Tag: minister

  • ನಾನು ಸೇರಿದಂತೆ ಯಾರೂ 24 ಕ್ಯಾರೆಟ್ ಬಂಗಾರ ಅಲ್ಲ : ಕೃಷ್ಣ ಬೈರೇಗೌಡ

    ನಾನು ಸೇರಿದಂತೆ ಯಾರೂ 24 ಕ್ಯಾರೆಟ್ ಬಂಗಾರ ಅಲ್ಲ : ಕೃಷ್ಣ ಬೈರೇಗೌಡ

    ಬೆಂಗಳೂರು: ಸರ್ಕಾರದಲ್ಲಿ ಭ್ರಷ್ಟಾಚಾರ ಎಂಬುವುದು ಎಲ್ಲಾ ಹಂತಗಳಲ್ಲೂ ವ್ಯಾಪಿಸಿದೆ. ಯಾರೂ ಕೂಡಾ ನಾನು ಅಪರಂಜಿ ಅಂತಾ ಹೇಳಿಕೊಂಡರೆ ಅದು ಆತ್ಮವಂಚನೆಯಾಗುತ್ತದೆ. ನಾನು ಸೇರಿದಂತೆ ಯಾರೂ 24 ಕ್ಯಾರೆಟ್ ಬಂಗಾರ ಅಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

    ವಿಕಾಸಸೌಧದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ ಸಚಿವರು, ಇಲಾಖೆಯ ಕುರಿತ ಮಾಹಿತಿ ಪಡೆದರು. ಈ ವೇಳೆ ಸಿಎಂ ಕುಮಾರಸ್ವಾಮಿ ಅವರ ಭ್ರಷ್ಟಾಚಾರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಆಡಳಿತ ವ್ಯವಸ್ಥೆ ಕಳೆದ 20 ವರ್ಷಗಳಿಂದ ಕಾಲ ಕ್ರಮೇಣ ಕುಸಿಯುತ್ತಾ ಬಂದಿದೆ. ಯಾವ ಸುಧಾರಣೆ ಮಾಡಲು ಸಾಧ್ಯವೋ ಅದನ್ನು ನಾವು ಮಾಡಬೇಕು. ಮುಖ್ಯಮಂತ್ರಿಗಳು ಕೂಡಾ ಅದನ್ನೇ ಹೇಳಿದ್ದಾರೆ ಎಂದು ತಿಳಿಸಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಓರ್ವ ನುರಿತ ಆಡಳಿತಗಾರರು. ಸದ್ಯ ಮುಖ್ಯಮಂತ್ರಿಗಳು ಹೇಳಿದ್ದು ವಿಧಾನಸೌಧ ಕಾರಿಡಾರ್ ಬಗ್ಗೆ, ನಾನು ಐದು ವರ್ಷ ಇದ್ದಿದ್ದು ವಿಕಾಸಸೌಧ ಕಾರಿಡಾರ್ ನಲ್ಲಿ. ಭ್ರಷ್ಟಾಚಾರ ಎಲ್ಲಾ ಹಂತಗಳಲ್ಲೂ ವ್ಯಾಪಿಸಿಕೊಂಡಿದೆ. ಯಾರೂ ಕೂಡಾ ನಾನು ಅಪರಂಜಿ ಎಂದು ಹೇಳಿಕೊಂಡರೆ ಅದು ಆತ್ಮವಂಚನೆಯಾಗುತ್ತದೆ. ನಮ್ಮ ಕೆಲಸ ನಾವು ಪ್ರಾಮಾಣಿಕತೆಯಿಂದ ಮಾಡಿದರೆ ಅದು ಸಮಾಜಕ್ಕೆ ಕೊಡಬಹುದಾದ ಕೊಡುಗೆ. ಈ ಕುರಿತು ಬೇರೆ ಯಾರ ಬಗ್ಗೆಯೂ ಮಾತನಾಡಲ್ಲ ಎಂದು ಹೇಳಿದರು.

    ಐತಿಹಾಸಿಕ ಖಾತೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ (ಆರ್ ಡಿಪಿಆರ್) ಬಹಳ ಐತಿಹಾಸಿಕ ಖಾತೆಯಾಗಿದ್ದು, ನನ್ನ ಅರ್ಹತೆ ಮತ್ತು ಅನುಭವದಲ್ಲಿ ಹಿಂದೆ ನಿರ್ವಹಿಸಿರುವವರಿಗಿಂತ ನಾನೇ ಕಡಿಮೆ ಇದ್ದೇನೆ. ಒಬ್ಬರಿಗಿಂತ ಒಬ್ಬರು ದಿಗ್ಗಜರೇ ಈವರೆಗೆ ಆರ್ ಡಿಪಿಆರ್ ಖಾತೆಯನ್ನು ನಿರ್ವಹಿಸಿದ್ದಾರೆ. ಈ ಹಿಂದೆ ಐದು ವರ್ಷ ಕೃಷಿ ಖಾತೆಯನ್ನು ನಿರ್ವಹಿಸಿದ್ದು, ಜವಾಬ್ದಾರಿಯನ್ನು ಬಹಳ ಎಚ್ಚರಿಕೆಯಿಂದ ಸ್ವೀಕಾರ ಮಾಡಿದ್ದೇನೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಪರಿಚಯ ಮತ್ತು ಪರಿಶೀಲನೆಗೆ ಐದು ದಿನ ಮೀಸಲಿಟ್ಟಿದ್ದು, ಸವಾಲುಗಳು ಇರುವ ಖಾತೆಯಲ್ಲಿ ನಾನು ಆತ್ಮನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದರು.

    ಉತ್ತಮ ಮಳೆ: ಆರ್ ಡಿಪಿಆರ್ ಖಾತೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ದೊಡ್ಡ ಜಬಾವ್ದಾರಿ. ಸದ್ಯ ಮಳೆ ಚೆನ್ನಾಗಿ ಆಗುತ್ತಿರುವುದರಿಂದ ನೀರಿನ ಸಮಸ್ಯೆ ಎದುರಾಗಲ್ಲ. ಅದರು ರಾಜ್ಯದ 248 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

  • ಮಂತ್ರಿಗಿರಿಗಿಂತ ಎತ್ತರ ಸ್ಥಾನದಲ್ಲಿ ಜನ ನನ್ನನ್ನು ನೋಡ್ತಾರೆ: ಹೆಚ್.ಕೆ.ಪಾಟೀಲ್

    ಮಂತ್ರಿಗಿರಿಗಿಂತ ಎತ್ತರ ಸ್ಥಾನದಲ್ಲಿ ಜನ ನನ್ನನ್ನು ನೋಡ್ತಾರೆ: ಹೆಚ್.ಕೆ.ಪಾಟೀಲ್

    ಗದಗ: ಸಚಿವ ಸ್ಥಾನ ಒತ್ತಾಯ ಪೂರ್ವಕವಾಗಿ ಪಡೆದುಕೊಳ್ಳುವುದಲ್ಲ. ಮಂತ್ರಿಗಿರಿಗಿಂತ ಎತ್ತರ ಸ್ಥಾನದಲ್ಲಿ ಜನ ನನ್ನನ್ನು ನೋಡುತ್ತಾರೆ ಅಂತ ಕಾಂಗ್ರೆಸ್ ಮಖಂಡ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.

    ರಾಜೀನಾಮೆ, ಪ್ರತಿಭಟನೆ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುವುದು ಸೂಕ್ತವಲ್ಲ. ಪಕ್ಷ ಹಾಗೂ ಪ್ರಜಾಪ್ರಭುತ್ವದ ಹಿತ ದೃಷ್ಠಿಯಿಂದ ಸಚಿವ ಸ್ಥಾನಕ್ಕೆ ಪ್ರತಿಭಟನೆ ಒಳ್ಳೆಯದಲ್ಲ. ನನ್ನ ಮೇಲಿನ ಅಭಿಮಾನದಿಂದ ರಾಜೀನಾಮೆ ಮೂಲಕ ಪ್ರತಿಭಟನೆ ವ್ಯಕ್ತವಾಗಿದೆ. ಹೀಗಾಗಿ ರಾಜೀನಾಮೆಯನ್ನು ಹಿಂಪಡೆದುಕೊಳ್ಳಿ ಅಂತಾ ಬೆಂಬಲಿಗರಿಗೆ ಕೈ ಮುಗಿದು ಹೆಚ್.ಕೆ.ಪಾಟೀಲ್ ಮನವಿ ಮಾಡಿಕೊಂಡರು.

    ಸಚಿವ ಸ್ಥಾನ ಸಿಗದಿದ್ರು ಸೇವಾ ಅವಕಾಶ ಸಿಕ್ಕ ಸಮಾಧಾನ ನನ್ನದು. ನನಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ವರಿಷ್ಠರೆ ಉತ್ತರಿಸಬೇಕು. ಇನ್ನು ಬಾಕಿ ಉಳಿದ 6 ಸ್ಥಾನದಲ್ಲಿ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆಯಲ್ಲಿ ನಾನಿಲ್ಲ. ನಾನೂ ಸಚಿವ ಸ್ಥಾನದ ನಿರೀಕ್ಷೆಯಲ್ಲೂ ಇಲ್ಲ ಅಂತಾ ಸ್ಪಷ್ಟಪಡಿಸಿದ್ರು.

  • ನನಗೆ ಶಿಕ್ಷಣ ಸಚಿವನಾಗುವ ಬಯಕೆಯಿತ್ತು, ಕೈಕಟ್ಟಿ ಕೂರೋ ಸಭಾಪತಿ ಸ್ಥಾನ ಬೇಡ- ಹೊರಟ್ಟಿ

    ನನಗೆ ಶಿಕ್ಷಣ ಸಚಿವನಾಗುವ ಬಯಕೆಯಿತ್ತು, ಕೈಕಟ್ಟಿ ಕೂರೋ ಸಭಾಪತಿ ಸ್ಥಾನ ಬೇಡ- ಹೊರಟ್ಟಿ

    ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಬೆಳಗಾವಿ ಬಿಟ್ಟು ಹುಬ್ಬಳ್ಳಿ, ಧಾರವಾಡ ದೊಡ್ಡ ಜಿಲ್ಲೆಯಲ್ಲಿ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ನನಗೆ ಸಚಿವನಾಗುವ ಭರವಸೆ ಇತ್ತು. ವಿಧಾನಸಭೆ ಪರಿಷತ್ತಿನಲ್ಲಿ ನಾನೇ ಹಿರಿಯ ಸದಸ್ಯ. ಆದರೆ ಕೊನೆ ಘಳಿಗೆಯಲ್ಲಿ ಸಚಿವ ಸ್ಥಾನ ಕೈಬಿಟ್ಟಿದ್ದು ಯಾಕೆ ಅಂತ ಗೊತ್ತಿಲ್ಲ. ಪಕ್ಷದ ತೀರ್ಮಾನವೇ ಅಂತಿಮ ಎಂದು ಭಾವಿಸಿ ಸುಮ್ಮನಿದ್ದೇನೆ ಎಂದು ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

    ನನಗೆ ವಿಧಾನ ಪರಿಷತ್ ಸಭಾಪತಿ ಹುದ್ದೆ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಪತ್ರಿಕೆ, ಟಿವಿಯಲ್ಲಿ ನೋಡಿದ್ದೇನೆ. ನನಗೆ ಯಾರು ಈ ಬಗ್ಗೆ ಸ್ಟಷ್ಟವಾಗಿ ಹೇಳಿಲ್ಲ. ದೇವೇಗೌಡರು ಕಾರ್ಯಕರ್ತರ ಮುಂದೆ ಈ ಸಭಾಪತಿ ಹುದ್ದೆ ನೀಡುವ ಬಗ್ಗೆ ಹೇಳಿದ್ದಾರೆ. ರಾಜ್ಯದಲ್ಲಿ ಶಿಕ್ಷಕರ ಅನೇಕ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ನನಗೆ ಶಿಕ್ಷಣ ಸಚಿವನಾಗುವ ಬಯಕೆ ಇತ್ತು, ಕೈಕಟ್ಟಿ ಕುರುವ ಸಭಾಪತಿ ಸ್ಥಾನ ಬೇಡ ಎಂದು ಹೇಳಿದರು.

    ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕದ ಶಾಸಕರಿಗೆ ಅನ್ಯಾಯ ಆಗಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನರ ಮನಸ್ಸಿನಲ್ಲಿ ಈ ರೀತಿಯ ಭಾವನೆ ಮೂಡುತ್ತಿದೆ. ನನ್ನನ್ನು ಮಂತ್ರಿ ಮಾಡುವಂತೆ ಯಾರಲ್ಲೂ ನಾನು ಭಿಕ್ಷೆ ಕೇಳಲ್ಲ. 38 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ನನಗೆ ಸಚಿವ ಸಂಪುಟದಲ್ಲಿ ಅವಕಾಶ ಕೊಡುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದರು.

    ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಹೋರಾಟದಲ್ಲಿ ಪಾಲ್ಗೊಂಡವರನ್ನು ಸಚಿವ ಸಂಪುಟದಿಂದ ಹೊರ ಹಾಕಿದ್ದಾರೆ. ನನ್ನನ್ನು ಹಾಗೂ ಎಂ.ಬಿ. ಪಾಟೀಲ್, ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಇದೆಲ್ಲ ನೋಡಿದ್ರೆ ಇದಕ್ಕೆ ಪುಷ್ಠಿ ನೀಡುತ್ತದೆ. ಲಿಂಗಾಯತ ಧರ್ಮ ಪರ ಹೋರಾಟ ಮಾಡಿದ್ರಿಂದ ಕೆಲ ಸ್ವಾಮೀಜಿಗಳಿಂದ ಅಪಪ್ರಚಾರ ನಡೆಯಿತು. ಸಮಾಜದ ಜನರಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಹೋರಾಟದಲ್ಲಿ ನಾವು ಭಾಗಿಯಾಗಿದ್ದೇವೆ ಎಂದು ತಿಳಿಸಿದರು.

    ನಾವು ಎಂದು ಜಾತಿ ಮಾಡಿದವರಲ್ಲ. ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ಹೋರಾಟ ಮಾಡಿದ್ದು ನಿಜ. ಎಲ್ಲರೂ ಮಾಡುವುದನ್ನು ನಾವು ಮಾಡಿದ್ದೇವೆ ನಾವೇನು ಕೊಲೆ, ದರೋಡೆ ಮಾಡಿಲ್ಲ. ಇದನ್ನೇ ತಪ್ಪು ಎಂದು ಭಾವಿಸಿದ್ದರೆ, ನಾವೇನು ಮಾಡೋಕೆ ಆಗಲ್ಲ. ಲಿಂಗಾಯತ ಧರ್ಮದ ಶಿಫಾರಸ್ಸು ಕೇಂದ್ರದಿಂದ ವಾಪಸ್ ಬಂದ ವಿಚಾರ. ಈ ಬಗ್ಗೆ ಸಮುದಾಯದ ಮುಖಂಡರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

  • ಸಣ್ಣ ನೀರಾವರಿ ಸಚಿವನಾಗಿರುವುದು ಸಂತಸ ತಂದಿದೆ: ಪುಟ್ಟರಾಜು

    ಸಣ್ಣ ನೀರಾವರಿ ಸಚಿವನಾಗಿರುವುದು ಸಂತಸ ತಂದಿದೆ: ಪುಟ್ಟರಾಜು

    ಮಂಡ್ಯ: ಸಣ್ಣ ನೀರಾವರಿ ಸಚಿವರಾಗಿ ಅಧಿಕಾರ ಸ್ವೀಕರಿಸಿರುವುದು ನನಗೆ ತುಂಬಾ ಸಂತಸ ತಂದಿದೆ ಎಂದು ಸಿಎಸ್ ಪುಟ್ಟರಾಜು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

    ನನಗೆ ಬೆಂಬಲ ನೀಡಿದ ಮೇಲುಕೋಟೆ ಕ್ಷೇತ್ರದ ಜನತೆ, ಮಂಡ್ಯ ಜನತೆ, ಪಕ್ಷದ ಕಾರ್ಯಕರ್ತರಿಗೆ, ಶ್ರೀ ಎಚ್ ಡಿ ದೇವೇಗೌಡರಿಗೆ ಹಾಗೂ ಶ್ರೀ ಎಚ್ ಡಿ ಕುಮಾರಸ್ವಾಮಿಯವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

    ನಾನು ಮಂತ್ರಿ ಮಾಡಿ ಎಂದು ಬೇಡಿಕೆ ಇಟ್ಟಿರಲಿಲ್ಲ, ಅಂತಹದರಲ್ಲೂ ನಮ್ಮ ನಾಯಕರು ನನ್ನ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ಕೊಟ್ಟಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ದುಡಿಯುದೊಂದೇ ನನ್ನ ಗುರಿ ಎಂದು ತಿಳಿಸಿದ್ದಾರೆ.

    ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ರಾಜ್ಯವನ್ನು ಅಭಿವೃದ್ಧಿ ಕಡೆಗೆ ಸಾಗಿಸಲು ದುಡಿಯುತ್ತೇನೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನ ರಾಜಕೀಯ ಆದಿಯೂ ಇಲ್ಲೇ ಅಂತ್ಯವೂ ಇಲ್ಲೇ ಎಂದು ಬರೆದುಕೊಂಡಿದ್ದಾರೆ.

  • ಇಷ್ಟೇ ದಿನ ಸರ್ಕಾರ ಇರುತ್ತೆ ಅಂಥಾ ಹೇಳಲ್ಲ – ದೋಸ್ತಿ ಸರ್ಕಾರದ ಆಯಸ್ಸಿನ ಬಗ್ಗೆ ರೇವಣ್ಣಗೆ ಡೌಟ್

    ಇಷ್ಟೇ ದಿನ ಸರ್ಕಾರ ಇರುತ್ತೆ ಅಂಥಾ ಹೇಳಲ್ಲ – ದೋಸ್ತಿ ಸರ್ಕಾರದ ಆಯಸ್ಸಿನ ಬಗ್ಗೆ ರೇವಣ್ಣಗೆ ಡೌಟ್

    ಹಾಸನ: ಸಮ್ಮಿಶ್ರ ಸರ್ಕಾರ ಇಷ್ಟೇ ದಿನ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ ಎಂದು ರಾಜ್ಯ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಅನುಮಾನ ವ್ಯಕ್ತಪಡಿಸಿದ್ದಾರೆ.

    ಸಚಿವ ಸ್ಥಾನ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಹಾಸನ ಜಿಲ್ಲೆಗೆ ಆಗಮಿಸಿದ್ದ ರೇವಣ್ಣ ಅವರು ಬೇಲೂರಿನ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಇಷ್ಟೇ ದಿನ ಸರ್ಕಾರ ಇರುತ್ತೆ ಎಂದು ನಾನು ಹೇಳುವುದಿಲ್ಲ. ಇದ್ದಷ್ಟು ದಿನ ಅಭಿವೃದ್ಧಿ ಕೆಲಸ ಮಾಡುವೆ. ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ಹೇಳುವ ಮೂಲಕ ಪೂರ್ಣವಧಿ ಸರ್ಕಾರದ ಕುರಿತು ಪರೋಕ್ಷವಾಗಿ ಸಂದೇಹದ ಮಾತುಗಳನ್ನಾಡಿದರು.

    ಹಾಸನ ಜಿಲ್ಲೆಯ ಜನರು 7 ಸ್ಥಾನಗಳಲ್ಲಿ 6 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಪಕ್ಷಕ್ಕೆ ಮತ ನೀಡಿ ಬೆಂಬಲ ನೀಡಿದ ಮತದಾರರಿಗೆ ಧನ್ಯವಾದ. ಕಳೆದ 10 ವರ್ಷಗಳಿಂದ ಜಿಲ್ಲೆಯಲ್ಲಿ ಉಂಟಾದ ಸಂಕಷ್ಟ ಪರಿಸ್ಥಿತಿಯನ್ನು ಬದಲಾವಣೆ ತಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತೇನೆ. ಇದೇ ವೇಳೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ತಾಕತ್ತಿದ್ದರೆ ರೈತರ ಸಾಲಮನ್ನಾ ಮಾಡಲಿ. ನಾಲ್ಕು ವರ್ಷದ ಅವಧಿಯಲ್ಲಿ ರೈತರಿಗೆ ಯಾವ ಸವಲತ್ತು ನೀಡಿದೆ ಎಂಬುದನ್ನು ರಾಜ್ಯ ಬಿಜೆಪಿ ನಾಯಕರು ತಿಳಿಸಲಿ ಎಂದು ಸವಾಲು ಎಸೆದರು.

    ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷದಲ್ಲೂ ಖಾತೆ ಹಂಚಿಕೆ ಕುರಿತು ಅಸಮಾಧಾನ ವ್ಯಕ್ತವಾಗಿದೆ. ಜೆಡಿಎಸ್ ಸಚಿವರಾದ ಸಿಎಸ್ ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಹಾಗೂ ಡಿಸಿ ತಮ್ಮಣ್ಣ ಅವರಿಗೆ ಸಾರಿಗೆ ಖಾತೆ ನೀಡಿದ್ದರಿಂದ ಹಲವು ಕಾರ್ಯಕರ್ತರು ನಾಯಕರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಉಳಿದಂತೆ ಉನ್ನತ ಶಿಕ್ಷಣ ಖಾತೆ ಪಡೆದಿರುವ ಜಿ.ಟಿ. ದೇವೇಗೌಡ ಅವರ ಖಾತೆಯ ಬಗ್ಗೆ ಪುನರ್ ವಿಮರ್ಶೆ ಮಾಡಬೇಕು ಎಂದು ಜೆಡಿಎಸ್ ಶಾಸಕ ವಿಶ್ವನಾಥ್ ಸಿಎಂ ಬಳಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಕ್ಷೇತ್ರದ ಕಾರ್ಯಕರ್ತರು ಸಹ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸುವುದಾಗಿ ಜಿಟಿಡಿ ಸ್ಪಷ್ಟನೆ ನೀಡಿದ್ದಾರೆ.

    ಇತ್ತ ಕಾಂಗ್ರೆಸ್ ಬಂಡಾಯ ಶಮನ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಹಲವು ನಾಯಕರು ಪ್ರಯತ್ನಿಸುತ್ತಿದ್ದರು, ಎಂಬಿ ಪಾಟೀಲ್ ಸೇರಿದಂತೆ ಹಲವು ನಾಯಕರು ಸಚಿವ ಸ್ಥಾನ ದೊರೆಯದ ಕುರಿತ ತಮ್ಮ ಅಸಮಾಧಾನವನ್ನು ಪ್ರದರ್ಶಿಸುತ್ತಿದ್ದಾರೆ. ಇದರ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಲು ಕಾಂಗ್ರೆಸ್ ಜೆಡಿಎಸ್ ಬಂಡಾಯ ಶಾಸಕರು ಸಿದ್ಧರಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇದರ ಬೆನ್ನಲ್ಲೇ ಇಂದು ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಕಾಂಗ್ರೆಸ್‍ನ ನಾಯಕ ಎಂಬಿ ಪಾಟೀಲ್ ರನ್ನು ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

  • ನಾನು ಸೆಕೆಂಡ್ ಕ್ಲಾಸ್ ಸಿಟಿಜನ್ ಅಲ್ಲ: ಎಂ.ಬಿ ಪಾಟೀಲ್

    ನಾನು ಸೆಕೆಂಡ್ ಕ್ಲಾಸ್ ಸಿಟಿಜನ್ ಅಲ್ಲ: ಎಂ.ಬಿ ಪಾಟೀಲ್

    ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಳಿ ಡಿಸಿಎಂ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕೆಂದು ನಾನು ಕೇಳಿಲ್ಲ. ಎರಡನೇ ಸುತ್ತಿನಲ್ಲಿ ಸಚಿವ ಸ್ಥಾನ ಪಡೆಯೋಕೆ ನಾನು ಸೆಕೆಂಡ್ ಕ್ಲಾಸ್ ಸಿಟಿಜನ್ ಅಲ್ಲ ಅಂತಾ ಮಾಜಿ ಸಚಿವ ಎಂ.ಬಿ.ಪಾಟೀಲ್ ಪಕ್ಷದ ವಿರುದ್ಧವೇ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.

    ನಾನು ಡಿಸಿಎಂ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಹಿರಿಯ ನಾಯಕ ಅಹಮದ್ ಪಟೇಲ್ ಕರೆ ಮೇರೆಗೆ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ನನಗಾದ ಅನ್ಯಾಯದ ಬಗ್ಗೆ ಹೇಳಿದ್ದೇನೆ. ಏನು ಮಾತಾಡಿದ್ದೇನೆ ಅಂತ ನಾನು ಮಾಧ್ಯಮಗಳಿಗೆ ಹೇಳೊಲ್ಲ. ಮಾಧ್ಯಮಗಳು ನಾನು ಕೊಟ್ಟ ಹೇಳಿಕೆ ಹಾಕಿ. ಇಲ್ಲವೇ ರಾಹುಲ್ ಗಾಂಧಿ ಮಾತಾಡಿದ್ರೆ ಅದನ್ನ ಹಾಕಿ. ಅದು ಬಿಟ್ಟು ಏನೇನೋ ಸುದ್ದಿ ಹಾಕಬೇಡಿ ಅಂತ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ತೀವ್ರ ಕುತೂಹಲ ಸೃಷ್ಟಿಸಿದೆ ಶಿವರಾಜ್ ಪಾಟೀಲ್, ಎಂ.ಬಿ ಪಾಟೀಲ್ ಭೇಟಿ!

    ಲಿಂಗಾಯತ ಪ್ರತ್ಯೇಕ ಧರ್ಮದ ಶಿಫಾರಸ್ಸನ್ನ ಕೇಂದ್ರ ವಾಪಸ್ ಕಳಿಸಿರುವ ವಿಚಾರ ನನಗೇನು ಗೊತ್ತಿಲ್ಲ. ಲಿಂಗಾಯತ ಧರ್ಮದ ಹೋರಾಟವನ್ನು ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ಅವರನ್ನು ಕೇಳಬೇಕು. ಜಾಮದಾರ್ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿಗಳಾಗಿದ್ದು, ಅವರಿಗೆ ಸರಿ ಅನ್ನಿಸಿದ್ದನ್ನ ಮಾಡ್ತಾರೆ. ಕೆಲವು ಸಾರಿ ನಮ್ಮ ಮಾತೇ ಕೇಳೋದಿಲ್ಲ. ಜಾಮದಾರ್ ಬುದ್ಧಿವಂತರು,ಪ್ರಾಮಾಣಿಕ, ಬದ್ಧತೆ ಇರೋ ಮನುಷ್ಯ ಅಂತಾ ಸ್ಪಷ್ಟಪಡಿಸಿದ್ರು.

  • ಸಚಿವ ಸ್ಥಾನ ವಂಚಿತರಿಗೆ ಡಿಕೆ ಶಿವಕುಮಾರ್ ಸಲಹೆ!

    ಸಚಿವ ಸ್ಥಾನ ವಂಚಿತರಿಗೆ ಡಿಕೆ ಶಿವಕುಮಾರ್ ಸಲಹೆ!

    ಬೆಂಗಳೂರು: ಸಂಪುಟ ರಚನೆಯ ಬಳಿಕ ಸಚಿವ ಸ್ಥಾನದ ಆಕಾಂಕ್ಷಿಗಳು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಸಂಬಂಧ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಎಲ್ಲರಿಗೂ ಅವಕಾಶಗಳಿವೆ. ಡೋರ್‍ಗಳು ಕ್ಲೋಸ್ ಆಗಿಲ್ಲ ಅಂತಾ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಭರವಸೆಯನ್ನು ನೀಡಿದ್ದಾರೆ.

    ಸಚಿವ ಸ್ಥಾನ ಸಿಗದ ನಾಯಕರನ್ನು ಸಮಾಧಾನಪಡಿಸಲು ಮಾಜಿ ಸಿಎಂ ಸಿದ್ದರಾಮಯ್ಯ ನಿರಾಸಕ್ತಿ ತೋರಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿದ್ದರಾಮಯ್ಯ ವಿಚಾರ ನನಗೆ ಗೊತ್ತಿಲ್ಲ. ಸದ್ಯ ಅವರು ಗೆಲ್ಲಿಸಿರುವ ತಮ್ಮ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಲು ತೆರಳಿದ್ದಾರೆ. ಹೈಕಮಾಂಡ್ ಒಬ್ಬೊಬ್ಬರಿಗೂ ಒಂದೊಂದು ಜವಾಬ್ದಾರಿಯನ್ನು ನೀಡಿದ್ದು, ನನಗೆ ನೀಡಿರುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಬೇರೆ ನಾಯಕರು ಏನು ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ ಅಂತಾ ತಿಳಿಸಿದರು.

    ಎಲ್ಲ ನಾಯಕರಿಗೂ ಅವಕಾಶಗಳಿವೆ. ಡೋರ್‍ಗಳು ಕ್ಲೋಸ್ ಆಗಿಲ್ಲ. ಮಾಜಿ ಸಿಎಂ ಧರಂಸಿಂಗ್ ಅವರ ಕಾಲದಲ್ಲಿ ನನ್ನನ್ನು ಆರು ತಿಂಗಳು ಸುಮ್ಮನೆ ಕೂರಿಸಿದ್ದರು. ಈ ಹಿಂದೆ ಪರಮೇಶ್ವರ್ ಸಹ ಕೆಲವು ದಿನ ಸುಮ್ಮನೆ ಕುಳಿತಿದ್ದರು. ಅಂದು ನಾವು ತಾಳ್ಮೆಯಿಂದ ಇರಲಿಲ್ವಾ..? ಹಾಗೆ ಇಂದು ಸಹ ಸಚಿವ ಸ್ಥಾನ ವಂಚಿತ ನಾಯಕರು ತಾಳ್ಮೆಯಿಂದ ಇರಬೇಕು ಅಂತಾ ಸಲಹೆ ನೀಡಿದ್ರು.

  • ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ, ನನಗೆ ಸ್ಥಾನ ಸಿಗಲೇಬೇಕು: ಭೀಮಾ ನಾಯ್ಕ್

    ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ, ನನಗೆ ಸ್ಥಾನ ಸಿಗಲೇಬೇಕು: ಭೀಮಾ ನಾಯ್ಕ್

    ಬಳ್ಳಾರಿ: ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ. ನನಗೂ ಸಹ ಸಚಿವ ಸ್ಥಾನ ಸಿಗಲೇ ಬೇಕು ಎಂದು ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಎಸ್ ಭೀಮಾ ನಾಯ್ಕ್ ಹೇಳಿದ್ದಾರೆ.

    ಸಚಿವ ಸ್ಥಾನ ತಪ್ಪಿದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಭೀಮಾ ನಾಯ್ಕ್ ಹೊಸಪೇಟೆಯ ತಮ್ಮ ನಿವಾಸದಲ್ಲಿ ಬೆಂಬಲಿಗರು, ಕಾರ್ಯಕರ್ತರು, ಹಾಗೂ ಪಕ್ಷದ ಮುಖಂಡರ ಜೊತೆ ಸಭೆ ನಡೆಸಿದರು.

    ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಳ್ಳಾರಿಯಿಂದ 6 ಜನ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದೇವೆ. ಬಂಜಾರಾ ಕೋಟಾದಡಿ ನನಗೂ ಸಚಿವ ಸ್ಥಾನ ನೀಡಲೇಬೇಕು. ನಾನೂ ಸಹ ಸಚಿವ ಸ್ಥಾನ ಆಕ್ಷಾಂಕಿಯಾಗಿರುವೆ. ನಾನೂ ಸಹ ಅತೃಪ್ತ ಶಾಸಕನಾಗಿದ್ದೇನೆ. ಮುಖ್ಯಮಂತ್ರಿ ಕುಮಾರಸ್ವಾಮಿ ನನಗೆ ಸಚಿವ ಸ್ಥಾನ ನೀಡಲು ಒಪ್ಪಿಗೆ ನೀಡಿದ್ದಾರೆ. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಬೇಕಿದೆ ಎಂದರು.

    ಕಡೆಗಣಿಸಿದ್ದಕ್ಕೆ ಬೇಸರ:
    ಬಳ್ಳಾರಿ ಅತಿ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಟ್ಟ ಜಿಲ್ಲೆಯಾಗಿದೆ. ಆರು ಜನ ಇಲ್ಲಿಂದ ಆಯ್ಕೆಯಾಗಿದ್ರೂ ನಮ್ಮನ್ನ ಕಡೆಗಣಿಸಿದ್ದು ತುಂಬಾ ಬೇಸರ ತಂದಿದೆ. ನಾನು ಬಳ್ಳಾರಿಯಲ್ಲಿ ಹಿರಿಯ ಶಾಸಕ. ಸಚಿವ ಸ್ಥಾನಕ್ಕಾಗಿ ನಾನು ಯಾವುದೇ ಬಣದಲ್ಲಿ ಸೇರಿಕೊಂಡಿಲ್ಲ. ಎಂ ಬಿ ಪಾಟೀಲ್ ಬಣದಲ್ಲಿ ಸೇರಿಕೊಂಡಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಏಕಾಂಗಿಯಾಗಿಯೇ ಸಚಿವ ಸ್ಥಾನ ನೀಡಬೇಕೆಂದು ಹೈಕಮಾಂಡ್ ಗೆ ಕೇಳಿಕೊಳ್ಳುತ್ತೇನೆ ಎಂದು ಪರಮೇಶ್ವರ ನಾಯ್ಕ್ ಹೇಳಿದ್ದಾರೆ.

  • ಸಚಿವ ಸ್ಥಾನಕ್ಕೆ ಶಿಕ್ಷಣ ಮುಖ್ಯವಲ್ಲ, ಅನುಭವ ಮುಖ್ಯ: ಜಮೀರ್ ಅಹ್ಮದ್

    ಸಚಿವ ಸ್ಥಾನಕ್ಕೆ ಶಿಕ್ಷಣ ಮುಖ್ಯವಲ್ಲ, ಅನುಭವ ಮುಖ್ಯ: ಜಮೀರ್ ಅಹ್ಮದ್

    ತುಮಕೂರು: ಸಚಿವ ಸ್ಥಾನಕ್ಕೆ ಶಿಕ್ಷಣ ಮುಖ್ಯವಲ್ಲ. ಅನುಭವವೇ ಮುಖ್ಯ ಎಂದು ಸಚಿವ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

    ಜಿಲ್ಲೆಯ ಕ್ಯಾತ್ಸಂದ್ರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಮಾಧ್ಯಮದೊಂದಿಗೆ ಮಾತನಾಡಿದ ಜಮೀರ್, ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್‍ಸಿಂಗ್ ಅವರ ಉದಾಹರಣೆ ನೀಡುವ ಮೂಲಕ ಅನುಭವೇ ಎಲ್ಲವನ್ನು ಕಲಿಸಿಕೊಡುತ್ತದೆ ಅಂದ್ರು.

    ತಂದೆ ತಾಯಿ ನನಗೆ ಕನ್ನಡ ಶಾಲೆಗೆ ಹಾಕಿಲ್ಲ. ನಾನು ಇಂಗ್ಲಿಷ್ ಶಾಲೆಯಲ್ಲಿ ಓದಿದ್ದೇನೆ. ಹಾಗಾಗಿ ಕನ್ನಡ ಓದು ಸರಿಯಾಗಿ ಬಂದಿಲ್ಲದೆ ಇಂಗಿಷ್‍ನಲ್ಲಿ ಪ್ರಮಾಣ ವಚನ ಮಾಡಿದೆ. ಇದರಿಂದ ರಾಜ್ಯದ ಜನತೆಗಿಂತ ದುಪ್ಪಟ್ಟು ನೋವು ನನಗಾಗಿದೆ. ನಾನು ಬೇಕಂತಲೇ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಮಾಡಿದ್ರೆ ನನಗೆ ಗಲ್ಲು ಶಿಕ್ಷೆ ಕೊಡಲಿ ಅಥವಾ ದೇಶದ್ರೋಹಿ ಎನ್ನಲಿ ಎಂದರು.

    ಮಂತ್ರಿ ಸ್ಥಾನದ ಅನುಭವ ನನಗಿಲ್ಲ. ಹೀಗಾಗಿ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದಿದ್ದೆ. ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಬಂದಿದ್ದು ಸಂತೋಷವಾಗಿದೆ. ನನ್ನ ಅವಧಿಯಲ್ಲಿ ಐತಿಹಾಸಿಕ ದಾಖಲೆಯ ಕೆಲಸ ಮಾಡುತ್ತೇನೆ ಎಂದು ಹೇಳಿದರು.

    ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರ ಮಾತು ಕೇಳ್ತಾರೆ ಎಂಬ ವಿಚಾರದ ಕುರಿತು ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ದೇವೇಗೌಡರ ಮಾತು ಕೇಳೋದ್ರಲ್ಲಿ ತಪ್ಪಿಲ್ಲ. ರಾಜ್ಯದ ಸಮಸ್ಯೆ ಇದ್ದಾಗ ದೇವೇಗೌಡರ ಮಾತೂ ಕೇಳಬೇಕು. ಯಾಕಂದ್ರೆ ಅವರು ಮಾಜಿ ಪ್ರಧಾನಿ. ಖಾತೆ ಹಂಚಿಕೆಯಲ್ಲಿ ದೇವೇಗೌಡರಾಗಲಿ, ಕುಮಾರಸ್ವಾಮಿ ಅವರ ಪ್ರಭಾವ ಇಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.

  • ಪತಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಸೋನಿಯಾ ಗಾಂಧಿಯನ್ನ ಪ್ರಶ್ನಿಸಿದ ಪ್ರಭಾವಿ ಮುಖಂಡನ ಪತ್ನಿ

    ಪತಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಸೋನಿಯಾ ಗಾಂಧಿಯನ್ನ ಪ್ರಶ್ನಿಸಿದ ಪ್ರಭಾವಿ ಮುಖಂಡನ ಪತ್ನಿ

    ಬೆಂಗಳೂರು: ಮೈತ್ರಿ ಸರ್ಕಾರದ ಸಂಪುಟ ರಚನೆಯಾದ ಬಳಿಕ ಕಾಂಗ್ರೆಸ್ ಸಚಿವ ಸ್ಥಾನದ ಆಕಾಂಕ್ಷಿಗಳು ಪಕ್ಷದ ವಿರುದ್ಧವೇ ಬಂಡಾಯದ ಬಾವುಟ ಹಾರಿಸಲು ಮುಂದಾಗುತ್ತಿದ್ದಾರೆ. ಪತಿ ಎಂ.ಬಿ.ಪಾಟೀಲರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಆಶಾ ಪಾಟೀಲ್ ನೇರವಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನೇ ಸಂಪರ್ಕಿಸಿದ್ದಾರೆ ಎಂಬ ಮಾಹಿತಿಗಳು ದೊರೆತಿವೆ.

    ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜಕಾರಣದಿಂದ ದೂರ ಉಳಿದಿರುವ ಸೋನಿಯಾ ಗಾಂಧಿ ವಿಶ್ರಾಂತಿಯಲ್ಲಿದ್ದಾರೆ. ಎಂ.ಬಿ.ಪಾಟೀಲ್ ಪತ್ನಿ ಆಶಾರ ಫೋನ್‍ಗೆ ಪ್ರತಿಕ್ರಿಯಿಸಿರುವ ಸೋನಿಯಾ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ರನ್ನ ಸಂಪರ್ಕಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದ್ದಾರೆ. ಸೋನಿಯಾ ಗಾಂಧಿಯವರ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಹೈಕಮಾಂಡ್ ನಾಯಕರು ಎಂ.ಬಿ.ಪಾಟೀಲ್‍ರ ಮನವೊಲಿಕೆಗೆ ಮುಂದಾಗಿದ್ದಾರೆ ಅಂತಾ ಪಕ್ಷದ ಮೂಲಗಳು ತಿಳಿಸಿವೆ.

    ಆಶಾ ಪಾಟೀಲ್ ಎಐಸಿಸಿ ಮಹಿಳಾ ನಾಯಕಿಯರ ಜೊತೆ ಆತ್ಮೀಯ ಒಡನಾಟ ಹೊಂದಿರುವ ಕಾರಣ ನೇರವಾಗಿ ಸೋನಿಯಾವರನ್ನೇ ಫೋನ್ ಮೂಲಕ ಸಂಪರ್ಕಿಸಿದ್ದಾರೆ. ಕಾಂಗ್ರೆಸ್ ಮಹಿಳಾ ಘಟಕದ ರಾಷ್ಟ್ರಾಧ್ಯಕ್ಷೆ ಸುಷ್ಮಿತಾ ದೇವ್ ಸಹ ಆಶಾ ಆಪ್ತರಾಗಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುಷ್ಮಿತಾ ಜೊತೆಯಲ್ಲೂ ಮಾತನಾಡಿರುವ ಆಶಾ ಪಾಟೀಲ್, ತಮ್ಮ ಪತಿ ಪಕ್ಷಕ್ಕಾಗಿ ಮಾಡಿದ ಕೆಲಸಗಳ ಬಗ್ಗೆ ಹೇಳಿದ್ದಾರೆ.

    ಆಶಾ ಪಾಟೀಲ್ ಸೋನಿಯಾ ಗಾಂಧಿ ಅವರನ್ನ ನೇರವಾಗಿ ಸಂಪರ್ಕಿಸಿದ ಫಲವಾಗಿ ಈ ಪ್ರಕರಣ ಹೈಕಮಾಂಡ್ ಮಟ್ಟದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಎಂ.ಬಿ.ಪಾಟೀಲ್‍ರನ್ನು ಸಮಾಧಾನಪಡಿಸಲು ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆ.

    ರಾಜ್ಯ ಚುನಾವಣಾ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಕೇರಳದಲ್ಲಿದ್ದು, ಮಧ್ಯಾಹ್ನದ ವೇಳೆಗೆ ದೆಹಲಿ ತಲುಪುವ ಸಾಧ್ಯತೆ ಇದೆ. ಜೊತೆಗೆ ಡಿಸಿಎಂ ಪರಮೇಶ್ವರ್ ಇಂದಿನ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಇನ್ನು, ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ ಗುಂಡೂರಾವ್ ಅವರಿಗೂ ರಾಹುಲ್ ಬುಲಾವ್ ನೀಡಿದ್ದು, ಅವರು ಸಹ ನಿನ್ನೆಯೇ ದೆಹಲಿ ತಲುಪಿದ್ದಾರೆ. ಅಂದಹಾಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಹೆಸರು ಚಲಾವಣೆಯಲ್ಲಿತ್ತು. ಈ ಮಧ್ಯೆ ಇವತ್ತಿನ ಸಭೆಗೆ ದಿನೇಶ್ ಗುಂಡೂರಾವ್ ಅವರನ್ನ ಕರೆಸಿದ್ದು, ಕೆಪಿಸಿಸಿ ಪಟ್ಟವನ್ನು ಎಂ.ಬಿ ಪಾಟೀಲ್‍ಗೆ ವಹಿಸಲಿದ್ಯಾ ಅನ್ನೋ ಕುತೂಹಲ ಮೂಡಿಸಿದೆ.