Tag: minister

  • ಮೋದಿ ಬಂದ್ಮೇಲೆ ಐಟಿ ಇಲಾಖೆ ವ್ಯತಿರಿಕ್ತವಾಗ್ತಿದೆ – ಸಚಿವ ವೆಂಕಟರಾವ್ ನಾಡಗೌಡ

    ಮೋದಿ ಬಂದ್ಮೇಲೆ ಐಟಿ ಇಲಾಖೆ ವ್ಯತಿರಿಕ್ತವಾಗ್ತಿದೆ – ಸಚಿವ ವೆಂಕಟರಾವ್ ನಾಡಗೌಡ

    ಕೊಪ್ಪಳ: ಸ್ಯಾಂಡಲ್‍ವುಡ್ ಸ್ಟಾರ್ ನಟರ ಮನೆಮೇಲೆ ಐಟಿ ದಾಳಿಗೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ ಅಂತ ಪಶುಸಂಗೋಪನಾ ಹಾಗೂ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.

    ಜಿಲ್ಲೆ ಗಂಗಾವತಿ ತಾಲೂಕಿನ ಆನೆಗುಂದಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಮೇಲೆ ಯಾಕೆ ಐಟಿ ದಾಳಿಯಾಗುತ್ತಿಲ್ಲ ಎಂಬುದನ್ನು ಮೋದಿಯವರ ಬಳಿಯೇ ಕೇಳಬೇಕು. ನನ್ನ ಕೇಳಿದ್ರೆ ಏನ್ ಹೇಳಲಿ. ಐಟಿ ಮುಂಚೆಯಿಂದಲೂ ಇದ್ದ ಇಲಾಖೆ. ಈಗ ಅದು ಮೋದಿಯವರ ಕೈಯಲ್ಲಿ ಬಹಳ ವ್ಯತಿರಿಕ್ತವಾಗಿ ಉಪಯೋಗವಾಗುತ್ತಿದೆ. ಈ ಮೂಲಕ ಏನೆಲ್ಲ ಮಾಡೋದಿಕೆ ಸಾಧ್ಯ ಇದೆಯೋ ಅವೆಲ್ಲವನ್ನೂ ಮಾಡುತ್ತಿದ್ದಾರೆ ಅಂತ ಅವರು ಆರೋಪಿದ್ರು.

    ಸಿನಿಮಾ ನಟರು ಹೆಚ್ಚೇನಲ್ಲ. ಬರೀ ರಾಜಕಾರಣಿಗಳ ಮೇಲಷ್ಟೇ ಐಟಿ ದಾಳಿಯಾಗಬೇಕಾ ಎಂದು ಪ್ರಶ್ನಿಸಿದ್ರು. ಸಿನಿಮಾ ನಟರು, ವಕೀಲರು, ವೈದ್ಯರ ಮೇಲೂ ಐಟಿ ದಾಳಿಯಾಗುತ್ತದೆ. ಯಾರು ಸಂಪತ್ತು ಜಾಸ್ತಿ ಗಳಿಸಿದ್ದಾರೆ ಅವರ ಮೇಲೆ ರೇಡ್ ಮಾಡುತ್ತಾರೆ. ಬಡವರ ಮೇಲೆ ದಾಳಿ ಮಾಡಕ್ಕಾಗುತ್ತಾ..? ರಾಜಕಾರಣಕ್ಕೂ ಐಟಿ ದಾಳಿಗೂ ಯಾವುದೇ ಸಂಬಂಧವಿಲ್ಲ. ಸಿನಿಮಾ ನಟರ ಮೇಲೆ ಯಾಕೆ ಪಾಪ ರಾಜಕಾರಣ ಮಾಡ್ತಾರೆ ಅಂತ ಅವರು ಸ್ಪಷ್ಟಪಡಿಸಿದ್ರು.

    ಕಳೆದ ಎರಡು ದಿನಗಳಿಂದ ನಟರಾದ ಕಿಚ್ಚ ಸುದೀಪ್, ಯಶ್, ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರ ಮನೆಮೇಲೆ ಐಟಿ ದಾಳಿ ನಡೆಸಿತ್ತು. ಪುನೀತ್, ಶಿವರಾಜ್‍ಕುಮಾರ್, ಸುದೀಪ್ ನಿವಾಸದಲ್ಲಿ ಪರಿಶೀಲನೆ ಅಂತ್ಯಗೊಂಡಿದೆ. ನಿರ್ಮಾಪಕರಾದ ವಿಜಯ ಕಿರಗಂದೂರು, ಸಿ.ಆರ್.ಮನೋಹರ್, ರಾಕ್‍ಲೈನ್ ವೆಂಕಟೇಶ್, ಜಯಣ್ಣ ಮನೆಯಲ್ಲಿ ಪರಿಶೀಲನೆ ಮುಂದುವರಿಯುತ್ತಿದೆ.

    ಸ್ಟಾರ್ ನಟರ ಮನೆಯಲ್ಲಿ ಕೆಜಿಗಟ್ಟಲೆ ಬೆಳ್ಳಿ, ಚಿನ್ನ ಮತ್ತು ಹಣ ಪತ್ತೆಯಾಗಿದೆ. ಈ ಬಂಗಾರ ಮತ್ತು ಹಣಕ್ಕೆ ಸೂಕ್ತ ದಾಖಲೆ ತೋರಿಸಿದ ನಂತರವಷ್ಟೇ ಈ ಆಸ್ತಿಗಳು ಮನೆ ಸೇರಲಿದೆ. ಇದರ ಜೊತೆ ಸಾಕಷ್ಟು ಬ್ಯುಸಿನೆಸ್ ನಲ್ಲಿ ಹೂಡಿಕೆ ಮಾಡಿರುವ ಕಾರಣ ಎಲ್ಲದಕ್ಕೂ ದಾಖಲೆ ನೀಡಬೇಕಾಗುತ್ತದೆ. ಈ ಕಾರಣಕ್ಕೆ ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲು ಒಂದು ವಾರದ ಗಡುವನ್ನು ಸ್ಟಾರ್ ನಟರು ಕೇಳಿದ್ದಾರೆ ಎನ್ನುವ ಮಾಹಿತಿ ಐಟಿ ಮೂಲಗಳಿಂದ ಸಿಕ್ಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಧಾನಸೌಧದ ಬಾಗಿಲು ಒಡೆದು ಒಳಗೆ ಕುಳಿತುಕೊಳ್ಳಲಿ – ಬಿಎಸ್‍ವೈಗೆ ಡಿಕೆಶಿ ಟಾಂಗ್

    ವಿಧಾನಸೌಧದ ಬಾಗಿಲು ಒಡೆದು ಒಳಗೆ ಕುಳಿತುಕೊಳ್ಳಲಿ – ಬಿಎಸ್‍ವೈಗೆ ಡಿಕೆಶಿ ಟಾಂಗ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಸಿಎಂ ಆಗಲು ತುದಿಗಾಲಲ್ಲಿ ನಿಂತಿದ್ದಾರೆ. ವಿಧಾನಸೌಧ ಬಾಗಿಲು ಒಡೆದು ಹೋಗಿ ಬೇಕಾದ್ರೆ ಅವರು ಒಳಗೆ ಕುಳಿತುಕೊಳ್ಳಲಿ ಎಂದು ಜಲಸಂಪನ್ಮೂಲ ಖಾತೆ ಸಚಿವ ಡಿ ಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

    ನಾವು ಸನ್ಯಾಸಿಗಳಲ್ಲ ಎಂಬ ಯಡಿಯೂರಪ್ಪ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ದೆಹಲಿಯಲ್ಲಿ ಏನ್ ಮಾಡಿದ್ರು, ಮುಂಬೈಯಲ್ಲಿ ಏನ್ ಮಾಡಿದ್ರು ಅಂತ ನಮಗೆ ಗೊತ್ತಿಲ್ವೇ? ಪಾಪ ಅವರು ಮಾಡೋದು ಮಾಡಲಿ. ರಾಜಕೀಯದಲ್ಲಿ ಯಾರೂ ಗೂಟ ಹೊಡ್ಕೊಂಡು ಒಂದೇ ಕಡೆ ಕೂರಕ್ಕಾಗಲ್ಲ ಎಂದು ಬಿಜೆಪಿಗೆ ಡಿಕೆಶಿ ತಿರುಗೇಟು ಕೊಟ್ಟರು.

    ಇದೇ ವೇಳೆ ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಎನ್ನುವ ಪ್ರಶ್ನೆಗೆ ನನಗೆ ಗೊತ್ತಿಲ್ಲ ಎಂದ ಡಿಕೆಶಿ ಆ ವಿಚಾರ ಯಡಿಯೂರಪ್ಪನವರಿಗೆ ಗೊತ್ತಿರಬಹುದೆಂದು ಎಂದು ಹೇಳಿ ಮತ್ತೊಮ್ಮೆ ಕೆಣಕಿದರು.

    ಇದೇ ಸಂದರ್ಭದಲ್ಲಿ ಮಾತಾಡಿದ ಡಿಸಿಎಂ ಜಿ.ಪರಮೇಶ್ವರ್, ಈ ಹಿಂದೆ ಬಿಜೆಪಿಯವರು ಕುದುರೆ ವ್ಯಾಪಾರ ಮಾಡಿ ಸಕ್ಸಸ್ ಆಗಿದ್ದರು. ಅದರಲ್ಲಿ ಅವರು ನಿಸ್ಸೀಮರು. ಈಗ ಮತ್ತೆ ಶುರುವಿಟ್ಟುಕೊಂಡಿದ್ದಾರೆ. ಆದರೆ ಇದ್ರಲ್ಲಿ ಬಿಜೆಪಿಯವರು ಸಫಲವಾಗಲ್ಲ ಎಂದು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv  

  • ಸಿಎಂ ಕುಮಾರಸ್ವಾಮಿ ಆದೇಶಕ್ಕೆ ತಡೆತಂದ ಸೂಪರ್ ಸಿಎಂ ರೇವಣ್ಣ!

    ಸಿಎಂ ಕುಮಾರಸ್ವಾಮಿ ಆದೇಶಕ್ಕೆ ತಡೆತಂದ ಸೂಪರ್ ಸಿಎಂ ರೇವಣ್ಣ!

    ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಮತ್ತೆ ಸೂಪರ್ ಸಿಎಂ ಎಂಬುದನ್ನು ಸಾಬೀತುಪಡಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಮೋಹನ್ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆದೇಶ ಹೊರಡಿಸಿದ್ದರು. ಆದರೆ ಈ ಆದೇಶಕ್ಕೆ ಸಚಿವ ರೇವಣ್ಣ ಅವರು ತಡೆಯಾಜ್ಞೆ ನೀಡಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯರು ಆರೋಪಿಸಿದ್ದಾರೆ.

    ಏನಿದು ಪ್ರಕರಣ?:
    ಯಂಟಗಾನಹಳ್ಳಿ ಗ್ರಾಮ ಪಿಡಿಓ ಮೋಹನ್ ಕುಮಾರ್ ವಿರುದ್ಧ ಕರ್ತವ್ಯಲೋಪ ಹಾಗೂ ಸರ್ವಾಧಿಕಾರಿ ಧೋರಣೆ ಆರೋಪ ಕೇಳಿಬಂದಿತ್ತು. ಈ ಸಂಬಂಧ ಗ್ರಾಮ ಪಂಚಾಯತಿ ಸದಸ್ಯರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೂರು ನೀಡಿ, ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಸಿಎಂ ಕುಮಾರಸ್ವಾಮಿ ಅವರು ಮೋಹನ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದರು. ಆದರೆ ಮೋಹನ್ ಕುಮಾರ್ ಸಚಿವ ರೇವಣ್ಣ ಅವರ ಸಹಾಯ ಪಡೆದು ವರ್ಗಾವಣೆಗೆ ತಡೆ ತಂದಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯರು ಆರೋಪಿಸಿದ್ದಾರೆ.

    ಮೋಹನ್ ಕುಮಾರ್ ಅವರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ನಾವು ಕರೆ ಮಾಡಿದರೆ ಫೋನ್ ಅಟೆಂಡ್ ಮಾಡಲ್ಲ. ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಜಾರಿಗೆ ತರುವುದಿಲ್ಲ. ನಮಗೆ ಇಷ್ಟ ಬಂದ ನಿರ್ಣಯಗಳನ್ನು ಮಾತ್ರ ಜಾರಿಗೆ ತರುತ್ತಾರೆ. ಹೀಗೆ ಏಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರೆ ಯಾವುದೇ ಪ್ರಕ್ರಿಯೆ ನೀಡುವುದಿಲ್ಲ ಎಂದು ಸದಸ್ಯರು ದೂರಿದರು.

    ಮೋಹನ್ ಕುಮಾರ್ ವರ್ಗಾವಣೆಗೆ ತಡೆ ಬಿದ್ದಿದ್ದರಿಂದ ಯಂಟಗಾನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು, ಪಂಚಾಯತಿಯ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಸಚಿವ ರೇವಣ್ಣ ವಿರುದ್ಧ ಆಕ್ರೋಶ ಹೊರಹಾಕಿ, ಮೋಹನ್ ಕುಮಾರ್ ಅವರನ್ನು ವರ್ಗಾವಣೆ ಮಾಡಲೇಬೇಕು ಎಂದು ಪಟ್ಟು ಹಿಡಿದು ಪ್ರತಿಭಟಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ವಿದೇಶ ಪ್ರವಾಸ ಕೈಗೊಂಡ್ರೇ ಅದೇನು ದೊಡ್ಡ ಅಪರಾಧವಲ್ಲ: ಸಚಿವ ಶಿವಶಂಕರರೆಡ್ಡಿ

    ಸಿಎಂ ವಿದೇಶ ಪ್ರವಾಸ ಕೈಗೊಂಡ್ರೇ ಅದೇನು ದೊಡ್ಡ ಅಪರಾಧವಲ್ಲ: ಸಚಿವ ಶಿವಶಂಕರರೆಡ್ಡಿ

    ಚಿಕ್ಕಬಳ್ಳಾಪುರ: ಸಿಎಂ ಕುಮಾರಸ್ವಾಮಿ ಎರಡು ದಿನ ಪ್ರವಾಸ ಕೈಗೊಂಡರೆ ಅದೇನು ದೊಡ್ಡ ಅಪರಾಧವಲ್ಲ, ಆರೋಗ್ಯ ದೃಷ್ಟಿ ಹಾಗೂ ಬೇರೆ ಬೇರೆ ಕಾರಣಕ್ಕೆ ಹೋಗಿರಬಹುದು. ಆದರೆ ಇದಕ್ಕೆ ವಿರೋಧ ಪಕ್ಷಗಳು ಬರಗಾಲದಲ್ಲಿ ವಿದೇಶ ಪ್ರವಾಸ ಅಂತ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕು ದಿಬ್ಬೂರು ಗ್ರಾಮದಲ್ಲಿ ನಡೆದ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಬರ ನಿರ್ವಹಣೆ ಸಂಬಂಧ ಸರ್ಕಾರ ಸೂಕ್ತ ಕ್ರಮಗಳನ್ನ ಕೈಗೊಳ್ಳುತ್ತಿದೆ. ಆದರೆ ವಿಪಕ್ಷದವರು ಬರಗಾಲದಲ್ಲಿ ವಿದೇಶ ಪ್ರವಾಸ ಅಂತ ಬೇರೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

    ಸಮ್ಮಿಶ್ರ ಸರ್ಕಾರದಲ್ಲಿ ಕೆಲ ವಿಷಯಗಳಿಗೆ ಭಿನ್ನಾಭಿಪ್ರಾಯಗಳು ಸಾಮಾನ್ಯ, ಪಕ್ಷದ ನಾಯಕರೇ ಆಗಲಿ, ಮಂತ್ರಿಗಳೇ ಆಗಲಿ ಕೂತು ಬಗೆ ಹರಿಸಿಕೊಳ್ಳಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನ ಹತ್ತಿಕ್ಕಲು ನಾವು ದೇಶ-ರಾಜ್ಯದ ಹಿತದೃಷ್ಟಿಯಿಂದ ಒಂದಾಗಿ ಹೋಗಬೇಕಿದೆ. ಹೀಗಾಗಿ ಯಾರೂ ಕೂಡ ಯಾವುದೇ ಭಿನ್ನಾಭಿಪ್ರಾಯಗಳು ಬಂದಾಗ ಮಿತಿ ಮೀರಿ ಮಾತನಾಡುವುದು ಸರಿಯಲ್ಲ ಎಂದರು.

    ಇದೇ ವೇಳೆ ಚಿಕ್ಕಬಳ್ಳಾಪುರ ಶಾಸಕ ಡಾ ಕೆ. ಸುಧಾಕರ್‍ಗೆ ಪರಿಸರ ಮಾಲಿನ್ಯ ಮಂಡಳಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ ಎನ್ನಲಾದ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ಅದರದ್ದೇ ಆದ ಮಾನದಂಡಗಳಿವೆ, ಈ ವಿಷಯವನ್ನು ನಾನು ಸಹ ಮಾಧ್ಯಮದಲ್ಲಿ ಗಮನಿಸಿದೆ, ಪಿಸಿಬಿ ಅಧ್ಯಕ್ಷರಾಗಲು ಅದರದ್ದೇ ಆದ ವಿದ್ಯಾಭ್ಯಾಸದ ಅರ್ಹತೆ ಇರಬೇಕು ಜೊತೆಗೆ ಪರಿಸರದ ಬಗ್ಗೆ ಹೆಚ್ಚು ತಿಳಿದುಕೊಂಡಿರಬೇಕು ಅಂತಿದೆ. ಹೀಗಾಗಿ ಪಿಸಿಬಿ ಸ್ಥಾನ ತಪ್ಪಿರಬೇಕೇ ಹೊರತು ಬೇರೆ ಯಾವ ಉದ್ದೇಶಗಳಿಂದಲ್ಲ ಎಂಬುದು ನನ್ನ ಭಾವನೆ ಅಂತ ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾರ್ವಜನಿಕರಿಗೆ ತೊಂದ್ರೆ ಆಗಲ್ವಾ? ಇನ್ಮುಂದೆ ಹಿಂಗ್ ಆಗಬಾರ್ದು: ಎಂಬಿ ಪಾಟೀಲ್ ಗರಂ

    ಸಾರ್ವಜನಿಕರಿಗೆ ತೊಂದ್ರೆ ಆಗಲ್ವಾ? ಇನ್ಮುಂದೆ ಹಿಂಗ್ ಆಗಬಾರ್ದು: ಎಂಬಿ ಪಾಟೀಲ್ ಗರಂ

    ಬೆಂಗಳೂರು: ಝೀರೋ ಟ್ರಾಫಿಕ್‍ನಿಂದ ಸಾರ್ವಜನಿಕರಿಗೆ ತೊಂದರೆ ಆಗಲ್ವಾ? ಇನ್ನು ಮುಂದೆ ಹೀಗೆ ಆಗಬಾರದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಪೊಲೀಸ್ ಅಧಿಕಾರಿ ವಿರುದ್ಧ ಕಿಡಿಕಾರಿದ್ದಾರೆ.

    ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಂತಿಮ ದರ್ಶನಕ್ಕೆ ತೆರಳುವ ವೇಳೆ ಗೃಹ ಸಚಿವರಿಗೆ ಗೊತ್ತಿಲ್ಲದೇ ಡಿಸಿಪಿ ಸಾರಾ ಫಾತಿಮಾ ಅವರು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದರು. ಎಂ.ಬಿ.ಪಾಟೀಲ್ ಕಾರಲ್ಲಿ ತೆರಳುವ ವೇಳೆ, ರಸ್ತೆ ಖಾಲಿ ಖಾಲಿ ಇತ್ತು. ಇದ್ಯಾಕೆ ಹೀಗೆ ಅಂತ ಸಾರಾ ಫಾತಿಮಾ ಅವರನ್ನು ಪ್ರಶ್ನಿಸಿದ್ದಾರೆ. ಸಚಿವರು ಕೇಳುತ್ತಿದ್ದಂತೆ ಉತ್ತರಿಸಿದ ಸಾರಾ ಫಾತಿಮಾ ಅವರು ಝೀರೋ ಟ್ರಾಫಿಕ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಝೀರೋ ಟ್ರಾಫಿಕ್ ಉತ್ತರ ಬರುತ್ತಿದ್ದಂತೆ ಕೋಪಗೊಂಡ ಗೃಹ ಸಚಿವರು, ಯಾರನ್ನು ಕೇಳಿ ಝೀರೋ ಟ್ರಾಫಿಕ್ ಕಲ್ಪಿಸಿದಿರಿ? ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗಲ್ವಾ? ಇನ್ನು ಮುಂದೆ ಹೀಗೆ ಮಾಡುವಂತಿಲ್ಲ ಅಂತ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಮಾರ್ಗ ಮಧ್ಯದಲ್ಲಿಯೇ ಝೀರೋ ಟ್ರಾಫಿಕ್ ಕ್ಯಾನ್ಸಲ್ ಮಾಡಿಸಿದರು. ಈ ಮೂಲಕ ಸಾರ್ವಜನಿಕರಿಂದ ಅಪಾರ ಮೆಚ್ಚುಗೆಗೆ ನೂತನ ಗೃಹ ಸಚಿವರು ಪಾತ್ರರಾಗಿದ್ದಾರೆ.

    ಈ ಹಿಂದೆ ಗೃಹ ಖಾತೆ ವಹಿಸಿಕೊಂಡಿದ್ದ ಜಿ.ಪರಮೇಶ್ವರ್ ಸಂಪ್ರದಾಯಕ್ಕೆ ನೂತನ ಗೃಹ ಸಚಿವ ಎಂಬಿ ಪಾಟೀಲ್ ಎಳ್ಳು ನೀರು ಬಿಟ್ಟಿದ್ದಾರೆ. ಈ ಮೂಲಕ ಎಗ್ಗಿಲ್ಲದೇ ಬಳಕೆಯಾಗುತ್ತಿದ್ದ ಝೀರೋ ಟ್ರಾಫಿಕ್ ಸಂಪ್ರದಾಯಕ್ಕೆ ಅಂತ್ಯ ಹಾಡಿದ್ದಾರೆ.

    ಇಂದು ನೂತನ ಗೃಹ ಸಚಿವರಾದ ಎಂ.ಬಿ.ಪಾಟೀಲ್, ನನಗೆ ಝೀರೋ ಟ್ರಾಫಿಕ್ ಸೌಲಭ್ಯ ಬೇಡ. ಸಿಗ್ನಲ್ ಫ್ರೀ ಕೊಟ್ಟರೆ ಸಾಕು ಎಂದು ಸುದ್ದಿಗೋಷ್ಠಿಯಲ್ಲಿ ಇಂಗಿತವನ್ನು ವ್ಯಕ್ತಪಡಿಸಿದ್ದರು. ಈ ಮೂಲಕ ಖಾತೆ ಬಿಟ್ಟು ಕೊಡಲು ಸತಾಯಿಸಿದ್ದಕ್ಕೆ ಪರಮೇಶ್ವರ್ ಅವರಿಗೆ ತಿರುಗೇಟು ಕೊಟ್ಟರಾ ಎಂಬ ಸಣ್ಣದೊಂದು ಚರ್ಚೆ ಕಾಂಗ್ರೆಸ್ ಅಂಗಳದಲ್ಲಿ ಆರಂಭವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೀವು ಕಲಿತಿದ್ದನ್ನ ಮಕ್ಕಳಿಗೆ ಕಲಿಸ್ರಪ್ಪಾ-ಪ್ರಾಧ್ಯಾಪಕರಿಗೆ ಜಿಟಿಡಿ ಪಾಠ

    ನೀವು ಕಲಿತಿದ್ದನ್ನ ಮಕ್ಕಳಿಗೆ ಕಲಿಸ್ರಪ್ಪಾ-ಪ್ರಾಧ್ಯಾಪಕರಿಗೆ ಜಿಟಿಡಿ ಪಾಠ

    ಬಳ್ಳಾರಿ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಓದಿದ್ದು ಬರೀ ಏಳನೇ ತರಗತಿಯಾದರೂ ಇಂದು ಪ್ರಾಧ್ಯಾಪಕರಿಗೆ ಪಾಠ ಮಾಡಿದ್ದಾರೆ.

    ಹಂಪಿ ಕನ್ನಡ ವಿವಿಯ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದ ಸಚಿವ ಜಿ.ಟಿ ದೇವೇಗೌಡ, “ಲಕ್ಷಗಟ್ಟಲೆ ಸಂಬಳ ತಗೆದುಕೊಳ್ಳುತ್ತೀರಾ. ನೋವು ಕಲಿತಿದ್ದನ್ನು ಮಕ್ಕಳಿಗೆ ಕಲಿಸ್ರಪ್ಪಾ. ಶಿಕ್ಷಕ ವೃತ್ತಿ ಸಂಬಳಕ್ಕಾಗಿ ಮಾಡೋದಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಕೆಲಸವಾಗಬೇಕಿದೆ” ಎಂದರು.

    ಅಲ್ಲದೇ ಹಿಂದೆ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಶಿಕ್ಷಕರು ಮನೆಗೆ ಹೋಗುತ್ತಿದ್ರು. ಆದರೆ ಇದೀಗ ಶಿಕ್ಷಕರನ್ನು ಹುಡುಕುವ ಕೆಲಸವಾಗ್ತಿದೆ, ವಿವಿಗಳ ಪ್ರಾಧ್ಯಾಪಕರಿಗೆ ಟ್ರೈನಿಂಗ್ ಕೊಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಅಂತ ಹೇಳಿದ್ರು.

    ಲಕ್ಷಗಟ್ಟಲೆ ಸಂಬಳ ತೆಗೆದುಕೊಂಡು ಏನು ಮಾಡ್ತಾರೆ ಎಂದು ಇದೇ ವೇಳೆ ಪ್ರಶ್ನಿಸಿದ ಅವರು, ಹಿಂದೆ 300 ರೂ. ತೆಗೆದುಕೊಳ್ಳುತ್ತಿದ್ದ ಶಿಕ್ಷಕರು ವಿದ್ಯಾರ್ಥಿ ಮನೆಗೆ ಬರುತ್ತಿದ್ರು. ಆದರೆ ಇಂದು ಕಲಿಯೋರ ಆಸಕ್ತಿಗಿಂತ ಕಲಿಸೋರ ಆಸಕ್ತಿ ಕಡಿಮೆಯಾಗಿದೆ. ಶಿಕ್ಷಣ ಎಲ್ಲೋ ಹೋಗ್ತಿದೆ. ಶಿಕ್ಷಣ ವ್ಯವಸ್ಥೆ ಬದಲಾವಣೆ ಆಗಬೇಕು ಅಂತೆಲ್ಲ ಹೇಳುತ್ತೀರಿ. ಆದರೆ ಅದನ್ನು ಯಾರು ಬದಲು ಮಾಡಬೇಕು. ಹೊಸ ಕಾಲೇಜು ಕೊಡಿ ಅಂತಾರೆ, ಇರೋ ಎಂಜಿನಿಯರಿಂಗ್ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಕೊಡಲು ಆಗ್ತಿಲ್ಲ. ಶಿಕ್ಷಕರು ಪ್ರಾಧ್ಯಾಪಕರು ಸಂಬಳಕ್ಕಾಗಿ ಕೆಲಸ ಮಾಡಬಾರದು. ಶಿಕ್ಷಕ ವೃತ್ತಿ ಪುಣ್ಯದ ಕೆಲಸವಾಗಿದೆ ಅಂದ್ರು.

    ನಿಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದ್ರೇ ಆಯ್ತಾ? ಸರ್ಕಾರಿ ಶಾಲೆಗೆ ಬರೋ ಮಕ್ಕಳ ಸ್ಥಿತಿ ಏನಾಗಬೇಕೆಂದು ಸಚಿವರು ಪ್ರಾಧ್ಯಾಪಕರಿಗೆ ಪರೋಕ್ಷವಾಗಿ ಪಾಠ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರುನಾಡ ಸಿಂಗಂ ಸಾವಿನ ಬಗ್ಗೆ ಸಚಿವ ಡಿಕೆಶಿಗೆ ಸಂಶಯ..!

    ಕರುನಾಡ ಸಿಂಗಂ ಸಾವಿನ ಬಗ್ಗೆ ಸಚಿವ ಡಿಕೆಶಿಗೆ ಸಂಶಯ..!

    ಬೆಂಗಳೂರು: ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ಐಪಿಎಸ್ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದು, ಇದೀಗ ಇವರ ಅಕಾಲಿಕ ಮರಣಕ್ಕೆ ಸಚಿವ ಡಿಕೆ ಶಿವಕುಮಾರ್ ಸಂಶಯ ವ್ಯಕ್ತಪಡಿಸಿದ್ದಾರೆ.

    ಮಧುಕರ್ ಶೆಟ್ಟಿ ನನಗೆ ಹತ್ತಿರದಿಂದ ಪರಿಚಯ. ನಮ್ಮಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಅವರ ನಿಧನ ಸುದ್ದಿ ಕೇಳಿ ಆಶ್ಚರ್ಯವಾಯ್ತು. ಅವರ ನಿಧನ ಸ್ವಾಭಾವಿಕವಾನಾ ಅಂತ ತನಿಖೆ ಮಾಡಬೇಕಾಗಿದೆ. ಅವರೊಬ್ಬ ಗೌರವಾನ್ವಿತ ಅಧಿಕಾರಿಯಾಗಿದ್ರು. ಅವರ ತಂದೆಯೂ ನನಗೆ ಪರಿಚಯವಿದ್ದರು. ಪೊಲೀಸ್ ಇಲಾಖೆಗೆ ಅವರೊಂದು ದೊಡ್ಡ ಆಸ್ತಿ ಆಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಅವರ ಕುಟುಂಬಕ್ಕೆ ಧೈರ್ಯ ಕೊಡಲಿ ಅಂತ ಡಿಕೆಶಿ ಸಂತಾಪ ಸೂಚಿಸಿದ್ದಾರೆ.

    ರಾಜ್ಯದ ಒಬ್ಬ ಅಧಿಕಾರಿ ಹೊರ ರಾಜ್ಯದಲ್ಲಿ ನಿಧನ ಹೊಂದಿದ್ರೆ ಆ ಬಗ್ಗೆ ತನಿಖೆ ನಡೆಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಡಿಕಶಿ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಖಾಕಿಯೊಳಗಿನ ಮಿನುಗುತಾರೆ ನೆನಪು ಮಾತ್ರ- ಮಧುಕರ್ ದಕ್ಷತೆ ಹಾದಿಯ ಬಗ್ಗೆ ಓದಿ

    ಸಕಲ ಸರ್ಕಾರಿ ಗೌರವಗಳೊಂದಿಗೆ ಮಧುಕರ್ ಶೆಟ್ಟಿ ಅಂತ್ಯಕ್ರಿಯೆ ನಡೆಸಬೇಕು ಅಂತ ಡಿಜಿ ನೀಲಮಣಿ ರಾಜು ಅವರಿಗೆ ಗೃಹ ಸಚಿವ ಎಂಬಿ ಪಾಟೀಲ್ ಅವರು ದೂರವಾಣಿ ಕರೆ ಮಾಡಿ ಸೂಚನೆ ಕೊಟ್ಟಿದ್ದಾರೆ. ಬಳಿಕ ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಧುಕರ್ ಶೆಟ್ಟಿಯವರು ಈ ರಾಜ್ಯದ ಒಬ್ಬ ನಿಷ್ಠಾವಂತ, ಪ್ರಾಣಿಕ ಹಾಗೂ ದಕ್ಷ ಐಪಿಎಸ್ ಅಧಿಕಾರಿಯಾಗಿದ್ದರು. ಅವರ ನಿಧನ ದುಃಖ ತಂದಿದೆ. ಪೊಲೀಸ್ ಇಲಾಖೆಗೆ ದೊಡ್ಡ ನಷ್ಟವಾಗಿದೆ ಅಂದ್ರು.

    ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಧುಕರ್ ಶೆಟ್ಟಿ ಪಾರ್ಥಿವ ಶರೀರವನ್ನು ಪೊಲೀಸ್ ಇಲಾಖೆ ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ತರಲಿದೆ. ಬಳಿಕ ಯಲಹಂಕದ ಪೊಲೀಸ್ ತರಬೇತಿ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ರಾತ್ರಿ 8.30 ರ ತನಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆನಂತರ ವಿಮಾನದ ಮೂಲಕ ಮಧುಕರ್ ಶೆಟ್ಟಿ ಅವರ ಹುಟ್ಟೂರಿಗೆ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ ಎಂದು ತಿಳಿಸಿದ್ರು.

    ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ(47) ಹೆಚ್1ಎನ್1 ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ 8.15ಕ್ಕೆ ಹೈದ್ರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂತ್ರಿಗಿರಿಯನ್ನೇ ಪುಟಗೋಸಿ ಅಂದ್ರು ಸಚಿವ ರೇವಣ್ಣ

    ಮಂತ್ರಿಗಿರಿಯನ್ನೇ ಪುಟಗೋಸಿ ಅಂದ್ರು ಸಚಿವ ರೇವಣ್ಣ

    – ಸೂಪರ್ ಸಿಎಂ ವಿರುದ್ಧ ಮಾಜಿ ಸಚಿವ ಸುರೇಶ್ ವಾಗ್ದಾಳಿ

    ಬೆಂಗಳೂರು: ಬಿಸ್ಕೆಟ್ ಆಯ್ತು, ಟೋಪಿ ಆಯ್ತು, ಈಗ ಪುಟಗೋಸಿ. ಮಂತ್ರಿಗಿರಿಯನ್ನೇ ಪುಟಗೋಸಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಕರೆದಿದ್ದಾರೆ.

    ಎಚ್.ಡಿ ರೇವಣ್ಣ ಅವರು ಮಂತ್ರಿಗಿರಿ ಹೇಳಿಕೆ ವಿರುದ್ಧ ಬಿಜೆಪಿಯಿಂದ ಕ್ಯಾಂಪೇನ್ ನಡೆಸಲಾಗುತ್ತಿದೆ. ರೇವಣ್ಣ ವಿರುದ್ಧ ಬಿಜೆಪಿ ಶಾಸಕ, ಮಾಜಿ ಸಚಿವ ಸುರೇಶ್ ಕುಮಾರ್ ತಿರುಗಿಬಿದಿದ್ದಾರೆ.

    ರೇವಣ್ಣ ಹೇಳಿಕೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ. “ಇದು ರಾಜ್ಯದ ದುರಂತ. ಮಂತ್ರಿಗಿರಿಯನ್ನು ಪುಟಗೋಸಿ ಮಾಡಿಕೊಂಡಿರುವವರು ಲೋಕೋಪಯೋಗಿ ಸಚಿವ. ಒಂದೇ ಕುಟುಂಬದಿಂದ 3 ಜನ ಪುಟಗೋಸಿಗಳು ಯಾಕೆ?” ಎಂದು ಟ್ವೀಟ್ ಮಾಡಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುರೇಶ್, ರಾಜಕೀಯ ವ್ಯಕ್ತಿಗಳ ಬಗ್ಗೆ ಸಮಾಜದಲ್ಲಿ ಬಹಳ ಕೆಟ್ಟ ಅಭಿಪ್ರಾಯವಿದೆ. ಹೀಗಾಗಿ ರಾಜಕೀಯ ಈ ಸ್ಥಿತಿಯಲ್ಲಿರುವಾಗ ಕೆಲವೊಂದು ಮಾತುಗಳನ್ನಾಡುವಾಗ ಗಂಭೀರತೆಯನ್ನು ಅರಿತುಕೊಳ್ಳಬೇಕು. ರೇವಣ್ಣ ಅವರು ಯಾವುದೇ ಕಾರ್ಯ ಮಾಡುವಾಗ ರಾಹುಕಾಲ, ಗುಳಿಕಕಾಲ ಹಾಗೂ ಯಮಗಂಡ ಕಾಲ ನೋಡುತ್ತಾರೆ. ಹಾಗಾದ್ರೆ ಈ ಪುಟಗೋಸಿ ಎನ್ನುವ ಮಂತ್ರಿಗಿರಿಯನ್ನು ಯಾವ ಕಾಲದಲ್ಲಿ ತೆಗೆದುಕೊಂಡ್ರು ಅಂತ ಪ್ರಶ್ನಿಸಿದ್ರು.

    ರೇವಣ್ಣ ಅವರು ಈ ಹೇಳಿಕೆ ನೀಡುವಾಗ ಕಾಲ ನೋಡಿಕೊಂಡು ಹೇಳಿದ್ರಾ? ಒಟ್ಟಾರೆ ಜನರಿಂದ ಇನ್ನಷ್ಟು ರಾಜಕೀಯವನ್ನು ತಿರಸ್ಕಾರಗೊಳ್ಳುವಷ್ಟು ನಾವೇ ತೆಗೆದುಕೊಂಡು ಹೋಗುತ್ತಿದ್ದೇವೆ. ಕೊಡಗಿನಲ್ಲಿ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದಾಗ ಸಂಕಟ ಆಗಿತ್ತು. ಆದ್ರೆ ಅದನ್ನು ಅವರ ಹಿಂಬಾಲಕರು ಸಮರ್ಥನೆ ಮಾಡಿಕೊಂಡರು. ಈ ರೀತಿಯ ಹಗುರವಾದ ಹಾಗೂ ತಿರಸ್ಕಾರಕ್ಕೆ ಯೋಗ್ಯವಾದ ಮಾತುಗಳು ಹೆಚ್ಚೆಚ್ಚು ಮಾಡುತ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು.

    ರೇವಣ್ಣ ಹೇಳಿದ್ದೇನು?:
    ನನ್ನ ಅಧಿಕಾರದಲ್ಲಿ ಏನಾದರೂ ಸಮಸ್ಯೆ ಇದ್ದರೆ ಕಾಂಗ್ರೆಸ್‍ನವರು ಬಹಿರಂಗವಾಗಿ ಹೇಳಲಿ. ನಾನು ಇಂತಹ ವಿಷಯದ ಬಗ್ಗೆ ಹೆದರುವುದಿಲ್ಲ. ಈ ಪುಟಗೋಸಿ ಮಂತ್ರಿ ಸ್ಥಾನ ಯಾರಿಗೆ ಬೇಕು ಎಂದು ರೇವಣ್ಣ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಹೇಳಿಕೆ ನೀಡಿದ್ದರು. ರೇವಣ್ಣ ಅವರ ಈ ಹೇಳಿಕೆ ಇದೀಗ ತೀವ್ರ ಚರ್ಚೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬದಲಾದವು ಸಚಿವ ಸ್ಥಾನ- ಯಾರಿಗೆ ಯಾವ ಖಾತೆ?

    ಬದಲಾದವು ಸಚಿವ ಸ್ಥಾನ- ಯಾರಿಗೆ ಯಾವ ಖಾತೆ?

    ಬೆಂಗಳೂರು: ಭಾರೀ ಕುತುಹಲಕ್ಕೆ ಕಾರಣವಾಗಿದ್ದ ಖಾತೆ ಹಂಚಿಕೆ ಕೊನೆಗೊಂಡಿದ್ದು, ಕೆಲವು ಸಚಿವರ ಖಾತೆಗಳು, ಜವಾಬ್ದಾರಿಗಳು ಬದಲಾಗಿವೆ. ಈ ಮೂಲಕ ಕಾಂಗ್ರೆಸ್‍ನಲ್ಲಿದ್ದ ಖಾತೆ ಹಂಚಿಕೆ ಹಗ್ಗ-ಜಗ್ಗಾಟ ಕೊನೆಗೊಂಡಿದೆ.

    ನೂತನ ಸಚಿವರಿಗೆ ಯಾವ ಖಾತೆ?:
    ಖಾತೆಗಳನ್ನು ಮರು ಹಂಚಿಕೆ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಸಚಿವರಾದ ಎಂ.ಬಿ.ಪಾಟೀಲ್ ಅವರಿಗೆ ಗೃಹ ಇಲಾಖೆ. ತುಕಾರಾಂ ಅವರಿಗೆ ವೈದ್ಯಕೀಯ ಶಿಕ್ಷಣ, ಸತೀಶ್ ಜಾರಕಿಹೊಳಿ ಅವರಿಗೆ ಅರಣ್ಯ ಖಾತೆ ಸೇರಿವೆ. ಉಳಿದಂತೆ ಪೌರಾಡಳಿತ ಖಾತೆ ಸಿ.ಎಸ್.ಶಿವಳ್ಳಿ, ಮುಜರಾಯಿ ಹಾಗೂ ಕೌಶಲಾಭಿವೃದ್ಧಿ ಪರಮೇಶ್ವರ್ ನಾಯ್ಕ್, ಯುವಜನ ಸೇವೆ ಮತ್ತು ಕ್ರೀಡೆ ರಹೀಂ ಖಾನ್, ಸಕ್ಕರೆ, ಬಂದರು, ಜಲಸಾರಿಗೆ ಆರ್.ಬಿ.ತಿಮ್ಮಾಪುರ್, ವಸತಿ ಎಂಟಿಬಿ ನಾಗರಾಜ್ ಅವರ ತೆಕ್ಕೆ ಸೇರಿವೆ.

    ಖಾತೆ ಚೇಂಜ್:
    ಉಪಮುಖ್ಯಮಂತ್ರಿ ಡಾ.ಪರಮೇಶ್ವರ್ ಅವರಿಗೆ ಗೃಹ ಖಾತೆ ಕೈ ತಪ್ಪಿದ್ದು, ಹೆಚ್ಚುವರಿಯಾಗಿ ಕೃಷ್ಣ ಬೈರೇಗೌಡ ಬಳಿ ಇದ್ದ ಕಾನೂನು-ಸಂಸದೀಯ ವ್ಯವಹಾರ ಖಾತೆಯನ್ನು ನೀಡಲಾಗಿದೆ. ಅಷ್ಟೇ ಅಲ್ಲದೆ ಐಟಿ-ಬಿಟಿ ಖಾತೆ ಕೂಡ ಪರಮೇಶ್ವರ್ ಪಾಲಿಗೆ ಸೇರಿಕೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಖಾತೆಯು ಸಚಿವೆ ಜಯಮಾಲ ಅವರಿಂದ ಡಿ.ಕೆ.ಶಿವಕುಮಾರ್ ಅವರಿಗೆ ಶಿಫ್ಟ್ ಆಗಿದೆ. ಸಿಎಂ ಕುಮಾರಸ್ವಾಮಿ ಬಳಿ ಇದ್ದ ವಾರ್ತಾ ಖಾತೆ ಡಿ.ಕೆ.ಶಿವಕುಮಾರ್ ಸುಪರ್ದಿಗೆ ಸೇರಿದ್ದು, ವೈದ್ಯಕೀಯ ಖಾತೆ ತುಕಾರಾಂ ಅವರಿಗೆ ವರ್ಗಾವಣೆಯಾಗಿದೆ. ಇತ್ತ ಕೆಜೆ ಜಾರ್ಜ್ ಬಳಿ ಇದ್ದ ಐಟಿ-ಬಿಟಿ, ಸಕ್ಕರೆ ಖಾತೆ ಕೈತಪ್ಪಿ ಕೇವಲ ಬೃಹತ್ ಕೈಗಾರಿಕೆ ಖಾತೆ ಮಾತ್ರ ಉಳಿದುಕೊಂಡಿದೆ.

    ಅಂತಿಮ ಪಟ್ಟಿ ಹೀಗಿದೆ:
    * ಪರಮೇಶ್ವರ್ – ಬೆಂಗಳೂರು ನಗರಾಭಿವೃದ್ಧಿ, ಐಟಿ-ಬಿಟಿ, ಕಾನೂನು & ಸಂಸದೀಯ ವ್ಯವಹಾರ
    * ಆರ್.ವಿ.ದೇಶಪಾಂಡೆ – ಕಂದಾಯ
    * ಡಿ.ಕೆ.ಶಿವಕುಮಾರ್ – ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
    * ಕೆ.ಜೆ. ಜಾರ್ಜ್ – ಬೃಹತ್ ಕೈಗಾರಿಕೆ,
    * ಕೃಷ್ಣಬೈರೇಗೌಡ – ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್,
    * ಯು.ಟಿ.ಖಾದರ್ – ನಗರಾಭಿವೃದ್ಧಿ
    * ಜಮೀರ್ ಅಹ್ಮದ್ – ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಕಲ್ಯಾಣ
    * ರಾಜಶೇಖರ್ ಪಾಟೀಲ್ – ಗಣಿ ಮತ್ತು ಭೂ ವಿಜ್ಞಾನ
    * ಜಯಮಾಲ – ಮಹಿಳಾ & ಮಕ್ಕಳ ಕಲ್ಯಾಣ,

    * ಎಂ.ಬಿ.ಪಾಟೀಲ್ – ಗೃಹ ಇಲಾಖೆ
    * ತುಕಾರಾಂ – ವೈದ್ಯಕೀಯ ಶಿಕ್ಷಣ
    * ಸತೀಶ್ ಜಾರಕಿಹೊಳಿ – ಅರಣ್ಯ
    * ಸಿ.ಎಸ್.ಶಿವಳ್ಳಿ – ಪೌರಾಡಳಿತ
    * ಪರಮೇಶ್ವರ್ ನಾಯ್ಕ್ – ಮುಜರಾಯಿ, ಕೌಶಲಾಭಿವೃದ್ಧಿ
    * ರಹೀಂ ಖಾನ್ – ಯುವಜನ ಸೇವೆ, ಕ್ರೀಡೆ
    * ಆರ್.ಬಿ.ತಿಮ್ಮಾಪುರ್ – ಸಕ್ಕರೆ,
    * ಎಂಟಿಬಿ ನಾಗರಾಜ್ – ವಸತಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೇವಣ್ಣ Vs ಮಂಜು – ಇಬ್ಬರ ಪ್ರತಿಷ್ಠೆಯ ಕಣದಲ್ಲಿ ಬೀದಿಗೆ ಬಂದ ಬಡ ಕಾರ್ಮಿಕರು!

    ರೇವಣ್ಣ Vs ಮಂಜು – ಇಬ್ಬರ ಪ್ರತಿಷ್ಠೆಯ ಕಣದಲ್ಲಿ ಬೀದಿಗೆ ಬಂದ ಬಡ ಕಾರ್ಮಿಕರು!

    ಹಾಸನ: ಮಾಜಿ ಪಶುಸಂಗೋಪನಾ ಸಚಿವ ಎ.ಮಂಜು ಹಾಗೂ ಹಾಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರ ರಾಜಕೀಯ ವೈಷಮ್ಯಕ್ಕೆ ಬಡ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆನ್ನುವ ಆರೋಪ ಕೇಳಿಬಂದಿದೆ.

    ಹೌದು, ಜಿಲ್ಲೆಯಲ್ಲಿ ಈ ಹಿಂದೆ ಮಾಜಿ ಪಶುಸಂಗೋಪನಾ ಸಚಿವರಾಗಿದ್ದ ಎ.ಮಂಜುರವರು ನೂರಾರು ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ಇಲಾಖೆಯಲ್ಲಿ ನೇಮಕ ಮಾಡಿಕೊಟ್ಟಿದ್ದರು. ಆದರೆ ಈಗ ರೇವಣ್ಣನವರು ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ, ಕ್ಷುಲ್ಲಕ ವಿಚಾರಕ್ಕೆ ನೂರಕ್ಕು ಹೆಚ್ಚು ಮಂದಿಯನ್ನು ಕೆಲಸದಿಂದ ವಜಾಗೊಳಿಸಿದ್ದಾರಂತೆ.

    ಹಾಸನ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಈ ರೀತಿಯ ಗುತ್ತಿಗೆ ಆಧಾರದ ಮೇಲೆ ಪಶುಸಂಗೋಪನಾ ಇಲಾಖೆಯಲ್ಲಿ ನೌಕರರನ್ನು ನೇಮಿಸಿಕೊಳ್ಳಲಾಗಿತ್ತು. ಇವರೆಲ್ಲ ತಾಲೂಕು ಕೇಂದ್ರಗಳು ಮತ್ತು ಗ್ರಾಮೀಣ ಭಾಗದಲ್ಲಿ ಪಶು ಇಲಾಖೆಯ ವಿವಿಧ ಕೆಲಸಗಳನ್ನು ಮಾಡುತ್ತಿದ್ದರು. ಹಾಸನ ಜಿಲ್ಲೆಯಲ್ಲಿಯೂ ಸಹ ಮಾತಾ ಟೆಕ್ನಾಲಿಜಿಸ್ ಎಂಬ ಏಜನ್ಸಿ ಮೂಲಕ 135 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಸರ್ಕಾರ ಬದಲಾಗಿದ್ದರಿಂದ 100ಕ್ಕೂ ಹೆಚ್ಚು ಮಂದಿಯನ್ನು ಕಾರಣ ನೀಡದೆ ಕೆಲಸದಿಂದ ವಜಾ ಗೊಳಿಸಿದ್ದಾರೆ.

    ಈ ಕುರಿತು ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾರ್ಮಿಕರು, ನಾವುಗಳು ಯಾವುದೇ ಪಕ್ಷಗಳಿಗೆ ಸೇರಿದವರಲ್ಲ. ನಮ್ಮ ಹೊಟ್ಟೆಪಾಡಿಗೆ ಗುತ್ತಿಗೆ ಆಧಾರದಲ್ಲಿ ಸೇರಿದ್ದೇವು. ಹಿಂದಿನ ಸಚಿವರ ಅವಧಿಯಲ್ಲಿ ನೇಮಕವಾಗಿರುವ ಕಾರಣಕ್ಕೆ ನಮ್ಮನ್ನು ಕೆಲಸದಿಂದ ವಜಾಮಾಡಿದ್ದಾರೆ. ಈ ಕೆಲಸವನ್ನೆ ನಂಬಿಕೊಂಡಿದ್ದ ನಮಗೆ ಸಂಕಷ್ಟಗಳಲ್ಲಿ ನರಳುವಂತಹ ಪರಿಸ್ಥಿತಿ ಎದುರಾಗಿದೆ. ಕೂಡಲೇ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೇ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಾದಿ ಹಿಡಿಯುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv