Tag: ministerial position

  • ನಮ್ಮವರೇ ನನ್ಗೆ ಮುಳುವು ಅಂದ್ರಾ ಯಡಿಯೂರಪ್ಪ!

    ನಮ್ಮವರೇ ನನ್ಗೆ ಮುಳುವು ಅಂದ್ರಾ ಯಡಿಯೂರಪ್ಪ!

    ಬೆಂಗಳೂರು: ಸಿಎಂ ಯಡಿಯೂರಪ್ಪರಿಗೆ ಈಗ ಅವರ ಆಪ್ತರೇ ತಲೆನೋವು ಆಗಿದ್ದಾರಂತೆ. ಆದರಲ್ಲೂ ಲಿಂಗಾಯತ ಸಮುದಾಯದ ಆಪ್ತ ಶಾಸಕರೇ ಕಿರಿಕಿರಿ ಮಾಡುತ್ತಿದ್ದಾರಂತೆ. ನಮ್ಮವರೇ ನಮಗೆ ಮುಳುವಾಗ್ತಾರೆ ಅಂತಾ ಸಿಎಂ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂತ್ರಿಗಿರಿಗೆ ಆಪ್ತರು ಟವೆಲ್ ಹಾಕಿರೋದು ಯಡಿಯೂರಪ್ಪನವರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

    “ಕಷ್ಟಪಟ್ಟು ಮುಖ್ಯಮಂತ್ರಿ ಆಗಿದ್ದೀನಿ ನಾನು, ನನ್ ಸಿಎಂ ಕುರ್ಚಿಗೆ ನಮ್ಮವರೇ ಮುಳುವಾಗ್ತಾರಾ ಅನ್ನೋ ಭಯ ಇದೆ. ಕೆಲವು ಆಪ್ತರೇ ನನ್ನ ಇಕ್ಕಟ್ಟಿನಲ್ಲಿ ಸಿಲುಕಿಸಿ ಬಿಡ್ತಾರಾ ಅನ್ನೋ ಆತಂಕ ನನಗೆ” ಹೀಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಆಪ್ತ ಬಳಗದ ಬಗ್ಗೆಯೇ ಅಸಮಾಧಾನ ಹೊರ ಹಾಕಿದ್ದಾರಂತೆ. ಅಷ್ಟೇ ಅಲ್ಲ ಕೊಟ್ಟ ಮಾತಿನಂತೆ ಗೆದ್ದವರಿಗೆ ಸಚಿವ ಸ್ಥಾನವನ್ನು ಕೊಡಲೇಬೇಕು, ಕೊಡುತ್ತೇವೆ. ನಮಗೆ ಬೆಂಬಲ ಕೊಟ್ಟು ರಾಜೀನಾಮೆ ಕೊಟ್ಟವರ ಜಾತಿ ಸಮೀಕರಣ ಸಾಧ್ಯ ಇಲ್ಲ. ಆದರೆ ನನ್ನ ಆಪ್ತರು ಎನ್ನಿಸಿಕೊಂಡವರೇ ಸಚಿವ ಸ್ಥಾನ ಬೇಕು ಅಂತಾ ಬೀದಿಯಲ್ಲಿ ನಿಂತರೆ ಹೇಗೆ ಅಂತಾ ಗರಂ ಆಗಿ ಆಪ್ತ ವಲಯದ ಪಡಸಾಲೆಯಲ್ಲೇ ಅಸಮಾಧಾನ ಹೊರಹಾಕಿರೋದು ದೊಡ್ಡ ಚರ್ಚೆಯಾಗುತ್ತಿದೆ.

    ಅಷ್ಟಕ್ಕೂ ಯಡಿಯೂರಪ್ಪ ಅಸಮಾಧಾನಕ್ಕೆ ಕಾರಣವಾಗಿದ್ದು ಲಿಂಗಾಯತ ಸಮುದಾಯದ ಆಪ್ತರು. ಈಗಾಗಲೇ ಲಿಂಗಾಯತ ಸಮುದಾಯದ ಸಚಿವರ ಸಂಖ್ಯೆ ಹೆಚ್ಚಿದೆ. ಹೀಗಿದ್ದಾಗಲೂ ಮತ್ತಷ್ಟು ಲಿಂಗಾಯತ ಶಾಸಕರೇ, ಆದರಲ್ಲೂ ಯಡಿಯೂರಪ್ಪ ಆಪ್ತರೇ ಸಚಿವ ಸ್ಥಾನಕ್ಕೆ ಕ್ಯೂ ನಿಂತಿರೋದು ಯಡಿಯೂರಪ್ಪ ಅಸಮಾಧಾನಕ್ಕೆ ಮೂಲ ಕಾರಣ ಅಂತೆ. ಜಾತಿ ಸಮೀಕರಣವನ್ನೇ ಬ್ಯಾಲೆನ್ಸ್ ಮಾಡೋದು ಕಷ್ಟ ಸಾಧ್ಯವಾಗಿದ್ದು, ಹಿಂದುಳಿದ ವರ್ಗ ಜಾತಿಗಳಿಗೆ ನ್ಯಾಯ ಹೇಗೆ ಒದಗಿಸಬೇಕು ಅನ್ನೋದೇ ಯಡಿಯೂರಪ್ಪಗೆ ಮುಂದಿರುವ ದೊಡ್ಡ ಸವಾಲು.

    * ಯಡಿಯೂರಪ್ಪ ಅಸಮಾಧಾನಕ್ಕೆ ಕಾರಣಗಳೇನು..?
    1. ಈಗಾಗಲೇ ನನ್ನ ಸಂಪುಟದಲ್ಲಿ 7 ಜನರು ಲಿಂಗಾಯತ ಸಚಿವರಿದ್ದಾರೆ.
    2. ಮಹೇಶ್ ಕುಮಟಹಳ್ಳಿ, ಬಿ.ಸಿ.ಪಾಟೀಲ್ ಲಿಂಗಾಯತ ಕೋಟಾಕ್ಕೆ ಸೇರಿದರೆ 9ಕ್ಕೆ ಏರುತ್ತೆ.
    3. ಹೈಕಮಾಂಡ್ ಒಪ್ಪಿಸಿ ಉಮೇಶ್ ಕತ್ತಿ ಅವರಿಗೆ ಸ್ಥಾನ ಕೊಟ್ಟರೂ ಲಿಂಗಾಯತ ಸಂಖ್ಯೆ 10ಕ್ಕೆ ಏರಿಬಿಡುತ್ತದೆ.
    4. ಒಟ್ಟಾರೆಯಾಗಿ ಸರ್ಕಾರದಲ್ಲಿ ನನ್ನನ್ನೂ ಸೇರಿದಂತೆ ಲಿಂಗಾಯತ ಸಂಖ್ಯೆ 11ಕ್ಕೆ ಏರುತ್ತೆ.
    5. ಕರ್ನಾಟಕ ಇತಿಹಾಸದಲ್ಲಿ ಒಂದು ಜಾತಿಗೆ ಹೆಚ್ಚು ಪ್ರಾತಿನಿಧ್ಯ ಕೊಟ್ಟ ದಾಖಲೆಯಾಗುತ್ತದೆ.
    6. ಈ ನಡುವೆ ಇನ್ನೂ ಮೂರು ಜನ ಕ್ಯೂನಲ್ಲಿ ನಿಂತು ನನಗೂ ಬೇಕು ಅಂತಿದ್ದಾರೆ.
    7. ಇದನ್ನ ನಾನು ಹೇಗೆ ಬ್ಯಾಲೆನ್ಸ್ ಮಾಡಲಿ, ನಮ್ಮವರೇ ನಮಗೆ ಮುಳುವಾದ್ರೆ ಕಷ್ಟ.

    * ಕ್ಯಾಬಿನೆಟ್‍ಗೆ ಕ್ಯೂನಲ್ಲಿರುವ ಬಿಎಸ್‍ವೈ ಆಪ್ತರು!
    1. ಉಮೇಶ್ ಕತ್ತಿ- ಲಿಂಗಾಯತ
    2. ರೇಣುಕಾಚಾರ್ಯ- ಲಿಂಗಾಯತ
    3. ಮುರುಗೇಶ್ ನಿರಾಣಿ- ಲಿಂಗಾಯತ
    4. ಬಸವನಗೌಡ ಪಾಟೀಲ್ ಯತ್ನಾಳ್- ಲಿಂಗಾಯತ

    * ಹಾಲಿ ಕ್ಯಾಬಿನೆಟ್ ಜಾತಿ ಸಮೀಕರಣ!
    1. ಲಿಂಗಾಯತ ಸಮುದಾಯ ಸಚಿವರು- 7
    2. ಒಕ್ಕಲಿಗ ಸಮುದಾಯ ಸಚಿವರು- 3
    3. ಎಸ್‍ಸಿ ಸಮುದಾಯ ಸಚಿವರು- 3
    4. ಬ್ರಾಹ್ಮಣ ಸಮುದಾಯ ಸಚಿವರು-1
    5. ಎಸ್‍ಟಿ ಸಮುದಾಯ ಸಚಿವರು-1
    6. ಕುರುಬ ಸಮುದಾಯ ಸಚಿವರು-1
    7. ಹಿಂದುಳಿದ ವರ್ಗ ಸಚಿವರು- 1

  • ರಾಹುಲ್‍ಗಾಂಧಿ ಪಾಕಿಸ್ತಾನದ ಮೂಲದ ಏಜೆಂಟ್: ಯತ್ನಾಳ್

    ರಾಹುಲ್‍ಗಾಂಧಿ ಪಾಕಿಸ್ತಾನದ ಮೂಲದ ಏಜೆಂಟ್: ಯತ್ನಾಳ್

    ವಿಜಯಪುರ: ರಾಷ್ಟ್ರೀಯ ಪೌರತ್ವ ಕಾಯ್ದೆ ವಿಚಾರದಲ್ಲಿ ಜನರ ದಾರಿ ತಪ್ಪಿಸುತ್ತಿರುವ ಕೆಲಸವನ್ನು ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೂಲ ಪಾಕಿಸ್ತಾನವಾಗಿದ್ದು, ಅವರು ಪಾಕ್ ಏಜೆಂಟ್‍ರಾಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

    ಕ್ಷೇತ್ರದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಹಿಂದೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅಂತಹವರಿಗೆ ಆಶ್ರಯ ನೀಡಲು ಪ್ರಧಾನಿಗಳು, ಗೃಹ ಸಚಿವ ಅಮಿತ್ ಶಾ ಚಿಂತನೆ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಹಾಗೂ ಕೆಲ ಜಾತ್ಯಾತೀತ ಎನ್ನುವ ಕೋಮುವಾದಿ ಪಕ್ಷಗಳು ಒಂದು ಕೋಮಿನ ಜನರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಆದ್ದರಿಂದ ಪೌರತ್ವ ಕಾನೂನು ಪರ ನಗರದಲ್ಲಿ ಇದೇ ಶನಿವಾರ ಬೃಹತ್ ರ್ಯಾಲಿ ನಡೆಸುತ್ತೇವೆ ಎಂದು ತಿಳಿಸಿದರು.

    ನಾನು ಹಿಂದೆ ಕುಂತು ಆಟ ಆಡುವ ರಾಜಕಾರಣಿ ಅಲ್ಲ. ಅಭಿಮಾನಿಗಳನ್ನು ಮುಂದೆ ಬಿಟ್ಟು ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕುವುದಿಲ್ಲ ಎಂದು ಹೇಳಿದರು. ಆ ಮೂಲಕ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿರುವವರಿಗೆ ಟಾಂಗ್ ನೀಡಿದರು. ಸಚಿವ ಸ್ಥಾನ ನೀಡುವುದು ಸಿಎಂ ಮತ್ತು ಹೈಕಮಾಂಡ್‍ಗೆ ಬಿಟ್ಟಿದ್ದು. ಉಪಚುನಾವಣೆಯಲ್ಲಿ ನಾನು ಪ್ರವಾಸ ಮಾಡಿದ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಸೋಲು ಕಾಣುತ್ತಿದ್ದ ಕ್ಷೇತ್ರಗಳಲ್ಲಿ ಬಾರಿ ಗೆಲವು ಸಿಕ್ಕಿದೆ. ಪರಿಣಾಮ ಸ್ಥಿರ ಸರ್ಕಾರ ಲಭಿಸಿದ್ದು, ಇದನ್ನು ಪಕ್ಷ ಗಮನಿಸುತ್ತಿದೆ ಎಂದು ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂಬುವುದನ್ನು ತಿಳಿಸಿದರು.

    ವಾಜಪೇಯಿ ಸರ್ಕಾರದಲ್ಲಿ ನನ್ನನ್ನು ಕರೆದು ಕೇಂದ್ರಮಂತ್ರಿ ಮಾಡಿದ್ದರು. ನನಗೆ ಪಕ್ಷ ಹಾಗೂ ಸರ್ಕಾರ ಮುಖ್ಯ. ನಾವು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿದರೆ ಸರ್ಕಾರಕ್ಕೆ ಅಸ್ಥಿರತೆ ಕಾಡುತ್ತೆ. ಸರ್ಕಾರದ ಹಿತದೃಷ್ಟಿಯಿಂದ ಮಂತ್ರಿ ಎಂದು ಕೇಳಲ್ಲ. ಸದ್ಯ ಸಮರ್ಥವಾಗಿ ಶಾಸಕ ಸ್ಥಾನ ನಿಭಾಯಿಸುತ್ತಿದ್ದೇವೆ ಎಂದರು.

    ಇದೇ ವೇಳೆ ಶ್ರೀರಾಮುಲು ಪರ ಪರೋಕ್ಷವಾಗಿ ಬ್ಯಾಟ್ ಮಾಡಿದ ಯತ್ನಾಳ್, ಶ್ರೀರಾಮುಲು ಬಹಳ ವರ್ಷಗಳಿಂದ ಪಕ್ಷವನ್ನು ಕಟ್ಟಿದ್ದಾರೆ. ಅವರು ಡಿಸಿಎಂ ಆಗಬೇಕು ಎಂಬುವುದು ಅವರ ಅಭಿಮಾನಿಗಳ ಒತ್ತಾಯವಿದೆ. ಆದರೆ ಅವರು ಎಲ್ಲಿಯೂ ಡಿಸಿಎಂ ಸ್ಥಾನ ಬೇಕು ಎಂದಿಲ್ಲ. ಇನ್ನು 5-10 ಡಿಸಿಎಂ ಮಾಡಿದರೆ ಆ ಸ್ಥಾನಕ್ಕೆ ಗೌರವಿರುವುದಿಲ್ಲ. ಉಪಮುಖ್ಯಮಂತ್ರಿಗಳ ಗೌರವ ಕಡಿಮೆ ಆಗುವ ಕೆಲಸ ಮಾಡಬಾರದು. ನನಗೆ ಸಿಎಂ ಒಬ್ಬರು, ಉಳಿದವರು ಮಂತ್ರಿಗಳಿದ್ದರೆ ಸಾಕು ಎನಿಸುತ್ತಿದೆ ಎಂದು ಡಿಸಿಎಂ ಸ್ಥಾನಕ್ಕೆ ವಿರೋಧ ವ್ಯಕ್ತಪಡಿಸಿದರು.

    ಇತ್ತ ರಾಷ್ಟ್ರೀಯ ಪೌರತ್ವ ಕಾಯಿದೆ (ಎನ್.ಆರ್.ಸಿ)ಯನ್ನು ವಿರೋಧಿಸಿ ಇಂದು ವಿಜಯಪುರ ಎಂಎಂಸಿ ಸಂಘಟನೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಜುಮ್ಮಾ ಮಸೀದಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಅಂಬೇಡ್ಕರ್ ಸರ್ಕಲ್ ನಲ್ಲಿ ಬಹಿರಂಗ ಸಭೆ ನಡೆಸಿ ಕೂಡಲೇ ಕಾಯ್ದೆಯನ್ನು ಕೈ ಬಿಡಲು ಆಗ್ರಹಿಸಿದರು. ಈ ವೇಳೆ ಮುಸ್ಲಿಂ ಧರ್ಮಗುರು ತನ್ವೀರ್ ಪೀರಾ ಮುಶ್ರಿಫ್, ಸಾಮಾಜಿಕ ಹೋರಾಟಗಾರರಾದ ಪೀಟರ್ ಅಲೆಕ್ಸಾಂಡರ್, ಭೀಮಶಿ ಕಲಾದಗಿ, ಅಡಿವೆಪ್ಪ ಸಾಲಗಲ, ಶ್ರೀನಾಥ ಪೂಜಾರಿ, ಜಿತೇಂದ್ರ ಕಾಂಬಳೆ ಸೇರಿ ಹಲವು ಮುಖಂಡರು ಸಭೆಯಲ್ಲಿ ಭಾಗಿ ಆಗಿದ್ದರು.

  • ಸ್ಥಳೀಯರಿಗೆ ಸಚಿವ ಸ್ಥಾನ ನೀಡಿ – ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮಾದಾರಚನ್ನಯ್ಯ ಸ್ವಾಮೀಜಿ ಸಲಹೆ

    ಸ್ಥಳೀಯರಿಗೆ ಸಚಿವ ಸ್ಥಾನ ನೀಡಿ – ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮಾದಾರಚನ್ನಯ್ಯ ಸ್ವಾಮೀಜಿ ಸಲಹೆ

    ಚಿತ್ರದುರ್ಗ: ರಾಜ್ಯದಲ್ಲಿ ಆಡಳಿತ ನಡೆಸಿರೋ ಎಲ್ಲಾ ಸರ್ಕಾರಗಳು ವಲಸಿಗರಿಗೆ ಮಣೆ ಹಾಕಿವೆ. ಹೀಗಾಗಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವಾದರೂ ಚಿತ್ರದುರ್ಗ ಜಿಲ್ಲೆಯ ಸ್ಥಳೀಯ ಶಾಸಕರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಮಾದಾರಚನ್ನಯ್ಯ ಸ್ವಾಮೀಜಿ ಸಲಹೆ ನೀಡಿದ್ದಾರೆ.

    ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಿದ ಶ್ರೀಗಳು, ಪ್ರತಿಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆಯೂ ಚಿತ್ರದುರ್ಗ ಜಿಲ್ಲೆಗೆ ಅನ್ಯಾಯವಾಗ್ತಿದೆ. ವಲಸಿಗರಿಗೆ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನೀಡಲಾಗ್ತಿದೆ. ಹೀಗಾಗಿ ಈ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ಆದ್ದರಿಂದ ಈ ಬಾರಿ ಸ್ಥಳೀಯ ಶಾಸಕರಾಗಿರೋ ಚಂದ್ರಪ್ಪ ಅಥವಾ ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲೆ ಅಭಿವೃದ್ಧಿಗೆ ಸಹಕರಿಸಿ ಎಂದು ಸಲಹೆ ನೀಡಿದರು.

    ಇದೇ ವೇಳೆ ಮಠಕ್ಕೆ ಆಗಮಿಸಿದ್ದ ರಾಜ್ಯಾಧ್ಯಕ್ಷ ಕಟೀಲ್‍ಗೆ, ದಾವಣಗೆರೆ ಸಂಸದ ಸಿದ್ದೇಶ್ವರ್, ಶಾಸಕರಾದ ತಿಪ್ಪಾರೆಡ್ಡಿ, ಚಂದ್ರಪ್ಪ ಸಾಥ್ ನೀಡಿದರು.

  • ಚಿಂಚನಸೂರ್ ಗೆ ಸಚಿವ ಸ್ಥಾನ ಕೊಡಿ – ಬಿಎಸ್‍ವೈ ಕಾಲಿಗೆ ಬಿದ್ದ ಬೆಂಬಲಿಗರು

    ಚಿಂಚನಸೂರ್ ಗೆ ಸಚಿವ ಸ್ಥಾನ ಕೊಡಿ – ಬಿಎಸ್‍ವೈ ಕಾಲಿಗೆ ಬಿದ್ದ ಬೆಂಬಲಿಗರು

    ಬೆಂಗಳೂರು: ನಮ್ಮ ನಾಯಕರಿಗೆ ಸಚಿವ ಸ್ಥಾನ ಕೊಡಿ ಎಂದು ಶಾಸಕ ಬಾಬುರಾವ್ ಚಿಂಚನಸೂರ್ ಬೆಂಬಲಿಗರು ಸಿಎಂ ಯಡಿಯೂರಪ್ಪನವರ ಕಾಲಿಗೆ ಬಿದ್ದಿದ್ದಾರೆ.

    ನಮ್ಮ ನಾಯಕರು ಲೋಕಸಭಾ ಚುನಾವಣೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಿಸೋಕೆ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗಾಗಲೇ ಅವರಿಗೆ ನೀವು ಕೂಡ ಮಂತ್ರಿ ಸ್ಥಾನದ ಭರವಸೆ ಕೊಟ್ಟಿದ್ದೀರಿ. ಹಾಗಾಗಿ ನಮ್ಮ ನಾಯಕನಿಗೆ ಸಚಿವ ಸ್ಥಾನ ಕೊಡಿ ಎಂದು ಸಿಎಂ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾರೆ.

    ಈ ವೇಳೆ ಮಾತನಾಡಿದ ಯಡಿಯೂರಪ್ಪನವರು, ನಿಮ್ಮ ಅಭಿಪ್ರಾಯ ಸೇರಿದಂತೆ ಚಿಂಚನಸೂರ್ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರ ಗಮನಕ್ಕೆ ತರುತ್ತೇನೆ. ನನಗೆ ಚಿಂಚನಸೂರ್ ಮೇಲೆ ಅಪಾರ ಗೌರವ ಇದೆ. ನೀವೇನು ನನಗೆ ಬಂದು ಮಂತ್ರಿ ಮಾಡಿ ಎಂದು ಕೇಳೋ ಅಗತ್ಯ ಇಲ್ಲ. ನಿಮ್ಮ ಭಾವನೆಗಳನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರಿಗೆ ತಿಳಿಸುತ್ತೇನೆ. ಅವರಿಗೆ ಮಂತ್ರಿ ಸ್ಥಾನ ಕೊಡಿಸೋ ಬಗ್ಗೆ ನಾನು ಏನು ಪ್ರಯತ್ನ ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಬೆಂಬಲಿಗರಿಗೆ ಭರವಸೆ ನೀಡಿದ್ದಾರೆ.

  • ಮೈತ್ರಿ ಉಳುವಿಗಾಗಿ ಡಿಸಿಎಂ ಪರಮೇಶ್ವರ್ ತಲೆದಂಡ!

    ಮೈತ್ರಿ ಉಳುವಿಗಾಗಿ ಡಿಸಿಎಂ ಪರಮೇಶ್ವರ್ ತಲೆದಂಡ!

    ಬೆಂಗಳೂರು: ಅತೃಪ್ತ ಶಾಸಕರ ಓಲೈಕೆಗೆ ಮೈತ್ರಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಬೆಂಗಳೂರು ಉಸ್ತುವಾರಿಯನ್ನು ಬಿಟ್ಟುಕೊಡುವಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಈ ಕುರಿತು ವೇಣುಗೋಪಾಲ್ ಡಿಸಿಎಂ ಪರಮೇಶ್ವರ್ ಜೊತೆ ಚರ್ಚಿಸಿದ್ದು, ರಾಮಲಿಂಗಾರೆಡ್ಡಿ ಅವರನ್ನು ವಾಪಾಸ್ ಕರೆತರಲು ಬೆಂಗಳೂರು ಉಸ್ತುವಾರಿಯ ಆಫರ್ ನೀಡಿದ್ದು, ಹೀಗಾಗಿ ಬಿಟ್ಟುಕೊಡುವಂತೆ ಸೂಚಿಸಿದ್ದಾರೆ. ವೇಣುಗೋಪಾಲ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಬೆಂಗಳೂರು ಉಸ್ತುವಾರಿಯನ್ನು ರಾಮಲಿಂಗರೆಡ್ಡಿ ಹೆಗಲಿಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

    ಡಿಸಿಎಂ ಪರಮೇಶ್ವರ್ ತಲೆದಂಡವಾದರೆ ರಾಮಲಿಂಗಾರೆಡ್ಡಿ ಸೇರಿದಂತೆ ಗೋಪಾಲಯ್ಯ, ಭೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್ ಹಾಗೂ ಮುನಿರತ್ನ ವಾಪಾಸ್ ಬರಬಹುದು ಎಂಬುದು ಕೈ ನಾಯಕರ ಲೆಕ್ಕಾಚಾರ. ಅಲ್ಲದೆ, ಉಸ್ತುವಾರಿಯನ್ನು ರಾಮಲಿಂಗಾರೆಡ್ಡಿ ಅವರಿಗೆ ವಹಿಸಿದರೆ, ಬೆಂಗಳೂರಿನ ಎಲ್ಲ ಶಾಸಕರು ರಾಜೀನಾಮೆಯನ್ನು ಹಿಂಪಡೆಯಲಿದ್ದಾರೆ ಎಂದು ಕೈ ನಾಯಕರು ಅಂದಾಜಿಸಿದ್ದಾರೆ ಎನ್ನಲಾಗುತ್ತಿದೆ.

    ಈಗಾಗಲೇ ಕಾಂಗ್ರೆಸ್‍ನ 10 ಸಚಿವರಿಂದ ರಾಜೀನಾಮೆ ಕೊಡಿಸಲು ಕೈ ನಾಯಕರು ಮುಂದಾಗುವ ಮೂಲಕ ಅತೃಪ್ತ ಶಾಸಕರನ್ನು ಸೆಳೆಯಲು ಮುಂದಾಗಿದ್ದಾರೆ. ಸಾ.ರಾ.ಮಹೇಶ್, ಜಯಮಾಲಾ ಸೇರಿದಂತೆ ಒಟ್ಟು 10 ಸಚಿವರ ರಾಜೀನಾಮೆ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎಂಬ ಚರ್ಚೆಗಳು ಕೈ ಅಂಗಳದಲ್ಲಿ ಆರಂಭಗೊಂಡಿವೆ.

  • ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವೇ ಸಚಿವ ಸ್ಥಾನಕ್ಕೆ ಮುಳ್ಳಾಯಿತು: ಹೊರಟ್ಟಿ

    ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವೇ ಸಚಿವ ಸ್ಥಾನಕ್ಕೆ ಮುಳ್ಳಾಯಿತು: ಹೊರಟ್ಟಿ

    ಹುಬ್ಬಳ್ಳಿ: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ನಾವು ಹೋರಾಟ ಮಾಡಿದ್ದು ದೊಡ್ಡ ಅಪರಾಧವಾಗಿದೆ. ಕೆಲವು ಉಡಾಫೆ ಸ್ವಾಮೀಜಿಗಳು ಧರ್ಮ ಒಡೆಯುತ್ತಾರೆಂಬ ವದಂತಿ ಹಬ್ಬಿಸಿದರು. ಹೀಗಾಗಿ ಸಚಿವ ಸ್ಥಾನ ಕೈತಪ್ಪಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಪಬ್ಲಿಕ್ ಟಿವಿ ಯೊಂದಿಗೆ ಮಾತನಾಡಿದ ಅವರು, ನಾನು ಲಿಂಗಾಯತ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದೆ. ಪಕ್ಷಕ್ಕೆ ಅಂಟಿಕೊಂಡು ಲಿಂಗಾಯತ ಹೋರಾಟ ಮಾಡಿಲ್ಲ. ಅಲ್ಲದೇ ಈ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ದೇವೇಗೌಡರಿಗೂ ಸ್ಪಷ್ಟಪಡಿಸಿದ್ದೆ. ಸಚಿವ ಸ್ಥಾನ ಹಂಚಿಕೆಯ ಬೆಳವಣಿಗೆ ಗಮನಿಸಿದಾಗ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವೇ ನೇರ ಹೊಣೆ ಎನ್ನುವುದು ಅರ್ಥವಾಗುತ್ತಿದೆ ಎಂದು ವಿಷಾದ ವ್ಯಕ್ತಪಡೆಸಿದರು.

    ಕೆಲವರು ರಂಪಾಟ-ಪ್ರತಿಭಟನೆ ಮಾಡಿ, ಕಾಡಿ-ಬೇಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನನಗೆ ಹಾಗೆ ಮಾಡಲಿಕ್ಕೆ ಮನಸ್ಸು ಬರಲಿಲ್ಲ. ಅನೇಕರು ಫೋನ್ ಕರೆ ಮಾಡಿ, ನಿಮ್ಮಂತ ಅನುಭವಿಗಳು ಸಚಿವ ಸಂಪುಟದಲ್ಲಿ ಇರಬೇಕಿತ್ತೆಂದು ಹೇಳುತ್ತಾರೆ. ಆದರೆ ಸಚಿವ ಸ್ಥಾನ ನೀಡುವವರೇ ನನ್ನನ್ನು ಮಂತ್ರಿ ಮಾಡಿಲ್ಲ. ಪಕ್ಷದ ರಾಷ್ಟ್ರಾಧ್ಯಕ್ಷರಾದ ದೇವೇಗೌಡ ತಿರ್ಮಾನವೇ ಅಂತಿಮ. ವಿಧಾನ ಪರಿಷತ್ ಸಭಾಪತಿ ಮಾಡುವುದು, ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ಎಂದು ಮತ್ತೊಂದು ಆಶಯ ಹೊರ ಹಾಕಿದ್ದಾರೆ.