Tag: Minister Suresh Kumar

  • ಪ್ರಥಮ ಪಿಯು ಮೌಲ್ಯಮಾಪನವನ್ನು ಪರೀಕ್ಷೆ ಎಂದು ತಪ್ಪಾಗಿ ಪರಿಭಾವಿಸುವುದು ಬೇಡ: ಸುರೇಶ್ ಕುಮಾರ್

    ಪ್ರಥಮ ಪಿಯು ಮೌಲ್ಯಮಾಪನವನ್ನು ಪರೀಕ್ಷೆ ಎಂದು ತಪ್ಪಾಗಿ ಪರಿಭಾವಿಸುವುದು ಬೇಡ: ಸುರೇಶ್ ಕುಮಾರ್

    ಬೆಂಗಳೂರು : ಪದವಿಪೂರ್ವ ಶಿಕ್ಷಣ ಇಲಾಖೆಯು ಈಗಾಗಲೇ ಮೊದಲ ಪಿಯು ತರಗತಿಗಳ ವಾರ್ಷಿಕ ಪರೀಕ್ಷೆಗಳನ್ನು ರದ್ದು ಮಾಡಿ ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಿದೆ. ಮುಂದಿನ ವರ್ಷಗಳಲ್ಲಿ ಅವರು ವಿವಿಧ ಇಲಾಖೆ/ಸಂಸ್ಥೆಗಳ ವತಿಯಿಂದ ಪಡೆಯಬಹುದಾದ ವಿದ್ಯಾರ್ಥಿ ವೇತನ ಸೌಲಭ್ಯ ಸೇರಿದಂತೆ ಹಲವು ಸವಲತ್ತುಗಳನ್ನು ಪಡೆಯಲು ತೊಂದರೆಯಾಗದೇ ಇರುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಮುಂದಿನ ತರಗತಿಗಳಿಗೆ ದಾಖಲಾತಿ ಪಡೆಯಲು ಅನುವು ಮಾಡಿಕೊಡುವ ಮೂಲಕ ಅವರ ಕಲಿಕೆಯ ನಿರಂತರತೆಯನ್ನು ಕಾಪಾಡುವ ಉದ್ದೇಶದಿಂದಷ್ಟೇ ಮೌಲ್ಯಮಾಪನವೆಂಬ ಔಪಚಾರಿಕ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.

    ಈ ಕುರಿತಂತೆ ಇಲಾಖೆಯು ಹೊರಡಿಸಿರುವ ಸುತ್ತೋಲೆಯ ಆಶಯಗಳು ಸ್ಪಷ್ಟವಿವೆ. ಇದರಲ್ಲಿ ಪರೀಕ್ಷೆ ನಡೆಸುವ ಆಶಯ ಇಲ್ಲ. ಯಾವುದೇ ವಿದ್ಯಾರ್ಥಿಯು ಭೌತಿಕವಾಗಿ ಕಾಲೇಜಿಗೆ ಹಾಜರಾಗಬಾರದು. ಅಸೇನ್ ಮೆಂಟ್ ಗಳನ್ನು ವಾಟ್ಸಪ್, ಇಮೇಲ್ ಅಲ್ಲದೇ ಅಂಚೆ ಮೂಲಕವೂ ವಿದ್ಯಾರ್ಥಿಗೆ ತಲುಪಿಸಬಹುದು. ಮಾದರಿ ಪ್ರಶ್ನೆ ಪತ್ರಿಕೆಗಳು ಇಲಾಖೆಯ ವೆಬ್ ಸೈಟ್ ನಲ್ಲಿಯೂ ಲಭ್ಯವಿದೆ. ಇಲಾಖೆಯ ಡಾಟಾಬೇಸ್ ನಲ್ಲಿ ನಮೂದಾಗಿರುವ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಪ್ರಶ್ನೆ ಪತ್ರಿಕೆಯ ಲಿಂಕ್ ಗಳನ್ನೂ ಕಳುಹಿಸಿಕೊಡಲಾಗಿದೆ.

    ಮನೆಯಲ್ಲಿಯೇ ಕುಳಿತು ಅಸೇನ್ ಮೆಂಟ್ ಗೆ ಉತ್ತರಗಳನ್ನು ಸಿದ್ಧಪಡಿಸಿದ ಬಳಿಕ, ವಿದ್ಯಾರ್ಥಿಗಳು ಅಂಚೆ, ವಾಟ್ಸಪ್, ಇಮೇಲ್ ಹೀಗೆ ಯಾವ ಮಾದರಿಯಲ್ಲಿಯಾದರೂ ತಮ್ಮ ಕಾಲೇಜಿಗೆ ಸಲ್ಲಿಸುವ ಕ್ರಮ ಅನುಸರಿಸಬಹುದಾಗಿದೆ.

    ಕನಿಷ್ಟ ಅಂಕಗಳನ್ನು ನೀಡುವುದಲ್ಲದೇ ಉತ್ತರ ಪತ್ರಿಕೆಗಳನ್ನು ಸಲ್ಲಿಸಿದ ವಿದ್ಯಾರ್ಥಿಗಳಿಗೆ ಸೂಕ್ತ ಮೌಲ್ಯಾಂಕನವನ್ನು ನೀಡಲು ಉಪನ್ಯಾಸಕರಿಗೆ ಸೂಚನೆ ನೀಡಲಾಗಿದ್ದು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇದು ಅತ್ಯವಶ್ಯಕವಾಗಿದೆ.

    ಹಾಗಾಗಿ ಇದನ್ನು ಪರೀಕ್ಷೆ ಎಂದು ತಪ್ಪಾಗಿ ಪರಿಭಾವಿಸುವುದಾಗಲೀ, ಪಾಸುಫೇಲು ಎಂದು ತಪ್ಪಾಗಿ ಅರ್ಥೈಸುವುದಾಗಲೀ ಮಾಡಬಾರದೆಂದು ಸಚಿವರು ಮನವಿ ಮಾಡಿದ್ದಾರೆ. ಉಪನ್ಯಾಸಕರು-ಪ್ರಾಂಶುಪಾಲರು ತಮ್ಮ ಜವಾಬ್ದಾರಿಯನ್ನು ಅರ್ಥೈಸಿಕೊಂಡು ತಮ್ಮ ವಿದ್ಯಾರ್ಥಿಗಳ ಒಳಿತಿಗಾಗಿ ಉದಾತ್ತವಾದ ಮನೋಭಾವದಿಂದ ಈ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ಕರೆ ನೀಡಿದ್ದಾರೆ.

  • ಕೋವಿಡ್ ಕೆಲಸದಲ್ಲಿ ಮೃತಪಟ್ಟ ಶಿಕ್ಷಕರ ವಿವರ ಸಲ್ಲಿಸುವಂತೆ ಸೂಚನೆ: ಸುರೇಶ್ ಕುಮಾರ್

    ಕೋವಿಡ್ ಕೆಲಸದಲ್ಲಿ ಮೃತಪಟ್ಟ ಶಿಕ್ಷಕರ ವಿವರ ಸಲ್ಲಿಸುವಂತೆ ಸೂಚನೆ: ಸುರೇಶ್ ಕುಮಾರ್

    ಬೆಂಗಳೂರು: ಕೋವಿಡ್ ಕೆಲಸದಲ್ಲಿ, ಉಪಚುನಾವಣೆಯಲ್ಲಿ ನಿರತರಾಗಿ ಮೃತಪಟ್ಟ ಶಿಕ್ಷಕರ, ಉಪನ್ಯಾಸಕರ ವಿವರ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

    ಕೋವಿಡ್ ಕಾರ್ಯದಲ್ಲಿ ನಿರತರಾದ ಹಾಗೂ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಹಲವು ಶಿಕ್ಷಕರು ಹಾಗೂ ಪದವಿಪೂರ್ವ ಉಪನ್ಯಾಸಕರು ಸಾವನ್ನಪ್ಪಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ಸುರೇಶ್ ಕುಮಾರ್ ಈ ಕುರಿತಂತೆ ಕೂಡಲೇ ಶಿಕ್ಷಕರ ವರದಿಯನ್ನು ಮಂಡಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

    ಕಳೆದ ಏಪ್ರಿಲ್ 2021ರಿಂದ ಇಲ್ಲಿಯವರೆಗೆ ಕೋವಿಡ್ ಕಾರಣದಿಂದ ಮೃತಪಟ್ಟ ಶಿಕ್ಷಕರು ಹಾಗೂ ಉಪನ್ಯಾಸಕರ ವಯೋಮಾನ ಸಹಿತವಾಗಿ ಮೃತಪಟ್ಟ ಖಚಿತ ಕಾರಣಗಳನ್ನು ನೀಡಬೇಕು. ಈ ವರದಿಯನ್ನು ಶೀಘ್ರದಲ್ಲೇ ತಮಗೆ ಮಂಡಿಸಬೇಕೆಂದು ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಪದವಿಪೂರ್ವ ಶಿಕ್ಷಣ ನಿರ್ದೇಶಕರಿಗೆ ಸೂಚಿಸಿರುವ ಸಚಿವರು, ಇದು ದುರದೃಷ್ಟಕರವಾದ ಸಂಗತಿಯಾಗಿದ್ದು, ಶಿಕ್ಷಕರ ಕುಟುಂಬಗಳ ಬಗ್ಗೆ ತಮ್ಮ ತೀವ್ರವಾದ ಸಂತಾಪವಿದೆ ಎಂದಿದ್ದಾರೆ.

  • SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

    SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

    ಧಾರವಾಡ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಅಂತಿಮ ವೇಳಾ ಪಟ್ಟಿಯನ್ನು ಶಿಕ್ಷಣ ಇಲಾಖೆ ಸಚಿವ ಸುರೇಶ್‍ಕುಮಾರ್ ಪ್ರಕಟಣೆ ಮಾಡಿದ್ದಾರೆ.

    ವಿದ್ಯಾಕಾಶಿ ಧಾರವಾಡದಲ್ಲಿ ಈ ಕುರಿತಂತೆ ಮಾತನಾಡಿದ ಅವರು, ಇದೇ ಜೂನ್ 21 ರಿಂದ ಜುಲೈ 5 ರವರೆಗೆ ಪರೀಕ್ಷೆ ನಡೆಸಲಾಗುವುದು ಎಂದರು. ತಿಂಗಳ ಹಿಂದೆ ಈ ಬಗ್ಗೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು. ಆಕ್ಷೇಪಣೆ ಸಲ್ಲಿಸುವ ದಿನಾಂಕ ಮುಗಿದ ಕಾರಣ, ಪರೀಕ್ಷೆ ವೇಳಾಪಟ್ಟಿ ಅಂತಿಮಗೊಳಿಸಿದ್ದೇವೆ ಎಂದರು.

     

    ಪರೀಕ್ಷಾ ದಿನಾಂಕ ಪಟ್ಟಿಗಳು
    ಜೂನ್ 21- ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ
    ಜೂನ್ 24-ಗಣಿತ
    ಜೂನ್ 28-ವಿಜ್ಞಾನ
    ಜೂನ್ 30-ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೆಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು,
    ಜುಲೈ 2 – ದ್ವಿತೀಯ ಭಾಷೆ ಇಂಗ್ಲಿಷ್/ ಕನ್ನಡ
    ಜುಲೈ 5 – ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.

  • ಕಲಿಕಾರಹಿತ ವರ್ಷವೆಂದು ಘೋಷಣೆಯಾಗಿಲ್ಲ, ಇಲಾಖೆಯಲ್ಲಿ ಈ ಪರಿಕಲ್ಪನೆಯೇ ಇಲ್ಲ: ಸುರೇಶ್ ಕುಮಾರ್

    ಕಲಿಕಾರಹಿತ ವರ್ಷವೆಂದು ಘೋಷಣೆಯಾಗಿಲ್ಲ, ಇಲಾಖೆಯಲ್ಲಿ ಈ ಪರಿಕಲ್ಪನೆಯೇ ಇಲ್ಲ: ಸುರೇಶ್ ಕುಮಾರ್

    – ಮಕ್ಕಳು ಮತ್ತೊಂದು ವರ್ಷ ಅದೇ ತರಗತಿಯಲ್ಲಿ ಓದುವುದು ಸರಿಯಲ್ಲ

    ಬೆಂಗಳೂರು: ಕಲಿಕಾ ರಹಿತ ವರ್ಷ(zero academic year)ದ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ, ಇಲಾಖೆಯಲ್ಲಿ ಈ ಪರಿಕಲ್ಪನೆಯೇ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ಯಾವುದೇ ತರಗತಿಯ ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದಲೇ ಶಿಕ್ಷಣ ಇಲಾಖೆಯು ಪರ್ಯಾಯ ಬೋಧನಾ ಕ್ರಮಗಳನ್ನು ಚಾಲನೆಯಲ್ಲಿಟ್ಟಿದೆ. ಇಂದಿನಿಂದ ಚಂದನ ವಾಹಿನಿಯಲ್ಲಿ ಪ್ರಾರಂಭವಾಗಿರುವ ಐದರಿಂದ ಏಳನೇ ತರಗತಿಯ ಬೋಧನಾ ತರಗತಿಗಳು ಈ ಪ್ರಯತ್ನದ ಭಾಗವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಎಲ್ಲ ತರಗತಿಗಳ ಮಕ್ಕಳಿಗೆ ಪಠ್ಯ ಪುಸ್ತಕಗಳು ಪೂರೈಕೆಯಾಗಿವೆ. ಶಾಲೆಗಳಲ್ಲಿ ಶಿಕ್ಷಕರು ಹಾಜರಾಗುವ ಮೂಲಕ ವಿದ್ಯಾರ್ಥಿಗಳ ಕಲಿಕೆಯನ್ನು ಪರಾಮರ್ಶಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಖಚಿತ ಜವಾಬ್ದಾರಿಯನ್ನು ನಿರ್ವಹಿಸಿ, ಎಲ್ಲ ತರಗತಿಗಳ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸಲಿದ್ದಾರೆ. ಖಾಸಗಿ ಶಾಲೆಗಳು ಅನುಸರಿಸುತ್ತಿರುವ ಪರ್ಯಾಯ ಕ್ರಮಗಳೂ ಸಹ ವಿದ್ಯಾರ್ಥಿಗಳ ಕಲಿಕೆಯನ್ನು ಪ್ರೇರೇಪಿಸುವಂತಹವೇ ಆಗಿದೆ. ಯಾವ ವಿದ್ಯಾರ್ಥಿಯೂ ಕಲಿಕೆಯ ಅವಕಾಶದಿಂದ ವಂಚನೆಗೊಳಗಾಗಿಲ್ಲ. ಹೀಗಾಗಿ ಈ ವರ್ಷವನ್ನು ಕಲಿಕಾರಹಿತ ವರ್ಷ ಎನ್ನಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಶಾಲಾ ವಾತಾವರಣದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಸರ್ಕಾರ ಮುಕ್ತ ಮನಸ್ಸನ್ನು ಹೊಂದಿದೆ ಎಂದೂ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಅಲ್ಲದೆ ತಮ್ಮ ಫೇಸ್ಬುಕ್ ಖಾತೆ ಮೂಲಕ ಸಹ ಸ್ಪಷ್ಟಪಡಿಸಿದ್ದಾರೆ.

    ಫೇಸ್ಬುಕ್‍ನಲ್ಲಿ ಪೋಸ್ಟ್ ನಲ್ಲಿ ಏನಿದೆ?
    ಶೈಕ್ಷಣಿಕ ಶೂನ್ಯ ಕಲಿಕಾ ವರ್ಷ ಅಥವಾ zero academic year ಎಂಬ ಪದ ಇತ್ತೀಚೆಗೆ ಹುಟ್ಟಿದೆ. ಈ ಕುರಿತು ಅನಗತ್ಯ ಗೊಂದಲ ಉಂಟಾಗುತ್ತಿದೆ. ಶೂನ್ಯ ಕಲಿಕಾ ವರ್ಷ ಎಂಬ ಕಲ್ಪನೆ ಸಹ ಶಿಕ್ಷಣ ಇಲಾಖೆಯಲ್ಲಿ ಇಲ್ಲ. ನಾನು ಇಂದು ಈ ಕುರಿತು ಬಹಳ ಸ್ಪಷ್ಟವಾಗಿ ತಿಳಿಸಿದ್ದೇನೆ.

    ಈಗಾಗಲೇ ಒಂದನೇ ತರಗತಿಯಿಂದ ಏಳನೇ ತರಗತಿವರೆಗೂ ನಾವು ವಿವಿಧ ರೀತಿಯಲ್ಲಿ ಮಕ್ಕಳಿಗೆ ಪಾಠ ಕಲಿಸಿದ್ದೇವೆ. ಕೆಲವು ಶಾಲೆಗಳು ಆನ್‍ಲೈನ್ ಮೂಲಕ ಶಿಕ್ಷಣ ನೀಡಿವೆ. ಇನ್ನುಳಿದ ಶಾಲೆಗಳಲ್ಲಿ ದೂರದರ್ಶನ ಚಂದನ ವಾಹಿನಿ ಮೂಲಕ ಹಾಗೂ ಆಯಾ ಶಾಲೆಗಳ ಶಿಕ್ಷಕರು ಸುಮಾರು ಮೂರೂವರೆ ತಿಂಗಳ ಕಾಲ ನಡೆಸಿದ ವಿದ್ಯಾಗಮ ಕಾರ್ಯಕ್ರಮದ ಮೂಲಕ ಈ ತರಗತಿಯ ಮಕ್ಕಳಿಗೆ ಪಾಠವನ್ನು ಹೇಳಿಕೊಡಲಾಗುತ್ತಿದೆ.

    ಶೈಕ್ಷಣಿಕ #ಶೂನ್ಯ_ಕಲಿಕಾ_ವರ್ಷ ಅಥವಾ #zero_academic_year ಎಂಬ ಪದ ಇತ್ತೀಚೆಗೆ ಹುಟ್ಟಿದೆ. ಮತ್ತು ಈ ಕುರಿತು ಅನಗತ್ಯ ಗೊಂದಲ…

    Posted by Suresh Kumar S on Monday, November 23, 2020

    ಇಂದಿನಿಂದ 5,6 ಮತ್ತು 7ನೇ ತರಗತಿಗಳಿಗೆ ಪ್ರತಿದಿನ ಚಂದನ ವಾಹಿನಿಯ ‘ಸಂವೇದ’ ಕಾರ್ಯಕ್ರಮದ ಮೂಲಕ ನಿಗದಿತ ವೇಳೆಯಲ್ಲಿ ಪಾಠ ಪ್ರಾರಂಭವಾಗಿದೆ. ರಾಜ್ಯದ ಎಲ್ಲ ಮಕ್ಕಳಿಗೂ ಪಠ್ಯ ಪುಸ್ತಕಗಳನ್ನು ಜೂನ್-ಜುಲೈ ತಿಂಗಳಲ್ಲೇ ತಲುಪಿಸಲಾಗಿದೆ. ಇಷ್ಟೆಲ್ಲ ಆದ ನಂತರವೂ ತಮ್ಮದಲ್ಲದ ತಪ್ಪಿಗೆ ಮಕ್ಕಳು ಮತ್ತೊಂದು ವರ್ಷ ಅದೇ ತರಗತಿಯಲ್ಲಿ ಓದಬೇಕು ಎನ್ನುವುದು ಸರಿಯಲ್ಲ. ಹಿಂದಿನ ವರ್ಷ ಸಹ ಒಂದನೇ ತರಗತಿಯಿಂದ 9ರವರೆಗೂ ಪರೀಕ್ಷೆ ಇಲ್ಲದೆ ಎಲ್ಲ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗಿತ್ತು. ಯಾವುದೇ ಕಾರಣಕ್ಕೂ ಯಾವುದೇ ಶಾಲೆಯಲ್ಲಿ ಯಾವುದೇ ತರಗತಿಗಳಿಗೆ ಶೂನ್ಯ ವರ್ಷ ಎಂಬುದು ಇಲ್ಲ, ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆ.

  • ಕೊರೊನಾ ನಿಯಮ ಗಾಳಿಗೆ ತೂರಿ ಅಕ್ರಮವಾಗಿ ಟ್ಯೂಷನ್- ಸೋಂಕಿನ ಭೀತಿಯಲ್ಲಿ ಮಕ್ಕಳು

    ಕೊರೊನಾ ನಿಯಮ ಗಾಳಿಗೆ ತೂರಿ ಅಕ್ರಮವಾಗಿ ಟ್ಯೂಷನ್- ಸೋಂಕಿನ ಭೀತಿಯಲ್ಲಿ ಮಕ್ಕಳು

    – ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟ

    ಗದಗ: ಡೆಡ್ಲಿ ವೈರಸ್‍ನಿಂದ ರಾಜ್ಯದಲ್ಲಿ ಇನ್ನು ಶಾಲೆಗಳು ಶುರುವಾಗಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಗದಗ ನಗರದ ಕೆಲ ಶಿಕ್ಷಕರು ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

    ಕೊರೊನಾ ಭಯದಲ್ಲಿ ಸರ್ಕಾರವೇ ಇನ್ನೂ ಶಾಲೆಗಳನ್ನು ಶುರು ಮಾಡಿಲ್ಲ. ಇನ್ನು ವಠಾರ ಶಾಲೆಯಾದ ವಿದ್ಯಾಗಮ ತರಗತಿಗಳನ್ನು ನಿಲ್ಲಿಸಲಾಗಿದೆ. ಪಾಠಕ್ಕಿಂತ ಮಕ್ಕಳ ಜೀವ ಮುಖ್ಯ. ಹೀಗಾಗಿ ಸರ್ಕಾರವೇ ಶಾಲೆಗಳನ್ನು ತೆರೆಯಲು ಇನ್ನೂ ಧೈರ್ಯ ಮಾಡಿಲ್ಲ. ಆದರೆ ಗದಗದಲ್ಲಿ ಮಾತ್ರ ಟ್ಯೂಷನ್ ಹೆಸರಲ್ಲಿ ಸರ್ಕಾರ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

    ಕೊಠಡಿ ತುಂಬಾ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು, ಯಾವುದೇ ಸಾಮಾಜಿಕ ಅಂತರದವಿಲ್ಲದೆ ಅಕ್ಕಪಕ್ಕದಲ್ಲೇ ಕುಳಿತು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಸರ್ಕಾರಿ ಶಾಲೆ ಶಿಕ್ಷಕರು, ಉಪನ್ಯಾಸಕರೇ ತಮ್ಮ ಮನೆಗಳಲ್ಲಿ, ಚಿಕ್ಕಪುಟ್ಟ ರೂಮ್‍ನಲ್ಲಿ ಟ್ಯೂಷನ್ ನಡೆಸುತ್ತಿದ್ದಾರೆ. ವಿದ್ಯಾದಾನ ಸಮಿತಿ ಶಾಲೆ ಹೈಸ್ಕೂಲ್‍ನ ಶಿಕ್ಷಕ ರಾಮಚಂದ್ರ ಮೋನೆ ಎಂಬುವರು ಈ ರೀತಿ ಮಕ್ಕಳನ್ನು ಗುಡ್ಡೆ ಹಾಕಿಕೊಂಡು ಟ್ಯೂಷನ್ ನಡೆಸುತ್ತಿದ್ದಾರೆ.

    ಒಂದೇ ಕೊಠಡಿಯಲ್ಲಿ 60ಕ್ಕೂ ಹೆಚ್ಚು ಮಕ್ಕಳಿಗೆ ಪಾಠ ಮಾಡ್ತಿದ್ದಾರೆ. 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ಇವರ ಬಳಿ ಟ್ಯೂಷನ್‍ಗೆ ಬರುತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಶಿಕ್ಷಕರಿಗೆ ಪ್ರಶ್ನೆ ಮಾಡಿದರೇ ಅವರು ಕೊಡುವ ಸಮಜಾಯಿಷಿನೇ ಬೇರೆಯಾಗಿದೆ. ಪೋಷಕರ ಒಪ್ಪಿಗೆ ಪಡ್ಕೊಂಡು ಮಕ್ಕಳು ಟ್ಯೂಷನ್‍ಗೆ ಬಂದಿದ್ದಾರೆ. ಹೀಗಾಗಿ ಅವರಿಗೆ ಕೊರೊನಾ ಬರಲ್ಲ ಎಂದಿದ್ದಾರೆ.

    ಇತ್ತ ಶಿಕ್ಷಕರ ಟ್ಯೂಷನ್ ಫೀಸ್ ಕೇಳಿದರೆ ಶಾಕ್ ಹೋಗುವುದು ಪಕ್ಕ ಏಕೆಂದರೆ, ಶಾಲಾ ಮಕ್ಕಳಿಗೆ ಒಂದು ವಿಷ್ಯಕ್ಕೆ ಪಾಠ ಮಾಡೋದಕ್ಕೆ 5 ಸಾವಿರ. ಗಣಿತ-ವಿಜ್ಞಾನ ಎರಡೂ ವಿಷ್ಯಗಳಿಗೆ ಟ್ಯೂಷನ್ ಮಾಡೋದಕ್ಕೆ 10 ಸಾವಿರ ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಹಣದ ದಾಹ ಒಂದು ಕಡೆಯಾದರೆ ಸರ್ಕಾರ ಅನುಮತಿ ಇಲ್ಲದೇ ತರಗತಿಗಳನ್ನು ನಡೆಸುವುದು ಹಾಗೂ ಯಾವುದೇ ಕೊರೊನಾ ಮುನ್ನೆಚ್ಚರಿಕೆ ವಹಿಸದಿರುವುದು ಸೋಂಕು ಹೆಚ್ಚಳವಾಗಲು ಕಾರಣವಾಗುವ ಸಾಧ್ಯತೆ ಇದೆ.

  • ಶೀಘ್ರವೇ ಪಿಯುಸಿ, ಎಸ್‍ಎಸ್‍ಎಲ್‍ಸಿ ಬೋರ್ಡ್ ವಿಲೀನ: ಸಚಿವ ಸುರೇಶ್ ಕುಮಾರ್

    ಶೀಘ್ರವೇ ಪಿಯುಸಿ, ಎಸ್‍ಎಸ್‍ಎಲ್‍ಸಿ ಬೋರ್ಡ್ ವಿಲೀನ: ಸಚಿವ ಸುರೇಶ್ ಕುಮಾರ್

    ಬೆಂಗಳೂರು: ಶೀಘ್ರವೇ ಪಿಯುಸಿ ಶಿಕ್ಷಣ ಮಂಡಳಿ ಮತ್ತು ಎಸ್‍ಎಸ್‍ಎಲ್‍ಸಿ ಮಂಡಳಿ ಎರಡನ್ನು ವಿಲೀನ ಮಾಡುತ್ತೇವೆ. ಎರಡು ಮಂಡಳಿಗಳನ್ನು ಒಂದೇ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ಇಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿಯುಸಿ ಬೋರ್ಡ್ ಮತ್ತು ಎಸ್‍ಎಸ್‍ಎಲ್‍ಸಿ ಬೋರ್ಡ್ ಎರಡನ್ನು ವಿಲೀನ ಮಾಡಲು ಸರ್ಕಾರದ ನಿರ್ಧರಿಸಿದೆ. “ಪ್ರಾಥಮಿಕ ಶಿಕ್ಷಣ ಪರಿಷತ್” ಶಿಕ್ಷಣ ಇಲಾಖೆಯಲ್ಲಿ ಪ್ರಾರಂಭ ಮಾಡುತ್ತೇವೆ. ಸ್ವಾಭಿಮಾನಿ ಸರ್ಕಾರಿ ಶಾಲೆಯಾಗಿ ಸರ್ಕಾರಿ ಶಾಲೆಗಳನ್ನ ಅಭಿವೃದ್ಧಿ ಮಾಡುತ್ತೇವೆ. ಉತ್ತಮ ಶಿಕ್ಷಕರಿಗೆ ವಿಶೇಷ ಪ್ರಶಸ್ತಿ ನೀಡುವ ಕೆಲಸವನ್ನು ಇಲಾಖೆ ಮಾಡುತ್ತದೆ ಎಂದರು.

    ನಿನ್ನೆಗೆ ನಾನು ಶಿಕ್ಷಣ ಇಲಾಖೆಯ ಸಚಿವನಾಗಿ ಒಂದು ವರ್ಷ ಪೂರ್ಣಗೊಂಡಿದ್ದು, ಇದೊಂದು ಸವಾಲುಗಳಿಂದ ಕೂಡಿದ ವರ್ಷವಾಗಿತ್ತು. ಪ್ರಾರಂಭದಲ್ಲೇ ಪ್ರವಾಹದಿಂದ ಶಾಲಾ ಕಟ್ಟಡಗಳು ಬಿದ್ದು ಹೋದವು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಆರ್ಥಿಕ ಶಕ್ತಿ ನೀಡಿದರು. ಇದಾಗುತ್ತಿದಂತೆ ಕೊರೊನಾ ಸೋಂಕಿನ ಪ್ರಭಾವ ಹೆಚ್ಚಾಗಿತ್ತು. ಇದು ಶಿಕ್ಷಣ ಇಲಾಖೆ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದರು.

    ಕೊರೊನಾ ಕಾರಣದಿಂದ ಶಾಲೆ ಯಾವಾಗ ಪ್ರಾರಂಭ ಮಾಡೋದು, ಹೇಗೆ ತರಗತಿ ನಡೆಸುವುದು ಎಂಬುವುದು ಇನ್ನು ಗೊತ್ತಿಲ್ಲ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಕೋವಿಡ್ ಸಮಯದಲ್ಲೇ ಯಶಸ್ವಿಯಾಗಿ ನಡೆಸಿದ್ದೇವೆ. ಸಿಎಂ ಯಡಿಯೂರಪ್ಪ ನಮಗೆ ಧೈರ್ಯ ಕೊಟ್ಟು ಪರೀಕ್ಷೆ ಮಾಡಿಸಿದರು. ಆ ಬಳಿಕ ಪಿಯುಸಿ ಪರೀಕ್ಷೆ ಕೂಡ ಮಾಡಿದ್ದೇವು. ಆದ್ದರಿಂದ ನೀಟ್, ಜೆಇಇ ಪರೀಕ್ಷೆ ಬೇಡ ಎನ್ನುವರರು ನಮ್ಮ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕಡೆ ಒಮ್ಮೆ ನೋಡಲಿ ಎಂದರು.

    ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ಸಮಸ್ಯೆ ಇತ್ತು. ಈಗ ಅದಕ್ಕೆ ಹೊಸ ಕಾನೂನು ಜಾರಿಗೆ ತಂದಿದ್ದೇನೆ. ಸೆಪ್ಟೆಂಬರ್ ನಲ್ಲಿ ಶಿಕ್ಷಣ ವರ್ಗಾವಣೆ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ. ಶಿಕ್ಷಣ ತಜ್ಞರ ಮಾರ್ಗದರ್ಶನದಲ್ಲಿ ವಿದ್ಯಾಗಮ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ. ಈ ವರ್ಷ 1 ಸಾವಿರ ಉಭಯ ಮಾಧ್ಯಮಗಳ ತರಗತಿ ಪ್ರಾರಂಭ ಮಾಡುತ್ತೇವೆ. ಹೊಸ ಶಿಕ್ಷಣ ನೀತಿ ಜಾರಿಗೆ ಬಂದಿದ್ದು, ಇದನ್ನು ರಾಜ್ಯದಲ್ಲಿ ಜಾರಿ ಮಾಡುತ್ತೇವೆ ಎಂದು ವಿವರಿಸಿದರು.

  • ಆನ್‍ಲೈನ್ ತರಗತಿ, ಶಾಲೆಗಳ ಪ್ರಾರಂಭ- ಸರ್ಕಾರಕ್ಕೆ ತಜ್ಞರ ಸಮಿತಿ ಸಲ್ಲಿಸಿದ ವರದಿಯಲ್ಲೇನಿದೆ?

    ಆನ್‍ಲೈನ್ ತರಗತಿ, ಶಾಲೆಗಳ ಪ್ರಾರಂಭ- ಸರ್ಕಾರಕ್ಕೆ ತಜ್ಞರ ಸಮಿತಿ ಸಲ್ಲಿಸಿದ ವರದಿಯಲ್ಲೇನಿದೆ?

    ಬೆಂಗಳೂರು: ಆನ್ ಲೈನ್ ತರಗತಿ ಮತ್ತು ಶಾಲೆಗಳ ಪ್ರಾರಂಭಕ್ಕೆ ಸಂಬಂಧಿಸಿದಂತೆ ಸರ್ಕಾರ  ಡಾ. ಶ್ರೀಧರ್ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ವರದಿಯನ್ನು ಸಲ್ಲಿಕೆ ಮಾಡಿದೆ.

    ಮಕ್ಕಳ ದೈಹಿಕ ಮತ್ತು ಮಾನಸಿಕ ಹಾಗೂ ಆರೋಗ್ಯ ದೃಷ್ಟಿಯಿಂದ ಯಾವ ತರಗತಿಯ ಮಕ್ಕಳಿಗೆ ಎಷ್ಟು ಸಮಯ ಆನ್‍ಲೈನ್ ಶಿಕ್ಷಣ ನೀಡಬೇಕು. ಕೊರೊನಾ ಕಾರಣದಿಂದ ಶಾಲೆಗಳ ಪ್ರಾರಂಭ ಯಾವ ರೀತಿ ಆಗಬೇಕು ಎಂಬ ಬಗ್ಗೆ ಸಮಿತಿ ಮಾರ್ಗಸೂಚಿಗಳನ್ನು ರಚಿಸಿ ವರದಿ ನೀಡಿದೆ. ಸಮಿತಿಯ ಶಿಫಾರಸುಗಳ ಅನ್ವಯ ಸರ್ಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ.

    ಆನ್‍ಲೈನ್ ಶಿಕ್ಷಣಕ್ಕೆ ಸಮಿತಿಯ ಶಿಫಾರಸ್ಸುಗಳು:
    1) ಪೂರ್ವ ಪ್ರಾಥಮಿಕ ತರಗತಿ ಮತ್ತು 2 ನೇ ತರಗತಿವರೆಗೆ ಆನ್‍ಲೈನ್ ತರಗತಿ ವೇಳೆ ಪೋಷಕರ ಉಪಸ್ಥಿತಿ ಕಡ್ಡಾಯವಾಗಿ ಇರಬೇಕು.
    2) ಆನ್‍ಲೈನ್ ತರಗತಿ ಗರಿಷ್ಠ ಪರದೆ ಸಮಯ 30 ನಿಮಿಷ ಮಾತ್ರ ಇರಬೇಕು.
    3) 6ನೇ ತರಗತಿ ನಂತರ ಹೆಚ್ಚುವರಿ 15 ನಿಮಿಷ ನೀಡಬಹುದು.
    4) 2 ನೇ ತರಗತಿಗೆ ಪರ್ಯಾಯ ದಿನಗಳು. 3 ನೇ ತರಗತಿ ನಂತರ ವಾರಕ್ಕೆ 5 ದಿನ ಆನ್ ಲೈನ್ ತರಗತಿ ನೀಡಬೇಕು. ಎರಡು ದಿನ ಆಫ್ ಲೈನ್ ತರಗತಿ ಕಡ್ಡಾಯವಾಗಿರಬೇಕು.
    5) ಆನ್‍ಲೈನ್, ಆಫ್‍ಲೈನ್ ತರಗತಿಗೆ ಅವಕಾಶ ನೀಡಲಾಗಿದೆ.

    6) ಆನ್‍ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಒತ್ತಾಯ ಮಾಡಬಾರದು.
    7) ಆನ್‍ಲೈನ್ ತರಗತಿಯನ್ನ ಅಗತ್ಯ ಸೈಬರ್ ಸುರಕ್ಷತೆ ಮತ್ತು ದುರುಪಯೋಗ ನಿಷೇಧಿಸುವ ಷರತ್ತಿನಲ್ಲಿ ಒದಗಿಬೇಕು.
    8) ದೂರದರ್ಶನ, ರೇಡಿಯೋ ಮೂಲಕ ಬೋಧನಾ ವ್ಯವಸ್ಥೆ ಪ್ರಾರಂಭ ಮಾಡಬೇಕು.

    ಶಾಲೆಗಳ ಪ್ರಾರಂಭಕ್ಕೆ ಸಮಿತಿ ಶಿಫಾರಸ್ಸು:
    1) ಗ್ರಾಮೀಣ, ನಗರ ಪ್ರದೇಶ ಮತ್ತು ಜನದಟ್ಟಣೆಯ ಪ್ರದೇಶದಲ್ಲಿ ಕೆಂಪು, ಕಿತ್ತಳೆ, ಹಸಿರು ಭಾಗಗಳಾಗಿ ವಿಂಗಡಿಸಬೇಕು.
    2) ಈ ಆಧಾರದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡು ಶಾಲೆ ಪ್ರಾರಂಭಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
    3) ಶಾಲಾ ದಿನಗಳ ಸಂಖ್ಯೆ, ಸುರಕ್ಷತಾ, ನೈರ್ಮಲ್ಯ ಕಾರ್ಯ ವಿಧಾನ ಅನುಸರಿಸಬೇಕು. ಇದಕ್ಕೆ ಅಗತ್ಯ ಮಾರ್ಗಸೂಚಿ ಬಿಡುಗಡೆ ಮಾಡಬೇಕು.
    4) ಶಾಲೆಗಳು ಪ್ರಾರಂಭ ಮಾಡುವ ಕೆಲಸ ಪ್ರಾಮಾಣಿಕವಾಗಿ ಇರಬೇಕು. ಮಗುವಿನ ಹಿತಾಸಕ್ತಿಯನ್ನ ಗಮನದಲ್ಲಿಟ್ಟುಕೊಂಡು ನವೀನ ಪರಿಹಾರಗಳನ್ನ ಹುಡುಕಬೇಕು.
    5) ಮಾರ್ಗಸೂಚಿಗಳು ಉಲ್ಲಂಘನೆಯಾಗದಿರುವವರೆಗೂ ಶಾಲೆಗಳಿಗೆ ಶಿಕ್ಷಣ ಒದಗಿಸಲು ಅವಕಾಶ ನೀಡಬೇಕು. ಶಿಕ್ಷಣ ತಜ್ಞರು ಶಾಲೆಯಲ್ಲಿದ್ದು ಮಕ್ಕಳು, ಪೋಷಕರಿಗೆ ಅಗತ್ಯ ತಿಳುವಳಿಕೆ ನೀಡುವುದು.

    6) ಶಾಲೆಗಳು ನೀಡುವ ಮಾರ್ಗಸೂಚಿ ಉಲ್ಲಂಘನೆ ಆದ್ರೆ ಪೋಷಕರು ದೂರು ನೀಡಬಹುದು.
    7) ಕೊರೊನಾ ಸಂದರ್ಭ ಗಮನದಲ್ಲಿಟ್ಟುಕೊಂಡು ಪಠ್ಯಕ್ರಮದಲ್ಲಿ ಪರಿಷ್ಕರಿಸಬೇಕು.
    8) ಶಾಲೆಗಳು ಪರ್ಯಾಯ ಶೈಕ್ಷಣಿಕ ಪಠ್ಯ ಕ್ರಮ, ಕ್ಯಾಲೆಂಡರ್, ವೇಳಾಪಟ್ಟಿ ರಚನೆ ಮಾಡಿಕೊಳ್ಳಬೇಕು.
    9) ಮಕ್ಕಳಿಗೆ ಚಟುವಟಿಕೆಗಳನ್ನು ಕೈಗೊಳ್ಳುಲು ವರ್ಕ್ ಶೀಟ್, ಚಟುವಟಿಕೆ ಹಾಳೆ, ಹ್ಯಾಂಡ್ ಔಟ್ ಗಳನ್ನು ನೀಡಬೇಕು.
    10) ತಂತ್ರಜ್ಞಾನ ವಿಧಾನ ಬಳಸಲು ಸಾಧ್ಯವಾಗದ ಯಾವುದೇ ಮಗು ಶಾಲೆಯಿಂದ ಹೊರಗೆ ಉಳಿಯಬಾರದು. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು.
    11) ವಿಶೇಷ ಅಗತ್ಯವಿರುವ ಮಕ್ಕಳಿಗೆ ವಿಶೇಷ ಕಾಳಜಿವಹಿಸಬೇಕು.

  • ಇತಿಹಾಸ ಸೃಷ್ಟಿಸಿ ದೇಶಕ್ಕೆ ಮಾದರಿಯಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಸುರೇಶ್ ಕುಮಾರ್

    ಇತಿಹಾಸ ಸೃಷ್ಟಿಸಿ ದೇಶಕ್ಕೆ ಮಾದರಿಯಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಸುರೇಶ್ ಕುಮಾರ್

    ಬೆಂಗಳೂರು: ಜೂನ್ 25ರಿಂದ ಜುಲೈ 3ರವರೆಗೆ ನಡೆದ 2019-20ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ವಿದ್ಯಾರ್ಥಿಗಳು, ಪೋಷಕರು, ವಿವಿಧ ಇಲಾಖೆಗಳು ಮತ್ತು ಜಿಲ್ಲಾಡಳಿತಗಳ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆದಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಆರನೇ ದಿನದ ಪರೀಕ್ಷೆಯ ನಂತರ ಶುಕ್ರವಾರ ಸಂಜೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆರು ದಿನಗಳ ಅವಧಿಯ ಪರೀಕ್ಷೆಗಳಲ್ಲಿ ಪ್ರತಿದಿನ ಸರಾಸರಿ 7.5 ಲಕ್ಷ ವಿದ್ಯಾಥಿಗಳು ಯಾವುದೇ ಸಮಸ್ಯೆಯಿಲ್ಲದ ರೀತಿಯಲ್ಲಿ ಪರೀಕ್ಷೆಗಳನ್ನು ಧೈರ್ಯವಾಗಿ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಎದುರಿಸಿದ್ದಾರೆ ಎಂದು ಹೇಳಿದರು.

    ಈಗಾಗಲೇ ಹೇಳಿದಂತೆ ನಮಗೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ನಡೆಸುವುದು ಬಹುದೊಡ್ಡ ಸವಾಲಾಗಿತ್ತು. ಅದು ನಮ್ಮ ಪ್ರತಿಷ್ಠೆಯ ಪ್ರಶ್ನೆಯಾಗದೇ ವಿದ್ಯಾರ್ಥಿಗಳ ಹಿತ ಹಾಗೂ ಸುರಕ್ಷತೆಯೇ ಮುಖ್ಯವಾಗಿತ್ತು. ಆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಾವು ಸರ್ಕಾರದ ಪ್ರಯತ್ನವಾಗಿ ಬಹು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಇದು ನನಗೆ ನಿಜಕ್ಕೂ ಹೆಮ್ಮೆ ಹಾಗೂ ಅಭಿಮಾನದ ಸಂಗತಿಯಾಗಿದೆ ಎಂದು ಅವರು ಹೇಳಿದರು.

    ಕರ್ನಾಟಕ ಸರ್ಕಾರ ಈ ಪರೀಕ್ಷೆಗಳನ್ನು ನಡೆಸುವ ಮೂಲಕ ಒಂದು ಇತಿಹಾಸವನ್ನು ಸೃಷ್ಟಿಸಿದೆ. ನ್ಯಾಯಾಲಯಗಳಲ್ಲಿ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದವು. ಆಗಲೇ ನಾನು ರಾಜ್ಯಾದ್ಯಂತ ಕೋವಿಡ್ ಸಮಯವೆಂದೂ ಲೆಕ್ಕಿಸದೇ ಸಂಚರಿಸಲು ಶುರು ಮಾಡಿದೆ. ನಾನು ಭೇಟಿ ಮಾಡಿದ ಅಸಂಖ್ಯ ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕೆ ಪರೀಕ್ಷೆ ಬೇಕು ಎಂದು ನನ್ನನ್ನು ಆಗ್ರಹಿಸಿದರು. ನಮ್ಮ ಜಿಲ್ಲೆಗಳ ಅಧಿಕಾರಿಗಳು ಎಂತಹ ಸಂದರ್ಭದಲ್ಲಿಯೂ ತಾವು ದೃತಿಗೆಡದೇ ಈ ಪರೀಕ್ಷೆಗಳನ್ನು ನಡೆಸುತ್ತೇವೆ ಎಂದು ಆತ್ಮವಿಶ್ವಾಸವನ್ನು ತೋರಿದರು. ಪುನಃ ನಾನು ಬೆಂಗಳೂರಿಗೆ ವಾಪಾಸು ಬಂದು ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡುವ ನಿಟ್ಟಿನಲ್ಲಿ ಭರವಸೆಯ ಉತ್ತರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ನಮ್ಮ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದೆ ಎಂದು ಸುರೇಶ್ ಕುಮಾರ್ ಪರೀಕ್ಷೆಗೆ ಸಂಬಂಧಿಸಿದ ವಿವಿಧ ಮಜಲುಗಳನ್ನು ವಿವರಿಸಿದರು.

    ಆರೋಗ್ಯ ಇಲಾಖೆ ಕಟ್ಟುನಿಟ್ಟಾದ ಮಾರ್ಗದರ್ಶಿ ಸೂತ್ರಗಳನ್ನು ನಮಗಾಗಿ ರಚಿಸಿಕೊಟ್ಟಿತು. ಆ ಮಾರ್ಗದರ್ಶಿ ಸೂತ್ರಗಳ ಮೇಲೆ ನ್ಯಾಯಾಲಯವು ಭರವಸೆಯನ್ನಿಟ್ಟು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿ ಪರೀಕ್ಷೆಗಳನ್ನು ನಡೆಸಲು ಅವಕಾಶ ಕೊಟ್ಟಿತು. ಅದೇ ರೀತಿ ಮುಂದಿನ ದಿನಗಳಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲೂ ಸಹ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಯಿತು. ಅಲ್ಲಿಯೂ ಸಹ ಸೂಕ್ತ ಆಕ್ಷೇಪಣಾ ಹೇಳಿಕೆಗಳನ್ನು ಸಲ್ಲಿಸಿದ ಬಳಿಕ ಸರ್ವೋಚ್ಛ ನ್ಯಾಯಾಲಯ ಪರೀಕ್ಷೆಗಳನ್ನು ನಡೆಸಲು ತನ್ನ ಹಸಿರು ನಿಶಾನೆ ತೋರಿಸಿತು ಎಂದು ಅವರು ಹೇಳಿದರು.

    ನಂತರ ನಮ್ಮಲ್ಲಿ ಘಟಿಸಿದ್ದು ಇತಿಹಾಸ. ಪ್ರತಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯುವ ಸುರಕ್ಷಿತ ವಾತಾವರಣವನ್ನು ನಾವು ಕಲ್ಪಿಸಬೇಕಾಗಿತ್ತು. ಪ್ರತಿ ಪೋಷಕರಿಗೆ ತಮ್ಮ ಮಗು ತಮ್ಮ ಮನೆಯಲ್ಲಿನ ಸುರಕ್ಷಿತ ವಾತಾವರಣದಷ್ಟೇ ಪರೀಕ್ಷಾ ಕೊಠಡಿ ಸುರಕ್ಷಿತವಾಗಿರುತ್ತದೆ ಎಂಬ ಭರವಸೆ ನೀಡಬೇಕಾಗಿತ್ತು. ನಮ್ಮ ಅಧಿಕಾರಿಗಳು ಪ್ರತಿ ಸೂಕ್ಷ್ಮ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆಯ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಾವುದೇ ಒಬ್ಬ ವಿದ್ಯಾರ್ಥಿಗೆ ತೊಂದರೆಯಾಗದ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಬೇಕಿತ್ತು. ನನ್ನ ಭರವಸೆಯನ್ನು ಅವರಾರು ಹುಸಿಗೊಳಿಸಲಿಲ್ಲ ಎಂದು ಸಚಿವರು ತಿಳಿಸಿದರು.

    ಪ್ರತಿ ಪರೀಕ್ಷೆಗೆ ಸರಾಸರಿ ಶೇ. 98 ವಿದ್ಯಾರ್ಥಿಗಳು ಹಾಜರಾಗಿ ವ್ಯವಸ್ಥೆಯ ಮೇಲಿನ ಭರವಸೆಯನ್ನು ತೋರಿದ್ದಾರೆ. ನೆರೆ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ, ಮಹಾರಾಷ್ಟ್ರಗಳು ಸೇರಿದಂತೆ ಬಹುಪಾಲು ರಾಜ್ಯ ಸರ್ಕಾರಗಳು ತಮ್ಮ ಮಂಡಳಿಗಳ ಪರೀಕ್ಷೆಗಳನ್ನು ಮಾಡದೇ ಹಿಂದೆ ಸರಿದವು. ನಾಡಿನ ಮಕ್ಕಳ ಹಿತ ಮತ್ತು ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರ ಇಚ್ಛೆಯಂತೆ ನಾವು ಪರೀಕ್ಷೆಗಳನ್ನು ನಡೆಸಿದ್ದೇವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಕೋವಿಡ್ ಕಾರಣಕ್ಕೆ ನಾವು ದೂರದರ್ಶನದ ಚಂದನ ವಾಹಿನಿಯಲ್ಲಿ ನಡೆಸಿದ ಪುನರ್‌ಮನನ ಕಾರ್ಯಕ್ರಮಗಳು ಆ ವಾಹಿನಿಯ ಸಾರ್ವಕಾಲೀಕ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದವು. ಲಕ್ಷಾಂತರ ವಿದ್ಯಾರ್ಥಿಗಳು ಆ ಪ್ರಯತ್ನದ ಫಲವನ್ನು ಪಡೆದವು. ಅದೇ ರೀತಿ ಆಕಾಶವಾಣಿಯಲ್ಲಿ ಪರೀಕ್ಷಾ ಪೂರ್ವ ಸಿದ್ಧತಾ ತರಗತಿಗಳು ಬಿತ್ತರಗೊಂಡವು. ನಮ್ಮ ಮಕ್ಕಳವಾಣಿ ಯೂ-ಟ್ಯೂಬ್ ಚಾನೆಲ್‍ನಲ್ಲೂ ಸಹ ಪುನರ್‌ಮನನ ತರಗತಿಗಳು ಬಿತ್ತರಗೊಂಡು ಜನಪ್ರಿಯತೆ ಗಳಿಸಿದವು ಎಂದು ಅವರು ತಿಳಿಸಿದರು.

    ಆರೋಗ್ಯ ಇಲಾಖೆ ನಿಗದಿಪಡಿಸಿದ ಮಾರ್ಗದರ್ಶಿ ಸೂತ್ರಗಳನ್ನು ಯಾವುದೇ ಒಂದು ಸಣ್ಣ ಲೋಪವಾಗದಂತೆ ಅಳವಡಿಸಿಕೊಂಡು ನಾವು  ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಕೋವಿಡ್ ಸೋಂಕಿತ 33 ವಿದ್ಯಾರ್ಥಿಗಳಿಗೆ ಪೂರ್ವಭಾವಿಯಾಗಿ ಪರೀಕ್ಷೆಯನ್ನು ನಿರಾಕರಿಸಿ ಅವರಿಗೆ ಮುಂದಿನ ಪೂರಕ ಪರೀಕ್ಷೆಗಳಲ್ಲಿ ಅವಕಾಶಗಳನ್ನು ಕಲ್ಪಿಸುವವರಿದ್ದೇವೆ ಎಂದು ತಿಳಿಸಿದರು.

    ಕೃತಜ್ಞತೆ:
    ಬಹು ವಿಶೇಷವೆಂದರೆ ಸುಮಾರು 7.5 ಲಕ್ಷ ವಿದ್ಯಾರ್ಥಿಗಳು ಪ್ರತಿದಿನ ಪರೀಕ್ಷೆಗಳನ್ನು ಬರೆದಿದ್ದಾರೆ. ಪರೀಕ್ಷೆಯ ಯಶಸ್ಸಿಗೆ ಸಹಕರಿಸಿ ಸಲಹೆ ಸೂಚನೆ ನೀಡಿ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಸಂಪುಟದ ಸಹೋದ್ಯೋಗಿಗಳು, ರಾಜ್ಯದ ವಿಧಾನಸಭೆ, ವಿಧಾನಪರಿಷತ್‍ನ ಎಲ್ಲ ಸದಸ್ಯರು, ವಿರೋಧ ಪಕ್ಷಕದ ನಾಯಕರು, ರಾಜ್ಯದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಜಿಲ್ಲೆಗಳ ಡಿಸಿ, ಎಸ್‌ಪಿ, ಸಿಇಒ, ಡಿಎಚ್‍ಒ, ಖಜಾನಾಧಿಕಾರಿಗಳು ಹಾಗೆಯೇ ಆಯಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೇರಿದಂತೆ ಪ್ರತ್ಯಕ್ಷ ಹಾಗೂ ಪರೀಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಚಿವ ಸುರೇಶ್ ಕುಮಾರ್ ಕೃತಜ್ಞತೆಗಳನ್ನು ಸಲ್ಲಿಸಿದರು.

    ಎಸ್‍ಒಪಿ ಕಟ್ಟುನಿಟ್ಟಿನ ಪಾಲನೆ:
    ಎಸ್‍ಒಪಿ ಪ್ರಕಾರ ಕೋವಿಡ್ ಸೋಂಕು ಇರುವ ಮನೆಗಳ ಮಕ್ಕಳಿಗೆ ಪರೀಕ್ಷೆಗೆ ಅವಕಾಶವಿರಲಿಲ್ಲ. ಅದರಂತೆ ಕೊನೆಯ ದಿನವಾದ ಇಂದು ರಾಜ್ಯದ ಹಿರಿಯ ಅಧಿಕಾರಿಯೊಬ್ಬರ ಮನೆಯಲ್ಲಿ ಒಬ್ಬರಿಗೆ ಸೋಂಕು ತಗಲಿದ್ದರಿಂದ ಇಂದು ಅವರ ಮನೆಯ ವಿದ್ಯಾರ್ಥಿಗೆ ಪರೀಕ್ಷೆ ನಿರಾಕರಿಸಲಾಯಿತು. ಈ ವಿಚಾರದಲ್ಲಿ ಕಳೆದ ಆರು ದಿನಗಳಲ್ಲಿಯೂ ಯಾವುದೇ ರೀತಿಯ ವ್ಯತ್ಯಯವಾಗದಂತೆ ನ್ಯಾಯಾಲಯಕ್ಕೆ ನೀಡಿದ ವಾಗ್ದಾನದಂತೆ ಕಟ್ಟುನಿಟ್ಟಾಗಿ ನಡೆದುಕೊಳ್ಳಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಎಂತಹ ಸಂಕಷ್ಟದ ಸಂದರ್ಭವನ್ನೂ ಸುಲಭವಾಗಿ ದಾಟಬಹುದು ಮತ್ತು ಏನನ್ನಾದರೂ ಸಾಧಿಸಬಹುದೆನ್ನುವುದಕ್ಕೆ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾದರಿಯಾಗಿ ನಿಂತಿದೆ ಎಂದು ಅವರು ಹೇಳಿದರು.

    ಪರೀಕ್ಷೆ ಆರಂಭವಾದ ಮೇಲೆ ತಾವು ಹಲವಾರು ಜಿಲ್ಲೆಗಳ 80ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಎಲ್ಲಿಯೂ ಸಹ ನ್ಯಾಯಾಲಯಕ್ಕೆ ನೀಡಿದ ಎಸ್‍ಒಪಿಯನ್ನು ಯಾವುದೇ ಕಾರಣಕ್ಕೂ ಉಲ್ಲಂಘನೆಯಾಗಿಲ್ಲ. ಪರೀಕ್ಷಾ ಕೇಂದ್ರದ ಒಳಗೆ ಮತ್ತು ಹೊರಗೂ ಸಹ ಸಾಮಾಜಿಕ ಅಂತರವನ್ನು ಕಾಪಾಡಿ ಅತ್ಯಂತ ಸುರಕ್ಷಿತ ವಾತಾವರಣವನ್ನು ಕಾಯ್ದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

    ಈ ಪರೀಕ್ಷೆಯ ಯಶಸ್ಸು ಈ ಸಂದರ್ಭದಲ್ಲೂ ಧೈರ್ಯವಾಗಿ ಬಂದು ಪರೀಕ್ಷೆ ಬರೆದ ಮಕ್ಕಳು ಮತ್ತು ನಮ್ಮ ಮೇಲೆ ಭರವಸೆ ಇಟ್ಟು ಮಕ್ಕಳನ್ನು ಆಶೀರ್ವದಿಸಿ ಕಳಿಸಿದ ಪೋಷಕರಿಗೆ ಸಲ್ಲಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಡಾಕ್ಯೂಮೆಂಟರಿ ಪ್ರದರ್ಶನ:
    ಪತ್ರಿಕಾಗೋಷ್ಠಿಗೂ ಮೊದಲು ಪರೀಕ್ಷೆಯ ಕುರಿತಂತೆ ತಯಾರಿಸಲಾದ ವಿವಿಧ ಘಟನಾವಳಿಗಳ ಡಾಕ್ಯೂಮೆಂಟರಿಯನ್ನು ಪ್ರಸ್ತುತ ಪಡಿಸಲಾಯಿತು. ಈ ಪರೀಕ್ಷೆಗೆ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶ್ಲಾಘನೆ ವ್ಯಕ್ತಪಡಿಸಿದರು. ಹಲವಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳು ಹಾಗೂ ತಾವು ಖುಷಿಯಿಂದ ಪರೀಕ್ಷೆಯಲ್ಲಿ ಪಾಲ್ಗೊಂಡ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

    ಡಾಕ್ಯೂಮೆಂಟರಿಯಲ್ಲಿ ಸಿಎಂ ಬಿಎಸ್ ವೈ ಅವರು ವ್ಯಕ್ತಪಡಿಸಿದ ಅಭಿಪ್ರಾಯ ಇಂತಿದೆ:
    ಇಡೀ ದೇಶ ಹಿಂದಿರುಗಿ ನೋಡುವ ರೀತಿಯಲ್ಲಿ ಶಿಕ್ಷಣ ಇಲಾಖೆ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ನಡೆಸಿ ಸೈ ಎನಿಸಿಕೊಂಡಿದೆ. ಅತ್ಯಂತ ಸೂಕ್ಷ್ಮವಾದ ಸಾಮಾಜಿಕ ಸಂದರ್ಭದಲ್ಲಿ ಯಾವುದೇ ಸಣ್ಣ ಸಮಸ್ಯೆಗೂ ಅವಕಾಶ ನೀಡದೇ 8.5 ಲಕ್ಷ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಹಾಗೂ 6.5 ಲಕ್ಷ ಪಿಯುಸಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪರೀಕ್ಷೆಯನ್ನು ಬರೆಯುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಿದೆ. ದೇಶದ ಇತಿಹಾಸ ಪುಟಗಳಲ್ಲಿ ಸೇರಿ ಹೋಗುವ ಇಂತಹುದೊಂದು ಕ್ರಾಂತಿಕಾರಕ ಕೆಲಸವನ್ನು ನಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂತ್ರಿ ಎಸ್. ಸುರೇಶ್ ಕುಮಾರ್ ಮಾಡಿ ತಮ್ಮ ವೈಯಕ್ತಿಕ ದಕ್ಷತೆ ತೋರಿಸಿದ್ದಾರೆ. ರಾಜ್ಯಾದ್ಯಂತ ಓಡಾಡಿ ಮಕ್ಕಳನ್ನು, ಪೋಷಕರನ್ನು ಅವರು ಹುರಿದುಂಬಿಸಿದ್ದಾರೆ. ಅಧಿಕಾರಿಗಳು ಜಾಗರೂಕವಾಗಿ ಕೆಲಸ ಮಾಡಲು ಪ್ರೇರೇಪಿಸಿದ್ದಾರೆ. ಸುರೇಶ್ ಕುಮಾರ್ ಅವರಿಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.

    ಇಂದಿನ ಪರೀಕ್ಷೆಯ ಅಂಕಿ-ಅಂಶಗಳು ಈ ಕೆಳಕಂಡಂತಿದೆ: 
    ಏಳನೇ ದಿನವಾದ ಶುಕ್ರವಾರ ನಡೆದ ತೃತೀಯ ಭಾಷಾ ಪರೀಕ್ಷೆಗೆ ನೊಂದಾಯಿತ 7,76,251 ವಿದ್ಯಾರ್ಥಿಗಳ ಪೈಕಿ 7,61,506 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ. 98.10ರಷ್ಟು ಇಂದು ಹಾಜರಾತಿ ಇದೆ. 14,745 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. (ಕಳೆದ 2018-19ನೇ ಸಾಲಿಗೆ 7,72,071 ವಿದ್ಯಾರ್ಥಿಗಳ ಪೈಕಿ 7,62,538 ವಿದ್ಯಾರ್ಥಿಗಳು ಹಾಜರಾಗಿದ್ದು, 9533 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಶೇ. 98.76 ಹಾಜರಾತಿ ಇತ್ತು.)

    ಮೊದಲ ಬಾರಿಗೆ 7,43,477 ಶಾಲಾ ವಿದ್ಯಾರ್ಥಿಗಳು ಹಾಗೂ 20,857 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಂಟೈನ್‍ಮೆಂಟ್ ಪ್ರದೇಶಗಳ 3911 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 863 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಯಾವುದೇ ವಿದ್ಯಾರ್ಥಿಗಳು ಇರುವುದಿಲ್ಲ. ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿ ಇದ್ದು, 1446 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 639 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 41 ವಿದ್ಯಾರ್ಥಿಗಳು ಗೈರು ಹಾಜರಿಯಾಗಿ 590 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 12,644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, 12,535 ವಿದ್ಯಾರ್ಥಿಗಳು ಹಾಜರಾಗಿದ್ದರೆ, 109 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

    ಹೋಂ ಕ್ವಾರಂಟೈನಲ್ಲಿರುವ ಹಾಗೂ ಕೋವಿಡ್ ಪಾಸಿಟೀವ್ ಎಂದು ಗುರುತಿಸಲಾದ ವಿದ್ಯಾರ್ಥಿಗಳಿಗೆ ಈಗಿನ ಪರೀಕ್ಷೆಯನ್ನು ಬರೆಯುವುದರಿಂದ ವಿನಾಯ್ತಿ ನೀಡಲಾಗಿದೆ. ಈ ಎಲ್ಲರಿಗೂ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು. ಪರೀಕ್ಷಾ ಕೇಂದ್ರಕ್ಕೆ 3,212 ಬಸ್ ಹಾಗೂ ಇತರೆ ವಾಹನಗಳನ್ನು ಒಪ್ಪಂದದ ಮೇರೆಗೆ ಪಡೆದು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ.

    ಪರೀಕ್ಷಾ ಕೇಂದ್ರಗಳಿಗೆ ಭೇಟಿ:
    ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಆನೇಕಲ್, ಅತ್ತಿಬೆಲೆ, ದೊಮ್ಮಸಂದ್ರ, ಚಂದಾಪುರ, ಜಿಗಣಿ, ಹೆಬ್ಬಗೋಡಿ 12 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಎಲ್ಲ ವ್ಯವಸ್ಥೆಗಳನ್ನು ಗಮನಿಸಿದ್ದೇನೆ. ಎಲ್ಲ ಕಡೆ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಕ್ಕಳು ನೆಮ್ಮದಿ ಮತ್ತು ಆಹ್ಲಾದಕರ ವಾತಾವರಣದಲ್ಲಿ ಪರೀಕ್ಷೆ ಬರೆಯುತ್ತಿದ್ದುದು ಕಂಡುಬಂತು.

    ಕೆಲ ಪ್ರಮುಖ ಸಂಗತಿಗಳು:
    1. ಗದಗದಲ್ಲಿ ಮಕ್ಕಳನ್ನು ಮನೆಗಳಿಂದ ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ ಕರೆತರುತ್ತಿದ್ದ ಆಟೋ ಚಾಲಕರನ್ನು ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

    2. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಾರ್ಗ ಮಧ್ಯೆ ಮರ ಬಿದ್ದು, ಸಂಚಾರಕ್ಕೆ ವ್ಯತ್ಯಯವಾಗಿತ್ತು. ಸುದ್ದಿ ತಿಳಿದ ಸಾಗರ ಬಿಇಒ ಮಕ್ಕಳನ್ನು ಕರೆತರಲು ತಕ್ಷಣವೇ ಸಾರಿಗೆ ವ್ಯವಸ್ಥೆ ಮಾಡಿದರು. ಹಾಗೆಯೇ ಆ ಮಾರ್ಗದ ಪರೀಕ್ಷಾ ಕೇಂದ್ರಗಳಿಗೆ ತಮ್ಮದೇ ವಾಹನದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಕಾಲದಲ್ಲಿ ತಲುಪಿಸಿದರು.

    ಒಟ್ಟಾರೆಯಾಗಿ ಇಂದು 2,879 ಪರೀಕ್ಷಾ ಕೇಂದ್ರಗಳು ಮತ್ತು 330 ಬ್ಲಾಕ್ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್, ಸ್ವಯಂ ಸೇವಕರು ಅತ್ಯಂತ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರು ವ್ಯವಸ್ಥೆ ಮೇಲೆ ಇಟ್ಟ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ ಎಂದ ಸಚಿವರು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

     

  • ಕೊರೊನಾಗೆ ಹೆದರಿ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿನಿ, ಅಧಿಕಾರಿಗಳಿಂದ ಮನವೊಲಿಕೆ- ಸುರೇಶ್ ಕುಮಾರ್ ಮೆಚ್ಚುಗೆ

    ಕೊರೊನಾಗೆ ಹೆದರಿ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿನಿ, ಅಧಿಕಾರಿಗಳಿಂದ ಮನವೊಲಿಕೆ- ಸುರೇಶ್ ಕುಮಾರ್ ಮೆಚ್ಚುಗೆ

    ಧಾರವಾಡ: ಕೊರೊನಾಗೆ ಹೆದರಿ ಪರೀಕ್ಷೆಗೆ ಹಾಜರಾಗದೆ ಮನೆಯಲ್ಲಿ ಕುಳಿತಿದ್ದ ವಿದ್ಯಾರ್ಥಿನಿಯನ್ನು ಶಿಕ್ಷಕರು ಹಾಗೂ ಅಧಿಕಾರಿಗಳು ಮನವೊಲಿಸಿ, ಪರೀಕ್ಷೆ ಬರೆಸಿದ್ದಾರೆ.

    ಧಾರವಾಡದ ಅಳ್ನಾವರ ತಾಲೂಕಿನ ವಿದ್ಯಾರ್ಥಿನಿ ನಿರೀಕ್ಷಾ(ಹೆಸರು ಬದಲಿಸಲಾಗಿದೆ) ಕೊರೊನಾ ಭಯದಿಂದ ದ್ವಿತೀಯ ಭಾಷೆ ಪರೀಕ್ಷೆಗೆ ಗೈರಾಗಿದ್ದಳು. ಪಾಲಕರು ಸಹ ಏನೂ ಮಾತನಾಡಿರಲಿಲ್ಲ. ಆದರೆ ಪರೀಕ್ಷೆಗೆ ಗೈರಾಗಿದ್ದನ್ನು ಗಮನಿಸಿದ ಶಿಕ್ಷಕರು ಹಾಗೂ ಅಧಿಕಾರಿಗಳು, ಇಂದು ಬಾಲಕಿ ಮನೆಗೆ ತೆರಳಿ ವಿದ್ಯಾರ್ಥಿನಿ ಹಾಗೂ ಪೋಷಕರನ್ನು ಮನವೊಲಿಸಿದ್ದಾರೆ. ಅಧಿಕಾರಿಗಳ ಮನವೊಲಿಕೆ ಬಳಿಕ ಅಳ್ನಾವರದ ಕಸ್ತೂರಬಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿ ಇಂದು ಗಣಿತ ಪರೀಕ್ಷೆ ಬರೆದಿದ್ದಾಳೆ.

    ಮೊದಲ ದಿನ ನಿರೀಕ್ಷಾ ಪರೀಕ್ಷೆಗೆ ಗೈರಾಗಿದ್ದನ್ನು ಮನಗಂಡ ಅಧಿಕಾರಿಗಳು, ಇಂದು ಖುದ್ದು ಅವರ ಮನೆಗೆ ತೆರಳಿ ಪೋಷಕರು ಹಾಗೂ ನಿರೀಕ್ಷಾ ಮನವೊಲಿಸಿದ್ದಾರೆ. ಹೀಗಾಗಿ ಇಂದು ಗಣಿತ ಪರೀಕ್ಷೆ ಬರೆದಿದ್ದಾರೆ. ಶಿಕ್ಷಕರು ಮತ್ತು ಅಧಿಕಾರಿಗಳ ಈ ಕಾರ್ಯಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಎಸ್‍ಎಸ್‍ಎಲ್‍ಸಿ ಪರೀಕ್ಷೆ-ಕೊಪ್ಪಳದಲ್ಲಿ ಮೊದಲ ದಿನವೇ 1,166 ವಿದ್ಯಾರ್ಥಿಗಳು ಗೈರು

    ಎಸ್‍ಎಸ್‍ಎಲ್‍ಸಿ ಪರೀಕ್ಷೆ-ಕೊಪ್ಪಳದಲ್ಲಿ ಮೊದಲ ದಿನವೇ 1,166 ವಿದ್ಯಾರ್ಥಿಗಳು ಗೈರು

    ಕೊಪ್ಪಳ: ಜಿಲ್ಲೆಯಾದ್ಯಂತ ಇಂದು ಹಲವು ಅಡಚಣೆಗಳ ಮದ್ಯೆ ಎಸ್‍ಎಸ್‍ಎಲ್‍ಸಿಯ ಮೊದಲ ಪರೀಕ್ಷೆ ಮುಕ್ತಾಯವಾಗಿದೆ.

    ನಗರದಲ್ಲಿ ಕೋವಿಡ್-19 ಆಸ್ಪತ್ರೆ ಪಕ್ಕ ಇರುವ ಎಸ್‍ಎಫ್‍ಎಸ್ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ತೆರದಿದ್ದು, ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಪಕ್ಕದಲ್ಲೆ ಕೋವಿಡ್-19 ಆಸ್ಪತ್ರೆ ಇದ್ದರೂ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಯಡವಟ್ಟಿನಿಂದ ಸುಮಾರು 350 ವಿದ್ಯಾರ್ಥಿಗಳು ಭಯದಲ್ಲೆ ಪರೀಕ್ಷೆ ಬರೆದರು. ಹಳ್ಳಿಗಳಿಂದ ವಿದ್ಯಾರ್ಥಿಗಳನ್ನು ಕರೆತರಲು ಜಿಲ್ಲಾಡಳಿತ ಬಸ್ ವ್ಯವಸ್ಥೆ ಕಲ್ಪಿಸಿತ್ತು. ಆದರೆ ಕೊರೊನಾ ಭಯದಿಂದ ವಿದ್ಯಾರ್ಥಿಗಳು ಬಸ್ ಹತ್ತದೆ ಬೈಕ್ ಮೇಲೆ ಪರೀಕ್ಷೆ ಬರೆಯಲು ಬಂದಿದ್ದರು.

    ಇದೆಲ್ಲದರ ಮಧ್ಯೆ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಶಾಲೆಯ ಸಿಂಗಾರ ನೋಡಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವಿವೇಕಾನಂದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲು ಹಬ್ಬದ ವಾತಾವರಣ ನಿರ್ಮಿಸಿ, ಅಧಿಕಾರಿಗಳಿಂದ ಮತ್ತು ಶಿಕ್ಷಕರಿಂದ ಗೌರವವಂದನೆ ಸಲ್ಲಿಸಲಾಯಿತು ಎಂದು ಬರೆದುಕೊಂಡಿದ್ದಾರೆ.

    https://www.facebook.com/nimmasuresh/videos/3580190498674936

    ಇನ್ನು ಎಸ್‍ಎಫ್‍ಎಸ್ ಶಾಲೆಯಲ್ಲಿ ಸಣ್ಣ ಮಕ್ಕಳು ಉಪಯೋಗಿಸುವ ಡೆಸ್ಕ್ ನಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳನ್ನು ಕೂರಿಸಿ ಪರೀಕ್ಷೆ ಬರೆಸಿ ಎಡವಟ್ಟು ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 21,004 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,166 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಮರೆತು ಗುಂಪಾಗಿ ಸೇರಿದ ದ್ರಶ್ಯ ಕಂಡು ಬಂತು.