Tag: minister

  • ಜೆಡಿಎಸ್ ಮಂತ್ರಿಗಳು ಈಗ ಹೊಸ ಬಟ್ಟೆ ಹಾಕ್ಕೊಂಡು ಓಡಾಡ್ತಿದ್ದಾರೆ- ಸಿದ್ದರಾಮಯ್ಯ ಪರ ಶಾಸಕ ಸುಧಾಕರ್ ಬ್ಯಾಟಿಂಗ್

    ಜೆಡಿಎಸ್ ಮಂತ್ರಿಗಳು ಈಗ ಹೊಸ ಬಟ್ಟೆ ಹಾಕ್ಕೊಂಡು ಓಡಾಡ್ತಿದ್ದಾರೆ- ಸಿದ್ದರಾಮಯ್ಯ ಪರ ಶಾಸಕ ಸುಧಾಕರ್ ಬ್ಯಾಟಿಂಗ್

    ಚಿಕ್ಕಬಳ್ಳಾಪುರ: ಸೋತರೂ ಜೆಡಿಎಸ್ ನವರು ಮುಖ್ಯಮಂತ್ರಿಯಾದರು. ಹೀಗಾಗಿ ಅವರಿಗೆ ಈಗ ಮನೋಧೈರ್ಯ ಬಂದಿದೆ ಎಂದು ಶಾಸಕ ಡಾ.ಸುಧಾಕರ್ ಕೆ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದ ಶ್ರೀ ಭೋಗನಂದೀಶ್ವರ ದೇವಾಲಯಕ್ಕೆ ಭೇಟಿ ನೀಡಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಸಮ್ಮಿಶ್ರ ಸರ್ಕಾರಕ್ಕೆ ಹೆಚ್ಚು ಆಯಸ್ಸು ಸಿಗಲಿ ಅಂತಾ ದೇವರಲ್ಲಿ ಬೇಡಿಕೊಂಡಿರುವೆ ಎಂದು ವ್ಯಂಗ್ಯವಾಡಿದರು.

    ಜೆಡಿಎಸ್ ಕಡಿಮೆ ಸ್ಥಾನ ಪಡೆದಿದ್ದರೂ, ಮುಖ್ಯಮಂತ್ರಿ ಸ್ಥಾನವನ್ನು ತಾವೇ ಪಡೆದುಕೊಂಡರು. ಹೀಗಾಗಿ ಅವರಿಗೆ ಹೆಚ್ಚು ಸಚಿವ ಸ್ಥಾನ ದೊರೆತಿದೆ. ಜೆಡಿಎಸ್ ಮಂತ್ರಿಗಳು ಈಗ ಹೊಸ ಹೊಸ ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದಾರೆ. ಇದು ಸ್ವಾಭಾವಿಕ, ಆದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯವಾದರೆ ಸಮ್ಮಿಶ್ರ ಸರ್ಕಾರ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

     

    ಕಾಂಗ್ರೆಸ್ 80 ಕ್ಷೇತ್ರಗಳಲ್ಲಿ ಜಯ ಸಾಧಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರಿಶ್ರಮವೇ ಕಾರಣವಾಗಿದೆ. ಅವರನ್ನು ಯಾರೂ ಲಘುವಾಗಿ ಪರಿಗಣಿಸುವುದು ಸೂಕ್ತವಲ್ಲ. 13 ಬಾರಿ ಬಜೆಟ್ ಮಂಡಿಸಿರುವ ಸಾಧನೆಯನ್ನು ಸಿದ್ದರಾಮಯ್ಯ ಅವರು ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರ ಉಳಿಯಬೇಕಾದರೆ ಸಿದ್ದರಾಮಯ್ಯ ಅವರ ಭಾವನೆಗಳಿಗೆ ಸ್ಪಂದಿಸುವುದು ಒಳ್ಳೆದು. ಸಿದ್ದರಾಮಯ್ಯ ಅವರನ್ನು ಸೈಡ್ ಲೈನ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿ ಸಾಟಿಯಾಗಿರುವ ನಾಯಕ ಅಂದ್ರೆ ಸಿದ್ದರಾಮಯ್ಯ ಅವರು ಒಬ್ಬರೇ ಎಂದು ಮಾಜಿ ಸಿಎಂ ಪರ ಬ್ಯಾಟ್ ಬೀಸಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರು ಪ್ರತ್ಯೇಕ ಬಜೆಟ್ ಮಂಡನೆ ಮಾಡುವ ಅವಶ್ಯಕತೆಯಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿರುವುದರಲ್ಲಿ ತಪ್ಪಿಲ್ಲ. ಕಳೆದ 5 ವರ್ಷಗಳಲ್ಲಿ ಅದರಲ್ಲೂ ಸಿದ್ದರಾಮಯ್ಯ ಕೊಟ್ಟ ಕಾರ್ಯಕ್ರಮಗಳನ್ನು ಸಿಎಂ ಕುಮಾರಸ್ವಾಮಿ ಅವರು ಮುಂದುವರಿಸಲಿ. ಸಾಧ್ಯವಾದರೆ ಅದರ ಜೊತೆಗೆ ತಮ್ಮ ಅಂಶಗಳನ್ನು ಸೇರಿಸಿ ಸಪ್ಲಿಮೆಂಟರಿ ಬಜೆಟ್ ಮಂಡಿಸಬಹುದು ಎಂದು ಸುಧಾಕರ್ ಹೇಳಿದರು.

  • ನನ್ನ ಸಚಿವ ಸ್ಥಾನದ ಹಕ್ಕಿಗೆ ಅಡ್ಡಗಾಲು ಹಾಕಲು ಯಾರಿಂದಲೂ ಸಾಧ್ಯವಿಲ್ಲ: ಕಾಂಗ್ರೆಸ್ ಶಾಸಕ ವಿ.ಮುನಿಯಪ್ಪ

    ನನ್ನ ಸಚಿವ ಸ್ಥಾನದ ಹಕ್ಕಿಗೆ ಅಡ್ಡಗಾಲು ಹಾಕಲು ಯಾರಿಂದಲೂ ಸಾಧ್ಯವಿಲ್ಲ: ಕಾಂಗ್ರೆಸ್ ಶಾಸಕ ವಿ.ಮುನಿಯಪ್ಪ

    ಚಿಕ್ಕಬಳ್ಳಾಪುರ: ನಾನು ಸೀನಿಯರ್, ಸಚಿವ ಸ್ಥಾನ ನನ್ನ ಹಕ್ಕು. ಯಾರಿಂದಲೂ ನನ್ನ ಸಚಿವ ಸ್ಥಾನದ ಹಕ್ಕಿಗೆ ಅಡ್ಡಗಾಲು ಹಾಕಲು ಸಾಧ್ಯವಿಲ್ಲ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿ ಮುನಿಯಪ್ಪ ಹೇಳಿದ್ದಾರೆ.

    ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿದ್ದು ಸಂಪುಟ ರಚನೆಯ ಬಳಿಕ ಹಲವು ಕಾಂಗ್ರೆಸ್ ಶಾಸಕರು ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬಹಿರಂಗವಾಗಿ ಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದರು. ಚಿಕ್ಕಬಳ್ಳಾಪುರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಶಾಸಕ ಸ್ಥಾನದ ಅವಧಿ ಮುಗಿಯುವರೆಗೂ ಸಚಿವ ಸ್ಥಾನಕ್ಕಾಗಿ ನನ್ನ ಹೋರಾಟ ಮುಂದುವರೆಸುತ್ತೇನೆ. ಸಂಪುಟ ವಿಸ್ತರಣೆ ವೇಳೆಯಲ್ಲಿ ತಮಗೆ ಸಚಿವ ಸ್ಥಾನ ಸಿಗಲಿದೆ ಎಂಬ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ರು.

    ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಗೆಲುವು ಸಾಧಿಸಿರುವ ವಿ.ಮುನಿಯಪ್ಪ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದ್ರೆ ಕೊನೆ ಘಳಿಗೆಯಲ್ಲಿ ಸಚಿವ ಸ್ಥಾನ ತಪ್ಪಿತ್ತು. ವಿ.ಮುನಿಯಪ್ಪ ಒಟ್ಟು ಐದು ಬಾರಿ ಶಿಡ್ಲಘಟ್ಟ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಬಂದಿದ್ದಾರೆ.

  • ಸಚಿವ ಡಿಕೆಶಿ ಮೇಲೆ ಕೇಸ್ ದಾಖಲಾಗ್ತಿದ್ದಂತೆಯೇ ಆಪ್ತರು ಯೂಟರ್ನ್!

    ಸಚಿವ ಡಿಕೆಶಿ ಮೇಲೆ ಕೇಸ್ ದಾಖಲಾಗ್ತಿದ್ದಂತೆಯೇ ಆಪ್ತರು ಯೂಟರ್ನ್!

    ಬೆಂಗಳೂರು: ನೀರಾವರಿ ಮತ್ತು ವೈದ್ಯಕೀಯ ಸಚಿವ ಡಿಕೆ ಶಿವಕುಮಾರ್ ಮೇಲೆ ಕೇಸ್ ದಾಖಲಾಗುತ್ತಿದ್ದಂತೆ ಎಲ್ಲಾ ಉಲ್ಟಾ ಪಲ್ಟಾವಾಗುತ್ತಿದೆ.

    ಸಚಿವ ಡಿ.ಕೆ. ಶಿವಕುಮಾರ್ ಗೆ ಐಟಿ ಮತ್ತು ಇಡಿ ಕಂಟಕ ಎದುರಾಗುತ್ತಿದ್ದು, ಸಾಕ್ಷ್ಯ ನಾಶದ ಕೇಸ್ ದಾಖಲು ಮಾಡಿದ ಕೂಡಲೇ ಡಿಕೆಶಿ ಆಪ್ತರು ಯೂಟರ್ನ್ ಆಗಿದ್ದಾರೆ. ನಾವು ಅವತ್ತು ಹೇಳಿದ್ದೇ ಬೇರೆ. ಇವತ್ತು ಹೇಳ್ತಾ ಇರೋದೇ ಬೇರೆ ಅಂತ ಹೇಳುವ ಮೂಲಕ ಆಪ್ತರು ಉಲ್ಟಾ ಹೊಡೆದಿದ್ದಾರೆ.

    ದಾಳಿ ನಡೆದ ವೇಳೆ ಭಯದಲ್ಲಿ ಏನೇನೋ ಹೇಳಿಕೆ ಕೊಟ್ಟಿದ್ದೀವಿ. ಆಗ ಎಲ್ಲಾ ಹಣ ಡಿಕೆಶಿಯದ್ದೇ ಅಂತನೂ ಹೇಳಿದ್ವಿ. ಅವತ್ತು ನೀವು ಕೇಳಿದ ಪ್ರಶ್ನೆಗಳಿಗೆ ಒತ್ತಡ ಮತ್ತು ಭಯದಲ್ಲಿ ಉತ್ತರ ಕೊಟ್ಟಿದ್ದೀವಿ. ಆದರೆ ಈಗ ಅದೆಲ್ಲಾ ಸುಳ್ಳು ಎಂದು ಹೇಳಿದ್ದಾರೆ.

    ಐಟಿ ದಾಳಿ ನಡೆದು ಸುಮಾರು 8 ತಿಂಗಳ ಬಳಿಕ ಡಿಕೆಶಿ ಆಪ್ತರು ಐಟಿ ಇಲಾಖೆಗೆ ಪತ್ರ ಬರೆದಿದ್ದಾರೆ. ಸುನೀಲ್ ಶರ್ಮಾ, ರಾಜೇಂದ್ರ ಮತ್ತು ಆಂಜನೇಯ ಐಟಿ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಇದೀಗ ಪತ್ರ ಬರೆದ ಆಪ್ತರು ಐಟಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಟ್ಟಿನಲ್ಲಿ ನಮ್ಮ ಮೇಲೂ ಕೇಸ್ ದಾಖಲಾಗುತ್ತೆ ಅಂತ ಉಲ್ಟಾ ಹೊಡೆದಿದ್ದಾರೆ ಎನ್ನಲಾಗಿದೆ.

  • ಹೆದರಿಸಿದರೆ ಡಿಕೆಶಿ ಹೆದರಲ್ಲ, ನನ್ನ ಹತ್ರನೂ ಕೆಲವರ ಡೈರಿಗಳಿವೆ : ಡಿಕೆ ಶಿವಕುಮಾರ್

    ಹೆದರಿಸಿದರೆ ಡಿಕೆಶಿ ಹೆದರಲ್ಲ, ನನ್ನ ಹತ್ರನೂ ಕೆಲವರ ಡೈರಿಗಳಿವೆ : ಡಿಕೆ ಶಿವಕುಮಾರ್

    ಬೆಂಗಳೂರು: ನಾನು ಕಾನೂನಿಗೆ ಬೆಲೆ ಕೊಡುವವನು. ನನ್ನನ್ನ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಹತ್ತಿರವೂ ಕೆಲವರ ಡೈರಿಗಳಿವೆ. ಈ ಕುರಿತು ಸಮಯ ಬಂದಾಗ ಕೊನೆಯಲ್ಲಿ ಏನೂ ಆಗಲ್ಲವೆಂದಾಗ ಬಹಿರಂಗ ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಆರ್ಥಿಕ ಅಪರಾಧಗಳ ನ್ಯಾಯಾಲಯದಿಂದ ಸಮನ್ಸ್ ವಿಚಾರ ಕುರಿತು ವಿಧಾನಸೌಧದಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ನ್ಯಾಯಾಲಯದಿಂದ ಸಮನ್ಸ್ ಬರಬಹುದು. ಆದರೆ ಈಗ ಯಾವುದೋ ನೋಟಿಸ್ ಒಂದು ಬಂದಿದೆ. ಖುದ್ದಾಗಿ ವಿಚಾರಣೆಗೆ ಹಾಜರಾಗಬೇಕೆಂದು ನನಗೆ, ತಾಯಿ ಹಾಗೂ ಸಹೋದರನಿಗೆ ನೋಟಿಸ್ ಬಂದಿದೆ. ನ್ಯಾಯಾಲಯದಿಂದ ಸಮನ್ಸ್ ಇನ್ನೆರಡು ದಿನಗಳಲ್ಲಿ ಬರಬಹುದು. ಪೋಸ್ಟಲ್ ಮೂಲಕ ಸಮನ್ಸ್ ಬರಬಹುದು. ವಿಚಾರಣೆಗೆ ಹಾಜರಾಗುತ್ತೇವೆ. ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದು ಹೇಳಿದರು.   ಇದನ್ನು ಓದಿ: ಹವಾಲ ವ್ಯವಹಾರದಲ್ಲಿ ಡಿಕೆ ಶಿವಕುಮಾರ್ ಭಾಗಿ?

    ಇದೇ ಐಟಿ ದಾಳಿ ವೇಳೆ ಸಿಕ್ಕ ಡೈರಿ ಕುರಿತು ಪ್ರತಿಕ್ರಿಯೆ ನೀಡಿ, ನನ್ನ ಬಳಿಯೂ ಕೆಲವರ ಡೈರಿಗಳಿವೆ. ಯಾರು? ಯಾರಿಗೆ? ಏನೇನು? ಬರೆದಿದ್ದಾರೆ ಎಂಬುವುದ ಸಹ ಗೊತ್ತಿದೆ. ಕೊನೆಯಲ್ಲಿ ಏನೂ ಆಗಲ್ಲವೆಂದಾಗ ಅದನ್ನು ಬಹಿರಂಗ ಮಾಡುತ್ತೇನೆ. ನನ್ನನ್ನ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಡಿಕೆ ಶಿವಕುಮಾರ್ ಯಾವುದಕ್ಕೂ ಹೆದರುವುದಿಲ್ಲ. ನಾನು ಕಾನೂನಿಗೆ ಬೆಲೆ ಕೊಡುವವನು. ಕೋರ್ಟ್ ನಲ್ಲಿ ಪ್ರಕರಣ ಇರುವ ಕಾರಣ ಈ ಕುರಿತು ಏನು ಹೇಳುವುದಿಲ್ಲ ಎಂದರು.

    https://www.youtube.com/watch?v=ZbAbYdv64Ik

    ನ್ಯಾಯಾಲಯದಲ್ಲಿ ಈ ಕುರಿತು ಪ್ರಕರಣ ನಡೆಯುತ್ತಿರುವುದರಿಂದ ಇದಲ್ಲವಾಗಿದ್ದರೆ ನಾನೇನು ಅನ್ನೋದನ್ನ ತೋರಿಸುತ್ತಿದ್ದೆ. ತಮ್ಮ ಆಪ್ತರಿಗೆ ಹಲವರು ಸಾಕಷ್ಟು ಸಮಸ್ಯೆ ನೀಡುತ್ತಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಿದ್ದಾರೆ. ಆದರೆ ಸಮನ್ಸ್ ಇನ್ನೂ ಯಾವುದು ಬಂದಿರುವ ಕುರಿತು ಮಾಹಿತಿ ಇಲ್ಲ. ಯಾರೋ ಏನೋ ಹೇಳಿಕೆ ನೀಡಿದ್ದಾರೆ ಎಂದ ತಕ್ಷಣ ನನ್ನನ್ನು ಪ್ರಕರಣದಲ್ಲಿ ಹೊಣೆ ಮಾಡಲು ಸಾಧ್ಯವಿಲ್ಲ. ಇದೆಲ್ಲಾ ಯಾಕೆ ಮಾಡುತ್ತಿದ್ದಾರೆ ಎಂಬುವುದು ನನಗೆ ಗೊತ್ತಿಗೆ ಎಂದು ಹೇಳಿದರು.

    ರಾಜೀನಾಮೆಗೆ ಒತ್ತಾಯ: ಬಿಜೆಪಿ ನಾಯಕರು ತಮ್ಮ ರಾಜೀನಾಮೆಗೆ ಒತ್ತಾಯ ಮಾಡಿದ್ದರೆ ಅವರ ನಾಯಕರ ಮೇಲೆ ಎಷ್ಟು ಪ್ರಕರಣಗಳಿದೆ ಎಂಬುವುದನ್ನು ಪ್ರಶ್ನೆ ಮಾಡಿದ್ದೀರಾ. ಅವರದ್ದೇ ಪಕ್ಷದ ಮುಖ್ಯಮಂತ್ರಿ ಆಗಿದ್ದವರ ಮೇಲೆ ಎಷ್ಟು ಕೇಸ್ ಗಳು ಇವೆ ಎಂಬುವುದು ಗೊತ್ತಿದೆ ಎಂದು ಹೇಳಿದ್ದಾರೆ.

  • ಅಮ್ಮ ಭಗವಾನ್ ಪಾದರಕ್ಷೆಯನ್ನು ಮೈಮೇಲೆ ಸವರಿಕೊಂಡ ಸಚಿವ ಮಹೇಶ್: ವಿಡಿಯೋ ವೈರಲ್

    ಅಮ್ಮ ಭಗವಾನ್ ಪಾದರಕ್ಷೆಯನ್ನು ಮೈಮೇಲೆ ಸವರಿಕೊಂಡ ಸಚಿವ ಮಹೇಶ್: ವಿಡಿಯೋ ವೈರಲ್

    ಚಾಮರಾಜನಗರ: ಪ್ರಾಥಮಿಕ ಶಿಕ್ಷಣ ಸಚಿವ ಎನ್.ಮಹೇಶ್ ಅಮ್ಮ ಭಗವಾನ್ ಪಾದರಕ್ಷೆಯನ್ನು ಮೈಮೇಲೆ ಸವರಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೊಳ್ಳೇಗಾಲ ಮತಕ್ಷೇತ್ರದಿಂದ ಬಿಎಸ್‍ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್.ಮಹೇಶ್ ಅವರು ಗೆಲುವು ಸಾಧಿಸಿ ಸಚಿವರಾಗಿದ್ದಾರೆ. ಎನ್.ಮಹೇಶ್ ಅವರು ಕೆಲವು ದಿನಗಳ ಹಿಂದಷ್ಟೇ ಸುತ್ತೂರು ಶ್ರೀಗಳ ಕಾಲಿಗೆ ಬಿದ್ದು ನಮಸ್ಕರಿಸಿ ಭಾರೀ ಚರ್ಚೆಗೆ ಕಾರಣವಾಗಿದ್ದರು. ಇದರ ಬೆನ್ನಲ್ಲೆ ಈಗ ಅಮ್ಮ ಭಗವಾನ್ ಎಂಬ ಸ್ವಾಮೀಜಿಯ ಪಾದರಕ್ಷೆಯನ್ನು ಮೈಮೇಲೆ ಸವರಿಕೊಂಡ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ, ಭಾರೀ ಪ್ರಮಾಣದ ಟೀಕೆಗಳು ಕೇಳಿಬರುತ್ತಿದ್ದು, ಈ ಕುರಿತು ಅಂಬೇಡ್ಕರ್‍ವಾದಿಗಳು ಅಸಮಾಧಾನ ವ್ಯಕ್ತಡಿಸಿದ್ದಾರೆ. ಅಂಬೇಡ್ಕರ್ ವಿಚಾರಧಾರೆಯನ್ನು ಊರೆಲ್ಲ ಹರಡಿ, ಈಗ ಅವರ ಸ್ವಾಭಿಮಾನವನ್ನು ಹರಾಜು ಹಾಕುವ ಕೃತ್ಯವನ್ನು ಎನ್.ಮಹೇಶ್ ಮಾಡುತ್ತಿದ್ದಾರೆ. ಅಂಬೇಡ್ಕರ್ ಸ್ವಾಭಿಮಾನದ ಚಿಂತನೆಯನ್ನು ಸ್ವಾಮೀಜಿ ಚಪ್ಪಲಿ ತಳಕ್ಕಿಟ್ಟಿದ್ದು, ಬಿಎಸ್‍ಪಿ ಹಾಗೂ ಅಂಬೇಡ್ಕರಿಸಮ್ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಬೆಂಬಲಿಗರು ಕಮೆಂಟ್ ಮಾಡುತ್ತಿದ್ದಾರೆ.

    https://youtu.be/jg2vq0ZAyTc

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಎನ್ ಮಹೇಶ್, ಚುನಾವಣೆ ಪ್ರಚಾರಕ್ಕಾಗಿ ಕೊಳ್ಳೇಗಾಲಕ್ಕೆ ಹೋಗಿದ್ದೆ. ಈ ವೇಳೆ ಸ್ಥಳೀಯರು ನೀವು ಪೂಜೆ ಮಾಡಿ ಒಳ್ಳೆದಾಗುತ್ತದೆ ಎಂದು ಹೇಳಿದರು. ಅವರ ಮನಸ್ಸಿಗೆ ಧಕ್ಕೆ ತರಬಾರದು ಎನ್ನುವುದಕ್ಕೆ ನಾನು ಪಾದ ಪೂಜೆ ಮಾಡಿದ್ದು ಸತ್ಯ. ಆದರೆ ನಾವು ಯಾವುದೇ ಧರ್ಮಕ್ಕೆ ಸೇರಿಲ್ಲ. ಒಬ್ಬ ಜನಪ್ರತಿನಿಧಿಯಾಗಿ ಉಳಿದ ಧರ್ಮಗಳನ್ನು ಗೌರವಿಸಬೇಕಾಗುತ್ತದೆ. ನಾನು ಚರ್ಮಕ್ಕೆ ಪಾದರಕ್ಷೆ ಮುಟ್ಟಿಸಿಕೊಂಡಿಲ್ಲ, ಬಟ್ಟೆಗೆ ಮುಟ್ಟಿಸಿಕೊಂಡಿರುವೆ. ನಾನು ಅಂಬೇಡ್ಕರ್ ಸಿದ್ಧಾಂತಗಳಿಗೆ ಧಕ್ಕೆ ತಂದಿದ್ದೇನೆ ಎಂದು ಕೆಲವರು ದೂರಿದ್ದಾರೆ. ಆದರೆ ನಾನು ಅದನ್ನು ಒಪ್ಪುವುದಿಲ್ಲ. ನಾನು ಕಟ್ಟಾ ಅಂಬೇಡ್ಕರ್‍ವಾದಿ ಎಂದಿದ್ದಾರೆ.

  • ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿದ್ದ `ಕೈ’ ಶಾಸಕರಿಂದ ಜನತಾ ದರ್ಶನ ಆರಂಭ

    ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿದ್ದ `ಕೈ’ ಶಾಸಕರಿಂದ ಜನತಾ ದರ್ಶನ ಆರಂಭ

    ಚಿಕ್ಕಬಳ್ಳಾಪುರ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ, ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಇದೀಗ ಸ್ವಕ್ಷೇತ್ರದಲ್ಲಿ ಜನತಾದರ್ಶನ ಕಾರ್ಯಕ್ರಮ ನಡೆಸುವ ಮೂಲಕ ಜನರ ಸಮಸ್ಯೆಗಳನ್ನು ಅಲಿಸಿದ್ದಾರೆ.

    ಇಂದು ಚಿಕ್ಕಬಳ್ಳಾಪುರ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜನತಾ ದರ್ಶನ ಕಾರ್ಯಕ್ರಮ ನಡೆಸಿದ ಸುಧಾಕರ್ ಸಾರ್ವಜನಿಕರಿಂದ ಸಾಕಷ್ಟು ಅಹವಾಲುಗಳನ್ನ ಸ್ವೀಕರಿಸಿದರು. ಕ್ಷೇತ್ರದಲ್ಲಿ ಪ್ರತಿ ಸೋಮವಾರ ಜನತಾ ದರ್ಶನ ಕಾರ್ಯಕ್ರಮ ನಡೆಸಲು ತೀರ್ಮಾನಿಸಿರುವ ಶಾಸಕ ಸುಧಾಕರ್, ಇಂದು ತಮ್ಮ ಮೊದಲ ಕಾರ್ಯಕ್ರಮ ನಡೆಸಿದರು.

    ಇತ್ತೀಚೆಗೆ ಮತದಾರರಿಗೆ ಕೃತಜ್ಞತಾ ಸಮಾವೇಶ ನಡೆಸಿ ಧನ್ಯವಾದಗಳನ್ನ ಅರ್ಪಿಸಿದ್ದ ಶಾಸಕ ಸುಧಾಕರ್ ಇದೀಗ ಜನತಾ ದರ್ಶನ ಕಾರ್ಯಕ್ರಮ ನಡೆಸಿರುವುದು ಶಾಸಕರ ಅಸಮಾಧಾನ ತಣಿಸಿಕೊಂಡಿರುವ ಲಕ್ಷಣಗಳು ಗೋಚರಿಸುತ್ತಿವೆ. ತಮ್ಮ ಮೊದಲ ದಿನದ ಜನತ ದರ್ಶನದಲ್ಲೇ ಕ್ಷೇತ್ರದ ಜನರು ಕುಡಿಯುವ ನೀರು, ವಿದ್ಯುತ್ ದೀಪ, ರಸ್ತೆ, ಪಿಂಚಣಿ, ವೃದ್ಧಾಪ್ಯವೇತನ, ರೇಷನ್ ಕಾರ್ಡ್ ಸಮಸ್ಯೆ, ಉದ್ಯೋಗ ಸಮಸ್ಯೆ, ಜಮೀನು ಖಾತೆ ಸಮಸ್ಯೆ, ಪಹಣಿ ಸಮಸ್ಯೆ, ಯಾರದೋ ಜಮೀನು ಮತ್ಯಾರಿಗೋ ಖಾತೆ ಸೇರಿದಂತೆ ಹಲವು ಸಮಸ್ಯೆಗಳ ದೂರುಗಳನ್ನು ಶಾಸಕರಿಗೆ ಸಲ್ಲಿಸಿದರು.

    ಜನರ ಸಮಸ್ಯೆಗಳ ಅಹವಾಲು ಸ್ವೀಕರಿಸಿದ ಶಾಸಕರು ಮುಂದಿನ ಜನತಾ ದರ್ಶನದ ಒಳಗೆ ಸಮಸ್ಯೆಗಳ ಇತ್ಯರ್ಥ ಮಾಡುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು. ಇದೇ ವೇಳೆ ಹಲವು ಮಂದಿ ಸಣ್ಣ ಸಮಸ್ಯೆಗಳಿಗೂ ಸಾರ್ವಜನಿಕರು ಶಾಸಕರ ಮೊರೆಗೆ ಆಗಮಿಸಿದ್ದು ತಾಲೂಕು ಆಡಳಿತ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಕೂಡ ಆಗಿತ್ತು.

    ಸದ್ಯ ಶಾಸಕ ಈ ನಡೆ ಸಚಿವ ಸ್ಥಾನದ ಸಿಗದ ಅಸಮಾಧಾನದಿಂದ ಹೊರ ಬಂದಿದ್ದರಾ ಎಂಬ ಚರ್ಚೆಗೆ ಕಾರಣವಾಗಿದೆ. ಚುನಾವಣಾ ಫಲಿತಾಂಶದ ನಂತರ ರಚನೆಯಾದ ಸಮ್ಮಿಶ್ರ ಸರ್ಕಾರ ಸತತ ಸವಾಲು ಎದುರಿಸಿದ ನಡುವೆ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾದ ಶಾಸಕ ಸುಧಾಕರ್ ಅವರಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಈ ಕುರಿತು ಶಾಸಕರು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದರು. ನಿರಂತರವಾಗಿ ಪಕ್ಷದ ನಾಯಕರ ನಡೆಯ ವಿರುದ್ಧ ಟೀಕೆ ಮಾಡುತ್ತಲೇ ಇರುವ ಶಾಸಕರು ಕೃತಜ್ಞತಾ ಸಮಾವೇಶದಲ್ಲೂ ವಾಗ್ದಾಳಿ ನಡೆಸಿ ನಾಯಕರಿಗೆ ಬಿಸಿ ಮುಟ್ಟಿಸಿದ್ದರು.

  • ಪಕ್ಷದಲ್ಲಿ ತಂದೆ-ತಾತನನ್ನ ನೋಡಿ ಮಂತ್ರಿ ಸ್ಥಾನ ಕೊಡುವ ಪರಿಸ್ಥಿತಿ ಇದೆ – `ಕೈ’ ಶಾಸಕ ಅಸಮಾಧಾನ

    ಪಕ್ಷದಲ್ಲಿ ತಂದೆ-ತಾತನನ್ನ ನೋಡಿ ಮಂತ್ರಿ ಸ್ಥಾನ ಕೊಡುವ ಪರಿಸ್ಥಿತಿ ಇದೆ – `ಕೈ’ ಶಾಸಕ ಅಸಮಾಧಾನ

    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದಲ್ಲಿ ತಂದೆ-ತಾತನನ್ನ ನೋಡಿ ಮಂತ್ರಿ ಸ್ಥಾನ ಕೊಡುವ ಪರಿಸ್ಥಿತಿ ಇದೆ. ಈ ರೀತಿ ನೋಡಿ ಮಂತ್ರಿ ಸ್ಥಾನ ಕೊಟ್ಟರೇ ದೇಶದಲ್ಲಿ ಯುವ ನಾಯಕತ್ವವವನ್ನು ಸೃಷ್ಠಿ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಸ್ಥಾನ ವಂಚಿತ ಶಾಸಕ ಸುಧಾಕರ್ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

    ಇಂದು ನಗರದಲ್ಲಿ ಏರ್ಪಡಿಸಿದ್ದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭದಲ್ಲಿ ಮಾತನಾಡಿದ ಅವರು, ಜೂನ್ 15 ರಂದು 20 ರಿಂದ 30 ಮಂದಿ ಸಮಾನ ಮನಸ್ಕ ಶಾಸಕರು ಸಭೆ ಸೇರಲಿದ್ದೇವೆ. ಹೈಕಮಾಂಡ್ ನ ನಾಯಕರು ಎಲ್ಲಿ ಎಡವಿದ್ದಾರೆ ಎಂದು ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಪಕ್ಷವನ್ನು ದೇಶದಲ್ಲಿ ಬೆಳೆಸಬೇಕಾದರೆ ಯಾವ ನಾಯಕರಲ್ಲಿ ಸೇವಾ ಮನೋಭಾವ, ಅರ್ಹತೆ, ಸಾಮಥ್ರ್ಯ ಎಂಬ ನಾಯಕರನ್ನು ಗುರುತಿಸಿ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.

    ಇದೇ ವೇಳೆ ತಮ್ಮ ನಡೆಯನ್ನು ಪಕ್ಷ ವಿರೋಧಿ ಚಟುವಟಿಕೆ ಎಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪಕ್ಷವನ್ನ ಸದೃಢವಾಗಿ ಕಟ್ಟುವ ನಿರ್ಧಾರವಾಗಿದೆ. ಪಕ್ಷದ ನಾಯಕರು ಎಲ್ಲಿ ಎಡವಿದ್ದಾರೆ ಎಂಬುವುದು ಮನದಟ್ಟು ಮಾಡಿಸುವುದು ಮುಖ್ಯ ಎಂದು ಹೇಳಿ ಕ್ಷೇತ್ರದಲ್ಲಿ ಮತ ನೀಡಿದ ಗೆಲ್ಲಿಸಿಕೊಟ್ಟ ಎಲ್ಲಾ ಮತದಾರರಿಗೂ ಕೃತಜ್ಞತೆ ತಿಳಿಸಿದರು. ಇನ್ನೂ ಇದೇ ಸಮಾರಂಭದಲ್ಲಿ ಮಾಜಿ ಶಾಸಕ ಶಿವಾನಂದ್, ಸುಧಾಕರ್ ಗೆ ಸಚಿವ ಸ್ಥಾನ ನೀಡದ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ವಿರುದ್ಧ ಸಿನಿಮಾ ಡೈಲಾಗ್ ಗಳ ಮೂಲಕ ವ್ಯಂಗ್ಯವಾಗಿ ಟೀಕಿಸಿದರು.

  • ಆಗೋದೆಲ್ಲ ಒಳ್ಳೇದಕ್ಕೆ, ಸಚಿವ ಸ್ಥಾನ ತಪ್ಪಿದ್ದೂ ಒಳ್ಳೆಯದಕ್ಕೆ ಅನ್ನಿಸುತ್ತೆ – ರಾಮಲಿಂಗಾ ರೆಡ್ಡಿ

    ಆಗೋದೆಲ್ಲ ಒಳ್ಳೇದಕ್ಕೆ, ಸಚಿವ ಸ್ಥಾನ ತಪ್ಪಿದ್ದೂ ಒಳ್ಳೆಯದಕ್ಕೆ ಅನ್ನಿಸುತ್ತೆ – ರಾಮಲಿಂಗಾ ರೆಡ್ಡಿ

    ಬೆಂಗಳೂರು: ನಾನು ಸಚಿವ ಸ್ಥಾನಬೇಕು ಎಂದು ಯಾರನ್ನು ಕೇಳಿಲ್ಲ. ಅರ್ಹತೆ ಇದ್ರೆ ಕೊಡಲಿ. ನಾವು ಅಧಿಕಾರದ ಹಿಂದೆ ಹೋಗಬಾರದು. ಅಧಿಕಾರ ನಮ್ಮನ್ನ ಹುಡುಕಿಕೊಂಡು ಬರಬೇಕು. ಆಗೋದೆಲ್ಲ ಒಳ್ಳೆಯದಕ್ಕೆ ಎಂಬ ಹಾಗೇ ಸಚಿವ ಸ್ಥಾನ ತಪ್ಪಿದ್ದು ಒಳ್ಳೆಯದಕ್ಕೆ ಎಂದನಿಸುತ್ತಿದೆ ಅಂತ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

    ಜಯನಗರದ ವಿಧಾನಸಭಾ ಫಲಿತಾಂಶದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಪಕ್ಷಗಳು ಗೆಲ್ಲಲು ಅಭ್ಯರ್ಥಿ ಕಣ್ಣಕ್ಕೆ ಇಳಿಸುತ್ತಾರೆ. ನಮ್ಮ ಪಕ್ಷ, ಪುತ್ರಿ ಸೌಮ್ಯರಿಗೆ ಸ್ಥಾನ ನೀಡಿತ್ತು. ಎಲ್ಲರ ಶ್ರಮದಿಂದ ಗೆಲುವು ಸಿಕ್ಕಿದೆ. ಗೆಲುವಿಗೆ ಸಹಕಾರ ನೀಡಿದ ಜೆಡಿಎಸ್ ಅಭ್ಯರ್ಥಿ ಹಾಗೂ ಪಕ್ಷಕ್ಕೆ ಧನ್ಯವಾದ ಅಂದ್ರು.

    ಸದ್ಯ ಪಕ್ಷಕ್ಕೆ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿದ್ದೇನೆ. ನಮ್ಮದೆ ಸಮ್ಮಿಶ್ರ ಸರ್ಕಾರ ಇದೆ. ಬೆಂಗಳೂರು ಅಭಿವೃದ್ಧಿ ಮಾಡುವ ಕುರಿತು ಮುಂದಿನ ಗುರಿ ಇದೆ. ಹಿಂದೆ ನಾನು ಈ ಕ್ಷೇತ್ರದಲ್ಲಿ ಜಯಿಸಿದ್ದೆ. ಎಲ್ಲರ ಸಂಪರ್ಕ ಇತ್ತು. ಅನೇಕರು ಪಕ್ಷಕ್ಕೆ ಬಂದು ಗೆಲುವಿಗಾಗಿ ಶ್ರಮವಹಿಸಿದ್ದಾರೆ. ಜನ ನಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.

    ತಮ್ಮ ಪುತ್ರಿ ರಾಜಕೀಯಕ್ಕೆ ಬರುವುದು ಬೇಡ ಎಂದು ಹೇಳಿದ್ದೆ. ಆದರೆ ಪರಿಸರದ ಬಗ್ಗೆ ಹೆಚ್ಚು ಕಾಳಜಿ ಇತ್ತು. ರಾಜಕೀಯಕ್ಕೆ ಬಂದರೆ ಹೆಚ್ಚು ಕೆಲಸ ಮಾಡಬಹುದು ಎಂದು ಬಂದಿದ್ದಾರೆ. ತಂದೆಯಾಗಿ ಎಲ್ಲರಂತೆ ತಮಗೂ ಖುಷಿಯಾಗಿದೆ ಎಂದರು.

  • ಲಕ್ಷ್ಮೀ ಹೆಬ್ಬಾಳ್ಕರ್, ನನ್ನ ಸಮಸ್ಯೆ ಒಂದೇ ಆಗಿದೆ – ಸತೀಶ್ ಜಾರಕಿಹೊಳಿ

    ಲಕ್ಷ್ಮೀ ಹೆಬ್ಬಾಳ್ಕರ್, ನನ್ನ ಸಮಸ್ಯೆ ಒಂದೇ ಆಗಿದೆ – ಸತೀಶ್ ಜಾರಕಿಹೊಳಿ

    ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ತನಗೂ ಸಚಿವ ಸ್ಥಾನ ನೀಡಿಲ್ಲ. ನಾವಿಬ್ಬರೂ ಸೇರಿಕೊಂಡು ನಮಗೆ ಸಚಿವ ಸ್ಥಾನ ತಪ್ಪಿಸಿದವರು ಯಾರು ಎಂದು ಹುಡುಕಾಟ ನಡೆಸಬೇಕಿದೆ ಎಂದು ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೋಳಿ ಹೇಳಿದ್ದಾರೆ.

    ಲಕ್ಷ್ಮೀ ಹೆಬ್ಬಾಳ್ಕರ್ ಗೆ ಮಂತ್ರಿ ಸ್ಥಾನ ಕೈ ತಪ್ಪಿದ ವಿಚಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ ಅವರು, ಅವರಿಗೂ ಸಚಿವ ಸ್ಥಾನ ತಪ್ಪಿದೆ. ನನಗೂ ಸಚಿವ ಸ್ಥಾನ ತಪ್ಪಿದೆ. ಹೀಗಿರುವಾಗ ಯಾರು ಯಾರಿಗೆ ಸಚಿವ ಸ್ಥಾನ ತಪ್ಪಿಸಿದರು ಎನ್ನುವ ಮಾತೇ ಉದ್ಭವಿಸುವುದಿಲ್ಲ. ಆದರೆ ಅವರು ಸಚಿವ ಸ್ಥಾನ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ್ದಾರೆ, ನಾನು ಹಾಕಲಿಲ್ಲ ಅಷ್ಟೇ. ನಾವಿಬ್ಬರೂ ಸೇರಿಕೊಂಡು ನಮಗೆ ಸಚಿವ ಸ್ಥಾನ ತಪ್ಪಿಸಿದವರು ಯಾರು ಅಂತಾ ಹುಡುಕಾಡಬೇಕಿದೆ ಎಂದು ಹೇಳಿದ್ದಾರೆ.

    ಸಚಿವ ಸ್ಥಾನದ ನೀಡುವಲ್ಲಿ ಪಕ್ಷದಲ್ಲಿ ಉಂಟಾಗಿರುವ ತಾರತಮ್ಯದ ಕುರಿತು ಈಗಾಗಲೇ ತಮ್ಮ ಅಸಮಾಧಾನವನ್ನು ನಾಯಕರಿಗೆ ತಿಳಿಸಿದ್ದು, ಸೋಮವಾರವೇ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ನಾನು ರಾಜೀನಾಮೆ ಸಲ್ಲಿಸಿದ್ದೇನೆ. ಮುಂದೆ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ, ಸೂಕ್ತ ಸ್ಥಾನಮಾನ ನೀಡಬೇಕು ಎಂದರು.

    ಇದೇ ವೇಳೆ ಶುಕ್ರವಾರ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸಮ್ಮುಖದಲ್ಲಿ ಬೆಂಗಳೂರಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದ ಅವರು, ಸಭೆಯಲ್ಲಿ ಭಾಗವಹಿಸುತ್ತೇನೆ. ಆದರೆ ನಾನೇನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದಲ್ಲಿದ್ದುಕೊಂಡೇ ಚರ್ಚೆ ಮಾಡುತ್ತೇವೆ. ನಮ್ಮ ಬೇಡಿಕೆಯನ್ನ ಕೇಳುತ್ತೇವೆ. ಸಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಾವುದಿಲ್ಲ ಎಂದು ತಿಳಿಸಿದರು.

    ಸದ್ಯ ಪಕ್ಷದಲ್ಲಿ ಉಂಟಾಗಿರುವ ಗೊಂದಲ ಹಾಗೂ ಸಮಸ್ಯೆಗಳು ಬಗೆಹರಿಯಲಾರದ ಸಮಸ್ಯೆಗಳಲ್ಲ. ಶೀಘ್ರವೇ ಈ ಕುರಿತ ಎಲ್ಲವೂ ಬಗೆಹರಿಯಲಿದೆ. ಆದರೆ ನಾನು ರಾಜೀನಾಮೆ ನೀಡಿರುವ ಕುರಿತು ಕೆಲ ನಾಯಕರು ನನ್ನ ಜೊತೆ ಮಾತನಾಡಿದ್ದಾರೆ. ಆದರೂ ರಾಜೀನಾಮೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

    ರಾಜ್ಯದ ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರಾಗಿರುವ ಸತೀಶ್ ಜಾರಕಿಹೊಳಿ ಅವರು ಯಮಕನಮರಡಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ.

     

  • `ಕುಕ್ಕರ್ ಲಕ್ಷ್ಮಿದು, ಬಿರಿಯಾನಿ ಜಯಮಾಲಾದು’ ಜೋಕ್ ಕೇಳೋಕೆ ಚೆನ್ನಾಗಿದೆ – ಲಕ್ಷ್ಮೀ ಹೆಬ್ಬಾಳ್ಕರ್

    `ಕುಕ್ಕರ್ ಲಕ್ಷ್ಮಿದು, ಬಿರಿಯಾನಿ ಜಯಮಾಲಾದು’ ಜೋಕ್ ಕೇಳೋಕೆ ಚೆನ್ನಾಗಿದೆ – ಲಕ್ಷ್ಮೀ ಹೆಬ್ಬಾಳ್ಕರ್

    ಧಾರವಾಡ: ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗಿರುವ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಸಚಿವ ಸ್ಥಾನ ಕೈ ತಪ್ಪಿರುವ ಕುರಿತು ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಧಾರವಾಡದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ತಮ್ಮ ವಿರುದ್ಧದ ಆರೋಪಗಳ ಕುರಿತು ನಗುತ್ತಲೇ ಅಲ್ಲಗೆಳೆದರು. ನನ್ನ ಶುಗರ್ ಫಾಕ್ಟರಿ ಇದೆ ಅದರ ಬ್ರ್ಯಾಂಡ್ ಪ್ರಚಾರ ಮಾಡಲು ರೈತ ಮಹಿಳೆಯರಿಗೆ ಕುಕ್ಕರ್ ನೀಡಿದ್ದಾಗಿ ತಿಳಿಸಿದರು.

    ಇದೇ ವೇಳೆ ತಾವು ಸಚಿವ ಸ್ಥಾನದ ಪ್ರಮುಖ ಅಕಾಂಕ್ಷಿಯಾಗಿದ್ದು, ತಾನು ಸಚಿವ ಸ್ಥಾನ ಕೇಳಿರುವ ಹಿಂದೆ ಇಂದು ಅರ್ಥ ಇದೆ. ನಾನು ಮೊದಲ ಬಾರಿ ಶಾಸಕಿಯಾಗಿ ಆಯ್ಕೆ ಆಗಿದ್ದರೂ ಕೂಡ ಈ ಬಾರಿ ಚುನಾವಣೆಯಲ್ಲಿ ಗೆದ್ದಿರುವ ನಾಲ್ವರು ಶಾಸಕಿಯರು ಮೊದಲ ಬಾರಿ ಆಯ್ಕೆ ಆಗಿದ್ದಾರೆ. ಆದರೆ ತಾವು ಪಕ್ಷದ ಸಂಘಟನೆಯಲ್ಲಿ ಪ್ರಮುಖ ಸ್ಥಾನ ವಹಿಸಿದ್ದು, ನಮ್ಮ ಹಿರಿತನವನ್ನು ಪರಿಗಣಿಸಿ ಸಚಿವ ಸ್ಥಾನ ಕೇಳಿದ್ದೇವೆ. ಆದರೆ ಪಕ್ಷದ ನಾಯಕರು ನಮ್ಮನ್ನು ಪರಿಗಣಿಸಿಲ್ಲ. ಇದರಿಂದ ನಮ್ಮ ಮನಸ್ಸಿಗೆ ನೋವಾಗಿದೆ ಎಂದರು.

    ಪಕ್ಷದ ಮಾನದಂಡಗಳ ಬಗ್ಗೆ ತುಂಬಾ ಬೇಸರ ಆಗಿದೆ. ಪಕ್ಷದಲ್ಲಿ ಇರುವ ನಿಯಮಗಳನ್ನು ಮೀರಿ ನಡೆಯುತ್ತಿದ್ದಾರೆ. ಈ ಮೊದಲು ಯಾವ ಎಂಎಲ್‍ಸಿಯನ್ನು ಮಂತ್ರಿ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಜಯಮಾಲಾರನ್ನು ರಾತ್ರೋ ರಾತ್ರಿ ಮಂತ್ರಿ ಮಾಡಿದ್ದಾರೆ. ಪಕ್ಷದ ಹಿರಿಯ ನಾಯಕರಾದ ಉಗ್ರಪ್ಪ, ಅಲ್ಲಂ ವೀರಭದ್ರಪ್ಪ, ಎಸ್‍ಆರ್ ಪಾಟೀಲರಂಥವರಿಗೆ ಮಂತ್ರಿ ಸ್ಥಾನ ನೀಡಬೇಕಾಗಿತ್ತು. ಈ ಮಾನದಂಡಗಳು ಅವಕಾಶ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುವುದು ಸರಿಯಲ್ಲ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಪಕ್ಷದಲ್ಲಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.