Tag: Minister Tukaram

  • ಬಿಜೆಪಿಗೆ ಮತ ಹಾಕ್ತೀಯಾ ಹಾಕೋ ಹೋಗು: ಸಚಿವ ತುಕಾರಾಂ ಸಿಡಿಮಿಡಿ

    ಬಿಜೆಪಿಗೆ ಮತ ಹಾಕ್ತೀಯಾ ಹಾಕೋ ಹೋಗು: ಸಚಿವ ತುಕಾರಾಂ ಸಿಡಿಮಿಡಿ

    ಬಳ್ಳಾರಿ: ನನ್ನ ಕೈಯಲ್ಲಾದ ಕೆಲಸ ನಾನು ಮಾಡಿದ್ದೇನೆ. ನನ್ನಿಂದ ಎಲ್ಲರಿಗೂ ಉದ್ಯೋಗ ಕೊಡಿಸಲು ಆಗಲ್ಲ. ನೀನು ಬಿಜೆಪಿಗೆ ಮತ ಹಾಕೋತೀಯಾ ಹಾಕೋ ಹೋಗು. ನನಗೆ ಎನೂ ತೊಂದರೆಯಿಲ್ಲ ಎಂದು ಮತದಾರರ ಪ್ರಶ್ನೆಗೆ ಕೆಂಡಾಮಂಡಲರಾಗಿ ಸಚಿವ ತುಕಾರಾಂ ಉತ್ತರಿಸುವ ಮೂಲಕ ಗರಂ ಆಗಿದ್ದಾರೆ.

    ಗುರುವಾರ ಸಂಜೆ ಸಂಡೂರು ತಾಲೂಕಿನ ಗಂಗಲಾಪುರ ಗ್ರಾಮದಲ್ಲಿ ಉಗ್ರಪ್ಪ ಪರ ಸಚಿವರು ಪ್ರಚಾರ ನಡೆಸಿದ್ದರು. ಈ ವೇಳೆ ನೀವು ಜಿಂದಾಲ್‍ನಲ್ಲಿ ಯುವಕರಿಗೆ ಉದ್ಯೋಗ ಕೊಡಿಸಲು ಪತ್ರ ಕೊಡುತ್ತಿಲ್ಲ ಎಂದು ಮತದಾರರು ಸಚಿವರನ್ನು ಪ್ರಶ್ನಿಸಿದರು.

    ಜಿಂದಾಲ್ ಕಂಪನಿಯಲ್ಲಿ ಎಲ್ಲರೂ ಉದ್ಯೋಗ ಕೇಳಿದ್ರೆ ಹೇಗೆ? ನೀವು ಏಕೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬಾರದು. ಕಲಂ 371 (ಜೆ) ಅಡಿಯಲ್ಲಿ ಸುಮಾರು 33 ಸಾವಿರ ಜನ ಕೆಲಸಕ್ಕೆ ತೆಗೆದುಕೊಂಡಿದ್ದಾರೆ. ನಾವು ಲೆಟರ್ ನೀಡಿ ನಮ್ಮ ಧರ್ಮವನ್ನು ಪಾಲನೆ ಮಾಡಿದ್ದೇವೆ. ಉದ್ಯೋಗ ನೀಡುವುದು ಕಂಪನಿಗೆ ಸಂಬಂಧಿಸಿದ ವಿಷಯವಾಗಿದೆ. ಇತ್ತೀಚೆಗೆ ಡಿಪ್ಲೋಮಾ, ಐಟಿಐನ ಸುಮಾರು 200 ವಿದ್ಯಾರ್ಥಿಗಳಿಗೆ ಪತ್ರ ನೀಡಿದ್ದು, ಅವರೆಲ್ಲರೂ ಜಿಂದಾಲ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಜಿಂದಾಲ್ ಕಂಪನಿ ನಂಬಿಕೊಂಡು ಕುಳಿತುಕೊಳ್ಳದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತ ಯುವಕರ ಗಮನ ಹರಿಸಬೇಕಿದೆ ಎಂದರು.

    ಈ ವೇಳೆ ತಾಳ್ಮೆ ಕಳೆದುಕೊಂಡ ಸಚಿವ ತುಕಾರಾಂ ನೀನು ಬಿಜೆಪಿಗೆ ಮತ ಹಾಕೋತೀಯಾ ಹಾಕೋ ಹೋಗು ನನಗೇನೂ ತೊಂದರೆ ಇಲ್ಲ ಎನ್ನುವ ಮೂಲಕ ಗರಂ ಆಗಿ ಭಾಷಣ ಮೊಟಕುಗೊಳಿದರು. ಪ್ರಚಾರವನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ಗಂಗಾಲಪುರ ಗ್ರಾಮದಿಂದ ಹೊರ ನಡೆದರು.

  • ವಿಮ್ಸ್ ಅವ್ಯವಸ್ಥೆ ಕಂಡು ಕೆಂಡಾಮಂಡಲವಾದ್ರು ವೈದ್ಯಕೀಯ ಸಚಿವ..!

    ವಿಮ್ಸ್ ಅವ್ಯವಸ್ಥೆ ಕಂಡು ಕೆಂಡಾಮಂಡಲವಾದ್ರು ವೈದ್ಯಕೀಯ ಸಚಿವ..!

    ಬಳ್ಳಾರಿ: ಸದಾ ವಿವಾದಗಳಿಂದಲೇ ಹೆಸರುವಾಸಿ ಆಗಿರುವ ಜಿಲ್ಲೆಯ ವಿಮ್ಸ್ ಆಸ್ಪತ್ರೆಗೆ ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಇಂದು ದಿಢೀರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆ ವ್ಯವಸ್ಥೆ ನೋಡಿ ಕೆಂಡಾಮಂಡಲರಾಗಿದ್ದಾರೆ.

    ಶುಕ್ರವಾರವಷ್ಟೆ ಆಡಳಿತ ಮಂಡಳಿಯ ಜೊತೆ ಸಭೆ ನಡೆಸಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದ ಸಚಿವರು ಇಂದು ವಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ವಿರುದ್ಧ ಗರಂ ಆಗಿದ್ದಾರೆ. ರೋಗಿಗಳನ್ನು ಭೇಟಿ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಸಚಿವರು ಮಾಹಿತಿ ಪಡೆದಿದ್ದಾರೆ. ಅಲ್ಲದೇ ವೆಂಟಿಲೇಟರ್, ಡಯಾಲಿಸಿಸ್ ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಆಸ್ಪತ್ರೆ ಅವ್ಯವಸ್ಥೆಯನ್ನು ಕಣ್ಣಾರೆ ಕಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

    ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ತುಕಾರಾಂ, ಆಸ್ಪತ್ರೆಯಲ್ಲಿರುವ ವೆಂಟಿಲೇಟರ್ ಹಾಗೂ 14 ಡಯಾಲಿಸಿಸ್‍ಗಳಲ್ಲಿ 7 ಕೆಟ್ಟು ಹೋಗಿದೆ. ಇವೆಲ್ಲವನ್ನೂ ರೆಡಿ ಮಾಡುವುದರ ಜೊತೆಗೆ 4 ಹೊಸ ವೆಂಟಿಲೇಟರ್ ಖರೀದಿ ಮಾಡಲು ಆಸ್ಪತ್ರೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕುಡಿಯುವ ನೀರಿಗಾಗಿ ಅಲ್ಲಿಪುರ ಕೆರೆಯಿಂದ ನೇರವಾಗಿ ವಿಮ್ಸ್‍ಗೆ ಸಂಪರ್ಕ ಕಲ್ಪಿಸಲಾಗುವುದು. ವಿಮ್ಸ್ ಆಸ್ಪತ್ರೆಗೆ ಬೇಕಾಗುವ ವಿವಿಧ ಯಂತ್ರಗಳನ್ನು ಖರೀದಿ ಮಾಡಲು 4.50 ಕೋಟಿ, ಔಷಧಿಗಾಗಿ 3 ಕೋಟಿ ಮೀಸಲಿಡಲು ಸೂಚಿಸಿದ್ದೇನೆ. ಹೊರಗಡೆ ಔಷಧಿ ಚೀಟಿ ಬರೆದುಕೊಡದಂತೆ ಆದೇಶ ಮಾಡಿದ್ದೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಶಾಸಕರ ಬಡಿದಾಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ – ಗಲಾಟೆ ನಡೆದ ಬಳಿಕ ಡಿಕೆಶಿ ಸ್ಥಳಕ್ಕೆ ಬಂದಿದ್ರು : ಸಚಿವ ತುಕರಾಂ

    ಶಾಸಕರ ಬಡಿದಾಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ – ಗಲಾಟೆ ನಡೆದ ಬಳಿಕ ಡಿಕೆಶಿ ಸ್ಥಳಕ್ಕೆ ಬಂದಿದ್ರು : ಸಚಿವ ತುಕರಾಂ

    – ಎರಡು ಕುಟುಂಬಗಳ ನಡುವೆ ರಾಜಿ ಮಾಡಿಸಲು ಯತ್ನ!

    ಬಳ್ಳಾರಿ: ಈಗಲ್ಟನ್ ರೆಸಾರ್ಟಿನಲ್ಲಿ ಶಾಸಕ ಆನಂದ್ ಸಿಂಗ್ ಹಾಗೂ ಗಣೇಶ ಮಾರಾಮಾರಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಗಲಾಟೆ ನಡೆದ ದಿನದಂದು ಸಚಿವ ಡಿಕೆ ಶಿವಕುಮಾರ್ ಗಲಾಟೆ ನಡದೆ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಗಲಾಟೆ ನಡೆದ ಬಳಿಕ ಡಿಕೆ ಶಿವಕುಮಾರ್ ಅವರು ರೆಸಾರ್ಟಿಗೆ ಆಗಮಿಸಿದ್ದರು ಎಂದು ಸಚಿವ ತುಕಾರಾಂ ಹೇಳಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಘಟನೆ ನಡೆದ ದಿನ ನಾನು ರಾತ್ರಿ 10 ಗಂಟೆ ವೇಳೆಗೆ ಮಲಗಿದ್ದೆ. ಆದರೆ 4.45ರ ವೇಳೆಗೆ ಗಲಾಟೆ ನಡೆದ ಸದ್ದು ಕೇಳಿ ಹೊರಗೆ ಬಂದೆ. ಆಗ ತನ್ವೀರ್ ಸೇಠ್, ರಾಮಪ್ಪ, ರಘುಮೂರ್ತಿ ಅವರು ನಿಂತಿದ್ದರೆ ಗಣೇಶ್ ಮತ್ತೊಂದು ಕಡೆ ನಿಂತಿದ್ದರು. ಗಲಾಟೆಯ ಬಗ್ಗೆ ತಿಳಿದು ಈ ರೀತಿ ಮಾಡಬಾರದು ಎಂದು ನಾನು ಗಣೇಶ್‍ಗೆ ಹೇಳಿದೆ. ಆದರೆ ಆತ ಸಿಟ್ಟಿನಿಂದಿದ್ದ ಕಾರಣ ಹೆಚ್ಚು ಮಾತನಾಡದೇ ಆನಂದ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದೆವು. ಆ ಬಳಿಕ ಸಚಿವ ಡಿಕೆ ಶಿವಕುಮಾರ್ ಅವರು ಗಣೇಶ್‍ರನ್ನು ರೂಮ್‍ಗೆ ಕರೆದುಕೊಂಡು ಹೋಗಿ ಬುದ್ಧಿವಾದ ಹೇಳಿದರು ಎಂದು ತಿಳಿಸಿದ್ದಾರೆ.

    ನಾನು ಹೋಟೆಲಿನ ಗ್ಯಾಲರಿಗೆ ಬರುವ ವೇಳೆಗೆ ಗಲಾಟೆ ನಡೆದಿತ್ತು. ಆದ್ದರಿಂದ ಏಕೆ ಘಟನೆ ನಡೆಯಿತು ಎಂದು ನನಗೆ ತಿಳಿದಿಲ್ಲ. ಸದ್ಯ ಪಕ್ಷದ ವಿಚಾರಣೆಗೆ ಸಮಿತಿ ನೇಮಿಸಿದೆ. ಅಲ್ಲಿ ಕೂಡ ವಿವರಣೆ ನೀಡಿದ್ದೇನೆ. ಸತ್ಯ ಏನಿದೆ ಎಂದು ಹೇಳಿದ್ದೇನೆ. ಮುಂದೆ ಏನು ಮಾಡಬೇಕು ಎಂದು ಪಕ್ಷ ನಿರ್ಧರಿಸುತ್ತದೆ. ಪಕ್ಷ ಈಗಾಗಲೇ ಗಣೇಶ್ ಅವರನ್ನು ಅಮಾನತು ಮಾಡಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

    ಫೇಸ್‍ಬುಕ್ ಪೋಸ್ಟ್ ಮಾಹಿತಿಯಂತೆ ನಿಮ್ಮ ಸಚಿವ ಸ್ಥಾನ ಕಾರಣಕ್ಕೂ ಜಗಳ ನಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲ್ಲಿ ಯಾವುದೇ ಜಾತಿ ಪ್ರಶ್ನೆ ಬರುವುದಿಲ್ಲ. ಪಕ್ಷ ಹೈಕಮಾಂಡ್ ಜವಾಬ್ದಾರಿಯನ್ನು ನೀಡಿದೆ. ಉಳಿದದ್ದು ಅವರ ವೈಯಕ್ತಿಕ ವಿಚಾರ. ಎರಡು ಕುಟುಂಬಗಳ ಜೊತೆ ಕುಳಿತು ಮಾತನಾಡುವ ಬಗ್ಗೆ ಚರ್ಚೆ ನಡೆಸಲಾಗುವುದು. ಘಟನೆ ಬಗ್ಗೆ ಏನೂ ಮಾಡಲು ಸಾಧ್ಯವೋ ಮಾಡೋಣ. ಸಮಾಜವನ್ನ ಒಂದುಗೂಡಿಸಿಕೊಂಡು ಹೋಗಬೇಕಾಗಿದೆ ಎಂದರು.

    ಇತ್ತ ಘಟನೆ ನಡೆದ ದಿನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಡಿಕೆ ಶಿವಕುಮಾರ್, ಯಾವ ಶಾಸಕರು ಮಾರಾಮಾರಿ ಮಾಡಿಕೊಂಡಿಲ್ಲ. ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ನಾವೆಲ್ಲರು ನಿನ್ನೆ ಬಳ್ಳಾರಿಯಲ್ಲಿ ನಡೆದ ಸಭೆ ಮುಗಿಸಿಕೊಂಡು, ಅಮಿತ್ ಪಾಳ್ಯ ಅವರ ಮದುವೆ ಆರತಕ್ಷತೆಗೆ ಹೋಗಿ ವಾಪಾಸ್ಸಾಗಿದ್ದೇವೆ. ಬಳಿಕ ಎಲ್ಲಾ ಊಟ ಮಾಡಿ ಮಲಗಿದ್ದಾರೆ. ಆನಂದ್ ಸಿಂಗ್ ಅವರು ಮದುವೆಗೆ ಹೋಗಿದ್ದಾರೆ. ಸುಮ್ಮನೆ ಗಲಾಟೆಯಾಯ್ತು, ಮಾರಮಾರಿಯಾಯ್ತು ಅಂತ ಮಾಧ್ಯಮದವರೇ ಸುದ್ದಿ ಮಾಡಿಕೊಂಡಿದ್ದೀರಿ. ನಿಮಗೆ ಯಾರೋ ಮಿಸ್‍ಲೀಡ್ ಮಾಡಿದ್ದಾರೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv