Tag: minister

  • ನೂತನ ಸಚಿವರಿಗೆ ಯಾವ ಖಾತೆ? ಬದಲಾವಣೆಗೊಂಡ ಖಾತೆ ಯಾರಿಗೆ ಸಿಕ್ಕಿದೆ? ಇಲ್ಲಿದೆ ಪೂರ್ಣ ಮಾಹಿತಿ

    ನೂತನ ಸಚಿವರಿಗೆ ಯಾವ ಖಾತೆ? ಬದಲಾವಣೆಗೊಂಡ ಖಾತೆ ಯಾರಿಗೆ ಸಿಕ್ಕಿದೆ? ಇಲ್ಲಿದೆ ಪೂರ್ಣ ಮಾಹಿತಿ

    ನವದೆಹಲಿ: ಪ್ರಧಾನಿ ಮೋದಿ ಸಂಪುಟ ಪುನಾರಚನೆ ಆಗಿದ್ದು, ರಕ್ಷಣೆಯ ಹೊಣೆ ನಿರ್ಮಲಾ ಸೀತಾರಾಮನ್ ಗೆ ಸಿಕ್ಕಿದರೆ, ಇಂದು ಪ್ರಮಾಣ ವಚನ ಸ್ವೀಕರಿಸಿದ 9 ಮಂದಿ ಸಚಿವರಿಗೆ ರಾಜ್ಯ ಖಾತೆ ಮತ್ತು ಸ್ವತಂತ್ರ ಖಾತೆಯನ್ನು ಮೋದಿ ಹಂಚಿದ್ದಾರೆ.

    ರಾಜ್ಯ ಖಾತೆ:
    ಕರ್ನಾಟಕದ ಅನಂತ್ ಕುಮಾರ್ ಹೆಗಡೆ ಅವರಿಗೆ ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ರಾಜ್ಯ ಖಾತೆ ಸಿಕ್ಕಿದೆ. ಶಿವ ಪ್ರತಾಪ್ ಶುಕ್ಲಾ ಹಣಕಾಸು ಇಲಾಖೆ, ಅಶ್ವಿನಿ ಕುಮಾರ್ ಚೌಬೆ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಡಾ. ವೀರೇಂದ್ರ ಕುಮಾರ್ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಲ್ಪಸಂಖ್ಯಾತ ಖಾತೆ ಸಿಕ್ಕಿದೆ.

    ಸತ್ಯಪಾಲ್ ಸಿಂಗ್ ಅವರಿಗೆ ಮಾನವ ಸಂಪನ್ಮೂಲ, ನೀರಾವರಿ, ಗಂಗಾ ನದಿ ಪುನಶ್ಚೇತನ ಖಾತೆ ಸಿಕ್ಕಿದರೆ, ಗಜೇಂದ್ರ ಸಿಂಗ್ ಶೇಖಾವತ್ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು ಮೋದಿ ನೀಡಿದ್ದಾರೆ.

    ಸ್ವತಂತ್ರ ಖಾತೆ:
    ರಾಜ್ ಕುಮಾರ್ ಸಿಂಗ್ ಅವರಿಗೆ ಇಂಧನ(ಸ್ವತಂತ್ರ), ಹೊಸ ಮತ್ತು ನವೀಕರಿಸಬಹುದಾದ ಶಕ್ತಿ ಇಲಾಖೆ, ಹರ್‍ದೀಪ್ ಸಿಂಗ್ ಪುರಿಗೆ ವಸತಿ ಮತ್ತು ನಗರ ವ್ಯವಹಾರ(ಸ್ವತಂತ್ರ), ಅಲ್ಫನ್ಸೋ ಕಣ್ಣನ್ ದಾನಮ್ ಪ್ರವಾಸೋದ್ಯಮ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ(ಸ್ವತಂತ್ರ) ಖಾತೆ ಸಿಕ್ಕಿದೆ.

    ಖಾತೆ ಬದಲಾವಣೆ
    ಇಂಧನ ಸಚಿವರಾಗಿದ್ದ ಪಿಯೂಶ್ ಗೋಯಲ್ ಅವರಿಗೆ ರೈಲ್ವೇ ಖಾತೆ ಸಿಕ್ಕಿದ್ದು, ನಿರ್ಮಲಾ ಸೀತಾರಾಮನ್ ನೋಡಿಕೊಳ್ಳುತ್ತಿದ್ದ ವಾಣಿಜ್ಯ ವ್ಯವಹಾರ ಮತ್ತು ಕೈಗಾರಿಕಾ ಖಾತೆ ಸುರೇಶ್ ಪ್ರಭು ಅವರಿಗೆ ಸಿಕ್ಕಿದೆ. ರೈಲು ದುರಂತಗಳು ಸಂಭವಿಸಿದ ಹಿನ್ನೆಲೆಯಲ್ಲಿ ಸುರೇಶ್ ಪ್ರಭು ಈ ಖಾತೆಗೆ ರಾಜೀನಾಮೆ ನೀಡಲು ಮುಂದಾಗಿದ್ದರು. ಈ ವೇಳೆ ಮೋದಿ ಸ್ವಲ್ಪ ಕಾಯಿರಿ ಎಂದು ತಿಳಿಸಿದ್ದರು.

    ಇಂದು ಕ್ಯಾಬಿನೆಟ್ ಸಚಿವರಾಗಿ ಭಡ್ತಿ ಪಡೆದ ಧರ್ಮೇಂದ್ರ ಪ್ರಧಾನ್ ಅವರಿಗೆ ಪೆಟ್ರೋಲಿಯಂ ಖಾತೆಯ ಜೊತೆಗೆ ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಹೊಣೆಯನ್ನು ನೀಡಲಾಗಿದೆ. 2 ದಿನದ ಹಿಂದೆ ರಾಜೀವ್ ಪ್ರತಾಪ್ ರೂಡಿ ಈ ಖಾತೆಗೆ ರಾಜೀನಾಮೆ ಸಲ್ಲಿಸಿದ್ದರು.

    ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವನ್ನು ನೋಡಿಕೊಳ್ಳುತ್ತಿದ್ದ ನಿತಿನ್ ಗಡ್ಕರಿ ಅವರಿಗೆ ಗಂಗಾ ನದಿ ಪುನಶ್ಚೇತನ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಈ ಇಲಾಖೆಯನ್ನು ನೋಡಿಕೊಳ್ಳುತ್ತಿದ್ದ ಉಮಾ ಭಾರತಿ ಅವರಿಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯನ್ನು ನೀಡಲಾಗಿದೆ.

    ವಿಜಯ್ ಗೋಯಲ್ ನೋಡಿಕೊಳ್ಳುತ್ತಿದ್ದ ಕ್ರೀಡಾ ಸಚಿವಾಲಯ ಈಗ ರಾಜವರ್ಧನ್ ಸಿಂಗ್ ರಾಥೋಡ್‍ಗೆ ಸಿಕ್ಕಿದೆ. ಗೋಯಲ್ ಅವರು ಸಂಸದೀಯ ವ್ಯವಹಾರ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ರಾಜ್ಯ ಖಾತೆಯನ್ನು ಇನ್ನು ಮುಂದೆ ನಿರ್ವಹಿಸಲಿದ್ದಾರೆ.

    ಇದನ್ನೂ ಓದಿ: ಮೋದಿ ಸಂಪುಟ ಸೇರಿದ ಸಚಿವರ ಸಾಧನೆ ಏನು? ಇಷ್ಟೊಂದು ಮಹತ್ವ ಯಾಕೆ?

    ನರೇಂದ್ರ ಮೋದಿ: ಪ್ರಧಾನ ಮಂತ್ರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ,  ಅಣು ಶಕ್ತಿ, ಬಾಹ್ಯಾಕಾಶ ಹಾಗೂ ಇತರ ಹಂಚಿಕೆಯಾಗದ ಖಾತೆಗಳು

    ಸಂಪುಟ ದರ್ಜೆ ಸಚಿವರು:
    1) ರಾಜನಾಥ್ ಸಿಂಗ್: ಗೃಹ
    2) ನಿರ್ಮಲಾ ಸೀತಾರಾಮನ್: ರಕ್ಷಣಾ
    3) ಸುಷ್ಮಾ ಸ್ವರಾಜ್: ವಿದೇಶ ವ್ಯವಹಾರಗಳ
    4) ಅರುಣ್ ಜೇಟ್ಲಿ: ಹಣಕಾಸು ಕಾರ್ಪೊರೇಟ್ ವ್ಯವಹಾರಗಳ

    5) ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಹಡಗು, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ನದಿ ಪುನಶ್ಚೇತನ
    6) ಸುರೇಶ್ ಪ್ರಭು: ವಾಣಿಜ್ಯ ಮತ್ತು ಉದ್ಯಮ
    7) ಡಿ.ವಿ. ಸದಾನಂದಗೌಡ: ಅಂಕಿ ಅಂಶ ಮತ್ತು ಯೋಜನೆ ಅನುಷ್ಠಾನ
    8) ಉಮಾ ಭಾರತಿ: ಕುಡಿಯುವ ನೀರು ಮತ್ತು ಒಳಚರಂಡಿ

    9) ರಾಮ್ ವಿಲಾಸ್ ಪಾಸ್ವಾನ್: ಗ್ರಾಹಕ ವ್ಯವಹಾರ, ಆಹಾರ
    10) ಮನೇಕಾ ಗಾಂಧಿ: ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ
    11) ಅನಂತಕುಮಾರ್: ರಾಸಾಯನಿಕ ಮತ್ತು ರಸಗೊಬ್ಬರ, ಸಂಸದೀಯ ವ್ಯವಹಾರ
    12) ರವಿಶಂಕರ್ ಪ್ರಸಾದ್: ಕಾನೂನು ಮತ್ತು ನ್ಯಾಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ-ತಂತ್ರಜ್ಞಾನ

    13) ಜೆ.ಪಿ.ನಡ್ಡಾ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ
    14) ಅಶೋಕ್ ಗಜಪತಿ ರಾಜು: ನಾಗರಿಕ ವಿಮಾನಯಾನ
    15) ಅನಂತ್ ಗೀತೆ: ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
    16) ಹರ್ ಸಿಮ್ರತ್ ಕೌರ್ ಬಾದಲ್: ಆಹಾರ ಸಂಸ್ಕರಣಾ, ಉದ್ಯಮ

    17) ನರೇಂದ್ರ ಸಿಂಗ್ ತೋಮರ್: ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಗಣಿಗಾರಿಕೆ
    18) ಬಿರೇಂದರ್ ಸಿಂಗ್ ಚೌಧರಿ: ಉಕ್ಕು
    19) ಜುವಾಲ್ ಓರಮ್: ಬುಡಕಟ್ಟು ವ್ಯವಹಾರ
    20) ರಾಧಾಮೋಹನ್ ಸಿಂಗ್: ಕೃಷಿ ಮತ್ತು ರೈತರ ಕಲ್ಯಾಣ

    21) ಸ್ಮೃತಿ ಇರಾನಿ: ಜವಳಿ ಖಾತೆ: ಮಾಹಿತಿ ಮತ್ತು ಪ್ರಸರಣ
    22) ಡಾ. ಹರ್ಷ್ ವರ್ಧನ್: ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
    23) ತಾವರ್ ಚಂದ್ ಗೆಹ್ಲೋಟ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
    24) ಪ್ರಕಾಶ್ ಜಾವಡೇಕರ್: ಮಾನವ ಸಂಪನ್ಮೂಲ ಅಭಿವೃದ್ಧಿ

    25) ಧರ್ಮೇಂದ್ರ ಪ್ರಧಾನ್: ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲ , ಕೌಶಲ್ಯ ಅಭಿವೃದ್ಧಿ ಮತ್ತು ನವೋದ್ಯಮ
    26) ಪೀಯುಶ್ ಗೋಯಲ್: ರೈಲ್ವೆ, ಕಲ್ಲಿದ್ದಲು
    27) ಮುಕ್ತಾರ್ ಅಬ್ಬಾಸ್ ನಖ್ವಿ: ಅಲ್ಪಸಂಖ್ಯಾತ ವ್ಯವಹಾ

    ರಾಜ್ಯ  ಸ್ವತಂತ್ರ ಖಾತೆ ಸಚಿವರು:
    1) ಇಂದರ್ ಜೀತ್ ಸಿಂಗ್ ರಾವ್: ಯೋಜನಾ, ರಾಸಾಯನಿಕ ಮತ್ತು ರಸಗೊಬ್ಬರ
    2) ಸಂತೋಷ್ ಕುಮಾರ್ ಗಂಗಾವರ್: ಕಾರ್ಮಿಕ ಮತ್ತು ಉದ್ಯೋಗ
    3) ಶ್ರೀಪಾದ್ ನಾಯ್ಕ್: ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಶ್)
    4) ಡಾ. ಜಿತೇಂದ್ರ ಸಿಂಗ್: ಈಶಾನ್ಯ ಪ್ರದೇಶ ಅಭಿವೃದ್ಧಿ, ಪ್ರಧಾನಿ ಕಚೇರಿ, ಸಿಬ್ಬಂದಿ, ಸಾರ್ಜನಿಕ ಕುಂದುಕೊರತೆ, ಪಿಂಚಣಿ, ಅಣು ಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ

    5) ಡಾ. ಮಹೇಶ್ ಶರ್ಮಾ: ಸಂಸ್ಕೃತಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
    6) ಗಿರಿರಾಜ್ ಸಿಂಗ್: ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮ
    7) ಮನೋಜ್ ಸಿನ್ಹಾ: ಸಂವಹನ, ರೈಲ್ವೆ
    8) ಕರ್ನಲ್ ರಾಜವರ್ಧನ್ ಸಿಂಗ್ ರಾಥೋಡ್: ಯುವ ವ್ಯವಹಾರಗಳು ಹಾಗೂ ಕ್ರೀಡೆ, ಮಾಹಿತಿ ಮತ್ತು ಪ್ರಸಾರ

    9) ರಾಜ್ ಕುಮಾರ್ ಸಿಂಗ್: ವಿದ್ಯುತ್,ಹೊಸ ಮತ್ತು ಪುನರ್ ಬಳಕೆ ಇಂಧನ
    10) ಹರದೀಪ್ ಸಿಂಗ್ ಪುರಿ: ವಸತಿ ಮತ್ತು ನಗರ ವ್ಯವಹಾರಗಳ
    11) ಆಲ್ಫೋನ್ಸ್ ಕಣ್ಣಾಂಧಾನಂ: ಪ್ರವಾಸೋದ್ಯಮ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ

    ರಾಜ್ಯ ಖಾತೆ ಸಚಿವರು:
    1) ವಿಜಯ್ ಗೋಯಲ್: ಸಂಸದೀಯ ವ್ಯವಹಾರ, ಅಂಕಿ ಅಂಶ ಮತ್ತು ಯೋಜನೆ ಅನುಷ್ಠಾನ
    2) ಪಿ.ರಾಧಾಕೃಷ್ಣನ್: ಹಣಕಾಸು, ಹಡಗು
    3) ಎಸ್.ಎಸ್.ಅಹ್ಲುವಾಲಿಯಾ: ಕುಡಿಯುವ ನೀರು ಮತ್ತು ನೈರ್ಮಲ್ಯ
    4) ರಮೇಶ್ ಜಿಗಜಿಣಗಿ: ಕುಡಿಯುವ ನೀರು ಮತ್ತು ನೈರ್ಮಲ್ಯ

    5) ರಾಮದಾಸ್ ಅಟಾವಳೆ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
    6) ವಿಷ್ಣು ದೇವೋ: ಉಕ್ಕು
    7) ರಾಮ್ ಕೃಪಾಲ್ ಯಾದವ್: ಗ್ರಾಮೀಣಾಭಿವೃದ್ಧಿ
    8) ಹನ್ಸ್ ರಾಜ್ ಗಂಗಾರಾಮ್ ಆಹಿರ್: ಗೃಹ ವ್ಯವಹಾರಗಳ

    9) ಹರಿಭಾಯ್ ಚೌಧರಿ: ಗಣಿಗಾರಿಕೆ, ಕಲ್ಲಿದ್ದಲು
    10) ರಾಜನ್ ಗೋಹೇನ್: ರೈಲ್ವೇ
    11) ಜನರಲ್ ವಿ.ಕೆ.ಸಿಂಗ್: ವಿದೇಶ ವ್ಯವಹಾರಗಳ
    12) ಪರುಷೋತ್ತಮ್ ರುಪಾಲಾ: ಕೃಷಿ ಮತ್ತು ರೈತರ ಕಲ್ಯಾಣ, ಪಂಚಾಯತ್ ರಾಜ್

    13) ಕೃಷನ್ ಪಾಲ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ
    14) ಜಸ್ವಂತ್’ಸಿನ್ಹ್ ಭಾಬೋರ್: ಬುಡಕಟ್ಟು ವ್ಯವಹಾರಗಳ
    15) ಶಿವಪ್ರತಾಪ್ ಶುಕ್ಲಾ: ಹಣಕಾಸು
    16) ಅಶ್ವಿನಿ ಕುಮಾರ್ ಚೌಬೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ

    17) ಸುದರ್ಶನ್ ಭಗತ್: ಬುಡಕಟ್ಟು ವ್ಯವಹಾರಗಳ
    18) ಉಪೇಂದ್ರ ಕುಶ್ವಾಹಾ: ಮಾನವ ಸಂಪನ್ಮೂಲ ಅಭಿವೃದ್ಧಿ
    19) ಕಿರಣ್ ರಿಜಿಜು: ಗೃಹ ವ್ಯವಹಾರ
    20) ಡಾ. ವಿರೇಂದ್ರ ಕುಮಾರ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಲ್ಪಸಂಖ್ಯಾತ ವ್ಯವಹಾರಗಳ

    21) ಅನಂತಕುಮಾರ್ ಹೆಗಡೆ: ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ
    22) ಎಂ.ಜೆ.ಅಕ್ಬರ್: ವಿದೇಶ ವ್ಯವಹಾರಗಳ
    23) ಸಾಧ್ವಿ ನಿರಂಜನ್ ಜ್ಯೋತಿ: ಆಹಾರ ಸಂಸ್ಕರಣ ಉದ್ಯಮಗಳ
    24) ವೈ.ಎಸ್.ಚೌಧರಿ: ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ

    25) ಜಯಂತ್ ಸಿನ್ಹಾ: ನಾಗರಿಕ ವಿಮಾನಯಾನ
    26) ಬಾಬುಲ್ ಸುಪ್ರಿಯೋ: ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ
    27) ವಿಜಯ್ ಸಾಂಪ್ಲಾ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
    28) ಅರ್ಜುನ್ ರಾಮ್ ಮೇಘವಾಲ್: ಸಂಸದೀಯ ವ್ಯವಹಾರ, ಜಲಸಂಪನ್ಮೂಲ ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಯೋಜನೆ

    29) ಅಜಯ್ ತಾಮಟ: ಜವಳಿ
    30) ಕೃಷ್ಣ ರಾಜ್: ಕೃಷಿ ಮತ್ತು ರೈತರ ಕಲ್ಯಾಣ
    31) ಮನ್’ಸುಖ್ ಮಾಂಡವಿಯಾ: ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಹಡಗು ಸಾಗಣೆ, ರಾಸಾಯನಿಕ ಮತ್ತು ರಸಗೊಬ್ಬರ
    32) ಅನುಪ್ರಿಯಾ ಪಟೇಲ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ

    33) ಸಿ.ಆರ್. ಚೌಧರಿ: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ವಾಣಿಜ್ಯ ಮತ್ತು ಉದ್ಯಮ
    34) ಪಿ.ಪಿ.ಚೌಧರಿ: ಕಾನೂನು ಮತ್ತು ನ್ಯಾಯ, ಕಾರ್ಪೊರೇಟ್ ವ್ಯವಹಾರ
    35) ಡಾ. ಸುಭಾಷ್ ರಾಮರಾವ್ ಭಾಮ್ರೆ: ರಕ್ಷಣಾ
    36) ಗಜೇಂದ್ರ ಸಿಂಗ್ ಶೇಖಾವತ್: ಕೃಷಿ ಮತ್ತು ರೈತರ ಕಲ್ಯಾಣ
    37) ಡಾ. ಸತ್ಯಪಾಲ್ ಸಿಂಗ್: ಮಾನವ ಸಂಪನ್ಮೂಲ ಅಭಿವೃದ್ಧಿ, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಯೋಜನೆ

     

     

  • ಮೋದಿ ಸಂಪುಟ ಸೇರಿದ ಸಚಿವರ ಸಾಧನೆ ಏನು? ಇಷ್ಟೊಂದು ಮಹತ್ವ ಯಾಕೆ?

    ಮೋದಿ ಸಂಪುಟ ಸೇರಿದ ಸಚಿವರ ಸಾಧನೆ ಏನು? ಇಷ್ಟೊಂದು ಮಹತ್ವ ಯಾಕೆ?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ಬೆಳಗ್ಗೆ 10.30ಕ್ಕೆ ಪುನಾರಚನೆ ಆಗಿದೆ. 9 ಮಂದಿ ಹೊಸಬರು ಸಂಪುಟ ಸೇರಿದ್ದು, ನಾಲ್ಕು ಮಂದಿಗೆ ಕ್ಯಾಬಿನೆಟ್ ದರ್ಜೆಗೆ ಭಡ್ತಿ ನೀಡಲಾಗಿದೆ. ಸಚಿವ ಸ್ಥಾನದ ಪಟ್ಟಿಯಲ್ಲಿ ಕರ್ನಾಟಕದ ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ಶೋಭಾ ಕರಂದ್ಲಾಜೆ ಹೆಸರು ಬಲವಾಗಿ ಕೇಳಿ ಬಂದಿತ್ತು. ಆದರೆ ಮೋದಿ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದು, ಅಚ್ಚರಿಯ ಆಯ್ಕೆ ಎಂಬಂತೆ ಉತ್ತರ ಕನ್ನಡದ ಸಂಸದ ಉತ್ತರ ಕನ್ನಡದ ಅನಂತಕುಮಾರ್ ಹೆಗಡೆ ಅವರನ್ನು ಆರಿಸಿದ್ದಾರೆ. ಹೀಗಾಗಿ ಇಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಿದ 9 ಮಂದಿ ಸಚಿವರ ಕಿರು ವಿವರವನ್ನು ನೀಡಲಾಗಿದೆ.

    ಅನಂತ್‍ಕುಮಾರ್ ಹೆಗಡೆ:
    ಮೇ 20, 1968ರಲ್ಲಿ ಶಿರಸಿಯಲ್ಲಿ ಜನಿಸಿದ ಇವರ ಪೂರ್ಣ ಹೆಸರು ಅನಂತಕುಮಾರ್ ದತ್ತಾತ್ರೇಯ ಹೆಗಡೆ. ಉತ್ತರ ಕನ್ನಡದ ಬಿಜೆಪಿ ಹಾಲಿ ಸಂಸದರಾಗಿರುವ ಅನಂತ್ ಕುಮಾರ್ 28ನೇ ವಯಸ್ಸಿಗೇ ಮೊದಲ ಬಾರಿ ಸಂಸದರಾಗಿ ಆಯ್ಕೆ ಆಗಿದ್ದರು. 1996, 1998, 2004, 2009, 2014ರಲ್ಲಿ ಸಂಸದರಾಗಿ ಆಯ್ಕೆ ಆಗಿರುವ ಇವರು ವಿದೇಶಾಂಗ ವ್ಯವಹಾರ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿ ಹಾಲಿ ಸದಸ್ಯರಾಗಿದ್ದಾರೆ.

    ಹಣಕಾಸು, ಗೃಹ, ವಾಣಿಜ್ಯ, ಕೃಷಿ, ಪರಿಸರ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು ಗ್ರಾಮೀಣಾ ಅಭಿವೃದ್ಧಿಗಾಗಿ ಕದಂಬ ಹೆಸರಿನ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಟೇಕ್ವಾಂಡೋ, ಮಾರ್ಷಲ್ ಆರ್ಟ್ಸ್ ನಲ್ಲಿ ಪರಿಣಿತಿಯನ್ನು ಪಡೆದಿದ್ದಾರೆ.

    ಅಶ್ವಿನಿ ಚೌಬೆ:
    ಬಿಹಾರದ ಬಕ್ಸರ್ ಕ್ಷೇತ್ರದ ಸಂಸದರಾಗಿರುವ ಅಶ್ವಿನಿ ಚೌಬೆ ಬ್ರಾಹ್ಮಣ ಸಮುದಾಯದ ಪ್ರಮುಖ ಮುಖಂಡರಾಗಿದ್ದು, 8 ವರ್ಷ ಬಿಹಾರದಲ್ಲಿ ಸಚಿವರಾಗಿ ಅನುಭವ ಹೊಂದಿದ್ದಾರೆ. 5 ಬಾರಿ ಬಾಗಲ್ಪುರದಿಂದ ಶಾಸಕರಾಗಿ ಆಯ್ಕೆ ಆಗಿದ್ದಾರೆ.

    ಸತ್ಯಪಾಲ್ ಸಿಂಗ್:
    ಉತ್ತರಪ್ರದೇಶ ಬಾಗ್ಪತ್ ಕ್ಷೇತ್ರದ ಸಂಸದರಾಗಿರುವ ಇವರು ಮುಂಬೈ ಪೊಲೀಸ್ ಆಯುಕ್ತರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದರು. ಮೊದಲ ಬಾರಿಗೆ ಸಂಸದರಾಗಿರುವ ಇವರು ಇಶ್ರಾಂತ್ ಜಹಾನ್ ನಕಲಿ ಎನ್‍ಕೌಂಟರ್ ಪ್ರಕರಣದ ತನಿಖಾ ತಂಡದ ಮುಖ್ಯಸ್ಥರಾಗಿದ್ದರು.

    ಗಜೇಂದ್ರ ಸಿಂಗ್ ಶೇಖಾವತ್:
    ರಾಜಸ್ಥಾನದ ಜೋಧಪುರ್ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಇವರು ರಜಪೂತ್ ಸಮುದಾಯದ ಪ್ರಭಾವಿ ನಾಯಕ. ಐತಿಹಾಸಿಕ 4,10,051 ಮತಗಳ ಅಂತರದೊಂದಿಗೆ ಗೆದ್ದಿದ್ದು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದಾರೆ. ಪ್ರಶ್ನೆ ಮತ್ತು ಉತ್ತರಕ್ಕೆ ಮೀಸಲಾಗಿರುವ ಸಾಮಾಜಿಕ ಜಾಲತಾಣ ಕೋರಾದಲ್ಲಿ ಇವರ ಪೇಜ್ ಅನ್ನು 58 ಲಕ್ಷ ಬಾರಿ ವೀಕ್ಷಣೆ ಮಾಡಲಾಗಿದೆ. ಸ್ವದೇಶಿ ಜಾಗರಣ ಮಂಚ್, ಬಿಜೆಪಿ ಕಿಸಾನ್ ಮೋರ್ಚಾದಲ್ಲಿ ಸಕ್ರಿಯರಾಗಿರುವ ಇವರು ತತ್ವಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

    ಶಿವಪ್ರತಾಪ್ ಶುಕ್ಲ:
    ಉತ್ತರಪ್ರದೇಶದಿಂದ ರಾಜ್ಯಸಭಾ ಸಂಸದರಾಗಿರುವ ಇವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪ್ರಮುಖ ಮುಖಂಡರಾಗಿದ್ದಾರೆ. ರಾಜನಾಥ್ ಸಿಂಗ್, ಕಲ್ಯಾಣ ಸಿಂಗ್ ಅವಧಿಯಲ್ಲಿ ಉತ್ತರಪ್ರದೇಶಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

    ವೀರೇಂದ್ರ ಕುಮಾರ್:
    ಮಧ್ಯಪ್ರದೇಶದ ಟಿಕ್ಕಂಗಢ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಇವರು ಸತತ 7 ಬಾರಿ ಲೋಕಸಭೆಗೆ ಆಯ್ಕೆ ಆಗಿದ್ದಾರೆ. ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿ, ಬಾಲಕಾರ್ಮಿಕರ ವಿಷಯದಲ್ಲಿ ಪಿಎಚ್‍ಡಿ ಪದವಿ ಪಡೆದಿದ್ದಾರೆ.

    ರಾಜ್‍ಕುಮಾರ್ ಸಿಂಗ್:
    ಮಾಜಿ ಕೇಂದ್ರ ಗೃಹ ಖಾತೆ ಕಾರ್ಯದರ್ಶಿ ಆಗಿರುವ ಇವರು ಮೊದಲ ಬಾರಿಗೆ ಬಿಹಾರದ ಅರ್ರಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಆಗಿದ್ದಾರೆ. ರಾಮಜನ್ಮ ಭೂಮಿ ರಥಯಾತ್ರೆ ವೇಳೆ 1990 ಅಕ್ಟೋಬರ್ 30 ರಂದು ಸಮಷ್ಠಿಪುರದಲ್ಲಿ ಅಡ್ವಾಣಿ ಬಂಧಿಸಿದ ಖ್ಯಾತಿ ಇವರಿಗಿದೆ. ಅತ್ಯಂತ ದಕ್ಷ ಐಎಎಸ್ ಅಧಿಕಾರಿ ಎಂದು ಹೆಗ್ಗಳಿಕೆಯನ್ನು ಪಡೆದಿದ್ದಾರೆ.

    ಹರ್ದೀಪ್ ಸಿಂಗ್ ಪುರಿ:
    1974ನೇ ಬ್ಯಾಚ್‍ನ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿ ಆಗಿದ್ದ ಇವರು 009 – 2013ರವರೆಗೆ ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ಆಗಿ ಕಾರ್ಯನಿರ್ವಹಿಸಿದ್ದರು. ವಿಶ್ವಸಂಸ್ಥೆಯ ಭದ್ರತಾ ಸಮಿತಿ(ಭಯೋತ್ಪಾದನೆ ನಿಗ್ರಹ) ಮುಖ್ಯಸ್ಥರಾಗಿದ್ದರು. ಬ್ರೆಜಿಲ್, ಶ್ರೀಲಂಕಾ, ಜಪಾನ್, ಇಂಗ್ಲೆಂಡ್‍ಗೆ ರಾಯಭಾರಿ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಇವರು 2014ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರೂ ಇನ್ನೂ ಸಂಸದರಾಗಿಲ್ಲ.

    ಅಲ್ಫೋನ್ಸ್ ಕಣ್ಣನ್‍ತನಂ:
    ಮಾಜಿ ಐಎಎಸ್ ಅಧಿಕಾರಿ, 2006ರಲ್ಲಿ ಬಿಜೆಪಿಗೆ ಸೇರ್ಪಡೆ ಆಗಿದ್ದ ಇವರು ಈ ಹಿಂದೆ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ವೇಳೆ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಿದ್ದರು. ‘ಡೆಮಾಲಿಶನ್ ಮ್ಯಾನ್’ ಎಂದೇ ಖ್ಯಾತಿ ಪಡೆದಿರುವ ಇವರು 1994ರಲ್ಲಿ ಟೈಂ ಮ್ಯಾಗಜಿನ್‍ನ 100 ಪ್ರಭಾವಿ ಯುವ ಮುಖಗಳಲ್ಲಿ ಒಬ್ಬರಾಗಿದ್ದರು. ಸದ್ಯ ರಾಷ್ಟ್ರೀಯ ಶಿಕ್ಷಣ ನೀತಿ ಮೇಲಿನ ಸಮಿತಿ ಸದಸ್ಯರಾಗಿರುವ ಇವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾಗಿದ್ದಾರೆ. ಆದರೆ ಸದ್ಯ ಸಂಸದರಲ್ಲ.

    ಸಂಪುಟ ಪುನಾರಚನೆಗೆ ಯಾಕೆ ಅಷ್ಟೊಂದು ಮಹತ್ವ?
    ಇದು ತಮ್ಮ ಕನಸಿನ ಸಂಪುಟ ರಚಿಸಿಕೊಳ್ಳಲು ಪ್ರಧಾನಿ ಮೋದಿಗಿರುವ ಕಡೆಯ ಅವಕಾಶವಾಗಿದ್ದು, ಕಳಪೆ ಸಾಧನೆ ಮಾಡಿದ ಸಚಿವರಿಗೆ ಗೇಟ್‍ಪಾಸ್, ಹೊಸಬರು, ಯುವ ಮುಖಗಳಿಗೆ ಅವಕಾಶ ನೀಡಲಾಗಿದೆ. ಇನ್ನೆರಡು ವರ್ಷಗಳಲ್ಲಿ 3 ವರ್ಷಗಳ ಹಿಂದೆ ಘೋಷಿಸಿರುವ ಕಾರ್ಯಕ್ರಮಗಳ ಸಮರ್ಥ ಅನುಷ್ಠಾನ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಸರ್ಕಾರದ ಬಗ್ಗೆ ಮತ್ತಷ್ಟು ಜನಪ್ರಿಯತೆ ಸೃಷ್ಟಿಸುವ ಲೆಕ್ಕಾಚಾರ ನೋಡಿಕೊಂಡು ಪುನಾರಚನೆ ಮಾಡಿದ್ದಾರೆ ಎನ್ನಲಾಗಿದೆ.

    ಈಗಾಗಲೇ ಅಮಿತ್ ಶಾ ಹೆಣೆದಿರುವ 350 ಸೀಟುಗಳ ಕನಸನ್ನು ಸಾಕಾರಗೊಳಿಸುವುದಕ್ಕೆ ಸಂಪುಟದಲ್ಲಿ ಜಾತಿ-ವರ್ಗಗಳ ಲೆಕ್ಕಾಚಾರದಲ್ಲಿ ಜಾಗ ನೀಡಿ ಹೊಸ ಮತ ಧ್ರುವೀಕರಣಕ್ಕೆ ಪ್ಲಾನ್ ಮಾಡಿ ಪುನರಾಚನೆ ಮಾಡಲಾಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ, ಪಶ್ಚಿಮಬಂಗಾಳ, ಅಸ್ಸಾಂ, ಒಡಿಶಾದಲ್ಲಿ ಮತ್ತಷ್ಟು ಸಂಸದ ಸ್ಥಾನ ಗೆಲ್ಲಲು ತಂತ್ರ ಹೆಣೆಯಲಾಗಿದ್ದು ಈ ಕಾರಣಕ್ಕೆ ಹಿರಿಯ ಸಚಿವರಿಗೆ ಮಂತ್ರಿ ಸ್ಥಾನದಿಂದ ಮುಕ್ತಿ ನೀಡಿ ಪಕ್ಷದ ಬಲವರ್ಧನೆಗೆ ಬಳಸಲು ಮೋದಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ನಿರ್ಮಲಾ ಸೀತಾರಾಮನ್, ಮುಕ್ತಾರ್ ಅಬ್ಬಾಸ್ ನಖ್ವಿ, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್ ಅವರಿಗೆ ಕ್ಯಾಬಿನೆಟ್ ದರ್ಜೆಗೆ ಭಡ್ತಿ ನೀಡಲಾಗಿದೆ. ಈ ನಾಲ್ಕೂ ಸಚಿವರಿಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಸ್ಪೀಕರ್ ಸುಮಿತ್ರಾ ಮಹಾಜನ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ ಸೇರಿದಂತೆ ಹಲವು ಸಚಿವರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಭಾರತೀಯ ಸೇನೆಯ ಮೂರು ದಳಗಳ ಮುಖ್ಯಸ್ಥರು ಹಾಜರಿದ್ದರು.

  • ನಿಮ್ಮ ಯಾವುದೇ ಬೆದರಿಕೆಗೆ ನಾವು ಜಗ್ಗಲ್ಲ: ಸಿಎಂ ವಿರುದ್ಧ ಪ್ರತಾಪ್ ಸಿಂಹ ಕೆಂಡಾಮಂಡಲ

    ನಿಮ್ಮ ಯಾವುದೇ ಬೆದರಿಕೆಗೆ ನಾವು ಜಗ್ಗಲ್ಲ: ಸಿಎಂ ವಿರುದ್ಧ ಪ್ರತಾಪ್ ಸಿಂಹ ಕೆಂಡಾಮಂಡಲ

    ಮೈಸೂರು: ಬಿಜೆಪಿ ಯುವ ಮೋರ್ಚಾದಿಂದ ಮಂಗಳೂರು ಚಲೋ ಪ್ರತಿಭಟನೆಯಲ್ಲಿ ಭಾಗಿ ಆಗುವವರಿಗೆ ಸ್ಥಳಾವಕಾಶ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಬೆದರಿಕೆ ತಂತ್ರಗಳಿಗೆ ನಾವು ಹೆದರೋದಿಲ್ಲ. ನೀವು ಕಲ್ಯಾಣ ಮಂಟಪದ ಮಾಲೀಕರಿಗೆ ಬೆದರಿಕೆ ಪತ್ರ ನೀಡಿ ಏನೂ ಮಾಡೋಕಾಗಲ್ಲ. ನಾವು ನಮ್ಮ ಕಾರ್ಯಕರ್ತರ ಮನೆಯಲ್ಲಿ ಪ್ರತಿಭಟನಾಕಾರರನ್ನು ಉಳಿಸುತ್ತೆವೆ. ಪ್ರಜಾ ತಾಂತ್ರಿಕವಾಗಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕು ಇದೆ. ನೀವು ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದಾಗ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿರಲಿಲ್ಲವೇ? ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದ್ದೀರಾ ಅಂತ ಕಿಡಿಕಾರಿದ್ದಾರೆ.

    ಹಿಂದೂ ಮುಖಂಡರುಗಳ ಕೊಲೆಗೆ ಕಾರಣವಾದ ಕೆಎಫ್ ಡಿ ಹಾಗೂ ಪಿಎಫ್‍ಐ ಸಂಘಟನೆಗಳನ್ನು ನಿಷೇಧ ಮಾಡಿ. ಕಾನೂನು ರೀತಿಯಲ್ಲಿ ನೀವೇ ಆ ಸಂಘಟನೆಗಳನ್ನು ನಿಷೇಧ ಮಾಡಿದ್ದರೆ ನಾವು ಬೈಕ್ ಜಾಥಾವನ್ನು ಮಾಡುತ್ತಿರಲಿಲ್ಲ. ಕೆಎಫ್ ಡಿ, ಪಿಎಫ್‍ಐ ಸಂಘಟನೆಗಳ ಮೇಲೆ ಯಾಕೆ ನಿಮಗೆ ಅಷ್ಟೊಂದು ಪ್ರೀತಿ. ಕಾನೂನು ಸುವ್ಯವಸ್ಥೆಯನ್ನು ಹಿಂದೂ ಮುಖಂಡರು ಆರ್ ಎಸ್‍ಎಸ್ ನವರು ಮಾತ್ರ ಹಾಳು ಮಾಡುತ್ತಾರೆ. ನಿಮ್ಮ ಯಾವುದೇ ಬೆದರಿಕೆಗಳಿಗೆ ನಾವು ಜಗ್ಗಲ್ಲ. ನಮ್ಮ ಹೋರಾಟ ಮುಂದುವರಿಯುತ್ತದೆ ಅಂತ ಸ್ಪಷ್ಟಪಡಿಸಿದ್ರು.

    ಇದನ್ನೂ ಓದಿ: ಮಂಗಳೂರು ಚಲೋ ರ‍್ಯಾಲಿಗೆ ಪೊಲೀಸರ ನೋಟಿಸ್

    ಸಿಎಂ ಏಕವಚನಕ್ಕೆ ಪ್ರತಾಪ್ ಸಿಂಹ ಕಿಡಿ:
    ಮೈಸೂರು ಮಹಾರಾಜರ ಕುರಿತು ಸಿಎಂ ಸಿದ್ದರಾಮಯ್ಯ ಹಗುರವಾಗಿ ಹೇಳಿಕೆ ನೀಡಿದ್ದರ ಬಗ್ಗೆ ಶನಿವಾರ ಮೈಸೂರು ಸಂಸದ ಪ್ರತಾಪ್ ಸಿಂಹ ಕಟುವಾಗಿ ತಿರುಗೇಟು ನೀಡಿದ್ದಾರೆ. ಮಹಾರಾಜರನ್ನು ಏಕವಚನದಲ್ಲಿ ಸಂಬೋಧಿಸಿದ್ದು ನಿಮ್ಮ ನೀಚ ಬುದ್ಧಿಯನ್ನು ತೋರುತ್ತದೆ. ಮಹಾರಾಜ ಜನರ ದುಡ್ಡಲ್ಲಿ ಮಾರ್ಕೆಟ್ ಕಟ್ಟಿದ್ದ ಎಂದು ಪ್ರಶ್ನೆ ಮಾಡುವ ನೀವು ಮೊದಲು ನಿಮ್ಮನ್ನ ನೀವೇ ಆತ್ಮಾವಲೋಕನ ಮಾಡಿಕೊಳ್ಳಿ. ಇಂದಿರಾ ಕ್ಯಾಂಟೀನ್ ಗೆ ಇಂದಿರಾಗಾಂಧಿ ಕುಟುಂಬ ದುಡ್ಡು ಕೊಟ್ಟಿದ್ದಾರಾ? ಅಕ್ಕಿ ಹಾಗೂ ಉಪ್ಪಿನ ಪ್ಯಾಕ್ ಮೇಲೆ ನಿಮ್ಮ ಫೋಟೋ ಹಾಕಿಕೊಳ್ಳಲು ಅದಕ್ಕೆ ನಿಮ್ಮ ಸ್ವಂತ ದುಡ್ಡು ಕೊಟ್ಟಿದ್ದೀರಾ? ಮಹಾರಾಜರು ಕಟ್ಟಿಸಿದ ಯೂನಿವರ್ಸಿಟಿಯಲ್ಲಿ ಪದವಿ ಪಡೆದ ನಿಮಗೆ ಅವರ ಬಗ್ಗೆ ಕನಿಷ್ಠ ಕೃತಜ್ಞತೆಯ ಇಲ್ಲವೇ ಅಂತ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ರು.

    ಮಹಾರಾಜರನ್ನು ಏಕವಚನದಲ್ಲಿ ಸಂಬೋಧಿಸಿದ ನಿಮಗೆ ಅವರು ನಿರ್ಮಿಸಿದ ರಸ್ತೆಗಳಿಗೆ ಡಾಂಬರ್ ಹಾಕುವ ಶಕ್ತಿ ಇಲ್ಲ ಅಂತ ಟೀಕಿಸಿದ್ರು. ನಿಮಗೆ ಮೈಸೂರು ರಾಜಮನೆತನದ ಕುಟುಂಬದ ಬಗ್ಗೆ ಗೌರವ ಇಲ್ಲ ಅಂತ ನಮಗೆ ಎಂದೋ ತಿಳಿದಿದೆ. ಮಹಾರಾಜರ ಪತನಕ್ಕೆ ಕಾರಣವಾದ ಟಿಪ್ಪು ಜಯಂತಿ ಆಚರಿಸುವ ನಿಮ್ಮ ಬುದ್ಧಿ ಏನೆಂದು ನಮಗೆ ಗೊತ್ತಿದೆ. ಬೇರೆಯವರನ್ನು ಪ್ರಶ್ನೆ ಮಾಡುವ ಮುನ್ನ ನಿಮ್ಮನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

  • ತಮಟೆ ಬಾರಿಸಿ ಡ್ಯಾನ್ಸ್, ಆದ್ರೆ ಹೇಳಿದ್ದೊಂದೂ ಮಾಡ್ಲಿಲ್ಲ- ಸಚಿವ ಆಂಜನೇಯ 1 ರಾತ್ರಿಯ ವಾಸ್ತವ್ಯಕ್ಕೆ ಖರ್ಚಾಗಿದ್ದೆಷ್ಟು ಗೊತ್ತಾ?

    ತಮಟೆ ಬಾರಿಸಿ ಡ್ಯಾನ್ಸ್, ಆದ್ರೆ ಹೇಳಿದ್ದೊಂದೂ ಮಾಡ್ಲಿಲ್ಲ- ಸಚಿವ ಆಂಜನೇಯ 1 ರಾತ್ರಿಯ ವಾಸ್ತವ್ಯಕ್ಕೆ ಖರ್ಚಾಗಿದ್ದೆಷ್ಟು ಗೊತ್ತಾ?

    ಚಿಕ್ಕಮಗಳೂರು: ತಮಟೆ ಬಾರಿಸಿದ್ದೇನು, ಡ್ಯಾನ್ಸ್ ಮಾಡಿದ್ದೇನು. ನೆಲದ ಮೇಲೆ ಮಲಗಿ ಪೋಸ್ ಕೊಟ್ಟಿದ್ದೇನು. ಅಬ್ಬಬ್ಬಾ ನಮ್ಮ ಸಮಾಜ ಕಲ್ಯಾಣ ಸಚಿವರ ಹಾಡಿ ವಾಸ್ತವ್ಯ ನೋಡೋಕೆ ಎರಡು ಕಣ್ಣು ಸಾಲದಾಗಿತ್ತು. ಇವರು ಬಂದಾಗ ನಮ್ಮ ಸಮಸ್ಯೆ ದೂರವಾಗುತ್ತೆ ಅಂತ ಜನ ಕನಸು ಕಂಡಿದ್ರು. ಆದ್ರೆ ಆಗಿದ್ದೇ ಬೇರೆ. ಊರು ಉದ್ದಾರ ಆಗ್ಲಿಲ್ಲ. ಸಚಿವ ಆಂಜನೇಯ ಬರುವಾಗ ಹಾಕಿದ್ದ ರಸ್ತೆ, ಲೈಟ್ ಉಳಿದಿದ್ದು ಎರಡೇ ದಿನ.

    ಇಷ್ಟೇ ಆಗಿದ್ರೆ ಈ ರಾಜಕಾರಣಿಗಳ ಹಣೆಬರಹನೇ ಇಷ್ಟು ಅನ್ಕೊಂಡು ಸುಮ್ಮನಿರಬಹುದಿತ್ತು. ಆದ್ರೆ ಈ ಒಂದು ರಾತ್ರಿಯ ವಾಸ್ತವ್ಯಕ್ಕೆ ಖರ್ಚು ಮಾಡಿದ್ದು ಬರೋಬ್ಬರಿ ಮೂರು ಲಕ್ಷ.

    ಹೌದು. ಬೋಗಸ್ ಬಿಲ್ ಮಾಡಿ ಸಚಿವರ ಹೆಸರಲ್ಲಿ ಹಣವನ್ನು ನುಂಗಿ ನೀರು ಕುಡಿದಿದ್ದಾರೆ ಭ್ರಷ್ಟರು. ಅವರ ಬಿಲ್‍ನಲ್ಲಿ ಯಾವುದಕ್ಕೆ ಎಷ್ಟೆಲ್ಲಾ ಖರ್ಚಾಗಿದೆ ಅಂತಾ ನೋಡೋದಾದ್ರೆ: ಕುಡಿಯೋ ನೀರಿಗೆ 4,800 ರೂಪಾಯಿ, ಪ್ಲಾಸ್ಟಿಕ್ ಗ್ಲಾಸ್‍ಗೆ 4,400 ರೂಪಾಯಿ, ಫ್ಲೆಕ್ಸ್‍ಗೆ 56,000 ರೂಪಾಯಿ, ಊಟ-ತಿಂಡಿಗೆ 1.20 ಲಕ್ಷ ರೂಪಾಯಿ, ಶಾಮಿಯಾನ ಹಾಗೂ ಲೈಟಿಂಗ್ಸ್‍ಗೆ 1 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರಂತೆ.

    ರಸ್ತೆ, ಅಂಗನವಾಡಿ, ಸಮುದಾಯ ಭವನ ಎಲ್ಲವೂ ಆಗ್ಬೇಕಿತ್ತು. ಆದ್ರೆ ಯಾವುದೂ ಮಾಡಿಕೊಟ್ಟಿಲ್ಲ. ಇಲ್ಲಿ ಬಂದು ಹೋಗಿ ಆಶ್ವಾಸನೆ ಕೊಟ್ಟಿದ್ದು ಯಾವುದೂ ಆಗಿಲ್ಲ. 3 ಸ್ಟ್ರೀಟ್ ಲೈಟ್, 2 ಹೋಮ್ ಲೈಟ್ ಹಾಕಿದ್ರು. ಎರಡು ತಿಂಗಳು ಉರಿಯಿತು. ಆಮೇಲೆ ಯಾವುದೂ ಉರೀತಿಲ್ಲ ಎಂದು ಸ್ಥಳೀಯರಾದ ಮಹೇಶ್ ಹೇಳಿದ್ದಾರೆ.

    ಮನೆ ಮಾಡಿಕೊಡ್ತೀನಿ ಎಂದು ಹೇಳಿದ್ರು. 32 ಮನೆ ಕೊಡ್ತೀವಿ ಎಂದಿದ್ರು. ಯಾರಿಗೂ ಮನೆ ಕೊಟ್ಟಿಲ್ಲ. ನಿಮ್ಮಲ್ಲಿ ಯಾರಾದ್ರೂ ಅಂಗನವಾಡಿ ಟೀಚರ್ ಆಗ್ಬೇಕು ಎಂದಿದ್ರು. ಟೀಚರ್ ಬಿಡಿ, ಮಕ್ಕಳಿಗೆ ಅಂಗನವಾಡಿ ಮಾಡಿಕೊಟ್ಟಿದ್ರೆ ಎಷ್ಟೋ ಸಹಾಯವಾಗ್ತಿತ್ತು ಅಂತ ಮತ್ತೊಬ್ಬ ಸ್ಥಳೀಯರು ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ.

    ಒಟ್ನಲ್ಲಿ ಸಚಿವರು ಗ್ರಾಮವಾಸ್ತವ್ಯದ ವೇಳೆ ಕ್ಯಾಮೆರಾ ಮುಂದೆ ಅದು ಮಾಡ್ತೀನಿ, ಇದು ಮಾಡ್ತೀನಿ ಅಂತ ಬುರುಡೆ ಬಿಟ್ರೆ, ಅಧಿಕಾರಿಗಳು ಸಚಿವರ ಹೆಸರಲ್ಲಿ ಸರ್ಕಾರಕ್ಕೆ ಪಂಗನಾಮ ಹಾಕಿದ್ದಾರೆ. ಇದನ್ನೆಲ್ಲಾ ನೋಡಿ ಹಾಡಿ ಜನ ತಲೆ ಚಚ್ಚಿಕೊಳ್ತಿದ್ದಾರೆ.

  • ಅಣ್ಣನಿಂದಲೇ ತಮ್ಮನ ಕುಟುಂಬ ಕಿಡ್ನ್ಯಾಪ್- ಸಚಿವೆ ಉಮಾಶ್ರೀ ಆಪ್ತನಿಂದ ಕೃತ್ಯ

    ಅಣ್ಣನಿಂದಲೇ ತಮ್ಮನ ಕುಟುಂಬ ಕಿಡ್ನ್ಯಾಪ್- ಸಚಿವೆ ಉಮಾಶ್ರೀ ಆಪ್ತನಿಂದ ಕೃತ್ಯ

    ಬಾಗಲಕೋಟೆ: ಆಸ್ತಿ ವಿಚಾರವಾಗಿ ನಡೆದ ಕಲಹದ ಹಿನ್ನೆಲೆಯಲ್ಲಿ ಅಣ್ಣನಿಂದಲೇ ತಮ್ಮನ ಕುಟುಂಬ ಕಿಡ್ನ್ಯಾಪ್ ಆಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬನಹಟ್ಟಿ ಪಟ್ಟಣದಲ್ಲಿ ನಡೆದಿದೆ.

    ಶಂಕರ್ ಉರ್ಫ್ ರಾಜಶೇಕರ್ ಸೋರಗಾವಿ ಸಹೋದರನ ಕುಟುಂಬಸ್ಥರನ್ನ ಕಿಡ್ನ್ಯಾಪ್ ಮಾಡಿಸಿರುವ ವ್ಯಕ್ತಿ. ಮೂಲತಃ ತೇರದಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿರುವ ಶಂಕರ್ ಸೋರಗಾವಿ, ಸಚಿವೆ ಉಮಾಶ್ರೀ ಆಪ್ತ ಸಹ ಆಗಿದ್ದಾನೆ.

    ಈ ಹಿಂದೆ ಆಸ್ತಿ ವಿಚಾರವಾಗಿ ಅಣ್ಣ ಶಂಕರ್ ಹಾಗೂ ತಮ್ಮ ಯಶವಂತ್ ಸೋರಗಾವಿ ಮಧ್ಯೆ ಕಲಹವಾಗಿತ್ತು. ಅಲ್ಲದೆ ಶಂಕರ್ ಯಶವಂತ ಹಾಗೂ ಮನೆಯವರ ಮೇಲೆ ಹಲ್ಲೆಯನ್ನೂ ನಡೆಸಿದ್ದ. ಈ ಬಗ್ಗೆ ಕಳೆದ ವರ್ಷ ಆಕ್ಟೋಬರ್ 14ರಂದು ಹಲ್ಲೆಗೊಳಗಾದ ಯಶವಂತ್ ಕುಟುಂಬದವರು ಆಗಿನ ಪೊಲೀಸ್ ವರೀಷ್ಠಾಧಿಕಾರಿ ಎಂಎನ್ ನಾಗರಾಜ್ ಬಳಿ ದುಗುಡ ಹೇಳಿಕೊಂಡು ದೂರು ದಾಖಲಿಸಿದ್ದರು.

    ಆದ್ರೆ ಕಳೆದ ತಡರಾತ್ರಿ ಯಶವಂತ ಅವರ ಮನೆಗೆ ನುಗ್ಗಿದ್ದ ಅಪಹರಣಕಾರರು ಯಶವಂತ್ ಸೋರಗಾವಿ, ಪತ್ನಿ ಮಂಜುಳಾ, ಮಕ್ಕಳಾದ ವಿಶಾಲ್ ಪ್ರಶಾಂತ್ ಹಾಗೂ ವಿದ್ಯಾಶ್ರೀ ಅವರ ಮೇಲೆ ಹಲ್ಲೆ ನಡೆಸಿ, ಕ್ರೂಸರ್ ವಾಹನದಲ್ಲಿ ಅವ್ರನ್ನೆಲ್ಲ ಹೊತ್ತೊಯ್ದಿದ್ದಾರೆ. ಈ ಎಲ್ಲ ಕೃತ್ಯಕ್ಕೆ ಯಶವಂತ ಅಣ್ಣ ಶಂಕರ್ ಸೋರಗಾವಿ ಕಾರಣ ಎಂದು ಸ್ವತಃ ಯಶವಂತ್ ತಾಯಿ ಗೌರಮ್ಮ ಹೇಳಿದ್ದಾರೆ.

    ಸದ್ಯ ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಗೌರಮ್ಮ ಅವರು ಪ್ರಕರಣ ದಾಖಲಿಸಿದ್ದು, ಕಿಡ್ನ್ಯಾಪ್ ಆದ ಯಶವಂತ್ ಮನೆಯವರ ಹುಡುಕಾಟ ನಡೆಸಿದ್ದಾರೆ.

  • ಕಲ್ಲಡ್ಕ ಪ್ರಭಾಕರ್ ಭಟ್ ಪುಕ್ಕಲ: ರಮಾನಾಥ ರೈ

    ಕಲ್ಲಡ್ಕ ಪ್ರಭಾಕರ್ ಭಟ್ ಪುಕ್ಕಲ: ರಮಾನಾಥ ರೈ

    ಮಂಗಳೂರು: ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಭಟ್ ಒಬ್ಬ ಪುಕ್ಕಲ. ಅವನನು ಅರೆಸ್ಟ್ ಮಾಡಿದ್ರೂ ಏನೂ ಆಗಲ್ಲ ಅಂತಾ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.

    ರಮಾನಾಥ ರೈ ಜಿಲ್ಲಾ ಎಸ್‍ಪಿ ಭೂಷಣ್ ರಾವ್ ಬೋರಸೆಯವರನ್ನು ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ವಿಡಿಯೋದಲ್ಲಿ, “ಗಲಾಟೆ ಮಾಡೋದಿಲ್ಲ, ವಯಸ್ಸಾದವರು. ನನಗೆ ಎಲ್ಲಾ ಹಂಡ್ರೆಡ್ ಪರ್ಸೆಂಟ್ ಗೊತ್ತು, ನೀವು ಮನೆಯವರನ್ನು ಕರೆದುಕೊಂಡು ಹೋದ್ರೆ, ಕಾಂಗ್ರೆಸ್‍ನವರನ್ನೂ ಕೂಡ ಕರೆದುಕೊಂಡು ಹೋಗುವುದು. ಇದು ಮಂಡ್ಯ ಅಲ್ಲ ಇಂಡಿಯಾ ಅಂತ. ನೀವು ಮಂಡ್ಯದಿಂದ ಬಂದಿದ್ದೀರಿ, ಇಲ್ಲಿ ವಿಷ್ಯ ಬೇರೇನೇ ಇದೆ” ಅಂತಾ ಹೇಳಿರುವ ದೃಶ್ಯವಿದೆ.

    ನೇತ್ರಾವತಿ ಹೋರಾಟಗಾರರು ಅದು ಮಾಡ್ತಾರೆ, ಇದು ಮಾಡ್ತಾರೆ ಅಂತೀರಿ. ಆದ್ರೆ ಏನೂ ಮಾಡಲ್ಲ, ಪ್ರಭಾಕರ್ ಅರೆಸ್ಟ್ ಮಾಡಿದ್ರೂ ಕೂಡ ಏನೂ ಮಾಡಲ್ಲ, ಇದನ್ನು ನಾನು ಪ್ರಮಾಣಮಾಡಿ ಹೇಳ್ತೀನಿ. ಅವನು ಭಾಷಣ ಮಾಡಿದ್ರೆ ನೀವು ಆತನ ವಿರುದ್ಧ 307 ಕ್ರಿಮಿನಲ್ ಕೇಸ್ ಹಾಕಿ. ಆತ ಹೊರಗೆ ಬಂದ್ರೆ ಹೇಳಿದಾಗೆ ಕೇಳ್ತೀನಿ. ಅವನು ಅಷ್ಟು ದೊಡ್ಡ ವ್ಯಕ್ತಿಯಲ್ಲ, ಎಲೆಕ್ಷನ್ ಟೈಂನಲ್ಲಿ ನಾನು ಅವನನ್ನು ಇಲ್ಲಿಂದ ಓಡಿಸ್ತೀನಿ. ನಾನಲ್ಲ ನಾನಲ್ಲ ಅಂತ ಅವನ ಜೊತೆ ಇದ್ದ ಹುಡುಗ್ರು ಈ ಬಗ್ಗೆ ಜೋಕ್ ಮಾಡಿದ್ರು ಅಂತಾ ಸಚಿವರು ಹೇಳಿದ್ದಾರೆ.

    https://www.youtube.com/watch?v=0TjehsPe2VA

  • ದೇಶ ಕಟ್ಟಿದ್ದು, ಬೆಳೆಸಿದ್ದು ಕಾಂಗ್ರೆಸ್, ಸರ್ಕಾರದ ಅಭಿವೃದ್ಧಿಗೆ ಜನ್ರ ಮತ: ಆಂಜನೇಯ

    ದೇಶ ಕಟ್ಟಿದ್ದು, ಬೆಳೆಸಿದ್ದು ಕಾಂಗ್ರೆಸ್, ಸರ್ಕಾರದ ಅಭಿವೃದ್ಧಿಗೆ ಜನ್ರ ಮತ: ಆಂಜನೇಯ

    ಬೆಂಗಳೂರು: ವಿಧಾನಸಭಾ ಕಲಾಪ ನಡೆಯುತ್ತಿದ್ದ ವೇಳೆಯಲ್ಲೇ ಕಾಂಗ್ರೆಸ್ ಮೇಲೆ ಸಾಕಷ್ಟು ಅಪಪ್ರಚಾರ ನಡೆಸಲಾಗಿತ್ತು. ಜನರು ಇದಕ್ಕೆ ಸರಿಯಾದ ಉತ್ತರ ನೀಡಿದ್ದಾರೆ. ಜನ ಯಾವುದಕ್ಕೂ ಕಿವಿಗೊಡದೆ ಕಾಂಗ್ರೆಸ್‍ಗೆ ಮತಹಾಕಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರದ ಅಭಿವೃದ್ಧಿ ಗೆ ಮತದಾರರು ಮಣೆ ಹಾಕಿದ್ದಾರೆ ಅಂತಾ ಸಚಿವ ಆಂಜನೇಯ ಹೇಳಿದ್ದಾರೆ.

    ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಂಜನಗೂಡು, ಗುಂಡ್ಲುಪೇಟೆ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳನ್ನ ಜನರು ಒಪ್ಪಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ದೇಶ ಕಟ್ಟಿದ್ದು, ಬೆಳೆಸಿದ್ದು ಕಾಂಗ್ರೆಸ್ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ. ಬಿಜೆಪಿಯವರು ಈ ಫಲಿತಾಂಶದಿಂದ ಇದನ್ನ ಅರ್ಥ ಮಾಡಿಕೊಳ್ಳಬೇಕು ಅಂತಾ ಹೇಳಿದ್ರು.

    ಸಂಭ್ರಮಾಚರಣೆ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಸಿಎಂ ಮನೆ ಮುಂದೆ ಸಿಹಿ ಹಂಚಿ ಸಂಭ್ರಮಿಸಿದ್ರು. ಅಲ್ಲದೇ ಕಾವೇರಿ ನಿವಾಸದ ಮುಂದೆ ಪಟಾಕಿ ಸಿಡಿಸಿ ಗೆಲುವನ್ನು ಆಚರಿಸಲು ಮುಂದಾದಗ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಘೋಷಣೆ ಕೂಗುವ ಮೂಲಕ ಸಂತಸ ವ್ಯಕ್ತಪಡಿಸಿದ್ರು.

  • ಕುಡಿದ ಮತ್ತಲ್ಲಿ ಸಚಿವೆ ಸ್ಮೃತಿ ಇರಾನಿ ಕಾರು ಹಿಂಬಾಲಿಸಿದ 4 ವಿದ್ಯಾರ್ಥಿಗಳು

    ಕುಡಿದ ಮತ್ತಲ್ಲಿ ಸಚಿವೆ ಸ್ಮೃತಿ ಇರಾನಿ ಕಾರು ಹಿಂಬಾಲಿಸಿದ 4 ವಿದ್ಯಾರ್ಥಿಗಳು

    ನವದೆಹಲಿ: ಕುಡಿದ ಮತ್ತಿನಲ್ಲಿ ದೆಹಲಿ ವಿಶ್ವವಿದ್ಯಾಲಯದ 4 ವಿದ್ಯಾರ್ಥಿಗಳು ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಕಾರನ್ನು ಫಾಲೋ ಮಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ರಾಷ್ಟ್ರರಾಜಧಾನಿ ದೆಹಲಿಯ ಚಾಣಕ್ಯಪುರಿಯಲ್ಲಿ ನಡೆದಿದೆ.

    ಶನಿವಾರ ಸಂಜೆ ಸುಮಾರು 5 ಗಂಟೆ ವೇಳೆಯಲ್ಲಿ ಸ್ಮೃತಿ ಇರಾನಿ ಅವರ ಭದ್ರತಾ ಸಿಬ್ಬಂದಿ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿ ಈ ನಾಲ್ವರು ಯುವಕರು ಕಾರನ್ನು ಫಾಲೋ ಮಾಡಿ, ಮ್ಯಾನ್ಮಾರ್ ರಾಯಭಾರ ಕಚೇರಿ ಬಳಿ ಪೈಲಟ್ ಕಾರನ್ನು ಓವರ್‍ಟೇಕ್ ಮಾಡಲು ಯತ್ನಿಸಿದ್ದಾಗಿ ಹೇಳಿದ್ರು ಎಂದು ಪೊಲೀಸರು ತಿಳಿಸಿದ್ದಾರೆ.

    ನಾಲ್ವರು ಯುವಕರಾದ ಆನಂದ್ ಶರ್ಮಾ, ಅವಿನಾಶ್, ಶಿತಾಂಶು ಹಾಗೂ ಕುನಾಲ್ 20 ರಿಂದ 25ರ ವಯಸ್ಸಿನವರಾಗಿದ್ದು, ಎಲ್ಲರೂ ಮದ್ಯಪಾನ ಮಾಡಿದ್ದರು. ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಬರುತ್ತಿದ್ದರು. ಮೊದಲಿಗೆ ಎಲ್ಲರನ್ನೂ ಚಾಣಾಕ್ಯಪುರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿತ್ತು. ನಂತರ ಮಹಿಳೆಯ ಕಾರು ಹಿಂಬಲಿಸಿ, ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಯುವಕರನ್ನು ಬಂಧಿಸಿ ಇಂದು ಬೆಳಿಗ್ಗೆ ಕೋರ್ಟ್‍ಗೆ ಹಾಜರುಪಡಿಸಲಾಗಿದೆ.

    ಅತೀ ವೇಗದ ಚಾಲನೆ, ಕುಡಿದು ವಾಹನ ಚಾಲನೆ ಮಾಡಿರುವುದು ಮತ್ತು ಸಚಿವೆ ಹಾಗು ಅವರ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ ಮಾಡಿರುವ ಕಾರಣ ಯುವಕರನ್ನು ಬಂಧಿಸಲಾಗಿದೆ. ಯುವಕರು ಮದ್ಯಾಪಾನ ಮಾಡಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಇವರೆಲ್ಲಾ ಸ್ನೇಹಿತರೊಬ್ಬರ ಬರ್ತ್ ಡೇ ಪಾರ್ಟಿ ಮುಗಿಸಿ ಬರುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಸಚಿವೆಯ ಪೈಲೆಟ್ ಕಾರನ್ನು ಪದೇ ಪದೇ ಓವರ್ ಟೇಕ್ ಮಾಡಲು ಪ್ರಯತ್ನಿಸಿದಾಗ ಸ್ಮೃತಿ ಇರಾನಿ ಅವರ ಭದ್ರತಾ ಸಿಬ್ಬಂದಿ, ಫ್ರೆಂಚ್ ರಾಯಭಾರ ಕಚೇರಿ ಬಳಿ ಯುವಕರ ಕಾರನ್ನು ತಡೆದಿದ್ದಾರೆ, ನಂತರ ಪೊಲೀಸ್ ಕಂಟ್ರೋಲ್ ರೂಮ್ ವ್ಯಾನ್ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಬಂದಿದ್ದು, ಅವರಿಗೆ ಯುವಕರನ್ನು ಒಪ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

    ಸದ್ಯ ನಾಲ್ವರು ಯುವಕರಿಗೆ ಜಾಮೀನು ಸಿಕ್ಕಿದೆ ಎಂದು ವರದಿಯಾಗಿದೆ.