Tag: minister

  • ಸಚಿವ ತಮ್ಮಣ್ಣ ಮನೆಗೆ ಮುತ್ತಿಗೆ ಹಾಕಿ ಮದ್ದೂರು ಜನ ಎಚ್ಚರಿಕೆ

    ಸಚಿವ ತಮ್ಮಣ್ಣ ಮನೆಗೆ ಮುತ್ತಿಗೆ ಹಾಕಿ ಮದ್ದೂರು ಜನ ಎಚ್ಚರಿಕೆ

    ಮಂಡ್ಯ: ಒಂದು ಕಡೆ ಮಂಡ್ಯದಲ್ಲಿ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಏರುತ್ತಿದ್ದು, ಮತ್ತೊಂದು ಕಡೆ ಚುನಾವಣೆ ಘೋಷಣೆಗೂ ಮುನ್ನವೇ ರೈತರಿಂದ ಮತದಾನಕ್ಕೆ ಬಹಿಷ್ಕಾರಕ್ಕೆ ನಿರ್ಧರಿಸಲಾಗಿದೆ.

    ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಸಾರಿಗೆ ಸಚಿವ ಡಿಸಿ.ತಮ್ಮಣ್ಣ ಮನೆಗೆ ಮುತ್ತಿಗೆ ಹಾಕಿ ಚುನಾವಣೆ ಬಹಿಷ್ಕಾರ ಮಾಡುವ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ. ಮದ್ದೂರು ತಾಲೂಕಿನ ಕಡೆಯ ಭಾಗಕ್ಕೆ ವ್ಯವಸಾಯಕ್ಕೆ ನೀರು ಬಿಡದ ಹಿನ್ನೆಲೆಯಲ್ಲಿ ಸಚಿವರ ಮನೆಗೆ ರೈತರು ಮುತ್ತಿಗೆ ಹಾಕಿದ್ದಾರೆ.

    ಅಜ್ಜಹಳ್ಳಿ, ಮಾರ್ಗೇನಹಳ್ಳಿ, ಉಪ್ಪಾರದೊಡ್ಡಿ ಗ್ರಾಮಸ್ಥರಿಂದ ಸಚಿವರ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಭಾಗದ ಜಮೀನಿಗೆ ವ್ಯವಸಾಯಕ್ಕೆ ನೀರಿಲ್ಲ. ಹೀಗಿರುವಾಗ ನಮಗೆ ಚುನಾವಣೆ ಯಾಕೆ? ಮತಪೆಟ್ಟಿಗೆ ನಮ್ಮ ಊರಿಗೆ ಬರಲು ಬಿಡಲ್ಲ ಎಂದು ಗ್ರಾಮಸ್ಥರು ಸಚಿವರ ಮನೆಗೆ ಮುತ್ತಿಗೆ ಹಾಕಿ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಂಡ್ಯದಲ್ಲಿ ಸುಮಲತಾ ವರ್ಸಸ್ ಜೆಡಿಎಸ್ – ರೇವಣ್ಣ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ತಲ್ಲಣ

    ಮಂಡ್ಯದಲ್ಲಿ ಸುಮಲತಾ ವರ್ಸಸ್ ಜೆಡಿಎಸ್ – ರೇವಣ್ಣ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ತಲ್ಲಣ

    ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದೆ. ಈ ಮಧ್ಯೆ ಮಂಡ್ಯದಲ್ಲಿ ಜೆಡಿಎಸ್ ವರ್ಸಸ್ ಸುಮಲತಾ ಅಂಬರೀಶ್ ಮಧ್ಯೆ ಭಾರೀ ಫೈಟ್ ಆರಂಭವಾಗಿದೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮುಯ್ಯ ಅವರು ಮಂಡ್ಯದಿಂದ ಸುಮಲತಾ ಅವರಿಗೆ ಟಿಕೆಟ್ ಕೊಡಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಅಲ್ಲೋಲಕಲ್ಲೋವಾಗಿದೆ. ಆದ್ರೂ ಸುಮಲತಾ ಅವರು ಪಕ್ಷ ಟಿಕೆಟ್ ಕೊಡದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುವುದಾಗಿ ಪಣ ತೊಟ್ಟಿದ್ದಾರೆ. ಅಲ್ಲದೆ ಈ ಸಂಬಂಧ ಈಗಾಗಲೇ ಜಿಲ್ಲೆಯಲ್ಲಿ ಪ್ರಚಾರಕ್ಕೂ ಇಳಿದಿದ್ದಾರೆ.

    ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು `ಗಂಡ ಸತ್ತ ಒಂದೂವರೆ ತಿಂಗಳುಗಳೇ ಕಳೆದಿಲ್ಲ. ಈ ಸ್ಥಿತಿಯಲ್ಲಿ ಅವರಿಗೆ ರಾಜಕೀಯ ಬೇಕಿತ್ತಾ ಎಂದು ಪ್ರಶ್ನೆ ಮಾಡಿರುವ ವಿಚಾರ ಇದೀಗ ಭಾರೀ ಚರ್ಚೆಗೆ ಈಡಾಗಿದೆ.

    ಯಾಕಂದ್ರೆ 2018ರ ನ.24ಕ್ಕೆ ಅಂಬರೀಶ್ ಅವರು ಮರಣ ಹೊಂದಿರುವ ಸುದ್ದಿ ಕೇಳಿದಾಕ್ಷಣ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ದೌಡಾಯಿಸಿದ್ದರು. ಕುಟುಂಬದ ಸದಸ್ಯರನ್ನೇ ಕಳೆದುಕೊಂಡಷ್ಟು ಚಿಂತಾಕ್ರಾಂತರಾಗಿದ್ದರು. ಅಲ್ಲದೆ ಮರುದಿನ ಅಣ್ಣನ ಅಂತ್ಯಸಂಸ್ಕಾರಕ್ಕೆ ತಮ್ಮನಂತೆ ಹೆಗಲು ಕೂಡ ಕೊಟ್ಟಿದ್ದರು. ಮಂಡ್ಯಕ್ಕೆ ಸೇನಾ ಹೆಲಿಕಾಪ್ಟರ್ ತರಿಸುವುದರಿಂದ ಹಿಡಿದು ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನೂ ಕಲ್ಪಿಸಿದ್ರು. ಮಂಡ್ಯಕ್ಕೆ ಖುದ್ದು ಭೇಟಿ ಕೊಟ್ಟು ಗಲಾಟೆ ಆಗದಂತೆ ನೋಡಿಕೊಂಡಿದ್ದರು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರಕ್ಕೂ ವ್ಯವಸ್ಥೆ ಮಾಡಿಕೊಟ್ಟಿದ್ದರು. ಹೀಗೆ ಮುಖ್ಯಮಂತ್ರಿ ಅನ್ನೋದನ್ನೂ ಕೂಡ ಮರೆತು ಕುಮಾರಸ್ವಾಮಿಯವರು ಅಂದು ಅಂಬರೀಶ್ ಅಂತ್ಯಸಂಸ್ಕಾರವನ್ನು ತೀರಾ ಮುತುವರ್ಜಿಯಿಂದ ನೆರವೇರಿಸಿದ್ದರು. ಆದ್ರೆ ಇಂದು ಸಿಎಂ ಸಹೋದರನ ಒಂದು ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ತಲ್ಲಣವೇ ಏರ್ಪಟ್ಟಿದೆ.

    ಈ ಕಡೆ, ತಂದೆಯಂತೆ ಮಗ ನಿಖಿಲ್ ಕೂಡ ಧೈರ್ಯ ತುಂಬಿದ್ದರು. ಅಣ್ಣನಂತೆ ಅಭಿಷೇಕ್‍ಗೆ ಸಾಂತ್ವಾನ ಹೇಳಿದ್ದರು. ಅಂತ್ಯಸಂಸ್ಕಾರ ಆಗುವವರೆಗೂ ಅಭಿಷೇಕ್ ಜೊತೆಯಲ್ಲಿದ್ದರು. ಈಗ ಕಾಲ ಬದಲಾಗಿ ಹೋಗಿದೆ. ಅಧಿಕಾರಕ್ಕಾಗಿ ಫೈಟ್ ಶುರುವಾಗಿದೆ. ಅಂಬಿ ನಿಧನದ ಎರಡೂವರೆ ತಿಂಗಳಲ್ಲಿ ರಾಜಕೀಯ ಬೇಕಿತ್ತಾ ಅನ್ನೋ ಪ್ರಶ್ನೆ ಇದೀಗ ಅಂಬಿ ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ.

    https://www.youtube.com/watch?v=BGvmKX3g6b8

    https://www.youtube.com/watch?v=1zAHuxijg6Q

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಮ್ಮನ ಕ್ಷೇತ್ರದಲ್ಲಿ ಅಣ್ಣನ ದರ್ಬಾರ್- 1.90 ಕೋಟಿಯ ಕಾಮಗಾರಿಗೆ ಸೀಕ್ರೆಟ್ ಟೆಂಡರ್..!

    ತಮ್ಮನ ಕ್ಷೇತ್ರದಲ್ಲಿ ಅಣ್ಣನ ದರ್ಬಾರ್- 1.90 ಕೋಟಿಯ ಕಾಮಗಾರಿಗೆ ಸೀಕ್ರೆಟ್ ಟೆಂಡರ್..!

    ರಾಮನಗರ: ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸ್ವಕ್ಷೇತ್ರ ಚನ್ನಪಟ್ಟಣ. ಸಿಎಂ ಸ್ವಕ್ಷೇತ್ರದಲ್ಲೇ ಅವರ ಸಹೋದರ ಎಚ್.ಡಿ ರೇವಣ್ಣರ ಲೋಕೋಪಯೋಗಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದೆ. ಸರ್ಕಾರಿ ನೀತಿ ನಿಯಮಗಳನ್ನೇ ಗಾಳಿಗೆ ತೂರಿ ಮೂರೇ ದಿನಗಳಲ್ಲಿ ಸೀಕ್ರೆಟ್ ಟೆಂಡರ್ ನಡೆಸಲಾಗಿದೆ. ಇತ್ತ ಅನಿತಾ ಮೇಡಂ ಕ್ಷೇತ್ರದಲ್ಲೂ ಸೀಕ್ರೆಟ್ ಟೆಂಡರ್ ನಡೀತಿದೆ.

    ಹೌದು. ಸಿಎಂ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಸಿಎಂ ಸೋದರ ಎಚ್.ಡಿ ರೇವಣ್ಣನವರ ಲೋಕೋಪಯೋಗಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿಗಳ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್‍ಮಾಲ್ ನಡೆದಿದೆ. ಅದು ಕೂಡ ತಮ್ಮನ ಕ್ಷೇತ್ರದಲ್ಲಿ ಅಣ್ಣನ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಿಎಂ ಅನುಯಾಯಿಗಳಿಗೆ ಸೀಕ್ರೆಟ್ ಟೆಂಡರ್ ಮೂಲಕ ಕಾಮಗಾರಿ ನೀಡಿರುವುದು ಉಳಿದ ಗುತ್ತಿಗೆದಾರರ ಆಕ್ರೋಶಕ್ಕೆ ಕಾರಣವಾಗಿದೆ.

    ಸಿಎಂಜಿಆರ್ ವೈ ಯೋಜನೆಯಡಿಯಲ್ಲಿ ಚನ್ನಪಟ್ಟಣ ತಾಲೂಕಿನ ರಸ್ತೆಗಳ ಅಭಿವೃದ್ಧಿಗಾಗಿ 1.90 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಸೀಕ್ರೆಟ್ ಟೆಂಡರ್ ಖಂಡಿಸಿ ರಾಮನಗರದ ಲೋಕೋಪಯೋಗಿ ಇಲಾಖೆ ಮುಂದೆ ಗುತ್ತಿಗೆದಾರರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.

    ಯಾವುದೇ ಕಾಮಗಾರಿಗಳು ನಡೆಯಬೇಕಿದ್ರೂ ಇಲಾಖೆಗೆ ಅನುದಾನ ಬಂದ ತಕ್ಷಣ ಜಿಲ್ಲಾಧಿಕಾರಿಗಳಿಂದ ಆಡಳಿತಾತ್ಮಕ ಅನುಮೋದನೆ ಪಡೆದು ಆನಂತರ ನೋಟಿಫಿಕೇಷನ್ ಹೊರಡಿಸಬೇಕು. ಅಲ್ಲದೆ ನಾಮಫಲಕದಲ್ಲಿ ನೋಟಿಸ್ ಹಾಗೂ ಪತ್ರಿಕಾ ಜಾಹಿರಾತುಗಳನ್ನು ನೀಡಬೇಕು. ಆದ್ರೆ ಸರ್ಕಾರದ ಪಾರದರ್ಶಕ ನಿಯಮಗಳನ್ನು ಗಾಳಿಗೆ ತೂರಿ ಸಿಎಂ ಕುಮಾರಸ್ವಾಮಿಯವರ ಅನುಯಾಯಿಗಳಿಗೆ ಮಾತ್ರ ಟೆಂಡರ್ ನೀಡಲಾಗಿದೆ ಎಂದು ಗುತ್ತಿಗೆದಾರ ಪ್ರೇಮ್ ಕುಮಾರ್ ಗರಂ ಆಗಿದ್ದಾರೆ.

    ಅನಿತಾ ಕುಮಾರಸ್ವಾಮಿ ಕ್ಷೇತ್ರದಲ್ಲೂ ಟೆಂಡರ್ ಗೋಲ್‍ಮಾಲ್:
    ಕೇವಲ ಚನ್ನಪಟ್ಟಣ ಮಾತ್ರವಲ್ಲದೆ ರಾಮನಗರ ಕ್ಷೇತ್ರದಲ್ಲೂ ಕೂಡ ಇದೇ ಪರಿಸ್ಥಿತಿಯಿದ್ದು ಸುಮಾರು 1 ಕೋಟಿಯಷ್ಟು ಕಾಮಗಾರಿ ಶಾಸಕಿ ಅನಿತಾ ಕುಮಾರಸ್ವಾಮಿ ಬೆಂಬಲಿಗರ ಪಾಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಒಟ್ಟಾರೆ ಸಿಎಂ ಕ್ಷೇತ್ರದಲ್ಲೇ ಅವರ ಸೋದರ ಎಚ್.ಡಿ ರೇವಣ್ಣನವರ ಲೋಕೋಪಯೋಗಿ ಇಲಾಖೆಯಲ್ಲಿ ಅಭಿವೃದ್ಧಿ ಕಾಮಗಾರಿಯ ಟೆಂಡರ್‍ನಲ್ಲಿ ಅಧಿಕಾರಿಗಳು ಅವ್ಯವಹಾರ ನಡೆಸುತ್ತಿದ್ದು ಗುತ್ತಿಗೆದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲಕ್ಷ್ಮಿ ಅಶ್ವಿನ್ ಗೌಡರಿಗಿಂತ ನಿಖಿಲ್ ಅರ್ಹ ಅಭ್ಯರ್ಥಿ – ಸಚಿವ ಡಿ.ಸಿ ತಮ್ಮಣ್ಣ

    ಲಕ್ಷ್ಮಿ ಅಶ್ವಿನ್ ಗೌಡರಿಗಿಂತ ನಿಖಿಲ್ ಅರ್ಹ ಅಭ್ಯರ್ಥಿ – ಸಚಿವ ಡಿ.ಸಿ ತಮ್ಮಣ್ಣ

    ಬೆಂಗಳೂರು: ಮಂಡ್ಯಕ್ಕೆ ಹಾಲಿ ಸಂಸದ ಶಿವರಾಮೇಗೌಡ, ಟಿಕೆಟ್ ಆಕಾಂಕ್ಷಿ ಲಕ್ಷ್ಮಿ ಅಶ್ವಿನ್ ಗೌಡರಿಗಿಂತ ನಿಖಿಲ್ ಅರ್ಹ ಅಭ್ಯರ್ಥಿ. ನಮ್ಮ ಮನೆಯವರು ನಿಂತುಕೊಳ್ಳೋದು ತಪ್ಪಲ್ಲ ಅಂತ ಸಾರಿಗೆ ಸಚಿವ ಡಿಸಿ ತಮ್ಮಣ್ಣ, ನಿಖಿಲ್ ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ್ದಾರೆ.

    ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ನಿಖಿಲ್ ಅಭ್ಯರ್ಥಿ ಎಂದು ದೇವೇಗೌಡರೇ ಘೋಷಣೆ ಮಾಡಿದ್ದಾರೆ. ಸೂಕ್ತ ಅಭ್ಯರ್ಥಿ ಇದ್ದರೆ ಕುಟುಂಬದಲ್ಲೇ ಯಾಕೆ ಟಿಕೆಟ್ ಕೊಡಬಾರದು ಎಂದು ಪ್ರಶ್ನಿಸಿದ ಅವರು, ನಮ್ಮ ರಾಜ್ಯದಲ್ಲಿ ಬೇರೆ ಅವರನ್ನು ಕರೆದುಕೊಂಡು ಬಂದು ಗೆಲ್ಲಿಸಿಲ್ವಾ, ಸುಷ್ಮಾ ಸ್ವರಾಜ್, ಸೋನಿಯಾ ಗಾಂಧಿ ಹೀಗೆ ಬೇರೆ ರಾಜ್ಯದವರನ್ನ ಗೆಲ್ಲಿಸಿಲ್ವಾ ಅಂತ ಪ್ರಶ್ನೆ ಮಾಡಿದ್ರು.

    ಹಾಲಿ ಸಂಸದ ಶಿವರಾಮೇಗೌಡ, ಆಶ್ವಿನಿಗೌಡ ಗಿಂತ ನಿಖಿಲ್ ಅವರೇ ಅರ್ಹ ಅಭ್ಯರ್ಥಿ. ನಿಖಿಲ್ ನಿಲ್ಲೋದು ತಪ್ಪಲ್ಲ. ಹಾಸನ, ಮಂಡ್ಯ, ಮೈಸೂರು ನಮ್ಮ ಮನೆ ಇದ್ದ ಹಾಗೆ. ನಮ್ಮ ಮನೆಯಲ್ಲಿ ನಾವು ಅಭ್ಯರ್ಥಿ ಹಾಕಿಕೊಳ್ತೀವಿ. ಉತ್ತರ ಕರ್ನಾಟಕಕ್ಕೆ ನಾವು ಹೋದ್ರೆ ಪ್ರಶ್ನೆ ಮಾಡಬೇಕು. ನಮ್ಮ ಮನೆಯಲ್ಲಿ ನಿಂತ್ರೆ ಏನು ಸಮಸ್ಯೆ ಅಂತ ನಿಖಿಲ್ ಸ್ಪರ್ಧೆಯನ್ನ ಸಮರ್ಥನೆ ಮಾಡಿಕೊಂಡರು

    ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಬೇಕಾದ್ರೂ ಸ್ಪರ್ಧೆ ಮಾಡಬಹುದು. ಅರ್ಹತೆ ಇರೋರು ಸ್ಪರ್ಧೆ ಮಾಡಬಹುದು. ಬೇಡ ಅನ್ನೋಕೆ ಆಗುತ್ತಾ ಎಂದು ಪ್ರಶ್ನಿಸಿ ಸುಮಲತಾಗೆ ಟಾಂಗ್ ಕೊಟ್ರು.

    ನಮ್ಮದು ಆರಂಭದಿಂದಲೂ ಕುಟುಂಬ ರಾಜಕಾರಣ ಇದೆ. ಅನೇಕರು ವಿರೋಧ ಮಾಡ್ತಾನೆ ಇದ್ದಾರೆ. ಇಷ್ಟೆಲ್ಲ ಆದ್ರೂ ನಾವು ಗೆದ್ದು ಬರುತ್ತಿಲ್ವಾ ಎಂದು ಕುಟುಂಬ ರಾಜಕಾರಣವನ್ನು ಸಮರ್ಥನೆ ಮಾಡಿಕೊಂಡ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • KSRTC ಬಸ್ಸಿನಲ್ಲಿ ಸಚಿವ ಶಿವಶಂಕರ ರೆಡ್ಡಿ ಪ್ರಯಾಣ

    KSRTC ಬಸ್ಸಿನಲ್ಲಿ ಸಚಿವ ಶಿವಶಂಕರ ರೆಡ್ಡಿ ಪ್ರಯಾಣ

    ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ಬಸ್‍ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಶಾಸಕ ಹಾಗೂ ಕೃಷಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ಪ್ರಯಾಣ ಮಾಡಿದ್ದಾರೆ.

    ಗೌರಿಬಿದನೂರು ನಗರದಿಂದ 24 ಕಿಲೋಮೀಟರ್ ದೂರದ ಕರ್ನಾಟಕ-ಆಂಧ್ರ ಗಢಿಭಾಗದ ಸಾದಾರ್ಲಹಳ್ಳಿಗೆ 25 ರೂಪಾಯಿ ನೀಡಿ ಟಿಕೆಟ್ ಪಡೆದ ಸಚಿವರು ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಪ್ರಯಾಣಿಸಿದ್ದಾರೆ.

    ಅಂದಹಾಗೆ ಇದುವರೆಗೂ ಸಾದಾರ್ಲಹಳ್ಳಿ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸೇವೆ ಲಭ್ಯವಿರಲಿಲ್ಲ. ಕಳೆದ ವಿಧಾನಸಭೆ ಚುನಾವಣೆ ವೇಳೆ ಗ್ರಾಮಸ್ಥರಿಗೆ ಬಸ್ ಸಂಚಾರ ಸೌಲಭ್ಯ ಓದಗಿಸುವ ಬಗ್ಗೆ ಸಚಿವರು ಭರವಸೆಯನ್ನು ನೀಡಿದ್ದರು. ಇನ್ನೂ ಇತ್ತೀಚೆಗೆ ಸಾದಾರ್ಲಹಳ್ಳಿ ಮಾರ್ಗಕ್ಕೆ ಡಾಂಬರೀಕರಣ ರಸ್ತೆ ಸಹ ನಿರ್ಮಾಣ ಮಾಡಲಾಗಿತ್ತು.

    ಇಂದು ಸ್ವತಃ ಸಚಿವರೇ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಸಾದಾರ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡುವ ಮೂಲಕ ನೂತನ ಬಸ್ ಸಂಚಾರ ಸೇವೆಗೆ ಚಾಲನೆ ನೀಡಿದ್ದರು. ಸಾದಾರ್ಲಹಳ್ಳಿ ಗ್ರಾಮಕ್ಕೆ ಆಗಮಿಸಿದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಸಚಿವರನ್ನು ಗ್ರಾಮಸ್ಥರು ತಮಟೆ ವಾದ್ಯಗಳೊಂದಿಗೆ ಬರ ಮಾಡಿಕೊಂಡರು. ಈ ವೇಳೆ ಸಚಿವರಿಗೆ ಅನೇಕ ಮುಖಂಡರು ಸಾಥ್ ಕೊಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿ ಷಡ್ಯಂತ್ರ ಒಂದೆರಡು ದಿನದಲ್ಲಿ ಬಹಿರಂಗ- ಸಚಿವ ಪ್ರಿಯಾಂಕ್ ಖರ್ಗೆ

    ಬಿಜೆಪಿ ಷಡ್ಯಂತ್ರ ಒಂದೆರಡು ದಿನದಲ್ಲಿ ಬಹಿರಂಗ- ಸಚಿವ ಪ್ರಿಯಾಂಕ್ ಖರ್ಗೆ

    ಚಾಮರಾಜನಗರ: ಸರ್ಜಿಕಲ್ ಸ್ಟ್ರೈಕ್ ಹಿಂದೆ ಷಡ್ಯಂತ್ರ ಇದೆ ಎಂಬ ಅನುಮಾನ ಜನರಲ್ಲಿ ಮೂಡುತ್ತಿದೆ. ಬಿಜೆಪಿಯ ಈ ಷಡ್ಯಂತ್ರ ಒಂದೆರೆಡು ದಿನದಲ್ಲಿ ಬಹಿರಂಗವಾಗಲಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

    ಚಾಮರಾಜನಗರದ ಬಿಳಿಗಿರಿರಂಗನಬೆಟ್ಟದಲ್ಲಿ ಮಾತನಾಡಿದ ಸಚಿವರು, ಭಾರತ ಹಾಗು ಪಾಕಿಸ್ತಾನ ಈ ಎರಡೂ ದೇಶಗಳಲ್ಲಿ ಯುದ್ಧೋನ್ಮಾದ ಸ್ಥಿತಿ ಉಂಟಾಗಿದ್ದರೂ ರಕ್ಷಣಾ ಸಚಿವರು ಎಲ್ಲಿ ಹೋಗಿದ್ದಾರೆ? ಇಷ್ಟೆಲ್ಲಾ ನಡೆಯುತ್ತಿದ್ದರೂ ಅವರೇಕೆ ಹೊರಗೆ ಬಂದಿಲ್ಲ ಎಂದು ಪ್ರಶ್ನಿಸಿದರು.

    ಸರ್ಜಿಕಲ್ ಸ್ಟ್ರೈಕ್ ನಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂಬ ಯಡಿಯೂರಪ್ಪ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಕೇವಲ ವೋಟಿಗೋಸ್ಕರ ಅವರು ಯಾವ ಹಂತಕ್ಕಾದರು ಹೋಗುತ್ತಾರೆ ಎಂಬುದು ಇದರಿಂದ ಸಾಬೀತಾಗಿದೆ. ಯಡಿಯೂರಪ್ಪ ಅವರ ಮನಸ್ಸಿನಲ್ಲಿರುವುದು ಬಹಿರಂಗವಾಗಿದೆ 44 ಯೋಧರನ್ನು ಬಲಿಕೊಟ್ಟು 22 ಸೀಟು ಗೆಲ್ಲಲ್ಲು ಮುಂದಾಗಿದ್ದಾರೆಂದು ಅವರ ಹೇಳಿಕೆಯಿಂದ ಅರ್ಥವಾಗುತ್ತದೆ ಎಂದ್ರು.

    ಬಿಎಸ್‍ವೈ ಹೇಳಿದ್ದೇನು..?
    ಭಾರತೀಯ ವಾಯುಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ಉಗ್ರರ ಮೇಲೆ ಭಾರತದ ವಾಯುಸೇನೆ ದಾಳಿಯ ಪರಿಣಾಮ ರಾಜ್ಯದಲ್ಲಿ 22 ಕ್ಕೂ ಹೆಚ್ಚು ಲೋಕಸಭೆ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಉಗ್ರರ ನೆಲೆಗಳ ಮೇಲೆ ಯಶಸ್ವಿಯಾಗಿ ನಡೆದ ಏರ್ ಸ್ಟ್ರೈಕ್ ನಿಂದಾಗಿ ದೇಶದಲ್ಲಿ ಬಿಜೆಪಿ ಪರ ಉತ್ತಮ ಅಲೆಯಿದೆ. ಭಾರತದಲ್ಲಿ ಇಂದಿನ ವಾತಾವರಣ ಭಾರತೀಯ ಜನತಾ ಪಕ್ಷದ ಪರವಾಗಿದೆ. ಪಾಕಿಸ್ತಾನದ ಒಳಗೆ ನುಗ್ಗಿ ನಮ್ಮ ವಾಯುಸೇನೆ ಉಗ್ರರ ನೆಲೆ ನಾಶ ಮಾಡಿದ್ದು ಸಂತೋಷವಾಗಿದೆ. ಅಲ್ಲದೇ 40 ವರ್ಷದ ಬಳಿಕ ಉಗ್ರ ನೆಲೆಗಳನ್ನು ಉಡೀಸ್ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಇದೆ. ರಾಜ್ಯದಿಂದ 22 ಸಂಸದರನ್ನು ಕರೆದ್ಯೊಯ್ದು ಮೋದಿ ಅವರಿಗೆ ನಮ್ಮ ಕಾಣಿಕೆ ಕೊಡಬೇಕಿದೆ. ಅಲ್ಲಿಯವರೆಗೂ ನಾನು ಮನೆ ಸೇರುವುದಿಲ್ಲ ಎಂದು ಯಡಿಯೂರಪ್ಪ ಅವರು ಬುಧವಾರ ಚಿತ್ರದುರ್ಗದಲ್ಲಿ ಹೇಳಿದ್ದರು.

    https://www.youtube.com/watch?v=-HDTIgjGwJg

    https://www.youtube.com/watch?v=LLIlyAySnxg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಡಿ.ಕೆ ಶಿವಕುಮಾರ್ ಆಸ್ಪತ್ರೆಗೆ ದಾಖಲು

    ಸಚಿವ ಡಿ.ಕೆ ಶಿವಕುಮಾರ್ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಗಂಟಲು ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಡಿ.ಕೆ ಶಿವಕುಮಾರ್ ಗುರುವಾರ ಜನರಲ್ ಚೆಕಪ್ ಮಾಡಿಸಿಕೊಳ್ಳಲು ಹೋಗಿದ್ದರು. ಚೆಕಪ್ ಮಾಡಿಸಿಕೊಂಡ ಡಿಕೆಶಿ ಆರೋಗ್ಯವಾಗಿದ್ದರು. ಆದರೆ ಇಂದು ಅವರಿಗೆ ಗಂಟಲು ನೋವು ಕಂಡುಬಂದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಶಿವಕುಮಾರ್ ಅವರು ಗಂಟಲು ನೋವಿಗೆ ಸಂಬಂಧಿಸಿದಂತೆ ಸಣ್ಣ ಆಪರೇಷನ್‍ಗೆ ಒಳಗಾಗಿದ್ದಾರೆ. ಸದ್ಯ ಅವರು ಇಂದು ರಾತ್ರಿಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.

    ಆದಾಯ ತೆರಿಗೆ ಇಲಾಖೆ (ಐಟಿ) ದಾಖಲಿಸಿದ್ದ ಮೂರು ಪ್ರಕರಣಗಳಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಗುರುವಾರ ಬಿಗ್ ರಿಲೀಫ್ ಸಿಕ್ಕಿದೆ. ಮೂರು ಆರೋಪಗಳಿಂದ ಮುಕ್ತವಾದರೂ ಸಚಿವ ಡಿಕೆ ಶಿವಕುಮಾರ್ ಅವರಿಗೆ ಫುಲ್ ರಿಲೀಫ್ ಸಿಕ್ಕಿಲ್ಲ. ಏಕೆಂದರೆ ಸಚಿವರ ಬಳಿ ಅಘೋಷಿತ ಆಸ್ತಿ ಇದೆ ಎಂದು ಸಾಬೀತು ಪಡಿಸುವ ಸಾಕ್ಷ್ಯಗಳಿದ್ದರೆ ಹೊಸದಾಗಿ ದೂರು ದಾಖಲಿಸಬಹುದು ಎಂದು ಐಟಿಗೆ ಕೋರ್ಟ್ ಅವಕಾಶ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಡಿಕೆ ಶಿವಕುಮಾರ್‌ಗೆ ಬಿಗ್ ರಿಲೀಫ್

    ಸಚಿವ ಡಿಕೆ ಶಿವಕುಮಾರ್‌ಗೆ ಬಿಗ್ ರಿಲೀಫ್

    ಬೆಂಗಳೂರು: ಆದಾಯ ತೆರಿಗೆ ಇಲಾಖೆ (ಐಟಿ) ದಾಖಲಿಸಿದ್ದ ಮೂರು ಪ್ರಕರಣಗಳಲ್ಲಿ ಜಲಸಂಪಸ್ಮೂಲ ಹಾಗೂ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

    ಐಟಿ ದಾಳಿಯ ವೇಳೆ ಸಚಿವ ಡಿಕೆ ಶಿವಕುಮಾರ್ ಅವರು ಸಾಕ್ಷ್ಯನಾಶ, ತಪ್ಪು ಮಾಹಿತಿ, ಚಟಿ ಹರಿದ ಆರೋಪದ ಅಡಿ ಪ್ರಕರಣ ದಾಖಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈ ಪ್ರಕರಣಗಳನ್ನು ವಜಾಗೊಳಿಸಿದೆ.

    ನಾಲ್ಕನೇ ಪ್ರಕರಣ ಹವಾಲಾ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಮಾರ್ಚ್ 15ಕ್ಕೆ ಆದೇಶ ನೀಡಲಾಗುತ್ತದೆ ಎಂದು ವಿಶೇಷ ನ್ಯಾಯಾಲಯದ ನ್ಯಾ. ಬಿ.ವಿ.ಪಾಟೀಲ್ ಅವರು ತಿಳಿಸಿದ್ದಾರೆ.

    ಆರ್ಥಿಕ ವರ್ಷ ಮುಗಿಯುವ ಮುನ್ನವೇ ಐಟಿ ಇಲಾಖೆ ದೂರು ದಾಖಲು ಮಾಡಿದ್ದಾರೆ. ನಾನು ಸಂಪೂರ್ಣ ಲೆಕ್ಕ ನೀಡಲು ಸಿದ್ಧ ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರು ಕೋರ್ಟ್ ಮುಂದೆ ಹೇಳಿಕೊಂಡಿದ್ದರು.

    ಮೂರು ಆರೋಪಗಳಿಂದ ಮುಕ್ತವಾದರೂ ಸಚಿವ ಡಿಕೆ ಶಿವಕುಮಾರ್ ಅವರಿಗೆ ಫುಲ್ ರಿಲೀಫ್ ಸಿಕ್ಕಿಲ್ಲ. ಏಕೆಂದರೆ ಸಚಿವರ ಬಳಿ ಅಘೋಷಿತ ಆಸ್ತಿ ಇದೆ ಎಂದು ಸಾಬೀತು ಪಡಿಸುವ ಸಾಕ್ಷಿಗಳಿದ್ದರೆ ಹೊಸದಾಗಿ ದೂರು ದಾಖಲಿಸಬಹುದು ಎಂದು ಐಟಿಗೆ ಕೋರ್ಟ್ ಅವಕಾಶ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಪ 60 ವರ್ಷದಿಂದ ಯಾರೂ ಏನೂ ಮಾಡಿಲ್ಲ, ಎಲ್ಲ ಬಿಜೆಪಿಯವ್ರೇ ಮಾಡಿದ್ದು- ಡಿಕೆಶಿ

    ಪಾಪ 60 ವರ್ಷದಿಂದ ಯಾರೂ ಏನೂ ಮಾಡಿಲ್ಲ, ಎಲ್ಲ ಬಿಜೆಪಿಯವ್ರೇ ಮಾಡಿದ್ದು- ಡಿಕೆಶಿ

    ರಾಮನಗರ: ದೇಶ ರಕ್ಷಣೆ ಮಾಡಬೇಕಾದ್ದು ಎಲ್ಲ ಪಕ್ಷದ ರಾಜಕಾರಣಿಗಳ ಜವಬ್ದಾರಿಯಾಗಿದೆ. ಆದ್ರೆ ಬಿಜೆಪಿಯವರು ಎಲ್ಲ ನಾವೇ ಮಾಡ್ತಿದ್ದೇವೆ ಎಂದು ಹೇಳ್ತಿದ್ದಾರೆ. ಪಾಪ 60 ವರ್ಷಗಳಿಂದ ಯಾರೂ ಏನೂ ಮಾಡಿಲ್ಲ ಅವರೇ ಎಲ್ಲ ಮಾಡ್ತಿದ್ದಾರೆ ಎಂದು ಪಾಕಿಸ್ತಾನದ ಮೇಲಿನ ದಾಳಿಯ ವಿಚಾರವಾಗಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

    ಕನಕಪುರದಲ್ಲಿ ಜಿಲ್ಲಾಡಳಿ ಹಾಗೂ ಇನ್ಫೋಸಿಸ್ ವತಿಯಿಂದ ನಡೆದ ಸುಸಜ್ಜಿತ 122 ಹಾಸಿಗೆಗಳ ಆಸ್ಪತ್ರೆಯ ಗುದ್ದಲಿಪೂಜಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ರು. ಇದೇ ವೇಳೆ ಮಾತನಾಡಿದ ಅವರು ಲೋಕಸಭಾ ಚುನಾವಣೆ ಹತ್ತಿರ ಬರ್ತಿದೆ. ಬಹಳ ದೊಡ್ಡ ದೊಡ್ಡ ವ್ಯಾಖ್ಯಾನಗಳಾಗುತ್ತಿವೆ. ನಮ್ಮ ಯೋಧರು, ಏರ್ ಫೋರ್ಸ್ ನವರೆಲ್ಲ ಪಾಕಿಸ್ತಾನಕ್ಕೆ ತಿರುಗೇಟು ನೀಡುತ್ತಿದ್ದಾರೆ ಅಂದ್ರು.

    ದೇಶ ರಕ್ಷಣೆ ಮಾಡಬೇಕಾದ್ದು ಎಲ್ಲ ಪಕ್ಷದ ರಾಜಕಾರಣಿಗಳ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡ್ತಿದೆ ಎಂದು ಅಂದುಕೊಂಡಿದ್ದೇನೆ. ಬಿಜೆಪಿ ಪಕ್ಷದವರು ಪ್ರತಿ ವಿಚಾರದಲ್ಲೂ ರಾಜಕೀಯ ಮಾಡ್ತಿದ್ದು ಎಲ್ಲ ನಾವೇ ಮಾಡಿದ್ದೇವೆ ಎಂದು ಹೇಳಿಕೊಳ್ತಿದ್ದಾರೆ. ಪಾಪ 60 ವರ್ಷಗಳಿಂದ ಯಾರು ಏನೂ ಮಾಡ್ಲಿಲ್ಲ, ಎಲ್ಲ ಅವರೇ ಮಾಡ್ತಿದ್ದಾರೆ ಎಂದು ತಿಳಿಸಿದ್ರು.

    ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಮಾತನಾಡಿ, ದೇಶದ ಭದ್ರತೆ ವಿಚಾರ ಬಂದಾಗ ಇಡೀ ದೇಶ ಒಂದು. ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ನಾವು ಬದ್ಧರಿದ್ದೇವೆ. ಪಾಕಿಸ್ತಾನದ ಹೆದರಿಕೆ ಬೆದರಿಕೆಗೆ ಬಗ್ಗುವಂತಹ ಪ್ರಶ್ನೆಯಿಲ್ಲ. ನಮ್ಮಲ್ಲೂ ಕೂಡಾ ಎಲ್ಲಾ ರೀತಿಯ ತಯಾರಿ ಇದೆ. ಅದು ಹಿಂದಿನಿಂದಲೂ ಇಂದಿರಾಗಾಂಧಿ, ನೆಹರೂ, ವಾಜಪೇಯಿರವರ ಕಾಲದಲ್ಲೂ ಯುದ್ಧ ಮಾಡಿದ್ದು ಗೆದ್ದಿದ್ದೇವೆ. ಹಾಗಾಗಿ ಯುದ್ಧವನ್ನ ನಾವು ಬಯಸುವುದಿಲ್ಲ. ಅವರು ಮಾಡಬೇಕು ಅಂದ್ರೆ ನಾವು ಸುಮ್ಮನೆ ಕೂರಲಾಗುವುದಿಲ್ಲ ಎಂದು ತಿಳಿಸಿದ್ರು.

    ದಕ್ಷಿಣ ಭಾರತದವರೆಗೆ ಪಾಕಿಗಳು ಬರುವುದು ಕಷ್ಟ. ಏನಿದ್ರೂ ಪಂಜಾಬ್ ವರೆಗೆ 500 ಕಿ.ಮೀ, ಇಲ್ಲವೇ 300 ಕಿಮೀ ಹತ್ತಿರದವರೆಗೆ ಶಕ್ತಿಯಿರಬೇಕೆ ಹೊರತು ದೆಹಲಿ ದಾಟುವುದು ಕಷ್ಟ. ಅಷ್ಟರಲ್ಲಿ ಪಾಕಿಸ್ತಾನವೇ ಇರುವುದು ಕಷ್ಟವಾಗುತ್ತದೆ ಎಂದು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾರ್ಕ್‌ನಲ್ಲಿ ಬಾಲಕನಿಗೆ ಕರೆಂಟ್ ಶಾಕ್ – ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

    ಪಾರ್ಕ್‌ನಲ್ಲಿ ಬಾಲಕನಿಗೆ ಕರೆಂಟ್ ಶಾಕ್ – ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

    – 10 ಲಕ್ಷ ಅಲ್ಲ 1 ಕೋಟಿ ಕೊಟ್ಟರೂ ಮಗ ವಾಪಸ್ ಬರಲ್ಲ

    ಬೆಂಗಳೂರು: ನಗರದ ಬಾಣಸವಾಡಿ ಪಾರ್ಕ್ ನಲ್ಲಿ ಕರೆಂಟ್ ಶಾಕ್ ಗೆ ಬಲಿಯಾದ ಬಾಲಕನ ಕುಟುಂಬಕ್ಕೆ ಬಿಬಿಎಂಪಿ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ.

    ಘಟನಾ ಸ್ಥಳಕ್ಕೆ ಸಚಿವ ಕೆ.ಜೆ ಜಾರ್ಜ್ ಹಾಗೂ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.

    ಬಾಲಕನನ್ನು ಕಳೆದುಕೊಂಡಿರುವ ದುಃಖ ನಮಗೂ ಇದೆ. ಹೀಗಾಗಿ ಕುಟುಂಬದವರಿಗೆ ಈಗಾಗಲೇ ಸಾಂತ್ವನವನ್ನು ಹೇಳಿದ್ದೇವೆ. ಸ್ಥಳಕ್ಕೆ ತೆರಳಿ ಈಗಾಗಲೇ ಪರಿಶೀಲನೆ ನಡೆಸಿದ್ದೇವೆ. ಹೀಗಾಗಿ ಎಲ್ಲಾ ವಿಚಾರಗಳಲ್ಲಿಯೂ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ರು.

    ಬಿಬಿಎಂಪಿ ವತಿಯಿಂದ ಈಗಾಗಲೇ ಮೇಯರ್ ಅವರು 10 ಲಕ್ಷ ರೂ. ಪರಿಹಾರ ಕೊಡುವುದಾಗಿ ಘೋಷಿಸಿದ್ದಾರೆ. ಆದ್ರೆ ಇಲ್ಲಿ ಪರಿಹಾರ ಮುಖ್ಯವಲ್ಲ. ಇಂತಹ ಘಟನೆ ನಡೆಯಬಾರದಿತ್ತು, ನಡೆದು ಹೋಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಪಾರ್ಕ್ ಒಳಗಡೆ ಯಾರಿಗೂ ಪ್ರವೇಶ ನೀಡದಂತೆ ಸೂಚನೆ ನೀಡಲಾಗಿದೆ. ಪಾರ್ಕ್ ಗಳ ಅಭಿವೃದ್ಧಿಗೆ ಈಗಾಗಲೇ ಬಜೆಟ್ ನಲ್ಲಿ ಇಂತಿಷ್ಟು ಹಣವೆಂದು ಕಾಯ್ದಿರಿಸಿದ್ದೇವೆ ಎಂದು ಮೇಯರ್ ಹೇಳಿದ್ದಾರೆ.

    ಮೃತನ ತಾಯಿ ಕಣ್ಣೀರು:
    ಭಾನುವಾರ ರಜಾ ದಿನವಾದ್ದರಿಂದ ಮಗ ಪಾರ್ಕ್‍ಗೆ ಆಟವಾಡಲು ಹೋಗಿದ್ದನು. ಆದ್ರೆ ಮತ್ತೆ ಮರಳಿ ಮನೆಗೆ ಬರಲೇ ಇಲ್ಲ. ಕರೆಂಟ್ ಶಾಕ್ ಗೆ ಬಲಿಯಾಗಿದ್ದಾನೆ. ಕಾಲಿಗೆ ಕರೆಂಟ್ ಶಾಕ್ ಹೊಡೆದಿದೆ. ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅವನು ಬದುಕುಳಿಯಲಿಲ್ಲ ಎಂದು ಮೃತ ಉದಯ್ ಕುಮಾರ್ ತಾಯಿ ಕಣ್ಣೀರು ಹಾಕಿದ್ದಾರೆ.

    ಬಿಬಿಎಂಪಿಯವರು 10 ಲಕ್ಷ ಕೊಡುತ್ತೇವೆ ಅಂದಿದ್ದಾರೆ. ಆದ್ರೆ 10 ಲಕ್ಷ ಅಲ್ಲ 1 ಕೋಟಿ ರೂ. ಕೊಟ್ಟರೂ ನನ್ನ ಮಗುವನ್ನು ವಾಪಸ್ ತಂದು ಕೊಡಲ್ವಲ್ಲ. ಎಷ್ಟು ಅಜಾಗರೂಕತೆ ಇದೆ. ಆ ಪಾರ್ಕ್ ನಲ್ಲಿ ಮಕ್ಕಳು, ದೊಡ್ಡವರು ಎಲ್ಲರೂ ಓಡಾಡುತ್ತಾರೆ. ಎಷ್ಟು ಜನರ ಪ್ರಾಣಕ್ಕೆ ಅಪಾಯವಿದೆ. ಈವಾಗ ಹಲವರ ಪ್ರಾಣ ಉಳಿಸಿ ನನ್ನ ಮಗ ಪ್ರಾಣ ಕಳೆದುಕೊಂಡಿದ್ದಾನೆ. ಒಟ್ಟಿನಲ್ಲಿ ನನ್ನ ಮಗನಂತೆ ಇನ್ಯಾರಿಗೂ ಆಗದಂತೆ ಕ್ರಮ ಕೈಗೊಳ್ಳಲಿ ಎಂದು ಅವರು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv