Tag: minister

  • ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಬಿಎಸ್‍ವೈ, ಅನಂತ್ ಕುಮಾರ್, ಡಿವಿಎಸ್ ಸಹಾಯ ಮಾಡ್ಬೇಕು- ಎಂ.ಬಿ ಪಾಟೀಲ್

    ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಬಿಎಸ್‍ವೈ, ಅನಂತ್ ಕುಮಾರ್, ಡಿವಿಎಸ್ ಸಹಾಯ ಮಾಡ್ಬೇಕು- ಎಂ.ಬಿ ಪಾಟೀಲ್

    ವಿಜಯಪುರ: ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಶಿಫಾರಸ್ಸು ಪತ್ರವನ್ನು ರಾಜ್ಯ ಸರ್ಕಾರ, ಕೇಂದ್ರಕ್ಕೆ ಕಳುಹಿಸಿದೆ. ಆದ್ರೆ ಆ ವಿಚಾರದಲ್ಲಿ ಹಾಲಲ್ಲಿ ಉಪ್ಪು ಹಾಕುವ ಕೆಲಸವನ್ನು ಮಾಡಬೇಡಿ ಎಂದು ಪರೋಕ್ಷವಾಗಿ ಯಡಿಯೂರಪ್ಪ, ಅನಂತಕುಮಾರ್ ಹಾಗೂ ಸದಾನಂದಗೌಡ ಅವ್ರಿಗೆ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ಪುರಾವೆಗಳನ್ನು, ಸಾಕ್ಷ್ಯಗಳನ್ನು ನೀಡಿ ಕೇಂದ್ರಕ್ಕೆ ಕಳುಹಿಸಿದ್ದೇವೆ. ಕೇಂದ್ರ ಸರ್ಕಾರ ಕೂಡ ನಮ್ಮ ಮನವಿಗೆ ಸ್ಪಂದಿಸುತ್ತದೆಯೆಂಬ ಅಚಲ ವಿಶ್ವಾಸವಿದೆ. ಆದ್ರೆ ಅದ್ರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಅನಂತಕುಮಾರ್, ಸದಾನಂದಗೌಡ ಅವರು ನಮಗೆ ಸಹಾಯ ಮಾಡಬೇಕೆಂದು ಅವರು ಮನವಿ ಮಾಡಿದ್ರು. ಇದನ್ನೂ ಓದಿ: ಸಿಎಂ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ: ರಂಭಾಪುರಿ ಶ್ರೀ

    ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೂ ಚುನಾವಣೆಗೂ ಸಂಬಂಧವಿಲ್ಲ. ಚುನಾವಣೆಗಾಗಿ ನಾವು ಮಾಡೋದಿದ್ರೆ ನಾವು ಯಾವಾಗಲೋ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸುತ್ತಿದ್ದೆವು. ರಾಜ್ಯದಲ್ಲಿ ಅದಕ್ಕೆ ಮಾನ್ಯತೆ ಕೊಟ್ಟು ಬಳಿಕ ನಾವು ಕೇಂದ್ರಕ್ಕೆ ಶಿಫಾರಸ್ಸು ಕಳಿಸಿದ್ದೇವೆ. ಆರಂಭದಲ್ಲಿ ಬಹಳ ಜನ ಎಂಬಿ ಪಾಟೀಲರು ಚುನಾವಣೆಗಾಗಿ ಪ್ರತ್ಯೇಕತೆ ಕೂಗು ಎತ್ತಿದ್ದಾರೆಂದು ಮಾತನಾಡಿದ್ರು. ಆದ್ರೆ ಅದಕ್ಕೆ ನಾವು ಬದ್ಧತೆಯಿಂದ ರಾಜ್ಯದಲ್ಲಿ ಮಾನ್ಯತೆ ನೀಡಿ ಕೇಂದ್ರಕ್ಕೆ ಶಿಫಾರಸ್ಸು ಕಳಿಸಿದ್ದೆವೆ. ಇದ್ರಲ್ಲಿ ರಾಜಕೀಯ ಮಾಡುವುದು ಬೇಡ. ನಾವು ಯಡಿಯೂರಪ್ಪ, ಅನಂತಕುಮಾರ್, ಸದಾನಂದಗೌಡ ಅವರಿಗೆ ತಲೆ ಬಾಗಿಸುತ್ತೆವೆ.ವಿನಂಮ್ರತೆಯಿಂದ ಮುನ್ನಡೆಯಬೇಕಿದೆ ಅಂದ್ರು. ಇದನ್ನೂ ಓದಿ: ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ – ಕೇಂದ್ರಕ್ಕೆ ಶೀಘ್ರವೇ ಸಿದ್ದು ಸರ್ಕಾರದಿಂದ ಶಿಫಾರಸ್ಸು

    ರಂಭಾಪುರಿ ಶ್ರೀಗಳೂ ನಮ್ಮ ಗುರುಗಳು. ಅವರು ನಮ್ಮ ಬಸವ ತತ್ವಕ್ಕೆ ಒಪ್ಪಿಕೊಳ್ಳುವುದಿಲ್ಲ. ಅವ್ರಿಗೆ ಅವರದ್ದೇ ಆದ ತಾತ್ವಿಕ ಅಭಿಪ್ರಾಯ ಇದೆ. ಹೀಗಾಗಿ ಶೀಘ್ರದಲ್ಲೇ ರಂಭಾಪುರಿ ಶ್ರೀಗಳನ್ನು ಭೇಟಿ ಮಾಡಿ ಅವರ ಮನವೊಲಿಸುತ್ತೆವೆ ಅಂತ ತಿಳಿಸಿದ್ರು.  ಇದನ್ನೂ ಓದಿ: ಲಿಂಗಾಯತ, ವೀರಶೈವರಿಗೆ ಅಲ್ಪಸಂಖ್ಯಾತ ಸ್ಥಾನ ಸಿಕ್ಕಿದ್ರೆ ಯಾವ ಸೌಲಭ್ಯ ಸಿಗುತ್ತೆ?

    ಈಗ ಜಾಗತಿಕ ಧರ್ಮ ಆಗಲು ಕಾಲ ಪಕ್ವವಾಗಿದೆ. ಜಯದ ಜೊತೆಗೆ ನಾವು ವಿನಂಮ್ರವಾಗಿ ಎಲ್ಲರನ್ನು ಕೂಡಿಸಿಕೊಂಡು ಬಸವ ಧರ್ಮಗಾಗಿ ಒಟ್ಟಾಗಲಿದ್ದೆವೆ. ನಮಗೆ ಬೈದವ್ರನ್ನು ಸೇರಿಸಿಕೊಂಡು ಒಟ್ಟಾಗಿ ಹೋಗುತ್ತೇವೆ. ಈಶ್ವರ ಖಂಡ್ರೆ, ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪ ಹೀಗೆ ಎಲ್ಲರನ್ನು ಸೇರಿಸಿಕೊಂಡು ಧರ್ಮ ಸ್ಥಾಪನೆಗೆ ಮುನ್ನಡೆಯಲಿದ್ದೇವೆ ಎಂದರು.

  • ಬಡವರ ಸಾಲಕ್ಕೆ ಸತಾಯಿಸುವ ಬ್ಯಾಂಕ್ ಅಧಿಕಾರಿಗಳು ಈಗ ಸುಮ್ಮನಿದ್ದಾರೆ ಯಾಕೆ: ಟಿ.ಜೆ ಅಬ್ರಹಂ

    ಬಡವರ ಸಾಲಕ್ಕೆ ಸತಾಯಿಸುವ ಬ್ಯಾಂಕ್ ಅಧಿಕಾರಿಗಳು ಈಗ ಸುಮ್ಮನಿದ್ದಾರೆ ಯಾಕೆ: ಟಿ.ಜೆ ಅಬ್ರಹಂ

    ಉಡುಪಿ: ದಾವೂದ್ ಯಾವತ್ತೂ ನಗು ನಗ್ತಾ ಇರ್ತಾನೆ. ಆತ ಅಳೋದನ್ನು ನಾನು ನೋಡಿಲ್ಲ. ಸಚಿವ ಪ್ರಮೋದ್ ಮಧ್ವರಾಜ್ ಕೂಡಾ ದಾವುದ್ ರೀತಿ ನಗ್ತಾರೆ ಎಂದು ಆರ್‍ಟಿಐ ಹೋರಾಟಗಾರ ಟಿ.ಜೆ ಅಬ್ರಹಂ ಹೇಳಿಕೆ ನೀಡಿದ್ದಾರೆ.

    ಮಲ್ಪೆ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ 1.1 ಕೋಟಿ ರೂಪಾಯಿ ಆಸ್ತಿಪತ್ರ ಅಡವಿಟ್ಟು 193 ಕೋಟಿ ರೂಪಾಯಿ ಸಚಿವರು ಸಾಲ ಪಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣ ಮಾಡಿದ್ದಾರೆ ಅಂತ ದಾಖಲೆ ಕೊಟ್ಟರೂ ಮಾಧ್ಯಮದ ಮುಂದೆ ನಗ್ತಾರೆ ಅಂತ ಟೀಕಿಸಿದರು.

    ಪ್ರಮೋದ್ ಮಧ್ವರಾಜ್ ಅವರೇ ನೀವು ನಿರಪರಾಧಿ ಎಂದು ದಾಖಲೆ ಬಿಡುಗಡೆ ಮಾಡಿ. ಮುಚ್ಚುಮರೆ ಮಾಡುವುದ್ಯಾಕೆ? ನಾನು ಸವಾಲು ಹಾಕುತ್ತಿದ್ದೇನೆ. ದಾಖಲೆ ಕೊಡಿ ಎಂದು ಒತ್ತಾಯಿಸಿದ್ದಾರೆ. ಸತ್ಯ ಹೊರ ತೆಗೆಯಲು ಹೊರಟರೆ ನಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲು ಹೊರಡ್ತಾರೆ. ನಾನು ಯಾವುದನ್ನೂ ಕೇರ್ ಮಾಡಲ್ಲ ಅಂತ ತಿರುಗೇಟು ನೀಡಿದರು. ಇದನ್ನೂ ಓದಿ: 193 ಕೋಟಿ ರೂ. ವಂಚನೆ: ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದೂರು ದಾಖಲು

    ಸಿಂಡಿಕೇಟ್ ಬ್ಯಾಂಕ್ ಸಚಿವ ಪ್ರಮೋದ್ ಪರವಾಗಿ ನಿಂತಿದೆ. ಬ್ಯಾಂಕ್ ಅಧಿಕಾರಿಗಳು ಕಾನೂನು ಬಾಹಿರವಾಗಿ ಸಾಲ ನೀಡಿದ್ದಾರೆ. ರಾಜ್ಯದಲ್ಲಿ ಸಾಲ ಮಾಡಿ ಸತ್ತಿರೋ ರೈತರು ಎರಡು ಲಕ್ಷಕ್ಕೆ ಹೆಚ್ಚು ಬ್ಯಾಂಕಿಂದ ತೆಗೆದುಕೊಂಡಿಲ್ಲ. ಶ್ರೀಮಂತರಿಗೆ ಕೋಟಿ ಕೋಟಿ, ರೈತರು ಲಕ್ಷ ಸಾಲ ಮಾಡಿದ್ರೆ ಬ್ಯಾಂಕುಗಳು ಬೆನ್ನತ್ತುತ್ತದೆ. ಬಡವರು ಸಾಲ ಪಡೆದರೆ ಸತಾಯಿಸುವ ಬ್ಯಾಂಕ್ ಅಧಿಕಾರಿಗಳು ಈಗ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.

    ಬ್ಯಾಂಕ್ ಡಿಜಿಎಂ ಮಾಧ್ಯಮಗಳ ಮೂಲಕ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಬ್ಯಾಂಕ್ ಮೇಲೆ ಐದು ಕೋಟಿ ರೂ. ಮಾನ ನಷ್ಟ ಮೊಕದ್ದಮೆ ಹಾಕುತ್ತೇನೆ. ಕೇಂದ್ರ ಸರ್ಕಾರ ಸರಿಯಾಗಿಯೇ ತನಿಖೆ ಮಾಡುತ್ತದೆ ಎಂದು ಹೇಳಿದರು.

    ಚುನಾವಣೆಗೂ ಈ ಕೇಸಿಗೂ ಸಂಬಂಧವಿಲ್ಲ. ಯಡಿಯೂರಪ್ಪನವರ ಮೇಲೂ ಕೇಸು ಹಾಕಿದ್ದೇನೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರ ಮೇಲೂ ಕೇಸ್ ಇದೆ ಎಂದು ಸ್ಪಷ್ಟನೆ ನೀಡಿದರು.

  • ಕಾಂಟ್ರಾಕ್ಟರ್ ಗಳ  ಕೈಲಿ ಕಾಂಗ್ರೆಸ್ ಟಿಕೆಟ್- ಪಕ್ಷದ ಹಣ ಪ್ರಭಾವ ಬಿಚ್ಚಿಟ್ಟ ಮೊಯ್ಲಿ!

    ಕಾಂಟ್ರಾಕ್ಟರ್ ಗಳ ಕೈಲಿ ಕಾಂಗ್ರೆಸ್ ಟಿಕೆಟ್- ಪಕ್ಷದ ಹಣ ಪ್ರಭಾವ ಬಿಚ್ಚಿಟ್ಟ ಮೊಯ್ಲಿ!

    ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿಯೇ ಕಾಂಗ್ರೆಸ್‍ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಇದೀಗ ಕಾಂಗ್ರೆಸ್ ಪಕ್ಷದ ಹಣದ ಪ್ರಭಾವ ಬಿಚ್ಚಿಟ್ಟಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರೋ ವೀರಪ್ಪ ಮೊಯ್ಲಿ, `ಕಾಂಟ್ರಾಕ್ಟರ್‍ಗಳ ಕೈಲಿ ಕಾಂಗ್ರೆಸ್ ಟಿಕೆಟ್’ ಎಂದಿದ್ದಾರೆ. ಕಾಂಗ್ರೆಸ್‍ನಲ್ಲಿ ಹಣದ ಹೊಂದಾಣಿಕೆಯಿಂದ ಅಭ್ಯರ್ಥಿಗಳನ್ನು ನಿರ್ಧರಿಸುವಂತಾಗಿದೆ ಅಂತ ಪಕ್ಷದ ವಿರುದ್ಧ ನೇರವಾಗಿ ಅವರು ಆರೋಪ ಮಾಡಿದ್ದಾರೆ.

    ಈ ಟ್ವೀಟನ್ನು ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿಯ ಅಧಿಕೃತ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಈ ಮೂಲಕ ಕೇಂದ್ರ ಹಾಗೂ ರಾಜ್ಯದ ನಾಯಕರಿಗೆ ನೇರವಾಗಿ ತಲುಪಿಸುವ ಜೊತೆಗೆ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಈ ಮೂಲಕ ಮೊಯ್ಲಿ ಅವರು ಶಾಸಕ ಅಶೋಕ್ ಖೇಣಿ ಅವರ ಕಾಂಗ್ರೆಸ್ ಸೇರ್ಪಡೆಗೆ ಪರೋಕ್ಷವಾಗಿ ಸಿಡಿದೆದ್ದಿದ್ದಾರೆ. ಈ ಹಿಂದೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಖೇಣಿ ಹಾಗೂ ಹಾಲಿ ಶಾಸಕರಿಗೆ ಟಿಕೆಟ್ ಕೊಡೋ ವಿಚಾರದಲ್ಲಿ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

    ಆದ್ರೆ ಇದೀಗ ವೀರಪ್ಪ ಮೊಯ್ಲಿ ನೇರವಾಗಿ ಲೋಕೋಪಯೋಗಿ ಸಚಿವ ಮಹದೇವಪ್ಪ ಅವರನ್ನೇ ಟಾರ್ಗೆಟ್ ಮಾಡಿರುವುದು ತೀವ್ರ ಕುತೂಹಲ ಹುಟ್ಟಿಸಿದೆ.

    https://twitter.com/moilyv/status/974322120586158080

    https://twitter.com/HarshaMoilyINC/status/974327614306443264

  • 193 ಕೋಟಿ ರೂ. ವಂಚನೆ: ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದೂರು ದಾಖಲು

    193 ಕೋಟಿ ರೂ. ವಂಚನೆ: ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದೂರು ದಾಖಲು

    ಉಡುಪಿ: ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವಾ ವಿಭಾಗದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಮೇಲೆ ದೂರು ದಾಖಲಾಗಿದೆ.

    ಮಧ್ವರಾಜ್ ಅವರು ಸಿಂಡಿಕೇಟ್ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ಕೇವಲ 1.01 ಕೋಟಿ ರೂಪಾಯಿ ಮೌಲ್ಯದ ಸೊತ್ತುಗಳ ದಾಖಲೆ ನೀಡಿ 193 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಈ ಅಕ್ರಮಕ್ಕೆ ಬ್ಯಾಂಕ್ ಅಧಿಕಾರಿಗಳು ಕುಮ್ಮಕ್ಕು ನೀಡಿದ್ದಾರೆ. ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವಾ ವಿಭಾಗದಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

    ಕಡಿಮೆ ಮೊತ್ತದ ದಾಖಲೆ ನೀಡಿ ನೂರಾರು ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ ಎಂದು ದೆಹಲಿಯಲ್ಲಿರುವ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಆರ್‍ಟಿಐ ಕಾರ್ಯಕರ್ತ ಟಿ ಜೆ ಆಬ್ರಹಂ ದೂರು ನೀಡಿದ್ದಾರೆ.

    ಈ ಆರೋಪವನ್ನು ಸಚಿವ ಪ್ರಮೋದ್ ಮಧ್ವರಾಜ್ ತಳ್ಳಿ ಹಾಕಿದ್ದಾರೆ. ಈ ಆರೋಪ ನೂರಕ್ಕೆ ನೂರು ಸುಳ್ಳು. ಬ್ಯಾಂಕಿಗೆ ಎಷ್ಟು ಆಸ್ತಿ ಇಡಬೇಕೋ ಅದನ್ನು ಇಟ್ಟಿದ್ದೇನೆ. ನಾನು ಸೂಕ್ತ ದಾಖಲೆ ಕೊಟ್ಟು ಸಾಲ ಪಡೆದಿದ್ದೇನೆ. ಸಿಂಡಿಕೇಟ್ ಬ್ಯಾಂಕ್ ಅವರನ್ನೇ ಬೇಕಾದ್ರೆ ಕೇಳಿ ಎಂದಿದ್ದಾರೆ.

    ಬ್ಯಾಂಕಿನ ಸಾಲ ನಾನು ಕೊಟ್ಟ ಆಸ್ತಿ ಮೇಲೆ ನೀಡಲಾಗಿದೆ. ಸಿಂಡಿಕೇಟ್ ಬ್ಯಾಂಕ್ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಯಾವ ತನಿಖೆ ಬೇಕಾದ್ರೂ ನಡೆಸಬಹುದು. ನನ್ನಿಂದ ಯಾವ ವಂಚನೆಯೂ ಆಗಿಲ್ಲ. ವಂಚನೆ ಮಾಡಿದರೆ ನಾನು ಹೀಗೆ ಎಲ್ಲಾಕಡೆ ಸಂತೋಷದಿಂದ ತಿರುಗುತ್ತಿರಲಿಲ್ಲ. ಸುಳ್ಳು ಆರೋಪವನ್ನು ಮಾಧ್ಯಮ ಮತ್ತು ಜನ ನಂಬುತ್ತಾರೆ ಎಂದರೆ ನಾನು ಹೆಲ್ಪ್ ಲೆಸ್. ಮಲ್ಪೆ ಬ್ಯಾಂಕಲ್ಲಿ ನನ್ನ ಖಾತೆಯಿದೆ. ಯಾರು ಬೇಕಾದ್ರೂ ಪರೀಕ್ಷಿಸಬಹುದು ಎಂದು ಪ್ರಮೋದ್ ಮಧ್ವರಾಜ್ ಸ್ಪಷ್ಟನೆ ಕೊಟ್ಟಿದ್ದಾರೆ.

  • ಪ್ರಧಾನಿಯ ಪ್ರತೀ ಮಾತಿನಲ್ಲೂ ಹೊಸ ಕಲ್ಪನೆಯಿದೆ, ಜನ ಇದ್ರ ಸದುಪಯೋಗ ಪಡೆದುಕೊಳ್ಬೇಕು  – ಹೆಗ್ಡೆ

    ಪ್ರಧಾನಿಯ ಪ್ರತೀ ಮಾತಿನಲ್ಲೂ ಹೊಸ ಕಲ್ಪನೆಯಿದೆ, ಜನ ಇದ್ರ ಸದುಪಯೋಗ ಪಡೆದುಕೊಳ್ಬೇಕು – ಹೆಗ್ಡೆ

    ಧಾರವಾಡ: ಕೇವಲ ನಾಲ್ಕು ಗೊಡೆಗಳ ಮಧ್ಯೆ ಕುಳಿತು ಇದೇ ನನ್ನ ಜಗತ್ತು ಎಂದುಕೊಳ್ಳಬಾರದು, ಅದರಿಂದ ಹೊರಬಂದು ಕೌಶಲ್ಯಗಳನ್ನ ಪಡೆಯಬೇಕು ಎಂದು ಕೌಶಾಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ನುಡಿದ್ರು.

    ಧಾರವಾಡದ ಸುವರ್ಣಾ ಕಾಲೇಜ್‍ನಲ್ಲಿ ಕೌಶಲ್ಯ ತರಬೇತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಪ್ರಧಾನ ಮಂತ್ರಿಗಳು ಪ್ರತಿನಿತ್ಯ ಮಾತನಾಡುವಾಗಲೂ ಅವರಲ್ಲೊಂದು ಹೊಸ ಕಲ್ಪನೆ ಅಥವಾ ಯೋಜನೆ ಇರುತ್ತೆ. ಆ ಕಲ್ಪನೆಯನ್ನಿಟ್ಟುಕೊಂಡು ಇವತ್ತು ಅವರು ಮಾರ್ಗದರ್ಶನ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲರೂ ಅದರ ಲಾಭ ಪಡೆದುಕೊಳ್ಳಬೇಕು ಅಂತ ಅವರು ಈ ಸಂದರ್ಭದಲ್ಲಿ ವಿನಂತಿಸಿದ್ರು.

    ಕೇಂದ್ರ ಸರ್ಕಾರ ಕೌಶಲಾಭಿವೃದ್ಧಿ ಯೋಜನೆ ಅಡಿಯಲ್ಲಿ ಮೂರೂವರೆ ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಜನರಿಗೆ ಉದ್ಯೋಗ ಅವಕಾಶ ನೀಡಬೇಕು ಹಾಗೂ ನಾವು ಅವರಿಗೆ ತಲುಪುವ ಕೆಲಸ ಮಾಡುತ್ತಿದ್ದೆವೆ ಎಂದು ಹೇಳಿದರು.

    ಅಂತರಾಷ್ಟ್ರೀಯ ಮಟ್ಟದಲ್ಲಿ ಜ್ಞಾನ ಬೇಕಾದರೆ ಸ್ಕಿಲ್ ಡೆವೆಲಪಮೆಂಟ್ ಕೇಂದ್ರಗಳಿವೆ. ಅಲ್ಲಿ ಕೂಡ ಹೋಗಿ ತರಬೇತಿಗಳನ್ನು ಪಡೆದುಕೊಳ್ಳಬಹುದು. ಸುಮಾರು 18 ದೇಶಗಳ ಜೊತೆ ತಂತ್ರಜ್ಞಾನದ ತರಬೇತಿಗಳನ್ನು ಪಡೆದುಕೊಳ್ಳಬಹುದು. ಇತ್ತೀಚೆಗೆ ಸ್ವಿಡನ್ ಹಾಗೂ ಜಪಾನ್ ದೇಶ ಕೆಲಸಗಾರರ ಬೇಡಿಕೆ ಇಟ್ಟಿವೆ. ಸುಮಾರು 20 ಸಾವಿರ ಮಹಿಳೆಯರಿಗೆ ತರಬೇತಿ ಜೊತೆ ಕೆಲಸ ನೀಡುವುದಾಗಿ ಹೇಳಿದ್ದವು. ಹೀಗೆ ಇಂದು ಅಂತರಾಷ್ಟ್ರೀಯ ಮಟಟದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ನಾವು ಈಗಿರುವ ತಂತ್ರಜ್ಞಾನವನ್ನ ಮಾತ್ರ ಬಳಸುತ್ತಿದ್ದೇವೆ. ಬದಲಾಗಿ ಮುಂಬರುವ ತಂತ್ರಜ್ಞಾನ ಬಳಸುವ ಬಗ್ಗೆ ತಯಾರಾಗಬೇಕು ಅಂದ್ರು.

    ಇಂಗ್ಲಿಷ್ ಕಲಿತರೆ ಮಾತ್ರ ನಮ್ಮ ಬದುಕು ಅಂತ ತುಂಬಾ ಜನರಿಗೆ ಅನಿಸಿತ್ತು. ಒಟ್ಟಿನಲ್ಲಿ ದೇಶದ ಜನತೆಗೆ ಹೊಸ ಬದುಕಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾಗಿದೆ ಅಂದ್ರು.

  • ನನ್ನ ರಕ್ಷಣೆಗೆ ದೇವರು ಇದ್ದಾನೆ, ಇದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳಲ್ಲ: ರಮಾನಾಥ ರೈ

    ನನ್ನ ರಕ್ಷಣೆಗೆ ದೇವರು ಇದ್ದಾನೆ, ಇದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳಲ್ಲ: ರಮಾನಾಥ ರೈ

    ಮಂಗಳೂರು: ನಾನು ಎಲ್ಲಾ ಜಾತಿ, ಧರ್ಮದ ಜನರನ್ನು ಪ್ರೀತಿಸುತ್ತೇನೆ. ಹಾಗೆಯೇ ಎಲ್ಲರೊಂದಿಗೂ ಬೆರೆಯುವವನು. ಹೀಗಾಗಿ ಜನರ ಪ್ರೀತಿಯ ಮೂಲಕ ನಾನು ದೇವರನ್ನು ಕಾಣುತ್ತೇನೆ. ಅವರ ಆಶೀರ್ವಾದವೇ ನನಗೆ ರಕ್ಷಣೆ ಅಂತ ಸಚಿವ ರಮಾನಾಥ ರೈ ಪ್ರತಿಕ್ರಿಯಿಸಿದ್ದಾರೆ.

    ಗೌರಿ ಹತ್ಯೆಯ ಶಂಕಿತರು ತನ್ನ ಮೇಲೆ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಮಾಹಿತಿಯ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ಬಗ್ಗೆ ನನಗೆ ನಿಖರ ಮಾಹಿತಿಯಿಲ್ಲ. ನಾವು ಜನರನ್ನು ಪ್ರೀತಿಸೋರು. ಎಲ್ಲರ ಜೊತೆ ಬೆರೆಯುವವರು. ಸನಾತನ ಹಿಂದೂ ಧರ್ಮದ ವಿಚಾರಗಳನ್ನು ಬಹಳ ಆಳವಾಗಿ ತಿಳಿದುಕೊಂಡವರು. ಸನತಾನ ಹಿಂದೂ ಧರ್ಮದ ಎಲ್ಲಾ ಆಚಾರ-ವಿಚಾರಗಳನ್ನು ಕರಾರುವಕ್ಕಾಗಿ ಮಾಡುತ್ತೇನೆ. ನಾಗಮಂಡಲದಂತಹ ಕಾರ್ಯಕ್ರಮ, ದೇವಸ್ಥಾನದ ಜೀರ್ಣೋದ್ಧಾರ, ಇದರ ಜೊತೆ ಎಲ್ಲಾ ಧರ್ಮದ ಕೇಂದ್ರಗಳ ಅಭಿವೃದ್ಧಿಗಳಲ್ಲಿ ನನ್ನ ಪಾತ್ರವಿದೆ ಅಂತ ಹೇಳಿದ್ರು. ಇದನ್ನೂ ಓದಿ: ಗೌರಿ ಹತ್ಯೆಗೆ ಆಯುಧ ಒದಗಿಸಿದ್ದು ನಾನೇ – ಎಸ್‍ಐಟಿ ಮುಂದೆ ನವೀನ್ ಹೇಳಿಕೆ

    ಕಷ್ಟದಲ್ಲಿ ಬಂದಂತಹ ಎಲ್ಲರ ಸೇವೆಯನ್ನೂ ಮಾಡುತ್ತೇನೆ. ನನ್ನ ರಕ್ಷಣೆಗೆ ದೇವರು ಇರುತ್ತಾನೆ. ಈ ಕುರಿತು ನಾನು ತಲೆಕೆಡಿಸಿಕೊಳ್ಳಲ್ಲ. ಮನುಷ್ಯರು ಎಲ್ಲರೂ ಒಂದೇ ಅನ್ನೋದು ನನ್ನ ಸೈದ್ಧಾಂತಿಕ ನಿಲುವಾಗಿದೆ. ನಾವು ಅರ್ಜಿ ಹಾಕಿ ಭೂಮಿ ಕೊಟ್ಟಿದವರು ಯಾರೂ ಇಲ್ಲ ಅಂತ ತಿಳಿಸಿದ್ರು.

    ನಾನು ಮನುಷ್ಯ ವಿರೋಧಿ ಅಲ್ಲ. ಬದಲಾಗಿ ಅವರನ್ನು ಪ್ರೀತಿಸುತ್ತೇನೆ. ಹೀಗಾಗಿ ಅವರ ಆಶೀರ್ವಾದವೇ ನನಗೆ ರಕ್ಷಣೆ. ನನ್ನನ್ನು ಯಾರೂ ಕೂಡ ಜಾತಿವಾದಿ ಮತ್ತು ಮತೀಯವಾದಿ ಎಂದು ಟೀಕಾಕಾರರು ಕೂಡ ಹೇಳಿಲ್ಲ. ಒಟ್ಟಿನಲ್ಲಿ ಆಸ್ತಿಕವಾಗಿ ಒಬ್ಬ ಮನಷ್ಯ ಹೇಗಿರಬೇಕೋ ಹಾಗೆಯೇ ನಾನಿದ್ದೇನೆ ಅಂತ ರೈ ಹೇಳಿದ್ರು. ಇದನ್ನೂ ಓದಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಶಂಕಿತ ಆರೋಪಿಯನ್ನ ವಶಕ್ಕೆ ಪಡೆದ ಎಸ್‍ಐಟಿ

    ಮಂಗಳೂರಲ್ಲಿ ಇಷ್ಟೊಂದು ಕೊಲೆಗಳಾಗಿವೆ. ಇವುಗಳಲ್ಲಿ ನನ್ನ ಪಾತ್ರವಿಲ್ಲ. ಒಟ್ಟಿನಲ್ಲಿ ನನ್ನ ಹತ್ಯೆಗೆ ಸಂಚು ರೂಪಿಸಿರುವ ಕುರಿತು ನನಗೆ ಯಾವುದೇ ಪೊಲೀಸ್ ಭದ್ರತೆ ಬೇಡ. ಜನರೇ ರಕ್ಷಣೆ ನನಗೆ ಅಂತ ಅವರು ವಿವರಿಸಿದ್ರು.

  • ಕರಾವಳಿ ಸುನಾಮಿ ಬೆಂಗ್ಳೂರು ತಲುಪೋ ಮುಂಚೆ ಮನೆಗೆ ಹೊರಟೋಗ್ಬಿಡಿ- ಸಿಎಂ ವಿರುದ್ಧ ಹೆಗ್ಡೆ ವಾಗ್ದಾಳಿ

    ಕರಾವಳಿ ಸುನಾಮಿ ಬೆಂಗ್ಳೂರು ತಲುಪೋ ಮುಂಚೆ ಮನೆಗೆ ಹೊರಟೋಗ್ಬಿಡಿ- ಸಿಎಂ ವಿರುದ್ಧ ಹೆಗ್ಡೆ ವಾಗ್ದಾಳಿ

    ಮಂಗಳೂರು: ಈ ಪಾತಕಿಗಳ ಸರ್ಕಾರವನ್ನು ಕೊನೆಗಾಣಿಸಬೇಕಾಗಿ ಇಂದು ಜನಸುರಕ್ಷಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಇದು ಕರಾವಳಿಯಿಂದ ಬೆಂಗಳೂರು ಕಡೆ ಬರುತ್ತಿದೆ ಅಂತ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಜರಿದಿದ್ದಾರೆ.

    ಮಂಗಳೂರಿನ ಜನಸುರಕ್ಷಾ ಯಾತ್ರೆಯಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ ಅವರು, ಆರುವ ದೀಪ ತುಂಬಾ ಉಜ್ವಲವಾಗಿ ಉರಿಯುತ್ತದೆ. ಹಾಗೇನೇ ಇದೀಗ ಆಳ್ವಿಕೆಯಲ್ಲಿರುವ ಈ ಪಾತಕಿಗಳ ಸರ್ಕಾರವನ್ನು ಕೊನೆಗಾಣಿಸಬೇಕು. ಇದು ಕರಾವಳಿಯಿಂದ ಬೆಂಗಳೂರು ಕಡೆ ಬರುತ್ತಿದೆ. ಈ ಸುನಾಮಿ ಬೆಂಗಳೂರಿಗೆ ತಲುಪುವುದಕ್ಕಿಂತ ಮುಂಚೆ ಸಿದ್ದರಾಮಯ್ಯನವರೇ ದಯವಿಟ್ಟು ಮನೆಗೆ ಹೊರಟೋಗ್ಬಿಡಿ ಅಂತ ವಾಗ್ದಳಿ ನಡೆಸಿದ್ರು.

    ಇನ್ನು ಕೇವಲ ಎರಡು ತಿಂಗಳು ನಿಮಗೆ ಕಾನೂನು ಪ್ರಕಾರ ಸಮಯವಿದೆ. ಆ ಕಾನೂನು ಪ್ರಕಾರ ಸಮಯದಲ್ಲೂ ಕೂಡ ನೀವು ಕರ್ನಾಟಕದಲ್ಲಿ ಮುಂದುವರೆದ್ರೆ, ಖಂಡಿತವಾಗಿ ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಅಧೋಗತಿಯನ್ನು ತಂದಿಡುತ್ತೀರಿ. ಅದಕ್ಕೋಸ್ಕರ ಈ ಕರವಾಳಿಯ ಸುನಾಮಿ ಬೆಂಗಳೂರಿಗೆ ತಲುಪೋದಕ್ಕಿಂತ ಮುಂಚೆ ಕೆಳಗಿಳಿದ್ರೆ ಸರಿ. ಇಲ್ಲವೆಂದಲ್ಲಿ ಈ ಕರವಾಳಿಯ ಸುನಾಮಿ ನಿಮ್ಮನ್ನು ಎಳೆದುಕೊಂಡು ಹೋಗುತ್ತೆ. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಿಡಿ ಕಾರಿದ್ರು.

    ನಮ್ಮ ಹಿಂದೂಗಳ ಓಟಿಗೆ ಬೆಲೆ ಇಲ್ಲವೇ ಸೋದರರೇ. ಕಳೆದ ನಾಲ್ಕೂವರೆ ವರ್ಷದಲ್ಲಿ 7748ಕ್ಕೂ ಹೆಚ್ಚು ಕೊಲೆ ನಡೆದಿದೆ. 9400 ಡಕಾಯಿತಿ, 7538 ರೇಪ್, 11900 ಕಿಡ್ನಾಪ್, 35 ಸಾವಿರ ಚೀಟಿಂಗ್ ಕೇಸ್, 11 ಲಕ್ಷ ಕ್ರಿಮಿನಲ್ ಕೇಸ್ ಆಗಿದೆ ಅಂದ್ರು.

  • ಮಾತೃಭಾಷೆಯನ್ನು ಕಡೆಗಣಿಸಿ ಮಕ್ಕಳಿಗೆ ಬಲವಂತದ ಮಾಘ ಸ್ನಾನ ಮಾಡೋದು ಅವಮಾನದ ಲಕ್ಷಣ: ಹೆಗ್ಡೆ

    ಮಾತೃಭಾಷೆಯನ್ನು ಕಡೆಗಣಿಸಿ ಮಕ್ಕಳಿಗೆ ಬಲವಂತದ ಮಾಘ ಸ್ನಾನ ಮಾಡೋದು ಅವಮಾನದ ಲಕ್ಷಣ: ಹೆಗ್ಡೆ

    ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಭಾಷೆಯ ಕುರಿತಂತೆ ನೀಡಿದ್ದ ಹೇಳಿಕೆ ಸುದ್ದಿಯಾಗುತ್ತಿದ್ದಂತೆಯೇ ಕೌಶಾಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆಯವರು ಸ್ಪಷ್ಟನೆ ನೀಡಿದ್ದಾರೆ.

    ಭಾಷೆಯ ಕುರಿತು ಮಾತನಾಡಿದರ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನಿಡಿದ್ದಾರೆ. ಅಲ್ಲದೇ ಅದರ ಜೊತೆಗೆ ಒಂದು ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ.

    ಫೇಸ್‍ಬುಕ್ ನಲ್ಲಿ ಬರೆದುಕೊಂಡಿರೋದೇನು?: ಮಾತೃ ಭಾಷೆಯ ಉಳಿವು ಪ್ರಶ್ನೆಯಲ್ಲ. ಬದಲಿಗೆ ಇಂದು ಅವು ಗಟ್ಟಿಯಾಗಿ ಇನ್ನು ಹಲವಾರು ತಲೆಮಾರಿಗೆ ಶ್ರೀಮಂತವಾಗಿ ಧಾರೆಯೆರೆಯುವ ಒಂದು ಸುವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕಿದೆ. ಇಂದು ಬಹುತೇಕ ಭಾಷೆಯ ಬಗ್ಗೆ ಹೋರಾಟ ಕೇವಲ ವೈಯಕ್ತಿಕ ಮತ್ತು ರಾಜಕೀಯ ಕೀಳು ದೊಂಬರಾಟವಾಗಿ ಮಾರ್ಪಟ್ಟಾಗಿರುವುದು ಪ್ರಸ್ತುತ ನಮ್ಮ ಸಮಾಜದ ಒಂದು ದೊಡ್ಡ ದುರಂತ. ಆಂಗ್ಲ ಮಾಧ್ಯಮದ ಪ್ರಭಾವ ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದೆ. ಶುದ್ಧವಾಗಿ ಕನ್ನಡ ಭಾಷೆ ಮಾತನಾಡುವುದು ಸಹ ಇಂದು ಒಂದು ಅಪರೂಪದ ಕಲೆಯಾಗಿ ನೋಡಲಾಗುತ್ತಿದೆ ಮತ್ತು ಇಂದಿನ ತಲೆಮಾರಿನ ಹಲವರಿಗೆ ಶುದ್ಧ ಕನ್ನಡ ಅರ್ಥವಾಗದಿರುವ ಭಾಷೆಯು ಹೌದು. ಕನ್ನಡ ಸಂಭಾಷಣೆಯಲ್ಲಿ ಆಂಗ್ಲ ಮತ್ತು ಇನ್ನಿತರ ಭಾಷೆಯ ಕಲಸು ಮಿಶ್ರಿತ ಮಾಡದಿದ್ದರೆ ಸಂವಹನ ಪೂರ್ಣಗೊಳ್ಳುವುದಿಲ್ಲ ಮತ್ತು ಅದು ಒಂದು sಣಚಿಣus ನಿರ್ಮಾಣ ಮಾಡುವುದಿಲ್ಲವೆನ್ನುವುದು ಸಹ ಇಂದಿನ ಹದೆಗೆಟ್ಟ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಇದು ಹೆಚ್ಚಾಗಿ ಬೆಂಗಳೂರು ನಗರದಲ್ಲಿ ಕಂಡು ಬರುತ್ತಿದ್ದ ಒಂದು ನಕಾರಾತ್ಮಕ ಬೆಳವಣಿಗೆ. ಇಂದು ಬೇರೆ ಗ್ರಾಮಾಂತರ ಹಳ್ಳಿ- ಪಟ್ಟಣಗಳಿಗೆ ಸಹ ದಟ್ಟವಾಗಿ ವ್ಯಾಪಿಸುತ್ತಿದೆ. ಇದನ್ನೂ ಓದಿ: ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ತಿರುಗಿ ಬಿದ್ದ ಶಾಸಕ ಸುರೇಶ್ ಕುಮಾರ್

    ಭಾಷೆಯ ಶ್ರೀಮಂತಿಕೆಯನ್ನು ಹೆಮ್ಮೆಯಿಂದ ಮೆರೆಯಬೇಕಾದವರು ಇಂದು ಅದನ್ನು ಕಡೆಗಣಿಸುತ್ತಿದ್ದೇವೆ. ಇಂದು ಹಲವಾರು ಭಾರತೀಯರ ಮನೆಮಾತು ಆಂಗ್ಲ ಭಾಷೆಯಾಗಿ ಬದಲಾಗಿದೆ. ಹಾಗಾದರೆ ನಮ್ಮ ಎಲ್ಲ ಭಾರತೀಯ ಭಾಷೆಗಳು ನಮ್ಮ ಇಂದಿನ ಸ್ಥಿತಿ-ಗತಿಗೆ ಸಮರ್ಥವಲ್ಲವೇ? ನಮ್ಮ ಕನ್ನಡದಷ್ಟು ವೈವಿಧ್ಯ ಚೆಲುವನ್ನು ಇನ್ನೆಲ್ಲಿ ಕಾಣಲು ಸಾಧ್ಯ? ನಗರಗಳಲ್ಲಿ ಇಂದು ಅಂತರರಾಷ್ಟ್ರೀಯ ಶಾಲೆಗಳಲ್ಲಿ ನಮ್ಮ ಮಾತೃ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಿ, ಐರೋಪ್ಯ ಭಾಷೆಗಳ ಹೇರಿಕೆ ನಡೆಯುತ್ತಿದೆ. ಈ ಭಾಷೆಗಳು ಇಂದು ಯುರೋಪ್ ಖಂಡದ ಆಯಾ-ಪ್ರದೇಶ ದೇಶಗಳಲ್ಲೇ ಅವನತಿಯತ್ತ ಸಾಗುತ್ತಿದೆ. ಮೂಲ ಜನಸಂಖ್ಯೆ ಕುಸಿತ, ವಲಸೆ ಭಾಷೆಯ ಬೆಳೆಯುತ್ತಿರುವ ಪ್ರಭಾವ, ಬದಲಾಗುತ್ತಿರುವ ಜನಸಂಖ್ಯೆ ಪರಿವರ್ತನೆ, ಇಂದು ಈ ಖಂಡದ ಪ್ರಮುಖ ಸವಾಲಾಗಿದೆ. ಆದರೆ ನಾವು ಇಂದು, ಅರ್ಥವಾಗದ ಮತ್ತು ನಮ್ಮ ಪರಂಪರೆಗೆ ಯಾವುದೇ ಸಂಬಂಧವಿಲ್ಲದ ಈ ವಿದೇಶಿ ಭಾಷೆಗಳಿಗೆ ಮನ್ನಣೆ ನೀಡುತ್ತಿದ್ದೇವೆ. ಹಾಗೂ ನಮ್ಮ ಮಾತೃಭಾಷೆಯನ್ನು ಕಡೆಗಣಿಸಿ ಮಕ್ಕಳಿಗೆ ಬಲವಂತದ ಮಾಘಸ್ನಾನ ಮಾಡಿಸುತ್ತಿರುವುದು ಅವಮಾನದ ಲಕ್ಷಣವೆಂದೇ ಪರಿಗಣಿಸುತ್ತೇನೆ. ಇದನ್ನೂ ಓದಿ: ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ನಟ ಜಗ್ಗೇಶ್ ಟಾಂಗ್

    ಭಾಷೆ ನಮ್ಮ ಸಂಸ್ಕೃತಿಯನ್ನು ಸೂಚಿಸುತ್ತದೆ. ಇಂದು ಕನ್ನಡಿಗರಿಗೆ ಸಿಗುತ್ತಿರುವ ಸ್ಥಾನ-ಮಾನ, ಮರ್ಯಾದೆ ಎಲ್ಲವೂ ನಮ್ಮ ಶ್ರೀಮಂತ ಪರಂಪರೆಯ ಬಳುವಳಿಯಿಂದ ಬಂದದ್ದು. ಅದನ್ನು ನಾವು ಹೆಮ್ಮೆಯಿಂದ ಬಳಸಿ, ಉಳಿಸಿ ಇನ್ನಷ್ಟು ಮೆರುಗುಗೊಳಿಸುವುದು ನಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ಶುದ್ಧ ಕನ್ನಡ ಬಳಕೆ ನಮ್ಮ ವ್ಯಕ್ತಿತ್ವ ನಿರ್ಮಾಣ ಮಾಡುವುದು ಹಾಗೂ ಸಂವಹನದಲ್ಲಿ ಹೆಚ್ಚಿನ ಆಲೋಚನೆಯ ನಿಖರತೆಯನ್ನು ತಲುಪಬಹುದಾಗಿದೆ.

    ವಿಡಿಯೋದಲ್ಲೇನಿದೆ?: ಇದಷ್ಟು ಹೇಳಲು ಕಾರಣ ನಮ್ಮ ಕೆಲವು ದೃಶ್ಯ ಮಾಧ್ಯಮದವರು ಭಾಷೆಗೆ ಸಂಬಂಧಿಸಿದಂತೆ ಪುತ್ತೂರಿನ ಕಾರ್ಯಕ್ರಮ ಒಂದರಲ್ಲಿ ನನ್ನ ಮಾತು ಮತ್ತು ಆಲೋಚನೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿರುವುದ್ದಕ್ಕೆ ಹೃದಯಪೂರ್ವಕ ಸ್ವಾಗತ. ಹೀಗೆ ಕಳೆದ 2 ದಶಕಕ್ಕೂ ಹೆಚ್ಚಿನ ನನ್ನ ರಾಜಕಾರಣದ ಜೀವನದ ಉದ್ದಕ್ಕೂ ಸದಾ ನನ್ನ ಬಗ್ಗೆ ವಿಷಕಾರುತ್ತಲೇ ನನ್ನನ್ನು ಅನಾವರಣಗೊಳಿಸಿದ ಈ ಕೆಲವು ಮಾಧ್ಯಮದ ಮಂದಿಗೆ ಈ ವಿಷಯವನ್ನು ಇನ್ನು ಹೆಚ್ಚಾಗಿ ನಿಮ್ಮ ಅಪ್ರಬುದ್ಧ ಭಾಷೆಯಲ್ಲೇ ಚರ್ಚೆ ಮುಂದುವರಿಸುವಂತೆ ಶುಭ ಕೋರುತ್ತೇನೆ. ಅನಂತ ಧನ್ಯವಾದಗಳು ಅಂತ ಹೇಳಿದ್ದಾರೆ.

    https://www.youtube.com/watch?v=tlNDCv9myi4&feature=youtu.be

    https://www.youtube.com/watch?v=jE4xn6DpZhY

    https://www.youtube.com/watch?v=24frMpm0HGY

  • ಬಿಜೆಪಿ ಮಂತ್ರಿಯಿಂದಲೇ ರಸ್ತೆ ಬದಿ ಮೂತ್ರ ವಿಸರ್ಜನೆ – ಫೋಟೋ ವೈರಲ್

    ಬಿಜೆಪಿ ಮಂತ್ರಿಯಿಂದಲೇ ರಸ್ತೆ ಬದಿ ಮೂತ್ರ ವಿಸರ್ಜನೆ – ಫೋಟೋ ವೈರಲ್

    ಜೈಪುರ: ರಾಜಸ್ಥಾನದ ರಾಜಧಾನಿ ಗುಲಾಬಿ ನಗರದಲ್ಲಿ ಬಿಜೆಪಿ ಸಚಿವರೊಬ್ಬರು ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರಾಜಸ್ಥಾನ ಸರ್ಕಾರದ ಆರೋಗ್ಯ ಸಚಿವರಾಗಿರುವ ಕಾಲಿಚಂದ್ರನ್ ಸರಾಫ್ ರಸ್ತೆ ಬದಿಯಲ್ಲಿ ಮೂತ್ರ ಮಾಡುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಸಚಿವರನ್ನು ಪ್ರಶ್ನಿದ್ರೆ ಅದೇನು ದೊಡ್ಡ ವಿಷಯವಲ್ಲ ಅಂತಾ ಹೇಳಿದ್ದಾರೆ.

    ಜೈಪುರ ಮುನ್ಸಿಪಲ್ ಕಾರ್ಪೋರೇಷನ್ ನಗರವನ್ನು ಸ್ವಚ್ಛ ಭಾರತ ಯೋಜನಡಿಯ ಪಟ್ಟಿಯಲ್ಲಿ ಮೇಲೆ ತರಲು ಸಾಕಷ್ಟು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದೆ. ಆದ್ರೆ ರಾಜ್ಯ ಸಚಿವರು ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

    ಸಾಮಾನ್ಯವಾಗಿ ಸಾರ್ವಜನಿಕರು ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುವ ವ್ಯಕ್ತಿಗಳಿಗೆ 200 ರೂ. ದಂಡ ವಿಧಿಸಲಾಗುತ್ತದೆ. ಫೋಟೋ ವೈರಲ್ ಆಗುತ್ತಿದ್ದಂತೆ ಸಚಿವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ, ಮಾತನಾಡುವುದಕ್ಕೆ ಅದೇನು ಅಂತಹ ದೊಡ್ಡ ವಿಷಯವಲ್ಲ ಎಂದು ಹೇಳುವ ಮೂಲಕ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ಸ್ವಚ್ಛ ಭಾರತಕ್ಕೆ ಅವಮಾನ: ಸಾರ್ವಜನಿಕ ಸ್ಥಳದಲ್ಲಿ ಕೇಂದ್ರ ಕೃಷಿ ಸಚಿವರ ಸೂಸು

    ನಾಚಿಕೆಯ ಕೆಲಸ: ಸ್ವಚ್ಛ ಭಾರತ್ ಅಭಿಯಾನಕ್ಕಾಗಿ ಕೇಂದ್ರ ಸರ್ಕಾರ ಸಾಕಷ್ಟು ಹಣವನ್ನು ವ್ಯಯ ಮಾಡುತ್ತಿದೆ. ಬಿಜೆಪಿಯ ಇಂತಹ ನಾಯಕರಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸಚಿವರು ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಇದೊಂದು ನಾಚಿಕೆಗೇಡಿನ ಕೆಲಸ ಎಂದು ರಾಜಸ್ಥಾನದ ಕಾಂಗ್ರೆಸ್ ಘಟಕದ ಉಪಾಧ್ಯಕ್ಷೆ ಅರ್ಚನಾ ಶರ್ಮಾ ಗುಡುಗಿದ್ದಾರೆ.

    ಬಿಜೆಪಿ ವಿರೋಧಿಗಳು ಸ್ವಚ್ಛ ಭಾರತಕ್ಕೆ ಕಾಲಿಚಂದ್ರನ್ ಸರಾಫ್ ಉಡುಗೊರೆ ನೀಡಿದ್ದಾರೆ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಅಪ್ಲೋಡ್ ಮಾಡಿ ಟೀಕಿಸುತ್ತಿದ್ದಾರೆ.

    ಈ ಹಿಂದೆ ಧೋಲ್‍ಪುರ ಉಪ ಚುನಾವಣೆಯ ಪ್ರಚಾರದ ವೇಳೆಯಲ್ಲಿ ಸಚಿವರಾದ ಕಾಲಿಚಂದ್ರನ್ ಸರಾಫ್ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ನಾನು ಚುನಾವಣಾ ಪ್ರಚಾರದ ಒತ್ತಡದಲ್ಲಿ ಇದ್ದಿದರಿಂದ ಅಂದು ನನಗೆ ಫೋಟೋ ತೆಗೆಯಲು ಸಾಧ್ಯವಾಗಿರಲಿಲ್ಲ ಅಂತಾ ಅರ್ಚನಾ ಶರ್ಮಾ ತಿಳಿಸಿದ್ದಾರೆ.

    ಕೋಟಾ ಕ್ಷೇತ್ರದ ಬಿಜೆಪಿ ನಾಯಕ ಅಶೋಕ್ ಚೌಧರಿ ರಾಜಸ್ಥಾನದಲ್ಲಿ ಸಿಎಂ ವಸುಂಧರಾ ರಾಜೆ ಅವರ ಆಡಳಿಯ ವೈಖರಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಬಿಜೆಪಿ ರಾಷ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಬೇಕೆಂದು ಎಂದು ಬಿಜೆಪಿ ಶಾಸಕ ಜ್ಞಾನದೇವ್ ಅಹುಜಾ ಮಾತನಾಡಿರುವ ಆಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    ರಾಜಸ್ಥಾನದಲ್ಲಿ ನಡೆದ ಮೂರು ಕ್ಷೇತ್ರಗಳ (ಎರಡು ಲೋಕಸಭಾ, ಒಂದು ವಿಧಾನಸಭಾ ಕ್ಷೇತ್ರ)ಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಇತ್ತೀಚಿನ ಕೆಲವು ದಿನಗಳಿಂದ ಆಡಳಿತ ಸರ್ಕಾರ ಅನಗತ್ಯ ವಿಷಯಗಳಿಗಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.

  • ಈಗ ಉತ್ತರ ನೀಡದೇ ಇದ್ರೆ ಜನ ಉತ್ತರ ಕೊಡ್ತಾರೆ: ಸಿಎಂಗೆ ಡಿವಿಎಸ್ ಪಂಚ ಪ್ರಶ್ನೆ

    ಈಗ ಉತ್ತರ ನೀಡದೇ ಇದ್ರೆ ಜನ ಉತ್ತರ ಕೊಡ್ತಾರೆ: ಸಿಎಂಗೆ ಡಿವಿಎಸ್ ಪಂಚ ಪ್ರಶ್ನೆ

    ಬೆಂಗಳೂರು: ನಗರದಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆ ಕುರಿತು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆ ಸಚಿವ ಸದಾನಂದ ಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಂಚ ಪ್ರಶ್ನೆಗಳನ್ನು ಕೇಳಿದ್ದಾರೆ.

    ಟ್ವೀಟ್ ಮೂಲಕ ರಾಜ್ಯದ ಪಂಚ ಮುಗ್ಧರಿಗೆ ಪಂಚ ಪ್ರಶ್ನೆಗಳು ಎಂದು ಹೇಳಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗ ರೆಡ್ಡಿಯವರು, ಬೆಂಗಳೂರು ಉಸ್ತುವಾರಿ ಸಚಿವ ಕೆ ಜೆ ಜಾರ್ಜ್, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಇವರುಗಳಿಗೆ ಟ್ಯಾಗ್ ಮಾಡಿದ್ದಾರೆ.

    ಸಚಿವರ ಪ್ರಶ್ನೆಗಳು
    ಪ್ರಶ್ನೆ 1 – ಪಂಚ ಮುಗ್ಧರೇ ದಲಿತ ಯುವಕ ಸಂತೋಷನ ಕೊಲೆ ನಿಮ್ಮ ಮುಗ್ಧ ಸುತ್ತೋಲೆಯ ಪರಿಣಾಮ ಎಂದು ಒಪ್ಪಿಕೊಳ್ಳುತೀರಾ?
    ಪ್ರಶ್ನೆ -2 ನಿಮ್ಮ ಮುಗ್ಧಸುತ್ತೋಲೆ ಹೊರಡಿಸುವ ಮುನ್ನ ಸಮಾಜ ದ್ರೋಹಿ ಶಕ್ತಿಗಳಿಗೆ ನೀವು ರಕ್ಷಾ ಕವಚ ಹಾಕುತ್ತಿದೀರೆಂಬ ಕನಿಷ್ಠ ಜ್ಞಾನವು ನಿಮಗೆ ಇರಲಿಲ್ಲವಾ?
    ಪ್ರಶ್ನೆ -3 ದಲಿತ ಯುವಕ ಸಂತೋಷನ ಹೆತ್ತವರಿಗೆ ಏನೆಂದು ಹೇಳುತ್ತೀರಿ ಅವರನ್ನು ಮುಗ್ಧರು ಕೊಂದದೆಂದು ಹೇಳುತ್ತೀರಾ?

    ಪ್ರಶ್ನೆ -4 23 ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಕಾನೂನು ವ್ಯವಸ್ಥೆ ಅನ್ನುವುದು ಮರೀಚಿಕೆಯಾಗಿದೆ ನೀವು ಇದೆಲ್ಲವನ್ನು ನೋಡಿಯೂ ನೋಡದಂತೆ ಮುಗ್ಧರಾಗಿ ಉಳಿದಿರುವುದರ ಹಿಂದಿನ ಜಾಣ ಮುಗ್ಧತೆ ಏನು?
    ಪ್ರಶ್ನೆ – 5 ನಿಮ್ಮ ಮುಗ್ಧ ತುಷ್ಟೀಕರಣಕ್ಕೆ ಕೊನೆ ಯಾವಾಗ? ನಿಮ್ಮಗಳ ಆಡಳಿತದಲ್ಲಿ ಹಿಂದೂ ಬಾಂಧವರ ರಕ್ತ ಬಸಿಯುವ ದಾಹಕ್ಕೆ ಕೊನೆ ಯಾವಾಗ? ಒಂದಂತೂ ನೆನಪಿಟ್ಟುಕ್ಕೊಳ್ಳಿ ನೀವೀಗ ಉತ್ತರ ಕೊಡದಿದ್ದರೆ. ಚುನಾವಣೆಯಲ್ಲಿ ರಾಜ್ಯದ ಜನತೆ ಕೊಟ್ಟೇ ಕೊಡುತ್ತಾರೆ.

    ಜೆ.ಸಿ. ನಗರದ ನಿವಾಸಿಯಾಗಿರೋ 28 ವರ್ಷದ ಸಂತೋಷ್ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಬಿಜೆಪಿ ಪರ ಓಡಾಡಿಕೊಂಡಿದ್ದರು. ಬುಧವಾರ ರಾತ್ರಿ ಸುಮಾರು 7:30 ರಲ್ಲಿ ಹೊತ್ತಿಗೆ ಸಂತೋಷ್ ತಮ್ಮ ಮನೆ ಬಳಿ ಇದ್ದ ಬೇಕರಿಯಲ್ಲಿ ಟೀ ಕುಡಿಯುತ್ತಾ ನಿಂತಿದ್ದರು. ಈ ವೇಳೆ ಅದೇ ಏರಿಯಾದ ವಾಸೀಮ್, ಉಮರ್, ಫಿಲಿಪ್ಸ್ ಮತ್ತು ಇರ್ಫಾನ್ ಎಂಬವರು ಕೂಡ ಅಲ್ಲೇ ಟೀ ಕುಡಿಯುತ್ತಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ನಡೆದು ವಾಸೀಮ್ ಎಂಬಾತ ತನ್ನ ಬಳಿ ಇದ್ದ ಚಾಕುವಿನಿಂದ ಸಂತೋಷ್ ತೊಡೆಗೆ ಇರಿದಿದ್ದಾನೆ. ಪರಿಣಾಮ ತೀವ್ರ ರಕ್ತ ಸ್ರಾವದಿಂದ ಸಂತೋಷ್ ಕೊನೆಯುಸಿರೆಳೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಸದ್ಯ ಪ್ರಕರಣ ಸಂಬಂಧ ವಸೀಂ, ಫಿಲಿಪ್ಸ್ ಎಂಬ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಘಟನೆ ನಡೆದ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಠಾಣೆಯೆದುರು ಪ್ರತಿಭಟನೆ ಸಹ ನಡೆಸಿದ್ದಾರೆ. ಸಂತೋಷ್ ಹತ್ಯೆ ರಾಜಕೀಯ ಪ್ರೇರಿತ ಕೊಲೆ ಅಂತ ಆರೋಪಿಸಿದ್ದು, ವಸೀಮ್ ಸ್ಥಳೀಯ ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತರ ಮಗ, ಅವನಿಗೂ ಬಿಜೆಪಿಗೂ ಆಗುತ್ತಿರಲಿಲ್ಲ. ಹಾಗಾಗಿ ಬಿಜೆಪಿಯ ಪರ ಓಡಾಡುತ್ತಿದ್ದ ಸಂತೋಷ್‍ನನ್ನ ಕೊಲೆಗೈಯ್ಯಲಾಗಿದೆ ಎಂದು ಆರೋಪಿಸಿದ್ದಾರೆ. ಪೊಲೀಸರು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿಯನ್ನು ಸುಧಾರಿಸಿದ್ದಾರೆ.