Tag: Minister Suresh Kumar

  • ಜುಲೈ 1ರಿಂದ ಹಂತ ಹಂತವಾಗಿ ಶಾಲೆ ಆರಂಭಕ್ಕೆ ಪ್ಲಾನ್

    ಜುಲೈ 1ರಿಂದ ಹಂತ ಹಂತವಾಗಿ ಶಾಲೆ ಆರಂಭಕ್ಕೆ ಪ್ಲಾನ್

    ಬೆಂಗಳೂರು: ಕೊರೊನಾ ಸ್ಫೋಟದ ಮಧ್ಯೆ, ರಾಜ್ಯದಲ್ಲಿ ಜುಲೈ 1ರಿಂದ ಹಂತ ಹಂತವಾಗಿ ಶಾಲೆಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಜೂನ್ 8ರಿಂದಲೇ ದಾಖಲಾತಿ ಪ್ರಕ್ರಿಯೆಗಳು ಶುರುವಾಗಲಿವೆ.

    ಮೊದಲು ರಾಜ್ಯದಲ್ಲಿ ಶಾಲೆ ಪ್ರಾರಂಭ ಮಾಡುವ ಸಂಬಂಧ ಜೂನ್ 10ರಿಂದ ಮೂರು ದಿನಗಳ ಕಾಲ ಎಲ್ಲ ಶಾಲೆಗಳಲ್ಲಿ ಪೋಷಕರ, ಎಸ್‍ಡಿಎಂಸಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

    ಶಾಲೆಗಳ ಪ್ರಾರಂಭಕ್ಕೆ ಚಾಲನೆ ಕೊಟ್ಟಿರುವ ಸರ್ಕಾರ ಮೊದಲ ಹಂತವಾಗಿ ಶಾಲೆಗಳ ಕಚೇರಿ ಪ್ರಾರಂಭ ಮಾಡಲು ಅವಕಾಶ ನೀಡಿದೆ. ಜೂನ್ 5 ರಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಕಚೇರಿ ಪ್ರಾರಂಭಕ್ಕೆ ಸೂಚನೆ ನೀಡಲಾಗಿದೆ. ಜೂನ್ 8 ರಿಂದ ದಾಖಲಾತಿ ಪ್ರಕ್ರಿಯೆಗೆ ಸಿದ್ಧತೆ ಆರಂಭವಾಗಲಿದ್ದು, ಜೂನ್ 8ರಿಂದ ಖಾಸಗಿ ಶಾಲೆಗಳ ಕಚೇರಿ ಪ್ರಾರಂಭಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ನೀಡಿದೆ. ಅಲ್ಲದೇ ಜೂನ್ 15 ಒಳಗೆ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಿ ಇಲಾಖೆಗೆ ಮಾಹಿತಿ ಕೊಡಲು ಶಿಕ್ಷಣ ಇಲಾಖೆ ಸೂಚಿಸಿದೆ.

    ಶಾಲೆ ಯಾವಾಗ ಓಪನ್? : ತರಗತಿ ಪ್ರಸ್ತಾಪಿತ ದಿನಾಂಕ

    • 4-7ನೇ ತರಗತಿ – ಜುಲೈ 1
    • 1-3ನೇ ತರಗತಿ – ಜುಲೈ 15
    • 8-10ನೇ ತರಗತಿ – ಜುಲೈ 15
    • ಪ್ರೀ ಸ್ಕೂಲ್ – ಜುಲೈ 20

    ಮೂರು ಮಾದರಿಯಲ್ಲಿ ಶಾಲೆಗಳ ಆರಂಭಿಸುವ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ಮಾದರಿ 1ರಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಎಂದಿನಂತೆ (ಹಿಂದಿನಂತೆ) ತರಗತಿಗಳನ್ನ ನಡೆಸುವುದು. 2 ಪಾಳಿಗಳಲ್ಲಿ ಶಾಲೆ ನಡೆಸುವುದು. ಅಂದರೆ ಬೆಳಗ್ಗೆ 8 ರಿಂದ ಮಧ್ಯಾಹ್ನ 12ರ ವರೆಗೂ ಹಾಗೂ ಮಧ್ಯಾಹ್ನ 1 ರಿಂದ ಸಂಜೆ 5 ವರೆಗೂ 2 ಪಾಳಿಯಲ್ಲಿ ಶಾಲೆ ನಡೆಸಲು ಸಲಹೆ ಪಡೆಯಲಿದೆ. ಮೂರನೇ ಅಂಶವಾಗಿ ದಿನ ಬಿಟ್ಟು ದಿನ ಶಾಲೆ ನಡೆಸುವುದು. ಅಂದರೆ ಶಾಲೆಯ ಒಟ್ಟು ತರಗತಿಯನ್ನು ವಿಭಾಗ ಮಾಡಿ ದಿನ ಬಿಟ್ಟು ದಿನ ಶಾಲೆ ನಡೆಸುವುದು. ಉದಾಹರಣೆಗೆ 1-5 ನೇ ತರಗತಿ ಒಂದು ದಿನ. 6-10 ನೇ ತರಗತಿ ಮತ್ತೊಂದು ದಿನ ನಡೆಸುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಸೂಚಿಸಲಾಗಿದೆ.

    ಇತ್ತ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಕಂಟೈನ್ಮೆಂಟ್ ಝೋನ್‍ಗಳಲ್ಲಿ ನಡೆಸಲ್ಲ. ಅಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ಸ್ಥಳಾಂತರಿಸಿ, ಅಲ್ಲಿ ನಿಗದಿಯಂತೆ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಒಂದು ವೇಳೆ ಪರೀಕ್ಷೆ ಸಮಯದಲ್ಲೇ ಎಕ್ಸಾಂ ಸೆಂಟರ್ ಇರುವ ಪ್ರದೇಶ ಕಂಟೈನ್ಮೆಂಟ್ ಝೋನ್ ಆದಲ್ಲಿ, ಆ ಭಾಗದ ಮಕ್ಕಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ಜೂನ್ 25ರಿಂದ ಶುರುವಾಗುವ ಪರೀಕ್ಷೆಯನ್ನು 8.48 ಲಕ್ಷ ಮಕ್ಕಳು ಬರೆಯಲಿದ್ದಾರೆ. ಕೊರೋನಾ ತಡೆ ಸಂಬಂಧ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು.

  • ಆಡಿಕೊಂಡಿರುವ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಅರ್ಥವಾಗದ ವಿಚಾರ: ಸುರೇಶ್ ಕುಮಾರ್

    ಆಡಿಕೊಂಡಿರುವ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಅರ್ಥವಾಗದ ವಿಚಾರ: ಸುರೇಶ್ ಕುಮಾರ್

    ಕೋಲಾರ: ಎಲ್‍ಕೆಜಿ, ಯುಕೆಜಿ ಮಕ್ಕಳ ಆನ್ ಲೈನ್ ಶಿಕ್ಷಣ ಗೀಳಾಗಿದೆ, ಆಡಿಕೊಂಡಿರುವ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಮಾಡುವುದು ನನಗೆ ಅರ್ಥವಾಗದ ವಿಚಾರ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಕೋಲಾರ ಜಿಲ್ಲಾ ಪಂಚಾಯತ್ ಸಭಾಗಂಣದಲ್ಲಿ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್‍ಕೆಜಿ, ಯುಕೆಜಿ ಮಕ್ಕಳ ಆನ್ ಲೈನ್ ಶಿಕ್ಷಣ ಗೀಳಾಗಿದೆ, ಆಡಿಕೊಂಡಿರುವ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಮಾಡುವುದು, ನನಗೆ ಅರ್ಥವಾಗದ ವಿಚಾರ. ಅಲ್ಲದೆ ನಿಮ್ಹಾನ್ಸ್ ವೈದ್ಯರ ಪ್ರಕಾರ, ಆರು ವರ್ಷದ ಮಗುವಿನವರೆಗೂ ಆನ್‍ಲೈನ್ ಶಿಕ್ಷಣ ಸೂಕ್ತವಲ್ಲ ಎಂದು ಸ್ಪಷ್ಟಪಡಿಸಿದ್ದು, ಮುಂದಿನ ವಾರ ಆನ್‍ಲೈನ್ ಶಿಕ್ಷಣದ ಬಗ್ಗೆ ಖಚಿತ ಅದೇಶ ಪ್ರಕಟಿಸಲಾಗುವುದು ಎಂದರು.

    ಜೂನ್ 25 ರಿಂದ ಜುಲೈ 4 ರವೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಲಿದ್ದು, ಒಂದು ಕೊಠಡಿಯಲ್ಲಿ 18 ರಿಂದ 24 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಪರೀಕ್ಷೆಗೆ ಹಾಜರಾಗುವ ಪ್ರತಿ ವಿದ್ಯಾರ್ಥಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ಅಲ್ಲದೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಲಾಗುವುದು.

    ಪರೀಕ್ಷೆಗಳು ಸುಸೂತ್ರವಾಗಿ ನಡೆಸುವುದಾಗಿ ಹೈಕೋರ್ಟ್‍ಗೆ ಪ್ರಮಾಣ ಪತ್ರ ನೀಡಿದ್ದು, ಪೋಷಕರ ಆತಂಕ ನಿವಾರಣೆ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಹಾಗೂ ಬಸ್ ವ್ಯವಸ್ಥೆ ಮಾಡಲಾಗುವುದು. ಕಂಟೈನ್ಮೆಂಟ್ ಝೋನ್ ಪ್ರದೇಶದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯ ಅವಕಾಶ ನೀಡಲಿದ್ದು, ವಲಸೆ ಬಂದಿರುವ ಕಾರ್ಮಿಕರ ಮಕ್ಕಳಿಗೆ ಅವರಿರುವ ಸ್ಥಳದಲ್ಲೇ ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗುವುದು ಎಂದರು.

  • ಬಡ ಕುಟುಂಬಗಳಿಗೆ ಮಾದಪ್ಪನ ದಾಸೋಹದಿಂದ ಅಕ್ಕಿ, ಮಾಸ್ಕ್ ವಿತರಣೆ

    ಬಡ ಕುಟುಂಬಗಳಿಗೆ ಮಾದಪ್ಪನ ದಾಸೋಹದಿಂದ ಅಕ್ಕಿ, ಮಾಸ್ಕ್ ವಿತರಣೆ

    ಚಾಮರಾಜನಗರ: ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಹಾಗೂ ಮಹದೇಶ್ವರಬೆಟ್ಟದ ವ್ಯಾಪ್ತಿಯ ಬಡ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪಡಿತರ ವಿತರಣೆ ಮಾಡಿದರು.

    ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ದಾಸೋಹ ನಡೆಯದ ಕಾರಣ ಅಲ್ಲಿ ದಾಸ್ತಾನು ಆಗಿರುವ ಸುಮಾರು 89 ಟನ್ ಅಕ್ಕಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಲಹೆಯಂತೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಸುಮಾರು 6,500 ಬಡ ಕುಟುಂಬಗಳಿಗೆ ತಲಾ 5 ಕೆ.ಜಿ.ಅಕ್ಕಿಯನ್ನು ಸಚಿವ ಎಸ್.ಸುರೇಶ್ ಕುಮಾರ್ ವಿತರಿಸಿದರು.

    ಲಾಕ್‍ಡೌನ್ ನಿಂದ ಕೆಲಸವಿಲ್ಲದೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಜನರಿಗೆ ಅನುಕೂಲವಾಗಲೆಂದು ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಗೋಪಿನಾಥಂ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಹಾಗೂ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಸುಮಾರು 6,500 ಬಡ ಕುಟುಂಬಗಳಿಗೆ ಅಕ್ಕಿ ಹಾಗೂ ಮಾಸ್ಕ್ ವಿತರಿಸಿದ್ದಾರೆ. ಈ ಮೂಲಕ ಬಡ ಜನತೆಗೆ ನೆರವಾಗಿದ್ದಾರೆ.

  • 10ನೇ ತರಗತಿ ವಿದ್ಯಾರ್ಥಿಗಳು ಧೈರ್ಯವಾಗಿ ಪರೀಕ್ಷೆ ಎದುರಿಸಿ: ಸುರೇಶ್ ಕುಮಾರ್

    10ನೇ ತರಗತಿ ವಿದ್ಯಾರ್ಥಿಗಳು ಧೈರ್ಯವಾಗಿ ಪರೀಕ್ಷೆ ಎದುರಿಸಿ: ಸುರೇಶ್ ಕುಮಾರ್

    – ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸಚಿವರ ಕಿವಿ ಮಾತು

    ಮಡಿಕೇರಿ: ಈ ಬಾರಿ ಯಾವುದೇ ರೀತಿಯ ಪರೀಕ್ಷಾ ಅಕ್ರಮ ನಡೆಯುವುದಿಲ್ಲ, ಈಗಾಗಲೇ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಗೊಂದಲವಿಲ್ಲದೆ ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಬರೆಯಿರಿ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕರೆ ನೀಡಿದರು.

    ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲಿನ ಕೊಡವ ಸಮಾಜ ಮತ್ತು ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ಹತ್ತನೆ ತರಗತಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಹತ್ತನೆ ತರಗತಿ ಪ್ರಶ್ನೆ ಪತ್ರಿಕೆ ಗೊಂದಲ, ಪತ್ರಿಕೆ ಮಾದರಿಗಳ ಬಗ್ಗೆ ಪ್ರಶ್ನಿಸಿದರು. ಅಲ್ಲದೆ ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವ ವಿಷಯಕ್ಕೂ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಗಂಭೀರವಾಗಿ ಪ್ರಶ್ನಿಸಿದರು. ಇದಕ್ಕೆ ಸಚಿವರು ಸಮಾಧಾನದಿಂದಲೇ ಉತ್ತರಿಸಿದರು.

    ಈ ಬಾರಿ ಪರೀಕ್ಷೆ ಸಂದರ್ಭ ಯಾವುದೇ ಗೊಂದಲಗಳಿರುವುದಿಲ್ಲ. ಸಿದ್ಧತಾ ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಸೋರಿಕೆ ಮಾಡಿದವರು ಯಾರು ಎಂಬುದನ್ನು ಗುರುತಿಸಲಾಗಿದೆ. ಅವರ ವಿರುದ್ಧ ಶಿಸ್ತು ಕ್ರಮವನ್ನೂ ವಹಿಸಲಾಗುವುದು. ಆದರೆ ಮುಖ್ಯ ಪರೀಕ್ಷೆ ಸಂದರ್ಭದಲ್ಲಿ ಇಂತಹ ಯಾವುದೇ ಸಮಸ್ಯೆಗಳಾಗುವುದಿಲ್ಲ. ಧೈರ್ಯವಾಗಿ ಪರೀಕ್ಷೆ ಎದುರಿಸಿ ಎಂದು ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

    ಬಳಿಕ ನಾಪೋಕ್ಲು ಸರ್ಕಾರಿ ಶಾಲೆಯಲ್ಲಿ ಆರಂಭವಾದ ಪದವಿ ಪೂರ್ವ ಶಿಕ್ಷಣ ತರಗತಿಗಳನ್ನು ಉದ್ಘಾಟಿಸಿದರು. ನಂತರ ಅಲ್ಲಿಯೇ ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸೇವಿಸಿದರು.

  • ‘ಪಕ್ಕೆಲುಬು’ ಉಚ್ಚಾರಣೆ ತಪ್ಪಿದ ವಿದ್ಯಾರ್ಥಿ ವಿಡಿಯೋ ವೈರಲ್: ಶಿಕ್ಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

    ‘ಪಕ್ಕೆಲುಬು’ ಉಚ್ಚಾರಣೆ ತಪ್ಪಿದ ವಿದ್ಯಾರ್ಥಿ ವಿಡಿಯೋ ವೈರಲ್: ಶಿಕ್ಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

    – ವಿದ್ಯಾರ್ಥಿಗಳ ಕಲಿಕೆ ಬಗ್ಗೆ ವ್ಯಂಗ್ಯ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಕ್ಷಣ ಸಚಿವರ ಸೂಚನೆ

    ರಾಯಚೂರು: ರಾಜ್ಯದ ಶಾಲೆಯೊಂದರಲ್ಲಿ ಮಗುವೊಂದು ಶಿಕ್ಷಕರೊಬ್ಬರು ಹೇಳಿಕೊಡುತ್ತಿರುವ ‘ಪಕ್ಕೆಲುಬು’ ಪದವನ್ನು ಸರಿಯಾಗಿ ಉಚ್ಚರಿಸಲು ಬಾರದೇ ಪದೇ ಪದೇ ತಪ್ಪು ಹೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ದಿನಗಳಿಂದ ವೈರಲ್ ಆಗಿದೆ. ಆದರೆ ಈ ವಿಡಿಯೋವನ್ನು ಪ್ರಾಥಮಿಕ ಹಾಗೂ ಪೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗಂಭೀರವಾಗಿ ತೆಗೆದುಕೊಂಡಿದ್ದಾರೆ.

    ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಸಚಿವರು, ಘಟನೆ ನಡೆದಿರುವ ಶಾಲೆಯನ್ನು ಪತ್ತೆ ಹಚ್ಚಬೇಕು. ಯಾವ ಶಿಕ್ಷಕರು ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಯ ಬಿಟ್ಟಿದ್ದಾರೆ ಎನ್ನುವುದನ್ನು ಪತ್ತೆ ಮಾಡಲು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ. ಜೊತೆಗೆ ಆ ಶಿಕ್ಷಕರ ಹಾಗೂ ಶಾಲಾ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಕೆಲಸಕ್ಕೆ ಮುಂದಾಗುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದೆಂಬ ಸೂತ್ತೋಲೆ ಹೊರಡಿಸಬೇಕು ಎಂದು ಸೂಚಿಸಿದ್ದಾರೆ.

    ಮಕ್ಕಳು ತಪ್ಪು ಉಚ್ಚಾರ ಮಾಡುವುದು ಸಹಜ. ನಿರಂತರ ಕಲಿಕೆಯ ನಂತರ ಆ ಪದದ ಕುರಿತು ಮಗುವಿಗೆ ಸ್ಪಷ್ಟತೆ ದೊರೆತಾಗ ಸರಿಯಾದ ಉಚ್ಚಾರ ಸಾಧ್ಯವಾಗುತ್ತದೆ. ಆದರೆ ಮಗುವೊಂದು ಕಲಿಕಾ ಹಂತದಲ್ಲಿ ತಪ್ಪು ಉಚ್ಚಾರ ಮಾಡುವುದನ್ನು ವಿಡಿಯೋದಲ್ಲಿ ಪ್ರಸಾರ ಮಾಡುತ್ತಿದ್ದರೆ ಮಗುವಿಗೆ ಗೊತ್ತಾದಾಗ ಆತನ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುತ್ತದೆ. ಜೊತೆಗೆ ಆ ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದುಳಿಯುತ್ತಾನೆ ಎಂದು ಸಚಿವರು ಕಾಳಜಿ ವ್ಯಕ್ತಪಡಿಸಿದ್ದಾರೆ.

    ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಉಚ್ಚಾರ ಮಾಡುವುದನ್ನು ಕಲಿಸಬೇಕೇ ಹೊರತು ಅದನ್ನೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಬಾರದು. ಇಂತಹ ಕೆಲಸ ನಿಜಕ್ಕೂ ಅಪರಾಧ. ತಕ್ಷಣವೇ ವಿಡಿಯೋ ವೈರಲ್ ಮಾಡಿದ ಶಾಲೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಸುರೇಶ್ ಕುಮಾರ್ ಆದೇಶಿಸಿದ್ದಾರೆ.

  • ಸರ್ಕಾರಿ ಶಾಲೆಗಳ ಹೆಸರಿಗೆ ಆಸ್ತಿ ನೋಂದಣಿ ಮಾಡಿಸಲು ಕ್ರಮ: ಸಚಿವ ಸುರೇಶ್ ಕುಮಾರ್

    ಸರ್ಕಾರಿ ಶಾಲೆಗಳ ಹೆಸರಿಗೆ ಆಸ್ತಿ ನೋಂದಣಿ ಮಾಡಿಸಲು ಕ್ರಮ: ಸಚಿವ ಸುರೇಶ್ ಕುಮಾರ್

    ಶಿವಮೊಗ್ಗ: ಸರ್ಕಾರಿ ಶಾಲೆಗಳ ಆಸ್ತಿಪಾಸ್ತಿಗಳನ್ನು ಶಾಲೆಗಳ ಹೆಸರಿಗೆ ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕೆ.ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಜಿಲ್ಲೆಯ ಸಾಗರ ತಾಲೂಕಿನ ಚದರವಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಸುರೇಶ್ ಕುಮಾರ್ ಮಾತನಾಡಿದರು. ಖಾಸಗಿ ಶಾಲೆಗಳ ಆಕರ್ಷಣೆ ಕಡಿಮೆ ಮಾಡಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಂತಹ ವಾತಾವರಣ ಸೃಷ್ಟಿಸುವ ಯೋಜನೆಗಳನ್ನು ರೂಪಿಸಲಾಗುತ್ತಿದೆ.

    ಸಾಂದರ್ಭಿಕ ಚಿತ್ರ

    ಶಾಲೆಗಳ ದುರಸ್ತಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ರಾಜ್ಯದಲ್ಲಿ 530 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಗೆ 34.48 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಸಾಗರ ತಾಲೂಕಿನಲ್ಲಿ 134 ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅಗತ್ಯ ಬಿದ್ದರೆ ಜಿಲ್ಲೆಗೆ ಹೆಚ್ಚುವರಿ ಅನುದಾನ ಒದಗಿಸಲಾಗುವುದು ಎಂದರು.

    ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು ಸೆಪ್ಟಂಬರಿನಿಂದ ನವೆಂಬರ್ ಒಳಗಾಗಿ ಆಯೋಜಿಸಲು ಸೂಚನೆ ನೀಡಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹರತಾಳು ಹಾಲಪ್ಪ ವಹಿಸಿದ್ದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ರಾಘವೇಂದ್ರ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

  • ಪ್ರಾಥಮಿಕ ಶಿಕ್ಷಣ ಸಚಿವರಿಂದ ಡಿ.16ರಂದು ಫೋನ್ ಇನ್ ಕಾರ್ಯಕ್ರಮ

    ಪ್ರಾಥಮಿಕ ಶಿಕ್ಷಣ ಸಚಿವರಿಂದ ಡಿ.16ರಂದು ಫೋನ್ ಇನ್ ಕಾರ್ಯಕ್ರಮ

    – ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ

    ಬೆಂಗಳೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳಲ್ಲಿ ಒಂದಿಲ್ಲೊಂದು ಸಮಸ್ಯೆ ಇದ್ದೆ ಇರುತ್ತದೆ. ಇಂತಹ ಸಮಸ್ಯೆಗಳನ್ನು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಹಂಚಿಕೊಳ್ಳಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವೇದಿಕೆ ಕಲ್ಪಿಸಿದೆ.

    ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಲ್ಲಿ ‘ಸಂವೇದನೆ’ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಡಿಸೆಂಬರ್ 16ರಂದು ಸಂಜೆ 5 ರಿಂದ 6.30 ಗಂಟೆವರೆಗೂ ಶಿಕ್ಷಣ ಸಚಿವರು ವಿವಿಧ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಕರೆ ಮಾಡಿ ಅಹವಾಲು, ಸಲಹೆ ಮತ್ತು ಸೂಚನೆಗಳನ್ನು ಪಡೆಯಬಹುದಾಗಿದೆ.

    ಸುರೇಶ್ ಕುಮಾರ್ ಅವರು ನವೆಂಬರ್ 2 ರಂದು ಮೊದಲ ಬಾರಿಗೆ ಫೋನ್ ಇನ್ ಕಾರ್ಯಕ್ರಮ ನಡೆಸಿದ್ದರು. ಈ ಮೂಲಕ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರ ಸಲಹೆ, ಸಮಸ್ಯೆಗಳನ್ನು ಆಲಿಸಿದ್ದರು. ಡಿಸೆಂಬರ್ 16ರಂದು ಸಚಿವರು ಎರಡನೇ ಫೋನ್ ಇನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಬಾರಿಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಸುರೇಶ್ ಕುಮಾರ್ ಅವರು, ಮಕ್ಕಳಲ್ಲಿ ಪರೀಕ್ಷೆ ಬಗ್ಗೆ ಭಯ ಹೋಗಲಾಡಿಸಲು ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು. ಈ ನಿಟ್ಟಿನಲ್ಲಿ ಪ್ರತಿ ತಿಂಗಳಲ್ಲಿ 2 ಬಾರಿ `ಸಂವೇದನೆ’ ಎನ್ನುವ ಫೋನ್ ಇನ್ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದ್ದರು.

    ಸುರೇಶ್ ಕುಮಾರ್ ಅವರಿಗೆ ಸಮಸ್ಯೆ, ಅವಹವಾಲು ಹಾಗೂ ಸಲಹೆ ನೀಡಿಲು ಬಯಸುವವರು ದೂರವಾಣಿ ಸಂಖ್ಯೆ 080- 26725654 ಅಥವಾ 080-26725655ಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

  • ಚುನಾವಣೆ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಬೇಡಿ – ಆಯೋಗಕ್ಕೆ ಸುರೇಶ್ ಕುಮಾರ್ ಪತ್ರ

    ಚುನಾವಣೆ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಬೇಡಿ – ಆಯೋಗಕ್ಕೆ ಸುರೇಶ್ ಕುಮಾರ್ ಪತ್ರ

    ಬೆಂಗಳೂರು: ಚುನಾವಣೆ ಕೆಲಸಗಳಿಗೆ ಶಿಕ್ಷರನ್ನು ಬಳಸಿಕೊಳ್ಳದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

    ಕರ್ನಾಟಕ ಮುಖ್ಯ ಚುನಾವಣೆ ಆಯೋಗಕ್ಕೆ ಈ ಕುರಿತು ಸುರೇಶ್ ಕುಮಾರ್ ಅವರು ಪತ್ರ ಬರೆದಿದ್ದು, ಚುನಾವಣೆ ಪ್ರಕ್ರಿಯೆ ಸೇರಿದಂತೆ ಹಲವು ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಪಾಠಗಳು ಸರಿಯಾದ ಸಮಯಕ್ಕೆ ಮುಗಿಯುತ್ತಿಲ್ಲ. ಶಿಕ್ಷಕರಿಗೆ ಶಾಲಾ ಚಟುವಟಿಕೆಗಳಲ್ಲಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಿಕ್ಷಕರನ್ನು ಚುನಾವಣೆ ಕೆಲಸಗಳಿಗೆ ಬಳಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

    ಇತರೆ ಕೆಲಸಗಳಿಂದ ಶಿಕ್ಷಕರಿಗೆ ವಿದ್ಯಾರ್ಥಿಗಳ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಿಕ್ಷಕರನ್ನು ಚುನಾವಣೆ ಕೆಲಸ ಹಾಗೂ ಮತಹಾಕಿಸುವ ಬಿಎಲ್‍ಓ ದಂತಹ ಕೆಲಸಗಳಿಂದ ವಿಮುಕ್ತಿಗೊಳಿಸಬೇಕು ಎಂದು ಚುನಾವಣೆ ಆಯೋಗಕ್ಕೆ ಬರೆದ ಪತ್ರದಲ್ಲಿ ಸಚಿವ ಸುರೇಶ್ ಕುಮಾರ್ ಉಲ್ಲೇಖಿಸಿದ್ದಾರೆ.

    ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೈತ್ರಿ ಸರ್ಕಾರ ಕೆಡವಿದ್ದ 17 ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ ಆರ್.ಆರ್ ನಗರ, ಮಸ್ಕಿ ಹೊರತುಪಡಿಸಿ 15 ಕ್ಷೇತ್ರಗಳ ಉಪಚುನಾವಣೆಗೆ ಭರದ ಸಿದ್ಧತೆ ನಡೆದಿದೆ. ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೇರೂರು, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆ.ಆರ್. ಪೇಟೆ, ಹುಣಸೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ.

    ಸೋಮವಾರದಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ನ.18 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನ.19ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ನ.21 ರಂದು ನಾಮಪತ್ರ ವಾಪಸ್‍ಗೆ ಕಡೆಯ ದಿನವಾಗಿದೆ. ಡಿಸೆಂಬರ್ 5 ರಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಡಿ.9 ರಂದು ಮತ ಎಣಿಕೆ ನಡೆಯಲಿದೆ.

  • ಜನರ ಭಾವನೆ ಎತ್ತಿ ಹಿಡಿದಿದ್ದಕ್ಕೆ ನೋಟಿಸ್ ಜಾರಿ ಸರಿಯಲ್ಲ: ಯತ್ನಾಳ್ ಪರ ಸಚಿವ ಸುರೇಶ್ ಕುಮಾರ್ ಬ್ಯಾಟ್

    ಜನರ ಭಾವನೆ ಎತ್ತಿ ಹಿಡಿದಿದ್ದಕ್ಕೆ ನೋಟಿಸ್ ಜಾರಿ ಸರಿಯಲ್ಲ: ಯತ್ನಾಳ್ ಪರ ಸಚಿವ ಸುರೇಶ್ ಕುಮಾರ್ ಬ್ಯಾಟ್

    ಮಡಿಕೇರಿ: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ಶಾಸಕರಾದ ಯತ್ನಾಳ್‍ಗೆ ನೋಟಿಸ್ ನೀಡಿದ್ದಾರೆ ಎಂದು ವ್ಯಾಖ್ಯಾನ ಮಾಡುವುದು ಸರಿಯಲ್ಲ. ಯಾವ ಉದ್ದೇಶಕ್ಕೆ ಅವರಿಗೆ ನೋಟಿಸ್ ಕೊಟ್ಟಿದ್ದಾರೆ ಎಂಬುದನ್ನು ವಿಚಾರಿಸುವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

    ನಗರದ ಖಾಸಗಿ ಶಾಲೆಯೊಂದರ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶೋಕಾಸ್ ನೊಟೀಸ್ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ನೋಟಿಸ್ ಎಂಬ ವ್ಯಾಖ್ಯಾನ ಸರಿಯಲ್ಲ ಎಂದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರದ ಲೆಕ್ಕಾಚಾರದ ಮಧ್ಯೆ ವ್ಯತ್ಯಾಸಗಳಾಗಿರಬಹುದು. ಪ್ರವಾಹದ ವೇಳೆ ಆಗಿರುವ ಮೂಲ ಸೌಕರ್ಯಗಳ ಹಾನಿ ಹಿನ್ನಲೆಯಲ್ಲಿ 38 ಸಾವಿರ ಕೋಟಿಯಷ್ಟು ನಷ್ಟವಾಗಿದೆ ಎಂದು ನಮ್ಮ ತಂಡ ವರದಿ ನೀಡಿದೆ. ನಮ್ಮ ಬಳಿ ಇದ್ದಷ್ಟು ಹಣದಿಂದ ಈಗಾಗಲೇ ಪರಿಹಾರ ಕೆಲಸಗಳನ್ನು ನಾವು ಪ್ರಾರಂಭಿಸಿದ್ದೇವೆ. ಪ್ರಾರಂಭಿಕ ಹಂತದಲ್ಲಿ ಸಂತ್ರಸ್ತರಿಗೆ ಹಾಗೂ ಒಂದಿಷ್ಟು ಮನೆಗಳ ನಿರ್ಮಾಣಕ್ಕೂ ಹಣ ಕೊಟ್ಟಿದ್ದೇವೆ. ಆದರೆ ಶಾಶ್ವತ ಕೆಲಸಗಳನ್ನು ಮಾಡಲು ಹೆಚ್ಚು ಹಣದ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಮಧ್ಯಂತರ ನೆರೆ ಪರಿಹಾರದ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದರು.

    ಕುಮಾರಸ್ವಾಮಿ ಯಾವ ಸಂದರ್ಭದಲ್ಲಿ ಏನೇನು ಹೇಳುತ್ತಾರೆ ಎನ್ನುವುದು ಜಗತ್ತಿಗೆ ಗೊತ್ತಿಲ್ಲ. ಈ ಬಗ್ಗೆ ನಾನು ವ್ಯಾಖ್ಯಾನ ಕೊಡುವ ಅಗತ್ಯವಿಲ್ಲ. ಹಾಗೆಯೇ ಸಿದ್ದರಾಮಯ್ಯನವರು ಇಷ್ಟು ದಿನ ವ್ಯಾಕರಣದ ಮೇಷ್ಟ್ರು ಆಗಿದ್ದವರು ಇದೀಗ ಈಗ ಇತಿಹಾಸ ಮೇಷ್ಟ್ರು ಆಗಲು ಹೊರಟಿದ್ದಾರೆ. ಇಂತಹ ಹೋಲಿಕೆ ಸಿದ್ದರಾಮಯ್ಯರ ರಾಜಕೀಯ ಧೋರಣೆಯನ್ನು ತೋರಿಸುತ್ತದೆ ಎಂದು ಸಿದ್ದರಾಮಯ್ಯನವರು ಮೋದಿಯವರನ್ನು ಹಿಟ್ಲರ್‍ಗೆ ಹೋಲಿಸಿದ್ದರ ಕುರಿತು ತಿರುಗೇಟು ನೀಡಿದರು.

    ರಾಜ್ಯದಲ್ಲಿ ಸಿಎಂ ಪುತ್ರ ಆಡಳಿತ ಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಆರೋಪಗಳಿಗೆ ಸಿಎಂ ಪುತ್ರ ಹಾಗೂ ಸಿಎಂ ಎಲ್ಲರೂ ಸ್ಪಷ್ಟನೆ ಕೊಟ್ಟಿದಾರೆ. ನಾವೇ ಆಡಳಿತ ಮಾಡುತ್ತಿರುವುದು, ಸಂವಿಧಾನೇತರ ವ್ಯಕ್ತಿಗಳು ಯಾರೂ ಆಡಳಿತ ಮಾಡುತ್ತಿಲ್ಲ ಎಂದರು.

    ಮಕ್ಕಳ ಕಲಿಕಾ ಸಾಮಥ್ರ್ಯ ಹೆಚ್ಚಿಸಲು ಈ ವರ್ಷದಿಂದಲೇ 7ನೇ ತರಗತಿಗೆ ಪಬ್ಲಿಕ್ ಪರಿಕ್ಷೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದೇವೆ. ಮುಂದಿನ ವರ್ಷದಿಂದ ಪೂರ್ಣವಾಗಿ ಅಳವಡಿಸುತ್ತೇವೆ. ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

  • ಖೇಲೋ ಇಂಡಿಯಾ ಆ್ಯಪ್‍ನಲ್ಲಿ 22 ಭಾಷೆಗಳನ್ನು ಸೇರಿಸಿ- ಕೇಂದ್ರಕ್ಕೆ ಸುರೇಶ್ ಕುಮಾರ್ ಪತ್ರ

    ಖೇಲೋ ಇಂಡಿಯಾ ಆ್ಯಪ್‍ನಲ್ಲಿ 22 ಭಾಷೆಗಳನ್ನು ಸೇರಿಸಿ- ಕೇಂದ್ರಕ್ಕೆ ಸುರೇಶ್ ಕುಮಾರ್ ಪತ್ರ

    ಬೆಂಗಳೂರು: ಖೇಲೋ ಇಂಡಿಯಾ ಆ್ಯಪ್‍ನಲ್ಲಿ 22 ಭಾಷೆಗಳ ಆಯ್ಕೆಯನ್ನು ನೀಡುವ ಮೂಲಕ ಇತರರಿಗೆ ಬೇಗ ಅರ್ಥವಾಗುವಂತೆ ಅನುಕೂಲ ಮಾಡಿಕೊಡಬೇಕೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

    ಕೇಂದ್ರ ಯುವಜನಸೇವೆ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಅವರಿಗೆ ಸುರೇಶ್ ಕುಮಾರ್ ಪತ್ರ ಬರೆದು ಮನವಿ ಮಾಡಿದ್ದಾರೆ. ಖೇಲೋ ಇಂಡಿಯಾ ಆ್ಯಪ್‍ನ್ನು 22 ಭಾಷೆಗಳಲ್ಲಿ ದೊರೆಯುವಂತೆ ಮಾಡುವ ಮೂಲಕ ಪ್ರಾದೇಶಿಕ ಯುವಕರಿಗೆ ಬೇಗನೇ ಮಾಹಿತಿ ದೊರೆಯಲು ಅನುಕೂಲ ಮಾಡಿಕೊಡಬೇಕು. ಪ್ರಸ್ತುತ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಮಾಹಿತಿ ದೊರೆಯುತ್ತಿದೆ. ಪ್ರಾದೇಶಿಕ ಭಾಷೆಗಳಲ್ಲಿಯೂ ಮಾಹಿತಿ ದೊರೆಯುವಂತೆ ಮಾಡಬೇಕು. ಇದರಿಂದ ಹಿಂದಿ-ಇಂಗ್ಲಿಷ್ ತಿಳಿಯದ ಯುವ ಸಮೂಹಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

    ಸಂವಿಧಾನಿಕವಾಗಿ ಮಾನ್ಯತೆ ಪಡೆದಿರುವ ಎಲ್ಲ 22 ಭಾಷೆಗಳಲ್ಲೂ ಎಲ್ಲ ರೀತಿಯ ಮಾಹಿತಿ ಸಿಗಬೇಕು. ಎಲ್ಲ ಭಾಷೆಯಲ್ಲೂ ಸಿಕ್ಕರೆ ದೇಶವ್ಯಾಪಿಯಾಗಿ ಸುಲಭವಾಗಿ ಎಲ್ಲರಿಗೂ ತಿಳಿಯುತ್ತದೆ. ಹೆಚ್ಚು ಜನ ಇದರ ಸದುಪಯೋಗ ಪಡೆಯುತ್ತಾರೆ. ಹೀಗಾಗಿ 22 ಭಾಷೆಗಳಲ್ಲೂ ಆ್ಯಪ್ ದೊರೆಯುವಂತೆ ಮಾಡಿ ಎಂದು ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

    ಇದೇ ವೇಳೆ ಗುಣಾತ್ಮಕ ಶಿಕ್ಷಣ ಅನುಷ್ಠಾನಕ್ಕೆ ವೇಳಾಪಟ್ಟಿ ರಚಿಸಲು ಸಲಹಾ ಸಮಿತಿ ರಚಿಸುವಂತೆ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ರಾಜ್ಯ ಮಟ್ಟದ ಸಲಹಾ ಮಂಡಳಿ ರಚಿಸುವಂತೆ ಪ್ರಾಥಮಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಸೂಚನೆ ನೀಡಿದ್ದಾರೆ. ಈ ಕುರಿತು ಒಂದು ವಾರದಲ್ಲಿ ವರದಿ ನೀಡುವಂತೆ ಸಮಯವನ್ನು ನಿಗದಿಪಡಿಸಿದ್ದಾರೆ. ದಸರಾ ಮುಗಿದ ಕೂಡಲೇ ಗುಣಾತ್ಮಕ ಶಿಕ್ಷಣ ಅಭಿಯಾನ ಪ್ರಾರಂಭವಾಗಬೇಕು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.