Tag: minister

  • ಶೀಘ್ರದಲ್ಲಿ ಆರ್‌ಟಿಓ ಅಧಿಕಾರಿಗಳ ನೇಮಕಾತಿ – ಡಿಸಿ ತಮ್ಮಣ್ಣ

    ಶೀಘ್ರದಲ್ಲಿ ಆರ್‌ಟಿಓ ಅಧಿಕಾರಿಗಳ ನೇಮಕಾತಿ – ಡಿಸಿ ತಮ್ಮಣ್ಣ

    – ಆರ್‌ಟಿಓ ಅಧಿಕಾರಿ ನೇಮಕಾತಿಯ ಪರೀಕ್ಷೆ ಹೇಗೆ ಇರುತ್ತೆ?

    ಬೆಂಗಳೂರು: ಒಬ್ಬ ಅಧಿಕಾರಿ ಎರಡರಿಂದ ಮೂರು ಆರ್‌ಟಿಓ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಶೀಘ್ರವೇ ಖಾಲಿಯಿರುವ 271 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದು ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ನಾನು ಸಚಿವನಾದ ಮೇಲೆ ಸಾರಿಗೆ ಇಲಾಖೆಯಲ್ಲಿ ಖಾಲಿಯಿದ್ದ 2.5 ಸಾವಿರ ಹುದ್ದೆ ಭರ್ತಿಯಾಗಿವೆ. ಈಗಾಗಲೇ ಚಾಲಕ, ನಿರ್ವಾಹಕ ಹಾಗೂ ಮೆಕ್ಯಾನಿಕಲ್ ಹುದ್ದೆಗಳು ಕೂಡ ಭರ್ತಿಯಾಗಿವೆ. ರಾಜ್ಯದಲ್ಲಿ ಆರ್‌ಟಿಓ ಅಧಿಕಾರಿಗಳ ಕೊರತೆ ಎದರುರಾಗಿದ್ದು, ಈ ನಿಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

    ಪರೀಕ್ಷೆ ಹೇಗಿರುತ್ತೇ?:
    ಆರ್‌ಟಿಓ ಅಧಿಕಾರಿಗಳ ನೇಮಕಾತಿ ನಿಟ್ಟಿನಲ್ಲಿ ಕೆಪಿಎಸ್‍ಸಿ ಜೊತೆಗೆ ಚರ್ಚೆ ನಡೆಸಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷ ತರಬೇತಿ ಇರುತ್ತದೆ. ತರಬೇತಿ ಬಳಿಕವೂ ಒಂದು ಪರೀಕ್ಷೆ ನಡೆಸಿ, ಉತ್ತೀರ್ಣರಾಗುವ ಅಭ್ಯರ್ಥಿಗಳಿಗೆ ಸರ್ಕಾರಿ ಕೆಲಸ ನೀಡಲಾಗುತ್ತದೆ ಎಂದು ತಿಳಿಸಿದರು.

    ಚೆಕ್ ಪೋಸ್ಟ್‍ಗಳಲ್ಲಿ ಹಣ ವಸೂಲಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಚೆಕ್‍ಪೋಸ್ಟ್‍ಗಳನ್ನ ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಲಾಗಿದೆ. ವಾಹನಗಳಿಗೆ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಈ ಮೂಲಕ ಪ್ರತಿಯೊಂದು ವ್ಯವಹಾರ ದಾಖಲಾಗಲಿದ್ದು, ಹಣ ವಸೂಲಿ ಮಾಹಿತಿ ಸಿಕ್ಕರೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದರು.

    ಈ ಯೋಜನೆ ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ಎಂದು ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ, ಎಲ್ಲವನ್ನೂ ಈಗಲೇ ಸರಿ ಮಾಡೋಕೆ ಆಗಲ್ಲ. ಹಂತ ಹಂತವಾಗಿ ಸರಿಪಡಿಸುತ್ತೇವೆ ಎಂದು ಸಚಿವರು ಗರಂ ಆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ಕೈ’ಕಮಾಂಡ್‍ಗೆ ಟ್ರಬಲ್ ಆದ ಟ್ರಬಲ್ ಶೂಟರ್ ಡಿಕೆಶಿ..!

    `ಕೈ’ಕಮಾಂಡ್‍ಗೆ ಟ್ರಬಲ್ ಆದ ಟ್ರಬಲ್ ಶೂಟರ್ ಡಿಕೆಶಿ..!

    ಬೆಂಗಳೂರು: ಖಾತೆ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‍ಗೆ ಬಿಗ್‍ಶಾಕ್ ಎದುರಾಗಿದ್ದು, `ಕೈ’ಕಮಾಂಡ್‍ಗೆ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರು ಟ್ರಬಲ್ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ನೇರ ಸಮರ ಸಾರಿದ್ದಾರೆ ಅನ್ನೋ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೊಸ ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಬೇಕೆಂದು ಬುಧವಾರ ಸಭೆ ನಡೆದಿತ್ತು. ಅದರಲ್ಲಿ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ಡಿಕೆ ಶಿವಕುಮಾರ್ ಅವರು ಕೂಡ ಹಾಜರಿದ್ದರು. ಈ ಸಭೆಯಲ್ಲಿ ಮಾತುಕತೆಯ ಸಂದರ್ಭದಲ್ಲಿ 2 ಖಾತೆಯಲ್ಲಿ ಒಂದು ಕೊಡಪ್ಪ ಅಂತಾ ಕೇಳಿದ್ದಕ್ಕೆ ಡಿಕೆ ಶಿವಕುಮಾರ್ ಅವರು ಫುಲ್ ಗರಂ ಆಗಿದ್ದಾರಂತೆ. ಇದನ್ನೂ ಓದಿ: ಸಭೆಯಿಂದ ಗರಂ ಆಗಿ ಹೊರಬಂದ ಕೈ ಉಸ್ತುವಾರಿ ವೇಣುಗೋಪಾಲ್!

    ಎಲ್ಲಾ ನಿರ್ಧಾರ ಸಿದ್ದರಾಮಯ್ಯ ಅಭಿಪ್ರಾಯದಂತೆ ತೆಗೆದುಕೊಳ್ಳೋದ್ರೇ ಇನ್ನು ನಾವ್ಯಾಕೆ ಬೇಕು?. ಸುಮ್ಮನೆ ನಮ್ಮನ್ನೇಕೆ ಕೇಳ್ತೀರಿ.. ಟೈಂ ವೇಸ್ಟ್ ಯಾಕೆ ಮಾಡ್ಕೋತೀರಿ. ನಂಗೆ ಯಾವ ಖಾತೆನೂ ಬೇಡ.. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಡ್ತೀನಿ. ನನಗೆ ಮಂತ್ರಿಗಿರಿಯೂ ಬೇಡ.. ಪಕ್ಷದಲ್ಲಿ ಅಧಿಕಾರವೇ ಬೇಡ.. ಕನಕಪುರದಲ್ಲೇ ಇದ್ದು ಬಿಡ್ತೀನಿ. ನಾನು, ನಮ್ಮ ಬ್ರದರ್(ಸಂಸದ ಡಿಕೆ ಸುರೇಶ್) ನಮ್ಮ ನಮ್ಮ ಕ್ಷೇತ್ರಗಳ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ತೀವಿ. ನಿಮ್ಮಿಷ್ಟ ಏನ್ ಬೇಕೋ ಅದನ್ನು ಮಾಡಿಕೊಳ್ಳಿ ಅಂತ ವೇಣುಗೋಪಾಲ್ ಮುಂದೆಯೇ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಗುಡುಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಗರಂ!

    ವೈದ್ಯಕೀಯ ಶಿಕ್ಷಣ ಖಾತೆ ತುಕಾರಾಂಗೆ ಬಿಟ್ಟು ಕೊಡು ಎಂದ ಕೂಡಲೇ ರಾಜೀನಾಮೆ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಡಿಕೆಶಿ ಗರಂ ಆದ ರೀತಿ ಕಂಡು ಎರಡು ನಿಮಿಷ ಸುಮ್ಮನಾದ ಕೈ ಉಸ್ತುವಾರಿ ವೇಣುಗೋಪಾಲ್, ಮಿಸ್ಟರ್ ಡಿಕೆ ಶಿವಕುಮಾರ್ ಅವರೇ ಸಮಾಧಾನ ಮಾಡಿಕೊಳ್ಳಿ. ಹೀಗೆ ಮಾತಾಡಿದ್ರೆ ಹೇಗೆ ಅಂತ ಪ್ರಶ್ನಿಸಿದ್ದಾರೆ. ಅಲ್ಲ ಕಣಯ್ಯ ಡಿಕೆಶಿ, ಪಕ್ಷದ ಹಿತದೃಷ್ಟಿಯಿಂದ ಈ ನಿರ್ಧಾರ ತಗೋ. ಸುಮ್ನೆ ಕೋಪ ಮಾಡ್ಕೊಂಡ್ರೆ ಹೆಂಗೇ ಅಂತ ಸಿದ್ದರಾಮಯ್ಯ ಅವರು ಕೂಡ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಪಕ್ಷದ ಹಿತದೃಷ್ಟಿ ನಮ್ಗೂ ಗೊತ್ತು. ಪಕ್ಷಕ್ಕಾಗಿ ದುಡಿದವರಿಗೆ ಇದೇನಾ ಪ್ರಶಸ್ತಿ ಅಂತ ಮರು ಪ್ರಶ್ನೆ ಹಾಕಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪ್ಪಾಜಿ ಕ್ಯಾಂಟೀನ್ ದಿಢೀರ್ ಕ್ಲೋಸ್ – ಶರವಣ ಹೇಳಿದ್ದು ಏನು?

    ಅಪ್ಪಾಜಿ ಕ್ಯಾಂಟೀನ್ ದಿಢೀರ್ ಕ್ಲೋಸ್ – ಶರವಣ ಹೇಳಿದ್ದು ಏನು?

    ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ದೇವೇಗೌಡ ಅವರ ಹೆಸರಿನಲ್ಲಿ ನಗರದ ಜೆಪಿ ಭವನದಲ್ಲಿ ಆರಂಭವಾಗಿದ್ದ ಅಪ್ಪಾಜಿ ಕ್ಯಾಂಟೀನ್ ಕ್ಲೋಸ್ ಆಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಂಟೀನಿಗೆ ಆಗಮಿಸದೆ ಇರುವುದೇ ಮುಚ್ಚಲು ಕಾರಣ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ತಿಳಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಶರವಣ ಅವರು, ಜೆಡಿಎಸ್ ಕಚೇರಿಯ ಆವರಣದಲ್ಲಿ ಆರಂಭವಾಗಿದ್ದ ಕ್ಯಾಂಟೀನ್ ಬರೋಬ್ಬರಿ 1 ವರ್ಷ ನಡೆದಿದ್ದು, ಆದರೆ ಕ್ಯಾಂಟೀನ್‍ಗೆ ಹೆಚ್ಚಿನ ಜನರು ಬಾರದ ಕಾರಣ ಆಹಾರ ವ್ಯರ್ಥವಾಗುತ್ತಿದೆ. ದಿನಕ್ಕೆ ಕೇವಲ 50 ರಿಂದ 100 ಜನರು ಮಾತ್ರ ಬರುತ್ತಿದ್ದರು. ಆದ್ದರಿಂದ 20 ದಿನಗಳ ಹಿಂದೆಯೇ ಕ್ಯಾಂಟೀನ್ ಮುಚ್ಚುವ ತೀರ್ಮಾನ ಮಾಡಲಾಗಿತ್ತು ಎಂದರು.

    ಇದೇ ವೇಳೆ ಕ್ಯಾಂಟೀನ್ ಮುಚ್ಚಲು ದೇವೇಗೌಡ ಅವರೊಂದಿನ ಅಸಮಾಧಾನ ಕಾರಣ ಎಂಬುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಿರಿಯರಾಗಿದ್ದು, ಅವರೊಂದಿಗೆ ಯಾವುದೇ ಅಸಮಾಧಾನ ಇಲ್ಲ. ಈ ಬಗ್ಗೆ ರೇವಣ್ಣ ಅವರಿಗೆ ತಿಳಿಸಿಯೇ ತೀರ್ಮಾನ ಕೈಗೊಂಡಿದ್ದೇನೆ. ಆದರೆ ನಗರದ ಬೇರೆ ಕಡೆ ಮಾಡಲು ಚಿಂತನೆ ಇದೆ. ಊಟ ವ್ಯರ್ಥವಾಗುತ್ತಿದ್ದ ಕಾರಣವಾಗಿ ಕ್ಲೋಸ್ ಮಾಡಿದ್ದೇನೆ. ಬಸವನಗುಡಿಯಲ್ಲಿ ಇರುವ ಕ್ಯಾಂಟೀನ್‍ನಲ್ಲಿ ಪ್ರತಿ ದಿನ 3,500 ಮಂದಿ ಊಟ ಸೇವಿಸುತ್ತಾರೆ. ದಿನಕ್ಕೆ 100 ಜನರು ಹೆಚ್ಚಾಗುತ್ತಿದ್ದಾರೆ. ಅದ್ದರಿಂದ ಹಸಿದವರಿಗೆ ಊಟ ನೀಡುವ ನನ್ನ ಉದ್ದೇಶ ಮುಂದುವರೆಯುತ್ತದೆ ಎಂದರು.

    ಸಚಿವ ಸ್ಥಾನದ ಆಕಾಂಕ್ಷೀಯಾಗಿದ್ದೆ. ಆದರೆ ಈ ಹಂತದಲ್ಲಿ ನನಗೆ ಅವಕಾಶ ನೀಡಲು ಸಾಧ್ಯವಾಗಿಲ್ಲ. ಈ ಬಗ್ಗೆ ನನ್ನ ಸಮಾಜದ ಹಲವರು ಪ್ರಶ್ನೆ ಮಾಡುತ್ತಾರೆ. ಇತ್ತ ಸಿಎಂ ಕುಮಾರಸ್ವಾಮಿ ಅವರಿಗೆ ಸರ್ಕಾರ ನಡೆಸೋದು ಕಷ್ಟ ಆಗುತ್ತಿದೆ. ಸಚಿವ ಸ್ಥಾನ ಬಗ್ಗೆ ದೇವೇಗೌಡರಿಗೂ ತಿಳಿದಿದೆ. ಆದರೆ ಅವರಿಗೂ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್ಚಿನ ಒತ್ತಡ ಇದೆ. ಪಕ್ಷದ ವಿಚಾರದಲ್ಲಿ ಈ ಕುರಿತು ಚರ್ಚೆ ನಡೆಸಿ ಮುಂದಿನ ಹಂತದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ಆದರೆ ನಮ್ಮ ಸಮುದಾಯದ ಜನರು ಈ ಬಗ್ಗೆ ಪ್ರಶ್ನೆ ಮಾಡಿದ ವೇಳೆ ನೋವಾಗುತ್ತದೆ. ಆದರೆ ಕಿತ್ತಾಟ ನಡೆಸಿ ಸಚಿವ ಸ್ಥಾನ ಪಡೆಯುವುದು ಜೆಡಿಎಸ್ ಪಕ್ಷದಲ್ಲಿ ಇಲ್ಲ. ಅದ್ದರಿಂದ ಮುಂದೇ ಸೂಕ್ತ ಸ್ಥಾನಮಾನ ಸಿಗುವ ಬಗ್ಗೆ ವಿಶ್ವಾಸ ಇದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಖಾತೆ ಹಂಚಿಕೆ ಸಭೆಯಲ್ಲಿ ಸಿದ್ದರಾಮಯ್ಯ, ಪರಮೇಶ್ವರ್ ಕಿತ್ತಾಟ!

    ಖಾತೆ ಹಂಚಿಕೆ ಸಭೆಯಲ್ಲಿ ಸಿದ್ದರಾಮಯ್ಯ, ಪರಮೇಶ್ವರ್ ಕಿತ್ತಾಟ!

    – ಎರಡು ಖಾತೆಗೆ ಪರಂಮೇಶ್ವರ್ ಪಟ್ಟು
    – ಒಂದು ಖಾತೆ ಬಿಟ್ಟುಕೊಂಡಿ ಎಂದ ಮಾಜಿ ಸಿಎಂ

    ಬೆಂಗಳೂರು: ಖಾತೆ ಹಂಚಿಕೆ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ನಡುವೆ ಮಾತಿ ಚಕಮಕಿ ನಡೆದಿದ್ದು, ಏರು ಧ್ವನಿಯಲ್ಲಿಯಲ್ಲಿ ಕಿತ್ತಾಡಿಕೊಂಡಿದ್ದಾರೆ.

    ನಗರದ ಖಾಸಗಿ ಹೋಟೆಲ್‍ನಲ್ಲಿ ಖಾತೆ ಹಂಚಿಕೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಇಂದು ಸಭೆ ನಡೆಸಲಾಗಿತ್ತು. ಈ ವೇಳೆ ಏರು ಧ್ವನಿಯಲ್ಲಿ ಪರಸ್ಪರ ಉಭಯ ನಾಯಕರು ಮಾತನಾಡಿದರು. ಇದರಿಂದಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಶಾಕ್‍ಗೆ ಒಳಗಾದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನು ಓದಿ: ಫೈನಲ್ ಆಯ್ತು ಖಾತೆ ಹಂಚಿಕೆ – ಕೊನೆಗೂ ಗೆದ್ದ ಸಿದ್ದರಾಮಯ್ಯ: ಯಾರಿಗೆ ಯಾವ ಖಾತೆ?

    ಸಭೆಯಲ್ಲಿ ಏನಾಯ್ತು?
    ಬೆಂಗಳೂರು ಅಭಿವೃದ್ಧಿ ಖಾತೆ ಅಥವಾ ಗೃಹ ಖಾತೆ ಎರಡರಲ್ಲಿ ಒಂದನ್ನು ಬಿಟ್ಟು ಕೊಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಜಿ. ಪರಮೇಶ್ವರ್ ಅವರಿಗೆ ತಿಳಿಸಿದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ, ನೀವು ಹೇಳಿದ್ದೆಲ್ಲಾ ಕೇಳೋಕೆ ಆಗಲ್ಲ. ಎರಡೂ ಖಾತೆ ನನಗೆ ಅಂತ ಮೊದಲೇ ಮಾತುಕತೆಯಾಗಿದೆ. ಹೀಗಾಗಿ ನಾನೇ ಎರಡು ಖಾತೆಯ ಜವಾಬ್ದಾರಿ ಹೊತ್ತುಕೊಳ್ಳುತ್ತೇನೆ ಎಂದರು.

    ಪರಮೇಶ್ವರ್ ಉತ್ತರದಿಂದ ಗರಂ ಆದ ಸಿದ್ದರಾಮಯ್ಯ, ನೀವು ಡಿಸಿಎಂ ರೀ. ಪಕ್ಷದ ಹಿತ ಹಾಗೂ ಸರ್ಕಾರದ ಹಿತ ಎರಡು ಮುಖ್ಯ. ನಿಮಗೆ ಅಷ್ಟು ಅರ್ಥ ಆಗಲ್ವೇನ್ರಿ ಎಂದು ಏರು ಧ್ವನಿಯಲ್ಲಿಯೇ ಹೇಳಿದರು. ಪರಮೇಶ್ವರ್ ಪ್ರತಿಕ್ರಿಯೆ ನೀಡಿ, ರೀ ಸ್ವಾಮಿ 8 ವರ್ಷ ಪಕ್ಷದ ಅಧ್ಯಕ್ಷನಾಗಿದ್ದವನು ನಾನು. ಪಕ್ಷದ ಹಿತ ಕಾಯೋದು ಹೇಗೆ ಅಂತ ನನಗೆ ಗೊತ್ತು ಎಂದು ತಿರುಗೇಟು ನೀಡಿದರು.

    ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಜಗಳ ನೋಡಿ ಗಾಬರಿಯಾದ ವೇಣುಗೋಪಾಲ್ ಹಾಗೂ ದಿನೇಶ್ ಗುಂಡೂರಾವ್ ಮಧ್ಯ ಪ್ರವೇಶಿಸಿ ಸಮಾಧಾನ ಮಾಡಿದರು. ಈ ಸಮಸ್ಯೆಯನ್ನು ಹೈಕಮಾಂಡ್ ಗಮನಕ್ಕೆ ತರುತ್ತೇನೆ ಅವರೇ ತೀರ್ಮಾನ ಮಾಡಲಿ ಎಂದು ಹೇಳಿ ವೇಣುಗೋಪಾಲ್ ಅವರು ಸಭೆಯಿಂದ ಹೊರ ನಡೆದರು.

    ಸಭೆಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ವೇಣುಗೋಪಾಲ್, ನಾಯಕರು ಯಾವುದೇ ರೀತಿಯ ಜಗಳ ಮಾಡಿಕೊಂಡಿಲ್ಲ ಎಂದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆಗೆ ಹೈಕಮಾಂಡ್ ಮಾತುಕತೆ ನಡೆಸಲಿದೆ ಎಂದು ಮಾಹಿತಿ ನೀಡಿದರು.

    ಪರಮೇಶ್ವರ್ ಬಳಿ ಎರಡು ಖಾತೆ ಇರಬೇಕೋ? ಬೇಡವೋ ಎಂದು ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಒಂದು ವೇಳೆ ಒಂದು ಖಾತೆಯನ್ನು ಬಿಟ್ಟುಕೊಡಬೇಕು ಎನ್ನುವ ಆದೇಶ ಬಂದರೆ ಒಂದು ಖಾತೆಯನ್ನು ಅವರು ಬಿಟ್ಟುಕೊಡುವ ಪರಿಸ್ಥಿತಿ ಎದುರಾಗಲಿದೆ. ರಾಜ್ಯದಲ್ಲಿ 8 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ ಪರಮೇಶ್ವರ್ ಅವರ ಕೈಯನ್ನು ಹೈಕಮಾಂಡ್ ಹಿಡಿಯುತಾ? ಅಥವಾ ಸಿದ್ದರಾಮಯ್ಯ ಅವರ ಪಟ್ಟು ಗೆಲ್ಲುತ್ತಾ ಎನ್ನುವುದು ಈಗ ಸದ್ಯದ ಕುತೂಹಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೋಸ್ತಿ ಸರ್ಕಾರದಲ್ಲಿ ಹೊಸ ಕುಸ್ತಿ-ಪವರ್ ಫುಲ್ ಖಾತೆಗಳ ಬೆನ್ನುಬಿದ್ದ ಪ್ರಭಾವಿಗಳು!

    ದೋಸ್ತಿ ಸರ್ಕಾರದಲ್ಲಿ ಹೊಸ ಕುಸ್ತಿ-ಪವರ್ ಫುಲ್ ಖಾತೆಗಳ ಬೆನ್ನುಬಿದ್ದ ಪ್ರಭಾವಿಗಳು!

    ಬೆಂಗಳೂರು: ಇಷ್ಟು ದಿನ ಸಂಪುಟ ವಿಸ್ತರಣೆ ಯಾವಾಗ ಎಂಬ ಪ್ರಶ್ನೆ ಸಮ್ಮಿಶ್ರ ಸರ್ಕಾರದ ಅಂಗಳದಲ್ಲಿ ಕೇಳಿಬರುತ್ತಿತ್ತು. ಕಾಂಗ್ರೆಸ್ ಇಬ್ಬರು ಸಚಿವರಿಗೆ ಕೊಕ್ ನೀಡಿ ಸಂಪುಟವನ್ನು ಪುನರ್ ರಚನೆ ಮಾಡಿದೆ. ನೂತನ ಸಚಿವರಾಗಿ 8 ಕಾಂಗ್ರೆಸ್ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇದೀಗ ಖಾತೆ ಹಂಚಿಕೆ ಯಾವಾಗ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಮತ್ತೆ ಕೆಲವರು ಇದೇ ಖಾತೆಯನ್ನು ನೀಡಿ ಅಂತಾ ಲಾಭಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಹಾಲಿ ಸಚಿವರು ಮತ್ತು ನೂತನ ಸಚಿವರ ನಡುವೆ ಖಾತೆಗಾಗಿ ಶೀತಲ ಸಮರ ಏರ್ಪಟ್ಟಿದೆ. ಎಂ.ಬಿ.ಪಾಟೀಲ್ ಮತ್ತು ಪರಮೇಶ್ವರ್, ಡಿಕೆ ಶಿವಕುಮಾರ್ ನಡುವೆ ಖಾತೆಗಾಗಿ ಮುಸುಕಿನ ಗುದ್ದಾಟ ಏರ್ಪಟ್ಟಿದ್ದು, ಗೃಹ ಅಥವಾ ಜಲಸಂಪನ್ಮೂಲ ಖಾತೆ ನೀಡಬೇಕೆಂದು ಪಾಟೀಲರು ಪಟ್ಟು ಹಿಡಿದಿದ್ದಾರಂತೆ. ಇದೇ ರೀತಿಯಲ್ಲಿ ಸತೀಶ್ ಜಾರಕಿಹೊಳಿ ಮತ್ತು ಕೃಷ್ಣಭೈರೇಗೌಡರ ಮಧ್ಯೆಯೂ ಖಾತೆಗಾಗಿ ಪೈಪೋಟಿ ಏರ್ಪಟ್ಟಿದೆಯಂತೆ. ಕೃಷ್ಣೌಭೈರೇಗೌಡರ ಬಳಿಯಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯನ್ನು ನೀಡಬೇಕೆಂದು ಸತೀಶ್ ಜಾರಕಿಹೊಳಿ ಕೇಳಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಡಿಕೆಶಿವಕುಮಾರ್ ಜಲಸಂಪನ್ಮೂಲ ಖಾತೆಯನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲ. ಇತ್ತ ಜಿ.ಪರಮೇಶ್ವರ್ ಸಹ ಗೃಹ ಖಾತೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಕಾಂಗ್ರೆಸ್ ಮನೆಯಲ್ಲಿ ಸದಸ್ಯರ ನಡುವೆಯೇ ನಾ ಕೊಡೆ, ನಾ ಬಿಡೇ ಆರಂಭವಾಗಿದೆ.

    ಈ ಸಮಸ್ಯೆಯನ್ನು ಬಗೆಹರಿಸಲು ರಾಜಧಾನಿ ರಾಜ್ಯ ಉಸ್ತುವಾರಿ ನಾಯಕ ವೇಣುಗೋಪಾಲ್ ಆಗಮಿಸಿದ್ದಾರೆ. ಕೆಕೆ ಗೆಸ್ಟ್ ಹೌಸ್‍ನಲ್ಲಿರುವ ವೇಣುಗೋಪಾಲ್ ಅವರನ್ನು ನೂತನ ಸಚಿವರಾದ ಎಂಟಿಬಿ ನಾಗರಾಜ್ ಮತ್ತು ರಹೀಂ ಖಾನ್ ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎಂಟಿಬಿ ನಾಗರಾಜ್, ಪಕ್ಷದಲ್ಲಿ ಸಚಿವ ಸ್ಥಾನ ಸಿಗದವರಿಗೆ ಸಹಜವಾಗಿ ಅಸಮಾಧಾನ ಆಗುತ್ತೆ, ಹಾಗಂತ ಯಾರು ಪಕ್ಷ ಬಿಟ್ಟು ಹೋಗಲ್ಲ. ಅಸಮಾಧಾನವನ್ನ ನಮ್ಮ ನಾಯಕರು ಸರಿ ಮಾಡ್ತಾರೆ. ನನಗೆ ಇಂತಹದ್ದೇ ಖಾತೆ ಬೇಕು ಅಂತ ನಾನು ಕೇಳಿಲ್ಲ. ಯಾವುದೇ ಕೊಟ್ರು ಪ್ರಾಮಾಣಿಕವಾಗಿ ಕೆಲಸ ಮಾಡ್ತೀನಿ ಅಂತಾ ಹೇಳಿದ್ದಾರೆ.

    ಪ್ರತಿಬಾರಿಯೂ ಹೈದರಾಬಾದ್ ಕರ್ನಾಟಕಕ್ಕೆ ಅನ್ಯಾಯ ಆಗುತ್ತದೆ. ಈ ಅನ್ಯಾಯ ಸರಿಪಡಿಸುವಂತೆ ವೇಣುಗೋಪಾಲ್ ಅವರ ಬಳಿ ಮನವಿ ಮಾಡಿದ್ದೇನೆ. ಖಾತೆ ಕುರಿತು ಯಾವುದೇ ಮಾತುಕತೆ ನಡೆಸಿಲ್ಲ. ಯಾವುದೇ ಖಾತೆ ಕೊಟ್ರು ನಿಭಾಯಿಸುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಅಸಮಾಧಾನದ ಬಗ್ಗೆ ಗೊತ್ತಿಲ್ಲ. ಯಾವುದೇ ಖಾತೆ ನೀಡಿದರೂ ಓಕೆ ಅಂದಿದ್ದೇನೆ ಎಂದು ರಹೀಂ ಖಾನ್ ತಿಳಿಸಿದರು. ವೇಣುಗೋಪಾಲ್ ಅವರ ಸಮ್ಮುಖದಲ್ಲಿ ಸಭೆ ನಡೆಸಿ ಇಂದು ಸಂಜೆಯೊಳಗಾಗಿ ಖಾತೆ ಹಂಚಿಕೆಯಾಗುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ಕಿಚ್‍ಗುತ್ ಮಾರಮ್ಮ ದೇವಸ್ಥಾನ ಮುಜರಾಯಿ ವ್ಯಾಪ್ತಿಗೆ- ರಾಜಶೇಖರ ಪಾಟೀಲ್

    ಸುಳ್ವಾಡಿ ಕಿಚ್‍ಗುತ್ ಮಾರಮ್ಮ ದೇವಸ್ಥಾನ ಮುಜರಾಯಿ ವ್ಯಾಪ್ತಿಗೆ- ರಾಜಶೇಖರ ಪಾಟೀಲ್

    ಕಲಬುರಗಿ: ಚಾಮರಾಜನಗರದ ಸುಳ್ವಾಡಿ ಮಾರಮ್ಮನ ದೇವಸ್ಥಾನವನ್ನು ಮುಜರಾಯಿ ವ್ಯಾಪ್ತಿಗೆ ಸೇರಿಸಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಖಾತೆಯ ಸಚಿವ ರಾಜಶೇಖರ ಪಾಟೀಲ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ವಾಡಿ ದೇಗುಲದ ವಿಷ ಪ್ರಸಾದ ಸೇವನೆ ಪ್ರಕರಣದಿಂದಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಹೀಗಾಗಿ ಸುಳ್ವಾಡಿ ಮಾರಮ್ಮ ದೇವಾಸ್ಥಾನವನ್ನು ಮುಜರಾಯಿ ವ್ಯಾಪ್ತಿಗೆ ಸೇರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೇ ತಹಶೀಲ್ದಾರ್ ದೇವಸ್ಥಾನದ ಸರ್ವೇ ಕಾರ್ಯವನ್ನು ಸಹ ಮಾಡಿ ಮುಗಿಸಿದ್ದಾರೆ. ಇದರ ಜೊತೆ ಗ್ರಾಮಸ್ಥರು ಸಹ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕೆಂದು ಬೇಡಿಕೆಯಿಟ್ಟಿದ್ದಾರೆ. ಹೀಗಾಗಿ ಕೂಡಲೇ ಕಿಚ್‍ಗುತ್ ಮಾರಮ್ಮ ದೇವಾಲಯವನ್ನು ಶೀಘ್ರವೇ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರುತ್ತೇವೆಂದು ಹೇಳಿದ್ದಾರೆ.

    ಏನಿದು ಪ್ರಕರಣ?
    ಡಿಸೆಂಬರ್ 14ರ ಶುಕ್ರವಾರದಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ಗೋಪುರದ ಶಂಕುಸ್ಥಾಪನೆ ಕಾರ್ಯಕ್ರಮ ನೇರವೇರಿತ್ತು. ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದ ಬಳಿಕ, ಭಕ್ತರು ಪ್ರಸಾದದ ರೂಪದಲ್ಲಿ ರೈಸ್ ಬಾತ್ ಸೇವಿಸಿದ್ದರು. ಆದರೆ ಸ್ವಲ್ಪ ಸಮಯದ ನಂತರ ರೈಸ್ ಬಾತ್ ಸೇವಿಸಿದ್ದ 100 ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಬಿದ್ದಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯರು ಕೂಡಲೇ 108 ಆಂಬ್ಯುಲೆನ್ಸ್ ಗೆ ಕರೆ ಮಾಡಿ ಅಸ್ವಸ್ಥರನ್ನು ಆಸ್ಪತ್ರೆಗೆ ರವಾನಿಸಿದ್ದರು. ಅಸ್ವಸ್ಥರನ್ನು ಪರೀಕ್ಷಿಸಿದ್ದ ವೈದ್ಯರು, ಪ್ರಸಾದಲ್ಲಿ ವಿಷ ಬೆರೆತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೇ ವಿಧಿವಿಜ್ಞಾನ ವರದಿಯ ಪ್ರಕಾರ ಪ್ರಸಾದದಲ್ಲಿ ಆರ್ಗಾನ್ ಪಾಸ್ಫರಸ್ ಕಾಂಪೌಂಡ್ ಮೋನೋಕ್ರೋಟೋಫೋಸ್ ಎಂಬ ಕ್ರಿಮಿನಾಶಕ ಮಿಶ್ರಣವಾಗಿರುವುದಾಗಿ ಹೇಳಿತ್ತು. ಈ ಕ್ರಿಮಿನಾಶಕ ಮಿಶ್ರಣ ಮಾಡಿದ್ದ ಪ್ರಸಾದ ಸೇವಿಸಿದ್ದರ ಪರಿಣಾಮ ಇದುವರೆಗೂ 17 ಮಂದಿ ಮೃತಪಟ್ಟಿದ್ದರು.

    ಘಟನೆಗೆ ಕಾರಣವೇನು?
    ಸುಳ್ವಾಡಿ ದೇವಾಲಯದ ಟ್ರಸ್ಟ್ ನಲ್ಲಿ ಎರಡು ಬಣಗಳಿತ್ತು. ಟ್ರಸ್ಟ್ ಅಧ್ಯಕ್ಷರಾಗಿ ಇಮ್ಮಡಿ ಮಹದೇವಸ್ವಾಮೀಜಿ, ಸದಸ್ಯ ವಿ.ಮಾದಯ್ಯ, ವ್ಯವಸ್ಥಾಪಕ ಮಾದೇಶ್ ಒಂದು ಬಣವಾಗಿದ್ದರೆ, ಖಜಾಂಚಿ ನೀಲಕಂಠ ಶಿವಾಚಾರ್ಯ, ಉಪಾಧ್ಯಕ್ಷ ಪಿ.ಗುರುಮಲ್ಲಪ್ಪ, ಕಾರ್ಯದರ್ಶಿ ಶಶಿಬಿಂಬ, ಸದಸ್ಯರಾದ ಚಿನ್ನಪ್ಪಿ, ಪಿ.ಶಿವಣ್ಣ, ಎಚ್.ಲೋಕೇಶ್, ಎನ್.ಕೇಶವಮೂರ್ತಿ ಮತ್ತೊಂದು ಬಣವಾಗಿತ್ತು.

    ಮಾರಮ್ಮ ದೇವಸ್ಥಾನಕ್ಕೆ ಇತ್ತೀಚೆಗೆ ಲಕ್ಷಾಂತರ ಆದಾಯ ಬರತೊಡಗಿತ್ತು. ಹರಕೆ ರೂಪದಲ್ಲಿ ಬಂದ ಚಿನ್ನಾಭರಣ ಹಾಗೂ ಹಣಕಾಸನ್ನು ಇಮ್ಮಡಿ ಮಹದೇವಸ್ವಾಮಿ ಕೊಂಡೊಯ್ಯುತ್ತಿದ್ದರು. ಇದು ಇನ್ನೊಂದು ಬಣಕ್ಕೆ ನುಂಗಲಾರದ ತುತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ಬಣದ ನಡುವೆ ಗಲಾಟೆಗಳು ನಡೆಯುತ್ತಿದ್ದವು. ಈ ನಡುವೆ ದೇವಸ್ಥಾನದ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಇಮ್ಮಡಿ ಸ್ವಾಮೀಜಿ ಪ್ರಯತ್ನ ನಡೆಸುತ್ತಿದ್ದ.

    ಹೇಗಾದರೂ ಮಾಡಿ ಇನ್ನೊಂದು ಬಣಕ್ಕೆ ಕೆಟ್ಟ ಹೆಸರು ತರಬೇಕೆಂಬ ಕೆಟ್ಟ ಆಲೋಚನೆ ಇಮ್ಮಡಿ ಸ್ವಾಮೀಜಿಯದ್ದಾಗಿತ್ತು. ಆಗ ಪ್ರಸಾದಕ್ಕೆ ವಿಷ ಬೆರೆಸುವ ಕುತಂತ್ರ ಹೊಳೆದಿದೆ. ವಿಷಮಿಶ್ರಿತ ಪ್ರಸಾದ ಸೇವಿಸಿದವರು ವಾಂತಿ ಮಾಡಿ ಅಸ್ವಸ್ಥಗೊಳ್ಳುತ್ತಾರೆ. ಆಗ ಟ್ರಸ್ಟಿ ಚಿನ್ನಪ್ಪಿ ಹಾಗೂ ಇತರರಿಗೆ ಕೆಟ್ಟ ಹೆಸರು ಬರುತ್ತದೆ. ಇದರಿಂದಾಗಿ ದೇವಸ್ಥಾನ ಸಂಪೂರ್ಣವಾಗಿ ತಮ್ಮ ಆಡಳಿತಕ್ಕೆ ಒಳಪಡುತ್ತೆ ಎಂಬುದು ಸ್ವಾಮೀಜಿ ಪ್ಲಾನ್ ಮಾಡಿಕೊಂಡಿದ್ದ.

    ಸ್ವಾಮೀಜಿ ಕೃತ್ಯಕ್ಕೆ ವ್ಯವಸ್ಥಾಪಕ ಮಾದೇಶ್, ಮಾದೇಶನ ಹೆಂಡತಿ ಅಂಬಿಕಾ (ಅಂಬಿಕಾ ಸ್ವಾಮೀಜಿಯ ಸಂಬಂಧಿಯೂ ಹೌದು). ಈ ಮೂವರು ಸೇರಿ ಪ್ರಸಾದಕ್ಕೆ ವಿಷ ಬೆರೆಸಲು ಸಂಚು ರೂಪಿಸಿದ್ದರು. ಕ್ರಿಮಿನಾಶಕ ತಂದು ನಾಗರಕೊಯೀಲು ದೇವಸ್ಥಾನದ ಅರ್ಚಕ ದೊಡ್ಡಯ್ಯನಿಂದ ಪ್ರಸಾದದಲ್ಲಿ ವಿಷ ಬೆರೆಸಿದ್ದರು. ಪ್ರಕರಣದ ತೀವ್ರತೆಯನ್ನು ಅರಿತ ಪೊಲೀಸರು ತೀವ್ರವಾಗಿ ತನಿಖೆ ನಡೆಸಿದಾಗ ಈ ನಾಲ್ವರು ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಸದ್ಯ ನಾಲ್ವರು ಆರೋಪಿಗಳನ್ನು ವಿಚಾರಣೆಗೊಳಪಡಿಸಿ, ಜೈಲಿಗೆ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೋಸ್ತಿ ಸರ್ಕಾರದಲ್ಲಿ ಸಚಿವ ರೇವಣ್ಣ ಮತ್ತೆ ದರ್ಬಾರ್..!

    ದೋಸ್ತಿ ಸರ್ಕಾರದಲ್ಲಿ ಸಚಿವ ರೇವಣ್ಣ ಮತ್ತೆ ದರ್ಬಾರ್..!

    ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸೂಪರ್ ಸಿಎಂ ಎಂದೇ ಸುದ್ದಿಯಾಗಿರುವ ಲೋಕೋಪಯೋಗಿ ಸಚಿವ ರೇವಣ್ಣ ಇದೀಗ ಮತ್ತೆ ತನ್ನ ದರ್ಬಾರ್ ಆರಂಭಿಸಿದ್ದಾರೆ.

    ಎಂಜಿನಿಯರ್ ಗಳ ವರ್ಗಾವಣೆ ಆದೇಶ ಗಂಟೆಯೊಳಗೆ ಮಾರ್ಪಾಡು ಮಾಡಿದ್ದಾರೆ. ಸಚಿವ ರೇವಣ್ಣ ಮೌಖಿಕ ಸೂಚನೆ ಮೇರೆಗೆ ವರ್ಗಾವಣೆ ಆದೇಶ ಚೇಂಜ್ ಮಾಡಲಾಗಿದೆ. ಆದ್ರೆ ಇದಕ್ಕೆ ರೇವಣ್ಣ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಒಪ್ಪಿಗೆ ಪಡೆದಿಲ್ಲ ಎನ್ನಲಾಗಿದೆ.

    ಸಣ್ಣ ನೀರಾವರಿ ಇಲಾಖೆ ಉತ್ತರ ವಲಯಕ್ಕೆ ರಾಮಕೃಷ್ಣ ವರ್ಗವಾಗಿದ್ದರು. ಆದ್ರೆ ಇದೀಗ ಅವರನ್ನು ಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿದೆ. ರೇವಣ್ಣ ಅವರ ಈ ನಡೆ ಬಗ್ಗೆ ಕಾಂಗ್ರೆಸ್ ಸಚಿವರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಪಿಎಸ್‍ಸಿ ಆಯುಕ್ತರ ಹುದ್ದೆಗೆ ಪ್ರಭಾವಿಗಳ ಮಧ್ಯೆ ಫೈಟ್..!

    ಕೆಪಿಎಸ್‍ಸಿ ಆಯುಕ್ತರ ಹುದ್ದೆಗೆ ಪ್ರಭಾವಿಗಳ ಮಧ್ಯೆ ಫೈಟ್..!

    ಬೆಂಗಳೂರು: ಮೈತ್ರಿ ಸರ್ಕಾರದ ಬುಡದಲ್ಲೀಗ ಕೆಪಿಎಸ್‍ಸಿ ಆಯುಕ್ತರ ಹುದ್ದೆಗಾಗಿ ಪ್ರಭಾವಿಗಳ ಮಧ್ಯೆ ಟಫ್ ಫೈಟ್ ಆರಂಭವಾಗಿದೆ.

    ಶ್ಯಾಂ ಭಟ್‍ರಿಂದ ತೆರವಾಗಿರುವ ಕೆಪಿಎಸ್‍ಸಿ ಆಯುಕ್ತರ ಸ್ಥಾನವನ್ನು ತಮ್ಮ ಆಪ್ತರಿಗೆ ಕೊಡಲು ನಾಯಕರ ಮಧ್ಯೆ ಸದ್ದಿಲ್ಲದ ಸಮರ ಶುರುವಾಗಿದೆ. ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹಾಗೂ ಸಚಿವ ಡಿಕೆ ಶಿವಕುಮಾರ್ ಕೆಪಿಎಸ್‍ಸಿ ಆಯುಕ್ತರ ಹುದ್ದೆ ಫೈಟ್‍ಗೆ ಮಹೂರ್ತ ಇಡಲಾಗಿದೆ.


    ಡಾ.ಲಕ್ಷ್ಮಿ ಅಶ್ವಿನ್ ಗೌಡರಿಗೆ ಕೆಪಿಎಸ್‍ಸಿ ಆಯುಕ್ತರ ಹುದ್ದೆ ಕೊಡಲು ಸಿಎಂ ಪ್ರಯತ್ನ ಮಾಡುತ್ತಿದ್ದಾರೆ. ಡಿಕೆಶಿ ಕೂಡ ತಮ್ಮ ಆಪ್ತ ವಿನಯ್ ಸಂಬಂಧಿ ರಘುನಂದನ್ ರಾಜಣ್ಣಗೆ ಈ ಹುದ್ದೆ ಕೊಡಿಸಲು ಯತ್ನಿಸುತ್ತಿದ್ದಾರೆ. ಅಷ್ಟಕ್ಕೂ ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ಆಯುಕ್ತ ಸ್ಥಾನ ಕೊಡೋದಕ್ಕೆ ಸಿಎಂ ಟೊಂಕ ಕಟ್ಟಿ ನಿಂತಿದ್ಯಾಕೆ ಅನ್ನೋದು ಇದೀಗ ಪ್ರಶ್ನೆಯಾಗಿದೆ.

    ಐಆರ್‍ಎಸ್ ಹುದ್ದೆಗೆ 2018 ಫೆಬ್ರವರಿಯಲ್ಲಿ ರಾಜೀನಾಮೆ ಕೊಟ್ಟು ಲಕ್ಷ್ಮಿ ರಾಜಕೀಯ ಅಖಾಡಕ್ಕೆ ಧುಮುಕಿದ್ದರು. ಆದ್ರೆ ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ವಿಧಾನಸಭೆ, ಮಂಡ್ಯ ಲೋಕಸಭಾ ಚುನಾವಣೆಗೆ ಟಿಕೆಟ್ ಮಿಸ್ ಆಗಿತ್ತು. ಇದೆಲ್ಲವೂ ನಿಖಿಲ್ ಕುಮಾರ್ ಸ್ವಾಮಿಗಾಗಿ ಸಿಎಂ ಕಸರತ್ತು ಮಾಡುತ್ತಿದ್ದಾರೆ. ಮಗನ ರಾಜಕೀಯ ನೆಲೆಗಾಗಿ “ಲಕ್ಷ್ಮಿ”ಗೆ ಬೇರಡೆ ಶಾಶ್ವತ ನೆಲೆ ಕೊಟ್ರಾ ಸಿಎಂ ಅಥವಾ ನಾಗಮಂಗಲದ ರಾಜಕೀಯ ದಾರಿ ಮಗನಿಗಾಗಿ ಸುಲಭವಾಗಿ ಮಾಡಲು ಸಿಎಂ ಪ್ಲಾನ್ ಮಾಡಿದ್ರಾ ಅನ್ನೋ ಚರ್ಚೆಗಳು ಈಗ ಎದ್ದಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕರ ಬೆಂಬಲಿಗರಿಂದ ಪ್ರತಿಭಟನೆ

    ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕರ ಬೆಂಬಲಿಗರಿಂದ ಪ್ರತಿಭಟನೆ

    ಬೆಂಗಳೂರು: ಒಂದೆಡೆ ಸಚಿವ ಸಂಪುಟ ವಿಸ್ತರಣೆಯಾಗಿದ್ರೆ ಮತ್ತೊಂದೆಡೆ ಭಿನ್ನಮತ ಭುಗಿಲೆದ್ದಿದೆ. ತಮ್ಮ ನಾಯಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಯಾಗಿ 6 ತಿಂಗಳಿನಿಂದಲೂ ಮುಂದೂಡಿಕೆಯಲ್ಲಿದ್ದ ಎರಡನೇ ಹಂತದ ಸಚಿವ ಸಂಪುಟ ಬೇಗುದಿ ನಡುವೆ ಕೊನೆಗೂ ವಿಸ್ತರಣೆಯಾಗಿದೆ. ಇದು ಪೂರ್ಣ ಪ್ರಮಾಣದದ್ದಲ್ಲ. ಯಾಕಂದ್ರೆ, ಕೇವಲ ಕಾಂಗ್ರೆಸ್ ಕೋಟಾ ಮಾತ್ರ ಭರ್ತಿಯಾಗಿದೆ. ಇತ್ತ ರಾಜಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆದರೇ ಇತ್ತ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕಾರ್ಯಕರ್ತರ ಆಕ್ರೋಶ ಕಟ್ಟೆಯೊಡೆದಿತ್ತು.

    ಕಲಬುರಗಿಯ ಚಿಂಚೊಳ್ಳಿ ಶಾಸಕ ಡಾ ಉಮೇಶ್ ಜಾಧವ್, ಜೇವರ್ಗಿಯ ಅಜಯ್ ಸಿಂಗ್‍ಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಎರಡೂ ತಾಲೂಕುಗಳಲ್ಲಿ ಬೆಂಬಲಿಗರು ಟೈರ್‍ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಹಿರಿಯ ನಾಯಕ ಹಾಗು ಎಂಎಲ್‍ಸಿ ಕೆ.ಸಿ.ಕೊಂಡಯ್ಯ ಅವರು ಸಿದ್ದರಾಮಯ್ಯ ಕಟ್ಟಿರೋ ಟೀಮ್‍ನಲ್ಲಿ ಅನುಭವಿಗಳ ಕೊರತೆ ಇದೆ. ಮಲ್ಲಿಕಾರ್ಜುನ ಖರ್ಗೆ ಸಲಹೆಯನ್ನು ಕಡೆಗಣಿಸಲಾಗಿದೆ ಅಂತ ಹುಬ್ಬಳ್ಳಿಯಲ್ಲಿ ಕಿಡಿಕಾರಿದ್ದಾರೆ.

    ಶಾಸಕ ನಾಗೇಂದ್ರಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆ ಬೆಂಬಲಿಗರು ಬಳ್ಳಾರಿಯ ರಾಯಲ್ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿ ಸಚಿವ ಡಿಕೆ ಶಿವಕುಮಾರ್, ಸಂಸದ ಉಗ್ರಪ್ಪ ಬ್ಯಾನರ್‍ಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರಹಾಕಿದರು. ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಸಚಿವ ಸ್ಥಾನ ತಪ್ಪಿದ ಹಿನ್ನಲೆ ಭೀಮಾನಾಯ್ಕ್ ಬೆಂಬಲಿಗರು ಹಾಗೂ ಕೈ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಿದರು. ಅರಣ್ಯ ಮತ್ತು ಪರಿಸರ ಖಾತೆಯ ಸಚಿವ ಸ್ಥಾನದಿಂದ ಆರ್.ಶಂಕರ್ ಕೈಬಿಟ್ಟ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಕೋರ್ಟ್ ಸರ್ಕಲ್ ನಲ್ಲಿ ಟೈರ್‍ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ರು. ಇತ್ತ ಚಿತ್ರದುರ್ಗದ ಚಳ್ಳಕೆರೆ ಶಾಸಕ ರಘುಮೂರ್ತಿ ಬೆಂಬಲಿಗರು ಸಿಡಿದೆದ್ದಿದ್ದಾರೆ.

    ರಾಜ್ಯ ರಾಜಕಾರಣ ಇದೀಗ ಕುತೂಹಲ ಘಟ್ಟ ತಲುಪಿದೆ. ಅಸಮಾಧಾನದಿಂದಾಗಿ ಮೈತ್ರಿ ಸರ್ಕಾರ ಉರುಳುತ್ತಾ….? ಅಥವಾ ಭಿನ್ನಮತ ಶಮನ ಆಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೀರಿನ ಟ್ಯಾಂಕ್ ಹತ್ತಿ ಬಿ.ಸಿ ಪಾಟೀಲ್ ಬೆಂಬಲಿಗ ಆತ್ಮಹತ್ಯೆಗೆ ಯತ್ನ

    ನೀರಿನ ಟ್ಯಾಂಕ್ ಹತ್ತಿ ಬಿ.ಸಿ ಪಾಟೀಲ್ ಬೆಂಬಲಿಗ ಆತ್ಮಹತ್ಯೆಗೆ ಯತ್ನ

    ಹಾವೇರಿ: ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್‍ಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಬೆಂಬಲಿಗನೋರ್ವ ನೀರಿನ ಟ್ಯಾಂಕ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಿರೇಕೆರೂರಿನಲ್ಲಿ ನಡೆದಿದೆ.

    ಶಾಸಕ ಬಿ.ಸಿ ಪಾಟೀಲ್ ಮನೆ ಮುಂದೆ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಶಾಸಕ ಬಿ.ಸಿ ಪಾಟೀಲ್ ಸಮಾಧಾನ ಪಡಿಸಲು ಆಗಮಿಸಿದರು. ಮನೆ ಮುಂದೆ ಇರುವ ನೀರಿನ ಟ್ಯಾಂಕ್ ಮೇಲೆ ಬೆಂಬಲಿಗ ಪುಟ್ಟೇಶ್ ಗೊರವರ್ ಹತ್ತಿದ್ದಾನೆ. ಸಚಿವ ಸ್ಥಾನವನ್ನು ನೀಡಬೇಕು ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದರು. ನಂತರ ಬಿ.ಸಿ ಪಾಟೀಲ್ ಸಮಾಧಾನ ಪಡಿಸಿ ಹಾಗೂ ಪೊಲೀಸರು ಟ್ಯಾಂಕ್ ಮೇಲೆ ಹತ್ತಿ ಪುಟ್ಟೇಶ್ ನನ್ನು ಕೆಳಗಡೆ ಇಳಿಸಿದರು.

    ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಶಾಸಕ ಬಿ.ಸಿ ಪಾಟೀಲ್ ನಿವಾಸದ ಮುಂದೆ ಅಭಿಮಾನಿಗಳು, ಕಾರ್ಯಕರ್ತರು ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿ.ಸಿ ಪಾಟೀಲ್ ಮೂರು ಭಾರಿ ಆಯ್ಕೆ ಆಗಿದ್ದಾರೆ. ಮತ್ತೆ ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv