Tag: minister

  • ಸಚಿವ ಸ್ಥಾನಕ್ಕಾಗಿ ಶಕ್ತಿ ಪ್ರದರ್ಶನ – ಡಾ ಕೆ ಸುಧಾಕರ್ ಬೆಂಬಲಿಗರ ಬೃಹತ್ ಪ್ರತಿಭಟನೆ

    ಸಚಿವ ಸ್ಥಾನಕ್ಕಾಗಿ ಶಕ್ತಿ ಪ್ರದರ್ಶನ – ಡಾ ಕೆ ಸುಧಾಕರ್ ಬೆಂಬಲಿಗರ ಬೃಹತ್ ಪ್ರತಿಭಟನೆ

    ಚಿಕ್ಕಬಳ್ಳಾಪುರ: ಕ್ಷೇತ್ರದ ಶಾಸಕ ಡಾ ಕೆ ಸುಧಾಕರ್ ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ, ಶಾಸಕರ ಬೆಂಬಲಿಗರು ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಪಿಎಲ್‍ಡಿ ಬ್ಯಾಂಕ್ ಆವರಣದಿಂದ ಬಿಬಿ ರಸ್ತೆ ಮೂಲಕ ಬಲಮುರಿ ವೃತ್ತದವರೆಗೂ ಸಾಗಿ ಬಳಿಕ ಬಿಬಿ ರಸ್ತೆಯ ಮೂಲಕವೇ ಶಿಡ್ಲಘಟ್ಟ ವೃತ್ತದವರೆಗೂ ಮೆರವಣಿಗೆ ನಡೆಸಿದರು. ಈ ವೇಳೆ ಬೃಹತ್ ಸಂಖ್ಯೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಈ ವೇಳೆ ಶಾಸಕ ಸುಧಾಕರ್ ಅವರಿಗೆ ಸಚಿವ ಸ್ಥಾನ ಕೊಡುವಂತೆ ಆಗ್ರಹಿಸಿದ ಅವರು ನಗರದಲ್ಲಿ ಶಕ್ತಿ ಪ್ರದರ್ಶನ ನಡೆಸಿದರು. ಮೊದಲು ಶಾಸಕ ಸುಧಾಕರ್ ಅವರಿಗೆ ಸಚಿವ ಸ್ಥಾನ ಸಿಗುವ ನೀರಿಕ್ಷೆಯಿತ್ತು. ಆದರೆ ಕೆಲವರ ಪಿತೂರಿಯಿಂದ ಈಗ ಸಚಿವ ಸ್ಥಾನ ಕೈ ತಪ್ಪಿದೆ. ಹೀಗಾಗಿ ಸದ್ಯ ಜಿಲ್ಲೆಯ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶಾಸಕ ಸುಧಾಕರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಶಾಸಕರ ಬೆಂಬಲಿಗರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.

  • ಕನ್ನಡ ಅಭಿಮಾನವಿಲ್ಲದ ಜಮೀರ್ ಕರ್ನಾಟಕದಿಂದ ತೊಲಗಲಿ: ಕನ್ನಡಿಗರ ಆಕ್ರೋಶ

    ಕನ್ನಡ ಅಭಿಮಾನವಿಲ್ಲದ ಜಮೀರ್ ಕರ್ನಾಟಕದಿಂದ ತೊಲಗಲಿ: ಕನ್ನಡಿಗರ ಆಕ್ರೋಶ

    ಬೆಂಗಳೂರು: ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ವಿರುದ್ಧ ಕನ್ನಡಿಗರು ಆಕ್ರೋಶಗೊಂಡಿದ್ದಾರೆ.

    ಚಾಮರಾಜಪೇಟೆ ಕ್ಷೇತ್ರದ ಕಾಂಗ್ರಸ್ ಶಾಸಕ ಜಮೀರ್ ಅಹ್ಮದ್ ನೂತನ ಸಚಿವರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಬದಲು ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

    ಇಂದು ಕಾಂಗ್ರೆಸ್ ಮತ್ತು ಜೆಡಿಎಸ್ ನ 25 ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದು, ಅದರಲ್ಲಿ 24 ಶಾಸಕರು ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸದ ಸಚಿವ ಜಮೀರ್ ಅಹ್ಮದ್ ರನ್ನು ನಾಡದ್ರೋಹಿ. ಅವರಿಗೆ ಕನ್ನಡದ ಬಗ್ಗೆ ಯಾವ ಕಾಳಜಿಯು ಇಲ್ಲ, ಕರ್ನಾಟಕದಲ್ಲಿ ರಾಜಕಾರಣ ಮಾಡಲು ಯೋಗ್ಯರಲ್ಲ. ಕರ್ನಾಟಕದವರೇ ಆಗಿದ್ದು ಕನ್ನಡ ಅಭಿಮಾನವಿಲ್ಲದ ಜಮೀರ್ ರವರು ಕರ್ನಾಟಕದಿಂದ ತೊಲಗಲಿ ಎಂದು ಬರೆದು ಟೀಕಿಸಿದ್ದಾರೆ.

  • ರಾಜ್ಯ ನಾಯಕರೊಂದಿಗೆ ಇಂದು ರಾಹುಲ್ ಗಾಂಧಿ ಮೀಟಿಂಗ್-ಸಂಪುಟ ವಿಸ್ತರಣೆಯ ಕಸರತ್ತಿಗೆ ಬೀಳಲಿದಿಯಾ ಫುಲ್ ಸ್ಟಾಪ್..?

    ರಾಜ್ಯ ನಾಯಕರೊಂದಿಗೆ ಇಂದು ರಾಹುಲ್ ಗಾಂಧಿ ಮೀಟಿಂಗ್-ಸಂಪುಟ ವಿಸ್ತರಣೆಯ ಕಸರತ್ತಿಗೆ ಬೀಳಲಿದಿಯಾ ಫುಲ್ ಸ್ಟಾಪ್..?

    ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಇನ್ನೊಂದೆ ದಿನ ಬಾಕಿ ಇದೆ. ಆದರೆ ಕಾಂಗ್ರೆಸ್ ನಿಂದ ಸಚಿವರಾಗೋದು ಯಾರು ಅನ್ನೊ ಗೊಂದಲಕ್ಕೆ ಇನ್ನು ತೆರೆ ಬಿದ್ದಿಲ್ಲ. ಎಲ್ಲ ಗೊಂದಲಗಳಿಗೆ ಫುಲ್ ಸ್ಟಾಪ್ ಹಾಕೋ ನಿಟ್ಟಿನಲ್ಲಿ ಇಂದು ಕಾಂಗ್ರೆಸ್ ಹೈಕಮಾಂಡ್ ಜೊತೆ ರಾಜ್ಯ ಕಾಂಗ್ರೆಸ್ ನಾಯಕರು ಸಭೆ ನಡೆಸಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಸಚಿವಕಾಂಕ್ಷಿಗಳು ದೆಹಲಿಯ ಹೈಕಮಾಂಡ್ ನತ್ತ ತಮ್ಮ ಚಿತ್ತ ನೆಟ್ಟಿದ್ದಾರೆ.

    ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಕಸರತ್ತು ಅಂತಿಮ ಘಟ್ಟ ತಲುಪಿದೆ. ಬುಧವಾರ ಪ್ರಮಾಣ ವಚನ ಕಾರ್ಯಕ್ರಮದ ಹಿನ್ನೆಲೆ ಯಾರಿಗೆಲ್ಲ ಕ್ಯಾಬಿನೆಟ್ ಭಾಗ್ಯ ಎಂಬುದು ಇಂದು ಅಂತ್ಯವಾಗಲೇಬೇಕಿದೆ. ಹೀಗಾಗಿ ಸಂಪುಟ ವಿಸ್ತರಣೆ ಕುರಿತು ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ವಿದೇಶ ಪ್ರವಾಸದಿಂದ ಸಂಜೆ ವಾಪಸ್ ಆಗಿರುವ ರಾಹುಲ್ ಗಾಂಧಿ ಸಂಪುಟ ಕಗ್ಗಂಟು ಬಗೆಹರಿಸಲು ರಾಜ್ಯ ನಾಯಕರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.

    ಕಾಂಗ್ರೆಸ್ ಪಾಲಿಗೆ ಹಂಚಿಕೆ ಆಗಿರುವ 22 ಸ್ಥಾನ ಗಳ ಪೈಕಿ 18 ಸ್ಥಾನಗಳನ್ನು ಮಾತ್ರ ಭರ್ತಿ ಮಾಡವ ಚಿಂತನೆಯಲ್ಲಿ ಹೈಕಮಾಂಡ್ ಇದೆ. ಪ್ರಾದೇಶಿಕತೆ ಹಾಗೂ ಜಾತಿ ಲೆಕ್ಕಾಚಾರದಲ್ಲಿ ಖಾತೆ ಹಂಚಲು ಪ್ಲಾನ್ ಮಾಡಿರುವ ಹೈಕಮಾಂಡ್, ಕೆಲ ಹಿರಿಯ ನಾಯಕರಿಗೆ ಕ್ಯಾಬಿನೆಟ್ ನಿಂದ ಕೊಕ್ ಕೊಟ್ಟು, ಹೊಸ ಮುಖಗಳಿಗೆ ಆದ್ಯತೆ ಕೊಡುವ ಒಲವು ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ಸಾಧಕ ಬಾಧಕಗಳನ್ನು ಇಂದಿನ ಸಭೆಯಲ್ಲಿ ರಾಹುಲ್ ಗಾಂಧಿ ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

    ಇಂದಿನ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಈಗಾಗಲೇ ಸುಮಾರು ಮೂವತ್ತು ಶಾಸಕರ ಹೆಸರು ಪಟ್ಟಿ ಮಾಡಿರುವ ರಾಜ್ಯ ಚುನಾವಣಾ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೋಮವಾರ ರಾತ್ರಿ ರಾಹುಲ್ ಗಾಂಧಿ ಜೊತೆ ಮೊದಲ ಹಂತದಲ್ಲಿ ಮಾತುಕತೆ ನಡೆಸಿದ್ದಾರೆ. ಇಂದು ಮತ್ತೊಂದು ಹಂತದ ಮಾತುಕತೆ ನಡೆಸಿ ಒಮ್ಮತಕ್ಕೆ ಬರುವ ಸಾಧ್ಯತೆ ಇದೆ.

    ರಾಜ್ಯ ಹಿರಿಯ ನಾಯಕರು ರಾಹುಲ್ ಭೇಟಿಗೂ ಮುನ್ನ ದೆಹಲಿ ತಲುಪಿರುವ ಸಚಿವಕ್ಷಾಂಶಿಗಳು, ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಮಾಜಿ ಸಚಿವರಾದ ರೋಷನ್ ಬೇಗ್, ಎಚ್.ಕೆ. ಪಾಟೀಲ್, ಈಶ್ವರ ಖಂಡ್ರೆ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಗಣೇಶ್ ಹುಕ್ಕೇರಿ, ರಾಜಶೇಖರ ಪಾಟೀಲ್ ಹುಮ್ನಾಬಾದ್, ವಿ. ಮುನಿಯಪ್ಪ, ಶ್ರೀನಿವಾಸ್ ಮಾನೆ, ಉಮೇಶ್ ಜಾಧವ್ ಮತ್ತು ಟಿ. ರಘುಮೂರ್ತಿ, ಭೀಮಾ ನಾಯ್ಕ ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದಾರೆ.

    ಸಚಿವ ಸ್ಥಾನಕ್ಕಾಗಿ ಹಿರಿಯ ಮತ್ತು ಕಿರಿಯ ಶಾಸಕರು ಭರ್ಜರಿ ಪೈಪೊಟಿ ಆರಂಭಿಸಿದ್ದು, ಅಡಕತ್ತರಿಯಲ್ಲಿ ಸಿಲುಕಿರುವ ಹೈಕಮಾಂಡ್ ಅದ್ಯಾರಿಗೆ ಮಣೆ ಹಾಕುತ್ತೆ ಗೊತ್ತಿಲ್ಲ. ಇತ್ತ ನೂತನ ಸಚಿವರ ಪ್ರಮಾಣವಚನಕ್ಕೆ ರಾಜಭವನ ಸಿದ್ಧವಾಗಿದ್ದು ಅದ್ಯಾರ್ಯಾರಿಗೆ ಒಲೆಯಲಿದೆ ಕ್ಯಾಬಿನೆಟ್ ಭಾಗ್ಯ ಅಂತಾ ಕಾದು ನೋಡಬೇಕಿದೆ.

  • ಕಾಂಗ್ರೆಸ್ ಹಿರಿಯ ನಾಯಕರ ಚಿತ್ತ ಹೈಕಮಾಂಡ್ ನತ್ತ

    ಕಾಂಗ್ರೆಸ್ ಹಿರಿಯ ನಾಯಕರ ಚಿತ್ತ ಹೈಕಮಾಂಡ್ ನತ್ತ

    ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಆರ್. ಪಾಟೀಲ್ ರಾಜೀನಾಮೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಎಸ್.ಆರ್. ಪಾಟೀಲ್ ರಾಜೀನಾಮೆ ಬಳಿಕ ಪಕ್ಷದ ಹಿರಿಯ ನಾಯಕರಿಗೆ ಸಂಪುಟದಲ್ಲಿ ಸ್ಥಾನ ಸಿಗುತ್ತೋ, ಇಲ್ಲವೋ ಎಂಬ ಚಿಂತೆ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.

    ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಹಿರಿಯ ನಾಯಕರಿಗೆ ಬಹುತೇಕ ಸಚಿವ ಸ್ಥಾನ ಸಿಗೋದು ಅನುಮಾನ ಅಂತಾ ಹೇಳಲಾಗುತ್ತಿತ್ತು. ಇದೀಗ ರಾಮಲಿಂಗರೆಡ್ಡಿ, ಆರ್.ವಿ.ದೇಶಪಾಂಡೆ ಹಾಗೂ ಹೆಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ ಅವರಿಗೆ ಈ ಬಾರಿ ಸಂಪುಟ ಸ್ಥಾನ ಕೈ ತಪ್ಪೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. 5 ವರ್ಷ ಸಚಿವರಾಗಿ ಕೆಲಸ ಮಾಡಿದ್ದ ನಾಯಕರಿಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ಬೇಡ, ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಿ ಎಂದು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆಯಂತೆ.

    ಇತ್ತ ಕೃಷ್ಣ ಬೈರೇಗೌಡ, ಕೆ.ಜೆ.ಜಾರ್ಜ್, ರೋಷನ್ ಬೇಗ್, ಯು.ಟಿ.ಖಾದರ್ ಕೂಡ ಸ್ವಲ್ಪಮಟ್ಟಿಗಿನ ಆತಂಕದಲ್ಲೇ ಹೈಕಮಾಂಡ್ ನತ್ತ ನೋಡುವಂತಾಗಿದೆ. ಯು.ಟಿ.ಖಾದರ್ ಸ್ಥಾನದಲ್ಲಿ ಜಮೀರ್ ಅಹಮದ್ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಒಂದು ಕಡೆ ರೋಷನ್ ಬೇಗ್ ಬದಲಾಗಿ ಶಾಂತಿ ನಗರದ ಶಾಸಕ ಎನ್.ಎ.ಹ್ಯಾರಿಸ್‍ಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಹೈಕಮಾಂಡ್ ಮಟ್ಟದಲ್ಲಿ ಲಾಬಿಗೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಒಂದು ವೇಳೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಗೆ ಸಚಿವ ಸ್ಥಾನ ಕೈ ತಪ್ಪಿದ್ರೆ, ಅದು ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲ್ ಕೈ ವಶವಾಗುವ ಸಾಧ್ಯತೆಗಳಿವೆ. ಇತ್ತ ಈಶ್ವರ್ ಖಂಡ್ರೆ ಅವರಿಗೆ ಸಂಪುಟದಿಂದ ಹೊರ ಬಂದ್ರೆ, ರಾಜಶೇಖರ್ ಪಾಟೀಲ್ ಸಚಿವರಾಗುವ ಸಾಧ್ಯತೆಗಳಿವೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ಸಚಿವ ಸ್ಥಾನ ನೀಡುವಂತೆ ಶಾಸಕ ಹ್ಯಾರಿಸ್ ಪರ ಬ್ಯಾಟ್ ಬೀಸಿದ್ರಾ ರಮ್ಯಾ

    ಸಚಿವ ಸ್ಥಾನ ನೀಡುವಂತೆ ಶಾಸಕ ಹ್ಯಾರಿಸ್ ಪರ ಬ್ಯಾಟ್ ಬೀಸಿದ್ರಾ ರಮ್ಯಾ

    ಬೆಂಗಳೂರು: ವಿಧಾನಸಭಾ ಚುನಾವಣೆಯ ಬಳಿಕ ಸೈಲೆಂಟಾಗಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರು ಇದೀಗ ಶಾಸಕ ಹ್ಯಾರಿಸ್ ಪರ ಲಾಬಿ ನಡೆಸಲು ಮುಂದಾಗಿದ್ದಾರೆ.

    ಹೌದು. ಕರ್ನಾಟಕ ವಿಧಾನ ಸಭೆ ಚುನಾವಣೆ ಮತ್ತು ಮೈತ್ರಿ ಸರ್ಕಾರ, ಸಂಪುಟ ರಚನೆಯಿಂದ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅಂತರ ಕಾಯ್ದುಕೊಂಡಿದ್ದರು. ಆದ್ರೆ ಇದೀಗ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ನಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಪುತ್ರ ನಲಪಾಡ್ ಜೈಲು ಸೇರಿರುವ ಹಿನ್ನೆಲೆಯಲ್ಲಿ ಹ್ಯಾರಿಸ್ ಯಾವುದೇ ಮುಖಂಡರಲ್ಲಿ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ರಮ್ಯಾ ಅವರನ್ನ ಮುಂದಿಟ್ಟುಕೊಂಡು ಹೈಕಮಾಂಡ್ ಮಟ್ಟದಲ್ಲಿ ಹ್ಯಾರಿಸ್ ಪರ ಲಾಬಿ ನಡೆಸಲು ಮುಂದಾಗಿದ್ದಾರಂತೆ. ರಮ್ಯಾ ದೆಹಲಿಯಲ್ಲಿ ತಮಗಿರುವ ಸಂಪರ್ಕ ಬಳಸಿ ಅಲ್ಪಸಂಖ್ಯಾತ ಖೋಟಾದಲ್ಲಿ ರೋಶನ್ ಬೇಗ್ ಬದಲು ಹ್ಯಾರಿಸ್‍ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.

    ಹ್ಯಾರಿಸ್ ಪರ ರಮ್ಯಾ ಲಾಬಿ ಯಾಕೆ ಗೊತ್ತೆ?
    ಈ ಹಿಂದೆ ರಮ್ಯಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಶಾಂತಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ರಮ್ಯಾ ಅವರು ಹ್ಯಾರಿಸ್ ಪರವಾಗಿ ರೋಡ್ ಶೋ ನಡೆಸಿದ್ದರು. ಅಲ್ಲದೇ ಶಾಂತಿನಗರ ನಿವಾಸಿಯಾಗಿರುವ ರಮ್ಯಾ ಅವರು ಶಾಸಕ ಹ್ಯಾರಿಸ್ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಸ್ಥಳೀಯ ಶಾಸಕರಾಗಿರುವ ಹ್ಯಾರಿಸ್ ಪರವಾಗಿ ಸಚಿವರಾಗಬೇಕು ಎನ್ನುವ ಉದ್ದೇಶ ಅವರದ್ದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

  • ಸಂಪುಟ ವಿಸ್ತರಣೆ ಬಳಿಕ ಶುರುವಾಗಲಿದೆ ಮತ್ತೊಂದು ಕದನ: ಸರ್ಕಾರಕ್ಕೆ ಗುಪ್ತಚರ ಇಲಾಖೆಯಿಂದ ಎಚ್ಚರಿಕೆ

    ಸಂಪುಟ ವಿಸ್ತರಣೆ ಬಳಿಕ ಶುರುವಾಗಲಿದೆ ಮತ್ತೊಂದು ಕದನ: ಸರ್ಕಾರಕ್ಕೆ ಗುಪ್ತಚರ ಇಲಾಖೆಯಿಂದ ಎಚ್ಚರಿಕೆ

    ಬೆಂಗಳೂರು: ಸಂಪುಟ ವಿಸ್ತರಣೆ ಆದ ಕೂಡಲೇ ಮತ್ತೊಂದು ಕದನ ಶುರುವಾಗಲಿದ್ದು, ಸರ್ಕಾರಕ್ಕೆ ಗುಪ್ತಚರ ಇಲಾಖೆ ಶಾಸಕರು ಬಂಡಾಯ ಏಳುವ ಎಚ್ಚರಿಕೆಯನ್ನು ನೀಡಿದೆ.

    8 ಕಾಂಗ್ರೆಸ್ ಶಾಸಕರು ಬಂಡಾಯ ಏಳುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.

    ಈಗಾಗಲೇ ಶಾಸಕರು ನಾವು ಸಚಿವ ಸ್ಥಾನದ ಆಕಾಂಕ್ಷಿ ಅಂತಾ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಇತ್ತ ಗುಪ್ತಚರ ವರದಿಯಲ್ಲಿ ಹೇಳಿರುವ ಶಾಸಕರು ಬಂಡಾಯ ಏಳದಂತೆ ನೋಡಿಕೊಳ್ಳಲು ಕಾಂಗ್ರೆಸ್ ನಾಯಕರಿಗೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ.

    ಇತ್ತ ಬಂಡಾಯ ಏಳುವ ಶಾಸಕರನ್ನು ಬಿಜೆಪಿ ಟಾರ್ಗೆಟ್ ಮಾಡಿಕೊಂಡಿದ್ದು, ತನ್ನತ್ತ ಸೆಳೆಯುವ ಪ್ರಯತ್ನವನ್ನು ತೆರೆಮರೆಯಲ್ಲಿ ಮಾಡ್ತಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಗುಪ್ತಚರ ವರದಿಯಲ್ಲಿ ಉಲ್ಲೇಖಿಸಿರುವ 8 ಕಾಂಗ್ರೆಸ್ ಶಾಸಕರಿಗೆ ಒಂದು ವೇಳೆ ಸಚಿವ ಸ್ಥಾನ ಸಿಗದೇ ಇದ್ದಲ್ಲಿ ಬಂಡಾಯ ಏಳುವ ಸಾಧ್ಯತೆಗಳಿವೆ ಅಂತಾ ರಾಜ್ಯ ಸರ್ಕಾರಕ್ಕೆ ತಿಳಿಸಿದೆ. ಅಷ್ಟೇ ಅಲ್ಲದೇ ಈ ಎಲ್ಲ 8 ಶಾಸಕರು ಜೊತೆಗೊಡಿ ರಹಸ್ಯ ಸಭೆ ನಡೆಸಿದ್ದಾರೆ ಎನ್ನುವ ಮಾಹಿತಿಯೂ ಈಗ ಸಿಕ್ಕಿದೆ.

    ಬಂಡಾಯ ಏಳಬಹುದಾದ ಶಾಸಕರು ಯಾರು?
    1. ಶಿವರಾಮ ಹೆಬ್ಬಾರ್: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಶಿವರಾಮ ಹೆಬ್ಬಾರ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಹೆಬ್ಬಾರ್ ಪತ್ನಿಗೆ ವಿಶ್ವಾಸಮತ ಸಾಬೀತು ಮುನ್ನವೇ ಆಪರೇಷನ್ ಕಮಲದಡಿಯಲ್ಲಿ ಬಿಜೆಪಿಗೆ ಆಹ್ವಾನ ನೀಡಲಾಗಿತ್ತು ಅಂತಾ ಕಾಂಗ್ರೆಸ್ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿತ್ತು. ಆದ್ರೆ ಕಾಂಗ್ರೆಸ್ ರಿಲೀಸ್ ಮಾಡಿದ್ದ ಆಡಿಯೋ ಕ್ಲಿಪ್ ನಲ್ಲಿದ್ದ ಮಹಿಳೆ ಧ್ವನಿ ನನ್ನ ಪತ್ನಿಯದ್ದು ಅಲ್ಲ ಅಂತಾ ಶಿವರಾಮ ಹೆಬ್ಬಾರ್ ಫೇಸ್‍ಬುಕ್ ಪೇಜಿನಲ್ಲಿ ಬರೆದುಕೊಂಡಿದ್ರು.

    2. ಬಿ.ಕೆ ಸಂಗಮೇಶ್ವರ್: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಬಿ.ಕೆ.ಸಂಗಮೇಶ್ವರ ಆಯ್ಕೆಯಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ನ ಎಂ.ಜೆ.ಅಪ್ಪಾಜಿ ವಿರುದ್ಧ 11,567 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ 2013ರ ಚುನಾವಣೆಯಲ್ಲಿ ಇದೇ ಅಪ್ಪಾಜಿ ವಿರುದ್ಧ ಸಂಗಮೇಶ್ವರ ಸೋಲು ಕಂಡಿದ್ರು. ಇನ್ನು 2008 ಮತ್ತು 2004ರ ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

    3. ಶಿವಾನಂದ ಪಾಟೀಲ್: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ವಿಧಾನ ಸಭಾ ಕ್ಷೇತ್ರದಿಂದ ಸತತವಾಗಿ ಎರಡನೇ ಬಾರಿ ಶಿವಾನಂದ ಪಾಟೀಲ್ ಗೆಲುವು ಕಂಡಿದ್ದಾರೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಶಿವಾನಂದ ಪಾಟೀಲ್ ಫಲಿತಾಂಶ ಬಳಿಕ ಬಿಜೆಪಿಯ ಸಂಪರ್ಕದಲ್ಲಿದ್ರು ಎಂಬ ಸುದ್ದಿಯೊಂದು ಕೇಳಿ ಬಂದಿತ್ತು.

    4. ರಾಜಶೇಖರ್ ಪಾಟೀಲ್: ಬೀದರ್ ಜಿಲ್ಲೆಯ ಹುಮನಾಬಾದ್ ವಿಧಾನಸಭಾ ಕ್ಷೇತ್ರದಿಂದ ರಾಜಶೇಖರ್ ಪಾಟೀಲ್ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಹುಮನಾಬಾದ್ 2008ರಲ್ಲಿ ರಚಿತವಾದ ವಿಧಾನಸಭಾ ಕ್ಷೇತ್ರವಾಗಿದ್ದು 2008ರಿಂದ ಸತತವಾಗಿ ಮೂರು ಬಾರಿ ಶಾಸಕರಾಗಿ ರಾಜಶೇಖರ್ ಪಾಟೀಲ್ ಆಯ್ಕೆಯಾಗಿದ್ದಾರೆ.

    5. ಬಿ.ಸಿ.ಪಾಟೀಲ್: ಲಿಂಗಾಯತ ಕಾಂಗ್ರೆಸ್ ಶಾಸಕರಾಗಿರುವ ಬಿ.ಸಿ.ಪಾಟೀಲ್ ಫಲಿತಾಂಶದ ದಿನದಿಂದಲೂ ತಮಗೆ ಸಚಿವ ಸ್ಥಾನ ನೀಡಬೇಕೆಂದು ಹೈಕಮಾಂಡ್ ನಲ್ಲಿ ಬೇಡಿಕೆ ಇಟ್ಟಿದ್ದಾರೆ. ಹಾವೇರಿ ಜಿಲ್ಲೆಯಿಂದ ಕಾಂಗ್ರೆಸ್‍ನಿಂದ ಆಯ್ಕೆಯಾಗಿರುವ ಏಕ ಶಾಸಕರಾಗಿದ್ದಾರೆ. ಸತತವಾಗಿ ಮೂರು ಬಾರಿ ಶಾಸಕರಾಗಿರುವ ಬಿ.ಸಿ.ಪಾಟೀಲ್ ಅವರಿಗೆ ಬಿಜೆಪಿ ಆಫರ್ ನೀಡಿತ್ತು ಎನ್ನಲಾದ ಆಡಿಯೋ ಕ್ಲಿಪ್ ಅನ್ನು ಉಗ್ರಪ್ಪ ಬಿಡುಗಡೆ ಮಾಡಿದ್ದರು. ಈ ಮೂಲಕ ತಾನು ಪಕ್ಷಕ್ಕೆ ನಿಷ್ಠನಾಗಿದ್ದೇನೆ ಎಂಬುದನ್ನು ತೋರಿಸಿಕೊಟ್ಟಿದ್ದರು.

    6. ಜೆ.ಎನ್.ಗಣೇಶ್: ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಗೊಂಡಿರುವ ಜೆ.ಎನ್.ಗಣೇಶ್ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಗೆಲುವು ಕಂಡಿದ್ದ ಬಿಜೆಪಿಯ ಟಿ.ಹೆಚ್.ಸುರೇಶ್ ಬಾಬು ವಿರುದ್ಧ ಗೆಲುವು ಕಂಡಿದ್ದಾರೆ.

    7. ಆನಂದ್ ಸಿಂಗ್: ಫಲಿತಾಂಶದ ಬಳಿಕ ಕಾಣೆಯಾಗಿದ್ದ ವಿಜಯನಗರ ಶಾಸಕ ಆನಂದ್ ಸಿಂಗ್ ವಿಶ್ವಾಸಮತ ಸಾಬೀತಿನ ದಿನವೇ ಪ್ರತ್ಯಕ್ಷವಾಗಿದ್ರು. ಮೂಲ ಬಿಜೆಪಿ ನಾಯಕರಾದ ಆನಂದ್ ಸಿಂಗ್ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ರು. ಈ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಮತ್ತೆ ಬಿಜೆಪಿ ಸೇರ್ತಾರ ಎಂಬ ಸುದ್ದಿಗಳು ಹರಿದಾಡುತ್ತಿವೆ.

    8. ಪ್ರತಾಪ್ ಗೌಡ ಪಾಟೀಲ್: ಚುನಾವಣೆಯ ಫಲಿತಾಂಶದ ನಂತರ ರಾಜಕೀಯ ವಲಯದಲ್ಲಿ ಪ್ರಬಲವಾಗಿ ಕೇಳಿ ಬಂದ ಹೆಸರು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್. ಇವರು ಸಹ ಫಲಿತಾಂಶದ ಬಳಿಕ ಕಾಣೆಯಾದವ್ರು ವಿಶ್ವಾಸಮತ ಸಾಬೀತು ದಿನ ಪ್ರತ್ಯಕ್ಷವಾಗಿದ್ರು. ಪಾಟೀಲರನ್ನು ಸಹ ಬಿಜೆಪಿ ಹೈಜಾಕ್ ಮಾಡಿದೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು.

    ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಎಲ್ಲ ಶಾಸಕರನ್ನು ಕಾಂಗ್ರೆಸ್ ಸಮಾಧಾನಗೊಳಿಸುತ್ತದೆ. ಒಂದು ವೇಳೆ ಸಚಿವ ಸ್ಥಾನ ಸಿಗದ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಚಿಂತಿಸಿದೆ ಎನ್ನಲಾಗ್ತಿದೆ. ಆದರೆ ಬಂಡಾಯ ಏಳುವ ಶಾಸಕರು ಹೈಕಮಾಂಡ್ ಸೂಚನೆಗೆ ಬದ್ಧರಾಗಿರುತ್ತಾರಾ ಎನ್ನುವುದು ಸಂಪುಟ ರಚನೆಯ ಬಳಿಕ ಗೊತ್ತಾಗಲಿದೆ.

    https://youtu.be/TNYU2OYWoS0

  • ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಕಾಂಗ್ರೆಸ್ ಹೈಕಮಾಂಡ್‍ ನಿಂದ ಬಿಗ್ ಶಾಕ್!

    ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಕಾಂಗ್ರೆಸ್ ಹೈಕಮಾಂಡ್‍ ನಿಂದ ಬಿಗ್ ಶಾಕ್!

    ಬೆಂಗಳೂರು: ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಕಸರತ್ತು ಮುಂದುವರೆದಿದೆ. ಆದರೆ ಈ ಸಚಿವ ಸ್ಥಾನಗಳ ಆಕಾಂಕ್ಷಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ ಕೊಟ್ಟಿದೆ.

    ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಕೊನೆಯಾಗದೆ ಕಗ್ಗಂಟಾಗಿದೆ. ಈಗ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಹೊಸ ಷರತ್ತು ಮತ್ತು ಮಾನದಂಡ ಸಿದ್ಧಪಡಿಸಿದೆ. ಜಾತಿ ಮತ್ತು ಪ್ರದೇಶವಾರು ಆಧರಿಸಿ ಸಚಿವ ಸ್ಥಾನವನ್ನು ನೀಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

    ಸಚಿವ ಸ್ಥಾನ ಮತ್ತು ಖಾತೆ ಹಂಚಿಕೆ ವಿಚಾರವಾಗಿ ಶನಿವಾರ ಸಂಜೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯೊಂದಿಗೆ ರಾಜ್ಯ ಕಾಂಗ್ರೆಸ್ ನಾಯಕರು ಸಭೆ ನಡೆಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ರಾಜ್ಯ ಚುನಾವಣಾ ಉಸ್ತುವಾರಿ ಕೆ.ವೇಣುಗೋಪಾಲ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಸಭೆಯಲ್ಲಿ ಭಾಗವಹಿಸಿದ್ದರು.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಇಂದಿನಿಂದ ಮೂರು ದಿನಗಳ ಕಾಲ ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ಹಿನ್ನೆಲೆ ಸಂಪುಟ ಸರ್ಕಸ್ ಇನ್ನು ಮೂರು ದಿನ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂಬುದಾಗಿ ತಿಳಿದುಬಂದಿದೆ.

  • ರೆಡ್ಡಿ ಸಮುದಾಯದಿಂದ ಗೆದ್ದು ಬಂದಿರೋ ಏಕೈಕ ಶಾಸಕ ನಾನು: ಸಚಿವ ಸ್ಥಾನ ಬೇಕೆಂದ ಚಿಂತಾಮಣಿ ಶಾಸಕ

    ರೆಡ್ಡಿ ಸಮುದಾಯದಿಂದ ಗೆದ್ದು ಬಂದಿರೋ ಏಕೈಕ ಶಾಸಕ ನಾನು: ಸಚಿವ ಸ್ಥಾನ ಬೇಕೆಂದ ಚಿಂತಾಮಣಿ ಶಾಸಕ

    ಚಿಕ್ಕಬಳ್ಳಾಪುರ: ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಅಂತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಜೆಡಿಎಸ್ ಶಾಸಕ ಜೆ ಕೆ ಕೃಷ್ಣಾರೆಡ್ಡಿ ಹೇಳಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹಾಗೂ ಎಚ್ ಡಿ ಕುಮಾರಸ್ವಾಮಿ, ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುತ್ತಾರೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಕಾಂಗ್ರೆಸ್-ಜೆಡಿಎಸ್ ಸಂಪುಟ ರಚನೆ ಕಸರತ್ತು- ಸಚಿವ ಸ್ಥಾನಕ್ಕೆ ಮುಂದುವರಿದ ಲಾಬಿ

    ಕಳೆದ 10 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡ ಹಾಗೂ ಎಚ್‍ಡಿ ಕುಮಾರಸ್ವಾಮಿ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರು ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಈ ಹಿನ್ನೆಲೆಯಲ್ಲಿ ರೆಡ್ಡಿ ಸಮುದಾಯದಿಂದ ನಾನು ಒಬ್ಬನೇ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅಲ್ಲದೇ ನಮ್ಮ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದಿಂದ ಒಂದು ಸ್ಥಾನ ಬಂದಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕೊಡುವ ವಿಶ್ವಾಸ ನನಗಿದೆ ಅಂದ್ರು.

    ಜೆಡಿಎಸ್ ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆ ಸಂಬಂಧ ಚರ್ಚೆಗಳು ನಡೆಯುತ್ತಿದ್ದು ಅಂತಿಮವಾಗಿಲ್ಲ. ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದು ವಿಶ್ವಾಸ ಮತಯಾಚನೆಯ ಬಳಿಕ ಯಾರಿಗೆ ಯಾವ ಖಾತೆ ಎನ್ನುವುದು ನಿರ್ಧಾರವಾಗಲಿದೆ.

  • ಎಂ.ಬಿ.ಪಾಟೀಲ್‍ಗೆ ಡಿಸಿಎಂ, ಸಚಿವ ಸ್ಥಾನ ನೀಡಬೇಡಿ-ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಭಿನ್ನಮತ

    ಎಂ.ಬಿ.ಪಾಟೀಲ್‍ಗೆ ಡಿಸಿಎಂ, ಸಚಿವ ಸ್ಥಾನ ನೀಡಬೇಡಿ-ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಭಿನ್ನಮತ

    ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಇವತ್ತು ಕೂಡ ಅಸಮಾಧಾನಗೊಂಡಿದೆ. ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲರಿಗೆ ಯಾವುದೇ ಸ್ಥಾನ ನೀಡಬಾರದು ಅಂತ ಲಿಂಗಾಯತ ಶಾಸಕರಾದ ಇಂಡಿಯ ಯಶವಂತರಾಯಗೌಡ ಪಾಟೀಲ್ ಹಾಗೂ ಬಸವನಬಾಗೇವಾಡಿಯ ಶಿವಾನಂದ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

    ಕಾಂಗ್ರೆಸ್ ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ, ಆರ್.ವಿ. ದೇಶಪಾಂಡೆ ಹಾಗೂ ರಮೇಶ್ ಕುಮಾರ್ ಸ್ಪೀಕರ್ ಸ್ಥಾನಕ್ಕೆ ಒಪ್ಪಿಕೊಳ್ಳದಿದ್ದರಿಂದ, ಜೆಡಿಎಸ್‍ಗೇನೆ ಸ್ಪೀಕರ್ ಸ್ಥಾನ ಬಿಟ್ಟು ಕೊಡುವಂತೆ ಸಲಹೆ ವ್ಯಕ್ತವಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಗುರುವಾರ ವಿಶ್ವಾಸಮತ ಯಾಚನೆಯಾಗಲಿದ್ದು ಯಾವುದೇ ಕಾರಣಕ್ಕೂ ಆಸೆ ಅಮಿಷಕ್ಕೆ ಒಳಗಾಗದಂತೆ ಶಾಸಕರಿಗೆ ಮುಖಂಡರು ಕರೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಗೆ ಎಲ್ಲರೂ ಸಹಕಾರ ನೀಡುವಂತೆಯೂ ಸಭೆಯಲ್ಲಿ ಮುಖಂಡರು ಮನವಿ ಮಾಡಿದ್ದಾರೆ.

    ಮಾಜಿ ಸಚಿವ ಪಾಟೀಲ್ ಮೇಲೇಕೆ ಸಿಟ್ಟು?
    * ಲಿಂಗಾಯತ ಧರ್ಮದ ಹೆಸರಲ್ಲಿ ಸಮುದಾಯ ಒಡೆದ್ರು.
    * ಇವತ್ತಿನ ಕಾಂಗ್ರೆಸ್ ಸ್ಥಿತಿಗೆ ಎಂ.ಬಿ. ಪಾಟೀಲೇ ನೇರ ಕಾರಣ!
    * ಪ್ರತ್ಯೇಕ ಧರ್ಮಕ್ಕೆ ಸಹಕರಿಸದಿದ್ದಕ್ಕೆ ಬೇರೆ ಅಭ್ಯರ್ಥಿಗಳಿಗೆ ಸಹಕಾರ.
    * ಹಣಕಾಸಿನ ನೆರವು ನೀಡಿ ಸೋಲಿಸಲು ಎಂ.ಬಿ. ಪಾಟೀಲ್ ಯತ್ನಿಸಿದ್ದಾರೆ.
    * ಎಂ.ಬಿ. ಪಾಟೀಲ್‍ಗೆ ಡಿಸಿಎಂ ಇರಲಿ, ಸಚಿವ ಸ್ಥಾನ ನೀಡಬೇಡಿ.
    * ಒಂದು ವೇಳೆ ನೀಡಿದರೆ ಲಿಂಗಾಯತ ಶಾಸಕರ ರಾಜೀನಾಮೆ.
    * ಕಾಂಗ್ರೆಸ್ಸಿನಲ್ಲಿ 17 ಲಿಂಗಾಯತ ಶಾಸಕರು ಗೆದ್ದಿದ್ದಾರೆ.
    * ಶಾಮನೂರು ಶಿವಶಂಕರಪ್ಪಗೆ ಆರೋಗ್ಯದ ಸಮಸ್ಯೆ.
    * ಅವರನ್ನು ಬಿಟ್ಟು ಯಾರನ್ನಾದರೂ ಡಿಸಿಎಂ, ಸಚಿವ ಸ್ಥಾನ ನೀಡಿ.

    ಈ ಮೇಲಿನ ಎಲ್ಲ ಅಂಶಗಳಿಂದ ಕಾಂಗ್ರೆಸ್‍ನಲ್ಲಿಯೇ ಭಿನ್ನಮತ ಕಾಣಿಸಿಕೊಂಡಿದೆ ಅಂತಾ ಹೇಳಲಾಗುತ್ತಿದೆ. ವಿಜಯಪುರ ಜಿಲ್ಲೆಯ ಇಂಡಿ ಮತ್ತು ಬಸವನ ಬಾಗೇವಾಡಿ ಶಾಸಕರಿಬ್ಬರನ್ನು ಸೋಲಿಸಲು ಎಂ.ಬಿ.ಪಾಟೀಲ್ ಷಡ್ಯಂತ್ರ ರಚಿಸಿದ್ರು ಎನ್ನಲಾಗಿದೆ. ಈ ಕಾರಣದಿಂದಲೇ ಶಿವಾನಂದ್ ಪಾಟೀಲ್ ಮತ್ತು ಯಶವಂತರಾಯ ಗೌಡ ಪಾಟೀಲ್ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ.

  • ಕೈ ಶಾಸಕಾಂಗ ಸಭೆಯಲ್ಲಿ ಲಿಂಗಾಯತ ಶಾಸಕರ ಅಸಮಾಧಾನ ಸ್ಫೋಟ!

    ಕೈ ಶಾಸಕಾಂಗ ಸಭೆಯಲ್ಲಿ ಲಿಂಗಾಯತ ಶಾಸಕರ ಅಸಮಾಧಾನ ಸ್ಫೋಟ!

    ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಆರಂಭಕ್ಕೂ ಮುನ್ನವೇ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಮಂತ್ರಿ ಸ್ಥಾನಕ್ಕಾಗಿ ನಾಯಕರ ನಡುವೆ ಜಟಾಪಟಿ ಆರಂಭವಾಗಿದೆ.

    ನೂತನ ಸರ್ಕಾರ ರಚನೆ ಸಂಬಂಧ ಇಂದು ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಎಂ.ಬಿ.ಪಾಟೀಲ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಅಥವಾ ಸಚಿವ ಸ್ಥಾನ ನೀಡುವ ಕುರಿತು ಜಟಾಪಟಿ ನಡೆದಿದೆ ಎಂದು ಕಾಂಗ್ರೆಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.

    ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿರುವುದರಿಂದ ಎಂಬಿ ಪಾಟೀಲ್ ಅವರಿಗೆ ಡಿಸಿಎಂ ಸ್ಥಾನ ನೀಡುವ ಕುರಿತು ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಈ ಸಲಹೆಗೆ ವಿಜಯಪುರದ ಇಬ್ಬರು ಲಿಂಗಾಯತ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ತಮ್ಮ ಮಾತಿಗೆ ಪಕ್ಷದ ನಾಯಕರು ಬೆಲೆ ನೀಡದೇ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಭೆಯಲ್ಲಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

    ಪ್ರಮುಖವಾಗಿ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಹಾಗೂ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ರಾಜೀನಾಮೆಗೆ ಮುಂದಾಗಿದ್ದು, ಲಿಂಗಾಯತ ಪ್ರತ್ಯೇಕ ಧರ್ಮದ ಹೆಸರಲ್ಲಿ ಸಮುದಾಯವನ್ನು ಒಡೆದವರು ಎಂ.ಬಿ.ಪಾಟೀಲ್ ಎಂದು ಆರೋಪಿಸಿದ್ದಾರೆ. ಅಲ್ಲದೇ ಚುನಾವಣೆಯ ವೇಳೆ ಪ್ರತ್ಯೇಕ ಧರ್ಮಕ್ಕೆ ಬೆಂಬಲ ನೀಡದ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಸ್ಪರ್ಧೆ ಮಾಡಿದ್ದ ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಎಂಬಿ ಪಾಟೀಲ್ ಹಣ ಸಹಾಯ ಮಾಡಿ ಸೋಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಸಭೆಯಲ್ಲಿ ಲಿಂಗಾಯತ ಶಾಸಕರ ಆರೋಪ ಮಾಡಿದ್ದಾರೆ ಎನ್ನಲಾಗಿದೆ.

    ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಸ್ಥಿತಿ ಬರಲು ಕಾರಣ ಎಂಬಿ ಪಾಟೀಲ್ ಕಾರಣ ಎಂದು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿರುವ ಶಾಸಕರು ಒಟ್ಟು 17 ಜನ ಲಿಂಗಾಯತ ಶಾಸಕರು ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ ವಯಸ್ಸಾಗಿದೆ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಸದ್ಯ ಅವರವನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ಎಂಬಿ ಪಾಟೀಲ್ ಅವರಿಗೆ ಯಾವುದೇ ಸ್ಥಾನಮಾನ ಕೊಡಬಾರದು. ಉಳಿದ 15 ಲಿಂಗಾಯತ ಶಾಸಕರಲ್ಲಿ ಯಾರಿಗಾದರೂ ಸಚಿವ ಸ್ಥಾನ ಅಥವಾ ಉಪಮುಖ್ಯಮಂತ್ರಿ ಸ್ಥಾನ ನೀಡಿ ಎಂದು ಪಟ್ಟು ಹಿಡಿದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

    ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವನ್ನ ಅಲಿಸಿರುವ ಕಾಂಗ್ರೆಸ್ ಮುಖಂಡರು ಈ ಕುರಿತು ಕೇಂದ್ರ ಹೈಕಮಾಂಡ್ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

    ವೀರಶೈವ ಲಿಂಗಾಯತರಿಂದ ಬೇಡಿಕೆ: ಲಿಂಗಾಯತರಿಗೆ ಉಪಮುಖ್ಯಮಂತ್ರಿ ಪಟ್ಟ ನೀಡಬೇಕು ಎನ್ನುವ ಕೂಗು ಸದ್ಯ ಜೋರಾಗಿದ್ದು, ಈ ಕುರಿತು ಲಾಬಿ ನಡೆಸಲು ಲಿಂಗಾಯತ ಸಮಾಜದ ಪ್ರಮುಖದ ಸ್ವಾಮೀಜಿಗಳೇ ಈಗ ಅಖಾಡಕ್ಕೆ ಇಳಿದಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಈಗಾಗಲೇ ನಮಗೆ ಸೋಲಾಗಿದ್ದು, ಸಚಿವರು ಸೋತಿದ್ದಾರೆ. ಈಗ ಆಗಿರುವ ನಷ್ಟವನ್ನು ಸರಿಪಡಿಸಲು ಸಮಾಜಕ್ಕೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂಬ ಆಗ್ರಹವನ್ನು ಮುಂದಿಟ್ಟಿದ್ದಾರೆ.

    ಒಂದು ವೇಳೆ ಉಪಮುಖ್ಯಮಂತ್ರಿ ಪಟ್ಟವನ್ನು ನೀಡದೇ ಇದ್ದರೆ 2019ರ ಲೋಕಸಭಾ ಚುನಾವಣೆಯಲ್ಲಿ ಏಟು ಬೀಳುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಹೀಗಾಗಿ ಮುಂದೆ ಈ ಸಮಸ್ಯೆ ಆಗದೇ ಇರಲು ಉಪಮುಖ್ಯಮಂತ್ರಿ ಪಟ್ಟವನ್ನು ನೀಡುವಂತೆ ಲಿಂಗಾಯತರು ಬೇಡಿಕೆ ಇಟ್ಟಿದ್ದಾರೆ.