡು ಹೋಗಿ ಸುತ್ತಾಡುತ್ತಿದ್ದನು. ಅಲ್ಲದೇ ಥಾಮಸ್ ಪ್ರೇಯಸಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದು, ಅಲ್ಲಿ ಆಕೆಯೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದನು.

    ಥಾಮಸ್ ತನ್ನ ಮಗಳನ್ನು ಪ್ರೀತಿಸುತ್ತಿರುವ ವಿಚಾರ ಟೀ ಅಂಗಡಿ ಮಾಲೀಕ ಮತ್ತು ಅವರ ಕುಟುಂಬಕ್ಕೆ ಗೊತ್ತಾಗಿದೆ. ಇದರಿಂದ ಕೋಪಗೊಂಡ ಪೋಷಕರು ಮಗಳಿಗೆ ಮತ್ತೆ ಆತನನ್ನು ಭೇಟಿ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಅಪ್ರಾಪ್ತೆ ಕೂಡ ಥಾಮಸ್‍ನಿಂದ ದೂರವಾಗಿದ್ದಳು.

    ಆದರೆ ಜೂನ್ 12 ರಂದು ಆರೋಪಿ ಪ್ರೇಯಿಸಿಯನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದಾನೆ. ಒಂದು ವೇಳೆ ಭೇಟಿ ಮಾಡದಿದ್ದರೆ ಜೊತೆಗಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಹುಡುಗಿ ಥಾಮಸ್‍ನನ್ನು ಭೇಟಿಯಾಗಲು ಹೋಗಿದ್ದಾಳೆ. ಅಲ್ಲಿ ಥಾಮಸ್ ಪ್ರಿಯತಮೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ ಅಪ್ರಾಪ್ತೆ ಆತನಿಂದ ತಪ್ಪಿಕೊಂಡು ಮನೆಗೆ ಬಂದಿದ್ದಾಳೆ.

    ಮನೆಯಲ್ಲಿ ಪೋಷಕರಿಗೆ ನಡೆದ ವಿಚಾರವನ್ನು ತಿಳಿಸಿದ್ದಾಳೆ. ತಕ್ಷಣ ಆಕೆಯ ತಂದೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ದೂರು ದಾಖಲಿಸಿದ ನಂತರ ಆತನಿಗೆ ಪೊಲೀಸರು ಹುಡುಕಾಟ ಶುರು ಮಾಡಿದ್ದರು. ಆದರೆ ಮಂಗಳವಾರ ಥಾಮಸ್ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಥಾಮಸ್ ಕುಟುಂದವರು ಅಪ್ರಾಪ್ತೆಯ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಪ್ರಕರಣ ಕುರಿತು ತನಿಖೆ ಮುಂದುರಿಸಿದ್ದಾರೆ.

  • ಪೋಷಕರು, ಅಪ್ರಾಪ್ತ ಮಗಳ ಶವ ಮನೆಯಲ್ಲೇ ಪತ್ತೆ – ಕೊಲೆಗೂ ಮುನ್ನ ಅತ್ಯಾಚಾರದ ಆರೋಪ

    ಪೋಷಕರು, ಅಪ್ರಾಪ್ತ ಮಗಳ ಶವ ಮನೆಯಲ್ಲೇ ಪತ್ತೆ – ಕೊಲೆಗೂ ಮುನ್ನ ಅತ್ಯಾಚಾರದ ಆರೋಪ

    – ತೋಟದಲ್ಲಿ ಪತಿ, ಮನೆಯ ಹೊರಗೆ ಪತ್ನಿ ಶವ
    – ಮನೆಯೊಳಗೆ ಅಪ್ರಾಪ್ತ ಮಗಳ ಮೃತದೇಹ ಪತ್ತೆ

    ಲಕ್ನೋ: ವೃದ್ಧ ದಂಪತಿ ಮತ್ತು ಅವರ 15 ವರ್ಷದ ಮಗಳು ತಮ್ಮ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ ಜಿಲ್ಲೆಯಲ್ಲಿ ನಡೆದಿದೆ.

    55 ವರ್ಷದ ವ್ಯಕ್ತಿ, 50 ವರ್ಷದ ಮಹಿಳೆ ಮತ್ತು ಅಪ್ರಾಪ್ತ ಮಗಳು ಮೃತರು ಎಂದು ಗುರುತಿಸಲಾಘಿದೆ. ಮೂವರನ್ನು ಕತ್ತು ಕೊಯ್ದು ಕೊಲೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಸ್ತಿ ವಿವಾದ ಅಥವಾ ಕುಟುಂಬ ಜಗಳದಿಂದ ಕೊಲೆ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಏನಿದು ಪ್ರಕರಣ?
    ಇಂದು ಮುಂಜಾನೆ ಗ್ರಾಮದಲ್ಲಿ ಮೂವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸ್ ಅಧಿಕಾರಿಗಳು, ಶ್ವಾನ ದಳ ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೂವರನ್ನು ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ವ್ಯಕ್ತಿಯ ಮೃತದೇಹ ಹೊಲದಲ್ಲಿ ಪತ್ತೆಯಾಗಿದೆ. ಅವರ ಪತ್ನಿಯ ಮೃತದೇಹ ಮನೆಯ ಹೊರಗೆ ಪತ್ತೆಯಾಗಿದೆ. ಇನ್ನೂ ಅಪ್ರಾಪ್ತ ಹುಡುಗಿಯ ಮೃತದೇಹ ಮನೆಯೊಳಗೆ ಪತ್ತೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದೀಪೇಂದ್ರ ನಾಥ್ ಚೌಧರಿ ಹೇಳಿದ್ದಾರೆ.

    ಮೃತ ದಂಪತಿಯ 29 ವರ್ಷದ ಮಗ ತನ್ನ ಮಕ್ಕಳು ಮತ್ತು ಪತ್ನಿಯ ಜೊತೆ ಗ್ರಾಮದ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಾನೆ. ಈ ಕುರಿತು ಮಗ ಪೊಲೀಸರಿಗೆ ದೂರು ನೀಡಿದ್ದಾನೆ. ಆದರೆ ಯಾವುದೇ ಶಂಕಿತನ ಹೆಸರನ್ನು ಸೂಚಿಸಿಲ್ಲ. ಇನ್ನೂ ದಂಪತಿಯ ಎರಡನೇ ಮಗ ಮುಂಬೈನಲ್ಲಿ ವಾಸಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ.

    ಘಟನಾ ಸ್ಥಳದಿಂದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಫೋನ್ ವಿವರಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಅಪ್ರಾಪ್ತೆಯನ್ನು ಕೊಲೆ ಮಾಡುವ ಮೊದಲು ಅತ್ಯಾಚಾರ ಎಸಗಲಾಗಿದೆ ಎಂದು ಮೃತ ದಂಪತಿಯ ಕುಟುಂಬದವರು ಆರೋಪಿಸಿದ್ದಾರೆ. ಮೃತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ತಿಳಿಯುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಅಪ್ರಾಪ್ತೆಯನ್ನು ಅಪಹರಿಸಿ ಮತ್ತಿನ ಇಂಜೆಕ್ಷನ್ ನೀಡಿ ಮದುವೆಯಾದ ಭೂಪ ಅರೆಸ್ಟ್

    ಅಪ್ರಾಪ್ತೆಯನ್ನು ಅಪಹರಿಸಿ ಮತ್ತಿನ ಇಂಜೆಕ್ಷನ್ ನೀಡಿ ಮದುವೆಯಾದ ಭೂಪ ಅರೆಸ್ಟ್

    ಚಿತ್ರದುರ್ಗ: ಅಪ್ರಾಪ್ತೆಯನ್ನು ಮದುವೆಯಾಗಬಾರದೆಂಬ ಕಾನೂನಿದೆ. ಆದರೆ ಕುಟುಂಬಸ್ಥರ ಸಹಕಾರವಿದೆ ಎಂಬ ದರ್ಪದಿಂದಾಗಿ ಯುವಕನೊಬ್ಬ ನಿರ್ಗತಿಕ ಅಪ್ರಾಪ್ತೆಯನ್ನು ಆಟೋದಲ್ಲಿ ಕಿಡ್ನಾಪ್ ಮಾಡಿ ಬಲವಂತವಾಗಿ ಮದುವೆಯಾಗಿರುವ ಅಮಾನವೀಯ ಕೃತ್ಯ ಚಳ್ಳಕೆರೆಯಲ್ಲಿ ನಡೆದಿದೆ.

    ಚಳ್ಳಕೆರೆಯ ರಾಜು ಬಂಧಿತ ಆರೋಪಿ. 2019ರ ಮೇ 26ರಂದು ಈ ಘಟನೆ ನಡೆದಿದ್ದು, ಆರೋಪಿ ರಾಜು ಬಾಲಕಿಗೆ ಇಂಜೆಕ್ಷನ್ ಕೊಟ್ಟು ಆಟೋದಲ್ಲಿ ಎಳೆದೊಯ್ದಿದಿದ್ದ. ಬಳಿಕ ಸಂಬಂಧಿಕರ ಮನೆಯಲ್ಲಿ ಬಾಲಕಿಯನ್ನು ಕೂಡಿ ಹಾಕಿ ಬಲವಂತವಾಗಿ ಮದುವೆಯಾಗಿದ್ದ. ಆದರೆ ಈ ವಿಷಯ ತಿಳಿದ ಹುಡುಗಿಯ ತಂದೆ ಆಘಾತಕ್ಕೆ ಒಳಗಾಗಿ ಮಗಳ ಮದುವೆಯಾದ ಕೇವಲ ಮೂರೇ ದಿನಕ್ಕೆ ಮೃತಪಟ್ಟಿದ್ದರು. ಹೀಗಾಗಿ ಅಪ್ರಾಪ್ತೆಯ ಸಂಬಂಧಿಕರು ಹಾಗೂ ಕೆಲ ಪ್ರಜ್ಞಾವಂತರು ಯುವಕನ ಮನೆಗೆ ತೆರಳಿ ಜಗಳ ಮಾಡಿ ಅಪ್ರಾಪ್ತೆಯನ್ನು ವಾಪಸ್ ಕರೆದುಕೊಂಡು ಬಂದಿದ್ದಾರೆ. ಇದನ್ನೂ ಓದಿ: ಅತ್ತೆ ಮಗಳನ್ನು ಕಿಡ್ನಾಪ್ ಮಾಡಿ ತಾಳಿ ಕಟ್ಟಿದವ ಅರೆಸ್ಟ್

    ಇಷ್ಟೆಲ್ಲಾ ಘಟನೆ ನಡೆದ ಬಳಿಕ ನೊಂದ ಅಪ್ತಾಪ್ತೆಯ ಕುಟುಬಂಸ್ಥರು ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಅಲೆದಾಡಿದ್ದರು. ಆದರೂ ಪೊಲೀಸರು ಯಾವುದೇ ರೀತಿ ಪ್ರಕರಣ ದಾಖಲಿಸಿರಲಿಲ್ಲ. ಇದರಿಂದ ಬೇಸತ್ತ ಸಂತ್ರಸ್ತೆಯ ಕುಟುಂಬಸ್ಥರು ಕಂಗಲಾಗಿದ್ದು, ಪ್ರಭಾವಿ ನಾಯಕರ ಕುಮ್ಮಕ್ಕಿನಿಂದ ಪ್ರಕರಣ ದಾಖಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

    ಕೊನೆಗೆ ದಿಕ್ಕು ತೋಚದ ಸಂತ್ರಸ್ತೆಯ ಸಂಬಂಧಿಕರು ಚಿತ್ರದುರ್ಗದ ಮಹಿಳಾ ಹೊರಾಟಗಾರರಾದ ರಮಾ ನಾಗರಾಜ್ ಬಳಿ ತಮ್ಮ ಕಷ್ಟ ಹೇಳಿಕೊಂಡಿದ್ದರು. ಬಳಿಕ ರಮಾ ನಾಗರಾಜ್ ಅವರ ಸಮ್ಮುಖದಲ್ಲಿ ಚಳ್ಳಕೆರೆ ಠಾಣೆಗೆ ಆಗಮಿಸಿದ ಅಪ್ರಾಪ್ತೆ ಸಂಬಂಧಿಕರು ಆರೋಪಿಯ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ಆಗ ಎಚ್ಚೆತ್ತ ಪೊಲೀಸರು ಆರೋಪಿ ರಾಜುವನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಅತ್ತೆ ಮಗಳನ್ನು ಕಿಡ್ನಾಪ್ ಮಾಡಿ ಕಾರಲ್ಲೇ ತಾಳಿ ಕಟ್ಟಿದ

    ಅಪ್ರಾಪ್ತ ಬಾಲಕಿಯ ಮದುವೆಗೆ ಸಹಕರಿಸಿದ ಗ್ರಾಮದ ಪ್ರಭಾವಿ ಮುಖಂಡರು ಹಾಗೂ ಯುವಕನ ಕುಟುಂಬಸ್ಥರು ಸೇರಿದಂತೆ ಸುಮಾರು 19 ಜನರ ಮೇಲೆ ಸಂತ್ರಸ್ತೆ ದೂರು ನೀಡಿದ್ದಾಳೆ. ಈ ಎಲ್ಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಅವರು, ಕಳೆದ ಒಂಬತ್ತು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಅಪ್ರಾಪ್ತ ಯುವಕಿಯನ್ನು ಆರೋಪಿ ರಾಜು ಬಲವಂತವಾಗಿ ಮದುವೆ ಆಗಿದ್ದಾರೆ. ಆತನ ವಿರುದ್ಧ ಬಾಲ್ಯವಿವಾಹದ ಕಾಯ್ದೆ ಅಡಿ ಕೇಸ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಅಪ್ರಾಪ್ತೆಯ ಮದುವೆಗೆ ಯಾರೆಲ್ಲ ಬೆಂಬಲ ನೀಡಿದ್ದಾರೆ ಎಂದು ತನಿಖೆ ನಡೆಸಿ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

  • ಡ್ರಾಪ್ ಕೊಡೋ ನೆಪದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ- ಆರೋಪಿ ಬಂಧನ

    ಡ್ರಾಪ್ ಕೊಡೋ ನೆಪದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ- ಆರೋಪಿ ಬಂಧನ

    – ವಿಷ ಸೇವಿಸಿ ಬಾಲಕಿ ತಂದೆ ಆತ್ಮಹತ್ಯೆ

    ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಿಗಿದ್ದ ಆರೋಪಿ ಕೊನೆಗೂ ಸೆರೆಸಿಕ್ಕಿದ್ದಾನೆ. ಮಸ್ಕಿ ತಾಲೂಕಿನ ಸಣ್ಣ ಪಾಮಣ್ಣ ಬಂಧಿತ ಆರೋಪಿ.

    ಜನವರಿ 24 ರಂದು ಬಾಲಕಿಯ ತಂದೆಗೆ ಮದ್ಯಪಾನ ಮಾಡಿಸಿದ್ದ ಆರೋಪಿ ತಾನು ಕಂಠಪೂರ್ತಿ ಕುಡಿದಿದ್ದ. ಆ ಬಳಿಕ ಬಾಲಕಿಯನ್ನು ಮನೆಗೆ ಬೈಕ್ ನಲ್ಲಿ ಬಿಟ್ಟು ಬರಲು ಹೋದಾಗ ಮಾರ್ಗ ಮಧ್ಯೆಯಲ್ಲಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದ. ಜಿಲ್ಲೆಯ ಬಾಲಕಿಯರ ವಸತಿ ನಿಲಯವೊಂದರಲ್ಲಿ ಓದುತ್ತಿದ್ದ ಬಾಲಕಿಯನ್ನು ಅವಳ ತಂದೆ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಆದರೆ ಮರಳಿ ಗ್ರಾಮಕ್ಕೆ ತಲುಪುವುದರೊಳಗೆ ಆರೋಪಿ ಈ ಕೃತ್ಯ ಎಸಗಿದ್ದ.

    ಈ ಸಂಬಂಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯಿಂದ ಮಾನಸಿಕ ಖಿನ್ನತೆಗೆ ಒಳಗಾದ ಬಾಲಕಿಯ ತಂದೆ ಫೆಬ್ರವರಿ 2 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರೋಪಿ ಬಳಸುತ್ತಿದ್ದ ಬೈಕ್ ಆಧಾರದಲ್ಲಿ ಅವನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಕೈಗೆ ಸಿಕ್ಕಿರುವ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಪ್ರೀತ್ಸೆ ಪ್ರೀತ್ಸೆ ಎಂದು ಅಪ್ರಾಪ್ತೆಯನ್ನ ಕಾಡುತ್ತಿದ್ದ ಯುವಕ ಅಂದರ್

    ಪ್ರೀತ್ಸೆ ಪ್ರೀತ್ಸೆ ಎಂದು ಅಪ್ರಾಪ್ತೆಯನ್ನ ಕಾಡುತ್ತಿದ್ದ ಯುವಕ ಅಂದರ್

    ಮೈಸೂರು: ಅಪ್ರಾಪ್ತೆ ಹಿಂದೆ ಬಿದ್ದು ಪ್ರೀತ್ಸೆ ಪ್ರೀತ್ಸೆ ಅಂತ ಗಲಾಟೆ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.

    ಹುಣಸೂರು ತಾಲೂಕಿನ ನಿವಾಸಿ ರಾಮಚಂದ್ರ (18) ಬಂಧಿತ ಆರೋಪಿ. ರಾಮಚಂದ್ರ ತನ್ನ ಗ್ರಾಮದ 8ನೇ ತರಗತಿಯ ಬಾಲಕಿ ಹಿಂದೆ ಬಿದ್ದಿದ್ದ. ತನ್ನನ್ನು ಪ್ರೀತಿಸುವಂತೆ ಬಾಲಕಿಗೆ ಒತ್ತಾಯಿಸಿದ್ದ. ಅಷ್ಟೇ ಅಲ್ಲ ತನ್ನ ಪ್ರೀತಿಯನ್ನು ನಿರಾಕರಿಸಿದರೆ ಆ್ಯಸಿಡ್ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ.

    ಆರೋಪಿ ರಾಮಚಂದ್ರ ಕೆಲ ದಿನಗಳ ಹಿಂದೆ ಬಾಲಕಿಯ ಮನೆಗೆ ನುಗ್ಗಿ ಆಕೆಯನ್ನು ಎಳೆದಾಡಿದ್ದ. ಈ ವೇಳೆ ಮನೆಯ ಬೀರು ಬೀಳಿಸಿ ದಾಂಧಲೆ ಮಾಡಿದ್ದ. ಇದರ ಜೊತೆಗೆ ಆರೋಪಿಯು ಸೈಕೋ ರೀತಿ ವರ್ತಿಸಿ ತನ್ನ ಕೈ ಕುಯ್ದುಕೊಂಡಿದ್ದ.

    ರಾಮಚಂದ್ರನ ವರ್ತನೆಯಿಂದ ಬೇಸತ್ತ ಬಾಲಕಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಹುಣಸೂರು ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಅಪ್ರಾಪ್ತೆಯ ಮೇಲೆ 8 ದಿನಗಳ ಕಾಲ ಅತ್ಯಾಚಾರ ಎಸಗಿದ್ದ ಕಾಮುಕನ ಬಂಧನ

    ಅಪ್ರಾಪ್ತೆಯ ಮೇಲೆ 8 ದಿನಗಳ ಕಾಲ ಅತ್ಯಾಚಾರ ಎಸಗಿದ್ದ ಕಾಮುಕನ ಬಂಧನ

    ಬೆಳಗಾವಿ: ಅಪ್ರಾಪ್ತೆಯನ್ನು ಅಪಹರಿಸಿ ಎಂಟು ದಿನಗಳ ಕಾಲ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಕಾಮುಕನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

    ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಅಂಬೇಡ್ಕರ್ ಗಲ್ಲಿಯ ವಸಿಮ್ ಅಲ್ಲಾಭಕ್ಷ ಬಾಗಿ (22) ಬಂಧಿತ ಆರೋಪಿ. ಅರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ. ಆರೋಪಿ ಅಲ್ಲಾಭಕ್ಷ ಕೆಲ ತಿಂಗಳಗಳಿಂದ ಬಾಲಕಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಇದಕ್ಕೆ ಬಾಲಕಿ ನಿರಾಕರಿಸಿದ್ದಾಳೆ.

    ಇದರಿಂದ ಆಕ್ರೋಶಗೊಂಡಿದ್ದ ಕಾಮುಕ ಜ.13 ರಂದು ಸಂಜೆ ವೇಳೆಯಲ್ಲಿ ಹೊರಗಡೆ ಬಂದಿದ್ದ ಬಾಲಕಿಗೆ ಚಾಕು ತೋರಿಸಿ ಹೆದರಿಸಿ ಅಪಹರಿಸಿದ್ದಾನೆ. ನಂತರ ಗ್ರಾಮಕ್ಕೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ನಡೆಸಿದ್ದಾಗಿ ಆರೋಪಿ ವಿರುದ್ಧ ಬಾಲಕಿಯ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.