Tag: minister

  • ಇಂದೇ ಮಂತ್ರಿ ಆಗ್ತೇವೆ ಅಂದ್ಕೊಂಡವರಿಗೆ ಗೌಡ್ರ ಕುಟುಂಬದಿಂದ ಶಾಕ್

    ಇಂದೇ ಮಂತ್ರಿ ಆಗ್ತೇವೆ ಅಂದ್ಕೊಂಡವರಿಗೆ ಗೌಡ್ರ ಕುಟುಂಬದಿಂದ ಶಾಕ್

    ಬೆಂಗಳೂರು: ಕಾಂಗ್ರೆಸ್ ಕೋಟಾದ ಸಚಿವ ಸ್ಥಾನ ಭರ್ತಿಗೆ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಘಳಿಗೆ ನೋಡಿ ಮುಹೂರ್ತ ಫಿಕ್ಸ್ ಮಾಡಿದ್ದರು. ಆದರೆ ಈಗ ಜೆಡಿಎಸ್ ಕೋಟಾದ ಸಚಿವ ಸ್ಥಾನ ಭರ್ತಿ ಸಮಯ ಹಾಗೂ ಗಳಿಗೆ ಕೂಡಿ ಬಂದಿಲ್ಲ ಎಂದು ಹೇಳಲಾಗುತ್ತಿದೆ.

    ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ಸ್ಥಾನ ಭರ್ತಿಯಾಗುವುದಿಲ್ಲ. ಜೆಡಿಎಸ್‍ನಲ್ಲಿ ಎರಡು ಸ್ಥಾನ ಖಾಲಿ ಇದ್ದು, ಕಾಂಗ್ರೆಸ್ ಸಚಿವರ ಜೊತೆ ಪ್ರಮಾಣ ವಚನ ಸ್ವೀಕರಿಸುವುದಿಲ್ಲ. ಸ್ಥಾನ ಹಂಚಿಕೆ ಫೈನಲ್ ಆಗದ ಹಿನ್ನೆಲೆಯಲ್ಲಿ ಜೆಡಿಎಸ್ ಸ್ಥಾನ ಭರ್ತಿ ಅನುಮಾನವಾಗಿದೆ.

    ಇಂದು ಸಮಯ ಸರಿ ಇಲ್ಲದ ಕಾರಣ ಸ್ಥಾನ ಭರ್ತಿಗೆ ಜೆಡಿಎಸ್ ಹಿಂದೇಟು ಹಾಕುತ್ತಿದೆ. ಮತ್ತೊಂದು ದಿನ ಸ್ಥಾನ ಭರ್ತಿ ಮಾಡಿ ಪ್ರಮಾಣ ವಚನ ಕಾರ್ಯಕ್ರಮ ಮಾಡಲು ಜೆಡಿಎಸ್ ವರಿಷ್ಠರು ನಿರ್ಧಾರ ಮಾಡಿದ್ದಾರೆ.

    ಧನುರ್ಮಾಸ ಆಗಿರುವುದಕ್ಕೆ ಜೆಡಿಎಸ್‍ನಿಂದ ಯಾರನ್ನು ಮಂತ್ರಿ ಮಾಡುವುದು ಬೇಡ ಎಂದು ಮಾಜಿ ಪ್ರಧಾನಿ ದೇವೇಗೌಡ ಮತ್ತು ರೇವಣ್ಣ ತೀರ್ಮಾನಕ್ಕೆ ಬಂದಿದ್ದಾರೆ. ಇದರೊಂದಿಗೆ ಇಂದು ಮಂತ್ರಿ ಆಗುತ್ತೇವೆ ಎನ್ನುವ ಕನವರಿಕೆಯಲ್ಲಿದ್ದ ಆಕಾಂಕ್ಷಿಗಳಿಗೆ ಗೌಡರ ಕುಟುಂಬ ಶಾಕ್ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಸ್ಥಾನದಿಂದ ಕೈ ಬಿಟ್ರೂ ಸಹೋದರ ಪಕ್ಷದಲ್ಲೇ ಇರ್ತಾರೆ: ಸತೀಶ್ ಜಾರಕಿಹೊಳಿ

    ಸಚಿವ ಸ್ಥಾನದಿಂದ ಕೈ ಬಿಟ್ರೂ ಸಹೋದರ ಪಕ್ಷದಲ್ಲೇ ಇರ್ತಾರೆ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟರೂ ಅವರು ಪಕ್ಷದಲ್ಲೇ ಇರ್ತಾರೆ, ಜೊತೆಗೂಡಿ ಇಬ್ಬರು ಕೆಲಸ ಮಾಡ್ತೀವಿ ಎಂದು ಶಾಸಕ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

    ಇಂದು ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ನಡೆಯುವ ಹಿನ್ನೆಲೆಯಲ್ಲಿ ಮಾಧ್ಯಮದೊಂದಿಗೆ ಸತೀಶ್ ಜಾರಕಿಹೊಳಿ ಮಾತನಾಡಿ, ಸಂಪುಟ ಸೇರ್ಪಡೆ ಬಗ್ಗೆ ಈವರೆಗೂ ಪಕ್ಷದಿಂದ, ಸರ್ಕಾರದಿಂದ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಆದ್ರೆ ಮಾಧ್ಯಮಗಳಿಂದ ಸಂಪುಟ ಸೇರ್ಪಡೆ ಬಗ್ಗೆ ಗೊತ್ತಾಗಿದೆ ಅಂದ್ರು.

    ನನ್ನನ್ನು ಈ ಹಿಂದೆ ಸಚಿವ ಸ್ಥಾನದಿಂದ ಕೈಬಿಟ್ಟಿದ್ದು ಅವಮಾನವಲ್ಲ. ನಮ್ಮ ಪಕ್ಷದ ತೀರ್ಮಾನವನ್ನು ಹಿಂದೆಯೂ ಒಪ್ಪಿದ್ದೇವೆ. ಸಂಪುಟ ವಿಸ್ತರಣೆಯಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ನನಗಿರಬಹುದು ಬೇರೆಯವರಿಗೆ ಇರಬಹುದು ಯಾವುದೇ ತೊಂದರೆಯಿಲ್ಲ ಎನ್ನುವ ಮೂಲಕ ಸಹೋದರ ರಮೇಶ ಜಾರಕಿಹೊಳಿಯನ್ನು ಸಚಿವ ಸ್ಥಾನದಿಂದ ಕೈ ಬಿಟ್ಟರು ಸರ್ಕಾರಕ್ಕೆ ತೊಂದರೆಯಿಲ್ಲ, ಇಬ್ಬರು ಜೊತೆಗೂಡಿ ಕೆಲಸ ಮಾಡ್ತೀವಿ ಎಂದು ಪರೋಕ್ಷವಾಗಿ ಹೇಳಿದರು.

    ನಾನು ಮಂತ್ರಿ ಆದ್ರೆ ಬೆಳಗಾವಿ ಜಿಲ್ಲೆಗೆ ಮತ್ತೆ ರಾಜಕೀಯ ವೈಭವೀಕರಣ ಬರಲಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲ ಆಗುತ್ತದೆ. ಎಲ್ಲಾ ಶಾಸಕರು ಸೇರಿ ಕೆಲಸ ಮಾಡ್ತುತ್ತೇವೆ. ರಮೇಶ್ ಪಕ್ಷದಲ್ಲೇ ಇರ್ತಾರೆ. ಅವರ ಜೊತೆಗೆ ನಾನು ಮಾತನಾಡುತ್ತೇನೆ. ಜಿಲ್ಲಾ ಮುಖಂಡರು ಅವರ ಜೊತೆಗೆ ಮಾತನಾಡುತ್ತಾರೆ. ಬರುವ ಲೋಕಸಭಾ ಚುನಾವಣೆಯನ್ನು ಎಲ್ಲರು ಒಟ್ಟಾಗಿ ಎದುರಿಸುತ್ತೇವೆ ಅಂತ ತಿಳಿಸಿದ್ರು.

    ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದೆ, ನಮ್ಮಲ್ಲಿ ಒಗ್ಗಟ್ಟಿದೆ. ಯಾವ ಖಾತೆ ನೀಡ್ತಾರೆ ಎನ್ನುವುದು ಗೊತ್ತಿಲ್ಲ. ಯಾವುದೇ ಒಳ್ಳೆಯ ಖಾತೆ ನೀಡಿದರು ಕೆಲಸ ಮಾಡುತ್ತೇವೆ. ಸಾರ್ವಜನಿಕವಾಗಿ ಒಳ್ಳೆಯ ಕೆಲಸ ಮಾಡುವ ಖಾತೆ ನೀಡಿದರೆ ಖುಷಿಯಾಗುತ್ತೆ. ಈಗಿರುವ ಖಾಲಿ ಖಾತೆಯಲ್ಲಿ ಯಾವುದಾದರೂ ಒಂದು ಖಾತೆ ನೀಡ್ತಾರೆ ಅಂತಾ ಊಹಿಸಿದ್ದೇನೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಮ್ಮಿಶ್ರ ಸರ್ಕಾರದ ಸಂಪುಟ ಪುನಾರಚನೆ – ಮಾಜಿ ಸಿಎಂ ಬಿಎಸ್‍ವೈ ಭವಿಷ್ಯ

    ಸಮ್ಮಿಶ್ರ ಸರ್ಕಾರದ ಸಂಪುಟ ಪುನಾರಚನೆ – ಮಾಜಿ ಸಿಎಂ ಬಿಎಸ್‍ವೈ ಭವಿಷ್ಯ

    -ರಮೇಶ್ ಜಾರಕಿಹೊಳಿ ಬಗ್ಗೆ ಬಿಎಸ್‍ವೈ ಅನುಕಂಪ

    ಹುಬ್ಬಳ್ಳಿ: ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿಯನ್ನ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಕೈಬಿಟ್ಟಿದ್ದು ಸಾಕಷ್ಟು ದೊಡ್ಡ ಪರಿಣಾಮ ಬೀರಲಿದೆ. ಇಂದು ಸಂಜೆವರೆಗೆ ಕಾದು ನೋಡೋಣಾ. ಸಂಜೆವರೆಗೆ ಸಾಕಷ್ಟು ಬದಲಾವಣೆಯಾಗಲಿದೆ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಷಕ ಬಿಎಸ್. ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಅತೃಪ್ತಿ ತಾಂಡವವಾಡುತ್ತಿತ್ತು. ಹಾಗಾಗಿ ಕಳೆದ ಮೂರು ತಿಂಗಳಿಂದ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿ ಕಾಲಹರಣ ಮಾಡಿಕೊಂಡು ಬಂದ್ರು. ರೈತರ ಸಾಲಮನ್ನಾ ಎಂದು ಹೇಳುತ್ತಾ ಕುಮಾರಸ್ವಾಮಿ ರೈತರಿಗೆ ಟೋಪಿ ಹಾಕುತ್ತಾ ಬಂದಿದ್ದಾರೆ. ಈಗ ಸಂಪುಟ ವಿಸ್ತರಣೆ ಕೊನೆಯ ಹಂತ ತಲುಪಿದೆ. ಆದರೂ ಸಣ್ಣಪುಟ್ಟ ವ್ಯತ್ಯಾಸಗಳು ಕಂಡು ಬರುತ್ತಿದೆ ಎಂದು ಹೇಳಿದರು.

    ಸಂಪುಟ ವಿಸ್ತರಣೆ ಆದ ನಂತರ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಭುಗಿಲೇಳುವ ಸಾಧ್ಯತೆ ಇದೆ. ಸಚಿವ ಸಂಪುಟಕ್ಕೆ ಅಪೇಕ್ಷಿತರು ಬಹಳಷ್ಟು ಮಂದಿ ಇದ್ದಾರೆ. ರಮೇಶ್ ಜಾರಕಿಹೊಳಿ ಕೈಬಿಟ್ಟಿದ್ದು ಸಾಕಷ್ಟು ಪರಿಣಾಮ ಬೀರಲಿದೆ. ಇಂದು ಸಾಯಂಕಾಲದವರೆಗೆ ಸಾಕಷ್ಟು ಬದಲಾವಣೆ ಆಗಲಿದೆ. ಇಂದು ಪ್ರಮಾಣ ವಚನ ಆಗುವುದು ಸಂಶಯವಾಗಿದೆ. ಏಕೆಂದರೆ ಇಂದು ರಾಜ್ಯಪಾಲರು ಊರಲ್ಲಿ ಇಲ್ಲ ಎಂಬ ಸುದ್ದಿ ಇದೆ. ಆದರೆ ಈ ಬಗ್ಗೆ ನನಗೆ ಗೊತ್ತಿಲ್ಲ. ಸಂಜೆಯವರೆಗೆ ಏನಾಗುತ್ತೆ ಕಾದು ನೋಡೋಣ ಎಂದು ಹೇಳಿದರು.

    ನಾವು 104 ಜನ ವಿರೋಧ ಪಕ್ಷದಲ್ಲಿದ್ದು, ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಏನು ಪರಿಣಾಮ ಆಗುತ್ತದೆ ಕಾದು ನೋಡುತ್ತೇವೆ. ನಂತರ ನಾನು ಬಿಜೆಪಿ ಶಾಸಕಾಂಗ ಸಭೆ ಕರೆಯುತ್ತೇನೆ. ಹೈಕಮಾಂಡ್ ಜೊತೆ ಚರ್ಚೆ ಮಾಡಿ ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದ್ರು.

    ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ದೋಷ ಎತ್ತಿ ತೋರಿಸಿದ್ದೇವೆ. ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇವೆ. ಕಬ್ಬು ಬೆಳೆಗಾರರು, ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಏನೂ ಮಾಡಿಲ್ಲ. ಬರಗಾಲದ ಬಗ್ಗೆ ವ್ಯಾಪಕ ಚರ್ಚೆ ಮಾಡಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬರಗಾಲ ಅಧ್ಯಯನ ಪ್ರವಾಸ ಮಾಡುತ್ತೇನೆ. ಸರ್ಕಾರ ಕೊಟ್ಟ ಅಂಕಿ ಅಂಶ ತಪ್ಪು ಎಂದು ಸಾಬೀತು ಮಾಡುತ್ತೇನೆ ಎಂದು ಯಡಿಯೂರಪ್ಪ ಸಮ್ಮಿಶ್ರ ಸರ್ಕಾರದ ಬಗ್ಗೆ ಕಿಡಿ ಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಸಂಪುಟ ವಿಸ್ತರಣೆಗೂ, ನನಗೂ ಸಂಬಂಧವಿಲ್ಲ: ಡಿಕೆಶಿ

    ಸಚಿವ ಸಂಪುಟ ವಿಸ್ತರಣೆಗೂ, ನನಗೂ ಸಂಬಂಧವಿಲ್ಲ: ಡಿಕೆಶಿ

    ನವದೆಹಲಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೂ, ನನಗೂ ಯಾವುದೇ ಸಂಬಂಧವಿಲ್ಲ ಅದನ್ನು ಪಕ್ಷದ ಮುಖಂಡರು ನೋಡಿಕೊಳ್ಳುತ್ತಾರೆಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ರಾಜಕಾರಣ ಮಾಡಲು ಬಂದಿಲ್ಲ. ಮೇಕೆದಾಟು ಯೋಜನೆ ಬಗ್ಗೆ ರಾಜ್ಯದ ಕೇಂದ್ರ ಸಚಿವರು ಹಾಗೂ ಸಂಸದರೊಂದಿಗೆ ಮಾತನಾಡಲು ಬಂದಿದ್ದೇನೆ. ಸಚಿವ ಸಂಪುಟ ವಿಸ್ತರಣೆಗೂ, ನನಗೂ ಯಾವುದೇ ಸಂಬಂಧವಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನಾನೊಬ್ಬ ಮಂತ್ರಿ ಅಷ್ಟೆ. ಪಕ್ಷದ ಮುಖಂಡರು ಸಚಿವ ಸಂಪುಟದ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಅಲ್ಲದೇ ರಾಜ್ಯ ಕೈ ನಾಯಕರು ಹೈಕಮಾಂಡ್ ಭೇಟಿಯ ಬಗ್ಗೆ ನನಗೆ ಮಾಹಿತಿಯಿಲ್ಲವೆಂದು ತಿಳಿಸಿದ್ದಾರೆ.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಲು ಸಮಯಾವಕಾಶ ಕೇಳಿದ್ದೇನೆ. ಅವಕಾಶ ಕೊಟ್ಟರೇ, ಅವರನ್ನು ಭೇಟಿಯಾಗುತ್ತೇನೆ. ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗದ ಒಪ್ಪಿಗೆ ವಿರೋಧಿಸುತ್ತಿರುವ ತಮಿಳುನಾಡು ನಿರಂತರವಾಗಿ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ಬಗ್ಗೆ ಸೂಕ್ತ ಉತ್ತರ ನೀಡುವಂತೆ ರಾಜ್ಯ ಸಂಸದರು ಜಲ ಸಂಪನ್ಮೂಲ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಳ್ಳಲು ಬಂದಿದ್ದೇನೆಂದು ಹೇಳಿದ್ದಾರೆ.

    ತಮಿಳುನಾಡಿನ ನಿರಂತರ ಪ್ರತಿಭಟನೆಯಿಂದ ತಪ್ಪು ಸಂದೇಶ ರವಾನೆ ಆಗುವ ಸಾದ್ಯತೆ ಇದೆ. ಹೀಗಾಗಿ ರಾಜ್ಯದ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್ ಹೆಗ್ಡೆ, ರಮೇಶ್ ಜಿಗಜಿಣಗಿ ಸೇರಿದಂತೆ ಎಲ್ಲಾ ಸಂಸದರಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಜಿ ಸಿಎಂಗೂ ಬೇಸರತಂತು ಸಚಿವರ ಕಿತ್ತಾಟ!

    ಮಾಜಿ ಸಿಎಂಗೂ ಬೇಸರತಂತು ಸಚಿವರ ಕಿತ್ತಾಟ!

    -ರಮೇಶ್ ಜಾರಕಿಹೊಳಿ ವಿಚಾರ ಬಿಟ್ಟು ಬಿಡಿ, ಬ್ಯಾರೆ ಏನಾದ್ರು ಕೇಳಿ

    ಬಾಗಲಕೋಟೆ: ಜಲಸಂಪನ್ಮೂಲ ಹಾಗೂ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ನಡುವಿನ ವೈಮನಸ್ಸು ಇದ್ದದ್ದೆ ಎನ್ನುವ ಮಟ್ಟಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಬದಾಮಿಗೆ ಭೇಟಿ ನೀಡಿ ಕ್ಷೇತ್ರದ ಜನರ ಸಮಸ್ಯೆ ಆಲಿಸಿದರು. ಈ ವೇಳೆ ರಮೇಶ್ ಜಾರಕಿಹೊಳಿ ವಿಚಾರವಾಗಿ ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ, ಬೇರೆ ವಿಚಾರ ಕೇಳ್ರಿ… ರಮೇಶ್ ಜಾರಕಿಹೊಳಿ ವಿಚಾರ ಬಿಟ್ಟು ಬಿಡಿ. ಬೇರೆ ಇನ್ನೇನಾದರು ಕೇಳ್ರಿ ಅಂತ ಅಮಾಧಾನ ಹೊರಹಾಕಿದ್ದಾರೆ.

    ಸಚಿವರ ಮುನಿಸು ಏಕೆ?
    ಬೆಳಗಾವಿ ಜಿಲ್ಲಾ ರಾಜಕೀಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಅಸಮಾಧಾನ ಉಂಟಾಗಿತ್ತು. ಈ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪರವಾಗಿ ಸಚಿವ ಡಿ.ಕೆ.ಶಿವಕುಮಾರ್ ಪ್ರವೇಶ ಮಾಡಿದ್ದರು. ಇದರಿಂದ ಕೊಪಗೊಂಡ ರಮೇಶ್ ಜಾರಕಿಹೊಳಿ, ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ. ನಮ್ಮ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಟಾಂಗ್ ಕೊಟ್ಟಿದ್ದರು.

    ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿಯೂ ಡಿ.ಕೆ.ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ಮುನಿಸು ಮತ್ತಷ್ಟು ಹೆಚ್ಚಾಗಿತ್ತು. ಈ ಇಬ್ಬರ ಸಚಿವರ ವೈಮನಸ್ಸು ಹೈಕಮಾಂಡ್ ಮಟ್ಟದಲ್ಲಿ ಭಾರೀ ಚರ್ಚೆಯಾಗಿತ್ತು. ರಮೇಶ್ ಜಾರಕಿಹೊಳಿ ಪಕ್ಷಕ್ಕೆ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದ್ದಂತೆ ಕಾಂಗ್ರೆಸ್ ನಾಯಕರು ತಲ್ಲಣಕ್ಕೆ ಒಳಗಾಗಿದ್ದರು.

    ಬೆಳಗಾವಿ ಅಧಿವೇಶದ ವೇಳೆ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಸಹೋದರರು ಶಾಸಕರು ಹಾಗೂ ಸಚಿವರಿಗೆ ಪ್ರತಿವರ್ಷ ಔತಣಕೂಟ ಆಯೋಜಿಸುತ್ತಿದ್ದರು. ಆದರೆ ಈ ಬಾರಿ ಕೈಬಿಟ್ಟಿದ್ದು ಚರ್ಚೆಯಾಗಿತ್ತು. ಇದಕ್ಕೆ ಪ್ರತಿಯಾಗಿ ಸಚಿವ ಡಿ.ಕೆ.ಶಿವಕುಮಾರ್ ಔತಣಕೂಟ ಆಯೋಜಿಸಿ ಎಲ್ಲರಿಗೂ ಆಮಂತ್ರಣ ನೀಡಿದ್ದರು. ನಾನು ಮಾತ್ರ ಅಲ್ಲಿಗೆ ಹೋಗಲ್ಲ, ಹೋಗಲ್ಲ, ಹೋಗಲ್ಲ ಎಂದು ರಮೇಶ್ ಜಾರಕಿಹೊಳಿ ಆಕ್ರೋಶ ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಬ್ಲಿಕ್ ಟಿವಿ ವರದಿ ನಂತ್ರ ಎಚ್ಚೆತ್ತ ಪುಟ್ಟರಂಗ ಶೆಟ್ಟಿ – ಮೃತರ ಮನೆಗಳಿಗೆ ಹೋಗಿ ಪರಿಹಾರ ವಿತರಣೆ

    ಪಬ್ಲಿಕ್ ಟಿವಿ ವರದಿ ನಂತ್ರ ಎಚ್ಚೆತ್ತ ಪುಟ್ಟರಂಗ ಶೆಟ್ಟಿ – ಮೃತರ ಮನೆಗಳಿಗೆ ಹೋಗಿ ಪರಿಹಾರ ವಿತರಣೆ

    ಚಾಮರಾಜನಗರ/ ಮೈಸೂರು: ಮಾರಮ್ಮ ದೇವಸ್ಥಾನ ಪ್ರಸಾದ ಸೇವಿಸಿ ಮೃತಪಟ್ಟ ಸದಸ್ಯರ ಕುಟುಂಬಸ್ಥರನ್ನು ತನ್ನ ಬಳಿ ಕರೆಯಿಸಿ ಪರಿಹಾರ ಧನ ನೀಡಲು ಮುಂದಾಗಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತುಕೊಂಡಿದ್ದಾರೆ.

    ಮಂಗಳವಾರ ಮಧ್ಯಾಹ್ನ ಬಿದರಹಳ್ಳಿಯಿಂದ 50 ಕಿಮೀ ದೂರವಿರುವ ಹನೂರಿನಲ್ಲಿ ಪರಿಹಾರ ಧನ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಒಂದೇ ಗ್ರಾಮದ 8 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮದಲ್ಲೇ ಪರಿಹಾರ ಧನ ನೀಡುವ ಬದಲು 50 ಕಿ.ಮೀ ದೂರದಲ್ಲಿ ನೀಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದ್ದಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾದ ಬಳಿಕ ಸಚಿವ ಪುಟ್ಟರಂಗಶೆಟ್ಟಿ ಪರಿಹಾರ ವಿತರಣೆ ಕಾರ್ಯಕ್ರಮವನ್ನು ಬಿದರಹಳ್ಳಿಗೆ ಶಿಫ್ಟ್ ಮಾಡಿದ್ದಾರೆ.

    ಮೈಸೂರಿನ ಕೆ.ಆರ್ ಆಸ್ಪತ್ರೆ ಬಳಿ ಮಾತನಾಡಿದ ಸಚಿವ ಪುಟ್ಟರಂಗಶೆಟ್ಟಿ, ಮೃತರ ಮನೆಗಳಿಗೆ ತೆರಳಿ ಪರಿಹಾರ ವಿತರಿಸುವುದಾಗಿ ಹೇಳಿದ್ದಾರೆ. ಎಲ್ಲರಿಗೂ 5 ಲಕ್ಷ ಪರಿಹಾರ ನೀಡುತ್ತೇವೆ. ಜೊತೆಗೆ ವೈಯಕ್ತಿಕವಾಗಿಯೂ ನಾನು, ನರೇಂದ್ರರವರು ಪರಿಹಾರ ನೀಡುತ್ತೇವೆ ಎಂದರು. ಇದನ್ನೂ ಓದಿ: “ಮೃತರ ಮನೆಗೆ ಸಚಿವರು ಹೋಗಬೇಕೋ? ಮೃತರ ಮನೆಯವರು ಸಚಿವರ ಬಳಿ ಹೋಗಬೇಕೋ?”

    ವಿಷ ಪ್ರಸಾದ ಸೇವಿಸಿ ಒಂದೇ ಗ್ರಾಮ ಬಿದರಹಳ್ಳಿಯಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಹೀಗಿರುವಾಗ ಗ್ರಾಮಕ್ಕೆ ಸಚಿವರು ಬರುವ ಬದಲು ಜನರನ್ನೇ ತಮ್ಮ ಬಳಿ ಕರೆಸಿಕೊಳ್ಳುತ್ತಿದ್ದಾರೆ. ಕುಟುಂಬದವರು ಮೊದಲೇ ಕುಟುಂಬ ಸದಸ್ಯರನ್ನು ಕಳೆದುಕೊಂಡು ದುಃಖಿತರಾಗಿದ್ದು, ಹಣ ಪಡೆಯಲು ಈಗ 50 ಕಿ.ಮೀ ಪ್ರಯಾಣಿಸಬೇಕೇ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದರು.

    ಮೃತರ ಮನೆಗೆ ಸಚಿರು ಹೋಗಬೇಕೋ? ಸತ್ತವರ ಮನೆಯವರು ಸಚಿವರ ಬಳಿ ಹೋಗಬೇಕೋ? ಮತ ಹಾಕಿಸಿಕೊಳ್ಳಲು ಮನೆ ಮುಂದೆ ಬರುತ್ತಾರೆ. ಈಗ ಜನರೇ ಅವರ ಬಳಿ ಹೋಗಬೇಕೇ? ಯಾವ ಸಮಯದಲ್ಲಿ ಯಾವ ರೀತಿ ವ್ಯವಹರಿಸಬೇಕು ಎನ್ನುವ ಕನಿಷ್ಟ ಜ್ಞಾನ ಸಚಿವರಿಗಿಲ್ಲವೇ ಎಂದು ಪ್ರಶ್ನಿಸಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • “ಮೃತರ ಮನೆಗೆ ಸಚಿವರು ಹೋಗಬೇಕೋ? ಮೃತರ ಮನೆಯವರು ಸಚಿವರ ಬಳಿ ಹೋಗಬೇಕೋ?”

    “ಮೃತರ ಮನೆಗೆ ಸಚಿವರು ಹೋಗಬೇಕೋ? ಮೃತರ ಮನೆಯವರು ಸಚಿವರ ಬಳಿ ಹೋಗಬೇಕೋ?”

    – ಸಚಿವ ಪುಟ್ಟರಂಗ ಶೆಟ್ಟಿ ನಡೆಗೆ ಗ್ರಾಮಸ್ಥರ ಆಕ್ರೋಶ
    – ಮತಕ್ಕಾಗಿ ಮನೆಗೆ ಬರೋ ನೀವು ಈ ಸಮಯದಲ್ಲಿ ಯಾಕೆ ಬರಲ್ಲ?

    ಚಾಮರಾಜನಗರ: ಮಾರಮ್ಮ ದೇವಸ್ಥಾನ ಪ್ರಸಾದ ಸೇವಿಸಿ ಮೃತಪಟ್ಟ ಸದಸ್ಯರ ಕುಟುಂಬಸ್ಥರನ್ನು ತನ್ನ ಬಳಿ ಕರೆಯಿಸಿ ಪರಿಹಾರ ಧನ ನೀಡಲು ನಿರ್ಧಾರ ಮಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

    ಹನೂರಿನ ಪ್ರವಾಸಿ ಮಂದಿರದಲ್ಲಿ ಪರಿಹಾರ ಧನ ನೀಡಲು ಮಂಗಳವಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮೃತರ ಕುಟುಂಬಸ್ಥರು ಪರಿಹಾರ ಹಣ ಪಡೆಯಲು 50 ಕಿಲೋಮೀಟರ್ ಪ್ರಯಾಣ ಮಾಡಿ ಪಡೆಯಬೇಕಾದ ಸ್ಥಿತಿಗೆ ಬಂದಿದ್ದಾರೆ.

    ವಿಷ ಪ್ರಸಾದ ಸೇವಿಸಿ ಒಂದೇ ಗ್ರಾಮ ಬಿದರಹಳ್ಳಿಯಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಹೀಗಿರುವಾಗ ಗ್ರಾಮಕ್ಕೆ ಸಚಿವರು ಬರುವ ಬದಲು ಜನರನ್ನೇ ತಮ್ಮ ಬಳಿ ಕರೆಸಿಕೊಳ್ಳುತ್ತಿದ್ದಾರೆ. ಕುಟುಂಬದವರು ಮೊದಲೇ ಕುಟುಂಬ ಸದಸ್ಯರನ್ನು ಕಳೆದುಕೊಂಡು ದುಃಖಿತರಾಗಿದ್ದು, ಹಣ ಪಡೆಯಲು ಈಗ 50 ಕಿ.ಮೀ ಪ್ರಯಾಣಿಸಬೇಕಾಗಿದೆ.

    ಸಚಿವ ಸಿ. ಪುಟ್ಟರಂಗಶೆಟ್ಟಿ ಇಂದು ಮಧ್ಯಾಹ್ನ 2.30ಕ್ಕೆ ಪರಿಹಾದ ಹಣ ಕೊಡಲಿದ್ದಾರೆ. ಸಚಿವರ ಈ ನಿರ್ಧಾರಕ್ಕೆ ಜನಗಳು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಸತ್ತವರ ಮನೆಗೆ ಸಚಿರು ಹೋಗಬೇಕೋ? ಸತ್ತವರ ಮನೆಯವರು ಸಚಿವರ ಬಳಿ ಹೋಗಬೇಕೋ? ಮತ ಹಾಕಿಸಿಕೊಳ್ಳಲು ಮನೆ ಮುಂದೆ ಬರುತ್ತಾರೆ. ಈಗ ಜನರೇ ಅವರ ಬಳಿ ಹೋಗಬೇಕೇ? ಯಾವ ಸಮಯದಲ್ಲಿ ಯಾವ ರೀತಿ ವ್ಯವಹರಿಸಬೇಕು ಎನ್ನುವ ಕನಿಷ್ಟ ಜ್ಞಾನ ಸಚಿವರಿಗಿಲ್ಲವೇ ಎಂದು ಪ್ರಶ್ನಿಸಿ ಎಂದು ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಿಆರ್‌ಒ ವಾರ್ – ರಮೇಶ್ ಜಾರಕಿಹೊಳಿಗೆ ತಿರುಗೇಟು ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್

    ಪಿಆರ್‌ಒ ವಾರ್ – ರಮೇಶ್ ಜಾರಕಿಹೊಳಿಗೆ ತಿರುಗೇಟು ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್

    ಬೆಳಗಾವಿ: ನಾನು ನನ್ನ ಮತದಾರರಿಗೆ ಮಾತ್ರವೇ ಪಿಆರ್‌ಒ (ಪಬ್ಲಿಕ್ ರಿಲೇಷನ್ ಆಫೀಸರ್)ಎನ್ನುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪೌರಾಡಳಿತ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಸಚಿವರ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಐದು ವರ್ಷದಿಂದ ಯಾವ ಪಿಆರ್‌ಒ , ಯಾವುದಕ್ಕೇ ಪಿಆರ್‌ಒ ಆಗಿದ್ದೆ? ಐದು ವರ್ಷದಿಂದ ಪಿಆರ್‌ಒ ಆಗಿದ್ದೀನಿ ಎಂದು ಹೇಳಿದ್ದಾರೆ. ನಾನು ಸರ್ಕಾರಿ ಕೆಲಸದಲ್ಲಿದ್ದೀನಾ ಅವರ ಪಿಆರ್‌ಒ ಆಗಲು. ನಾನು ಒಬ್ಬ ಶಾಸಕಿಯಾಗಿದ್ದೇನೆ. ರಾಜಕೀಯ ಶಾಶ್ವತ ಅಲ್ಲ. ಶತ್ರುಗಳಾಗಿರುವಾಗ ನಡೆದ ಪ್ರಸಂಗಗಳನ್ನು ಬಿಟ್ಟು ಬಿಡಬೇಕು. ನಾನು ಹಳೆಯ ಕಹಿ ನೆನಪುಗಳನ್ನು ಮರೆಯುತ್ತಿದ್ದೇನೆ. ನಾವು ಈಗ ಅಭಿವೃದ್ಧಿ ಬಗ್ಗೆ ಮಾತ್ರವೇ ಮಾತನಾಡಬೇಕು. ನಾವು ಒಂದೇ ಪಕ್ಷದಲ್ಲಿದ್ದೇವೆ ಎಂದು ತಿಳಿಸಿದರು.

    ನಾನು ನನ್ನ ಕ್ಷೇತ್ರದ ಮತದಾರರ ಪಿಆರ್‌ಒ . ಮಾನ ಮರ್ಯಾದೆ ಇದ್ದವರು, ಹಾಗೆಲ್ಲ ಮಾತನಾಡಬಾರದು. ನನಗೂ ಸಹಿಸಿಕೊಂಡು, ಸಹಿಸಿಕೊಂಡು ಸಾಕಾಗಿದೆ. ಪಿಆರ್‌ಒ ಎಂದು ಹೇಳುವುದು ಸರಿಯಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಿ. ಹೀಗೆ ಪದೇ ಪದೇ ಮಾತನಾಡಬಾರದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

    ರಮೇಶ್ ಜಾರಕಿಹೊಳಿ ಹೇಳಿದ್ದೇನು?
    ಕಳೆದ ಐದು ವರ್ಷದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಪಿಆರ್‌ಒ ಆಗಿದ್ದರು. ಈಗ ಅವರು ಯಾಕಿಲ್ಲ? ಉಸ್ತುವಾರಿ ಸಚಿವರಾಗಿ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ನಾನೇ ಹೋಗಬೇಕೆಂದೇನಿಲ್ಲ. ಕಳೆದ ವರ್ಷವೂ ಸಿದ್ದರಾಮಯ್ಯರನ್ನು ಸ್ವಾಗತ ಮಾಡಲು ಹೋಗಿರಲಿಲ್ಲ. ಉಸ್ತುವಾರಿ ಸಚಿವ ಶೋ ಮಾಡೋದು ಅಲ್ಲ. ಅದು ಕೆಲಸ ಮಾಡುವುದು. ನಾನು ಪ್ರಚಾರ ಪ್ರಿಯನಲ್ಲವೆಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಡೆದಾಡುವ ದೇವರಿಗೆ ಚಿಕಿತ್ಸೆ ಕೊಟ್ಟ ವೈದ್ಯರಿಗೆ `ಧರ್ಮ’ದ ಪಟ್ಟ ಕೊಟ್ಟ ಡಿಕೆಶಿ!

    ನಡೆದಾಡುವ ದೇವರಿಗೆ ಚಿಕಿತ್ಸೆ ಕೊಟ್ಟ ವೈದ್ಯರಿಗೆ `ಧರ್ಮ’ದ ಪಟ್ಟ ಕೊಟ್ಟ ಡಿಕೆಶಿ!

    ಬೆಳಗಾವಿ: ಒಂದ್ಕಡೆ ವೈದ್ಯೋ ನಾರಾಯಣೋ ಹರಿ. ವೈದ್ಯರು ದೇವರಿಗೆ ಸರಿ ಸಮಾನ ಅಂತ ಹೇಳುತ್ತಾರೆ. ಮಾತೃದೇವೋಭವ, ಪಿತೃದೇವೋಭವ, ಗುರುದೇವೋ ಭವ ಬಳಿಕ ವೈದ್ಯರಿಗೆ ದೇವರ ಸ್ಥಾನ ಕೊಟ್ಟಿದ್ರೆ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ನಡೆದಾಡುವ ದೇವರಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ `ಧರ್ಮ’ದ ಹಣೆ ಪಟ್ಟವನ್ನು ಕಟ್ಟಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.

    ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಸ್ಲಿಮ್ ಆಡಳಿತವಿದ್ದರೂ ಶ್ರೀಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಪಸಂಖ್ಯಾತ ಆಡಳಿತ ಮಂಡಳಿ ಇದ್ದರೂ ಶ್ರೀಗಳನ್ನ ಚೆನ್ನಾಗಿ ನೋಡ್ಕೊಂಡಿದ್ದಾರೆ. ಡಾಕ್ಟರ್ ಮೊಹಮ್ಮದ್ ರೆಲಾ ಮಾಲೀಕತ್ವದ ರೆಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವಾದತ್ಮಾಕ ಹೇಳಿಕೆ ನೀಡಿದ್ದಾರೆ.

    ನನಗೆ ಬಹಳ ಸಂತೋಷವಾಯ್ತು. ನಿಜವಾಗಲೂ ಕರ್ನಾಟಕ ರಾಜ್ಯದಲ್ಲಿ ಅಂತಹ ಆಸ್ಪತ್ರೆಯನ್ನು ನಾನು ನೋಡಿಲ್ಲ. ಜಾತಿ-ಧರ್ಮದ ಬಗ್ಗೆ ಮಾತನಾಡುತ್ತಿರುವ ನಾವು ಒಂದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊಹಮ್ಮದ್ ರೇಲಾ ಎಂಬಂತಹ ಮುಸಲ್ಮಾನ ಅಲ್ಪಸಂಖ್ಯಾತರು. ಅವರ ಹೆಸರಿನಲ್ಲಿ ರೇಲಾ ಅನ್ನುವ ಆಸ್ಪತ್ರೆಯೊಂದನ್ನು ಮಾಡಿದ್ದಾರೆ. ಅವರು ಒಬ್ಬ ಜಗತ್ತಿನ ಫೇಮಸ್ ಸರ್ಜನ್ ಆಗಿದ್ದಾರೆ. ನಮ್ಮ ಶ್ರೀಗಳಿಗೆ ಅವರು ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ ಅಂತ ಹೇಳಿದ್ರು.

    ಒಂದು 5 ದಿನದ ಮಗು ಇನ್ನೊಂದು 111 ವರ್ಷದ ಒಬ್ಬರು ಹಿರಿಯ ಶ್ರೀಗಳು. ನಾವೆಲ್ಲ ನಡೆದಾಡುವ ದೇವರು ಅಂತ ಕರೆಯುತ್ತೇವೆ. ಆಸ್ಪತ್ರೆ, ಸಿಬ್ಬಂದಿ ಹಾಗೂ ಸೌಲಭ್ಯಗಳು ತುಂಬಾ ಚೆನ್ನಾಗಿದೆ. 450 ಬೆಡ್ ನಲ್ಲಿ 150 ಬೆಡ್ ಐಸಿಯುನಲ್ಲಿದೆ. ಇಂತಹ ಸೌಲಭ್ಯವಿರುವ ಆಸ್ಪತ್ರೆಯನ್ನು ಎಲ್ಲೂ ನೋಡಿಲ್ಲ ಎಂದು ಹೊಗಳಿದರು.

    ಸ್ವಾಮೀಜಿಗಳು ಬಹಳ ಲವಲವಿಕೆಯಿಂದ ಇದ್ದಾರೆ. ಚೆನ್ನಾಗಿಯೇ ಮಾತನಾಡುತ್ತಿದ್ದಾರೆ. ಯಾವಾಗ ಬಂದ್ರಿ, ಏನ್ ಬಂದ್ರಿ ಅಂತ ನನ್ನನ್ನು ಸ್ವಾಮೀಜಿಗಳು ಕೇಳಿದ್ರು. ಬೆಳಗ್ಗೆ ಆಪರೇಷನ್ ಆಗಿದ್ದಷ್ಟೇ, ನಾನು ಹೋದಾಗ ಎದ್ದು ಕುಳಿತುಕೊಳ್ಳಬೇಕು ಅಂತ ಸ್ವಾಮೀಜಿಗಳು ಹೇಳಿದ್ರು. ಆಗ ನಾನು, ಸ್ವಾಮಿಗಳೇ ಇವತ್ತು ಒಂದು ದಿನ ಇರಿ ಅಂತ ಹೇಳಿದೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಅಂತ ಹೇಳಿದ್ರು.

    ಮುಸ್ಲಿಮರ ಆಸ್ಪತ್ರೆ ಆದ್ರೂ ಸಿದ್ದಗಂಗಾ ಶ್ರೀಗಳಿಗೆ ಉತ್ತಮ ಚಿಕಿತ್ಸೆ..! ಡಿಕೆ ಶಿವಕುಮಾರ್ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದು ಸರಿಯೇ? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲವಲವಿಕೆಯಿಂದ ಇದ್ದಾರೆ ನಡೆದಾಡುವ ದೇವರು – ಡಿಕೆಶಿ ಜೊತೆಗಿನ ಸಂಭಾಷಣೆ ವಿಡಿಯೋ ವೈರಲ್

    ಲವಲವಿಕೆಯಿಂದ ಇದ್ದಾರೆ ನಡೆದಾಡುವ ದೇವರು – ಡಿಕೆಶಿ ಜೊತೆಗಿನ ಸಂಭಾಷಣೆ ವಿಡಿಯೋ ವೈರಲ್

    ಚೆನ್ನೈ: ನಗರದ ರೇಲಾ ಆಸ್ಪತ್ರೆಯಲ್ಲಿರುವ ನಡೆದಾಡುವ ದೇವರು, ಸಿದ್ದಗಂಗಾ ಶ್ರೀಗಳು ಕ್ಷೇಮವಾಗಿದ್ದು, ಲವಲವಿಕೆಯಿಂದ ಇದ್ದಾರೆ.

    ಶನಿವಾರ ಸಿದ್ದಗಂಗಾ ಶ್ರೀಗಳನ್ನ ವೈದ್ಯಕೀಯ ಶಿಕ್ಷಣ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಶ್ರೀಗಳು ಮತ್ತು ಡಿಕೆಶಿ ಸಂಭಾಷಣೆಯ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಶ್ರೀಗಳು ಮತ್ತು ಸಚಿವರ ನಡುವಿನ ಸಂಭಾಷಣೆ:

    ಡಿಕೆಶಿ: ನೋವಿದಿಯಾ ಇನ್ನೂ..?
    ಸಿದ್ದಗಂಗಾ ಶ್ರೀಗಳು : ಇಲ್ಲ, ಭುಜ ಎತ್ತಿದಿದರೆ ನೋವಾಗುತ್ತೆ.
    ಡಿಕೆಶಿ: ಓ. ಗೊತ್ತಾಯಿತು ಗೊತ್ತಾಯಿತು ಶಿವ ಕಾಪಾಡುತ್ತಾನೆ ಬನ್ನಿ.
    ಸಿದ್ದಗಂಗಾ ಶ್ರೀಗಳು: ಎದ್ದು ಕುಳಿತುಕೊಳ್ಳಬೇಕು.
    ಡಿಕೆಶಿ: ಇರಿ ಇರಿ ಇವತ್ತೊಂದಿನ ಇರಿ ನಾಳೆ ನಾಡಿದ್ರಲ್ಲಿ ಅವರೇ ನಿಮ್ಮನ್ನ ಎದ್ದು ಕೂಡಿಸುತ್ತಾರೆ ಇವತ್ತು ಬೇಡ ನಾಳೆ ಎದ್ದು ಕೂಡಿಸುತ್ತಾರೆ.
    ಸಿದ್ದಗಂಗೆ ಶ್ರೀ: ಇವತ್ತು ಬೇಡ್ವಾ..
    ಡಿಕೆಶಿ: ಬೇಡ ಇವತ್ತು ಬೇಡ ನಾಳೆ ಡಾಕ್ಟರ್ ನಿಮ್ಮನ್ನ ಕೂರಿಸುತ್ತೇನೆ ಅಂತ ಹೇಳಿದ್ದಾರೆ. ಅವರು ಕುಳಿತುಕೊಳ್ಳಬೇಕು, ಕುಳಿತುಕೊಳ್ಳಬೇಕು ಅಂತಾರೆ..
    ಸಿದ್ದಗಂಗಾ ಶ್ರೀ: ನನಗೆ ಎದ್ದು ಕುಳಿತುಕೊಳ್ಳಬೇಕು ಅಂತಾ ಅನ್ನಿಸುತ್ತಿದೆ.
    ಡಿಕೆಶಿ: ಇವತ್ತು ಒಂದು ದಿನ ಇದ್ದು ಬಿಡಿ, ನಾಳೆ ನಿಮ್ಮನ್ನ ಎದ್ದು ಕೂಡಿಸುತ್ತಾರೆ.
    ಲವಲವಿಕೆಯಿಂದ ಇದ್ದಾರೆ ನಡೆದಾಡುವ ದೇವರು – ಡಿಕೆಶಿ ಜೊತೆಗಿನ ಸಂಭಾಷಣೆ ವಿಡಿಯೋ ವೈರಲ್ ನೀವು ಹೇಗೆ ಬಂದ್ರಿ.
    ಡಿಕೆಶಿ : ನಾನು ವಿಮಾನದಲ್ಲೇ ಬಂದೆ.
    ಸಿದ್ದಗಂಗಾ ಶ್ರೀ: ಇಲ್ಲಿರೋರೆಲ್ಲ ಯಾರು
    ಡಿಕೆಶಿ : ಇಲ್ಲಿಯವರೇ ಆಸ್ಪತ್ರೆಯವರೇ, ಆಸ್ಪತ್ರೆಗೆ ಯಾರನ್ನು ಸಹ ಬಿಡುವುದಿಲ್ಲ. ನಾನು ಯಾರನ್ನೂ ಬಿಡಬೇಡಿ ಬೇಡ ಅಂತ ಹೇಳಿದ್ದಿನಿ. ನೀವು ಇನ್ನೂ ಹತ್ತಾರು ವರ್ಷ ಹೀಗೆ ಇರಿ. ನಮ್ಮ ಆಯಸ್ಸೆಲ್ಲ ನಿಮಗೆ ಸಿಗಲಿ..

    ಶ್ರೀಗಳಿಗೆ ಪದೇ ಪದೇ ಆರೋಗ್ಯದಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಬೇಕು ಎಂದು ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶನಿವಾರ ಡಾ. ಮೊಹಮ್ಮದ್ ರೇಲಾ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಸತತ 2 ಗಂಟೆಗಳ ಕಾಲ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದೆ. ಯಾರು ಆತಂಕ ಪಡೋದು ಬೇಡ. ಶಸ್ತ್ರಚಿಕಿತ್ಸೆ ನಂತರ ಕೆಲದಿನಗಳ ಕಾಲ ಶ್ರೀಗಳು ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸ್ಪಷ್ಟಪಡಿಸಿದ್ದರು.

    ಶ್ರೀಗಳ ಆರೋಗ್ಯದ ಕುರಿತು ಬಿಜಿಎಸ್ ಆಸ್ಪತ್ರೆ ವೈದ್ಯರಾದ ಡಾ. ರವೀಂದ್ರ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದು, ಶ್ರೀಗಳಿಗೆ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯಕ್ಕೆ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಭಕ್ತರು ಯಾವುದೇ ಆತಂಕ ಪಡಬೇಕಿಲ್ಲ. ಶಸ್ತ್ರಚಿಕಿತ್ಸೆ ನಂತರ ಸ್ವಾಮೀಜಿಗಳನ್ನ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಮೂರು ದಿನಗಳವರೆಗೂ ಐಸಿಯುನಲ್ಲೇ ಇರಬೇಕಾಗಿದೆ. ಸ್ವಾಮೀಜಿಗಳನ್ನ ಸದ್ಯ ಯಾರು ಭೇಟಿ ಮಾಡುವ ಹಾಗಿಲ್ಲ, ಅವರು ವಿಶ್ರಾಂತಿ ಪಡೆಯಬೇಕಿದೆ ಎಂದು ಮಾಹಿತಿ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv