ರಾಯ್ಪುರ್: ಬಿಜೆಪಿ ಸಚಿವರ ಸೆಕ್ಸ್ ಸಿಡಿ ಇಟ್ಟುಕೊಂಡು ಬ್ಲಾಕ್‍ಮೇಲ್ ಮಾಡಿದ ಆರೋಪದ ಮೇಲೆ ಮಾಜಿ ಬಿಬಿಸಿ ಪತ್ರಕರ್ತ ವಿನೋದ್ ವರ್ಮಾ ಅವರನ್ನು ಛತ್ತೀಸ್‍ಗಢ ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ.
ಛತ್ತೀಸ್‍ಗಢದ ರಾಯ್ಪುರ್ ಜಿಲ್ಲೆಯಲ್ಲಿನ ಪಂಡಾರಿ ಪೊಲೀಸ್ ಠಾಣೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರಕಾಶ್ ಬಜಾಜ್ ದೂರು ದಾಖಲಿಸಿದ 12 ಗಂಟೆಗಳೊಳಗೆ ವರ್ಮಾ ಅವರ ಬಂಧನವಾಗಿದೆ. ವರ್ಮಾ ವಿರುದ್ಧ ಐಪಿಸಿ ಸೆಕ್ಷನ್ 384 ಹಾಗೂ 507ರ ಅಡಿ ಸುಲಿಗೆ ಹಾಗೂ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನ ಕ್ರೈ ಬ್ರಾಂಚ್ ಎಸ್‍ಪಿ ಅಜಾತಶತ್ರು ಬಹೂದೂರ್ ಸಿಂಗ್ ಅವರಿಗೆ ಹಸ್ತಾಂತರಿಸಲಾಗಿದೆ.
ವರ್ಮಾ ಅವರನ್ನು ಇಂದಿರಾಪುರಂ ನಿವಾಸದಿಂದ ಛತ್ತೀಸ್‍ಗಢ ಪೊಲೀಸರು ಬಂಧಿಸಿದ್ದಾರೆ. ಅವರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಪಂಡಾರಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಛತ್ತೀಸ್‍ಗಢದ ಬಿಜೆಪಿ ಸಚಿವರೊಬ್ಬರ ಸೆಕ್ಸ್ ಸಿಡಿ ಹೊಂದಿದ್ದು, ಸುಲಿಗೆ ಮಾಡಲು ಯತ್ನಿಸಿದ ಕಾರಣ ವಿನೋದ್ ವರ್ಮಾ ಅವರ ಬಂಧನವಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ವಾರ ವರ್ಮಾ, ಬಿಜೆಪಿ ಸಚಿವರ ಆಪ್ತರೊಬ್ಬರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ.
ಸಿಡಿ ವಶ: ಬಜಾಜ್ ಅವರು ದೂರು ದಾಖಲಿಸಿದ ನಂತರ ಛತ್ತೀಸ್‍ಗಢ ಪೊಲೀಸರು ದೆಹಲಿಯ ಅಂಗಡಿಯೊಂದರ ಮೇಲೆ ದಾಳಿ ಮಾಡಿ ಆರೋಪ ಕೇಳಿಬಂದಿರುವ ಸೆಕ್ಸ್ ಸಿಡಿಯ 1000 ಪ್ರತಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಂಗಡಿ ಮಾಲೀಕನ ವಿಚಾರಣೆ ಬಳಿಕ ಪೊಲೀಸರು ವರ್ಮಾ ಅವರ ಮನೆ ಮೇಲೆ ದಾಳಿ ಮಾಡಿ ಹೆಚ್ಚಿನ ಸಂಖ್ಯೆಯ ಸಿಡಿಗಳು, ವರ್ಮಾ ಅವರ ಲ್ಯಾಪ್‍ಟಾಪ್ ಹಾಗೂ ಪೆನ್‍ಡ್ರೈವ್ ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಳ್ಳಲಾಗಿರುವ ಸಿಡಿಗಳಿಂದ ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆಯಾಗಬಹುದಾದ ಕಾರಣ ಶೀಘ್ರವೇ ಬಂಧನ ಮಾಡಲಾಯ್ತು ಎಂದು ರಾಯ್ಪುರ್ ಐಜಿಪಿ ಪ್ರದೀಪ್ ಗುಪ್ತಾ ವರದಿಗಾರರಿಗೆ ಹೇಳಿದ್ದಾರೆ.
ಗುರುವಾರ ಮಧ್ಯಾಹ್ನ ಎಫ್‍ಐಆರ್ ದಾಖಲಾಗಿದೆ. ಎಫ್‍ಐಆರ್‍ನಲ್ಲಿ ವಿನೋದ್ ವರ್ಮಾ ಅವರನ್ನು ಆರೋಪಿ ಎಂದು ಉಲ್ಲೇಖಿಸಿಲ್ಲ. ಆದ್ರೆ ಸಿಡಿಗಳು ವರ್ಮಾ ಅವರ ಬಳಿ ಇದ್ದವು. ಅವರನ್ನು ರಾಯ್ಪುರಕ್ಕೆ ಕರೆತರಲು ವಶಕ್ಕೆ ಕೋರಿದ್ದೇವೆ ಎಂದು ಗುಪ್ತಾ ಹೇಳಿದ್ದಾರೆ.
ಸಿಡಿಯ ಮರುಮುದ್ರಣಕ್ಕೆ ಆರ್ಡರ್?: ಯಾರೋ ಒಬ್ಬರು ಲ್ಯಾಂಡ್‍ಲೈನ್ ನಂಬರ್‍ಗೆ ಕರೆ ಮಾಡಿ ತನ್ನ ಬಾಸ್‍ನ ಸೆಕ್ಸ್ ಸಿಡಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ರು ಎಂದು ಪ್ರಕಾಶ್ ಬಜಾಜ್ ಅವರು ನಮಗೆ ದೂರು ನೀಡಿದ್ರು. ಕಾಲ್ ಟ್ರೇಸ್ ಮಾಡಿದಾಗ ದೆಹಲಿ ಅಂಗಡಿಯ ವಿಳಾಸ ಸಿಕ್ಕಿದ್ದು, ನಂತರ ದಾಳಿ ನಡೆಯಿತು. ವರ್ಮಾ ಅವರು ಸಿಡಿಯ ಮರುಮುದ್ರಣಕ್ಕೆ ಆರ್ಡರ್ ಮಾಡಿದ್ದರು ಎನ್ನಲಾಗಿದೆ. ಕರೆ ಮಾಡಿದ್ದು ವರ್ಮಾ ಅವರೇನಾ ಅಥವಾ ಬೇರೆ ವ್ಯಕ್ತಿಯಾ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ತನಿಖೆಯಿಂದ ಗೊತ್ತಾಗಲಿದೆ ಅಂತ ಗುಪ್ತಾ ತಿಳಿಸಿದ್ದಾರೆ.
ವರ್ಮಾ ಬಂಧನವನ್ನ ಇಲ್ಲಿನ ವಿರೋಧ ಪಕ್ಷದ ನಾಯಕರು ಖಂಡಿಸಿದ್ದಾರೆ. ಛತ್ತೀಸ್‍ಗಢ ಬಿಜೆಪಿ ವಕ್ತಾರರಾದ ಶ್ರೀಚಂದ್ ಸುಂದರಾಣಿ ಪ್ರತಿಕ್ರಿಯಿಸಿ, ಇಂತಹ ವಿವಾದಗಳಿಂದ ಬಿಜೆಪಿಯ ಮೇಲೆ ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ತನಿಖೆಗೆ ಪಕ್ಷ ಸಿದ್ಧವಾಗಿದೆ. ಇದೆಲ್ಲಾ ಕಾಂಗ್ರೆಸ್‍ನವರ ಪಿತೂರಿ ಎಂದು ಹೇಳಿದ್ದಾರೆ.
ಸೆಕ್ಸ್ ಸಿಡಿ ನನ್ನ ಬಳಿ ಇದೆ: ಸಚಿವ ರಾಕೇಶ್ ಮುನಾತ್ ಅವರ ಸೆಕ್ಸ್ ಸಿಡಿ ನನ್ನ ಬಳಿ ಇದೆ. ಛತ್ತೀಸ್‍ಗಢ ಸರ್ಕಾರಕ್ಕೆ ಇದು ಇಷ್ಟವಿಲ್ಲ. ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗ್ತಿದೆ ಎಂದು ವಿನೋದ್ ವರ್ಮಾ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.