ಬಳ್ಳಾರಿ: 70ನೇ ಗಣರಾಜೋತ್ಸವವನ್ನು ಬಳ್ಳಾರಿಯಲ್ಲೂ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವೈದ್ಯಕೀಯ ಸಚಿವ ತುಕಾರಾಂ ಅವರು ಧ್ವಜಾರೋಹರಣ ನೆರವೇರಿಸಿ ಧ್ವಜವಂದನೆ ಸಲ್ಲಿಸಿದರು.
ತುಕಾರಾಂ ಅವರು ಪಥ ಸಂಚಲನ ನಡೆಸಿದ ವಿವಿಧ ದಳಗಳಿಂದ ಗೌರವ ವಂದನೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ, ಎನ್‍ಸಿಸಿ ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ಮಾಡಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕರುಗಳು ಸೇರಿದಂತೆ ವಿವಿಧ ಮುಖಂಡರು ಭಾಗಿಯಾಗಿದ್ದರು.
ಬಳ್ಳಾರಿಯ ಮೋತಿ ವೃತ್ತದಲ್ಲಿ 150 ಅಡಿ ಎತ್ತರದ ಧ್ವಜಾರೋಹಣ ಮಾಡಿದ ನಂತರ ಸಚಿವ ತುಕಾರಾಂ ಅವರು ತಮ್ಮ ಕಾರಿಗಾಗಿ ಹುಡುಕಾಟ ನಡೆಸಿರುವುದು ಕಂಡುಬಂತು.
ಚಿಕ್ಕಮಗಳೂರು: ರೆಸಾರ್ಟ್ ರಾಜಕೀಯ ಮುಗಿಸಿ ಬಿಜೆಪಿಯವರು ಬರ ಅಧ್ಯಯನಕ್ಕೆ ಮುಂದಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಕೂಡ ಬರ ಅಧ್ಯಯನ ಆರಂಭಿಸಿದ್ದಾರೆ.
ಗಣೇಶ್ ಹಲ್ಲೆ ಮಾಡಿರುವ ವಿಚಾರ ನನ್ನ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ನಾನು ಕೈಗಾರಿಕಾ ಮಂತ್ರಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತವಾರಿ ಸಚಿವ ಅಷ್ಟೇ. ಇದಕ್ಕೆ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಉತ್ತರ ಕೊಡುತ್ತಾರೆ ಎಂದು ಹಾರಿಕೆ ಉತ್ತರ ನೀಡಿದರು.
ನೀವು ಪ್ರಕರಣದ ವಿಚಾರಣೆಯ ಕಮಿಟಿಯಲ್ಲಿ ಇರುವುದಿಂದ ಕೇಳಿದ್ವಿ ಅಂತಾ ಮಾಧ್ಯಮದವರು ಹೇಳುತ್ತಿದ್ದಂತೆ, ನಾನು ಕಮಿಟಿಯ ಸದಸ್ಯನಾಗಿ ನಿಮಗೆ ಎಲ್ಲವನ್ನೂ ಹೇಳುವುದಕ್ಕೆ ಆಗುತ್ತಾ? ಇಲ್ಲಿ ನಿಂತು ಎಲ್ಲವನ್ನೂ ಹೇಳಲಿಕ್ಕೆ ಆಗುವುದಿಲ್ಲ. ವಿಚಾರಣೆ ನಡೆಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಾರಿಕೊಂಡರು.
ಈ ವೇಳೆ ಅಲ್ಲಿದ್ದ ಕೆಲ ಸ್ಥಳೀಯರು, ನೀವು ಬಂದು, ನೋಡಿ ವಾಪಾಸ್ ಹೋಗಿಬಿಡುತ್ತೀರಿ. ಆದರೆ ನಿಮ್ಮಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಹನಿ ನೀರಿಗೂ ಹಾಹಾಕಾರವಿದೆ. ನಿಮ್ಮ ಅಧ್ಯಯನದ ಪ್ರವಾಸಕ್ಕಿಂತ ನಮಗೆ ಶಾಶ್ವತ ನೀರಾವರಿ ಯೋಜನೆ ಬೇಕು ಎಂದು ಆಗ್ರಹಿಸಿದರು. ಮಧ್ಯಾಹ್ನ 1 ಗಂಟೆಗೆ ಬಂದು ಬರ ಅಧ್ಯಯನ ನಡೆಸಿದ ಸಚಿವರು ಎರಡು ಗಂಟೆಗೆ ವಾಪಾಸ್ ನಡೆದರು. ಸಚಿವರ ಅಲ್ಲಿಂದ ಹೋಗುತ್ತಿದ್ದಂತೆ ಕೆಲವರು, ಇವರು ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ ಅಷ್ಟೇ ಎಂದು ಆಕ್ರೋಶ ಹೊರ ಹಾಕಿದರು.
ಬೆಂಗಳೂರು: ಲೋಕಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಾಗಲೇ ರಾಜ್ಯ ಕಾಂಗ್ರೆಸ್ ಟ್ರಬಲ್ ಶೂಟರ್, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಆದಾಯ ತೆರಿಗೆ ಇಲಾಖೆ (ಐಟಿ) ಶೋಕಾಸ್ ನೋಟಿಸ್ ಜಾರಿ ಮಾಡಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಡಿ.ಕೆ.ಶಿವಕುಮಾರ್ ಅವರು ಬೇರೆಯವರ ಹೆಸರಿನಲ್ಲಿ 36 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿದ್ದಾರೆಂದು ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಈ ಪ್ರಕಣದ ಕುರಿತು ವಿಚಾರಣೆ ನಡೆಸುವ ಉದ್ದೇಶದಿಂದ ಐಟಿ ಅಧಿಕಾರಿಗಳು ಶೋಕಾಸ್ ನೋಟಿಸ್ ನೀಡಲಿದ್ದಾರೆ. ಶೋಕಾಸ್ ನೋಟಿಸ್ ಜಾರಿಯಾದರೆ ಸಚಿವರು ನವದೆಹಲಿಯ ಆದಾಯ ತೆರಿಗೆ ಇಲಾಖೆ ಕೇಂದ್ರ ಕಚೇರಿಗೆ ಬಂದು ಉತ್ತರ ನೀಡಬೇಕಾಗುತ್ತದೆ. ಇದನ್ನೂ ಓದಿ: ಡಿಕೆ ಶಿವಕುಮಾರ್ ಮನೆಯಲ್ಲಿ ಸಿಕ್ಕಿತು 7.5 ಕೋಟಿ ರೂ. ಹಣ: ಮುಂದೆ ಈ ನಾಯಕರ ಮನೆ ಮೇಲೆ ದಾಳಿ?
ಏನಿದು ಪ್ರಕರಣ?:
ಐಟಿ ಅಧಿಕಾರಿಗಳು 2017 ಆಗಸ್ಟ್ 1ರಂದು ಸಚಿವ ಡಿಕೆ ಶಿವಕುಮಾರ್ ಆಪ್ತರು, ಸಂಬಂಧಿಕರು, ಪಾಲುದಾರಿಕೆ ಹೊಂದಿರುವ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದರು. ಚೆನ್ನೈ, ದೆಹಲಿ, ಬೆಂಗಳೂರು, ಮೈಸೂರು, ಕನಕಪುರದ 60 ಸ್ಥಳಗಳ ಮೇಲೆ ದಾಳಿ ನಡೆದಿತ್ತು. ಚೆನ್ನೈ ಮೂಲದ ಎಲ್‍ಇಡಿ ಕಂಪನಿಯೊಂದರಲ್ಲಿ ಡಿಕೆಶಿ ಪಾಲುದಾರಿಕೆ ಇರುವ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಆ ಕಂಪನಿಯನ್ನೂ ಐಟಿ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ ಸಚಿವರು 36 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿದ್ದಾರೆಂದು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: ಸ್ಯಾಂಡಲ್‍ವುಡ್ ಗೆ ಐಟಿ ಶಾಕ್, ಇತ್ತ ಡಿಕೆಶಿ ತಾಯಿಗೂ ಶಾಕ್
ಈ ಸಂಬಂಧ 2017 ನವೆಂಬರ್ 6ರಂದು ಸಚಿವರ ತಾಯಿ ಗೌರಮ್ಮ, ಪತ್ನಿ ಉಷಾ, ಪುತ್ರಿ ಐಶ್ವರ್ಯ ಪ್ರತ್ಯೇಕವಾಗಿ ವಿಚಾರಣೆಗೆ ಹಾಜರಾಗಿ ಉತ್ತರಿಸಿದ್ದರು. ಈ ವೇಳೆ ಸರಿಯಾದ ಉತ್ತರ ಸಿಗದೇ ಇದ್ದ ಕಾರಣ ವಿಚಾರಣೆ ಮುಂದುವರಿದಿತ್ತು. ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯ ಡಿಕೆ ಶಿವಕುಮಾರಸ್ ಅವರ ಮನೆ ಹಾಗೂ ಕೋಡಿಹಳ್ಳಿಯ ಡಿ.ಕೆ.ಸುರೇಶ್ ಮನೆಗೆ ನಾಲ್ಕು ಜನ ಅಧಿಕಾರಿಗಳು ಜನವರಿ 2ರಂದು ಭೇಟಿ ನೀಡಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಚಿವ ಡಿ.ಕೆ.ಶಿವಕುಮಾರ್ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ ತೆರಳಿದ್ದರು. ಬಳಿಕ ತಾಯಿ ಗೌರಮ್ಮ ಆದಾಯ ತೆರಿಗೆ ಕಚೇರಿಗೆ ಆಗಮಿಸಿ ಉತ್ತರ ನೀಡಿದ್ದರು.
ಬೆಂಗಳೂರು: ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುತ್ತಿದ್ದು, ಪಕ್ಷವೇ ನನಗೆ ಸುಪ್ರೀಂ. ಆದ್ದರಿಂದ ಪಕ್ಷದ ಹೈಕಮಾಂಡ್ ಸಚಿವ ಸ್ಥಾನ ಬಿಟ್ಟು ಕೊಡಲು ಕೇಳಿದರೆ ಸಿದ್ಧ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಧರ್ಮ ಸಿಂಗ್ ಸರ್ಕಾರದ ವೇಳೆಯಲ್ಲಿ ನನಗೆ ಸಚಿವ ಸ್ಥಾನ ನೀಡಿರಲಿಲ್ಲ. ಅಂದು 6 ಬಾರಿ ನಾನು ಶಾಸಕನಾಗಿ ಆಯ್ಕೆ ಆಗಿದ್ದೆ. ಈಗ 7ನೇ ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ. ಸಿದ್ದರಾಮಯ್ಯ ಅವರು ಕೂಡ ನನಗೆ ಸಚಿವ ಸ್ಥಾನ ನೀಡಿರಲಿಲ್ಲ. ಆಗ ನಾನು ಬಾಯಿ ಮುಚ್ಚಿ ಸುಮ್ಮನಾಗಿ, ಕಾರ್ಯಕರ್ತನಾಗಿ ಪಕ್ಷದ ಕಾರ್ಯ ಮಾಡಿದ್ದೆ ಎಂದರು.
ಈಗಲೂ ಪಕ್ಷ ಸಚಿವ ಸ್ಥಾನ ಬಿಟ್ಟು ಕೊಡಲು ಕೇಳಿದರೆ ನಾನು ಸಿದ್ಧನಿದ್ಧೇನೆ. ನಾನು ಮಾತ್ರ ಅಲ್ಲ, ನಮ್ಮ ಪಕ್ಷದ ಎಲ್ಲಾ ಹಿರಿಯ ಶಾಸಕರು ಕೂಡ ಇದಕ್ಕೆ ಬದ್ಧರಾಗಿರುತ್ತಾರೆ ಎಂದು ಅಧಿಕಾರ ತ್ಯಾಗದ ಕುರಿತು ಸ್ಪಷ್ಟನೆ ನೀಡಿದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಡಿಕೆ ಶಿವಕುಮಾರ್ ಅವರನ್ನು ಸರ್ಕಾರದಿಂದ ಕೈಬಿಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿತ್ತು. ಇದರ ಬೆನ್ನಲ್ಲೆ ಡಿಕೆಶಿ ಅವರು ಅಧಿಕಾರ ತ್ಯಾಗದ ಕುರಿತು ಮಾತನಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದೇ ವೇಳೆ ಈಗಲ್ ಟನ್ ರೆಸಾರ್ಟ್ ಸರ್ಕಾರಕ್ಕೆ ಪಾವತಿ ಮಾಡಬೇಕಾದ 883 ಕೋಟಿ ರೂ. ಬಾಕಿ ಮೊತ್ತದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಡಿಕೆಶಿ ಉತ್ತರ ನೀಡಲು ನಿರಾಕರಿಸಿದರು. ಈ ವಿಷಯಕ್ಕೂ ನಮಗೂ ಸಂಬಂಧವಿಲ್ಲ, ಸರ್ಕಾರ ಈ ಕುರಿತು ಕ್ರಮಕೈಗೊಳ್ಳುತ್ತದೆ ಎಂದರು.
ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ಬಿಡುಗಡೆ ಆಗಿರುವ ಅನುದಾನದ ಕುರಿತು ಚರ್ಚೆ ನಡೆಸಲು ಸಭೆ ಕರೆದಿರುವುದಾಗಿ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದರು. ಸಭೆಯಲ್ಲಿ ಬಳ್ಳಾರಿ ಜಿಲ್ಲೆಯ ಶಾಸಕರಾದ ಆನಂದ್ ಸಿಂಗ್, ಭೀಮಾನಾಯಕ್, ಕಂಪ್ಲಿ ಗಣೇಶ್ ಹಾಗೂ ಸಚಿವರಾದ ತುಕಾರಾಂ, ಪಿ.ಟಿ ಪರಮೇಶ್ವರ್ ನಾಯ್ಕ್ ಸೇರಿದಂತೆ ಸಂಸದ ಉಗ್ರಪ್ಪ ಅವರು ಹಾಜರಿದ್ದರು.
ದಾವಣಗೆರೆ: ಸರ್ಕಾರ ಬೀಳೋದಾದ್ರೆ ಯಾವಾಗ ಬೇಕಾದ್ರೆ ಬೀಳಲಿ. ಈ ಬಗ್ಗೆ ನಮಗೇನೂ ಚಿಂತೆ ಇಲ್ಲ. ಇರುವಷ್ಟು ದಿನ ನೆಮ್ಮದಿಯಾಗಿ ಕೆಲಸ ಮಾಡುತ್ತೇವೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಅಸ್ಥಿರದ ಬಗ್ಗೆ ಯಾರೂ ಕೂಡ ಚಿಂತೆ ಮಾಡುವುದಿಲ್ಲ. ಸರ್ಕಾರ ಎಷ್ಟು ದಿನ ಇರುತ್ತೋ ಅಷ್ಟು ದಿನ ಕೆಲಸ ಮಾಡುತ್ತೇವೆ. ಕುಮಾರಸ್ವಾಮಿ ಯವರ ನೇತೃತ್ವದಲ್ಲಿ ಸರ್ಕಾರ ನಡೆಯುತ್ತದೆ ಅಂದ್ರು.
ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ. ಯಾರೂ ಎಲ್ಲೂ ಹೋಗೋದಿಲ್ಲ. ಯಾವುದೂ ಆಗೋದು ಕೂಡ ಇಲ್ಲ. ನಮ್ಮ ಸರ್ಕಾರ ಸುಭದ್ರವಾಗಿರುತ್ತದೆ. ಸಂಕ್ರಾತಿ ನಂತರ ಯಾವ ಕ್ರಾಂತಿಯಾಗುವುದಿಲ್ಲ. ಬಿಜೆಪಿಯವರು ಆಪರೇಷನ್ ಕಮಲ ಮಾಡಲಿ. ರಾಜ್ಯದ ಜನತೆ ನೋಡಿದ್ದಾರೆ. ಹೀಗಾಗಿ ತೀರ್ಮಾನ ರಾಜ್ಯದ ಮಹಾಜನತೆ ಕೊಡುತ್ತಾರೆ. ಆದ್ದರಿಂದ ನಾವುಗಳು ಈ ಬಗ್ಗೆ ತೀರ್ಮಾನ ಕೊಡಲು ಆಗಲ್ಲ ಎಂದು ತಿಳಿಸಿದ್ರು.
ಬೆಳಗಾವಿ: ಚಿಕ್ಕೋಡಿ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ಅವರು ಬಿಜೆಪಿ ಸೇರುವ ವಿಚಾರ ಸತ್ಯಕ್ಕೆ ದೂರವಾಗಿದೆ. ಹಲವು ತಿಂಗಳಿನಿಂದ ಇಂತಹ ಸುದ್ದಿಗಳು ಕೇಳಿಬರುತ್ತಿವೆ. ಜನವರಿ 19ರಂದು ಬಿಜೆಪಿ ಸೇರುವ ಬಗ್ಗೆ ಹೇಳಿದ್ದಾರೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯೋಣ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಗಣೇಶ್ ಹುಕ್ಕೇರಿಗೆ ಯಾವುದೇ ಅಸಮಾಧಾನ ಇಲ್ಲ. ಈಗಾಗಲೇ ಅವರ ತಂದೆ ಸಂಸದರಿದ್ದಾರೆ. ಗಣೇಶ್ ಹುಕ್ಕೇರಿಗೂ ವರಿಷ್ಠರು ಪಕ್ಷದಲ್ಲಿ ಉನ್ನತ ಸ್ಥಾನ ನೀಡಿದ್ದಾರೆ. ಏಳು ತಿಂಗಳಿಂದ ಇದನ್ನೇ ಹೇಳುತ್ತಿದ್ದಾರೆ. ಅಮಿತ್ ಶಾ ಜೊತೆ ಇದ್ದಾರಾ ಅಥವಾ ಮೋದಿ ಜೊತೆಗೆ ನಮ್ಮ ಶಾಸಕರು ಇದ್ದಾರೆಯಾ ಹೇಳಿ. ಇನ್ನೂ ಯಾರು ಬಿಜೆಪಿಗೆ ಹೋಗಿಲ್ಲ ಹೋದಾಗ ನೋಡೋಣ ಅಂತ ಅವರು ಹೇಳಿದ್ರು.
ಯಾರು ಎಲ್ಲೂ ಹೋಗಲ್ಲ, ನಮ್ಮ ಪಕ್ಷ ಸುರಕ್ಷಿತವಾಗಿದೆ. ಕೆಲವರು ವೈಯಕ್ತಿಕ ಕೆಲಸದ ಮೇಲೆ ದೆಹಲಿಯಲ್ಲಿದ್ದಾರೆ. ಬಿಜೆಪಿಯವರು ಆರು ತಿಂಗಳಿನಿಂದ ಹೇಳ್ತಾನೆ ಇದ್ದಾರೆ ಅದನ್ನ ಪ್ರೂವ್ ಮಾಡೋಕು ಆಗ್ತಿಲ್ಲ. ಯಾರಾದ್ರೂ ದೊಡ್ಡ ಅಮೌಂಟ್ ಕೊಡ್ತೀನಿ ಅಂದ್ರೆ ಕೆಲವರು ಸ್ವಲ್ಪ ಯೋಚನೆ ಮಾಡ್ತಾರೆ. ಶನಿವಾರ ನಾನು, ಅವರು ಎರಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಗಣೇಶ್ ಹುಕ್ಕೇರಿ ಅವರು ಬಿಜೆಪಿಗೆ ಹೋಗಲ್ಲ. ಹಲವು ತಿಂಗಳಿನಿಂದ ಇಂತಹ ಸುದ್ದಿಗಳು ಕೇಳಿಬರುತ್ತಿವೆ. ಆದರೆ ಯಾವುದೇ ಶಾಸಕರು ಬಿಜೆಪಿ ಸೇರಿಲ್ಲ. ಜನವರಿ 19ರಂದು ಬಿಜೆಪಿ ಸೇರುವ ಬಗ್ಗೆ ಹೇಳಿದ್ದರೆ ಆ ಬಗ್ಗೆ ಕಾದು ನೋಡೋಣ. ಒಟ್ಟಿನಲ್ಲಿ ನಮ್ಮ ಪಕ್ಷ ಸುಭದ್ರವಾಗಿದೆ ಅಂತ ಅವರು ಸ್ಪಷ್ಟಪಡಿಸಿದ್ರು.
ಗಣೇಶ್ ಸ್ಪಷ್ಟನೆ:
ಜನವರಿ 19ರಂದು ಶಾಸಕ ಗಣೇಶ್ ಹುಕ್ಕೇರಿಯವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ಸ್ವರ್ತ ಗಣೇಶ್ ಹುಕ್ಕೇರುಯವರೇ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹುಟ್ಟಿದಾಗಿನಿಂದ ಕಾಂಗ್ರೆಸ್ ಪಕ್ಷ ನನ್ನ ಮನೆ. ನನ್ನ ಮನೆಯನ್ನು ನಾನ್ಯಾಕೆ ತೊರೆದು ಹೋಗಲಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ 7 ಮಂದಿ ಬೋಟ್ ಸಮೇತ ನಾಪತ್ತೆಯಾಗಿದ್ದು, ಇವರೆಲ್ಲರೂ ಉತ್ತರ ಭಾಗದಲ್ಲಿದ್ದಾರೆ ಎಂದು ಬೊಬ್ಬರ್ಯ ದೈವ ಪಾತ್ರಿ ನುಡಿದಿದ್ದಾರೆ.
ಡಿಸೆಂಬರ್ 13 ರಿಂದ ದಾಮೋದರ್, ರಮೇಶ್, ಹರೀಶ್, ಲಕ್ಷ್ಮಣ್, ರವಿ, ಸತೀಶ್, ಚಂದ್ರಶೇಖರ್ ಎಂಬವರು ನಾಪತ್ತೆಯಾಗಿದ್ದು, ಇದುವರೆಗೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮೀನುಗಾರರ ಕುಟುಂಬಸ್ಥರು ಬೊಬ್ಬರ್ಯ ದೈವದ ಮೊರೆ ಹೋಗಿದ್ದಾರೆ.
ದೈವದ ನುಡಿಯೇನು..?
ಉಡುಪಿಯ ಮಲ್ಪೆ ಸಮೀಪದ ಬಡನಿಡಿಯೂರಿನಲ್ಲಿರುವ ದೈವಸ್ಥಾನದಲ್ಲಿ ದರ್ಶನ ಸೇವೆಯ ಸಂದರ್ಭದಲ್ಲಿ, ಕಣ್ಮರೆಯಾದವರು ದೇಶದ ಉತ್ತರ ಭಾಗದಲ್ಲಿದ್ದಾರೆ. ಮೀನುಗಾರರಿಂದ ನಾಪತ್ತೆಯಾದವರ ಪತ್ತೆ ಅಸಾಧ್ಯವಾಗಿದೆ. ಪೊಲೀಸರು, ಸೈನ್ಯದಿಂದ ಮಾತ್ರ ಅವರನ್ನು ಪತ್ತೆ ಹಚ್ಚಬಹುದು. ದಟ್ಟ ಪೊದೆಗಳ ಮಧ್ಯೆ ಕಣ್ಮರೆಯಾಗಿದ್ದಾರೆ. 6-7 ದಿನದೊಳಗೆ ಅವರ ಕುರುಹು ಪತ್ತೆಯಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಈ ಕೆಲಸ ಆಗಬೇಕು ಎಂದು ದೈವ ಬೊಬ್ಬರ್ಯ ಪಾತ್ರಿ ನುಡಿ ಕೊಟ್ಟಿದ್ದಾರೆ. ಇದನ್ನೂ ಓದಿ: ಮೀನುಗಾರರ ಪತ್ತೆಗೆ ಇಸ್ರೋ, ಗೂಗಲ್ ನೆರವು: ಸಚಿವ ವೆಂಕಟರಾವ್ ನಾಡಗೌಡ
ಎಲ್ಲಾ ಪ್ರಯತ್ನ ವಿಫಲ:
ಕಳೆದ 28 ದಿನಗಳಿಂದ 7 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ. ಬೋಟ್ ಮಲ್ಪೆಗೆ ಸೇರಿದ್ದಾಗಿದ್ದು, ಅದರಲ್ಲಿ 5 ಮಂದಿ ಉತ್ತರ ಕನ್ನಡ ಹಾಗೂ ಇಬ್ಬರು ಉಡುಪಿ ಜಿಲ್ಲೆಯವರಾಗಿದ್ದಾರೆ. ಇವರನ್ನು ಹುಡುಕಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿದ್ದರೂ ಅವರನ್ನು ಪತ್ತೆಹಚ್ಚಲು ಸರ್ಕಾರದಿಂದ ಸಾಧ್ಯವಾಗಲಿಲ್ಲ. ಅಲ್ಲದೇ ಸ್ವತಃ ಮೀನುಗಾರರೇ 15-20 ದಿನಗಳಿಂದ ನಿರಂತರವಾಗಿ ಹುಡುಕಾಟ ನಡೆಸಿದ್ದಾರೆ. ಆದ್ರೆ ನಾಪತ್ತೆಯಾದವರ ಕುರುಹು ಸಿಗಲಿಲ್ಲ. ಹೀಗಾಗಿ ಮೀನುಗಾರರು ಇಂದು ಬೊಬ್ಬರ್ಯ ದೈವದ ಮೊರೆ ಹೋಗಿದ್ದಾರೆ.
ಮೀನುಗಾರರು ತಾವು ಮೀನು ಹಿಡಿಯಲು ಸಮುದ್ರಕ್ಕೆ ಇಳಿಯುವ ಮೊದಲು ಬೊಬ್ಬರ್ಯ ದೈವಕ್ಕೆ ಕೈ ಮುಗಿಯುತ್ತಾರೆ. ಹೀಗಾಗಿ ಬೊಬ್ಬರ್ಯ ದೈವ ಕೊಟ್ಟ ನುಡಿಯನ್ನು ಪಾಲಿಸುತ್ತಾ, ಸರ್ಕಾರಕ್ಕೆ ಮತ್ತಷ್ಟು ಒತ್ತಡ ಹೇರುವ ಪ್ರಯತ್ನ ಮಾಡುತ್ತಾರೆ.
ಬುಧವಾರ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಅವರು ನಾಪತ್ತೆಯಾದವರ ಮನೆಗೆ ಭೇಟಿ ನೀಡಿ ಭರವಸೆ ನೀಡಿದ್ದಾರೆ. ಆದ್ರೆ 28 ದಿನಗಳ ಬಳಿಕ ಸಚಿವರು ಭೇಟಿ ಕೊಟ್ಟಿರುವುದಕ್ಕೆ ಮೀನುಗಾರರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಫುಲ್ ಗರಂ ಆಗಿದ್ದಾರೆ. ವಿಧಾನಸೌಧದಲ್ಲಿ ಪತ್ತೆಯಾದ ಅಕ್ರಮ ಹಣ ಸಚಿವ ಪುಟ್ಟರಂಗಶೆಟ್ಟಿಯದ್ದು ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತನ್ನನ್ನು ಭೇಟಿ ಮಾಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಬುಲಾವ್ ನೀಡಿದ್ರು.
ಹೀಗಾಗಿ ಶನಿವಾರ ರಾತ್ರಿ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಪುಟ್ಟರಂಗಶೆಟ್ಟಿ ಒಂದು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ಸಿದ್ದರಾಮಯ್ಯ ಭೇಟಿ ಬಳಿಕ ಮುಖ ಸಪ್ಪಗೆ ಮಾಡಿಕೊಂಡು ಹೊರ ಬಂದ ಪುಟ್ಟರಂಗ ಶೆಟ್ಟಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ತಮ್ಮ ಕಾರಿನಲ್ಲಿ ತೆರಳಿದ್ರು. ಒಂದು ಗಂಟೆಗಳ ಕಾಲ ನಡೆದ ಮಾತು ಕತೆಯಲ್ಲಿ ಸಿದ್ದರಾಮಯ್ಯ, ಪುಟ್ಟರಂಗಶೆಟ್ಟಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ: ಯಾವುದೇ ತನಿಖೆಗೂ ಸಿದ್ಧ, ನನ್ನ ವಿರುದ್ಧ ಷಡ್ಯಂತ್ರ: ಪುಟ್ಟರಂಗಶೆಟ್ಟಿ
ಬಿಜೆಪಿ ಪ್ರತಿಭಟನೆ:
ಇತ್ತ ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆಗೆ ಒತ್ತಾಯಿಸಿ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಪ್ರಜಾಪ್ರಭುತ್ವದ ದೇವಸ್ಥಾನದಲ್ಲಿ ಸಿಕ್ಕಿ ಹಾಕಿಕೊಂಡ ಹಣಕ್ಕೆ ಯಾರು ಜವಾಬ್ದಾರರು ಎಂಬುದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಹಣ ಸಿಕ್ಕಿರುವುದು ಕಾಂಗ್ರೆಸ್‍ಗೆ ಪುಟುಗೋಸಿ ಡೀಲ್- ಪ್ರತಾಪ್ ಸಿಂಹ ಲೇವಡಿ
ಸಂಬಂಧಪಟ್ಟ ಸಚಿವರು, ಸರ್ಕಾರದ ಮುಖ್ಯಸ್ಥ ಕುಮಾರಸ್ವಾಮಿ, ಸಮನ್ವಯ ಸಮಿತಿ ಮುಖ್ಯಸ್ಥ ಸಿದ್ದರಾಮಯ್ಯ, ಪುಟುಗೋಸಿ ಅಂತ ಬಿಟ್ಟು ಬಿಡಬೇಕಾ ದಿನೇಶ್ ಗುಂಡೂರಾವ್..? ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ.. ನಾಚಿಕೆ ಇಲ್ಲದ ಮದುವೆ ಎಂದು ದೋಸ್ತಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಹುಚ್ಚನ ಮನೇಲಿ ಉಂಡವನೇ ಜಾಣ ಅನ್ನುವಂತೆ ಸರ್ಕಾರವಿದೆ- ಶಾಸಕ ಸಿಟಿ ರವಿ
ಪ್ರಜಾಪ್ರಭುತ್ವದ ದೇವಸ್ಥಾನದಲ್ಲಿ ಸಿಕ್ಕಿ ಹಾಕಿಕೊಂಡ ಹಣಕ್ಕೆ ಯಾರು ಜವಾಬ್ದಾರರು1 ) ಸಂಬಂಧಪಟ್ಟ ಸಚಿವರು 2 ) ಸರಕಾರದ ಮುಖ್ಯಸ್ಥ , Sri @hd_kumaraswamy 3 ) ಸಮನ್ವಯ ಸಮಿತಿ ಮುಖ್ಯಸ್ಥ ರು Sri @siddaramaiah 4)ಪುಟುಗೋಸಿ ಅಂತ ಬಿಟ್ಟು ಬಿಡಬೇಕಾ ? Sri @dineshgrao ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ ? ನಾಚಿಕೆ ಇಲ್ಲದ ಮದುವೆ pic.twitter.com/eQ4X9PvDlR
ಉಡುಪಿ: ಕನ್ನಡದ ಕಲಾವಿದರೆಲ್ಲರೂ ಪ್ರಾಮ್ಟ್ ಇರ್ತಾರೆ. ಅವರು ಕ್ರಮ ಪ್ರಕಾರ ತೆರಿಗೆ ಕಟ್ಟಿರುತ್ತಾರೆ. ಐಟಿ ದಾಳಿ ವಿಚಾರದಲ್ಲಿ ಯಾರೂ ಆತಂಕಪಡಬೇಡಿ ಎಂದು ಸಚಿವೆ, ನಟಿ ಜಯಮಾಲಾ ವಿಶ್ವಾಸ ವ್ಯಕ್ತಪಡಿಸಿದರು.
ಸ್ಯಾಂಡಲ್ ವುಡ್ ಮೇಲೆ ಐಟಿ ದಾಳಿ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಐಟಿಯವರು ಅವರ ಕೆಲಸ ಮಾಡುತ್ತಾರೆ. ಯಾರಿಗೂ ಇದರಿಂದ ತೊಂದರೆ ಆಗುವುದಿಲ್ಲ. ಕನ್ನಡ ಚಿತ್ರರಂಗ ಎತ್ತರಕ್ಕೆ ಬೆಳೆದಿರೋದು ಈ ದಾಳಿ ನೋಡಿದಾಗ ಗೊತ್ತಾಗುತ್ತದೆ. ಕಲಾವಿದರಿಗೆ ಈ ದಾಳಿಯಿಂದ ಏನೂ ಹಿನ್ನಡೆ ಆಗೋದಿಲ್ಲ. ರಾಜ್ ಕುಮಾರ್ ಮಕ್ಕಳು ಯಶ್ – ಸುದೀಪ್ ಬಹಳ ಪ್ರಾಮ್ಟ್ ಇದ್ದಾರೆ ಎಂದರು. ಕಲಾವಿದರ ಬಳಿ ಎರಡು ಒಡವೆ, ಬೆಳ್ಳಿತಟ್ಟೆ, ಚೊಂಬು ಇರಬಹುದು ಎಂದು ನಕ್ಕರು.
ನಿಯಮ ಪ್ರಕಾರ ಎಲ್ಲರೂ ತೆರಿಗೆ ಕಟ್ಟಲೇಬೇಕು. ಎಲ್ಲಾ ಕಲಾವಿದರು ತೆರಿಗೆ ಕಟ್ಟಿರುತ್ತಾರೆ ಅಂತ ಜಯಮಾಲಾ ಹೇಳಿದರು. ಇದೇ ವೇಳೆ ಪ್ರಧಾನಿ ಮೋದಿ ದಾಳಿ ಮಾಡಿಸಿದ್ದಾರಂತೆ ಹೌದಾ ಅಂತ ಕೇಳಿದ್ರೆ ಅದೆಲ್ಲ ನಂಗೆ ಗೊತ್ತಿಲ್ಲ ಅಂತ ಹೇಳಿದರು.
ಶಬರಿಮಲೆ ವಿಚಾರಕ್ಕೆ ಗರಂ:
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜಯಮಾಲಾ, ಶಬರಿಮಲೆ ಬಗ್ಗೆ ಮಾತಾಡಿ ನಾನು ಸುಸ್ತಾಗಿ ಬಿಟ್ಟೆ. ನಾನು ಈ ಬಗ್ಗೆ ಏನೂ ಮಾತಾಡಲ್ಲ. ದೇವರನ್ನು ಯಾರೂ ವ್ಯಾಪಾರಕ್ಕೆ ಇಡಬಾರದು. ನಾನು ದೇವರನ್ನು ನಂಬಿಕೆಯ ತಳಹದಿಯಲ್ಲಿ ನೋಡುವವಳು. ಶಬರಿಮಲೆಗೆ ಭಕ್ತಿಯಿಂದ ಹೋಗಬೇಕು ಎಂಬುದು ನನ್ನ ಭಾವನೆ. ದೇವರ ದರ್ಶನ ಖುಷಿಯಾಗಿದ್ಯಾ ಅಂತ ಹೋದವರನ್ನು ಕೇಳಿ ಎಂದು ಅವರು ಕೋಪಗೊಂಡರು.
ಉಡುಪಿ: ಇಲ್ಲಿನ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಡಿಸೆಂಬರ್ 15 ರಿಂದ ನಾಪತ್ತೆಯಾಗಿರುವ ಏಳು ಮೀನುಗಾರರು ವಾಪಾಸ್ ಬರುತ್ತಾರೆ ಎಂಬ ನಂಬಿಕೆ ಇದೆ. ಅವರನ್ನು ಅಪಹರಿಸಿ ಒತ್ತೆ ಇಟ್ಟಿರುವ ಬಗ್ಗೆಯೂ ನಮಗೆ ಗುಮಾನಿ ಇದೆ. ಸರಕಾರದ ಮಟ್ಟದಲ್ಲಿ ಎಲ್ಲಾ ಶೋಧಕಾರ್ಯ ಮಾಡಿದ್ದೇವೆ ಎಂದು ಉಡುಪಿ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೀನುಗಾರರು ಸುರಕ್ಷಿತವಾಗಿ ವಾಪಾಸ್ ಬರುತ್ತಾರೆ ಎಂಬ ನಂಬಿಕೆಯಿದೆ. ಅಪಹರಿಸಿ ಒತ್ತೆ ಇಟ್ಟಿರುವ ಬಗ್ಗೆಯೂ ನಮಗೆ ಗುಮಾನಿ ಇದೆ. ಈ ಹಿಂದೆಯೂ ಒತ್ತೆ ಇಟ್ಟಿರುವ ಘಟನೆ ನಡೆದಿದೆ. ಕೇಂದ್ರ- ರಾಜ್ಯ ಸರ್ಕಾರ ಮೀನುಗಾರರ ಕುಟುಂಬದ ಜೊತೆಗಿದೆ. ನೌಕಾಸೇನೆ, ವಾಯುಸೇನೆ ಅಧಿಕಾರಿಗಳು, ಕೋಸ್ಟ್ ಗಾರ್ಡ್ ನಿರಂತರ ಹುಡುಕಾಟ ಮಾಡಿದ್ದಾರೆ. ಕೊಸ್ಟ್ ಗಾರ್ಡ್ ಇಲಾಖೆ ಕೂಡಾ ಕಾರ್ಯಾಚರಣೆ ಮಾಡುತ್ತಿದೆ ಎಂದು ಜಯಮಾಲಾ ಹೇಳಿದರು. ಇದನ್ನೂ ಓದಿ: ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣ – ಭಾನುವಾರ ಬಂದರುಗಳು ಬಂದ್!
ಪ್ರತಿಭಟನೆ ಕೈಬಿಡಿ:
ಮೀನುಗಾರರು ನಾಳಿನ ಪ್ರತಿಭಟನೆ ಕೈಬಿಡಲಿ ಎಂದು ಮನವಿ ಮಾಡಿದ ಸಚಿವೆ, ಮೀನುಗಾರರ ನೋವು ನಮ್ಮ ನೋವೆಂದು ಭಾವಿಸಿದ್ದೇವೆ. ಗೃಹಸಚಿವರು ಉಡುಪಿಗೆ ಬಂದು ಸಭೆ ನಡೆಸುತ್ತಾರೆ. ಮೀನುಗಾರಿಕಾ ಸಚಿವರೂ ಉಡುಪಿಗೆ ಬರುತ್ತಾರೆ. ಭಯೋತ್ಪಾದಕ ಕೃತ್ಯ ಆಗಿದ್ದರೂ ಬಿಡಿಸಿಕೊಂಡು ತರುತ್ತೇವೆ. ಮೀನುಗಾರರು ಜೀವಂತ ಬಂದರೆ ಸಾಕು. ನಾನೂ ಕೂಡ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಸುಬಿಗಾಗಿ ಕಡಲಿಗಿಳಿದವರು 17 ದಿನದಿಂದ ಕಣ್ಮರೆ- ಇದು ಮಿಸ್ಸಿಂಗ್ ಸೆವೆನ್ ಮಿಸ್ಟರಿ
ಡಿಸೆಂಬರ್13 ರಂದು ತೆರಳಿದ್ದ ಬೋಟ್ ಮಹಾರಾಷ್ಟ್ರ- ಗೋವಾ ಗಡಿಯಲ್ಲಿ ನಾಪತ್ತೆಯಾಗಿತ್ತು. ಬೋಟ್ ನಲ್ಲಿ ಉಡುಪಿಯ ಇಬ್ಬರು, ಉತ್ತರ ಕನ್ನಡದ ಐದು ಮೀನುಗಾರರಿದ್ದರು.