Tag: Minister Somanna

  • ಕತ್ತೆ ಕಾಯಲು ಸಭೆಗೆ ಬರುತ್ತೀರಾ? – ಎಡಿಸಿ ವಿರುದ್ಧ ಸೋಮಣ್ಣ ಗರಂ

    ಕತ್ತೆ ಕಾಯಲು ಸಭೆಗೆ ಬರುತ್ತೀರಾ? – ಎಡಿಸಿ ವಿರುದ್ಧ ಸೋಮಣ್ಣ ಗರಂ

    – ಕೊಡಗು ಎಡಿಸಿಯನ್ನು ತರಟೆಗೆ ತೆಗೆದುಕೊಂಡ ಸೋಮಣ್ಣ

    ಮಡಿಕೇರಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ನಡೆಯುತ್ತಿರುವ ಸಭೆಯಲ್ಲಿ ಕೊಡಗು ಎಡಿಸಿಯನ್ನು ಉಸ್ತುವಾರಿ ಸಚಿವ ಸೋಮಣ್ಣ ತರಟೆಗೆ ತೆಗೆದುಕೊಂಡಿದ್ದಾರೆ.

    ಇಂದು ಕೊಡಗು ಜಿಲ್ಲಾ ಪಂಚಾಯ್ತಿಯಲ್ಲಿ ನಡೆಯುತ್ತಿರುವ ಟಾಸ್ಕ್ ಪೋಸ್೯ ಸಭೆಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರ ಅಧ್ಯಕ್ಷತೆ ನಡೆಯುತ್ತಿತ್ತು. ಈ ಸಭೆಯಲ್ಲಿ ಈ ಹಿಂದೆ ನಡೆಸಿದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಪ್ರೋಸಿಡಿಂಗ್ ಮಾಡದ ಹಿನ್ನೆಲೆಯಲ್ಲಿ ಕೊಡಗು ಎಡಿಸಿ ರಾಜು ಮೊಘವೀರ್ ಅವರವನ್ನು ಸಚಿವರು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಎಡಿಸಿಯಾಗಿ ನಿಮ್ಮ ಕೆಲಸ ಏನು? ನೀವು ಮಾಡುವ ಕೆಲಸ ಎನ್ನಿರುತ್ತೆ..? ಎಂದು ಪ್ರಶ್ನಿಸಿದ್ದಾರೆ.

    ಸರಿಯಾದ ಉತ್ತರ ನೀಡದ ಎಡಿಸಿ ವಿರುದ್ಧ ಗರಂ ಆದರು. ಕೆಲಸ ಮಾಡದೇ ಸುಮ್ಮನೆ ಇರೋದು. ಇಂತಹ ಕೆಲಸ ಮಾಡಲು ಯಾಕೆ ಬರ್ತೀರಾ? ಕತ್ತೆ ಕಾಯಲು ಸಭೆಗೆ ಬರುತ್ತೀರಾ.. ಇನ್ಮುಂದೆ ಸಭೆಯನ್ನು ಲಘುವಾಗಿ ಭಾವಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೋಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

  • ಮಾತಾಡೋ ಮುನ್ನ ಯೋಚನೆ ಮಾಡಬೇಕು- ಡಿಕೆಶಿ ವಿರುದ್ಧ ಸಚಿವ ಸೋಮಣ್ಣ ಕಿಡಿ

    ಮಾತಾಡೋ ಮುನ್ನ ಯೋಚನೆ ಮಾಡಬೇಕು- ಡಿಕೆಶಿ ವಿರುದ್ಧ ಸಚಿವ ಸೋಮಣ್ಣ ಕಿಡಿ

    – ಸಿಟಿ ರವಿ ಬುದ್ಧಿವಂತ, ಭಾರೀ ಕಿಲಾಡಿ ಇದ್ದಾನೆ

    ಮಡಿಕೇರಿ: ಮೂಳೆ ಇಲ್ಲದ ನಾಲಿಗೆ ಅಂತ ಏನು ಬೇಕಾದರೂ ಮಾತನಾಡಬಹುದು. ಆದರೆ ಹಾಗೆ ಮಾತನಾಡುವುದು ಎಷ್ಟು ಸರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಒಮ್ಮೆ ಯೋಚನೆ ಮಾಡಬೇಕಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಕಿಡಿಕಾತಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ದಿವಂಗತ ಸುರೇಶ್ ಅಂಗಡಿ ಅವರ ಮೃತದೇಹವನ್ನು ಬಿಜೆಪಿಯವರಿಗೆ ಬೆಳಗಾವಿಗೆ ತರಲು ಆಗಲಿಲ್ಲ ಎಂಬ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದರು. ಸುರೇಶ್ ಅಂಗಡಿ ಅವರ ಬಗ್ಗೆ ನನಗೂ ಸಹ ವಿಶೇಷ ಗೌರವವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೂ ಅವರ ಮೇಲೆ ಅಪಾರ ಗೌರವವಿದೆ. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ರಾಷ್ಟ್ರ ಕಂಡ ಅಪರೂಪದ ವ್ಯಕ್ತಿತ್ವದವರು. ಅವರು ಮೃತಪಟ್ಟಾಗಲೇ ಅವರ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಲಿಲ್ಲ. ಇದನ್ನೂ ಓದಿ: ನಟಿಯರನ್ನು ಬಿಟ್ಟು ಬೇರೆ ಯಾರೂ ಡ್ರಗ್ಸ್ ತಗೊಂಡಿಲ್ವಾ – ಡಿಕೆಶಿ ಪ್ರಶ್ನೆ

    ಇತಂಹ ಸಂದರ್ಭದಲ್ಲಿ ಸುರೇಶ್ ಅಂಗಡಿ ಅವರ ಮೃತದೇಹವನ್ನು ಹೇಗೆ ತರಬೇಕಿತ್ತು. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಅದನ್ನು ರಾಜ್ಯ, ಕೇಂದ್ರ ಸರ್ಕಾರಗಳು ಕಟ್ಟುನಿಟ್ಟಾಗಿ ಪಾಲಿಸಿವೆ. ಇದನ್ನು ಡಿಕೆಶಿ ಆಗಲಿ ಯಾರೇ ಆಗಲಿ ಅರ್ಥ ಮಾಡಿಕೊಳ್ಳಬೇಕು ಎಂದರು.

    ಸಚಿವ ಸಿ.ಟಿ.ರವಿ ಅವರು ಸಚಿವ ಸ್ಥಾನ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಎರಡನ್ನು ನಿಭಾಯಿಸುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿ.ಟಿ.ರವಿ ನನಗಿಂತ ಬುದ್ಧಿವಂತ ಮತ್ತು ಬಹಳ ಕಿಲಾಡಿ ಇದ್ದಾನೆ. ಎರಡು ಸ್ಥಾನ ಅಷ್ಟೇ ಅಲ್ಲ ನಾಲ್ಕು ಸ್ಥಾನಗಳನ್ನು ಕೊಟ್ಟರು ನಿಭಾಯಿಸುತ್ತಾರೆ. ರವಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ ಎಂದರು. ಇದನ್ನೂ ಓದಿ: ಅಂಗಡಿ ಓರ್ವ ಮಂತ್ರಿಯಾಗಿದ್ರೂ ಬೆಳಗಾವಿಗೆ ತಂದು ಗೌರವ ಸಲ್ಲಿಸಲು ಸರ್ಕಾರಕ್ಕೆ ಆಗಿಲ್ಲ: ಡಿಕೆಶಿ

  • ಮೃತ ನಾರಾಯಣ್ ಅಚಾರ್ ಮಕ್ಕಳಿಗೆ ಪರಿಹಾರ ವಿತರಿಸಿದ ಸಚಿವ ವಿ.ಸೋಮಣ್ಣ

    ಮೃತ ನಾರಾಯಣ್ ಅಚಾರ್ ಮಕ್ಕಳಿಗೆ ಪರಿಹಾರ ವಿತರಿಸಿದ ಸಚಿವ ವಿ.ಸೋಮಣ್ಣ

    ಮಡಿಕೇರಿ: ತಲಕಾವೇರಿ ಬೆಟ್ಟ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ನಾರಾಯಣ ಆಚಾರ್ ಹಾಗೂ ಸೋದರ ಆನಂದತೀರ್ಥ ಅವರ ಕುಟುಂಬಸ್ಥರಿಗೆ ಸಚಿವ ವಿ.ಸೋಮಣ್ಣ ಪರಿಹಾರ ಚೆಕ್ ವಿತರಿಸಿದ್ದಾರೆ.

    ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರ ಐದು ಲಕ್ಷ ಪರಿಹಾರದಲ್ಲಿ ಇಬ್ಬರು ಮಕ್ಕಳಾದ ನಮಿತಾ ಹಾಗೂ ಸುಶೀಲಾ ಅವರಿಗೆ ತಲಾ 2.5 ಲಕ್ಷ ಪರಿಹಾರ ಚೆಕ್ ವಿತರಿಸಿ ಸಾಂತ್ವನ ಹೇಳಿದ್ದಾರೆ. ಆನಂದ ತೀರ್ಥ ಅವರು ಬ್ರಹ್ಮಚಾರಿ ಆಗಿದ್ದ ಹಿನ್ನೆಲೆಯಲ್ಲಿ ತಂಗಿ ಸುಶೀಲಾ ಅವರಿಗೆ 5 ಲಕ್ಷ ಚೆಕ್ ನೀಡಲಾಗಿದೆ. ಇನ್ನು ಇಡೀ ಕುಟುಂಬವನ್ನು ಕಳೆದುಕೊಂಡು ಒಂಬಂಟಿ ಆಗಿದ್ದೇನೆ. ಮತ್ತೆ ಮನೆಗೆ ಬರಲು ಯಾರೂ ಇಲ್ಲ ಎಂದು ನಾರಾಯಣ ಆಚಾರ್ ಸಹೋದರಿ ಅಣ್ಣಂದಿರನ್ನು ನೆನೆದು ಕಣ್ಣೀರು ಹಾಕಿದ್ದಾರೆ.

    ನನ್ನ ಅಣ್ಣ ತಮ್ಮಂದಿರು ಸ್ವಲ್ಪವೂ ನೋವಾಗದಂತೆ ನೋಡಿಕೊಂಡಿದ್ದರು.ಈಗ ನನಗೆ ತವರು ಮನೆಕಡೆಯವರಾಗಿ ಒಬ್ಬರೂ ಇಲ್ಲ. ಅತ್ತ ತವರು ಮನೆಯೂ ಇಲ್ಲ. ನನ್ನ ತಾಯಿಯ ಸಂಬಂಧಿಯಾಗಿ ಇನ್ನು ಯಾರು ಇಲ್ಲ ಎಂದು ಆನಂದತೀರ್ಥರ ತಂಗಿ ಸುಶೀಲ ಕಣ್ಣೀರು ಹಾಕಿದರು.

    ಭೂಕುಸಿತವಾದ ಸ್ಥಳದಲ್ಲಿ ಇಂದು ಮತ್ತೊಂದು ಶವ ಗುರುತು ಸಿಗದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದೇ ಭೂಕುಸಿತದಲ್ಲಿ ರವಿಕಿರಣ್ ಮತ್ತು ಶ್ರೀನಿವಾಸ್ ಇಬ್ರು ನಾಪತ್ತೆಯಾಗಿದ್ದರು. ಸದ್ಯ ದೊರೆತಿರುವ ಶವ ಯಾರದ್ದೆಂದು ಗುರುತಿಸಲು ಸಾಧ್ಯವಾಗುತ್ತಿಲ್ಲ. ಇಬ್ಬರ ಸಂಬಂಧಿಕರು ಬಂದು ಬಳಿಕ ಶವದ ಗುರುತು ಪತ್ತೆ ಹಚ್ಚಬೇಕಾಗಿದೆ. ಇಲ್ಲದಿದ್ದರೆ ಡಿಎನ್‍ಎ ಪರೀಕ್ಷೆಗೆ ಕಳುಹಿಸ ಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

  • ಜ.2ರಂದು ತುಮಕೂರಿಗೆ ಪ್ರಧಾನಿ ಮೋದಿ: ಡಿಸಿಎಂ ಲಕ್ಷ್ಮಣ ಸವದಿ

    ಜ.2ರಂದು ತುಮಕೂರಿಗೆ ಪ್ರಧಾನಿ ಮೋದಿ: ಡಿಸಿಎಂ ಲಕ್ಷ್ಮಣ ಸವದಿ

    – ಪರಿಹಾರ ಕೊಟ್ಟು ಗಲಭೆಗೆ ಮಮತಾ ಬ್ಯಾನರ್ಜಿ ಪ್ರಚೋದನೆ

    ತುಮಕೂರು: ಮಂಗಳೂರು ಗೋಲಿಬಾರಿನಲ್ಲಿ ಮೃತಪಟ್ಟವರಿಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪರಿಹಾರ ಕೊಟ್ಟಿರುವುದನ್ನು ಡಿಸಿಎಂ ಲಕ್ಷ್ಮಣ ಸವದಿ ಕಟುವಾಗಿ ಟೀಕಿಸಿದ್ದು, ಜನರು ಗಲಭೆ ಮಾಡಿಕೊಂಡು ಸತ್ತರೂ ಪರಿಹಾರ ಕೊಡುತ್ತೇವೆ ಎಂದು ಮಮತಾ ಬ್ಯಾನರ್ಜಿ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಲಕ್ಷ್ಮಣ ಸವದಿ ಅವರು, ಪಶ್ಚಿಮ ಬಂಗಾಳದ ಸಿಎಂಗೆ ಕರ್ನಾಟಕದಲ್ಲಿ ಪರಿಹಾರ ನೀಡುವ ಆಸಕ್ತಿಯೇನು? ಈ ಬಗ್ಗೆ ಆಲೋಚಿಸಬೇಕಾಗಿದೆ. ಕೋಮುಗಲಭೆ ಉಂಟುಮಾಡಲು ಎಲ್ಲಾ ಪಕ್ಷಗಳು ಹುನ್ನಾರ ಮಾಡುತ್ತಿವೆ ಎಂಬುವುದು ಸ್ಪಷ್ಟವಾಗಿದೆ. ಜನರು ಗಲಭೆ ಮಾಡಿಕೊಂಡು ಸತ್ತರು ಪರಿಹಾರ ಕೊಡುತ್ತೇವೆ ಎಂದು ಪ್ರಚೋದಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ಗಲಭೆಕೋರರಿಗೆ ದಂಡ ಹಾಕುವ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಆಲೋಚಿಸಿದ ರೀತಿಯಲ್ಲಿ ನಾವು ಆಲೋಚನೆ ಮಾಡುತ್ತಿದ್ದೇವೆ. ಗಲಭೆ ಮಾಡಿ ಸಾರ್ವಜನಿಕ ಆಸ್ತಿ ಹಾಳು ಮಾಡುವುದಕ್ಕೆ ದಂಡ ವಸೂಲಿ ಜಾರಿ ಮಾಡಲು ಚಿಂತನೆ ನಡೆದಿದೆ. ದಂಡ ನೀಡದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕಠಿಣ ಕಾನೂನಿಗೆ ಚಿಂತನೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ತುಮಕೂರಿಗೆ ಮೋದಿ: ಜನವರಿ 2 ರಂದು ಪ್ರಧಾನಿ ಮೋದಿ ಅವರು ತುಮಕೂರಿಗೆ ಭೇಟಿ ನೀಡಲಿದ್ದು, ಕಾರ್ಯಕ್ರಮ ನಡೆಯುವ ಸ್ಥಳವನ್ನು ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಸಚಿವ ವಿ.ಸೋಮಣ್ಣ ಪರಿಶೀಲಿಸಿದರು. ಕಿಸಾನ್ ಸಮ್ಮಾನ್ ಯೋಜನೆಯ 2ನೇ ಹಂತ ಲೋಕಾರ್ಪಣೆ ಕಾರ್ಯಕ್ರಮ ಜನವರಿ 2ರಂದು ನಡೆಯಲಿದ್ದು, ಸುಮಾರು ಒಂದು ಲಕ್ಷ ರೈತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಸೋಮಣ್ಣ ತಿಳಿಸಿದರು.

    ಜನವರಿ 2ರ ಸಂಜೆ 4ಗಂಟೆ ವೇಳೆಗೆ ಪ್ರಧಾನಿಗಳು ಆಗಮಿಸಲಿದ್ದು, ಮೊದಲು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಶಿವಕುಮಾರ ಶ್ರೀ ಗಳ ಗದ್ದುಗೆ ದರ್ಶನ ಪಡೆದು ಬಳಿಕ ಸಿದ್ದಲಿಂಗಸ್ವಾಮಿಗಳ ಆಶೀರ್ವಾದ ಪಡೆಯಲಿದ್ದಾರೆ. ಮಠದ ಮಕ್ಕಳೊಂದಿಗೆ ಹತ್ತು ನಿಮಿಷಗಳ ಕಾಲ ಸಂವಾದ ನಡೆಸಲಿದ್ದಾರೆ. ಸುಮಾರು 40 ನಿಮಿಷಗಳ ಕಾಲ ಸಿದ್ದಗಂಗಾ ಮಠದಲ್ಲಿಯೇ ಮೋದಿ ಇರಲಿದ್ದು, ಬಳಿಕ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    ರಾಜ್ಯಾದ್ಯಂತ ಒಂದು ಸಾವಿರ ಕೆಎಸ್‍ಆರ್ ಟಿಸಿ ಬಸ್‍ಗಳ ವ್ಯವಸ್ಥೆ ಮಾಡಲಾಗಿದ್ದು. ದೇಶದ ಆಯ್ದ 40 ಪ್ರಗತಿಪರ ರೈತರಿಗೆ ಮೋದಿ ಸನ್ಮಾನಿಸಲಿದ್ದಾರೆ. ಬಳಿಕ 5.30ಕ್ಕೆ ಬೆಂಗಳೂರಿಗೆ ಮೋದಿ ಪ್ರಯಾಣ ಬೆಳೆಸಲಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಮಾಹಿತಿ ನೀಡಿದರು.