ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಕೊಡುಗೆ ಏನು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಜಿಲ್ಲೆಯ ಜನರು ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಸಣ್ಣ ಯೋಜನೆಯನ್ನೂ ಜಿಲ್ಲೆಗೆ ತರಲು ನಳಿನ್ ಕುಮಾರ್ ಗೆ ಸಾಧ್ಯವಾಗಿಲ್ಲ. ಮೋದಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ರು.
ಹಿಂದೂ ಸಂಸ್ಕೃತಿ ಅರಿತುಕೊಂಡಿರುವ ಮಿಥುನ್ ರೈಗೆ ಈ ಬಾರಿ ಜಿಲ್ಲೆಯ ಜನ ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದರು. ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ನಾವು ವ್ಯಕ್ತಿ ಪೂಜೆ ಮಾಡಲ್ಲ, ಪಕ್ಷ ಪೂಜೆ ಮಾಡುತ್ತೇವೆ ಎಂದು ಬಿಜೆಪಿಯವರ ಮೋದಿ ಘೋಷಣೆಗೆ ಟಾಂಗ್ ನೀಡಿದ್ರು.
ಮೈತ್ರಿ ಪಕ್ಷಗಳ ಜಂಟಿ ಸ್ಪರ್ಧೆಯಿಂದಾಗಿ ಲಾಭ ಜಾಸ್ತಿ. ಕಾರ್ಯಕರ್ತರ ಬಹುದೊಡ್ಡ ಲಾಭ ನಮಗಿದೆ ಎಂದು ಸಮರ್ಥಿಸಿಕೊಂಡರು. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ತನ್ನ ನಿಲುವಿಗೆ ಬದ್ಧನಿದ್ದು ರಾಜಕೀಯದಲ್ಲಿ ಧರ್ಮ ಇರಬಾರದು ಎಂದು ತಿಳಿಸಿದ್ರು.
ವಿಜಯಪುರ: ನನ್ನನ್ನು ಅರೆಹುಚ್ಚ ಎನ್ನುತ್ತಿರುವ ಗೃಹಸಚಿವ ಎಂ.ಬಿ.ಪಾಟೀಲ್ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಕೂಡಲೇ ಅವರು ಹುಚ್ಚಾಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ತಿರುಗೇಟು ನೀಡಿದ್ದಾರೆ.
ಜಿಲ್ಲೆಯ ಮುದ್ದೇಬಿಹಾಳದಲ್ಲಿ ಮಾತನಾಡಿದ ಶಾಸಕರು, ಎಂ.ಬಿ.ಪಾಟೀಲ್ ಮಾನಸಿಕ ಅಸ್ವಸ್ಥರಾಗಿದ್ದಾರೆ. ಹೀಗಾಗಿ ರಾಜ್ಯದ ಗೃಹಮಂತ್ರಿ ಹುದ್ದೆ ನಿರ್ವಹಿಸುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಚಿಕಿತ್ಸೆ ಪಡೆಯುವವರೆಗೂ ಅವರು ಗೃಹಸಚಿವರಾಗಿ ಕಾರ್ಯನಿರ್ವಹಿಸಬಾರದು ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದಿ: ಡಿಕೆಶಿ ಜೊತೆಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಎಂ.ಬಿ.ಪಾಟೀಲ್
ನನ್ನ ಯೋಗ್ಯತೆ ಏನು ಅಂತ ಜಿಲ್ಲೆಯ ಜನತೆಗೆ ಗೊತ್ತಿದೆ. ಎಂ.ಬಿ.ಪಾಟೀಲ್ ಹೇಳಿಕೆಯೇ ಅವರ ಯೋಗ್ಯತೆ ಏನು ಎನ್ನುವುದನ್ನು ತೋರಿಸಿಕೊಡುತ್ತದೆ. ನಾನು 3 ಬಾರಿ ಸ್ವಸಾಮರ್ಥ್ಯದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನೀವು ಅಪ್ಪ ನೆಟ್ಟ ರಾಜಕೀಯ ಆಲದ ಮರದ ಆಶ್ರಯದಲ್ಲಿ ಶಾಸಕರಾಗಿ, ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೀರಿ. ಸ್ವಂತ ಶಕ್ತಿಯ ಮೇಲೆ ನೀವು ಆಯ್ಕೆಯಾಗಿಲ್ಲ ಎಂದು ದೂರಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀವು ಗೆದ್ದಿರುವ ರೀತಿಯೇ ಸಂಶಯಾಸ್ಪದ. ಇದಕ್ಕೆ ನಿಮ್ಮ ಎದುರು ಬಬಲೇಶ್ವರ ಮತಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಅವರೇ ಸಾಕ್ಷಿ. ನಿಮ್ಮ ಕ್ಷೇತ್ರದಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಸಿಕ್ಕಿದ್ದು ಉದಾಹರಣೆ. ನಿಮ್ಮ ಯೋಗ್ಯತೆ ಏನು ಅನ್ನೋದು, ವಿಜಯಪುರ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದು ಹೇಳಿದರು.
ವಿಜಯಪುರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ನಿಮ್ಮ ಹಿಂಬಾಲಕರು ಗಲಾಟೆ ನಡೆಸಿದರು. ಗಲಾಟೆ ಮಾಡಿದವರು ನನ್ನ ಹಿಂಬಾಲಕರು ಅಲ್ಲ ಅಂತ ಹೇಳಲಿಕ್ಕೆ ಆಗಲ್ಲ ಎಂದು ನೀವು ಹೇಳಿಕೆ ನೀಡಿದ್ದೀರಿ. ಹೀಗಾಗಿ ಅವರು ನಿಮ್ಮ ಹಿಂಬಾಲಕರು ಎನ್ನುವುದನ್ನು ಒಪ್ಪಿಕೊಂಡಿದ್ದೀರಿ. ರಾಜ್ಯದ ಗೃಹಸಚಿವರಾಗಿ ಹಿಂಬಾಲಕರನ್ನು ಛೂ ಬಿಟ್ಟು ವಿಪಕ್ಷದ ಶಾಸಕರೊಬ್ಬರ ವಿರುದ್ಧ ಗಲಾಟೆ ನಡೆವುದು ಸರಿಯೇ ಎಂದು ಶಾಸಕರು, ಎಂ.ಬಿ.ಪಾಟೀಲ್ ಅವರಿಗೆ ಪ್ರಶ್ನಿಸಿದ್ದಾರೆ.
ವಿಜಯಪುರ: ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದೇನೆ ಅಷ್ಟೇ. ಸರ್ಕಾರ ಹಾಗೂ ಇಲಾಖೆ ವಿಷಯದಲ್ಲಿ ನಮ್ಮ ಮಧ್ಯೆ ಭಿನ್ನಾಭಿಪ್ರಾಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟ್ ಗೆಲ್ಲುವುದರ ಕಡೆ ಗಮನಹರಿಸಿದ್ದೇವೆ. ಚುನಾವಣೆ ಮುಗಿದ ಬಳಿಕ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಸುದ್ದಿಗೋಷ್ಠಿ ಮಾಡಿ ಹೆಚಿನ ಮಾಹಿತಿ ಬಹಿರಂಗ ಮಾಡುತ್ತೇನೆ ಎಂದರು. ಇದನ್ನು ಓದಿ: ಲಿಂಗಾಯತ ವಿಚಾರದಲ್ಲಿ ಪಕ್ಷದ ಪರವಾಗಿ ಕ್ಷಮೆ ಕೇಳಲು ಡಿಕೆಶಿ ಯಾರು: ಎಂ.ಬಿ.ಪಾಟೀಲ್ ಪ್ರಶ್ನೆ
ಇದಕ್ಕೂ ಮುನ್ನ ಮಾತನಾಡಿದ ಸಚಿವರು, ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಮೇಲೆ ನನ್ನ ಬೆಂಬಲಿಗರು ಹಲ್ಲೆಗೆ ಯತ್ನಿಸಿದ್ದರೆ ವಿಷಾದಿಸುತ್ತೇನೆ. ಎಲುಬು ಇಲ್ಲದ ನಾಲಿಗೆ ಎಂದು ಬಾಯಿಗೆ ಬಂದಿದ್ದನ್ನು ಶಾಸಕರು ಮಾತನಾಡಬಾರದು. ಚಿಲ್ಲರೆ ಮಾತುಗಳನ್ನು ಆಡಬಾರದು. ಹಾಗೇ ಮಾತನಾಡಿದರೆ ಜನರು ನಮ್ಮ ಹಿಡಿತದಲ್ಲಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ವಿಜಯಪುರ: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ವಿಚಾರವಾಗಿ ಮಾತನಾಡಿದ್ದ ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಗೃಹ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಸಚಿವರು, ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ಮಾತನಾಡಲು ಡಿ.ಕೆ.ಶಿವಕುಮಾರ್ ಅವರಿಗೆ ಏನು ಅಧಿಕಾರವಿದೆ? ಕ್ಷಮೆ ಕೇಳಲು ಅವರು ಯಾರು? ಅವರಿಗೂ ಲಿಂಗಾಯತ ಧರ್ಮಕ್ಕೂ ಏನು ಸಂಬಂಧ? ಅವರೇನು ಕೆಪಿಸಿಸಿ ಅಧ್ಯಕ್ಷರೇ? ಡಿ.ಕೆ.ಶಿವಕುಮಾರ್ ಮೊದಲು ತಮ್ಮ ಸಮುದಾಯದಲ್ಲಿರುವ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲಿ ಎಂದು ಗುಡುಗಿದರು.
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವನ್ನು ನಾನು ಚುನಾವಣೆಯಲ್ಲಿ ಬಳಸಿಕೊಂಡಿಲ್ಲ. 2018ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿಯೂ ಈ ಬಗ್ಗೆ ಹೇಳಿರಲಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರು ಯಾಕೆ ಈ ಬಗ್ಗೆ ಪದೇ ಪದೇ ಪ್ರಸ್ತಾಪ ಮಾಡುತ್ತಿದ್ದಾರೆ? ಈ ವಿಚಾರವಾಗಿ ಈಗ ಮಾತನಾಡಿ ಪಕ್ಷಕ್ಕೆ ಮುಜುಗುರ ಉಂಟು ಮಾಡುವುದಿಲ್ಲ. ಲೋಕಸಭಾ ಚುನಾವಣೆಯ ಬಳಿಕ ಸುದ್ದಿಗೋಷ್ಠಿ ಕರೆದು ಸರಿಯಾದ ಉತ್ತರ ನೀಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ವಿರುದ್ಧ ಪಕ್ಷದ ನಾಯಕರಿಗೆ, ಹೈಕಮಾಂಡಿಗೆ ದೂರು ನೀಡುತ್ತೇನೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಈ ಬಗ್ಗೆ ಮಾಹಿತಿ ನೀಡುತ್ತೇನೆ. ಸಚಿವರು ಈ ಹಿಂದೆಯೂ ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ಪ್ರತ್ಯೇಕ ಲಿಂಗಾಯದ ಧರ್ಮದ ವಿಚಾರವಾಗಿ ಕ್ಷಮೆ ಕೇಳಿದ್ದರು. ಇದನ್ನು ಬಳ್ಳಾರಿಯಲ್ಲಿ ಪುನರುಚ್ಛರಿಸಿದ್ದಾರೆ. ಹೀಗೆ ಹೇಳಿಕೆ ನೀಡುವುದ ಹಿಂದೆ ಹಿಡನ್ ಅಜೆಂಡಾ ಇದೆ. ಅಷ್ಟೇ ಅಲ್ಲದೆ ಮೂರು ಬಲವಾದ ಕಾರಣಗಳಿವೆ. ಅದನ್ನು ಚುನಾವಣೆ ಬಳಿಕ ಬಹಿರಂಗ ಪಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ಹೇಳಿದ್ದೇನು?:
ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯಲ್ಲಿ ಸೋಮವಾರ ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿಯವರು ಒಂದು ಧರ್ಮದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಯಾರೋ ಏನೋ ಹೇಳಿದರೂ ಅಂತ ನನ್ನ ಸೇರಿದಂತೆ ನಮ್ಮ ಪಕ್ಷದ ಕೆಲವರು ವೀರಶೈವರ ವಿಚಾರಕ್ಕೆ ಕೈ ಹಾಕಿದ್ವಿ. ಈ ಮೂಲಕ ಪ್ರತ್ಯೇಕ ಧರ್ಮ ಮಾಡಲು ತೀರ್ಮಾನ ಮಾಡಿದ್ವಿ. ಅದಕ್ಕೆ ಜನ ನಮ್ಮ ಕಪಾಳಕ್ಕೆ ಹೊಡೆದರು. ಹೀಗಾಗಿ ನಿಮಗೂ ಹಾಗೂ ರಾಜ್ಯದ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಕ್ಷಮೆಯಾಚಿಸಿದ್ದರು.
ಇನ್ನೆಂದೂ ಕಾಂಗ್ರೆಸ್ ಜಾತಿ, ಧರ್ಮದ ವಿಚಾರದಲ್ಲಿ ಕೈಹಾಕುವುದಿಲ್ಲ. ನಿಮ್ಮ ಕ್ಷಮೆ ಇರಲಿ. ರಾಜಕೀಯದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು ಎಂಬ ನಿರ್ಧಾರವನ್ನು ಕೈಗೊಂಡಿದ್ದೇನೆ. ಹೀಗಾಗಿ ಈ ಹಿಂದೆ ಆಗಿರುವುದನ್ನು ಮರೆತು ಎಲ್ಲರೂ ಒಟ್ಟಾಗಿ ಹೋಗಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದರು.
ಹಾಸನ: ಸಚಿವ ಎಚ್.ಡಿ ರೇವಣ್ಣನವರು ಸೂಟ್‍ಕೇಸ್ ಇಟ್ಟುಕೊಂಡು ಎಲ್ಲ ಕಾರ್ಯಕರ್ತರ ಮನೆ ಮನೆಗೆ ಸುತ್ತುತ್ತಿದ್ದಾರೆ. ಆದ್ರೆ ನಮ್ಮ ಮನೆಗೆ ಬರೋದು ಬೇಡ. ನಾನು ಇದೇ 19ರಂದು ರೇವಣ್ಣನವರ ಮನೆಗೆ ಹೋಗುತ್ತೇನೆ ಎಂದು ಮಾಜಿ ಶಾಸಕ ಹೆಚ್. ಎಂ ವಿಶ್ವನಾಥ್ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ದಲಿತರಲ್ಲಿ ಮಾತ್ರ ಅಲ್ಲ ಒಕ್ಕಲಿಗರಲ್ಲಿಯೂ ಬಹಳ ದೊಡ್ಡ ಕ್ರಾಂತಿ ಇದೆ. ಒಕ್ಕಲಿಗರು ನಿಮಗೆ ಮತ ಹಾಕಲ್ಲ. ಒಕ್ಕಲಿಗರು ಜಾತಿಯ ಆಧಾರದಲ್ಲಿ ವೋಟು ಹಾಕೋದಾದ್ರೆ ಅಲ್ಲಿ ಜಾತಿಗೂ ಬೆಲೆ ಇಲ್ಲ. ಒಕ್ಕಲಿಗರಲ್ಲಿ ಹಲವು ಒಳ ಜಾತಿಗಳಿವೆ. ಬಿಜೆಪಿ ಅಭ್ಯರ್ಥಿ ಎ ಮಂಜು ಗೆಲುವು ನಿಶ್ಚಿತ ಎಂದು ಹೇಳಿದ್ರು.
ನೀವು ಕೈಯಲ್ಲಿ ನಿಂಬೆಹಣ್ಣು ಹಿಡಿಯುತ್ತೀರಿ ಎಂದು ಏನು ಬೇಕಾದರೂ ಮಾತನಾಡುತ್ತೀರಿ. ಜಾತಿ ಬಗ್ಗೆ, ಪತಿ ಸಾವನ್ನಪ್ಪಿದ ಸುಮಲತಾ ಬಗ್ಗೆ ಮಾತಾಡ್ತೀರಿ. ನೀವು ಹೇಳಿದ್ದೆ ಮಂತ್ರ-ತಂತ್ರ ಎಂದು ಗರಂ ಆದ ಮಾಜಿ ಶಾಸಕರು, ಮೂರನೇ ತಲೆಮಾರಿನ ಪ್ರಜ್ವಲ್ ರನ್ನು ಸೋಲಿಸಿ ಪ್ರಜಾಪ್ರಭುತ್ವ ಉಳಿಸಿ ಎಂದು ಕರೆ ನೀಡಿದರು.
ಮೈಸೂರು: ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾರಾ ಮಹೇಶ್ ಅವರ ಕಾರನ್ನು ತಡೆದಿದ್ದ ಮುಖ್ಯ ಪೇದೆಯನ್ನು ಅಮಾನತುಗೊಳಿಸಲಾಗಿದೆ.
ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಮುಖ್ಯ ಪೇದೆ ವೆಂಕಟೇಶ್ ಅಮಾನತುಗೊಂಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ವಿಜಯ್‍ಶಂಕರ್ ನಾಮಪತ್ರ ಸಲ್ಲಿಕೆ ವೇಳೆ ಮೂರು ಕಾರುಗಳಿಗೆ ಅವಕಾಶವಿದ್ದರೂ, ಸಚಿವರ ಕಾರಿಗೆ ಮುಖ್ಯಪೇದೆ ತಡೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿಯ ದೇವರಾಜು ಅರಸು ಜಂಕ್ಷನ್ ಬಳಿಯೇ ಕಾರು ತಡೆದಿದ್ದ ವೆಂಕಟೇಶ್ ಅವರನ್ನು ಇದೀಗ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
ಸಾರಾಮಹೇಶ್ ಸ್ಪಷ್ಟನೆ:
ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ಮುಖ್ಯ ಪೇದೆಯೊಬ್ಬರು ಅನುಚಿತವಾಗಿ ವರ್ತಿಸಿದ್ದು ನಿಜ. ನಾಮಪತ್ರ ಸಲ್ಲಿಕೆ ವೇಳೆ ಜಿಲ್ಲಾಧಿಕಾರಿ ಕಚೇರಿ ಸುತ್ತ 100 ಮೀಟರ್ ನಿಷೇಧಾಜ್ಞೆ ಇತ್ತು. ಆದರೆ ಅವರು ನನ್ನ ಕಾರನ್ನು ಅರ್ಧ ಕಿಲೋ ಮೀಟರ್ ಹಿಂದೆ ತಡೆದಿದ್ದರು. ಮುಖ್ಯ ಪೇದೆಗೆ ಕಾನೂನಿನ ಅರಿವಿರಲಿಲ್ಲ. ಈ ಬಗ್ಗೆ ನನ್ನ ಜೊತೆಯಿದ್ದವರು ತಿಳಿಸಿದರೂ ಅದನ್ನು ಒಪ್ಪಲು ಸಿದ್ಧರಿರಲಿಲ್ಲ. ಇದಾದ ನಂತರ ಹಿರಿಯ ಅಧಿಕಾರಿಗಳು ಬಂದು ಅವರಿಗೆ ತಿಳಿ ಹೇಳಿ ಕಾರನ್ನು ಬಿಟ್ಟರು. ಈ ಬಗ್ಗೆ ಪರಿಶೀಲನೆ ನಡೆಸಿ ಕರ್ತವ್ಯ ಲೋಪವೆಸಗಿದ ಮುಖ್ಯಪೇದೆಯನ್ನು ಅಮಾನತುಗೊಳಿಸಿರಬಹುದು. ಈ ಬಗ್ಗೆ ನಾನು ಯಾವುದೇ ದೂರು ನೀಡಿಲ್ಲ ಎಂದು ಸಾ.ರಾ ಮಹೇಶ್ ಸ್ಪಷ್ಟನೆ ನೀಡಿದ್ದಾರೆ.
ರಾಯಚೂರು: ನಟರಾದ ಯಶ್ ಮತ್ತು ದರ್ಶನ್ ದುಡಿಯುವ ಬಾಡಿಗೆ ಜೋಡಿ ಎತ್ತುಗಳು. ಮಂಡ್ಯ ಜನರ ಕಷ್ಟ-ಸುಖಗಳಿಗೆ ಸಿನಿಮಾದವರು ಭಾಗಿಯಾಗಿಲ್ಲ ಎಂದು ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.
ನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸಭೆಗೂ ಮುನ್ನ ಮಾತನಾಡಿದ ನಾಡಗೌಡ, ಮಂಡ್ಯದ ಕನಕನಮರಡಿಯಲ್ಲಿ ಬಸ್ ಕಾಲುವೆಗೆ ಬಿದ್ದಾಗ ಸಿನಿಮಾದವರು ಎಲ್ಲಿ ಹೋಗಿದ್ದರು. ಇಂದು ಚುನಾವಣೆಗೆ ಬಂದಿದ್ದಾರೆ ಅಂದ್ರೆ ಅವರು ಬಾಡಿಗೆ ಎತ್ತುಗಳು ಎಂದು ಗರಂ ಆದ್ರು.
ಇದು ತಮಿಳುನಾಡು ಆಂಧ್ರಪ್ರದೇಶ ಅಲ್ಲ. ಇಲ್ಲಿ ಸಿನಿಮಾ ಹೆಸರಲ್ಲಿ ಚುನಾವಣೆ ಗೆಲ್ಲೋಕೆ ಆಗಲ್ಲ. ಸಿನಿಮಾ ನಟರನ್ನು ನೋಡಲು ಜನ ಬರುತ್ತಾರೆ. ಆದ್ರೆ ಅವರೆಲ್ಲ ವೋಟು ಹಾಕಲ್ಲ. ಸುಮಲತಾ ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋದಾಗ ಗೊತ್ತಾಗುತ್ತದೆ. ಸಿನಿಮಾ ನೋಡಲು ಬಂದವರೆಲ್ಲ ವೋಟು ಹಾಕಲ್ಲ. ಮಾಧ್ಯಮದವರು ಬಿಂಬಿಸಿದಂತೆ ಮಂಡ್ಯ ಚುನಾವಣೆ ಯಾವುದೇ ರೀತಿಯ ಟಫ್ ಇಲ್ಲ ಎಂದು ಹೇಳಿದ್ರು.
ಬಿಜೆಪಿಯನ್ನ ದೂರ ಇಡುವ ಸಲುವಾಗಿ ಮೈತ್ರಿ ಸರ್ಕಾರ ನಡೆಸುತ್ತಿದ್ದೇವೆ. ಹೀಗಾಗಿ ಮೈತ್ರಿ ಅಭ್ಯರ್ಥಿ ಬಿವಿ ನಾಯಕ್ ಗೆಲುವು ಖಚಿತ. ಜೆಡಿಎಸ್‍ನ ಸಂಪೂರ್ಣ ಬೆಂಬಲ ಕಾಂಗ್ರೆಸ್ ಗೆ ಇದೆ. ಬಿವಿ ನಾಯಕ್ ಗೆಲುವಿಗೆ ನಮ್ಮ ಬೆಂಬಲ ಇದೆ. ಕಾಂಗ್ರೆಸ್, ಜೆಡಿಎಸ್ ಮತ ನಮಗೆ ಬರುತ್ತವೆ ಎಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ. ಈ ಹಿಂದೆ ಜಾತ್ಯಾತೀತ ಮತಗಳು ಹಂಚಿ ಹೋಗುತ್ತಿದ್ದವು. ಆದ್ರೆ ಈಗ ಅದಕ್ಕೆ ಅವಕಾಶ ಇಲ್ಲ. ಮುಂಚೆ ಕಾಂಗ್ರೆಸ್, ಜೆಡಿಎಸ್ ಬೇರೆ ಬೇರೆಯಾಗಿ ಸ್ಪರ್ಧೆ ಮಾಡುತ್ತಿದ್ದವು. ಹೀಗಾಗಿ ಮತಗಳು ವಿಭಜನೆ ಆಗುತ್ತಿದ್ದವು. ಈಗ ಹಾಗಲ್ಲ, ನಮ್ಮ ಪಕ್ಷದ (ಜೆಡಿಎಸ್) ಕೆಲ ಮುಖಂಡರಲ್ಲಿ ಅಸಮಾಧಾನ ಇದೆ. ಅದೆಲ್ಲ ಸರಿ ಹೋಗುತ್ತದೆ ಎಂದು ಹೇಳಿದ್ರು.
ಇದೇ ವೇಳೆ ಸಂಸದ ಬಿ.ವಿ.ನಾಯಕ್ ಮಾತನಾಡಿ, ನಾನು ಪಾಕಿಸ್ತಾನ ಪರ ಯಾವುದೇ ಹೇಳಿಕೆ ನೀಡಿಲ್ಲ. ಭಾರತಕ್ಕೆ ಪಾಕಿಸ್ತಾನ ಯಾವುದಕ್ಕೂ ಸಮವಲ್ಲ. ಸಣ್ಣ ದೇಶದ ಮೇಲೆ ಮೋದಿ ದಾಳಿ ಮಾಡಿದ್ದಾರೆ ಎಂದು ಹೇಳಿದ್ದೇನೆ ಅದನ್ನ ತಿರುಚಲಾಗಿದೆ ಅಂತ ಬಿ.ವಿ.ನಾಯಕ್ ಹೇಳಿದರು.
ಬೆಂಗಳೂರು: ಓಲಾ ಕ್ಯಾಬ್ ಸಂಚಾರ ನಿಷೇಧವನ್ನು ಸರ್ಕಾರ ವಾಪಸ್ ಪಡೆದುಕೊಂಡಿದ್ದು, ಎಂದಿನಂತೆ ನಗರದಲ್ಲಿ ಓಲಾ ಕ್ಯಾಬ್ ಸಂಚರಿಸಲಿದೆ.
ಆರು ತಿಂಗಳಿಗೆ ಓಲಾ ಸಂಚಾರವನ್ನು ನಿಷೇಧಿಸಿದ ಸಾರಿಗೆ ಇಲಾಖೆ ಆದೇಶವನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. ನಿಷೇಧ ವಾಪಸ್ ಪಡೆದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ ತಿಳಿಸಿದ್ದಾರೆ.
. @Olacabs will run their business as usual from today. However there is an urgent need for policies to catch-up with new technologies & also industries too should work closer with Govt to help evolve policies for innovations.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) March 24, 2019
ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ಅಗ್ರಿಗೇಟರ್ ನಿಯಮಗಳನ್ನು ಉಲ್ಲಂಘಿಸಿ ಬೈಕ್ ಟ್ಯಾಕ್ಸಿಗಳನ್ನು ಕಾರ್ಯಾಚರಣೆಗೊಳಿಸುತ್ತಿದ್ದ ಹಿನ್ನೆಲೆಯಲ್ಲಿ ಓಲಾ ಕಂಪನಿಗೆ ನೀಡಿದ್ದ ಪರವಾನಿಗೆಯನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಡೈರಿ ಸಿಕ್ಕಿದ್ದೇ ಸಿಕ್ಕಿದ್ದು, ಒಳಗಿನ ಒಂದೊಂದು ಅಂಶಗಳು ಬಯಲಾಗ್ತಾನೇ ಇವೆ. ಪವರ್ ಫುಲ್ ಮಿನಿಸ್ಟರ್ ಎಂದೇ ಕರೆಸಿಕೊಳ್ಳುವ ಡಿಕೆಶಿ ಅದೊಂದು ಡೈರಿ ಇಟ್ಕೊಂಡು ತಾನು ಬಚಾವಾಗೋಕೆ ಪ್ರಯತ್ನ ಪಟ್ಟಿದ್ದಾರೆ. ನೀವು ಇದನ್ನು ತನಿಖೆ ಮಾಡಲೇಬೇಕು ಇಲ್ಲ ನನ್ನ ತನಿಖೆಯಲ್ಲಿ ರಿಯಾಯಿತಿ ಕೊಡಬೇಕು ಎಂದು ಚೌಕಾಶಿಗಿಳಿದಿದ್ದರು ಎಂಬ ಮಾಹಿತಿ ಲಭಿಸಿದೆ.
ಹೌದು. ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿರೋ ಬಿಎಸ್‍ವೈ ಕಪ್ಪ ಕಾಣಿಕೆಯ ಡೈರಿಯದ್ದೇ ಒಂದು ಕಥೆಯಾದ್ರೆ. ಇದಕ್ಕೆ ಸಂಬಂಧಿಸಿದ ಮತ್ತೊಂದು ಸೈಡ್‍ಲೈನ್ ಸ್ಟೋರಿ ಕುತೂಹಲ ಹೆಚ್ಚಿಸಿದೆ. ಡಿಕೆ ಶಿವಕುಮಾರ್ ಮನೆಯ ಮೇಲೆ ದಾಳಿ ನಡೆದಾಗ ಯಾರು ಕೂಡ ಆ ಮನೆಯಲ್ಲಿ ಈ ಡೈರಿ ಸಿಕ್ಕಿದೆ ಎಂದು ಊಹೆಯನ್ನು ಮಾಡೋದಕ್ಕೆ ಆಗಿರಲಿಲ್ಲ. ಅದು ಪ್ರತಿಪಕ್ಷ ನಾಯಕರಿಗೆ ಸಂಬಂಧಿಸಿದ್ದ ಡೈರಿ ಡಿಕೆ ಶಿವಕುಮಾರ್ ಮನೆಯಲ್ಲಿ ಪತ್ತೆಯಾಗಿತ್ತು. ಆದ್ರೆ, ಈ ಡೈರಿಯನ್ನು ವಶ ಪಡೆಯೋದಕ್ಕೆ ಆಗಲಿ, ತನಿಖೆ ಮಾಡೋದಕ್ಕೆ ಆಗಲಿ ಐಟಿ ಇಲಾಖೆಗೆ ಇಷ್ಟ ಇರ್ಲಿಲ್ಲ. ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಡಿಕೆ ಶಿವಕುಮಾರ್ ಅದನ್ನೂ ಸೀಜ್ ಮಾಡಿ ತನಿಖೆ ಮಾಡಬೇಕು ಎಂದು ಹಠ ಹಿಡಿದಿದ್ದರು ಎನ್ನಲಾಗಿದೆ.
ಯಾವಾಗ ಬಿಎಸ್‍ವೈ ಹಸ್ತಾಕ್ಷರ ಇದೆ ಎಂದು ಹೇಳಲಾದ ಡೈರಿಯನ್ನು ತನಿಖೆ ಮಾಡೋದಕ್ಕೆ ಐಟಿ ಇಲಾಖೆ ಒಲವು ತೋರಿಸುತ್ತಾ ಇಲ್ಲವೆಂದು ಗೊತ್ತಾಯ್ತೊ, ಆಗ ಡಿಕೆ ಶಿವಕುಮಾರ್ ಅದನ್ನು ತನಿಖೆ ಮಾಡೋದಿಲ್ಲ ಅನ್ನೋದಾದ್ರೆ ತಮಗೂ ತನಿಖೆಯಲ್ಲಿ ರಿಯಾಯಿತಿ ಕೊಡಿ ಎಂದು ಚೌಕಾಸಿಗೆ ಇಳಿದಿದ್ದರು. ಇದಕ್ಕೆ ಸೊಪ್ಪು ಹಾಕದ ಇಲಾಖೆ ತಮ್ಮ ಕೆಲಸವನ್ನು ತಮ್ಮ ಪಾಡಿಗೆ ನೀಟಾಗಿ ಮಾಡಿತ್ತು ಎಂದು ಐಟಿ ಡಿಜಿ ಬಾಲಕೃಷ್ಣನ್ ಹೇಳಿದ್ದಾರೆ.
ಒಟ್ಟಿನಲ್ಲಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಬೇಕು ಅಂದುಕೊಂಡಿದ್ದ ಡಿಕೆಶಿ ಚೌಕಾಸಿ ವ್ಯವಹಾರ ವರ್ಕೌಟ್ ಆಗಿಲ್ಲ. ಅತ್ತ ಯಡಿಯ್ಯೂರಪ್ಪಗೂ ಕ್ಲೀನ್ ಚಿಟ್ ಸಿಕ್ಕಿದ್ರೆ, ಇತ್ತ ಡಿಕೆ ಶಿವಕುಮಾರ್ 75 ಕೋಟಿ ಆಸ್ತಿ ಕಳೆದುಕೊಳ್ಳುವಂತಾಗಿದೆ.
ಹುಬ್ಬಳ್ಳಿ: ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಸಚಿವ ಸಿ.ಎಸ್.ಶಿವಳ್ಳಿ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ನಡೆಯಲಿದೆ.
ಶುಕ್ರವಾರ ರಾತ್ರಿ ಧಾರವಾಡದ ಕುಂದಗೋಳಕ್ಕೆ ಪಾರ್ಥಿವ ಶರೀರ ರವಾನಿಸಲಾಯ್ತು. ಬಳಿಕ ಶಿವಾನಂದ ಮಠದ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾವಿರಾರು ಜನರು ಆಗಮಿಸಿ ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಯರಗುಪ್ಪಿಗೆ ಕೊಂಡೊಯ್ದು ಅಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ. ಮಧ್ಯಾಹ್ನ ಮೂರೂವರೆಗೆ ಸಿಎಂ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಡಿಸಿಎಂ ಪರಮೇಶ್ವರ್, ಸಿದ್ದರಾಮಯ್ಯ, ಗೃಹಸಚಿವ ಎಂ.ಬಿ ಪಾಟೀಲ್, ಡಿ.ಕೆ ಶಿವಕುಮಾರ್, ಆರ್.ವಿ ದೇಶಪಾಂಡೆ ಸೇರಿದಂತೆ ಹಲವು ನಾಯಕರು ಅಂತಿಮ ದರ್ಶನ ಪಡೆಯಲಿದ್ದಾರೆ.
ಧಾರವಾಡ ಜಿಲ್ಲಾಯಾದ್ಯಂತ ಇಂದು ಸರ್ಕಾರಿ ರಜೆ ಘೋಷಿಸಲಾಗಿದ್ದು, 3 ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆಗೆ ಸೂಚಿಸಲಾಗಿದೆ. ಆದ್ರೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ.