Tag: Ministry of Health

  • ಭಾನುವಾರ ನಡೆಯಬೇಕಿದ್ದ ನೀಟ್-ಪಿ.ಜಿ ಪರೀಕ್ಷೆ ಮುಂದೂಡಿಕೆ

    ಭಾನುವಾರ ನಡೆಯಬೇಕಿದ್ದ ನೀಟ್-ಪಿ.ಜಿ ಪರೀಕ್ಷೆ ಮುಂದೂಡಿಕೆ

    ನವದೆಹಲಿ: ಜೂನ್ 23ರಂದು ನಡೆಯಬೇಕಿದ್ದ ನೀಟ್-ಪಿಜಿ (NEET-PG) ಪರೀಕ್ಷೆಯನ್ನು ಮುಂದೂಡಲಾಗಿದೆ ಮತ್ತು ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಆರೋಗ್ಯ ಸಚಿವಾಲಯ (Ministry Of Health)ತಿಳಿಸಿದೆ.

    ನೀಟ್-ಪಿ.ಜಿ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳಲ್ಲಿನ ಅಕ್ರಮಗಳ ಆರೋಪ ಹಿನ್ನೆಲೆ ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಾಳೆ (ಜೂನ್ 23) ನಡೆಯಲಿರುವ ನೀಟ್-ಪಿಜಿಯನ್ನು ಮುಂದೂಡಲು ನಿರ್ಧರಿಸಲಾಗಿದೆ. ಈ ಪರೀಕ್ಷೆಯ ಹೊಸ ದಿನಾಂಕವನ್ನು ಶೀಘ್ರವಾಗಿ ತಿಳಿಸಲಾಗುವುದು. ವಿದ್ಯಾರ್ಥಿಗಳಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಕರಾವಳಿಗೆ ವರ್ಷಧಾರೆಯ ಎಚ್ಚರಿಕೆ- ಇತ್ತ ಹಾವೇರಿಯಲ್ಲಿ ವಿಚಿತ್ರ ಆಚರಣೆ

    ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರತೆಯ ಬಗ್ಗೆ ಇತ್ತೀಚಿನ ಆರೋಪಗಳನ್ನು ಪರಿಗಣಿಸಿ, ಆರೋಗ್ಯ ಸಚಿವಾಲಯವು ವೈದ್ಯಕೀಯ ವಿದ್ಯಾರ್ಥಿಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ನಡೆಸುವ ನೀಟ್-ಯುಜಿ ಪ್ರವೇಶ ಪರೀಕ್ಷೆಯ ಪ್ರಕ್ರಿಯೆಗಳ ದೃಢತೆಯ ಸಂಪೂರ್ಣ ಮೌಲ್ಯಮಾಪನವನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್‌ಗಳಿಗೆ ತೆರಿಗೆ ಇಲ್ಲ- GST ಸಭೆಯಲ್ಲಿ ಮಹತ್ವದ ನಿರ್ಧಾರ

    ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಪರೀಕ್ಷೆಯ ಪಾವಿತ್ರ‍್ಯತೆ ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿದೆ. ಇದನ್ನೂ ಓದಿ: ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ: ಡಾ. ಸೂರಜ್‌ ರೇವಣ್ಣ

  • ರೋಗಿ, ಕುಟುಂಬಸ್ಥರು ಒಪ್ಪದಿದ್ದರೆ ICUಗೆ ದಾಖಲಿಸುವಂತಿಲ್ಲ- ಕೇಂದ್ರದಿಂದ ಆಸ್ಪತ್ರೆಗಳಿಗೆ ಹೊಸ ರೂಲ್ಸ್‌

    ರೋಗಿ, ಕುಟುಂಬಸ್ಥರು ಒಪ್ಪದಿದ್ದರೆ ICUಗೆ ದಾಖಲಿಸುವಂತಿಲ್ಲ- ಕೇಂದ್ರದಿಂದ ಆಸ್ಪತ್ರೆಗಳಿಗೆ ಹೊಸ ರೂಲ್ಸ್‌

    ನವದೆಹಲಿ: ಆಸ್ಪತ್ರೆಗಳಲ್ಲಿ ರೋಗಿಗಳನ್ನು ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸುವ ಕುರಿತು ಕೇಂದ್ರ ಸರ್ಕಾರವು (Central Government) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

    ಸಾಮಾನ್ಯವಾಗಿ ರೋಗಿಯ ಸ್ಥಿತಿ ಗಂಭಿರ ಇದ್ದರೆ ವೈದ್ಯರು ಐಸಿಯುನಲಿ ಚಿಕಿತ್ಸೆ ಕೊಡಿಸುತ್ತಾರೆ. ಆದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ಇನ್ನು ಮುಂದೆ ಈ ರೀತಿ ಮಾಡುವಂತಿಲ್ಲ. ರೋಗಿ ಅಥವಾ ಆತನ ಕುಟುಂಬಸ್ಥರು ಒಪ್ಪಿಗೆ ನೀಡಿದರೆ ಮಾತ್ರ ಆತನಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಬಹುದಾಗಿದೆ. ಬಲವಂತವಾಗಿ ಯಾವುದೇ ರೋಗಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುವಂತಿಲ್ಲ.

    ಕೇಂದ್ರದ ಆರೋಗ್ಯ ಸಚಿವಾಲಯ ಹೊರಡಿಸಿರುವ ಈ ಮಾರ್ಗಸೂಚಿಗಳನ್ನು 24 ಮಂದಿ ತಜ್ಞರು ಚರ್ಚಿಸಿ ಬಿಡುಗಡೆ ಮಾಡಿದ್ದಾರೆ. ರೋಗಿಗೆ ಹೆಚ್ಚಿನ ಚಿಕಿತ್ಸೆ ಪ್ರಯೋಜನವಿಲ್ಲದಿದ್ದಲ್ಲಿ ಅಥವಾ ಯಾವುದೇ ಚಿಕಿತ್ಸೆಯಿಂದ ರೋಗಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲು ಸಾಧ್ಯವಾಗದಿದ್ದಲ್ಲಿ ಆತ ಅಥವಾ ಆಕೆಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸುವುದು ವ್ಯರ್ಥ ಎಂದು ಹೇಳಲಾಗಿದೆ.

    ಸಾಂಕ್ರಾಮಿಕ ರೋಗಗಳು, ವಿಪತ್ತು ಸಂದರ್ಭಗಳಲ್ಲಿ ರೋಗಿಯನ್ನು ಐಸಿಯುಗೆ ದಾಖಲಿಸಬಹುದು. ರೋಗಿಯ ಅಂಗಾಂಗ ವೈಫಲ್ಯ, ಅಂಗಾಂಗ ಕಸಿ ಅಥವಾ ಹದಗೆಡುತ್ತಿರುವ ವೈದ್ಯಕೀಯ ಸ್ಥಿತಿಯನ್ನು ಅವಲೋಕಿಸಿ ಐಸಿಯುಗೆ ಪ್ರವೇಶ ನೀಡಬೇಕು. ಅಲ್ಲದೆ ರೋಗಿಯ ಪ್ರಜ್ಞಾಹೀನತೆ, ಹೆಮೊಡೈನಮಿಕ್ ಅಸ್ಥಿರತೆ, ಉಸಿರಾಟದ ಸಮಸ್ಯೆ ಹೀಗೆ ತೀವ್ರವಾಗಿ ಅನಾರೋಗ್ಯ ಪೀಡಿತರಾಗಿದ್ದರೆ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಬಹುದು ಎಂದು ರೂಲ್ಸ್‌ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ನಾನು ಸತ್ತೇ ಹೋದೆ ಅಂದ್ಕೊಂಡೆ – ಅವಘಡಕ್ಕೀಡಾದ ವಿಮಾನದೊಳಗಿದ್ದ ಪ್ರಯಾಣಿಕ

    ಒಟ್ಟಾರೆಯಾಗಿ ರೋಗಿಯ ಸಂಬಂಧಿಕರು ಐಸಿಯುನಲ್ಲಿ ಚಿಕಿತ್ಸೆ ಬೇಡ ಎಂದು ಹೇಳಿದರೆ ಅಂತಹ ರೋಗಿಗಳನ್ನು ಐಸಿಯುಗೆ ದಾಖಲಿಸಿಕೊಳ್ಳುವಂತಿಲ್ಲ. ಇನ್ನು ಮಾರ್ಗಸೂಚಿ ಪ್ರಕಾರ, ಐಸಿಯುಗೆ ಸೇರಿಸುವ ಮೊದಲು ರಕ್ತದೊತ್ತಡ, ನಾಡಿ ಬಡಿತ, ಹೃದಯ ಬಡಿತ, ಆಮ್ಲಜನಕ ಹೀರಿಕೊಳ್ಳುವ ಸಾಮರ್ಥ್ಯ, ಮೂತ್ರ ವಿಸರ್ಜನೆಯ ಪ್ರಮಾಣ, ನರದ ಸ್ಥಿತಿಗತಿ ಮೊದಲಾದವುಗಳ ಪರಿಶೀಲನೆಯ ಬಳಿಕವೇ ರೋಗಿಯನ್ನು ಐಸಿಯುಗೆ ದಾಖಲಿಸಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

  • ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 1,033 ಪಾಸಿಟಿವ್, 43 ಸಾವು

    ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 1,033 ಪಾಸಿಟಿವ್, 43 ಸಾವು

    ನವದೆಹಲಿ: ಗುರುವಾರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,033 ಮಂದಿಗೆ ಕೊರೊನಾ ಬಂದರೆ 43 ಮಂದಿ ಮೃತಪಟ್ಟಿದ್ದಾರೆ.

    ಇದುವರೆಗೆ ಕೋವಿಡ್‍ನಿಂದಾಗಿ ಭಾರತದಲ್ಲಿ ಒಟ್ಟು 5,21,530 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 11,639 ರಷ್ಟಿದೆ. ಪಾಸಿಟಿವಿಟಿ ದರ ಶೇ.0.21 ಇದೆ. ಕಳೆದ ವಾರ ಶೇ.0.22 ಇತ್ತು. ಇಲ್ಲಿಯವರೆಗೆ 4,24,98,789 ಮಂದಿ ಗುಣಮುಖರಾಗಿದ್ದಾರೆ. ಇದನ್ನೂ ಓದಿ: ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ

    ಆರೋಗ್ಯ ಸಚಿವಾಲಯ ಹೊರಡಿಸಿದ ಅಂಕಿಅಂಶಗಳ ಪ್ರಕಾರ, ಇದುವರೆಗೆ 79.25 ಕೋಟಿ ಕೋವಿಡ್-19 ಪರೀಕ್ಷೆಗಳನ್ನು ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 4,24,98,789 ಮಂದಿಗೆ ಪರೀಕ್ಷೆ ಮಾಡಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ‘ಬಿಗ್ ಬ್ರದರ್’ ಎಂದು ಭಾರತ, ಮೋದಿಗೆ ಧನ್ಯವಾದ ಹೇಳಿದ ಲಂಕಾ ಕ್ರಿಕೆಟಿಗ ಜಯಸೂರ್ಯ

    COVID-19

    ಮುಂಬೈನಲ್ಲಿ ಕೋವಿಡ್-19ನ `ಎಕ್ಸ್‌ಇ` ರೂಪಾಂತರದ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಗ್ರೇಟರ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಬುಧವಾರ ಹೇಳಿದೆ. ಆದಾಗ್ಯೂ, ಕೇಂದ್ರ ಆರೋಗ್ಯ ಸಚಿವಾಲಯವು ದೇಶದಲ್ಲಿ ಮೊದಲ ‘ಎಕ್ಸ್‍ಇ’ ರೂಪಾಂತರದ ಪತ್ತೆಯನ್ನು ಇನ್ನೂ ಖಚಿತಪಡಿಸಿಲ್ಲ.

  • ಶೀಘ್ರವೇ ಕೋವಿಡ್-19 ಕಾಲರ್ ಟ್ಯೂನ್ ಬಂದ್?

    ಶೀಘ್ರವೇ ಕೋವಿಡ್-19 ಕಾಲರ್ ಟ್ಯೂನ್ ಬಂದ್?

    ನವದೆಹಲಿ: ಕೋವಿಡ್-19 ಪ್ರಕರಣಗಳ ಇಳಿಕೆಯ ಮಧ್ಯೆ, ಕೊರೊನಾ ವೈರಸ್ ಜಾಗೃತಿ ಮತ್ತು ಮುನ್ನೆಚ್ಚರಿಕೆಗಳ ಕುರಿತು ಕಾಲರ್ ಟ್ಯೂನ್ ಅನ್ನು ನಿಲ್ಲಿಸಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

    ಕೋವಿಡ್-19 ಕಾಲರ್ ಟ್ಯೂನ್ ಅನ್ನು ಎರಡು ವರ್ಷಗಳ ಹಿಂದೆ ಸಾಂಕ್ರಾಮಿಕ ರೋಗವು ದೇಶವನ್ನು ಹಬ್ಬಿದಾಗ ಪ್ರಾರಂಭಿಸಲಾಯಿತು. ಇದನ್ನೂ ಓದಿ: ಒಟ್ಟು 48 ಕೇಸ್ – ಬೆಂಗಳೂರು ಸಹಿತ 4 ಜಿಲ್ಲೆಗಳಲ್ಲಿ ಮಾತ್ರ ಕೊರೊನಾ ಪ್ರಕರಣ

    COVIDಏರ್‌ಟೆಲ್, ಬಿಎಸ್‍ಎನ್‍ಎಲ್, ರಿಲಯನ್ಸ್, ಜಿಯೋ ಮತ್ತು ವೊಡಾಫೋನ್-ಐಡಿಯಾ ಸೇರಿದಂತೆ ಆಪರೇಟರ್‌ಗಳು ತಮ್ಮ ಕಾಲರ್ ಟ್ಯೂನ್‍ಗಳನ್ನು ಮಾರ್ಚ್ 2020ರಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಬದಲಾಯಿಸಿದ್ದರು. ಆರಂಭದಲ್ಲಿ ಕೋವಿಡ್-19 ನಲ್ಲಿನ ಕಾಲರ್ ಟ್ಯೂನ್‍ಗಳಲ್ಲಿ ಜನರು ಕೆಮ್ಮುವುದು, ಸೀನುವುದು ಮತ್ತು ನಂತರ ಕೊರೊನಾ ವೈರಸ್‍ನಿಂದ ರಕ್ಷಿಸಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಸಲಹೆಯೊಂದಿಗೆ ಪ್ರಾರಂಭವಾಗುತ್ತಿತ್ತು. ಇದನ್ನೂ ಓದಿ: ಚನ್ನಣ್ಣನವರ್ ವಿರುದ್ಧ ಸಿಬಿಐ ತನಿಖೆ ಕೋರಿ ಹೈಕೋರ್ಟ್‌ಗೆ ಜಗದೀಶ್‌ ಅರ್ಜಿ

    ನಂತರದಲ್ಲಿ ಅದನ್ನ ಬದಲಾಯಿಸಲಾಯಿತು. ಹೊಸ ಸಂದೇಶವು ಜನರನ್ನು ಲಸಿಕೆ ಹಾಕುವಂತೆ ಮಾಹಿತಿ ನೀಡುತ್ತಿದೆ. ಪ್ರತಿ ತಿಂಗಳು ಕೊರೊನಾವೈರಸ್ ಪ್ರಕರಣಗಳು ಕಡಿಮೆಯಾಗುತ್ತಿವೆ. ಸೋಮವಾರ ಭಾರತದಲ್ಲಿ 1,270 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ.

  • ರಾಜ್ಯಗಳಿಗೆ 25 ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದೆ – ಕೇಂದ್ರ ಸರ್ಕಾರ

    ರಾಜ್ಯಗಳಿಗೆ 25 ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದೆ – ಕೇಂದ್ರ ಸರ್ಕಾರ

    ನವದೆಹಲಿ: ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈವರೆಗೆ 25,06,41,440 ಕೋವಿಡ್-19 ಲಸಿಕೆಯನ್ನು ಕೇಂದ್ರ ಸರ್ಕಾರ ಉಚಿತವಾಗಿ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

    ಇಂದಿನವರೆಗೂ ನೀಡಲಾದ ಲಸಿಕೆ ಹಾಗೂ ವ್ಯರ್ಥವಾದ ಲಸಿಕೆ ಸೇರಿಸಿದಂತೆ 23,74,21,808 ಲಸಿಕೆಗಳನ್ನು ಬಳಸಲಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಇನ್ನೂ 1,33,68,727 ಕೋವಿಡ್ ಲಸಿಕೆ ಪ್ರಮಾಣಗಳು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಲಭ್ಯವಿದೆ. ಅಲ್ಲದೆ 3 ಲಕ್ಷಕ್ಕೂ ಹೆಚ್ಚು(3,81,750) ಲಸಿಕೆ ಪ್ರಮಾಣವನ್ನು ರವಾನಿಸಲಾಗುತ್ತಿದ್ದು, ಮುಂದಿನ ಮೂರು ದಿನಗಳ ಒಳಗೆ ರಾಜ್ಯಗಳು ಲಸಿಕೆಗಳನ್ನು ಸ್ವೀಕರಿಸಲಿದೆ. ಇದನ್ನು ಓದಿ: ಕೊರೊನಾಗೆ ಹೆದರಿ ಊರು ಬಿಟ್ಟು ಗುಡಿಸಲಲ್ಲಿ ಕುಟುಂಬ ಜೀವನ

    ವ್ಯಾಕ್ಸಿನೇಷನ್ ಡ್ರೈವ್‍ನ ಮೂರನೇ ಹಂತವನ್ನು ಈಗಾಗಲೇ ಮೇ 1ರಿಂದ ಆರಂಭಿಸಲಾಗಿದೆ. ಜೂನ್21 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಭಾರತೀಯ ನಾಗರಿಕರಿಗೆ ಕೇಂದ್ರ ಸರ್ಕಾರದಿಂದಲೇ ಉಚಿತವಾಗಿ ಕೊರೊನಾ ಲಸಿಕೆಯನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಪ್ರಕಟಿಸಿದ್ದಾರೆ.

  • ಜೂನ್‍ನಲ್ಲಿ 12 ಕೋಟಿ ಡೋಸ್ ಕೊರೊನಾ ಲಸಿಕೆ ಲಭ್ಯ- ಕೇಂದ್ರ ಆರೋಗ್ಯ ಸಚಿವಾಲಯ

    ಜೂನ್‍ನಲ್ಲಿ 12 ಕೋಟಿ ಡೋಸ್ ಕೊರೊನಾ ಲಸಿಕೆ ಲಭ್ಯ- ಕೇಂದ್ರ ಆರೋಗ್ಯ ಸಚಿವಾಲಯ

    ನವದೆಹಲಿ: ಜನ ಕೊರೊನಾ ಲಸಿಕೆಗಾಗಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆದರೆ ವ್ಯಾಕ್ಸಿನ್ ಕೊರತೆ ಮಾತ್ರ ಕಾಡುತ್ತಿದೆ. ಮುಂಬರುವ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಲಸಿಕೆ ಸಿಗುವಂತೆ ಮಾಡಲು ಸರ್ಕಾರ ಪ್ಲಾನ್ ಮಾಡಿಕೊಂಡಿದ್ದು, ಜೂನ್‍ನಲ್ಲಿ ಬರೋಬ್ಬರಿ 12 ಕೋಟಿ ಡೋಸ್ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಲಸಿಕೆಗಳ ಬೃಹತ್ ಉತ್ಪಾದನೆ ಹಲವು ರಾಜ್ಯಗಳಿಗೆ ವರದಾನವಾಗಲಿದ್ದು, ಇದೀಗ ಎದುರಿಸುತ್ತಿರುವ ಕೊರತೆಯನ್ನು ತಗ್ಗಿಸಲಿದೆ. ಇದೀಗ ಕೊರೊನಾ ಲಸಿಕೆಗಾಗಿ ಭಾರೀ ಪ್ರಮಾಣದ ಬೇಡಿಕೆ ಇದ್ದು, ಜನ ಕಿಲೋಮೀಟರ್‍ಗಟ್ಟಲೇ ಸರತಿಯಲ್ಲಿ ನಿಂತು ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ ಲಸಿಕೆ ಕೊರತೆ ಮಾತ್ರ ಕಾಡುತ್ತಿದೆ. ಹೀಗಾಗಿ ಲಸಿಕೆ ಲಭ್ಯತೆ ಬಗ್ಗೆ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿದ್ದು, ಜೂನ್ ನಲ್ಲಿ 12 ಕೋಟಿ ಡೋಸ್ ಲಸಿಕೆ ಸಿಗಲಿದೆ ಎಂದು ಹೇಳಿದೆ. ಇದನ್ನೂ ಓದಿ: ಇಂದು 20,378 ಹೊಸ ಕೊರೊನಾ ಪ್ರಕರಣ – ಪಾಸಿಟಿವಿಟಿ ರೇಟ್ ಶೇ.14.68

    ಈ ವರೆಗೆ 18-44 ವರ್ಷ ವಯಸ್ಸಿನ 14.15 ಲಕ್ಷ ಜನ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಶನಿವಾರ ಒಂದೇ ದಿನ 18-44 ವರ್ಷದ 9,075 ಜನ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಒಟ್ಟಾರೆಯಾಗಿ ಕೊರೊನಾ ಲಸಿಕೆಯ 3ನೇ ಹಂತ ಆರಾಂಭವಾದಾಗಿನಿಂದ ದೇಶಾದ್ಯಂತ 1.82 ಕೋಟಿ ಜನ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ.

    ಬಿಹಾರ, ದೆಹಲಿ, ಗುಜರಾತ್, ಮಧ್ಯ ಪ್ರದೇಶ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ 18-44 ವರ್ಷದೊಳಗಿನ 10 ಲಕ್ಷಕ್ಕೂ ಅಧಿಕ ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಶನಿವಾರದ ವರೆಗೆ ದೇಶದಲ್ಲಿ 21.18 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

    ಒಟ್ಟು 21.18 ಕೋಟಿ ಡೋಸ್ ಲಸಿಕೆ ಪೈಕಿ, 98.61 ಲಕ್ಷ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಲಸಿಕೆ ಪಡೆದಿದ್ದು, 67.71 ಲಕ್ಷ ಜನ ಆರೋಗ್ಯ ಕಾರ್ಯಕರ್ತರು 2ನೇ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. 1.55 ಕೋಟಿ ಜನ ಫ್ರಂಟ್‍ಲೈನ್ ವಾರಿಯರ್ಸ್ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 84.87 ಲಕ್ಷ ಜನ ಫ್ರಂಟ್ ಲೈನ್ ವಾರಿಯರ್ಸ್ 2ನೇ ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ.

    ಒಟ್ಟು 18-44 ವರ್ಷದ 1.82 ಕೋಟಿ ಹಾಗೂ 9,373 ಜನ ಕ್ರಮವಾಗಿ ಮೊದಲ ಹಾಗೂ ಎರಡನೇ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. 45-60 ವರ್ಷದ 6.53 ಕೋಟಿ ಹಾಗೂ 1.05 ಕೋಟಿ ಜನ ಕ್ರಮವಾಗಿ ಮೊದಲ ಹಾಗೂ 2ನೇ ಡೋಸ್ ಲಸಿಕೆ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟ 5.84 ಕೋಟಿ ಹಾಗೂ 1.86 ಕೋಟಿ ಜನರು ಕ್ರಮವಾಗಿ ಮೊದಲ ಹಾಗೂ 2ನೇ ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

  • 75 ಲಕ್ಷ ಗಡಿಯತ್ತ ಸೋಂಕಿತರ ಸಂಖ್ಯೆ- 61 ಸಾವಿರ ಹೊಸ ಪ್ರಕರಣಗಳು ಪತ್ತೆ

    75 ಲಕ್ಷ ಗಡಿಯತ್ತ ಸೋಂಕಿತರ ಸಂಖ್ಯೆ- 61 ಸಾವಿರ ಹೊಸ ಪ್ರಕರಣಗಳು ಪತ್ತೆ

    – 24 ಗಂಟೆಗಳಲ್ಲಿ 1033 ಜನ ಸಾವು

    ನವದೆಹಲಿ: ದೇಶದಲ್ಲಿ ಕೊರೊನಾ ರುದ್ರ ತಾಂಡವ ಮುಂದುವರಿದಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 75 ಲಕ್ಷದ ಗಡಿಯತ್ತ ಸಾಗಿದೆ.

    ಕಳೆದ 24 ಗಂಟೆಗಳಲ್ಲಿ 61,871 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 1033 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 74,94,552ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 11,776 ಪ್ರಕರಣಗಳು ಕಡಿಮೆಯಾಗಿವೆ. ಅಕ್ರಿಯ ಪ್ರಕರಣಗಳ ಸಂಖ್ಯೆ 7,83,311ಕ್ಕೆ ತಲುಪಿದೆ.

    ಒಟ್ಟು 65,97,210 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ನಿನ್ನೆಯಿಂದ ಗುಣಮುಖರಾಗುವವರ ಸಂಖ್ಯೆ 72,615ಕ್ಕೆ ಹೆಚ್ಚಿದೆ. ಕೊರೊನಾಗೆ ಬಲಿಯಾದವರ ಒಟ್ಟು ಸಂಖ್ಯೆ 1,14,031ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 1,033 ಜನ ಸಾವನ್ನಪ್ಪಿದ್ದಾರೆ. ಹೊಸ ಪ್ರಕರಣಳು ಪತ್ತೆಯಾಗುವುದರಲ್ಲಿ ಇಳಿಕೆ ಕಂಡಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.

    ಒಟ್ಟು 11 ರಾಜ್ಯಗಳಲ್ಲಿ 25 ಸಾವಿರಕ್ಕೂ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ. 12 ರಾಜ್ಯಗಳಲ್ಲಿ 25,001 ರಿಂದ 2 ಲಕ್ಷದ ವರೆಗೆ ಸೋಂಕಿತರು ಪತ್ತೆಯಾಗಿದ್ದಾರೆ. ಉಳಿದ 12 ರಾಜ್ಯಗಳಲ್ಲಿ 2 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದೆಲ್ಲದರ ಮಧ್ಯೆ ಪ್ರಪಂಚದಲ್ಲೇ ಅತೀ ಹೆಚ್ಚು ಹಾಗೂ ವೇಗವಾಗಿ ಗುಣಮುಖರಾಗುತ್ತಿದ್ದಾರೆ.

    ಕೊರೊನಾ ಪರೀಕ್ಷಾ ಸಾಮಥ್ರ್ಯವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು. ಪ್ರಸ್ತುತ 9.32 ಕೋಟಿ ಜನರಿಗೆ ಪರೀಕ್ಷೆ ನಡೆಸಲಾಗಿದೆ. ಕೊರೊನಾ ಟೆಸ್ಟಿಂಗ್ ಸಾಮಥ್ರ್ಯವನ್ನು ಹೆಚ್ಚಿಸಿದ್ದರಿಂದಲೇ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡಿದೆ. ಸೋಂಕಿತರ ಪ್ರಮಾಣ ಶೇ.8 ರಷ್ಟುಕ್ಕೂ ಕಡಿಮೆಗೆ ಕುಸಿದೆ.

  • ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದಾಗ ಮಾಸ್ಕ್ ಧರಿಸೋ ಅಗತ್ಯವಿಲ್ಲ: ಕೇಂದ್ರ ಸರ್ಕಾರ

    ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದಾಗ ಮಾಸ್ಕ್ ಧರಿಸೋ ಅಗತ್ಯವಿಲ್ಲ: ಕೇಂದ್ರ ಸರ್ಕಾರ

    ನವದೆಹಲಿ: ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಾಸ್ಕ್ ಧರಿಸಬೇಕೆಂಬ ಯಾವುದೇ ಸಲಹೆ ಬಂದಿಲ್ಲ. ಆದ್ದರಿಂದ ಒಬ್ಬರೇ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಮಾಸ್ಕ್ ಧರಿಸದಿರುವುದು ನಿಯಮಗಳ ಉಲ್ಲಂಘನೆ ಅಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

    ಕೋವಿಡ್ ನಿರ್ವಹಣೆ ಕುರಿತು ಪ್ರತಿಕಾಗೋಷ್ಠಿಯಲ್ಲಿ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಈ ಕುರಿತು ಮಾಹಿತಿ ನೀಡಿದ್ದಾರೆ. ಒಂದೇ ಗುಂಪಿನಲ್ಲಿ ವ್ಯಾಯಾಮ ಮಾಡುವವರು ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಬೇಕು. ಆದರೆ ವಾಹನದ ಒಳಗೆ ಒಬ್ಬರೇ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಹಾಗೂ ಏಕಾಂಗಿಯಾಗಿ ಸೈಕಲ್ ತುಳಿಯುದ್ದರೆ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದಿದ್ದಾರೆ.

    ಪ್ರಮುಖವಾಗಿ ದೆಹಲಿಯಲ್ಲಿ ಜನರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸ್ ದಂಡ ವಿಧಿಸುತ್ತಿದ್ದ ಕುರಿತು ಹಲವು ಸುದ್ದಿಗಳು ವರದಿಯಾಗಿತ್ತು. ಪೊಲೀಸರು ದಂಡ ವಿಧಿಸುವ ವೇಳೆ ಕೆಲ ಪ್ರತಿಕೆಗಳ ವರದಿಗಳನ್ನು ತೋರಿಸುತ್ತಿದ್ದರು. ಆದರೆ ಸರ್ಕಾರದಿಂದ ಈ ಕುರಿತು ಯಾವುದೇ ನಿರ್ದೇಶನ ಆಗಿರಲಿಲ್ಲ. ಈ ಕೇಳಿ ಬಂದ ದೂರುಗಳ ಹಿನ್ನೆಲೆಯಲ್ಲಿ ಸಚಿವಾಲಯ ಸ್ಪಷ್ಟನೆ ನೀಡಿದೆ.

  • ನಮ್ಮಲ್ಲಿ ಅಗತ್ಯಕ್ಕಿಂತಲೂ 2.28 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿವೆ

    ನಮ್ಮಲ್ಲಿ ಅಗತ್ಯಕ್ಕಿಂತಲೂ 2.28 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿವೆ

    – ಕೊರೊನಾ ಸಮುದಾಯ ಪ್ರಸಾರ ಹಂತಕ್ಕೆ ಕಾಲಿಟ್ಟಿಲ್ಲ
    – 24 ಗಂಟೆಗಳಲ್ಲಿ 678 ಮಂದಿಗೆ ಸೋಂಕು, 33 ಜನ ಸಾವು

    ನವದೆಹಲಿ: ನಮಗೆ 1 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಅವಶ್ಯಕತೆಯಿದೆ. ಆದರೆ ನಮ್ಮಲ್ಲಿ ಈಗ 3.28 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ.

    ದೆಹಲಿಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುರುವಾರ ನಾವು 16,002 ಕೊರೊನಾ ಪರೀಕ್ಷೆಗಳನ್ನು ನಡೆಸಿದ್ದೇವೆ. ಕೇವಲ ಶೇ.0.2 ಪ್ರಕರಣಗಳು ಮಾತ್ರ ಪಾಸಿಟಿವ್ ಬಂದಿವೆ. ಸಂಗ್ರಹಿಸಿದ ಮಾದರಿಗಳ ಆಧಾರದ ಮೇಲೆ ಹೇಳುವುದಾದರೆ ಸೋಂಕಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ ಎನ್ನುವುದು ತಿಳಿಯುತ್ತಿದೆ ಎಂದು ತಿಳಿಸಿದ್ದಾರೆ.

    ಕಳೆದ 24 ಗಂಟೆಗಳಲ್ಲಿ 678 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 33 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,412ಕ್ಕೆ ಏರಿದರೆ, ಮೃತರ ಸಂಖ್ಯೆ 199 ಆಗಿದೆ. ಈವರೆಗೂ 503 ಜನರು ಚೇತರಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

    ಕೋವಿಡ್-19 ವಿರುದ್ಧದ ಹೋರಾಟಕ್ಕೆ ಆರೋಗ್ಯ ಕಾರ್ಯಕರ್ತರು ಮುಂಚೂಣಿಯಲ್ಲಿದ್ದಾರೆ. ಅವರೊಂದಿಗೆ ಯಾವುದೇ ರೀತಿಯ ಅಸಭ್ಯ ವರ್ತನೆ ತೋರುವುದು ಸರಿಯಲ್ಲ. ಇಂತಹ ಘಟನೆಗಳು ಅವರ ಸ್ಥೈರ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ ಎಂದು ಎಚ್ಚರಿಕೆ ನೀಡಿದರು.

    ದೇಶದಲ್ಲಿ ಇನ್ನೂ ಕೊರೊನಾ ವೈರಸ್ ಮೂರನೇ ಹಂತ (ಸಮುದಾಯ ಪ್ರಸಾರ)ಕ್ಕೆ ಕಾಲಿಟ್ಟಿಲ್ಲ. ಹೀಗಾಗಿ ಭಯಪಡುವ ಅಗತ್ಯವಿಲ್ಲ. ಆದರೆ ಜಾಗರೂಕರಾಗಿರಿ ಮತ್ತು ಎಚ್ಚರಕೆಯಿಂದ. ಆರೋಗ್ಯ ಇಲಾಖೆ ಕೂಡ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಗಳುತ್ತಿದೆ ಎಂದು ಹೇಳಿದರು.

    ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿ ದಮ್ಮು ರವಿ ಮಾತನಾಡಿ, ನಾವು ಗುರುವಾರ 20,473 ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಿದ್ದೇವೆ. ನಾವು ಅತ್ಯುತ್ತಮ ಸಹಕಾರವನ್ನು ಪಡೆಯುತ್ತಿದ್ದೇವೆ. ಇದೆಲ್ಲ ಕೇಂದ್ರ ಸರ್ಕಾರದ ಪ್ರಯತ್ನ ಎಂದು ತಿಳಿಸಿದರು.

    ಹೈಡ್ರಾಕ್ಸಿಕ್ಲೋರೋಕ್ವಿನ್ ಬಗ್ಗೆ ಸಾಕಷ್ಟು ವಿನಂತಿಗಳು ಈಗಾಗಲೇ ಬಂದಿವೆ. ಹಲವಾರು ದೇಶಗಳು ಈ ಔಷಧಿಗೆ ವಿನಂತಿಗಳನ್ನು ಮಾಡಿಕೊಂಡಿವೆ. ಆದರೆ ದೇಶೀಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಔಷಧಿಯನ್ನು ಸಂಗ್ರಹಿಸಿದ್ದೇವೆ. ಕೆಲವು ಹೆಚ್ಚುವರಿ ಔಷಧಿಗಳನ್ನು ರಫ್ತು ಉದ್ದೇಶಗಳಿಗಾಗಿ ಬಿಡುಗಡೆ ಮಾಡಲು ಮಂತ್ರಿ ಮಂಡಳಿ ತೀರ್ಮಾನಿಸಿದೆ. ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

    ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ಮಾತನಾಡಿ, ಕೋವಿಡ್-19 ವಿರುದ್ಧ ಹೋರಾಡಲು ಏಪ್ರಿಲ್ ತಿಂಗಳಲ್ಲಿ ನಡೆಯಬೇಕಿದ್ದ ಉತ್ಸವಗಳನ್ನು ಕೈಬಿಡಬೇಕು. ಜೊತೆಗೆ ಲಾಕ್‍ಡೌನ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸುವ ಬಗ್ಗೆ ಖಚಿತಪಡಿಸಿಕೊಳ್ಳಲು ಎಂಎಚ್‍ಎ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ ಎಂದು ಹೇಳಿದರು.

    ಗಡಿ ಭದ್ರತಾ ಅಧಿಕಾರಿಗಳೊಂದಿಗೆ ಇಂಡೋ-ಪಾಕ್ ಮತ್ತು ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ ಭದ್ರತೆ ಕುರಿತು ಗೃಹ ಸಚಿವರು ಪರಿಶೀಲನಾ ಸಭೆ ನಡೆಸಿದ್ದಾರೆ. ಫೆನ್ಸಿಂಗ್ ಇಲ್ಲದ ಪ್ರದೇಶಗಳಲ್ಲಿ ಸುರಕ್ಷತೆಯನ್ನು ಬಿಗಿಗೊಳಿಸಲು ಮತ್ತು ಗಡಿಯಾಚೆ ಯಾರು ಸುಳಿದಾಟದಂತೆ ನೋಡಿಕೊಳ್ಳಲು ಆದೇಶಿಸಿದ್ದಾರೆ ಎಂದು ಪುಣ್ಯ ಸಲೀಲಾ ಶ್ರೀವಾಸ್ತವ ಮಾಹಿತಿ ನೀಡಿದರು.

  • ದೆಹಲಿ, ತೆಲಂಗಾಣದಲ್ಲಿ ಮತ್ತೆರಡು ಕೊರೊನಾ ಪ್ರಕರಣ ಪತ್ತೆ

    ದೆಹಲಿ, ತೆಲಂಗಾಣದಲ್ಲಿ ಮತ್ತೆರಡು ಕೊರೊನಾ ಪ್ರಕರಣ ಪತ್ತೆ

    – ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ
    – 70 ದೇಶಕ್ಕೆ ಹಬ್ಬಿದ ವೈರಸ್

    ನವದೆಹಲಿ: ಪ್ರಪಂಚವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ನಮ್ಮ ದೇಶಕ್ಕೂ ಕಾಲಿಟ್ಟಿದ್ದು, ಕೇರಳದಲ್ಲಿ ಮೂವರಲ್ಲಿ ಕಾಣಿಸಿಕೊಂಡ ಬಳಿಕ ಇದೀಗ ದೆಹಲಿ ಹಾಗೂ ತೆಲಂಗಾಣದ ಇಬ್ಬರಲ್ಲಿ ಪತ್ತೆಯಾಗಿದೆ. ಇಬ್ಬರ ಆರೋಗ್ಯವೂ ಸ್ಥಿರವಾಗಿದ್ದು, ಎಚ್ಚರಿಕೆಯಿಂದ ನಿಭಾಯಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

    ಈ ಕುರಿತು ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ಆರೋಗ್ಯ ಸಚಿವಾಲಯ, ಕೊರೊನಾ ವೈರಸ್ ತಗುಲಿದ ಒಬ್ಬ ವ್ಯಕ್ತಿಯನ್ನು ದೆಹಲಿಯಲ್ಲಿ ಹಾಗೂ ಇನ್ನೊಬ್ಬರನ್ನು ತೆಲಂಗಾಣದಲ್ಲಿ ಗುರುತಿಸಲಾಗಿದೆ. ದೆಹಲಿಯಲ್ಲಿ ವೈರಸ್ ಪತ್ತೆಯಾದ ವ್ಯಕ್ತಿ ಇಟಲಿಗೆ ಪ್ರಯಾಣ ಬೆಳೆಸಿದ್ದರು ಹಾಗೂ ತೆಲಂಗಾಣದ ರೋಗಿ ದುಬೈಗೆ ಭೇಟಿ ನೀಡಿದ್ದರು. ಇಬ್ಬರ ಆರೋಗ್ಯವೂ ಸ್ಥಿರವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

    ಈ ಹಿಂದೆ ಕೇರಳದಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿದ್ದವು. ಮೂವರು ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಕಂಡುಬಂದಿರುವುದು ಖಚಿತವಾಗಿತ್ತು. ಇವರು ವುಹಾನ್‍ನಿಂದ ಬಂದವರಾಗಿದ್ದರು. ಈಗಾಗಲೇ ಈ ವೈರಸ್‍ನಿಂದಾಗಿ ಚೀನಾದಲ್ಲಿ 3 ಸಾವಿರ ಜನ ಮೃತಪಟ್ಟಿದ್ದು, ಇದೀಗ ಭಾರತಕ್ಕೂ ಕಾಲಿಡುತ್ತಿದೆ.

    ಮೂವರು ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಇರುವುದು ಕಂಡುಬಂದ ನಂತರ ಕೇರಳ ಸರ್ಕಾರವು ಇದನ್ನು ರಾಜ್ಯ ವಿಪತ್ತು ಎಂದು ಘೋಷಿಸಿತ್ತು. ನಂತರ ಯಾವುದೇ ಪ್ರಕರಣ ಪತ್ತೆಯಾಗದ ಹಿನ್ನೆಲೆ ಆದೇಶವನ್ನು ಹಿಂಪಡೆದಿತ್ತು.

    ಈ ಕುರಿತು ಕೇಂದ್ರ ಸರ್ಕಾರ ಸಹ ಎಚ್ಚರಿಕೆ ವಹಿಸಿದ್ದು, ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಈ ಕುರಿತು ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ಕೊರೊನಾ ವೈರಸ್ ದೇಶದಲ್ಲಿ ವೇಗವಾಗಿ ಹಬ್ಬಿಲ್ಲ. ಇದಕ್ಕಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎಬೋಲಾ, ನಿಫಾ, ಸ್ವಿನ್ ಫ್ಲೂ ವೈರಸ್ ಹಬ್ಬಿದಾಗ ಸಹ ತಜ್ಞ ವೈದ್ಯರು ಕಾರ್ಯ ನಿರ್ವಹಿಸಿ, ಪರಿಸ್ಥಿತಿ ನಿಭಾಯಿಸಿದ್ದರು ಎಂದು ತಿಳಿಸಿದ್ದಾರೆ.

    ಪ್ರಪಂಚದಾದ್ಯಂತ 89 ಸಾವಿರ ಜರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಚೀನಾದಲ್ಲಿ 2,912 ಸೇರಿದಂತೆ ಒಟ್ಟು ಮೂರು ಸಾವಿರ ಜನ ಸಾವನ್ನಪ್ಪಿದ್ದಾರೆ. ಡಿಸೆಂಬರ್‍ನಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಈ ವೈರಸ್ ಪತ್ತೆಯಾಗಿದ್ದು, ಇದೀಗ ಸುಮಾರು 70ಕ್ಕೂ ಹೆಚ್ಚು ದೇಶಗಳಿಗೆ ಹಬ್ಬಿದೆ.

    ಕೊರೊನಾ ವೈರಸ್ ತಡೆಯಲು ಎಲ್ಲ ದೇಶಗಳು ಕ್ರಮ ಕೈಗೊಂಡಿದ್ದು, ಭಾರತವೂ ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ದೇಶದ ಎಲ್ಲ 21 ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಎಲ್ಲ ಆಸ್ಪತ್ರೆಗಳಿಗೂ ಸಹ ಈ ಕುರಿತು ಎಚ್ಚರಿಕೆ ನೀಡಲಾಗಿದೆ.