Tag: minister

  • ಸಚಿವ ಎಂ.ಸಿ.ಮನಗೂಳಿಗೆ ಮಹಿಳೆಯರಿಂದ ಫುಲ್ ಕ್ಲಾಸ್- ವಿಡಿಯೋ ನೋಡಿ

    ಸಚಿವ ಎಂ.ಸಿ.ಮನಗೂಳಿಗೆ ಮಹಿಳೆಯರಿಂದ ಫುಲ್ ಕ್ಲಾಸ್- ವಿಡಿಯೋ ನೋಡಿ

    -ಚುನಾವಣೆ ಮುಗಿತಲ್ಲ ಇನ್ಮುಂದೇ ನಾವೇ ನಿಮಗೆ ಕೈ ಮುಗಿಬೇಕು

    ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅವರನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸಿ ಸಿಂಧಗಿ ಪಟ್ಟಣದ ಮಹಿಳೆಯರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಿಂಧಗಿ ಪಟ್ಟಣಕ್ಕೆ ಇಂದು ಸಚಿವರು ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಸಚಿವರ ಬಳಿ ಬಂದು ರಸ್ತೆ, ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಹೇಳಿಕೊಂಡರು. ಅಲ್ಲಿಯೇ ಇದ್ದ ಲತಿಬಾ ತಾಂಬೆ ಹಾಗೂ ಕೆಲವು ಮಹಿಳೆಯರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.

    ಚುನಾವಣೆ ಇದ್ದಾಗ ನೀವು ಕೈಮುಗಿದುಕೊಂಡು ಬರತ್ತಿರಿ, ಈಗ ನಾವು ಕೈ ಮುಗಿದು ಕೆಲಸ ಕೇಳುವ ಪರಿಸ್ಥಿತಿ ಬಂದಿದೆ. ನಾವು ಮತ ಹಾಕುವವರಿಗೆ ಮಾತ್ರ ನಮ್ಮನ್ನು ಮಾತನಾಡಿಸುತ್ತೀರಾ ಆಮೇಲೆ ನಮ್ಮ ಸಮಸ್ಯೆ ಕೇಳುವುದಿಲ್ಲ. ಪಟ್ಟಣದಲ್ಲಿ ರಸ್ತೆಯ ಧೂಳು ಕುಡಿದು ತಿರುಗಾಡುತ್ತಿದ್ದೇವೆ. ಕುಡಿಯಲು ನೀರಿಲ್ಲ ಎಂದು ಲತಿಬಾ ತಾಂಬೆ ಕಿಡಿಕಾರಿದರು.

    ಸಚಿವರ ಪಕ್ಕದಲ್ಲಿಯೇ ನಿಂತಿದ್ದ ವ್ಯಕ್ತಿ ಉತ್ತರ ನೀಡುತ್ತಿದ್ದಂತೇ, ನೀವು ಸುಮ್ಮನೆ ನಿಲ್ಲಿ. ಸಚಿವರು ಉತ್ತರ ನೀಡಲಿ ಎಂದು ಮಹಿಳೆ ಗರಂ ಆಗಿದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ಸಚಿವರು ಸರಿ ಮಾಡಿಸುತ್ತೇನೆ ಎನ್ನುತ್ತಲೇ ಕಾರು ಏರಿ ಅಲ್ಲಿಂದ ಕಾಲ್ಕಿತ್ತರು.

    ಇದಕ್ಕೂ ಮುನ್ನ ದೇವರನೆದಲಗಿ ಗ್ರಾಮ ಪಂಚಾಯತ್‍ನಲ್ಲಿ ಹಗರಣ ನಡೆದಿದೆ ಎಂದು ಕೆಲವು ಸಿಂಧಗಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾತನಾಡಿದ ಪ್ರತಿಭಟನಾನಿರತರು, ಸುಮಾರು 70ರಿಂದ 80 ಲಕ್ಷ ರೂ. ಕಳಪೆ ಕಾಮಗಾರಿಗಳು ನಡೆದಿವೆ. ಈ ಕುರಿತು ಸಂಪೂರ್ಣ ತನಿಖೆ ಆಗುವವರಗೂ ನಾನು ಪ್ರತಿಭಟನೆ ಮಾಡುತ್ತೇವೆ. ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ. ನಮ್ಮ ಮೇಲೆ ಅಧಿಕಾರಿಗಳು ಹಾಗೂ ನಾಯಕರು ಮಲತಾಯಿ ಧೋರಣೆ ತೋರುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ನೀವು ಮಧ್ಯ ಪ್ರವೇಶಿಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ನಾನು ಒಂದೇ ಜಿಲ್ಲೆಗೆ ಮೀಸಲಾಗಿಲ್ಲ. ನನಗೆ 30 ಜಿಲ್ಲೆಗಳ ಜವಾಬ್ದಾರಿಯಿದೆ. ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಕ್ರಮ ಕೈಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೇಕೆದಾಟುವಿನಿಂದಾಗಿ ಮುಳುಗುತ್ತಾ ಮುತ್ತತ್ತಿ- ಆಂಜನೇಯನ ಕಾಪಾಡ್ತಾರಾ ಟ್ರಬಲ್ ಶೂಟರ್?

    ಮೇಕೆದಾಟುವಿನಿಂದಾಗಿ ಮುಳುಗುತ್ತಾ ಮುತ್ತತ್ತಿ- ಆಂಜನೇಯನ ಕಾಪಾಡ್ತಾರಾ ಟ್ರಬಲ್ ಶೂಟರ್?

    ಬೆಂಗಳೂರು/ಮಂಡ್ಯ: ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ರಾಮಯಣದಲ್ಲಿ ಮುತ್ತತ್ತಿಯ ಬಗ್ಗೆ ಉಲ್ಲೇಖವಿರುವ, ಐತಿಹಾಸಿಕ ಪ್ರಸಿದ್ಧ ಮುತ್ತತ್ತಿ ಕೂಡ ಮುಳುಗಡೆಯಾಗುತ್ತದೆ ಅನ್ನೋ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಮೇಕೆದಾಟು ಕನ್ನಡಿಗರ ಕನಸು ಸರ್ಕಾರದ ಮಹತ್ವಾಂಕ್ಷಿ ಯೋಜನೆಯಾಗಿದೆ. ಆದ್ರೆ ಈ ಕನಸಿನ ಪ್ರಾರಂಭದಲ್ಲೇ ಸಣ್ಣ ತೊಡಕೊಂದು ಎದುರಾಗಿದೆ. ಅಣೆಕಟ್ಟು ಕಟ್ಟುವ ಸಂದರ್ಭದಲ್ಲಿ ನಾಲ್ಕು ಹಳ್ಳಿ ಮುಳುಗಡೆಯಾಗುವ ಭೀತಿಯಲ್ಲಿದ್ದು ಅದ್ರಲ್ಲಿ ಡಾ. ರಾಜ್ ಆರಾಧ್ಯ ಸ್ಥಳ ಮಳವಳ್ಳಿಯ ಮುತ್ತತ್ತಿಯೂ ಸೇರಲಿದ್ಯಾ ಅನ್ನುವ ಅನುಮಾನ ಮೂಡಿದೆ. ಸೀತೆಯ ಮೂಗುತಿಯನ್ನು ಕಾವೇರಿ ನದಿಗೆ ಹಾರಿ ಹುಡುಕಿಕೊಟ್ಟ ಆಂಜನೇಯನ ಸ್ಥಳ ಮಹಿಮೆ ಇರುವ ಸ್ಥಳ ಏನಾಗಲಿದೆ ಅನ್ನುವ ಪ್ರಶ್ನೆ ಈಗ ಎದುರಾಗಿದೆ.

    ಪ್ರವಾಸಿ ತಾಣಗಳನ್ನು ಹಾಗೆಯೇ ಉಳಿಸಿಕೊಳ್ಳುತ್ತೇವೆ. ಮುತ್ತತ್ತಿ ಬಗ್ಗೆ ಕೇಳಿದ್ರೆ ಜನ ತ್ಯಾಗಕ್ಕೆ ಸಿದ್ಧರಾಗಿರಬೇಕು. ಅಭಿವೃದ್ಧಿ ಕೆಲಸಕ್ಕೆ ಸಹಕಾರ ಕೊಡಬೇಕು ಅಂತ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದರು.

    ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿಕೆ ಕೊಟ್ಟಿರುವ ಡಿಕೆಶಿ ಆಂಜನೇಯನಿಗೆ ಕೈ ಕೊಡ್ತಾರಾ ಅಥವಾ ಮುತ್ತತ್ತಿನಾ ಉಳಿಸ್ತಾರ ಅನ್ನೋದು ಕಾದು ನೋಡಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಚ್ಚು ಹಿಡಿದು ಸಚಿವರ ಕಾರಿನ ಮೇಲೆ ದಾಳಿ-ವಿಡಿಯೋ ನೋಡಿ

    ಮಚ್ಚು ಹಿಡಿದು ಸಚಿವರ ಕಾರಿನ ಮೇಲೆ ದಾಳಿ-ವಿಡಿಯೋ ನೋಡಿ

    ಚೆನ್ನೈ: ಕೈಮಗ್ಗ ಮತ್ತು ವಸ್ತ್ರೋದ್ಯಮ ಸಚಿವ ಓ.ಎಸ್ ಮಣಿಯನ್ ಕಾರಿನ ಮೇಲೆ ಸಂತ್ರಸ್ತರ ಗುಂಪೊಂದು ಮಚ್ಚು ಹಿಡಿದು ದಾಳಿಗೆ ಯತ್ನಿಸಿದ ಘಟನೆ ತಮಿಳುನಾಡಿದ ನಾಗಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.

    ಸಚಿವ ಓ.ಎಸ್.ಮಣಿಯನ್ ತಮ್ಮ ವೆರಣ್ಯಂ ವಿಧಾನಸಭಾ ಕ್ಷೇತ್ರದ ನಾಗಪಟ್ಟಣಂನಲ್ಲಿ ಗಜ ಚಂಡಮಾರುತದಿಂದ ಹಾನಿಗೊಳಗಾಗಿದ್ದ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಪರಿಶೀಲನೆ ನಡೆಸಿ ವಾಪಾಸ್ಸಾಗುತ್ತಿರುವಾಗ ಏಕಾಏಕಿ ಉದ್ರಿಕ್ತರ ಗುಂಪೊಂದು ಕೈಯಲ್ಲಿ ಮಚ್ಚು ಹಿಡಿದು, ಸಚಿವರ ಕಾರಿಗೆ ಮುತ್ತಿಗೆ ಹಾಕಿದ್ದರು.

    ಸಚಿವರ ಕಾರನ್ನು ಸುತ್ತುವರಿದು, ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದರು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಎಚ್ಚೆತ್ತ ಕಾರು ಚಾಲಕ ರಭಸವಾಗಿ ಕಾರನ್ನು ಹಿಂದಕ್ಕೆ ಪಡೆದು, ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಘಟನೆ ಸಂಬಂಧ 6 ಮಂದಿಯನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆಯಿಂದಾಗಿ ಸಚಿವರಿಗೆ ಯಾವುದೇ ತೊಂದರೆಯಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೇಕೆದಾಟು ವಿಚಾರ ಸಮಸ್ಯೆ ಬಗೆಹರಿಸಲು ತಮಿಳುನಾಡಿಗೆ ಪತ್ರ ಬರೆದ ಡಿಕೆಶಿ

    ಮೇಕೆದಾಟು ವಿಚಾರ ಸಮಸ್ಯೆ ಬಗೆಹರಿಸಲು ತಮಿಳುನಾಡಿಗೆ ಪತ್ರ ಬರೆದ ಡಿಕೆಶಿ

    ಬೆಂಗಳೂರು: ಮೇಕೆದಾಟು ಸಮಸ್ಯೆಯನ್ನು ಬಗೆಹರಿಸಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರಿಗೆ  ಪತ್ರ ಬರೆದಿದ್ದಾರೆ.

    ರಾಜ್ಯದ ಮೇಕೆದಾಟು ಯೋಜನೆಗೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಒಪ್ಪಿಗೆ ಸೂಚಿಸಿದ್ದರ ಬೆನ್ನಲ್ಲೇ, ತಮಿಳುನಾಡು ಸರ್ಕಾರ ಯೋಜನೆಗೆ ತಡೆ ಕೋರುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿತ್ತು. ಅಲ್ಲದೇ ಕಾನೂನು ಹೋರಾಟಕ್ಕೂ ಸಹ ತಜ್ಞರನ್ನು ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಯ ವಾಸ್ತವಾಂಶ ತಿಳಿಸಲು ಡಿ.ಕೆ.ಶಿವಕುಮಾರ್ ಪತ್ರ ಬರೆದು, ಭೇಟಿಗೆ ಅವಕಾಶ ಕೋರಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಸರ್ಕಾರ ತಪ್ಪು ಕಲ್ಪನೆಯನ್ನು ಹೊಂದಿದೆ. ಹೀಗಾಗಿ ಯೋಜನೆಯ ವಾಸ್ತವಾಂಶ ತಿಳಿಸಲು ತಮಿಳುನಾಡು ಮುಖ್ಯಮಂತ್ರಿ ಭೇಟಿಗೆ ಪತ್ರ ಬರೆದಿದ್ದೇವೆ. ಮೇಕೆದಾಟು ವಿಚಾರದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಬಯಸಿದೆ. ಆದರೆ ಬಿಕ್ಕಟ್ಟು ಬಗೆಹರಿಸಲು ತಮಿಳುನಾಡು ಸಹಕಾರ ಕೊಡಬೇಕು ಎಂದು ಹೇಳಿದ್ದಾರೆ.

    ತಮಿಳುನಾಡಿನ ಜಾಗದಲ್ಲಿ ನಾವು ಮೇಕೆದಾಟು ಮಾಡುತ್ತಿಲ್ಲ. ನಮ್ಮ ಜಾಗದಲ್ಲಿ ನಾವು ಅಣೆಕಟ್ಟೆ ನಿರ್ಮಿಸುತ್ತಿದ್ದೇವೆ. ಮೇಕೆದಾಟು ಅಣೆಕಟ್ಟೆ ನೀರನ್ನು ಕೃಷಿಗೆ ಉಪಯೋಗಿಸಲು ಬರುವುದಿಲ್ಲ. ಮೇಕೆದಾಟು ನೀರನ್ನು ತಗೆದುಕೊಂಡು ನೀರಾವರಿ ಮಾಡಲು ಸಾಧ್ಯವಿಲ್ಲ. ನಮ್ಮ ರಾಜ್ಯದ ಹಣ ಮತ್ತು ನಮ್ಮ ಜಾಗದಲ್ಲಿ ಯೋಜನೆ ಮಾಡುತ್ತಿದ್ದೇವೆ. ಮೇಕೆದಾಟುವಿನಿಂದ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಬಹುದು. ಇದನ್ನು ಬಿಟ್ಟರೆ ಯಾವುದೇ ಬಳಕೆ ಮಾಡಿಕೊಳ್ಳಲು ಆಗುವುದಿಲ್ಲವೆಂದು ತಿಳಿಸಿದರು.

    ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಉಪಯೋಗವಾಗಲಿದೆ. ಮೇಕೆದಾಟು ಯೋಜನೆ ನಮ್ಮ ರಾಜ್ಯದ ಹಕ್ಕು. ನಮಗೆ ಬೇರೆ ರಾಜ್ಯದ ಮೇಲೆ ಯಾವುದೇ ದ್ವೇಷ ಇಲ್ಲ. ಅವರು ನಮ್ಮ ಸಹೋದರರು. ಅವರೂ ಸಹ ನಮ್ಮ ಜೊತೆ ಮಾತಾಡಬೇಕು. ನಾವು ಅವರ ಜೊತೆ ಮಾತಾಡಬೇಕು. ಅವರನ್ನು ಬಿಟ್ಟು ನಾವು ಯೋಜನೆ ಮಾಡಲು ಆಗುವುದಿಲ್ಲವೆಂದು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ಎಚ್‍ಡಿಕೆ ಎದುರೇ ವಾಕ್ಸಮರ ನಡೆಸಿದ ರೇವಣ್ಣ-ಡಿಕೆಶಿ!

    ಸಿಎಂ ಎಚ್‍ಡಿಕೆ ಎದುರೇ ವಾಕ್ಸಮರ ನಡೆಸಿದ ರೇವಣ್ಣ-ಡಿಕೆಶಿ!

    ಬೆಂಗಳೂರು: ನೀರಾವರಿ ಯೋಜನೆಯ ವಿಚಾರವಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮುಖದಲ್ಲೇ ಜಟಾಪಟಿಗೆ ಬಿದ್ದಿದ್ದಾರೆ.

    ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ಸದಾ ಸುದ್ದಿಯಲ್ಲಿರುವ ರೇವಣ್ಣ ಹಾಗೂ ಡಿಕೆ ಶಿವಕುಮಾರ್ ಪರಸ್ಪರ ವಾಕ್ಸಮರ ನಡೆಸಿದ್ದಾರೆ. ನೀರಾವರಿ ಯೋಜನೆ ವಿಚಾರವಾಗಿ ಇಬ್ಬರ ನಡುವೆ ಜಟಾಪಟಿ ಜೋರಾಗಿಯೇ ನಡೆದಿದೆ. ಇಂದು ವಿಧಾನಸಭೆಯ ಕಲಾಪದ ವೇಳೆ ರೇವಣ್ಣ ಹಾಸನ ಜಿಲ್ಲೆ ಜೆಡಿಎಸ್ ಶಾಸಕರ ಪರ ಬ್ಯಾಟಿಂಗ್ ಮಾಡುತ್ತಾ, ಹೆಚ್ಚುವರಿ ವಿಷಯವನ್ನಾಗಿ ನೀರಾವರಿ ಯೋಜನೆಯನ್ನು ಸದನದಲ್ಲಿ ಪ್ರಸ್ತಾಪಿಸಿದರು. ಈ ವೇಳೆ ರೇವಣ್ಣರ ನಿರ್ಧಾರಕ್ಕೆ ಡಿಕೆ ಶಿವಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲೇ, ಇವೆಲ್ಲಾ ನಡೆಯುವುದಿಲ್ಲವೆಂದು ಖಾರವಾಗಿ ಉತ್ತರಿಸಿದ್ದಾರೆ ಎನ್ನಲಾಗುತ್ತಿದೆ.

    ನಮ್ಮ ಶಾಸಕರದ್ದು ಸಾಕಷ್ಟು ನೀರಾವರಿ ಯೋಜನೆಗಳಿವೆ. ಎಲ್ಲವನ್ನು ಒಟ್ಟಿಗೆ ಮಾಡೋಣ. ಈಗ ನಿಮ್ಮ ಶಾಸಕರದ್ದು ಮಾತ್ರ ತಂದ್ರೆ ಒಪ್ಪಿಗೆ ಕೊಡುವುದಕ್ಕೆ ಆಗಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರಂತೆ. ಅದೇ ವೇಳೆ ಸಚಿವ ವೆಂಕರಮಣಪ್ಪ ಕೂಡ ಮಾತನಾಡಿ, ನಮ್ಮದೂ ಇದೇ, ಮೊದಲು ಅದನ್ನು ಮಾಡಿ ಎಂದು ಪಟ್ಟು ಹಿಡಿದರು ಎಂಬ ಮಾಹಿತಿಗಳು ಲಭ್ಯವಾಗಿವೆ.

    ಈ ವೇಳೆ ಸದನದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ರೇವಣ್ಣ ಹಾಗೂ ಡಿಕೆಶಿಯವರ ಜಟಾಪಟಿಯ ನಡುವೆ, ಅವರು ತಂದ ವಿಷಯವನ್ನು ಒಪ್ಪದೇ, ಸದನವನ್ನು ಮುಂದೂಡಿದರು. ಇಷ್ಟೆಲ್ಲಾ ಸನ್ನಿವೇಶ ನಡೆಯುತ್ತಿದ್ದರೂ ಸಿಎಂ ಕುಮಾರಸ್ವಾಮಿ ಮಾತ್ರ ಸುಮ್ಮನೆ ಕುಳಿತ್ತಿದ್ದರು ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಂದಾ ನಾಡಿಗೆ ಸಕ್ಕರೆ ನಾಡಿನ ನಾಯಕ ಬಂದಿದ್ದೇ ಅಪರಾಧ: ಡಿಕೆಶಿ ವಿರುದ್ಧ ಕೋಟ ಪರೋಕ್ಷ ವಾಗ್ದಾಳಿ

    ಕುಂದಾ ನಾಡಿಗೆ ಸಕ್ಕರೆ ನಾಡಿನ ನಾಯಕ ಬಂದಿದ್ದೇ ಅಪರಾಧ: ಡಿಕೆಶಿ ವಿರುದ್ಧ ಕೋಟ ಪರೋಕ್ಷ ವಾಗ್ದಾಳಿ

    ಬೆಳಗಾವಿ: ಸರ್ಕಾರ ಅಭದ್ರವಾಗಿದೆ ಅನ್ನೋದಕ್ಕಿಂತ ಭದ್ರವಾಗಿದೆ ಅನ್ನೋದೆ ಹೆಚ್ಚಿಸಲಿ. ಸ್ವಾಭಾವಿಕವಾಗಿ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವಂತಹ ಯಾವುದೇ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡಿಲ್ಲ. ಪಾಲ್ಗೊಳ್ಳುವುದೂ ಇಲ್ಲ. ಆದ್ರೆ ಅಸ್ಥಿರಗೊಂಡಂತಹ ಸರ್ಕಾರವೊಂದು ತಾನಾಗಿಯೇ ಉರುಳಿ ಬಿದ್ರೆ ಅದಕ್ಕೆ ಬಿಜೆಪಿ ಜವಾಬ್ದಾರಿ ಅಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಇಲ್ಲಿಯವರೆಗೆ ಭದ್ರವಾಗಿರಲಿಲ್ಲ. ಅಭದ್ರತೆಯಲ್ಲಿ ಇತ್ತು. ಅವರ ಆಂತರಿಕ ವಿವಾದಗಳು ಒಂದಷ್ಟು ಪರಾಕಷ್ಟೆಗೇರಿ, ಬಹುತೇಕವಾಗಿ ಸರ್ಕಾರ ತನ್ನ ಕುಸಿತವನ್ನು ಕಾಣಲು ಇಂದಿನ ಅಧಿವೇಶನದ ಸಂದರ್ಭದಲ್ಲಿ ದಟ್ಟವಾಗಿ ಕಂಡುಬಂತು ಅಂತ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ರಮೇಶ್ ಜಾರಕಿಹೊಳಿಯವರು ಮಾನಸಿಕವಾಗಿ ಸರ್ಕಾರದಿಂದ ದೂರ ಉಳಿದು ಬಹಳ ಸಮಯವಾಗಿದೆ. ಈ ವಿಚಾರ ಸಾಮಾನ್ಯವಾಗಿ ಇಡೀ ರಾಜ್ಯದ ಜನತೆಗೆ ಗೊತ್ತಾಗಿರೋ ವಿಚಾರವಾಗಿದೆ. ಆದ್ರೆ ಅಧಿಕೃತವಾಗಿ ಇನ್ನಷ್ಟೇ ಆಗಬೇಕಾಗಿದೆ. ಇದೇ ವೇಳೆ ಸಚಿವ ಡಿಕೆ ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ನಡುವಿನ ಗಲಾಟೆ ಸರ್ಕಾರದ ಮೇಲೆ ಪರಿಣಾಮ ಬೀರುತ್ತದಾ ಎನ್ನುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕುಂದಾ ನಾಡಿಗೆ ಸಕ್ಕರೆ ನಾಡಿನ ನಾಯಕ ಬಂದಿದ್ದೇ ಅಪರಾಧವಾಗಿದೆ. ಯಾಕಂದ್ರೆ ಇಲ್ಲಿ ಬಹಳ ವರ್ಷಗಳ ಕಾಲ ರಾಜಕಾರಣ ಮಾಡಿದವರ ಮೇಲೆ ಇದು ಪರಿಣಾಮ ಬೀರಿದೆ. ಈ ಕುರಿತು ರಮೇಶ್ ಜಾರಕಿಹೊಳಿ ಏನು ಹೇಳಿದ್ದಾರೆ ಅದಷ್ಟೇ ಮುಂದಿರುವಂತಹ ವಿಚಾರವಾಗಿದೆ. ಆದ್ರೆ ಈ ವಿಚಾರದಲ್ಲಿ ಬಿಜೆಪಿ ಸ್ಪಷ್ಟವಾದ ನಿಲುವನ್ನು ಹೊಂದಿದೆ ಅಂದ್ರು.

    ಇಂದಿನ ಸಂದಿಗ್ಧ ಸ್ಥಿತಿಯಲ್ಲಿ ಪಕ್ಷಕ್ಕೆ 10 ಮಂದಿ ಶಾಸಕರು ಬಂದ್ರೂ ಬೆಂಬಲ ಕೊಡುವುದಾಗಿ ಈಗಾಗಲೇ ರಾಜ್ಯಾಧ್ಯಕ್ಷರು ಹಾಗೂ ಬಿಜೆಪಿಯ ಎಲ್ಲಾ ನಾಯಕರು ಸ್ಪಷ್ಟವಾಗಿ ಹೇಳಿದ್ದೇವೆ. ಅಲ್ಲದೇ ಸರ್ಕಾರ ರಚನೆ ಮಾಡುತ್ತೇವೆ. ರಾಜ್ಯದ ಜನರ ಭಾವನೆ ಅವರು ಬಿಜೆಪಿಯೇ ಅಧಿಕಾರಕ್ಕೆ ಬರಬೇಕು ಅನ್ನೊದು ಇದೆ. ಇದೇ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿಯವರು ಬಿಜೆಪಿಯವರ ಸಂಪರ್ಕದಲ್ಲಿದ್ದಾರೆ ಅನ್ನೋ ಗುಮಾನಿಯ ಕುರಿತು ಮಾತನಾಡಿದ ಶ್ರೀನಿವಾಸ ಪೂಜಾರಿ, ಸ್ವಾಭಾವಿಕವಾಗಿ ಎಲ್ಲಿ ತೃಪ್ತಿಯಾಗುತ್ತದೋ ಆ ಕಡೆ ಅವರು ಗಮನವನ್ನು ಕೊಡುತ್ತಿದ್ದಾರೆ. ಹಾಗೆಯೇ ಅವರು ಪಕ್ಷಕ್ಕೆ ಬರಬೇಕು ಅನ್ನುವ ಆಸೆಯಿದೆ. ಅವರು ಬರುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ. ಒಟ್ಟಿನಲ್ಲಿ ರಮೇಶ್ ಜಾರಕಿಹೊಳಿಯವರು ಪಕ್ಷಕ್ಕೆ ಬಂದ್ರೆ ಸ್ವಾಗತಿಸುವುದಾಗಿ ಅವರು ತಿಳಿಸಿದ್ರು.

    ಉತ್ತರ ಕನ್ನಡ ಶಾಶ್ವತವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲ್ಲಿಯ ಜನ ಜೀವನ, ಮೂಲಭೂತ ಸೌಕರ್ಯ, ನೀರಾವರಿ, ಆರೋಗ್ಯ ಹಾಗೂ ಶಿಕ್ಷಣದಲ್ಲಿ ಕನಿಷ್ಠ ಪ್ರಗತಿಯಲ್ಲಿದೆ ಅನ್ನುವ ಸದ್ಯದ ಅಂಕಿ-ಅಂಶ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಕಡೆ ವಿಶೇಷವಾದ ಗಮನಕೊಡಬೇಕು ಅನ್ನೋ ಒತ್ತಾಯವನ್ನು ನಾವು ಸದನದಲ್ಲಿ ಮಾಡಿದ್ದೇವೆ. ಬರೀ ಮಾತುಗಳಲ್ಲಿ ಹೇಳಿದ್ರೆ ಸಾಲದು. ಸರ್ಕಾರ ಈ ಬಗ್ಗೆ ದಟ್ಟವಾದ ನಿಲುವು ತೆಗೆದುಕೊಳ್ಳಬೇಕು. ಈ ಮೂಲಕ ಉತ್ತರ ಕರ್ನಾಟಕ ಅಭಿವೃದ್ಧಿಗೆ ಕೆಲಸ ಮಾಡಬೇಕು ಅಂದ್ರು.

    ಒಟ್ಟಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಈ ಹಿಂದೆಯೂ ಬಡವರ ಪರ ಕೆಲಸ ಮಾಡಿದೆ. ಮುಂದೆಯೂ ಬಡವರ ಪರ ಕೆಲಸ ಮಾಡಲಿದೆ ಅಂತ ಅವರು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದರಾಮಯ್ಯ ಬಣದಿಂದ ಸಚಿವ ಸ್ಥಾನಕ್ಕೆ ಲಾಬಿ

    ಸಿದ್ದರಾಮಯ್ಯ ಬಣದಿಂದ ಸಚಿವ ಸ್ಥಾನಕ್ಕೆ ಲಾಬಿ

    – ಪರಮೇಶ್ವರ್ ನಾಯ್ಕ್, ಅಜೇಯ ಸಿಂಗ್, ಪ್ರಸಾದ ಅಬ್ಬಯ್ಯ ಕಾವೇರಿ ನಿವಾಸಕ್ಕೆ ಭೇಟಿ

    ಬೆಂಗಳೂರು/ರಾಯಚೂರು: ಸಂಪುಟ ವಿಸ್ತರಣೆ ಕುರಿತು ಕಾಂಗ್ರೆಸ್ ನಾಯಕರು ಚರ್ಚೆ ನಡೆಸುತ್ತಿರುವ ಬೆನ್ನಲ್ಲೇ ಶಾಸಕರು ಮಂತ್ರಿಗಿರಿಗೆ ಲಾಬಿ ನಡೆಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಸಚಿವ ಸ್ಥಾನದ ಆಕಾಂಕ್ಷಿಗಳು ಭೇಟಿ ನೀಡುತ್ತಿದ್ದಾರೆ.

    ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಹೂವಿನ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್, ಜೇವರ್ಗಿಯ ಅಜೇಯ ಸಿಂಗ್ ಹಾಗೂ ಹುಬ್ಬಳ್ಳಿ-ಧಾರವಾಡ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ಅವರು ಭೇಟಿ ನೀಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಮಾಜಿ ಸಿಎಂ ಮೂಲಕ ಮಂತ್ರಿಗಿರಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಲಾಬಿಗೆ ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಇತ್ತೀಚೆಗೆ ಬಾಗಲಕೋಟೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಮಂತ್ರಿಗಿರಿ ಕೈ ತಪ್ಪಿದ್ದಕ್ಕೆ ಯಾವುದೇ ಶಾಸಕರು ಅಸಮಾಧಾನಗೊಂಡಿಲ್ಲ. ಅಲ್ಲದೇ ಸಂಪುಟ ವಿಸ್ತರಣೆಯಲ್ಲಿ ಬಾಗಲಕೋಟೆ ನಾಯಕರಿಗೆ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದ ಪರೋಕ್ಷವಾಗಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಟಾಂಗ್ ಕೊಟ್ಟಿದ್ದರು.

    ಮಂತ್ರಿಗಿರಿಯಿಂದ ಎಂ.ಬಿ.ಪಾಟೀಲ್ ಅವರನ್ನು ಕೈಬಿಟ್ಟರೆ ನಮಗೆ ಅವಕಾಶ ಸಿಗಬಹುದು ಎನ್ನುವ ಲೆಕ್ಕಾಚಾರ ಉಳಿದ ಶಾಸಕರಲ್ಲಿ ಮೂಡಿದೆ. ಇದರಿಂದಾಗಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿ ಸಚಿವ ಸ್ಥಾನಕ್ಕೆ ಏರುವ ತವಕದಲ್ಲಿ ಅನೇಕ ನಾಯಕರು ಮುಂದಾಗುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಬಿ.ಸಿ.ಪಾಟೀಲ್ ಹಾಗೂ ಎಂ.ಬಿ.ಪಾಟೀಲ್ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದರು.

    ನಾನು ಆಕಾಂಕ್ಷಿ:
    ಸಂಪುಟ ವಿಸ್ತರಣೆಯಲ್ಲಿ ನಾನೂ ಪ್ರಬಲ ಆಕಾಂಕ್ಷಿಯಾಗಿದ್ದು, ನನಗೆ ಸಚಿವ ಸ್ಥಾನ ನೀಡುವ ಭರವಸೆಯನ್ನು ಪಕ್ಷದ ವರಿಷ್ಠರು ನೀಡಿದ್ದಾರೆ ಎಂದು ಮಾನ್ವಿಯ ಜೆಡಿಎಸ್ ಶಾಸಕ ವೆಂಕಟಪ್ಪ ನಾಯಕ್ ಹೇಳಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ವಾಲ್ಮಿಕಿ ನಾಯಕ ಸಮಾಜದಿಂದ ನಾನೊಬ್ಬನೇ ಗೆದ್ದಿರುವುದು. ಹೀಗಾಗಿ ನನಗೆ ಸಚಿವ ಸ್ಥಾನ ನೀಡುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. ಎರಡು ಸಚಿವ ಸ್ಥಾನಗಳಲ್ಲಿ ಈಗಾಗಲೇ ಒಂದು ಸ್ಥಾನವನ್ನು ಅಲ್ಪಸಂಖ್ಯಾತ ಶಾಸಕರಿಗೆಂದು ನಿರ್ಧರಿಸಲಾಗಿದೆ. ಎನ್.ಮಹೇಶ್ ರಾಜಿನಾಮೆಯಿಂದ ತೆರವಾದ ಸ್ಥಾನವನ್ನು ನನಗೆ ನೀಡಬೇಕು. ರಾಜ್ಯದ ನಾಯಕ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಲು ಮಂತ್ರಿಗಿರಿ ನನಗೇ ನೀಡಬೇಕು ಅಂತ ವೆಂಕಟಪ್ಪ ನಾಯಕ್ ಪಟ್ಟುಹಿಡಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿಯವರ ಆಪರೇಷನ್ ಕಮಲಕ್ಕೆ ಔಷಧಿ ನಮ್ಮ ಬಳಿಯಿದೆ – ಡಿಕೆಶಿ

    ಬಿಜೆಪಿಯವರ ಆಪರೇಷನ್ ಕಮಲಕ್ಕೆ ಔಷಧಿ ನಮ್ಮ ಬಳಿಯಿದೆ – ಡಿಕೆಶಿ

    ಬೆಂಗಳೂರು: ನಾವು ಆಪರೇಷನ್ ಮಾಡಲ್ಲ. ಕಾಂಗ್ರೆಸ್ ಶಾಸಕರೇ ಬಂದರೆ ಸರ್ಕಾರ ಮಾಡ್ತೀವಿ ಅನ್ನೋ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಬಿಜೆಪಿಯವರು ಆಪರೇಷನ್ ಮಾಡ್ತಿರೋದು ಸತ್ಯ ಅಂತ ಪುನರುಚ್ಛರಿಸಿದ್ದಾರೆ.

    ಇಂದು ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ಆಪರೇಷನ್ ಕಮಲ ಮಾಡ್ತಿರೋದು ಸತ್ಯ. ಈ ಕುರಿತು ಸಮಯ ಬಂದಾಗ ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ಆಪರೇಷನ್ ಕಮಲಕ್ಕೆ ನಮ್ಮ ಬಳಿ ಔಷಧಿಯಿದೆ ಎಂದರು.

    ಆಪರೇಷನ್ ಮಾಡ್ತಿಲ್ಲ ಅನ್ನೋ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಹೇಳಿಕೆ ಗಮನಿಸಿದ್ದೇನೆ. ಸುರ್ಜಿತ್ ನನ್ನ ಪಿಎ ಅಲ್ಲ. ಶಾಸಕ ಶ್ರೀರಾಮುಲು ಅಣ್ಣನವರ ಪಿಎ ಆಗಿದ್ದಾರೆ. ಶಾಸಕ ಅಶ್ವಥ್ ನಾರಾಯಣ ಮೂರು ದಿನದ ಹಿಂದೆ ಬ್ರಿಗೇಡ್ ಟವರ್ ನಲ್ಲಿ ಯಾರನ್ನು ಭೇಟಿ ಮಾಡಿದ್ರು ಎಂದು ಹೇಳಲಿ. ಜನಾರ್ದನ ರೆಡ್ಡಿ ಸೋಮವಾರ ರಾತ್ರಿ ಜಿಂದಾಲ್ ಆಸ್ಪತ್ರೆಯಲ್ಲಿ ಶಾಸಕ ಸುಧಾಕರ್ ಅವರನ್ನು ಯಾಕೆ ಭೇಟಿ ಮಾಡಿದ್ರು ಎಂದು ಹೇಳಲಿ ಅಂತ ಸವಾಲ್ ಹಾಕಿದ್ರು.

    ಬಿಜೆಪಿಯವರು ಬೇಕಾದ್ರೆ ಇನ್ನೂ ನೂರು ಜನರನ್ನು ಭೇಟಿ ಮಾಡಲಿ. ನೂರಾರು ಕೋಟಿ ಆಫರ್ ಮಾಡಲಿ. ಸುರ್ಜಿತ್ ತಮ್ಮ ಪಿಎ ಅಲ್ಲದೇ ಹೋದರೆ ಶ್ರೀರಾಮುಲು ಯಾಕೆ ಹಗಲು ರಾತ್ರಿ ಹಿಂದೆ ಇಟ್ಟುಕೊಂಡು ಓಡಾಡುತ್ತಿದ್ದಾರೆ ಅಂತ ಪ್ರಶ್ನಿಸಿದ್ರು. ಇನ್ನೊಂದು ಕ್ಯಾಂಪ್ ನಲ್ಲಿ ಏನಾಗುತ್ತಿದೆ ಎಂದು ಸಿಟಿ ರವಿ, ಜಗದೀಶ್ ಶೆಟ್ಟರ್ ಗೆ ಗೊತ್ತಿಲ್ಲ. ಅವರ ಪಕ್ಷದ ಇನ್ನೊಂದು ಕ್ಯಾಂಪ್ ನಲ್ಲಿ ಇದೆಲ್ಲವನ್ನ ಕೇಳಿಕೊಳ್ಳಲಿ ಅಂತ ಚಾಲೆಂಜ್ ಮಾಡಿದ್ರು. ಇದನ್ನೂ ಓದಿ: ಸಿದ್ದರಾಮಯ್ಯನವರ ಬಗ್ಗೆ ತುಚ್ಛವಾಗಿ ಮಾತನಾಡಿದವನ ಜೊತೆ ಯಾವ ಜನ್ಮದಲ್ಲೂ ಮಾತನಾಡಲಾರೆ: ಸುಧಾಕರ್

    ಬಿಜೆಪಿ ಅವರು ಹೇಳೋದು ಒಂದು ಮಾಡೋದು ಒಂದು. ಇದಕ್ಕೆ ನಾವು ಬಗ್ಗಲ್ಲ. ನಾವು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯೊಲ್ಲ. ಅವರು ಏನು ಬೇಕಾದ್ರೂ ಮಾಡಲಿ. ಅದಕ್ಕೆ ಬೇಕಾದ ಔಷಧಿ ನಮ್ಮ ಬಳಿ ಇದೆ. ಸರ್ಕಾರಕ್ಕೆ ಏನು ಆಗೊಲ್ಲ. ಇನ್ನು ಸಚಿವ ಸಂಪುಟದ ವಿಸ್ತರಣೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೋಡಿಕೊಳ್ತಾರೆ ಅಂತ ಇದೇ ವೇಳೆ ತಿಳಿಸಿದ್ರು.

    ಪ್ರಧಾನಿ ನರೇಂದ್ರ ಮೋದಿ ಅವರಿಂದ ಕಾಂಗ್ರೆಸ್ ಎ ಟೀಂ, ಬಿ ಟೀಂ ಅನ್ನೋ ಆರೋಪ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆ ಆದ ನಂತ್ರ ಅದಕ್ಕೆ ಉತ್ತರ ಕೊಡೋಣ. ಬಿಜೆಪಿ ಏನೇ ಮಾಡಿದ್ರು ಸರ್ಕಾರಕ್ಕೆ ಆಪತ್ತು ಇಲ್ಲ. ನಮಗೂ ರಾಜಕೀಯ ಬರುತ್ತದೆ. ಸುಧಾಕರ್ ಬಳಿ ಯಾರು ಮಾತಾಡಿದ್ರು? ಅಶ್ವಥ್ ನಾರಾಯಣ, ಜನಾರ್ದನ ರೆಡ್ಡಿ ಯಾರ ಬಳಿ ಮಾತಾಡಿದ್ರು ಅಂತ ನಮಗೆ ಗೊತ್ತಿದೆ. ನಾವು ಸುಮ್ಮನೆ ಕುಳಿತಿಲ್ಲ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಂಪಿ ಉತ್ಸವ ಆಚರಣೆ ಸಂಬಂಧ ಸಚಿವ ಡಿಕೆಶಿ ಎಚ್ಚರಿಕೆ

    ಹಂಪಿ ಉತ್ಸವ ಆಚರಣೆ ಸಂಬಂಧ ಸಚಿವ ಡಿಕೆಶಿ ಎಚ್ಚರಿಕೆ

    ಬೆಂಗಳೂರು: ಹಂಪಿ ಉತ್ಸವ ಆಚರಣೆ ಕುರಿತು ಯಾರು ರಾಜಕೀಯ ಮಾಡಬಾರದು ಅಂತ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

    ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಂಪಿ ಉತ್ಸವ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ವರದಿ ನೀಡಿದ ಬಳಿಕ ಉತ್ಸವದ ಬಗ್ಗೆ ನಿರ್ಧಾರ ಮಾಡ್ತೀವಿ ಅಂದ್ರು.

    ಆ ಭಾಗದಲ್ಲಿ ಹೆಚ್ಚು ಬರಗಾಲವಿದೆ. ಜನರ ಹಿತ ನಮಗೆ ಮುಖ್ಯ. ಉತ್ಸವ ಮಾಡಲು ಒಂದೆರಡು ದಿನ ಸಿದ್ಧತೆ ನಮಗೆ ಸಾಕಾಗೊಲ್ಲ. ಹೀಗಾಗಿ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ಇದೇ ವೇಳೆ ಭಿಕ್ಷೆ ಎತ್ತಿ ಉತ್ಸವ ಮಾಡ್ತೀನಿ ಅಂದವರಿಗೆ ಟಾಂಗ್ ನೀಡಿದ ಅವರು, ಇಂತಹ ವಿಚಾರದಲ್ಲಿ ರಾಜಕೀಯ ಸರಿಯಲ್ಲ. ರಾಜಕಾರಣ ಮಾಡೋರಿಗೆ ಈಗಾಗಲೇ ಅನೇಕ ಸಾರಿ ಉತ್ತರ ಸಿಕ್ಕಿದೆ ಎಂದು ಮಾಜಿ ಸಚಿವ ಶ್ರೀರಾಮುಲು, ಜನಾರ್ದನ ರೆಡ್ಡಿಗೆ ತಿರುಗೇಟು ನೀಡಿದರು.

    ಸೋಲಿನ ಭಯಕ್ಕೆ ಬಂಧನ!
    ಚಂದ್ರಶೇಖರ್ ರಾವ್ ಸೋಲಿನ ಭಯದಲ್ಲಿ ತೆಲಂಗಾಣ ಕಾಂಗ್ರೆಸ್ ಕಾರ್ಯಾಧ್ಯಕ್ಷ ರೇವಂತ್ ರೆಡ್ಡಿಯನ್ನ ಬಂಧಿಸಿದ್ದಾರೆ ಅಂತ ಸಚಿವ ತೆಲಂಗಾಣ ಉಸ್ತುವಾರಿ ಡಿಕೆಶಿವಕುಮಾರ್ ಆರೋಪಿಸಿದ್ದಾರೆ. ಬೆಳಗ್ಗೆ 4 ಗಂಟೆಗೆ ರೇವಂತ್ ರೆಡ್ಡಿ ಅವರನ್ನು ಬಂಧಿಸಿದ್ದಾರೆ. ಮನೆ ಬಾಗಿಲು, ಬೆಡ್ ರೂಂ ಒಡೆದು ಹಾಕಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಂದ್ರಶೇಖರ್ ರಾವ್ ಸೋಲಿನ ಭೀತಿಯಿಂದಾಗಿ ಹೀಗೆ ಮಾಡ್ತಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ಚಂದ್ರಶೇಖರ್ ರಾವ್ ಮಾಡಿದ್ದಾರೆ. ಇದನ್ನ ನಾನು ಖಂಡಿಸುತ್ತೇನೆ ಅಂದ್ರು.

    ಘಟನೆ ಕುರಿತು ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡ್ತೀವಿ. ಚಂದ್ರಶೇಖರ್ ರಾವ್ ಗೆ ಸೋಲಿನ ಭೀತಿಯಿಂದ ಜನರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ತೆಲಂಗಾಣ ಜನರಿಗೆ ಚಂದ್ರಶೇಖರ್ ರಾವ್ ದ್ರೋಹ ಮಾಡಿದ್ದಾರೆ ಅಂತ ಗುಡುಗಿದ ಅವರು, ತೆಲಂಗಾಣದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಗೆಲ್ಲುತ್ತೆ. ಸಂಪೂರ್ಣ ಬಹುಮತ ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಬರುತ್ತೆ ಅಂತ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಹಸಸಿಂಹನ ಸಮಾಧಿ ವಿಚಾರದಲ್ಲಿ ನಾವು ಅಸಹಾಯಕರು – ಡಾ. ಜಯಮಾಲಾ

    ಸಾಹಸಸಿಂಹನ ಸಮಾಧಿ ವಿಚಾರದಲ್ಲಿ ನಾವು ಅಸಹಾಯಕರು – ಡಾ. ಜಯಮಾಲಾ

    ಉಡುಪಿ: ಸಾಹಸಸಿಂಹ ವಿಷ್ಣುವರ್ಧನ್ ಸಮಾಧಿ ವಿಚಾರದಲ್ಲಿ ನಾವು ಅಸಹಾಯಕರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಒಪ್ಪಿಕೊಂಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತಿ ವಿಷ್ಣುವರ್ಧನ್ ಅವರ ಬೇಸರ ಸಹಜವಾದದ್ದು. ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ ಒಂಬತ್ತು ವರ್ಷಗಳಾಗಿದೆ. ಭಾರತಿ ಅವರ ಕುಟುಂಬಕ್ಕೆ ನಾನು ಬೆಲೆ ಕೊಡುತ್ತೇನೆ. ಮೈಸೂರಿನಲ್ಲಿ ಸ್ಮಾರಕ ಆಗಬೇಕೆಂದು ಭಾರತಿ ಕೇಳುತ್ತಿದ್ದಾರೆ. ಏಕೆಂದರೆ ಮೈಸೂರು ಅಂದರೆ ವಿಷ್ಣುವರ್ಧನ್ ಅವರಿಗೆ ಪಂಚ ಪ್ರಾಣ. ಅಲ್ಲದೇ ವಿಷ್ಣು ಅವರ ಆಸೆ ಏನು ಎಂಬುದು ಅವರ ಕುಟುಂಬಕ್ಕೆ ಮಾತ್ರ ಗೊತ್ತಿರುತ್ತದೆ. ಅಲ್ಲದೇ ತನ್ನ ಆಸೆ ಏನು ಎಂಬುದನ್ನು ವಿಷ್ಣುವರ್ಧನ್ ಬದುಕಿದ್ದಾಗ ಕುಟುಂಬದವರಲ್ಲಿ ಹೇಳಿರುತ್ತಾರೆ ಎಂದು ಹೇಳಿದರು.

    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸಹ ಸಿನೆಮಾ ರಂಗದವರೇ. ಹೀಗಾಗಿ ವಿಷ್ಣು ಸ್ಮಾರಕ ವಿಚಾರಕ್ಕೆ ಯಾವುದೇ ಭಿನ್ನಾಭಿಪ್ರಾಯ ಬರಲ್ಲ. ಭೂಮಿಗೆ ಸಂಬಂಧಪಟ್ಟ ಸಣ್ಣ ತಕರಾರು ಇದೆ. ಗುರುವಾರ ಮುನಿರತ್ನ ಹಾಗೂ ಮಂಜು ಚರ್ಚೆ ನಡೆಸಿ, ಸಂಧಾನ ಮಾಡಿದ್ದಾರೆ. ಈ ಬಗ್ಗೆ ಖುದ್ದು ಪತ್ರದ ಮುಖಾಂತರ ಭಾರತಿ ಅವರಿಗೂ ವಿಚಾರ ತಿಳಿಸಿದ್ದಾರೆ ಎಂದರು.

    ವಿಷ್ಣು ಸಮಾಧಿ ವಿಚಾರದಲ್ಲಿ ನಮಗೆಲ್ಲರಿಗೂ ಅಸಹಾಯಕತೆ ಇದೆ. ಎಲ್ಲಿ ಸ್ಮಾರಕ ಮಾಡಲು ಹೋದರೂ, ಒಂದು ವಿವಾದ ಆಗುತ್ತಿದೆ. ರಾಜ್ಯದಲ್ಲಿ ಯಾಕೆ ಹೀಗಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಏನೇ ಆದರೂ ನಾವೆಲ್ಲರೂ ಭಾರತಿ ವಿಷ್ಣುವರ್ಧನ್ ಅವರ ಪರ ನಿಲ್ಲುತ್ತೇವೆಂದು ತಿಳಿಸಿದರು.

    ಅಂಬರಿಶ್ ಒಬ್ಬ ಮಹಾನ್ ನಾಯಕ. ನಿಜವಾದ ನಾಯಕ, ಜನರ ಹೃದಯದಲ್ಲಿ ವಾಸ ಮಾಡಿದ ನಟ ಅಂಬರೀಷ್ ಸ್ಮಾರಕಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.

    ಇದೇ ವೇಳೆ ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ಮುಂಬೈ ಗೆ ತೆರಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹೋಗೋರು ಹೋಗ್ತಾ ಇರ್ತಾರೆ ಸಾರ್, ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಭದ್ರವಾಗಿದೆ. ಅಸಮಾಧಾನವೆಂಬುದು ಎಲ್ಲಾ ಸುಳ್ಳು ಇದೊಂದು ಅಪಪ್ರಚಾರ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv