Tag: Minister ST Somashekhar

  • ಕೊರೊನಾ ನೆಗೆಟಿವ್ ವರದಿ ಇಲ್ಲದ ಒಂದು ವಾಹನ ಬಿಟ್ಟರೂ ಸಸ್ಪೆಂಡ್: ಸೋಮಶೇಖರ್

    ಕೊರೊನಾ ನೆಗೆಟಿವ್ ವರದಿ ಇಲ್ಲದ ಒಂದು ವಾಹನ ಬಿಟ್ಟರೂ ಸಸ್ಪೆಂಡ್: ಸೋಮಶೇಖರ್

    ಚಾಮರಾಜನಗರ: ಕೊರೊನಾ ನೆಗೆಟಿವ್ ವರದಿ ಇಲ್ಲದೆ ಒಂದು ವಾಹನವನ್ನು ಜಿಲ್ಲೆಯೊಳಗೆ ಬಿಟ್ಟರೂ ಸಸ್ಪೆಂಡ್ ಮಾಡಬೇಕಾಗುತ್ತೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

    ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ತಮಿಳುನಾಡು-ಕರ್ನಾಟಕ ಚೆಕ್ ಪೋಸ್ಟ್ ಗೆ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿದರು. ಈ ವೇಳೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಕರ್ನಾಟಕ-ತಮಿಳುನಾಡು ಗಡಿ ಭಾಗದ ಕೆಕ್ಕನಹಳ್ಳ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ್ದ ಸಚಿವ ಸೋಮಶೇಖರ್ ಕೊರೊನಾ ನೆಗೆಟಿವ್ ವರದಿ ಇಲ್ಲದಿದ್ದರೆ ಗಡಿಯಿಂದ ವಾಪಸ್ ಕಳುಹಿಸಿ ಎಂದು ತಿಳಿಸಿದರು.

    ನಾನು ಯಾವ ಸಮಯದಲ್ಲಿ ಬೇಕಾದರೂ ಬಂದು ಪರಿಶೀಲನೆ ನಡೆಸುತ್ತೇನೆ. ಚೆಕ್ ಪೋಸ್ಟ್ ದಾಟಿ ಬಂದ ವಾಹನವನ್ನು ಪರಿಶೀಲಿಸಿದಾಗ ನೆಗೆಟಿವ್ ವರದಿ ಇಲ್ಲದಿದ್ದರೆ ನೀವೇ ಜವಾಬ್ದಾರರು. ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಕಟ್ಟುನಿಟ್ಟಿನ ಬಂದೋಬಸ್ತ್ ಮಾಡಬೇಕು ಎಂದು ಸಚಿವ ಸೋಮಶೇಖರ್ ಖಡಕ್ ಸೂಚನೆ ನೀಡಿದರು.

  • ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವವರಿಗೆ 5 ವರ್ಷ ಗ್ರಾಮೀಣ ಸೇವೆ ಕಡ್ಡಾಯ ಮಾಡಿ- ಸಿಎಂಗೆ ಸೋಮಶೇಖರ್ ಪತ್ರ

    ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವವರಿಗೆ 5 ವರ್ಷ ಗ್ರಾಮೀಣ ಸೇವೆ ಕಡ್ಡಾಯ ಮಾಡಿ- ಸಿಎಂಗೆ ಸೋಮಶೇಖರ್ ಪತ್ರ

    ಬೆಂಗಳೂರು: ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವವರಿಗೆ ಗ್ರಾಮೀಣ ಸೇವೆ ಕಡ್ಡಾಯ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಚಿವ ಎಸ್.ಟಿ.ಸೋಮಶೇಖರ್ ಪತ್ರ ಬರೆದಿದ್ದಾರೆ.

    ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವವರಿಗೆ ಕನಿಷ್ಟ 5 ವರ್ಷಗಳ ಕಾಲ ಗ್ರಾಮೀಣ ಸೇವೆ ಕಡ್ಡಾಯ ಮಾಡಬೇಕು ಎಂದು ಎಸ್.ಟಿ.ಸೋಮಶೇಖರ್ ಒತ್ತಾಯಿಸಿದ್ದಾರೆ.

    ಈ ಹಿಂದೆ ಸಹ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಸರ್ಕಾರಿ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಮಾಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ವೈದ್ಯಕೀಯ ಪದವಿ ಪಡೆಯುವವರಿಗೆ ಇಂಟರ್ನ್‍ಶಿಪ್ ಅಥವಾ ಇಂತಿಷ್ಟು ವರ್ಷಗಳ ಕಾಲ ಗ್ರಾಮೀಣ ಸೇವೆ ಕಡ್ಡಾಯ ಮಾಡಬೇಕು ಎಂದು ಹಲವರು ಧ್ವನಿ ಎತ್ತಿದ್ದರು. ಇದಕ್ಕೆ ಕೆಲವರು ವಿರೋಧ ಸಹ ವ್ಯಕ್ತಪಡಿಸಿದ್ದರು. ಇದೀಗ ಸಚಿವ ಎಸ್.ಟಿ.ಸೋಮಶೇಖರ್ ಅವರು ಸಿಎಂಗೆ ಪತ್ರ ಬರೆಯುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.

    ಪತ್ರದಲ್ಲಿ ಏನಿದೆ?
    ನಮ್ಮ ರಾಜ್ಯದಲ್ಲಿ ಪ್ರತಿಭಾವಂತರಿಗೇನೂ ಕೊರತೆ ಇಲ್ಲ. ಹಾಗೇ ರಾಜ್ಯ ಸರ್ಕಾರ ಸಹ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಹಾಗೂ ಆರ್ಥಿಕ ಸಹಕಾರವನ್ನು ನೀಡುತ್ತಾ ಬಂದಿದೆ. ಇದಕ್ಕೆ ವೈದ್ಯಕೀಯ ಶಿಕ್ಷಣ ರಂಗವೂ ಹೊರತಾಗಿಲ್ಲ. ಪ್ರತಿ ವರ್ಷ ವೈದ್ಯಕೀಯ ಶಿಕ್ಷಣಕ್ಕೆ ಸರ್ಕಾರ ಅಗಾಧವಾಗಿ ಖರ್ಚು ಮಾಡುತ್ತಾ ಬಂದಿದೆ. ಸರ್ಕಾರಿ ಕೋಟಾದಲ್ಲಿ ಓದುವ ಒಬ್ಬ ವೈದ್ಯಕೀಯ ವಿದ್ಯಾರ್ಥಿ ವಿದ್ಯಾಭ್ಯಾಸ ಅವಧಿಯನ್ನು ಮುಗಿಸುವ ಹೊತ್ತಿಗೆ ಸರ್ಕಾರದಿಂದ 40 ರಿಂದ 50 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಸರ್ಕಾರ ಇಷ್ಟೆಲ್ಲಾ ವೆಚ್ಚ ಮಾಡಿದರೂ ನಮ್ಮ ಪ್ರತಿಭೆಗಳು ನಮಗೆ ದಕ್ಕುತ್ತಿಲ್ಲ. ಕೆಲವು ವೈದ್ಯರು ನಮ್ಮ ಸೌಲಭ್ಯವನ್ನು ಪಡೆದು, ಕಲಿತು ವಿದೇಶಗಳಿಗೆ ಹೋಗಿ ಅಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹೀಗಾಗಿ ನಮ್ಮ ರಾಜ್ಯದಲ್ಲಿ ವೈದ್ಯರ ಕೊರತೆ ಹೆಚ್ಚಾಗುತ್ತಿದೆ. ತಮ್ಮ ಕಾಲಾವಧಿಯಲ್ಲಿ ಇಂಥದ್ದೊಂದು ಪ್ರಕ್ರಿಯೆಗೆ ಕಡಿವಾಣ ಬೀಳಬೇಕಿದೆ. ನಮ್ಮ ಪ್ರತಿಭೆಗಳು ನಮ್ಮಲ್ಲಿಯೇ ಸೇವೆ ಸಲ್ಲಿಸುವಂತಾಗಬೇಕು. ಪ್ರತಿಭಾ ಪಲಾಯನ ನಿಲ್ಲುವಂತಾಗಬೇಕು.

    ಸರ್ಕಾರಿ ಕೋಟಾದಲ್ಲಿ ಕಲಿತ ವೈದ್ಯರು ಕನಿಷ್ಠ ನಮ್ಮ ರಾಜ್ಯದಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಬೇಕು. ಈ ಮೂಲಕ ನಮ್ಮ ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ಸಹ ನುರಿತ ತಜ್ಞ ವೈದ್ಯರ ಸೇವೆ ಲಭಿಸಬೇಕು. ಇಂದು ಹಳ್ಳಿ ಎಂದರೆ ಮೂಗು ಮುರಿಯುವ ಮನೋಭಾವ ಹೆಚ್ಚಾಗುತ್ತಿದೆ. ಆದರೆ ಹಳ್ಳಿ ಸಶಕ್ತವಾಗಿದ್ದರೆ, ಆರೋಗ್ಯವಾಗಿದ್ದರೆ ದೇಶದ ಅಭಿವೃದ್ಧಿ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕಿದೆ. ಹಳ್ಳಿಗಳಲ್ಲಿ ಕೆಲಸ ಮಾಡುವ ಮನೋಭಾವಕ್ಕೆ ನಾವು ಪ್ರೋತ್ಸಾಹ ನೀಡಬೇಕಿದ್ದು, ಇದಕ್ಕೊಂದು ಸೂಕ್ತ ಕಾನೂನು ಚೌಕಟ್ಟು ನಿರ್ಮಾಣ ಮಾಡುವುದು ಮುಖ್ಯವಾಗುತ್ತದೆ.

    ಹೀಗಾಗಿ ನಮ್ಮ ರಾಜ್ಯದ ಸಕಲ ಸೌಕರ್ಯವನ್ನು ಪಡೆದು ವೈದ್ಯರಾಗಿ ಹೊರ ಬರುವ ಪ್ರತಿಯೊಬ್ಬರೂ ಸಹ ರಾಜ್ಯದಲ್ಲಿ 5 ವರ್ಷ ಕಡ್ಡಾಯವಾಗಿ ವೃತ್ತಿಯನ್ನು ಸಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಕಾನೂನೊಂದನ್ನು ತಾವು ರೂಪಿಸಬೇಕು. ಈಗಾಗಲೇ ಹೀಗೆ ಸೇವೆ ಮಾಡುವ ವೈದ್ಯರಿಗೆ ಅತಿ ಹೆಚ್ಚಿನ ವೇತನವನ್ನು ನೀಡುತ್ತೇವೆ. ಸೌಲಭ್ಯಗಳನ್ನು ಕೊಡುತ್ತೇವೆಂದರೂ ವೈದ್ಯರು ಮುಂದೆ ಬರುತ್ತಿಲ್ಲ. ಹೀಗಾಗಿ ಈ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅನುದಾನವನ್ನು ಕಲ್ಪಿಸಿಕೊಡುವ ಮೂಲಕ ಹಳ್ಳಿಗಳಿಗೂ ಉತ್ತಮ ವೈದ್ಯಕೀಯ ಸೇವೆ ಲಭಿಸುವಂತೆ ಮಾಡಬೇಕಿದೆ. ಈ ಮೂಲಕ ನಮ್ಮ ರಾಜ್ಯದ ಹಣವನ್ನು ಬಳಸಿ ವೈದ್ಯರಾದವರ ಸೇವೆಯನ್ನು ನಮ್ಮ ರಾಜ್ಯದ ನಾಗರಿಕರಿಗೇ ಲಭಿಸುವಂತಾಗಬೇಕು.

    ಈಗ ಕೊರೊನಾ ಸಂಕಷ್ಟ ಕಾಲವಾಗಿರುವುದರಿಂದ ಇಂಥದ್ದೊಂದು ನಿಲುವಿನ ಅಗತ್ಯವಿದೆ. ಜೊತೆಗೆ ಸರ್ಕಾರಿ ಸೌಲಭ್ಯ ಪಡೆಯುವ ಪ್ರತಿಯೊಬ್ಬರಲ್ಲೂ ಇಂತಹ ಮನೋಭಾವ ಬರಬೇಕಿದೆ. ಇಂತಹ ಸಂದಿಗ್ದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ವೈದ್ಯಕೀಯ ನೆರವು ಸಿಗಬೇಕೆಂದರೆ ಕಠಿಣವಾದ ನಿರ್ಧಾರವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ, ಸದನದಲ್ಲಿ ಮಂಡಿಸಿ ಜಾರಿಗೊಳಿಸಬೇಕಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಈ ಮೂಲಕ ಪ್ರತಿಭಾ ಪಲಾಯನಕ್ಕೆ ತಡೆ ಹಾಕಬೇಕಿದೆ.

    ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ಕಟ್ಟುನಿಟ್ಟಿನ ನೀತಿಯನ್ನು ಸರ್ಕಾರದಿಂದ ರಚಿಸಬೇಕಿದ್ದು, ವೈದ್ಯಕೀಯ ಶಿಕ್ಷಣ ಓದಿಗೆ ಅವರು ಮುಂದಾಗುವಾಗಲೇ ಸರ್ಕಾರಿ ಕೋಟಾದ ಲಾಭ ಪಡೆಯಬೇಕೆಂದಿದ್ದರೆ, ಅವರ ಮೆರಿಟ್ ಆಧಾರದ ಜೊತೆಗೆ ರಾಜ್ಯದಲ್ಲಿ 5 ವರ್ಷ ಸೇವೆ ಸಲ್ಲಿಸುತ್ತೇವೆಂಬ ಕರಾರಿಗೆ ಮೊದಲೇ ಸಹಿ ಹಾಕಿಸಿಕೊಳ್ಳುವಂತಹ ನಿಟ್ಟಿನಲ್ಲಿ ಕಾನೂನು ರೂಪಿಸಿದರೆ ಪರಿಹಾರ ದೊರಕಬಹುದು ಎಂಬುದು ನನ್ನ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ತಾವುಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಂಪುಟದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳುವಂತೆ ಮತ್ತೊಮ್ಮೆ ತಮ್ಮಲ್ಲಿ ಮನವಿ ಮಾಡುತ್ತೇನೆ.

  • ಲಾಕ್‍ಡೌನ್ ವಿಸ್ತರಣೆ ಸುಳಿವು ನೀಡಿದ: ಸಚಿವ ನಾರಾಯಣಗೌಡ

    ಲಾಕ್‍ಡೌನ್ ವಿಸ್ತರಣೆ ಸುಳಿವು ನೀಡಿದ: ಸಚಿವ ನಾರಾಯಣಗೌಡ

    ಲಾಕ್‍ಡೌನ್ ವಿಸ್ತರಿಸಲ್ಲ ಎಂದ ಸೋಮಶೇಖರ್

    ಮಂಡ್ಯ: ಬೆಂಗಳೂರಿನಲ್ಲಿ ಲಾಕ್‍ಡೌನ್ ಹೆಚ್ಚಿಸುವ ಸಂದರ್ಭ ಬರಬಹುದು ಎಂದು ತೋಟಗಾರಿಕಾ ಸಚಿವ ಕೆ.ಸಿ.ನಾರಾಯಣಗೌಡ ಭವಿಷ್ಯ ನುಡಿದಿದ್ದಾರೆ.

    ಲಾಕ್‍ಡೌನ್ ಕುರಿತು ನಗರದಲ್ಲಿ ಮಾತನಾಡಿದ ಅವರು, ಮುಂಬೈ, ಮದ್ರಾಸ್ ಹಾಗೂ ಇತರೆಡೆಗಳಿಂದ ಹೆಚ್ಚಿನ ಜನ ಬರ್ತಿದ್ದಾರೆ. ಹೊರಗಿಂದ ಹೆಚ್ಚು ಜನ ಬಂದಿದ್ದರಿಂದಲೇ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚು ಹರಡುತ್ತಿದೆ. ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಿಸಲು ಸಿಎಂ ತೀರ್ಮಾನ ತೆಗೆದುಕೊಂಡು ಸದ್ಯ ಒಂದು ವಾರಗಳ ಕಾಲ ಸರ್ಕಾರ ಲಾಕ್‍ಡೌನ್ ಮಾಡುವ ಆದೇಶ ನೀಡಿದ್ದಾರೆ. ಲಾಕ್‍ಡೌನ್ ಇನ್ನೂ ಹೆಚ್ಚಿಸುವ ಸಂದರ್ಭ ಬರಬಹುದು ಎಂದು ತಿಳಿಸಿದ್ದಾರೆ.

    ಕೊರೊನಾ ಯಾರ ಕೈಯಲ್ಲೂ ಕಂಟ್ರೋಲ್ ಇಲ್ಲ. ದೇಶಾದ್ಯಂತ ಸೋಂಕು ವ್ಯಾಪಕವಾಗಿ ಹರಡಿದೆ. ಅದೇ ರೀತಿ ರಾಜ್ಯದಲ್ಲೂ ಹೆಚ್ಚಿದೆ. ಕೊರೊನಾ ನಿಯಂತ್ರಣಕ್ಕೆ ಬಾರದಿದ್ದರೆ ಲಾಕ್‍ಡೌನ್ ಅವಧಿ ಹೆಚ್ಚಿಸುವ ಸಂದರ್ಭ ಬರಬಹುದು ಎಂದು ತಿಳಿಸಿದ್ದಾರೆ.

    ಇದಕ್ಕೆ ಪ್ರತಿಯಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ್ದು, ರಾಜ್ಯದಲ್ಲಿ ಎಲ್ಲೂ ಕೂಡ ಲಾಕ್‍ಡೌನ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಇಬ್ಬರು ಸಚಿವರು ಬೇರೆ ಬೇರೆ ಹೇಳಿಕೆ ನೀಡುವ ಮೂಲಕ ಗೊಂದಲವನ್ನುಂಟು ಮಾಡಿದ್ದಾರೆ. ಒಬ್ಬರು ಲಾಕ್‍ಡೌನ್ ಮುಂದುವರೆಯುತ್ತೆ ಎಂದರೆ, ಇನ್ನೊಬ್ಬರು ಇಲ್ಲ ಎನ್ನುತ್ತಿದ್ದಾರೆ. ಈ ಮೂಲಕ ದ್ವಂದ್ವ ಹೇಳಿಕೆ ನೀಡಿದ್ದಾರೆ.

    ಸಚಿವ ನಾರಾಯಣಗೌಡರ ಹೇಳಿಕೆಗೆ ಪ್ರತಿಯಾಗಿ ಸಚಿವ ಸೋಮಶೇಖರ್ ಪ್ರತಿಕ್ರಿಯಿಸಿದ್ದು, ಲಾಕ್‍ಡೌನ್ ವಿಚಾರ ಪ್ರಸ್ತಾಪವಾಗಿಲ್ಲ. ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಮಾಡುವುದಿಲ್ಲ. ರಾಜ್ಯದಲ್ಲಿ ಎಲ್ಲೂ ಕೂಡ ಲಾಕ್‍ಡೌನ್ ಇಲ್ಲ. ಸೋಂಕಿತರು ಇರುವ ಕಡೆ ಸೀಲ್‍ಡೌನ್ ಮಾಡಬಹುದು ಅಷ್ಟೆ. ಬೆಂಗಳೂರಿನಲ್ಲಿ ಲಾಕ್‍ಡೌನ್ ಮುಂದುವರೆಯಲ್ಲ. ಈಗ ಎಷ್ಟು ದಿನ ಲಾಕ್‍ಡೌನ್ ಇದೆಯೋ ಅಷ್ಟೆ, ಲಾಕ್‍ಡೌನ್ ಮತ್ತೆ ಆಗುವುದಿಲ್ಲ ಎಂದಿದ್ದಾರೆ.

  • ಸರ್ಕಾರದಲ್ಲಿ ಗೊಂದಲಗಳಿಲ್ಲ, 18ರ ಯುವಕರಂತೆ ಸಿಎಂ ಕೆಲ್ಸ ಮಾಡ್ತಿದಾರೆ: ಸಚಿವ ಸೋಮಶೇಖರ್

    ಸರ್ಕಾರದಲ್ಲಿ ಗೊಂದಲಗಳಿಲ್ಲ, 18ರ ಯುವಕರಂತೆ ಸಿಎಂ ಕೆಲ್ಸ ಮಾಡ್ತಿದಾರೆ: ಸಚಿವ ಸೋಮಶೇಖರ್

    ಚಿಕ್ಕೋಡಿ: ಲಾಕ್‍ಡೌನ್ ವಿಚಾರದಲ್ಲಿ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆ ಹಾಗೂ ಸಹಕಾರಿ ಇಲಾಖೆ ವತಿಯಿಂದ ಆಶಾ ಕಾರ್ಯಕರ್ತರಿಗೆ ಚೆಕ್ ವಿತರಣೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಮಾಡುವ ನಿರ್ಧಾರ ಕೈಗೊಳ್ಳಲು ಆಯಾ ಜಿಲ್ಲಾಡಿಳತಕ್ಕೆ ಬಿಡಲಾಗಿದೆ. ಬೆಂಗಳೂರಿನಲ್ಲಿ ಜನರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಲಾಕ್‍ಡೌನ್ ಮಾಡಲಾಗಿದೆ ಎಂದರು.

    ಬೆಂಗಳೂರು ಲಾಕ್‍ಡೌನ್ ಮಾಡುವದರ ಬಗ್ಗೆ ಸಿಎಂ ನಿರ್ಣಯ ತೆಗೆದುಕೊಂಡಿದ್ದಾರೆ. ಸಿಎಂ ಯಡಿಯೂರಪ್ಪನವರು ಕೋವಿಡ್-19 ಸಂದರ್ಭದಲ್ಲಿ 18ರ ಯುವಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ನಿದ್ದೆಯಿಲ್ಲದೆ ಮುಖ್ಯಮಂತ್ರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಕಾರ್ಯ ವೈಖರಿ ಬಗ್ಗೆ ಯಾರೂ ಮಾತನಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದರು. ಅಲ್ಲದೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣಾ ವಿಚಾರದಲ್ಲಿ ಬಿಜೆಪಿಯಲ್ಲಿ ಯಾವುದೇ ಬಣ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಇದಕ್ಕೂ ಮೊದಲು ಜೊಲ್ಲೆ ಉದ್ಯೋಗ ಸಮೂಗ ಸಂಸ್ಥೆಯ ಬಿರೇಶ್ವರ ಸಹಕಾರಿ ಬ್ಯಾಂಕ್ ಹಾಗೂ ಸಹಕಾರಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ 1485 ಆಶಾ ಕಾರ್ಯಕರ್ತರಿಗೆ ಒಬ್ಬರಿಗೆ 3 ಸಾವಿರ ರೂ.ಗಳಂತೆ 44.40 ಲಕ್ಷ ರೂ.ಗಳ ಚೆಕ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ಇದ್ದರು.

  • ವಿಶ್ವನಾಥ್ ಅನಾಥರಲ್ಲ, ನಮ್ಮ ಜೊತೆಗೇ ಇದ್ದಾರೆ: ಸಚಿವ ಸೋಮಶೇಖರ್

    ವಿಶ್ವನಾಥ್ ಅನಾಥರಲ್ಲ, ನಮ್ಮ ಜೊತೆಗೇ ಇದ್ದಾರೆ: ಸಚಿವ ಸೋಮಶೇಖರ್

    ಗದಗ: ಮಾಜಿ ಸಚಿವ ಎಚ್.ವಿಶ್ವನಾಥ್ ಅನಾಥರಲ್ಲ, ನಮ್ಮ ಜೊತೆಯಲ್ಲೇ ಇದ್ದಾರೆ. ಬಿಜೆಪಿಗೆ ಬಂದವರಿಗೆ ಒಂದೊಂದು ಅವಕಾಶ ಆಗಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ವಿಶ್ವನಾಥ ಅವರಿಗೂ ಅವಕಾಶ ಸಿಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಅನಾಥರಲ್ಲ, ಜೊತೆಯಲ್ಲೇ ಇದ್ದಾರೆ. ಬಂದವರಿಗೆ ಒಂದೊಂದು ಅವಕಾಶ ಆಗಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ವಿಶ್ವನಾಥ್ ಅವರಿಗೂ ಅವಕಾಶ ಸಿಗುತ್ತದೆ. ನಮಗೆ ಹತ್ತೂ ಜನರಿಗೆ ಒಂದು ಬಾರಿ ಅವಕಾಶ ಆಯಿತು. ಇದೀಗ ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರಗೆ ಸ್ಥಾನ ನೀಡಲಾಗಿದೆ. ಮುನಿರತ್ನ ಹಾಗೂ ಪ್ರತಾಪ್‍ಗೌಡ ಪಾಟೀಲ್ ಅವರಿಗೆ ಮುಂದಿನ ತಿಂಗಳು ಚುನಾವಣೆ ನಿಗದಿಯಾಗುತ್ತದೆ. ಎಲ್ಲರಿಗೂ ಹಂತ ಹಂತವಾಗಿ ಸ್ಥಾನ ಸಿಗುತ್ತದೆ ಎಂದು ಹೇಳಿದರು.

    ವಿಶ್ವನಾಥ್ ಅವರಿಗೂ ಮುಖ್ಯಮಂತ್ರಿ ಯಡಿಯೂರಪ್ಪ ಎಂಎಲ್‍ಸಿ ಸ್ಥಾನದ ಆಶ್ವಾಸನೆ ನೀಡಿದ್ದಾರೆ. ಯಾರಿಗೂ ಇಲ್ಲ ಎನ್ನುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಗಳು ನುಡಿದಂತೆ ನಡೆದಿದ್ದಾರೆ. ವಿಶ್ವನಾಥ್ ಸಮೇತ ಮುಖ್ಯಮಂತ್ರಿಗಳ ಭೇಟಿ ಮಾಡಿ, ಈ ಬಗ್ಗೆ ಚರ್ಚಿಸಿದ್ದೇವೆ. ಮುಂದಿನ ಬಾರಿ ಅವಕಾಶ ಕೊಡುವುದಾಗಿ ಹೇಳಿದ್ದಾರೆ. ಇದಕ್ಕೆ ವಿಶ್ವನಾಥ್ ಸಹ ಒಪ್ಪಿಕೊಂಡಿದ್ದಾರೆ ಎಂದರು.

    ವಿಶ್ವನಾಥ್ ಅವರಿಗೆ ಅವಕಾಶ ತಪ್ಪಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಕಾರಣ ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಅವರ ವೈಯಕ್ತಿಕ ಅಭಿಪ್ರಾಯ. ಬಿಜೆಪಿ ಸರ್ಕಾರ ಯಾವಾಗಲೂ ವಿಶ್ವನಾಥ್ ಅವರ ಜೊತೆಗಿರುತ್ತದೆ ಎಂದು ತಿಳಿಸಿದರು.

  • ಸಿಎಂ ಬಿಎಸ್‍ವೈ ಮಾತು ಉಳಿಸಿಕೊಂಡಿದ್ದಾರೆ, ಅವ್ರು ಮಾತು ತಪ್ಪಲ್ಲ: ಎಸ್.ಟಿ.ಸೋಮಶೇಖರ್

    ಸಿಎಂ ಬಿಎಸ್‍ವೈ ಮಾತು ಉಳಿಸಿಕೊಂಡಿದ್ದಾರೆ, ಅವ್ರು ಮಾತು ತಪ್ಪಲ್ಲ: ಎಸ್.ಟಿ.ಸೋಮಶೇಖರ್

    – ‘ಸಿ.ಟಿ.ರವಿಗೆ ಎಂ.ಎಲ್.ಸಿ ಮಾಡಿಸಿ ಅಂತ ಬೆಳಗ್ಗಿಂದ ಫೋನು’

    ಚಿಕ್ಕಮಗಳೂರು: ಇದೇ ತಿಂಗಳ 19ರಂದು ನಡೆಯೋ ಎಂ.ಎಲ್.ಸಿ. ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಹಾಗೂ ಫಲಿತಾಂಶದ ಬಗ್ಗೆ ಬಿಜೆಪಿಯವರಿಗೆ ಮೊದಲೇ ತಿಳಿದು ಈಗಿನ ಆಂತರಿಕ ಬೇಗುದಿಗೆ ಕಾರಣವಾಗಿದೆಯಾ ಎಂಬ ಅನುಮಾನ ಮೂಡಿದೆ. ಏಕೆಂದರೆ, ಇಂದು ನಗರದ ಡಿಸಿಸಿ ಬ್ಯಾಂಕ್‍ನಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ ಮಾತು ಎಲ್ಲಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಉಪಚುನಾವಣೆಯಲ್ಲಿ ಸೋತ ಆರ್.ಶಂಕರ್, ಎಂ.ಟಿ.ಬಿ.ನಾಗರಾಜ್ ಹಾಗೂ ವಿಶ್ವನಾಥ್ ಎಂ.ಎಲ್.ಸಿ. ಆಗಿ ಸಚಿವರಾಗ್ತಾರಾ ಎಂಬ ಅನುಮಾನ ಮೂಡಿದೆ.

    ಬಿಜೆಪಿಗೆ ನಾಯಕರಿಗೆ ಇದರ ಮುನ್ಸೂಚನೆ ಸಿಕ್ಕಿಯೇ ಸಭೆಗಳು ಆರಂಭವಾಗಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ. ಏಕೆಂದರೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರ ಹೇಳಿಕೆ ಮೇಲಿನ ಎಲ್ಲದಕ್ಕೂ ಸಾಮಿಪ್ಯವಿರುವಂತ್ತಿದೆ. ಸಿಎಂ ನಮ್ಮೆಲ್ಲರನ್ನೂ ಶಾಸಕರು, ಸಚಿವರು ಮಾಡಿದ್ದಾರೆ. ಅವರು ಮಾತಿಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಎಲ್ಲರಿಗೂ ಅವಕಾಶ ಮಾಡಿ ಕೊಡ್ತೀನಿ ಎಂದಿದ್ದರು. ಅವರು ಮಾತಿಗೆ ತಪ್ಪಲ್ಲ ಎಂದಿರೋದು ಸೋತ ಮೂವರು ಎಂ.ಎಲ್.ಸಿ. ಮೂಲಕ ಮಿನಿಸ್ಟರ್ ಆಗುತ್ತಾರಾ ಎಂದು ಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾಗಿ ಈ ಬೆಳಣಿಗೆ ನಡೆದಿರುವಂತಿದೆ.

    ಸಿ.ಟಿ.ರವಿಗೆ ಬೆಳಗ್ಗಿಂದ ಫೋನು: ಈಗ ಎಂ.ಎಲ್.ಸಿ. ಚುನಾವಣೆ ನಡೆಯುತ್ತಿದೆ. ಎರಡು ರಾಜ್ಯ ಸಭೆ ಸೇರಿ 9 ಎಂ.ಎಲ್.ಸಿ. ಬಿಜೆಪಿಗೆ ಲಭ್ಯವಾಗಲಿದೆ. ಜಾತಿ ಸಮುದಾಯ ಹಾಗೂ ಪಕ್ಷಕ್ಕೆ ದುಡಿದವರು, ಶಾಸಕರು, ಸಂಸದರಿಂದ ಕೇಳುತ್ತಿದ್ದಾರೆ. ಇದರಲ್ಲಿ ರಾಜಕೀಯ ಇಲ್ಲ. ಈ ರೀತಿ ಎಲ್ಲಾ ಪಕ್ಷದಲ್ಲೂ ಕೇಳುತ್ತಾರೆ. ಸಿ.ಟಿ.ರವಿಗೆ ಬೆಳಗ್ಗಿಂದಲೂ ಫೋನ್ ಬರುತ್ತಿದೆ. ನಮ್ಮನ್ನು ಸಿಎಂ ಬಳಿ ಕರೆದುಕೊಂಡು ಹೋಗಿ, ಎಂ.ಎಲ್.ಸಿ ಹಾಗೂ ರಾಜ್ಯ ಸಭೆ ಸದಸ್ಯರನ್ನಾಗಿ ಮಾಡಿ ಎಂದು ಎಲ್ಲರೂ ಫೋನ್ ಮಾಡುತ್ತಿದ್ದಾರೆ. ಎಲ್ಲರಿಗೂ ಕೇಳಲು ರೈಟ್ಸ್ ಇದೆ ಎಂದಿದ್ದಾರೆ.

    ಯಾರಿಂದ ರಾಜ್ಯಕ್ಕೆ ಒಳ್ಳೆಯದ್ದೋ ಅವರಿಗೆ ರೆಕಮೆಂಡ್: ಇದೇ ವೇಳೆ ಸೋಮಶೇಖರ್ ಜೊತೆಗಿದ್ದ ಸಚಿವ ಸಿ.ಟಿ.ರವಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಇನ್ನೊಂದು ವಾರದಲ್ಲಿ ಕೋರ್ ಕಮಿಟಿ ಸಭೆ ಕರೆಯಬಹುದು. ಕೋರ್ ಕಮಿಟಿಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಯಾವ್ಯಾವ ಹೆಸರು ಬಂದಿದೆ ಎಲ್ಲವನ್ನೂ ಚರ್ಚೆ ಮಾಡುತ್ತೇವೆ. ಸಮಾಜಕ್ಕೆ-ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ಯಾರಿಂದ ಒಳ್ಳೆದಾಗುತ್ತೋ ಅವರಿಗೆ ಕೊಡ್ಬೇಕು ಅನ್ನೋದು ನಮ್ಮ ರೆಕಮೆಂಟ್ ಎಂದಿದ್ದಾರೆ. ಇನ್ನು, ಶಾಸಕರು ಸಭೆ ಸೇರಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಊಟಕ್ಕೆ ಸೇರಿದ್ವಿ ಎಂದು ಅವರೇ ಹೇಳಿದ್ದಾರೆ. ಊಟಕ್ಕೆ ಸೇರೋದು ತಪ್ಪಲ್ಲ. ಆದ್ರೆ, ಪಕ್ಷವನ್ನ ಬಲಗೊಳಿಸಬೇಕೋ ವಿನಃ ಯಾರೂ ದುರ್ಬಲಗೊಳಿಸಬಾರದು ಎಂದಿದ್ದಾರೆ.