Tag: ministry post

  • ಸಚಿವ ಸ್ಥಾನಕ್ಕೆ ಡಿ.ವಿ ಸದಾನಂದ ಗೌಡ ರಾಜೀನಾಮೆ

    ಸಚಿವ ಸ್ಥಾನಕ್ಕೆ ಡಿ.ವಿ ಸದಾನಂದ ಗೌಡ ರಾಜೀನಾಮೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಚಿವ ಸಂಪುಟ ಪುನರ್ ರಚನೆಯಾಗುತ್ತಿದ್ದು, ಕರ್ನಾಟಕದ ನಾಲ್ವರು ಮೋದಿ ಸಂಪುಟ ಸೇರಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ ಸದಾನಂದ ಗೌಡ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಸ್ಥಾನಕ್ಕೆ ಡಿವಿಎಸ್ ಇಂದು ರಾಜೀನಾಮೆ ನೀಡಿದ್ದಾರೆ. 68 ವರ್ಷದ ಡಿ.ವಿ. ಸದಾನಂದ ಗೌಡ ಅವರು ಮೋದಿ ಸಂಪುಟದಲ್ಲಿ ಎರಡು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಕರ್ನಾಟಕದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಬಿಜೆಪಿಗೆ ಮತ್ತೆ ಶಾಕ್ ನೀಡಿದ ಹೈಕಮಾಂಡ್

    ಕೇಂದ್ರ ಸಂಪುಟದಲ್ಲಿರುವ ವರಿಷ್ಠರ ಸೂಚನೆಯಂತೆ ಡಿವಿಎಸ್ ರಾಜೀನಾಮೆ ನೀಡಿದ್ದಾರೆ. ಸದಾನಂದ ಗೌಡ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸೇರ್ಪಡೆಗೊಳ್ಳುತ್ತಿದ್ದಾರೆ.

    2004ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ್ದ ಡಿವಿಎಸ್, 2009ರಲ್ಲಿ ಉಡುಪಿ, 2014 ಮತ್ತು 2019ರಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಂಸತ್‍ಗೆ ಆಯ್ಕೆಯಾಗಿದ್ದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಅನಂತ್ ಕುಮಾರ್ ಅವರ ನಿಧನದ ಬಳಿಕ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವಾಲಯವನ್ನು ಅವರಿಗೆ ವಹಿಸಲಾಗಿತ್ತು.

  • ಸಚಿವ ಸ್ಥಾನಕ್ಕಾಗಿ ಕಿರಿಕಿರಿ ಮಾಡಿಲ್ಲ, ಮುಂದೆಯೂ ಮಾಡಲ್ಲ: ಎಸ್. ಅಂಗಾರ

    ಸಚಿವ ಸ್ಥಾನಕ್ಕಾಗಿ ಕಿರಿಕಿರಿ ಮಾಡಿಲ್ಲ, ಮುಂದೆಯೂ ಮಾಡಲ್ಲ: ಎಸ್. ಅಂಗಾರ

    ಮಂಗಳೂರು: ಸಚಿವ ಸ್ಥಾನಕ್ಕಾಗಿ ನಾನು ಲಾಬಿ ಮಾಡಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಅಂಗಾರ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಸಿಗಬೇಕು ಅಂತ ಬಹು ಜನರ ಬೇಡಿಕೆ ಇದೆ. ಅಧಿಕಾರ ಸಿಗೋದು ಬಿಡೋದು ದೇವರಿಗೆ ಬಿಟ್ಟಿದ್ದು. ನಾನು ಕೂಡ ಅದನ್ನೇ ದೇವರಲ್ಲಿ ಬೇಡುತ್ತೇನೆ. ಅಧಿಕಾರ ಬಂದಾಗ ಅನುಭವಿಸಬೇಕು. ಆದರೆ ಅಧಿಕಾರಕ್ಕಾಗಿ ಇಲ್ಲಸಲ್ಲದ ಲಾಬಿ ಮಾಡೋದು, ಕಿರಿಕಿರಿ ಮಾಡೋದು ಮಾಡಲ್ಲ. ಈ ಹಿಂದೆ ಕೂಡ ಮಾಡಿಲ್ಲ, ಮುಂದೆ ಕೂಡ ಮಾಡಲ್ಲ ಎಂದು ಅವರು ನುಡಿದರು.

    ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮೂವರು ಶಾಸಕರಿಗೆ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ. ನಾಳೆ ನೀವು ಬೆಂಗಳೂರಿನಲ್ಲೇ ಇರಿ, ಎಲ್ಲೂ ಹೋಗಬೇಡಿ. ಅಲ್ಲದೆ ಬೆಂಗಳೂರಿನಲ್ಲಿ ಇಲ್ಲದ ಶಾಸಕರಿಗೆ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ. ಹುಕ್ಕೇರಿಯ ಉಮೇಶ್ ಕತ್ತಿ, ಸುಳ್ಯದ ಅಂಗಾರ, ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಅವರಿಗೆ ಯಡಿಯೂರಪ್ಪ ಕರೆ ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಇನ್ನಿಬ್ಬರ ಹೆಸರಿನ ಬಗ್ಗೆ ಇನ್ನೂ ಬಹಿರಂಗವಾಗಿಲ್ಲ ಕೊನೇ ಕ್ಷಣದ ವರೆಗೆ ಸಸ್ಪೆನ್ಸ್ ಕಾಪಾಡಿಕೊಳ್ಳಲಾಗಿದ್ದು, ಯೋಗೇಶ್ವರ್, ಲಿಂಬಾವಳಿ ಹೆಸರು ಸೇರ್ಪಡೆಗೆ ಕಡೇ ಹಂತದ ಕಸರತ್ತು ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಕುರಿತು ಯಾವುದೇ ರೀತಿಯ ಸ್ಪಷ್ಟನೆ ಲಭ್ಯವಾಗಿಲ್ಲ. ಇಂದು ಬೆಳಗ್ಗೆಯಷ್ಟೇ ಪ್ರತಿಕ್ರಿಯಿಸಿದ್ದ ಸಿಎಂ, ಬುಧವಾರ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗವಹಿಸುವ ಸಾಧ್ಯತೆಗಳಿವೆ ಎಂದಿದ್ದರು.

  • ನಮ್ಮ ಜನಾಂಗಕ್ಕೆ ಉತ್ತರಿಸಲಾಗ್ತಿಲ್ಲ, ನಮಗೂ ಸಚಿವ ಸ್ಥಾನ ನೀಡಿ: ಎಂ.ಪಿ ಕುಮಾರಸ್ವಾಮಿ

    ನಮ್ಮ ಜನಾಂಗಕ್ಕೆ ಉತ್ತರಿಸಲಾಗ್ತಿಲ್ಲ, ನಮಗೂ ಸಚಿವ ಸ್ಥಾನ ನೀಡಿ: ಎಂ.ಪಿ ಕುಮಾರಸ್ವಾಮಿ

    ಚಿಕ್ಕಮಗಳೂರು: ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಿಲ್ ನೀಡುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳು ಮತ್ತೊಮ್ಮೆ ತಮ್ಮ ಇಂಗಿತವನ್ನ ಹೊರಹಾಕಿದ್ದಾರೆ. ನಮ್ಮ ಜನಾಂಗಕ್ಕೆ ಉತ್ತರ ಕೊಡಲು ಆಗುತ್ತಿಲ್ಲ. ನಮಗೂ ಸಚಿವ ಸ್ಥಾನ ನೀಡಿ ಎಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.

    ಇಂದು ಮೂಡಿಗೆರೆಯಲ್ಲಿ ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಮಾತನಾಡಿದ ಶಾಸಕ, ನನಗೂ ಸಚಿವ ಸ್ಥಾನ ನೀಡಿ ಪಕ್ಷಕ್ಕೆ ಶಕ್ತಿಯಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅವರು ಸಚಿವ ಸ್ಥಾನದ ಇಂಗಿತ ಹೊರಹಾಕ್ತಿರೋದು ಇದು ಮೂರನೇ ಬಾರಿ. ನಾನು ಸಚಿವ ಸ್ಥಾನದ ಆಕಾಂಕ್ಷಿ. ಜಿಲ್ಲೆಯಲ್ಲಿ ಓರ್ವ ಸಚಿವರಿದ್ದರು. ಈಗ ಅವರು ರಾಜೀನಾಮೆ ನೀಡಿದ್ದಾರೆ. ಜಿಲ್ಲೆಗೆ ಸಚಿವ ಸ್ಥಾನದ ಅಗತ್ಯವಿದೆ. ಕಾಫಿ ಸೇರಿದಂತ ವಿವಿಧ ಸಮಸ್ಯೆಗಳಿವೆ. ಹಾಗಾಗಿ ನನಗೂ ಸಚಿವ ಸ್ಥಾನ ನೀಡಿ ಎಂದು ಪ್ರಬಲವಾಗಿ ಕೇಳುತ್ತಿದ್ದೇನೆ ಎಂದರು.

    ಸಚಿವ ಸ್ಥಾನ ಕೊಡೋದು ಬಿಡೋದು ವರಷ್ಠರಿಗೆ ಬಿಟ್ಟ ವಿಚಾರ. ನಾನಂತೂ ಸಚಿವ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ. ಕಳೆದ ಹಲವು ಬಾರಿ ಕೂಡ ನನಗೆ ಮಿಸ್ ಆಗಿತ್ತು. ಅಷ್ಟೆ ಅಲ್ಲದೆ ಜಿಲ್ಲೆಯಲ್ಲಿ ಸೋತವರು-ಗೆದ್ದವರೂ ಎಲ್ಲರಿಗೂ ಒಂದೊಂದು ಸ್ಥಾನ ಕೊಟ್ಟಿದ್ದಾರೆ. ಮೂರು ಬಾರಿ ಸರ್ಕಾರ ರಚನೆಯಾದರೂ ನಮ್ಮ ಜನಾಂಗಕ್ಕೆ ಯಾವುದೇ ಪ್ರಾತಿನಿದ್ಯ ಕೊಟ್ಟಿಲ್ಲ. ನಮ್ಮ ಜನಾಂಗದ ದೃಷ್ಟಿಯಿಂದಲೂ ಒಳ್ಳೆಯದು. ನಮ್ಮ ಜನಾಂಗಕ್ಕೆ ನಾವು ಉತ್ತರ ಕೊಡಲು ಆಗ್ತಿಲ್ಲ. ಹಾಗಾಗಿ ದಯಮಾಡಿ ನಮಗೂ ಸಚಿವ ಸ್ಥಾನ ಕೊಡಿ ಎಂದು ಆಗ್ರಹಿಸಿದ್ದಾರೆ.

    ಸಚಿವ ಸ್ಥಾನ ಕೊಟ್ಟರೆ ಪಕ್ಷಕ್ಕೆ ನಾವೂ ಶಕ್ತಿಯಾಗಿ ಕೆಲಸ ಮಾಡುತ್ತೇವೆ. ನಮ್ಮ ಸಿ.ಟಿ ರವಿ ಅವರು ಇದ್ದರು. ಅವರು ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ಈಗ ನಮಗೆ ಕೊಡಿ ಎಂದು ಸಚಿವ ಸ್ಥಾನದ ಆಸೆಯನ್ನ ಮತ್ತೊಮ್ಮೆ ಹೊರಹಾಕಿದ್ದಾರೆ. ಮೊದಲ ಬಾರಿ ಸರ್ಕಾರ ರಚನೆಯಾದಾಗ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೂ ಅವರು ಹೋಗಿರಲಿಲ್ಲ. ಎರಡನೇ ಬಾರಿಯೂ ನಾನೂ ಸಚಿವ ಸ್ಥಾನದ ಆಕಾಂಕ್ಷಿ ಯಡಿಯೂರಪ್ಪ ನಮ್ಮ ನಾಯಕ. ನಮಗೂ ಕೊಡುತ್ತಾರೆಂದು ನಂಬಿಕೆ ಇದೆ ಎಂದಿದ್ದರು. ಈಗ ಮೂರನೇ ಬಾರಿ ಈಗಲೂ ಸಚಿವ ಸ್ಥಾನದ ಬಯಕೆಯನ್ನ ಪ್ರಬಲವಾಗಿ ಹೊರಹಾಕಿದ್ದಾರೆ.

  • ಉಗ್ರಪ್ಪನ ಗೆಲ್ಲಿಸಿದ ರೂವಾರಿಗಳಿಗೆ ಸಚಿವ ಸ್ಥಾನದ ಕನಸು – ನ. 12ರ ನಂತರ ಸಂಪುಟ ವಿಸ್ತರಣೆ

    ಉಗ್ರಪ್ಪನ ಗೆಲ್ಲಿಸಿದ ರೂವಾರಿಗಳಿಗೆ ಸಚಿವ ಸ್ಥಾನದ ಕನಸು – ನ. 12ರ ನಂತರ ಸಂಪುಟ ವಿಸ್ತರಣೆ

    ಬೆಂಗಳೂರು: ಉಪಚುನಾವಣೆಯ ಫಲಿತಾಂಶ ಮುಗಿದ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಹೊಸ ಲೆಕ್ಕಾಚಾರವೊಂದು ಶುರುವಾಗಿದೆ. ಉಗ್ರಪ್ಪರನ್ನು ಲೀಡ್ ಕೊಟ್ಟು ಗೆಲ್ಲಿಸಿದ್ದ ಕಾಂಗ್ರೆಸ್ ಶಾಸಕರ ಕನಸು ಚಿಗುರಿದೆ.

    ಉಗ್ರಪ್ಪರನ್ನ ಗೆಲ್ಲಿಸಿದ ಬಳ್ಳಾರಿಯ 6 ಜನ ಕಾಂಗ್ರೆಸ್ ಶಾಸಕರಲ್ಲಿ ಯಾರಿಗೆ ಒಲಿಯಲಿದೆ ಮಂತ್ರಿ ಸ್ಥಾನ…? ಯಾರಾಗಲಿದ್ದಾರೆ ಬಳ್ಳಾರಿ ಕೋಟೆಯ ಸಾಮ್ರಾಟ ಅನ್ನೋ ಕುತೂಹಲ ಮತ್ತೆ ಮೂಡಿದೆ. ಚುನಾವಣಾ ಫಲಿತಾಂಶಕ್ಕೂ ಮುನ್ನ ಸೋಲಿನ ಆತಂಕದಲ್ಲಿದ್ದ ಸಿದ್ದರಾಮಯ್ಯ, ಎಲ್ಲಾ ಶಾಸಕರನ್ನು ಕರೆದು ಯಾರು ಹೆಚ್ಚು ಲೀಡ್ ಕೊಡ್ತಾರೋ ಅವರ ಹೆಸರು ಮಂತ್ರಿ ಸ್ಥಾನಕ್ಕೆ ಪರಿಗಣಿಸುವುದಾಗಿ ಟಾಸ್ಕ್ ನೀಡಿದ್ದರು. ಹೀಗಾಗಿ ಮಂತ್ರಿ ಸ್ಥಾನದ ಹಟಕ್ಕೆ ಬಿದ್ದು 6 ಮಂದಿ ಶಾಸಕರು ತಲಾ 30 ಸಾವಿರ ಲೀಡ್ ಕೊಟ್ಟರು. ಈಗ ಮಂತ್ರಿಗಿರಿ ಯಾರಿಗೆ ಎಂಬುದೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

    ಸಚಿವ ಸ್ಥಾನದ ಆ ಆರು ಆಕಾಂಕ್ಷಿಗಳು ಯಾರು..?
    * ಸಂಡೂರಿನ ತುಕಾರಾಂ ಅವರು ಮೂರನೇ ಬಾರಿಗೆ ಕಾಂಗ್ರೆಸ್ ಶಾಸಕರಾಗಿರುವ ಇವರು ರಾಜ್ಯ ಕಾಂಗ್ರೆಸ್ ನಾಯಕರ ಪಾಲಿಗೆ ಮಂತ್ರಿ ಸ್ಥಾನದ ಡಾರ್ಕ್ ಹಾರ್ಸ್ ಆಗಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ತುಕಾರಾಂ ಮೇಲೆ ಮಂತ್ರಿ ಸ್ಥಾನದ ಒಲವು ಹೆಚ್ಚಿದೆ.

    * ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಅವರು 30 ಸಾವಿರದಷ್ಟು ಲೀಡ್ ತಂದುಕೊಟ್ಟಿದ್ದಾರೆ. ಇವರು ಸತತವಾಗಿ 4 ಬಾರಿ ಗೆದ್ದಿದ್ದು ಕಳೆದ ಬಾರಿ ಸಚಿವರಾಗಿದ್ದವರು. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಮೂರೂವರೆ ವರ್ಷ ಸಚಿವರಾಗಿದ್ದರು. ಇದೀಗ ಮತ್ತೆ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

    * ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾಗಿರೋ ಭೀಮಾ ನಾಯಕ್ ಅವರು 2ನೇ ಬಾರಿಗೆ ಶಾಸಕರಾಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಟಾರ್ಗೆಟನ್ನು ಬಳ್ಳಾರಿ ಶಾಸಕರು ರೀಚ್ ಮಾಡಿದ್ರಾ? ಯಾವ ಶಾಸಕರ ಕ್ಷೇತ್ರದಲ್ಲಿ ಎಷ್ಟು ಲೀಡ್?

    * ಬಳ್ಳಾರಿ ಗ್ರಾಮೀಣ ಭಾಗದ ಶಾಸಕರಾಗಿರುವ ನಾಗೇಂದ್ರ ಕೂಡ ಇದೀಗ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇವರು 3 ನೇ ಬಾರಿ ಶಾಸಕರಾಗಿದ್ದಾರೆ.

    * ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವರು ಈ ಹಿಂದೆ ಹಲವು ಬಾರಿ ತನಗೆ ಸಚಿವ ಸ್ಥಾನ ನೀಡಲೇಬೇಕೆಂದು ಒತ್ತಾಯಿಸಿದ್ದರು.

    * ಕಂಪ್ಲಿ ಶಾಸಕ ಗಣೇಶ್ ಅವರು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿದ್ದರೂ ಕೂಡ ಸಚಿವ ಸ್ಥಾನ ನೀಡಬೇಕೆಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ನನ್ನ ಶರ್ಟ್ ಹಿಡಿದು ಕೇಳುವ ಹಕ್ಕು ಬಳ್ಳಾರಿ ಜನರಿಗಿದೆ: ವಿ.ಎಸ್ ಉಗ್ರಪ್ಪ

    ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕರಿಗೆ ಈ ತಿಂಗಳ 12ರ ನಂತರ ಬಂಪರ್ ಗಿಫ್ಟ್ ಸಿಗೋದು ಗ್ಯಾರಂಟಿಯಾಗಿದೆ. ಸಂಪುಟ ವಿಸ್ತರಣೆಗೆ ನವಂಬರ್ 12ರ ನಂತರ ಮುಹೂರ್ತ ಫಿಕ್ಸ್ ಆಗಿದ್ದು, ಕಾಂಗ್ರೆಸ್-ಜೆಡಿಎಸ್ ಹೈಕಮಾಂಡ್ ಮಾತುಕತೆ ಪ್ರಕಾರ ನವೆಂಬರ್ 12 ರ ನಂತರ ಸಂಪುಟ ವಿಸ್ತರಣೆ ನಡೆಯಲಿದೆ.

    ಚುನಾವಣಾ ಫಲಿತಾಂಶ ದಿನದಂದೇ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ದೇವೇಗೌಡರನ್ನ ಭೇಟಿಯಾಗಿದ್ದರು. ಈ ವೇಳೆ ಆದಷ್ಟು ಬೇಗ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕಾತಿಗೆ ದೇವೇಗೌಡರು ಸೂಚನೆ ನೀಡಿದ್ದಾರೆ. ಅಲ್ಲದೇ ಈ ಕುರಿತು ವೇಣುಗೋಪಾಲ್ ಅವರು ನವೆಂಬರ್ 9 ರಂದು ರಾಹುಲ್ ಗಾಂಧಿ ಜೊತೆ ಸಹ ದೂರವಾಣಿಯಲ್ಲಿ ದೂರವಾಣಿಯಲ್ಲಿ ಚರ್ಚೆ ನಡೆಸಲಿದ್ದಾರೆ. ನವೆಂಬರ್ 09, 10ರಂದು ಕಾಂಗ್ರೆಸ್, ಜೆಡಿಎಸ್ ನಾಯಕರೊಂದಿಗೆ ಅಂತಿಮ ಸುತ್ತಿನ ಮಾತುಕತೆ ನಡೆಯಲಿದೆ. ನ.11ರ ಹೈಕಮಾಂಡ್‍ಗೆ ರಾಜ್ಯ ಕಾಂಗ್ರೆಸ್ ನಾಯಕರು ಅಂತಿಮ ಪಟ್ಟಿ ಸಲ್ಲಿಸಲಿದ್ದಾರೆ ಎನ್ನುವ ಮಾಹಿತಿಯೊಂದು ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ:  ಸೋಲು ಅನಾಥ, ನಾನೇ ಬಳ್ಳಾರಿ ಸೋಲಿನ ಹೊಣೆ ಹೊರುತ್ತೇನೆ: ಶ್ರೀರಾಮುಲು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾನು ರಾಜೀನಾಮೆ ಕೊಡಲ್ಲ, ಕಾಂಗ್ರೆಸ್ ಬಿಡಲ್ಲ – ಶಾಮನೂರು ಸ್ಪಷ್ಟನೆ

    ನಾನು ರಾಜೀನಾಮೆ ಕೊಡಲ್ಲ, ಕಾಂಗ್ರೆಸ್ ಬಿಡಲ್ಲ – ಶಾಮನೂರು ಸ್ಪಷ್ಟನೆ

    ದಾವಣಗೆರೆ: ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಹ ನೀಡಲ್ಲ ಇದೆಲ್ಲ ಸುಳ್ಳು ವದಂತಿ ಎಂದು ಶಾಸಕ ಹಾಗೂ ಮಾಜಿ ಸಚಿವ ಶಾಮನೂರ ಶಿವಶಂಕರಪ್ಪ ಹೇಳಿದ್ದಾರೆ.

    ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾನು ಸಚಿವ ಸ್ಥಾನ ತಪ್ಪಿದಕ್ಕೆ ಪಕ್ಷದ ವಿರುದ್ಧ ಯಾವುದೇ ರೀತಿಯ ಬೇಸರವಿಲ್ಲ. ಕ್ಷೇತ್ರದ ಜನ ನನ್ನನ್ನು ಗೆಲ್ಲಿಸಿದ್ದಾರೆ ಅವರಿಗೆ ನಾನು ಕೆಲಸ ಮಾಡುವೆ ಎಂದರು.

    ಸಚಿವ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ತಮ್ಮ ಜೊತೆ ಮಾತಾಡಿಲ್ಲ. ಉಳಿದ ಆರು ಸ್ಥಾನಗಳಿಗೆ ಸಚಿವರ ನೇಮಕ ಯಾವಾಗ ಆಗುತ್ತದೆ ಎಂದು ಹೇಳುವುದು ಕಷ್ಟ. ನಮ್ಮ ಜಿಲ್ಲೆಯಲ್ಲಿ ನನಗೆ ಸಚಿವ ಸ್ಥಾನ ನೀಡಿಲ್ಲ ಅಂತಾ ಪಾಲಿಕೆ ಹಾಗೂ ಎಪಿಎಂಸಿ ಅಧ್ಯಕ್ಷರು, ಸದಸ್ಯರು ರಾಜೀನಾಮೆ ನೀಡಿದ್ದಾರೆ. ಆದ್ರೆ ನಾನು ರಾಜೀನಾಮೆ ನೀಡುವಂತೆ ಹೇಳಿಲ್ಲ ಎಂದು ಶಿವಶಂಕರಪ್ಪ ಸ್ಪಷ್ಟನೆ ನೀಡಿದ್ರು. ಇದನ್ನೂ ಓದಿ: ಶಾಮನೂರು ಶಿವಶಂಕರಪ್ಪರಿಗೆ ತಪ್ಪಿದ ಸಚಿವ ಸ್ಥಾನ- ಕೈ ಕಾರ್ಪೊರೇಟರ್ ರಾಜೀನಾಮೆ

    ಮಧ್ಯ ಕರ್ನಾಟಕದ ಮೂರು ಜಿಲ್ಲೆಗೆ ಸಚಿವ ಸ್ಥಾನದ ಭಾಗ್ಯ ಸಿಕ್ಕಿಲ್ಲ ಎನ್ನುವ ಪ್ರಶ್ನಗೆ ಉತ್ತರಿಸಿದ ಅವರು,ರಪ್ಪ, ನಾವೇನು 8 ಕ್ಕೆ 8 ಕ್ಷೇತ್ರಗಳನ್ನು ಗೆದ್ದಿದ್ದೇವಾ. ಗೆದ್ದಿರುವುದೇ ಒಂದೋ ಎರಡು ಕ್ಷೇತ್ರಗಳು ಮಾತ್ರ. ಗೆದ್ದು ಹಾಗೂ ಗೆಲ್ಲಿಸಿಕೊಂಡವರ ಮಾನದಂಡ ನೋಡಿ ಸಚಿವ ಸ್ಥಾನ ನೀಡಿದ್ದಾರೆ. ಅದಕ್ಕೆ ನಮ್ಮ ಬೇಸರವಿಲ್ಲ, ಅಲ್ಲದೆ ಪಕ್ಷ ಬಿಟ್ಟು ಹೋಗೋಲ್ಲ ಎಂದರು.

    ದೇವೇಗೌಡರ ಹಾಗೂ ನಮ್ಮ ಮಧ್ಯ ಹಲವು ವರ್ಷಗಳಿಂದ ಸ್ನೇಹ ಸಂಬಂಧವಿದೆ. ದಾವಣಗೆರೆಗೆ ಬಂದರೆ ನಮ್ಮ ಮನೆಗೆ ಭೇಟಿ ನೀಡಿ ಹೋಗುತ್ತಾರೆ. ಅದಕ್ಕೆ ಬಣ್ಣ ಹಚ್ಚುವುದು ಸರಿಯಲ್ಲ. ಇನ್ನು ಸ್ವಾಮೀಜಿಗಳು ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂಬ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳು ಮಧ್ಯ ಪ್ರವೇಶ ಮಾಡಿದ್ರೆ ಸಚಿವ ಸ್ಥಾನ ಇನ್ನೂ ದೂರವಾಗುತ್ತೆ ಎಂದು ಹಾಸ್ಯ ಮಾಡಿದ್ರು.

  • ಕಾಂಗ್ರೆಸ್-ಜೆಡಿಎಸ್ ಸಂಪುಟ ರಚನೆ ಕಸರತ್ತು- ಸಚಿವ ಸ್ಥಾನಕ್ಕೆ ಮುಂದುವರಿದ ಲಾಬಿ

    ಕಾಂಗ್ರೆಸ್-ಜೆಡಿಎಸ್ ಸಂಪುಟ ರಚನೆ ಕಸರತ್ತು- ಸಚಿವ ಸ್ಥಾನಕ್ಕೆ ಮುಂದುವರಿದ ಲಾಬಿ

    ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ರಚನೆ ಸರ್ಕಸ್ ಮುಂದುವರಿದಿದೆ. ಸೋಮವಾರ ದೆಹಲಿಗೆ ತೆರಳಿದ್ದ ಎಚ್‍ಡಿ ಕುಮಾರಸ್ವಾಮಿ ರಾತ್ರಿ 11.30ಕ್ಕೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ರು.

    ಅಲ್ಲಿಂದ ನೇರವಾಗಿ ತಮ್ಮ ಪಕ್ಷದ ಶಾಸಕರು ತಂಗಿದ್ದ ನಂದಿಬೆಟ್ಟದ ರೆಸಾರ್ಟ್‍ಗೆ ತೆರಳಿ ದೆಹಲಿಯಲ್ಲಿ ನಡೆದ ವಿದ್ಯಾಮಾನಗಳು ಮತ್ತು ಸಂಪುಟ ರಚನೆಯ ಬಗ್ಗೆ ಶಾಸಕರೊಂದಿಗೆ ಚರ್ಚೆ ನಡೆಸಿದ್ರು. ನಂತ್ರ ಬೆಳಗ್ಗಿನ ಜಾವ 3.30ರ ಸುಮಾರಿಗೆ ತಮ್ಮ ಪುತ್ರ ನಿಖಿಲ್ ಜೊತೆ ತಮ್ಮ ಜೆಪಿ ನಗರದ ನಿವಾಸಕ್ಕೆ ಆಗಮಿಸಿದ್ರು.

    ಯಾರ್ಯಾರಿಗೆ ಸಚಿವ ಸ್ಥಾನ, ಯಾರಿಗೆ ಡಿಸಿಎಂ ಪಟ್ಟ ಅನ್ನೋದು ಇವತ್ತು ಬಹುತೇಕ ಖಚಿತವಾಗಲಿದೆ. ಈ ಮಧ್ಯೆ ಮಂತ್ರಿಗಿರಿ ಮತ್ತು ಡಿಸಿಎಂ ಪಟ್ಟಕ್ಕಾಗಿ ಲಾಬಿ ಜೋರಾಗಿದೆ. ನಿನ್ನೆ ಸಂಜೆ 7 ಗಂಟೆಗೆ ಖಾಸಗಿ ಹೋಟೆಲ್‍ನಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಭೇಟಿಯಾದ ಜಮೀರ್ ಅಹ್ಮದ್, ಅಲ್ಪಸಂಖ್ಯಾತರ ಕೋಟಾದಲ್ಲಿ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇನ್ನು ಸಿದ್ದರಾಮಯ್ಯ ಕೂಡಾ ಮೊದಲ ಬಾರಿಗೆ ಶಾಸಕರಾಗಿರುವ ತಮ್ಮ ಪುತ್ರ ಯತೀಂದ್ರಗೆ ಸಚಿವ ಸ್ಥಾನ ದೊರಕಿಸಲು ಹೈಕಮಾಂಡ್ ಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ. ಮತ್ತೊಂದ್ಕಡೆ ಲಿಂಗಾಯತ ಸ್ವಾಮೀಜಿಗಳು ತಮ್ಮ ಸಮುದಾಯದವರನ್ನೇ ಡಿಸಿಎಂ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.

    ಜೆಡಿಎಸ್‍ನಲ್ಲಿ ಯಾರಿಗೆಲ್ಲಾ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಅನ್ನೋದನ್ನ ನೋಡೋದಾದ್ರೆ..
    * ಹಾಸನ – ಎಚ್.ಡಿ.ರೇವಣ್ಣ – ಒಕ್ಕಲಿಗ – ಹೊಳೆನರಸೀಪುರ
    – ಎ.ಟಿ. ರಾಮಸ್ವಾಮಿ – ಒಕ್ಕಲಿಗ – ಅರಕಲಗೂಡು
    – ಎಚ್.ಕೆ.ಕುಮಾರಸ್ವಾಮಿ – ಪರಿಶಿಷ್ಟ ಜಾತಿ -ಸಕಲೇಶಪುರ

    * ಧಾರವಾಡ – ಬಸವರಾಜ ಹೊರಟ್ಟಿ – ಲಿಂಗಾಯತ – ಪರಿಷತ್ ಸದಸ್ಯ

    * ಮೈಸೂರು – ಎಚ್.ವಿಶ್ವನಾಥ್ – ಕುರುಬ – ಹುಣಸೂರು
    – ಜಿ.ಟಿ.ದೇವೇಗೌಡ – ಒಕ್ಕಲಿಗ – ಚಾಮುಂಡೇಶ್ವರಿ

    * ಮಂಡ್ಯ – ಸಿ.ಎಸ್.ಪುಟ್ಟರಾಜು – ಒಕ್ಕಲಿಗ – ಮೇಲುಕೋಟೆ
    * ಬೀದರ್ – ಬಂಡೆಪ್ಪ ಕಾಶೆಂಪೂರ್- ಕುರುಬ – ಬೀದರ್ ದಕ್ಷಿಣ
    * ಚಾಮರಾಜನಗರ – ಎನ್.ಮಹೇಶ್, ಬಿಎಸ್‍ಪಿ – ಪರಿಶಿಷ್ಟ ಜಾತಿ – ಕೊಳ್ಳೇಗಾಲ

    * ತುಮಕೂರು – ಸತ್ಯನಾರಾಯಣ/ಗುಬ್ಬಿ ಶ್ರೀನಿವಾಸ್ – ಒಕ್ಕಲಿಗ
    – ಸತ್ಯನಾರಾಯಣ- ಶಿರಾ, ಶ್ರೀನಿವಾಸ್ -ಗುಬ್ಬಿ

    * ಮಂಗಳೂರು – ಬಿ.ಎಂ.ಫಾರೂಕ್ – ಅಲ್ಪಸಂಖ್ಯಾತ
    * ಯಾದಗಿರಿ – ನಾಗನಗೌಡ ಕಂದಕೂರ – ಲಿಂಗಾಯತ – ಗುರುಮಿಠ್ಕಲ್
    * ರಾಯಚೂರು – ವೆಂಕಟರಾವ್ ನಾಡಗೌಡ – ಲಿಂಗಾಯತ – ಸಿಂಧನೂರು
    * ವಿಜಯಪುರ – ಎಸ್.ಎಂ.ಮನಗೂಳಿ – ಲಿಂಗಾಯತ – ಸಿಂಧಗಿ
    * ಬೆಂಗಳೂರು – ಟಿ.ಎ. ಶರವಣ – ಆರ್ಯ ವೈಶ್ಯ – ಮೇಲ್ಮನೆ ಸದಸ್ಯ

    ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಯಾರು ಯಾರಿದ್ದಾರೆ ಅನ್ನೋದನ್ನ ನೋಡೋದಾದ್ರೆ..
    * ತುಮಕೂರು – ಜಿ.ಪರಮೇಶ್ವರ್ – ಪರಿಶಿಷ್ಟ ಜಾತಿ ಬಲ – ಕೊರಟಗೆರೆ
    * ರಾಮನಗರ – ಡಿ.ಕೆ.ಶಿವಕುಮಾರ್ – ಒಕ್ಕಲಿಗ – ಕನಕಪುರ
    * ದಾವಣಗೆರೆ – ಶಾಮನೂರು ಶಿವಶಂಕರಪ್ಪ – ಲಿಂಗಾಯತ – ದಾವಣಗೆರೆ ದಕ್ಷಿಣ

    * ಕೋಲಾರ – ರಮೇಶ್ ಕುಮಾರ್ – ಬ್ರಾಹ್ಮಣ – ಶ್ರೀನಿವಾಸಪುರ
    – ರೂಪಾ ಶಶಿಧರ್ – ಪರಿಶಿಷ್ಟಜಾತಿ ಎಡ – ಕೆಜಿಎಫ್

    * ಕಲಬುರಗಿ – ಪ್ರಿಯಾಂಕ್ ಖರ್ಗೆ – ಪರಿಶಿಷ್ಟ ಜಾತಿ ಬಲ – ಚಿತ್ತಾಪುರ
    * ಮೈಸೂರು – ತನ್ವೀರ್ ಸೇಠ್ – ಅಲ್ಪಸಂಖ್ಯಾತ – ನರಸಿಂಹರಾಜ
    * ಉತ್ತರ ಕನ್ನಡ- ಆರ್.ವಿ.ದೇಶಪಾಂಡೆ – ಬ್ರಾಹ್ಮಣ – ಹಳಿಯಾಳ
    * ಹಾವೇರಿ – ಬಿ.ಸಿ.ಪಾಟೀಲ್ – ಲಿಂಗಾಯತ – ಹಿರೇಕೆರೂರು
    * ಬಳ್ಳಾರಿ – ನಾಗೇಂದ್ರ – ಪರಿಶಿಷ್ಟ ಪಂಗಡ – ಬಳ್ಳಾರಿ
    – ತುಕಾರಾಂ – ಪರಿಶಿಷ್ಟ ಪಂಗಡ – ಸಂಡೂರು
    * ಬೆಳಗಾವಿ – ರಮೇಶ್ ಜಾರಕಿಹೊಳಿ – ಪರಿಶಿಷ್ಟ ಪಂಗಡ – ಗೋಕಾಕ್
    – ಸತೀಶ್ ಜಾರಕಿಹೊಳಿ – ಪರಿಶಿಷ್ಟ ಪಂಗಡ – ಯಮಕನಮರಡಿ
    – ಲಕ್ಷ್ಮಿ ಹೆಬ್ಬಾಳ್ಕರ್ – ಲಿಂಗಾಯತ – ಬೆಳಗಾವಿ ಗ್ರಾಮೀಣ

    * ಬಾಗಲಕೋಟೆ – ಸಿದ್ದು ನ್ಯಾಮಗೌಡ – ಲಿಂಗಾಯತ – ಜಮಖಂಡಿ
    – ಎಸ್.ಆರ್.ಪಾಟೀಲ್ – ಲಿಂಗಾಯತ – ಪರಿಷತ್ ಸದಸ್ಯ

    * ಬೀದರ್ – ಈಶ್ವರ್ ಖಂಡ್ರೆ – ಲಿಂಗಾಯತ – ಭಾಲ್ಕಿ
    – ರಾಜಶೇಖರ ಪಾಟೀಲ್ – ಲಿಂಗಾಯತ – ಹುಮ್ನಾಬಾದ್
    – ರಹೀಂ ಖಾನ್ – ಅಲ್ಪಸಂಖ್ಯಾತ – ಬೀದರ್

    * ವಿಜಯಪುರ – ಎಂ.ಬಿ. ಪಾಟೀಲ್ – ಲಿಂಗಾಯತ – ಬಬಲೇಶ್ವರ
    – ಶಿವಾನಂದ ಪಾಟೀಲ್ – ಲಿಂಗಾಯತ – ಬಸವನಬಾಗೇವಾಡಿ

    * ಕೊಪ್ಪಳ – ಅಮರೇಗೌಡ ಬಯ್ಯಾಪುರ – ಲಿಂಗಾಯತ – ಕುಷ್ಠಗಿ
    – ರಾಘವೇಂದ್ರ ಹಿಟ್ನಾಳ್ – ಕುರುಬ – ಕೊಪ್ಪಳ

    * ಧಾರವಾಡ – ಸಿ.ಎಸ್.ಶಿವಳ್ಳಿ – ಕುರುಬ – ಕುಂದಗೋಳ
    * ಬೆಂಗಳೂರು ಗ್ರಾ. – ಎಂ.ಟಿ.ಬಿ ನಾಗಾರಾಜ್ – ಕುರುಬ – ಹೊಸಕೋಟೆ
    * ಗದಗ – ಎಚ್.ಕೆ.ಪಾಟೀಲ್ – ಲಿಂಗಾಯತ – ಗದಗ
    * ಮಂಗಳೂರು – ಯು.ಟಿ.ಖಾದರ್ – ಅಲ್ಪಸಂಖ್ಯಾತ – ಮಂಗಳೂರು

    * ಚಾಮರಾಜನಗರ – ಪುಟ್ಟರಂಗಶೆಟ್ಟಿ – ಉಪ್ಪಾರ – ಚಾಮರಾಜನಗರ
    – ನರೇಂದ್ರ – ಒಕ್ಕಲಿಗ – ಹನೂರು

    * ಚಿಕ್ಕಬಳ್ಳಾಪುರ- ಡಾ.ಸುಧಾಕರ್ – ಒಕ್ಕಲಿಗ – ಚಿಕ್ಕಬಳ್ಳಾಪುರ
    – ವಿ.ಮುನಿಯಪ್ಪ – ಒಕ್ಕಲಿಗ – ಶಿಡ್ಲಘಟ್ಟ
    – ಶಿವಶಂಕರ ರೆಡ್ಡಿ – ರೆಡ್ಡಿ ಒಕ್ಕಲಿಗ – ಗೌರಿಬಿದನೂರು

    * ಬೆಂಗಳೂರು- ರಾಮಲಿಂಗಾ ರೆಡ್ಡಿ – ರೆಡ್ಡಿ ಒಕ್ಕಲಿಗ- ಬಿಟಿಎಂ ಲೇಔಟ್
    – ಕೆ.ಜೆ.ಜಾರ್ಜ್ – ಕ್ರಿಶ್ಚಿಯನ್ – ಸರ್ವಜ್ಞ ನಗರ
    – ಕೃಷ್ಣಬೈರೇಗೌಡ – ಒಕ್ಕಲಿಗ – ಬ್ಯಾಟರಾಯನಪುರ
    – ಎಂ.ಕೃಷ್ಣಪ್ಪ – ಒಕ್ಕಲಿಗ – ವಿಜಯನಗರ
    – ರೋಷನ್ ಬೇಗ್ – ಅಲ್ಪಸಂಖ್ಯಾತ – ಶಿವಾಜಿನಗರ
    – ದಿನೇಶ್ ಗುಂಡೂರಾವ್ – ಬ್ರಾಹ್ಮಣ – ಗಾಂಧಿನಗರ

  • ಸಚಿವ ಸ್ಥಾನಕ್ಕೆ ಆಗ್ರಹಿಸಿ ಕಲ್ಲು ಹೊತ್ತು ಶಾಸಕ ಶಿವಾನಂದ ಪಾಟೀಲ್ ಬೆಂಬಲಿಗನಿಂದ ಪ್ರತಿಭಟನೆ

    ಸಚಿವ ಸ್ಥಾನಕ್ಕೆ ಆಗ್ರಹಿಸಿ ಕಲ್ಲು ಹೊತ್ತು ಶಾಸಕ ಶಿವಾನಂದ ಪಾಟೀಲ್ ಬೆಂಬಲಿಗನಿಂದ ಪ್ರತಿಭಟನೆ

    ವಿಜಯಪುರ: ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ನಡೆದ ಭಾರೀ ಹೈಡ್ರಾಮಾಕ್ಕೆ ಕೊನೆಗೂ ತೆರೆಬಿದ್ದಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.

    ಈ ಮಧ್ಯೆ ಸದ್ಯ ಸಚಿವ ಸ್ಥಾನ ಯಾರು ಯಾರಿಗೆಲ್ಲ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಮೈತ್ರಿ ಸರ್ಕಾರ ರಚನೆ ಸಾಧ್ಯತೆ ಹಿನ್ನೆಲೆಯಲ್ಲಿ ಶಾಸಕ ಶಿವಾನಂದ ಪಾಟೀಲಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಕೇಳಿಬರುತ್ತಿದೆ.

    ಬಸವನ ಬಾಗೇವಾಡಿ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಬೆಂಬಲಿಗ ತಮ್ಮಣ್ಣ ಕಾನಗಡ್ಡಿ ಅವರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಬಾಗೇವಾಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆಯಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕಲ್ಲು ಹೊತ್ತು ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ. ಈ ಪ್ರತಿಭಟನೆಗೆ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರು ಸಾಥ್ ನೀಡಿದ್ದಾರೆ.