Tag: Minister Suresh Kumar

  • ಪ್ರಧಾನಿ ಮೋದಿ ಹಾದಿ ಅನುಸರಿಸಿದ ಸಚಿವ ಸುರೇಶ್ ಕುಮಾರ್

    ಪ್ರಧಾನಿ ಮೋದಿ ಹಾದಿ ಅನುಸರಿಸಿದ ಸಚಿವ ಸುರೇಶ್ ಕುಮಾರ್

    ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಅನುಸರಿಸುತ್ತಿದ್ದಾರಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡಿದೆ.

    ಪ್ರಧಾನಿ ಮೋದಿ 2019ರ ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನ ಕೇದಾರನಾಥ ದೇವಾಲಯ ಬಳಿಯ ಗುಹೆಯಲ್ಲಿ ಧ್ಯಾನ ಮಾಡಿದ್ದರು. ಈಗ ಸಚಿವ ಸುರೇಶ್ ಕುಮಾರ್ ಅವರು ಐತಿಹಾಸಿಕ ಹಿನ್ನೆಲೆಯುಳ್ಳ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದ ಗುಹೆಯಲ್ಲಿ ಧ್ಯಾನ ಮಾಡಿದ್ದಾರೆ.

    ಸುರೇಶ್ ಕುಮಾರ್ ಅವರು ಶಿಕ್ಷಕರ ದಿನಾಚರಣೆ ನಿಮಿತ್ತ ಶುಕ್ರವಾರ ಕೊಪ್ಪಳದ ಗಂಗಾವತಿಗೆ ಆಗಮಿಸಿದ್ದರು. ಕಾರ್ಯಕ್ರಮದ ಬಳಿಕ ಸಚಿವರು ನೇರವಾಗಿ ಅಂಜನಾದ್ರಿ ಪರ್ವತದ ಕಡೆ ಪ್ರಯಾಣ ಬೆಳೆಸಿದರು. ಸಚಿವರು ಜೈ ಶ್ರೀರಾಮ್ ಎನ್ನುತ್ತ 575 ಮೆಟ್ಟಿಲುಗಳನ್ನು ಹತ್ತಿ ಆಂಜನೇಯನ ದರ್ಶನ ಪಡೆದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಪೂಜೆ ಸಲ್ಲಿಸಿದರು. ನಂತರ  ಅಂಜನಾದ್ರಿ ಬೆಟ್ಟದ ಮೇಲಿರುವ ಗುಹೆಯಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಧ್ಯಾನ ಮಾಡಿದರು.

    ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ ಇದು ಐತಿಹಾಸಿಕ ಹಿನ್ನಲೆಯುಳ್ಳ ಸ್ಥಳವಾಗಿದ್ದು. ಹನುಮನ ಜನ್ಮಸ್ಥಳ ಕಿಷ್ಕಿಂದಾ ಎಂದೇ ಕರೆಯಲ್ಪಡುತ್ತದೆ. ತುಂಗಭದ್ರಾ ತೀರದಲ್ಲಿರುವ ಅಂಜನಾದ್ರಿ ಬೆಟ್ಟ ಗುಹೆಯಲ್ಲಿ ಧ್ಯಾನ ಮಾಡಿದರೆ ಸಕಲವು ಒಳ್ಳೆದಾಗುತ್ತದೆ ಎನ್ನುವ ಪ್ರತೀತಿ ಇದೆ. ಈ ಹಿಂದೆ ನರೇಂದ್ರ ಮೋದಿ ಅವರು ಪ್ರಧಾನಿ ಆಗುವ ಮುನ್ನ ಅವರ ಪತ್ನಿ ಜಶೋಧಾ ಬೇನ್ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಇದು ಭಾರೀ ಸುದ್ದಿಯಾಗಿತ್ತು.

    ಜಿಲ್ಲೆಗೆ ಬರುವ ಬಹುತೇಕ ರಾಜಕಾರಣಿಗಳು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯನ ದರ್ಶನ ಪಡೆಯುತ್ತಾರೆ. ಈ ಹಿಂದೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಭೇಟಿ ನೀಡಿ, ಆಂಜನೇಯನ ದರ್ಶನ ಪಡೆದಿದ್ದರು.

  • ಕಡ್ಡಾಯ ವರ್ಗಾವಣೆ ಕೌನ್ಸಿಲಿಂಗ್ ನಾಳೆಯಿಂದ ಆರಂಭ – ಸುರೇಶ್ ಕುಮಾರ್

    ಕಡ್ಡಾಯ ವರ್ಗಾವಣೆ ಕೌನ್ಸಿಲಿಂಗ್ ನಾಳೆಯಿಂದ ಆರಂಭ – ಸುರೇಶ್ ಕುಮಾರ್

    ಬೆಂಗಳೂರು: ವರ್ಷದಿಂದ ಕಗ್ಗಂಟಾಗಿ ಉಳಿದಿರುವ ಶಿಕ್ಷಕರ ವರ್ಗಾವಣೆಗೆ ಕೊನೆಗೂ ಕಾಲ ಕೂಡಿಬಂದಿದ್ದು, ನಾಳೆಯಿಂದ ಕೌನ್ಸಿಲಿಂಗ್ ನಡೆಯಲಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಇಂದು ಸರ್ವ ಶಿಕ್ಷಣ ಅಭಿಯಾನದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಡ್ಡಾಯ ವರ್ಗಾವಣೆ ಬಗ್ಗೆ ಅನೇಕ ಗೊಂದಲಗಳು ಇತ್ತು. ಅನೇಕ ಜನ ಕಡ್ಡಾಯ ವರ್ಗಾವಣೆ ಬಗ್ಗೆ ನನ್ನ ಬಳಿ ದೂರು ನೀಡಿದ್ದರು. ಹೀಗಾಗಿ ನಾನು ವರ್ಗಾವಣೆ ನಿಲ್ಲಿಸಿದ್ದೆ. ಈ ಸುದ್ದಿಗೋಷ್ಠಿಯನ್ನು ಸಹ ಸಂತೋಷದಿಂದ ಮಾಡುತ್ತಿಲ್ಲ. ಎರಡು ಗುಂಪುಗಳ ಮಧ್ಯೆ ಸಿಲುಕಿ ಹಾಕಿಕೊಂಡಿದ್ದೇನೆ ಎಂದು ತಿಳಿಸಿದರು.

    ಕಡ್ಡಾಯ ವರ್ಗಾವಣೆ ಮಾಡದಿದ್ದಲ್ಲಿ ನಿಮ್ಮ ಮನೆ ಮುಂದೆ ವಿಷ ತೆಗೆದುಕೊಳ್ಳುತ್ತೇನೆ ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಕಡ್ಡಾಯ ವರ್ಗಾವಣೆ ಮಾಡಿದ್ದಲ್ಲಿ ನಿಮ್ಮ ಮನೆ ಮುಂದೆ ವಿಷ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಾರೆ. ಹೀಗಾಗಿ ಎರಡೂ ಗುಂಪುಗಳ ಮಧ್ಯೆ ಸಿಲುಕಿಕೊಂಡಿದ್ದೇನೆ. ಈ ಕುರಿತು 20 ಗಂಟೆಗಳ ಕಾಲ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು.

    ಎಲ್ಲರಿಗೂ ಸಮಾನ ರೀತಿಯಲ್ಲಿ ಅನುಕೂಲವಾಗುವಂತೆ ವರ್ಗಾವಣೆ ಮಾಡಲು ಚಿಂತನೆ ನಡೆಸಿದ್ದೇನೆ. ಕಡ್ಡಾಯ ವರ್ಗಾವಣೆ ಆಗುವವರಿಗೆ ಕೆಲವು ಆಫರ್ ನೀಡಲಾಗಿದೆ. ಏನೆಂದರೆ, ಅವರಿಗೆ ಇಷ್ಟವಾಗದ ಜಾಗದಲ್ಲಿ ವರ್ಗಾವಣೆ ಸಿಗದೇ ಇದ್ದರೆ ಪಕ್ಕದ ತಾಲೂಕು, ಅಥವಾ ಹತ್ತಿರದ ಜಿಲ್ಲೆಗೆ ವರ್ಗಾವಣೆ ಮಾಡಲು ಸೂಚನೆ ನೀಡಲಾಗಿದೆ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಅಲ್ಲದೆ, ವರ್ಗಾವಣೆ ಬಯಸಿದವರಿಗೂ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.

    ಮುಂದಿನ ವರ್ಷದಿಂದ ವರ್ಗಾವಣೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಪ್ರಾರಂಭಿಸಲಾಗುವುದು. ಇನ್ನೊಂದು ವರ್ಷದಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಜಾರಿಗೆ ತರುತ್ತೇವೆ. ಶಿಕ್ಷಕ ಸ್ನೇಹಿ ವರ್ಗಾವಣೆ ಜಾರಿಗೆ ತರಲು ಕೆಲಸ ಮಾಡುತ್ತೇನೆ. ಮುಂದಿನ ವರ್ಷದೊಳಗೆ ತಿದ್ದುಪಡಿ ತರುತ್ತೇವೆ ಎಂದು ಭರವಸೆ ನೀಡಿದರು.

    2017ರಲ್ಲಿ ಬಂದ ಈ ವರ್ಗಾವಣೆ ಕಾಯ್ದೆ ಯಾವುದೇ ಚರ್ಚೆ ಇಲ್ಲದೆ ಅಧಿವೇಶನದಲ್ಲಿ ಪಾಸ್ ಆಗಿದೆ. ಯಾವುದೇ ಚರ್ಚೆ ಇಲ್ಲದೆ ಪಾಸ್ ಆಗಿರೋದಕ್ಕೆ ಇಂದು ಸಮಸ್ಯೆ ತಂದಿಟ್ಟಿದೆ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ಮಾಡಬೇಕಾದ ಅನಿವಾರ್ಯವಿದೆ. ಕಡ್ಡಾಯ ವರ್ಗಾವಣೆ ಪದ ಅನ್ನೋದೇ ಸರಿಯಿಲ್ಲ. ಈ ಕಡ್ಡಾಯ ವರ್ಗಾವಣೆ ಅನ್ನೋದು ಒಂದು ರೀತಿ ಶಿಕ್ಷೆ ಇದ್ದ ಹಾಗೆ. ಹೀಗಾಗಿ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಸಿದ್ದಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಡ್ಡಾಯ ವರ್ಗಾವಣೆ ತಿದ್ದುಪಡಿ ಕಾಯ್ದೆಗೆ ಆದಷ್ಟು ಬೇಗ ತಿದ್ದುಪಡಿ ತರುತ್ತೇವೆ ಎಂದು ಮಾಹಿತಿ ನೀಡಿದರು.

    ಖಾಯಿಲೆ ಇರುವವರು ಹಾಗೂ ಬೇರೆ ಸಮಸ್ಯೆ ಇರುವವರಿಗಾಗಿ ಕಡ್ಡಾಯ ವರ್ಗಾವಣೆಗೆ ಗುರುತಿಸಲಾಗಿದೆ. ಪ್ರಾಥಮಿಕ ಶಾಲೆಯಲ್ಲಿ ಕಡ್ಡಾಯ ವರ್ಗಾವಣೆಗೆ 12,622 ಶಿಕ್ಷಕರನ್ನು ಗುರುತಿಸಲಾಗಿದೆ. ಇದರಲ್ಲಿ 6,832 ಜನ ವಿವಿಧ ಕಾರಣಕ್ಕೆ ವಿನಾಯಿತಿ ಪಡೆದಿದ್ದಾರೆ. ಒಟ್ಟು 5,790 ಜನ ವರ್ಗಾವಣೆಗೆ ಅರ್ಹರಾಗಿದ್ದಾರೆ. ಶೇ.4ರಷ್ಟು ವರ್ಗಾವಣೆಯ ನಿಯಮದಂತೆ 4,084 ಜನ ವರ್ಗಾವಣೆಗೆ ಅರ್ಹರಾಗಿದ್ದಾರೆ. ಬಳ್ಳಾರಿಯಲ್ಲೇ ಹೆಚ್ಚು ವರ್ಗಾವಣೆ ನಡೆಯುತ್ತಿದ್ದು, 320 ಒಂದೇ ಜಿಲ್ಲೆಯಲ್ಲಿ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ಮಟ್ಟದಲ್ಲಿ 3,692 ಕಡ್ಡಾಯ ವರ್ಗಾವಣೆಗೆ ಶಿಕ್ಷಕರನ್ನು ಗುರುತಿಸಲಾಗಿದೆ. ಇದರಲ್ಲಿ 2100 ಜನರಿಗೆ ವಿನಾಯಿತಿ ನೀಡಲಾಗಿದೆ. 1,592 ಜನ ವರ್ಗಾವಣೆಗೆ ಅರ್ಹರಾಗಿದ್ದಾರೆ. ಶೇ.4ರ ನಿಯಮದಡಿ 1,234 ಜನ ವರ್ಗಾವಣೆ ಆಗಬೇಕು ಎಂದು ಮಾಹಿತಿ ನಿಡಿದರು.

    ವರ್ಗಾವಣೆಗೆ ಅರ್ಹರಾಗಿರುವವರಿಗೆ ಬಿ ಮತ್ತು ಸಿ ಝೋನ್ ನಲ್ಲಿ ಸ್ಥಳವಿಲ್ಲ. ಹೀಗಾಗಿ ಮತ್ತೊಂದು ಸಮಸ್ಯೆ ಆಗಿದೆ. ಈವರೆಗೆ 1,6066 ಶಿಕ್ಷಕರ ವರ್ಗಾವಣೆ ಆಗಿದೆ. ಉಳಿದಂತೆ 4,260 ಕಡ್ಡಾಯ ವರ್ಗಾವಣೆ, ಪರಸ್ಪರ ವರ್ಗಾವಣೆ 3,777 ಮತ್ತು ಅಂತರ್ ಘಟಕ ವರ್ಗಾವಣೆ 1,4076 ಬಾಕಿ ಇದ್ದು, ವರ್ಗಾವಣೆ ಪ್ರಕ್ರಿಯೆ ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಸಚಿವರು ತಿಳಿಸಿದರು.

    ಇದೇ ವೇಳೆ 10 ಸಾವಿರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಿದ್ಧತೆ ಆಗಿದೆ. ಅಕ್ಟೋಬರ್ ಅಂತ್ಯದೊಳಗೆ ಎಲ್ಲರಿಗೂ ನೇಮಕಾತಿ ಆದೇಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿ ನಂತರ ಕೆಲವು ಶಿಕ್ಷಕರು ಕಡ್ಡಾಯ ವರ್ಗಾವಣೆ ಬೇಡ ಎಂದು ಸಚಿವ ಸುರೇಶ್ ಕುಮಾರ್‍ಗೆ ಮನವಿ ಮಾಡಿದರು. ಕಣ್ಣೀರು ಹಾಕಿ ವರ್ಗಾವಣೆ ಬೇಡ ಎಂದು ಗೋಗರೆದರು. ಆದರೆ, ಇದ್ಯಾವುದಕ್ಕೂ ಒಪ್ಪದ ಸಚಿವರು, ನಿಯಮದ ಪ್ರಕಾರ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ವಲಯವಾರು ಆಧಾರದ ಮೇಲೆ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುತ್ತದೆ. ಎ ಝೋನ್ ಎಂದರೆ ನಗರ ಪ್ರದೇಶ, ಬಿ ಝೋನ್ ಎಂದರೆ ತಾಲೂಕು, ಸಿ ಝೋನ್ ಎಂದರೆ ಗ್ರಾಮೀಣ ಭಾಗ ಎಂದರ್ಥ.