Tag: Minister Revanna

  • ನಾನು ಯಾವುದೇ ತಪ್ಪು ಮಾಡಿಲ್ಲ – ರೆಬೆಲ್ ಶಾಸಕರ ಆರೋಪಕ್ಕೆ ರೇವಣ್ಣ ಉತ್ತರ

    ನಾನು ಯಾವುದೇ ತಪ್ಪು ಮಾಡಿಲ್ಲ – ರೆಬೆಲ್ ಶಾಸಕರ ಆರೋಪಕ್ಕೆ ರೇವಣ್ಣ ಉತ್ತರ

    ಬೆಂಗಳೂರು: ಮೈತ್ರಿ ಸರ್ಕಾರ ಆಡಳಿತ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿರುವ ಕಾಂಗ್ರೆಸ್ ಪಕ್ಷದ ಶಾಸಕರು ತಮ್ಮ ವಿರುದ್ಧ ಮಾಡಿದ್ದ ಆರೋಪಗಳಿಗೆ ಲೋಕೋಪಯೋಗಿ ಸಚಿವ ರೇವಣ್ಣ ಅವರು ಉತ್ತರ ನೀಡಿದ್ದು, ನಾನು ಯಾವುದೇ ತಪ್ಪು ಮಾಡಿಲ್ಲ. ಬಡ ಮಕ್ಕಳ ಅನುಕೂಲತೆಗೆ 1 ಸಾವಿರ ಕನ್ನಡ ಶಾಲೆಗಳನ್ನು ಆರಂಭ ಮಾಡಿ ಎಂದು ಮನವಿ ಮಾಡಿದ್ದೆ ಇದೇ ನನ್ನ ತಪ್ಪಾ ಎಂದು ಕೇಳಿದ್ದಾರ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಇಲಾಖೆಗೆ ಸಂಬಂಧಪಟ್ಟ ಬೆಂಗಳೂರು ರಸ್ತೆಯ ಅಭಿವೃದ್ಧಿ ವಿಚಾರದಲ್ಲಷ್ಟೇ ನಾನು ಕೆಲಸ ಮಾಡಿದ್ದೇನೆ. ಬೇರೆ ಯಾವುದೇ ಇಲಾಖೆಯಲ್ಲೂ ಕೂಡ ನಾನು ಮಧ್ಯಪ್ರವೇಶ ಮಾಡಿಲ್ಲ. ನನ್ನ ಇಲಾಖೆಯ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದು, ಅದು ಬಿಟ್ಟು ಬೇರೆಯವರ ವಿಚಾರದಲ್ಲಿ ನಾನೇನು ಮಾಡಿಲ್ಲ. ನಾನು ಮಾಡಿದ ತಪ್ಪು ಅಂದರೆ ಕನ್ನಡ ಶಾಲೆ ಬೇಕು ಎಂದು ಹೇಳಿ ಬಡ ಮಕ್ಕಳಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ 1 ಸಾವಿರ ಕನ್ನಡ ಶಾಲೆಗಳನ್ನು ಆರಂಭಿಸಲು ಮನವಿ ಮಾಡಿದ್ದೆ ಎಂದು ಸ್ಪಷ್ಟನೆ ನೀಡಿದರು.

    ಮುಜರಾಯಿ ಇಲಾಖೆಗೆ ಸೇರಿದ ಸ್ಥಳ ತಿರುಪತಿಯಲ್ಲಿ ಇದ್ದು, ಆದರ ಅಭಿವೃದ್ಧಿ ನಮ್ಮ ಇಲಾಖೆಯಿಂದಲೇ ನಡೆಯುತ್ತಿದೆ. ವಿವಿಧ ರಸ್ತೆಗಳ ಕೆಲಸಗಳನ್ನು ಮಾಡುತ್ತಿದ್ದೇವೆ. ಇದರಲ್ಲಿ ಪ್ರಮುಖವಾಗಿ ಮಹಾದೇಶ್ವರ ದೇವಸ್ಥಾನಕ್ಕೆ ಮೆಟ್ಟಿಲು, ದಸರಾಗೆ ಅನುಕೂಲವಾಗುವಂತೆ ರಸ್ತೆ, ತಲಕಾಡು ರಸ್ತೆ ಅಭಿವೃದ್ಧಿ ಕೆಲಸಗಳು ಸೇರಿದೆ. ನಾನು ಜೀವನದಲ್ಲಿ ತಪ್ಪು ಮಾಡಿದರೆ ಮಹಾ ಲಕ್ಷ್ಮಿ ದೇವಿ ನೋಡಿಕೊಳ್ಳಲಿ ಎಂದರು.

    ಬೆಂಗಳೂರು ರಸ್ತೆಗಳ ಅಭಿವೃದ್ಧಿ ವಿಚಾರದಲ್ಲಿ ಇಲಾಖೆಗೆ ಸಂಬಂಧಿಸಿದ ಕೆಲಸವನಷ್ಟೇ ಮಾಡಿದ್ದೇನೆ. ಅದು ಬಿಟ್ಟು ಬೇರೆಯವರ ಇಲಾಖೆಯ ವಿಚಾರದಲ್ಲಿ ನಾನೇನು ಮಾಡಿಲ್ಲ. ಔಟರ್ ರಿಂಗ್ ರೋಡ್ ಕೆಲಸಕ್ಕೆ ಹಣವನ್ನು ಬಿಡುಗಡೆ ಮಾಡಿದ್ದು, ಈ ಹಿಂದೆ ನಾನು ಲೋಕೋಪಯೋಗಿ ಸಚಿವರಾಗಿದ್ದ ವೇಳೆ ಆರಂಭ ಮಾಡಿ ಪೂರ್ಣ ಮಾಡದ ಕೆಲಸಗಳನ್ನು ಪೂರ್ಣ ಮಾಡಲು ಹಣ ಬಿಡುಗಡೆ ಮಾಡಿದ್ದೇನೆ. ಅಭಿವೃದ್ಧಿ ಸಂಬಂಧ ಶಾಸಕರ ಜೊತೆ ಸಭೆ ಕರೆಯಲಾಗಿತ್ತು, ಸಿಎಂ ನೇತೃತ್ವದಲ್ಲಿಯೇ ನಡೆದ ಸಭೆಯಲ್ಲಿ ಈ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದೆ. ಆದರೆ ನನ್ನ ಮೇಲೆ ಆರೋಪ ಮಾಡಲಾಗಿದೆ. ನಾವು ಶಾಸಕರ ಮನಸ್ಸಿಗೆ ನೋವುಂಟು ಮಾಡಿಲ್ಲ, ಒಂದೊಮ್ಮೆ ತಿಳಿಯದೆ ಮಾಡಿದ್ದರೆ ಕ್ಷಮೆಯಾಚನೆ ಮಾಡಲಿದ್ದೇವೆ ಎಂದರು.

    ನನ್ನ ಕ್ಷೇತ್ರದಲ್ಲಿ ನಡೆಯಬೇಕಾದ ವರ್ಗಾವಣೆಗಳ ಸಂಬಂಧ ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದು, ಇದುವರೆಗೂ ಬೇರೆ ಯಾವುದೇ ಇಲಾಖೆಯಲ್ಲೂ ವರ್ಗಾವಣೆ ಮಾಡಲು ಕೈ ಹಾಕಿಲ್ಲ. ನಾನು ಯಾವುದೇ ಇಲಾಖೆಯಲ್ಲಿ ಮಧ್ಯ ಪ್ರವೇಶ ಮಾಡಿಲ್ಲ, ಶಾಸಕರ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ ಎಂದರು.

    ಮಾಧ್ಯಮಗಳು ನನ್ನನ್ನು ‘ಸೂಪರ್ ಸಿಎಂ’ ಎಂದು ಕರೆಯುತ್ತಾರೆ. ಅದನ್ನು ನಿಮ್ಮ ಆಶೀರ್ವಾದ ಎಂದು ಹೇಳಿ ಸುಮ್ಮನೆ ಆಗಿದ್ದೇನೆ. ಜೀವನದಲ್ಲಿ ಒಂದೇ ಒಂದು ತಪ್ಪು ಮಾಡಿದ್ದು, ಒಬ್ಬರನ್ನು ಕರೆತಂದು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದೆ. ಆ ರಾಜ್ಯಸಭಾ ಸದಸ್ಯನನ್ನು ದೇವಿ ನೋಡಿಕೊಳ್ಳುತ್ತಾರೆ. ತಾಯಿ ಸನ್ನಿಧಿಯಲ್ಲಿ ಏನು ನಡೆದಿದೆ ಎಂದು ಗೊತ್ತು ಎಂದು ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದರು.

    ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆಗೂ ನನಗೂ ಸಂಬಂಧವಿಲ್ಲ. ನಾಳೆ ಏನಾಗುತ್ತೆ ಎಂಬುವುದನ್ನು ಕಾದು ನೋಡೋಣ. ಈ ವಿಚಾರಗಳನ್ನು ಸಿಎಂ ಅವರು ನೋಡಿಕೊಳ್ಳುತ್ತಾರೆ. ನನಗೆ ನನ್ನ ಇಲಾಖೆಯದ್ದೇ ಜಾಸ್ತಿ ಕೆಲಸ ಆಗಿದ್ದು, ನೀಡಿರುವ ಪಿಡಬ್ಲೂಡಿ ಇಲಾಖೆ ನೋಡೋಕೊಳ್ಳವ ಕೆಲಸ ಮಾಡುತ್ತೇನೆ ಎಂದರು. ಅಲ್ಲದೇ ಸಿಎಂ, ರೇವಣ್ಣ ಅಸಮಾಧಾನ ಹೊಂದಿದ್ದಾರೆ ಎಂದು ಕೊಂಡರೆ ಅದು ನಿಮ್ಮ ತಪ್ಪು ಅಷ್ಟೇ. ದೇವೇಗೌಡರು ಇರುವವರೆಗೂ ಇದು ಆಗಲ್ಲ. ನನಗೆ ಸಿಎಂ, ಡಿಸಿಎಂ ಪೋಸ್ಟ್ ಮೇಲೆ ಕಣ್ಣಿಲ್ಲ ಎಂದರು.

  • ‘ದೇವರ’ ಇಲಾಖೆಗೂ ಕೈ ಹಾಕಿದ ‘ಸೂಪರ್’ ಸಿಎಂ

    ‘ದೇವರ’ ಇಲಾಖೆಗೂ ಕೈ ಹಾಕಿದ ‘ಸೂಪರ್’ ಸಿಎಂ

    ಬೆಂಗಳೂರು: `ದೇವರ’ ಇಲಾಖೆಗೂ ಸಿಎಂ ಹಿರಿಯ ಸಹೋದರ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕೈ ಹಾಕಿದ್ದು, ಮುಜರಾಯಿ ಇಲಾಖೆ ವ್ಯವಹಾರದಲ್ಲೂ ಮಧ್ಯಪ್ರವೇಶ ಮಾಡಿದ್ದಾರೆ.

    ಮುಜರಾಯಿ ಇಲಾಖೆಯನ್ನು ಕಾಂಗ್ರೆಸ್ಸಿನ ಪರಮೇಶ್ವರ್ ನಾಯ್ಕ್ ಅವರು ನಿರ್ವಹಿಸುತ್ತಿದ್ದಾರೆ. ಆದರೆ ಈಗ ಕಲ್ಯಾಣ ಮಂಟಪ ಒಂದರ ಗುತ್ತಿಗೆಯನ್ನು ಶೃಂಗೇರಿ ಮಠಕ್ಕೆ ಕೊಡುವಂತೆ ರೇವಣ್ಣ ಅವರು ಪತ್ರ ಬರೆದಿದ್ದಾರೆ. ಈ ರೀತಿ ಪತ್ರ ಬರೆದು ಕಾನೂನು ಮೀರಿ ಕಲ್ಯಾಣ ಮಂಟಪ ಗುತ್ತಿಗೆ ನೀಡಲು ಹೊರಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ರೇವಣ್ಣ ಅವರು ಧಾರ್ಮಿಕ ದತ್ತಿ ಇಲಾಖೆಗೆ ಪತ್ರ ಬರೆದು, ಬೆಂಗಳೂರಿನ ಕಲ್ಯಾಣ ಮಂಟಪವನ್ನು ಶೃಂಗೇರಿ ಪೀಠಕ್ಕೆ ಗುತ್ತಿಗೆ ಆಧಾರದಲ್ಲಿ ನೀಡಲು ತಿಳಿಸಿದ್ದಾರೆ.

    ಈ ಬಗ್ಗೆ ಸಚಿವರಿಂದ ಪತ್ರ ಪಡೆದಿರುವ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಪತ್ರದಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ದುಡ್ಡಿಲ್ಲ. ಆದ್ದರಿಂದ ಪೀಠಕ್ಕೆ ವರ್ಗಾಯಿಸುವಂತೆ ತಿಳಿಸಿದ್ದಾರೆ. ಈ ಹಿಂದೆ ಸಚಿವರ ಮನೆಯ ನವೀಕರಣಕ್ಕೆ ಕೋಟಿ ಕೋಟಿ ಖರ್ಚು ಮಾಡಿದ್ದ ಸರ್ಕಾರ ಇಂದು ಸಾರ್ವಜನಿಕರ ಉಪಯೋಗಕ್ಕೆ ಬರುವ ಕಲ್ಯಾಣ ಮಂಟಪಕ್ಕೆ ಹಣ ಇಲ್ಲ ಎಂದು ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾರ್ವಜನಿಕರ ಉಪಯೋಗಕ್ಕೆ ಬರುವ ಈ ಯೋಜನೆಯನ್ನು ಪೀಠಕ್ಕೆ ವರ್ಗಾವಣೆ ಮಾಡುವ ಮೂಲಕ ಖಾಸಗೀಕರಣ ಗೊಳಿಸಿ ಹಣ ಮಾಡುವ ಉದ್ದೇಶ ಹೊಂದಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ.

    ಪತ್ರದಲ್ಲೇನಿದೆ:
    ಬಸವನಗುಡಿಯಲ್ಲಿರುವ ಮುಜರಾಯಿಗೆ ಸೇರಿದ ಕಾರಂಜಿ ಅಂಜನೇಯ ದೇಗುಲದ ಅವರಣದಲ್ಲಿ ಕಲ್ಯಾಣ ಮಂಟಪ ಇದೆ. ಈ ಕಲ್ಯಾಣ ಮಂಟಪ ನಿರ್ಮಾಣ ಹಂತದಲ್ಲಿದೆ. ಪರಿಷ್ಕೃತ ದರ ಐದುಕೋಟಿಯಷ್ಟು ಆಗಲಿದೆ. ಆದರೆ ದೇಗುಲದ ಖರ್ಚಿನಲ್ಲಿ ಕೇವಲ 66 ಲಕ್ಷ ಭರಿಸಲು ಸಾಧ್ಯವಿದೆ. ಉಳಿದ ಖರ್ಚನ್ನು ಭರಿಸಲು ಸಾಧ್ಯವಿಲ್ಲ. ಅನುದಾನದ ಕೊರತೆ ಇದೆ. ಈ ಕಾರಣಕ್ಕೆ ಲೋಕೋಪಯೋಗಿ ಸಚಿವರು ಈ ಕಲ್ಯಾಣ ಮಂಟಪದ ಗುತ್ತಿಗೆಯನ್ನು ಶೃಂಗೇರಿ ಪೀಠ ಕ್ಕೆ ವರ್ಗಾಯಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಸರ್ಕಾರ ಹಾಗೂ ಶೃಂಗೇರಿ ಪೀಠ ಎರಡು ನಿಭಾಯಿಸಿ ಕಲ್ಯಾಣ ಮಂಟಪದ ಲಾಭವನ್ನು ಸರ್ಕಾರ ಹಾಗೂ ಪೀಠ ಶೇ.50 ರಂತೆ ಹಂಚಿಕೊಳ್ಳುವ ಬಗ್ಗೆಯೂ ತಿಳಿಸಿದ್ದಾರೆ. ಹಾಗಾಗಿ ಈ ಮನವಿಯನ್ನು ಪರಿಗಣಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ರು ಸರ್ಕಾರದ ಪ್ರಧಾನ ಕಾರ್ಯದರ್ಶಿ ಗೆ ಪತ್ರ ಬರೆದಿದ್ದಾರೆ.

    ನಿಯಮ ಏನು ಹೇಳುತ್ತೆ?
    ನಗರದ ಮುಜರಾಯಿ ಇಲಾಖೆ ಸೇರಿದ ದೇವಾಲಯದ ಈ ಕಲ್ಯಾಣ ಮಂಟಪ ನಿರ್ಮಾಣವನ್ನು ಮಾಡಲಾಗುತ್ತಿದೆ. ಮುಜರಾಯಿಗೆ ಸೇರಿದ ಕಟ್ಟಡ, ಆಸ್ತಿಯನ್ನು ಸಾರ್ವಜನಿಕ ಹರಾಜಿನ ಮೂಲಕವೇ ಗುತ್ತಿಗೆ ನೀಡಬೇಕ್ಕು ಎನ್ನುವ ನಿಯಮವಿದೆ.

    ಈ ಹಿಂದೆ ಸಂಪಗಿರಾಮನಗರದ ದೇಗುಲದ ಜಾಗವನ್ನು ಗುತ್ತಿಗೆ ನೀಡುವ ವಿಚಾರದಲ್ಲಿ ತಗಾದೆಯಾದಾಗ ಮುಜರಾಯಿ ಇಲಾಖೆ ತನಗೆ ಸೇರಿದ ಜಾಗವನ್ನು ಗುತ್ತಿಗೆ ನೀಡುವಂತಿಲ್ಲ ಎಂದು ಹೇಳಿತ್ತು. ಕಾಯ್ದೆ ಹೀಗಿದ್ದರೂ ಧಾರ್ಮಿಕ ಇಲಾಖೆಯ ನಡೆ ಅಚ್ಚರಿ ಮೂಡಿಸಿದೆ. ಈ ಗುತ್ತಿಗೆ ನೀಡಲು ದೇವಾಲಯದ ಸಮಿತಿಯೇ ರೇವಣ್ಣ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಈ ಮನವಿ ಹಿನ್ನೆಲೆಯಲ್ಲಿ ಕಾನೂನು ಅಂಶಗಳನ್ನು ಪರಿಗಣನೆ ತೆಗೆದುಕೊಳ್ಳದ ಸಚಿವರು ನೇರ ಪತ್ರ ಬರೆದಿದ್ದಾರೆ.

    ಮುಜರಾಯಿ ಇಲಾಖೆ ಆಯುಕ್ತರು ಕೂಡ ಸಚಿವರ ಪತ್ರ ಬರುತ್ತಿದಂತೆ ನಿಯಮ ಮೀರಿ ಪತ್ರ ಬರೆದಿದ್ದಾರೆ. ಇತ್ತ ದೇವಸ್ಥಾನದ ಮುಂಭಾಗದಲ್ಲಿ “ಕಲ್ಯಾಣ ಮಂಟಪಕ್ಕಾಗಿ ದೇಣಿಗೆ ನೀಡಿ ರಸೀದಿ ಪಡೆದುಕೊಳ್ಳಿ” ಎಂದು ಬೋರ್ಡ್ ಹಾಕಲಾಗಿದೆ. ಹಾಗದರೆ ದೇವಾಲಯದ ಕಲ್ಯಾಣ ಮಂಟಪ ನಿರ್ಮಾಣ ಮಾಡುವಲ್ಲಿ ಜನ ಕೊಟ್ಟಿರುವ ದುಡ್ಡು ಎಲ್ಲಿಗೆ ಹೋಗುತ್ತೆ ಎಂಬ ಬಹುದೊಡ್ಡ ಅನುಮಾನವೂ ಮೂಡಿದೆ. ಇತ್ತ ಈ ಕುರಿತು ವರದಿ ಮಾಡಲು ತೆರಳಿದರೆ ದೇಗುಲದ ದೃಶ್ಯಾವಳಿ ತೆಗೆದುಕೊಳ್ಳಲು ಖಾಸಗಿ ವ್ಯಕ್ತಿಗಳು ಪಬ್ಲಿಕ್ ಟಿವಿ ಕ್ಯಾಮೆರಾಕ್ಕೆ ಅಡ್ಡಿ ಪಡಿಸಿದ್ದಾರೆ. ಅಲ್ಲದೇ ಕಲ್ಯಾಣ ಮಂಟಪ ಕಟ್ಟಲು ದುಡ್ಡಿಲ್ಲ ನೀವು ಹಣ ನೀಡುತ್ತೀರಾ ಎಂದು ಪಬ್ಲಿಕ್ ಟಿವಿ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾರೆ.

    ಸಚಿವರು ಏನು ಹೇಳಿದ್ರು:
    ಪಬ್ಲಿಕ್ ಟಿವಿ ನೇರ ಮುಜರಾಯಿ ಇಲಾಖೆ ಸಚಿವ ಪರಮೇಶ್ವರ್ ನಾಯಕ್ ರೊಂದಿಗೆ ಸಂಪರ್ಕ ಮಾಡಿದ್ದು, ಸಿಎಂ ಅವರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ರಾಜ್ಯದ ಮುಖ್ಯ ದೇವಾಲಯದ ಅಭಿವೃದ್ಧಿಗೆ ನಮ್ಮ ಇಲಾಖೆಯಿಂದ ಹಣ ನೀಡಲಾಗಿತ್ತು. ಆದ್ದರಿಂದ ಸಭೆಯಲ್ಲಿ ಲೋಕೋಪಯೋಗಿ ಸಚಿವರು ಭಾಗವಹಿಸಿದ್ದರು. ಸದ್ಯ ಭಕ್ತರ ಆಶಯದೊಂದಿಗೆ ದೇವಾಲಯದ ಅಭಿವೃದ್ಧಿ ಮಾಡಲಾಗಿದೆ ಅಷ್ಟೇ. ಆದರೆ ನಾವು ಯಾರಿಗೂ ಗುತ್ತಿಗೆ ನೀಡುತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿದ್ದೇವೆ ಎಂದರು. ಕಲ್ಯಾಣ ಮಂಟಪದ ನಿರ್ಮಾಣಕ್ಕೆ ಹಣ ಇಲ್ಲವೇ ಎಂಬ ಪ್ರಶ್ನೆಗೆ ಗರಂ ಆದ ಸಚಿವರು ಕರೆ ಕಡಿತಗೊಳಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ‘ಮೈತ್ರಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ’ – ಸಚಿವ ರೇವಣ್ಣ ಎಡವಟ್ಟು

    ‘ಮೈತ್ರಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ’ – ಸಚಿವ ರೇವಣ್ಣ ಎಡವಟ್ಟು

    ಹಾಸನ: ‘ಮೈತ್ರಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಜನರೇ ಬುದ್ಧಿ ಕಲಿಸುತ್ತಾರೆ’ ಎಂದು ಸಚಿವ ರೇವಣ್ಣ ಅವರು ಸುದ್ದಿಗೊಷ್ಠಿ ವೇಳೆ ಬಾಯ್ತಪ್ಪಿ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಪಕ್ಷದ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋಮು ಪಕ್ಷವನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿದೆ. ರಾಜ್ಯ, ರಾಷ್ಟ್ರದಲ್ಲಿ ಬಿಜೆಪಿ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದರು. ಈ ವೇಳೆ ಜನರ ಅಭಿಪ್ರಾಯ ಏನು ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಅವರು, ಮೈತ್ರಿಯಿಂದ ಜನ ಬೇಸತ್ತಿದ್ದಾರೆ. ಜನ ಬುದ್ಧಿ ಕಲಿಸುತ್ತಾರೆ ಎಂದರು. ತಕ್ಷಣ ಎಚ್ಚೆತ್ತ ಅವರು, ಮೈತ್ರಿ ಸರ್ಕಾರದಿಂದ ಜನ ಖುಷಿಯಾಗಿದ್ದಾರೆ ಎಂದು ತಿದ್ದಿಕೊಂಡರು.

    ಕಳೆದ 9 ತಿಂಗಳಿನಿಂದ ರಾಜ್ಯ ಸರ್ಕಾರ ಉರುಳುತ್ತೆ ಎಂದು ಹೇಳುತ್ತಿದ್ದಾರೆ. ಏನಾದ್ರು ಆಯಿತಾ? ಮುಂದು ಕೂಡ ಸರ್ಕಾರ ಉತ್ತಮವಾಗಿರುತ್ತದೆ. ಶಿಕ್ಷಣ, ಅಭಿವೃದ್ಧಿ, ಆರೋಗ್ಯ, ಉದ್ಯೋಗ ಕ್ಷೇತ್ರಗಳತ್ತ ಸಮ್ಮಿಶ್ರ ಸರ್ಕಾರ ಹೆಚ್ಚಿನ ಗಮನ ಹರಿಸುತ್ತದೆ ಎಂದು ತಿಳಿಸಿದರು. ಇದೇ ವೇಳೆ ಎ. ಮಂಜು ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿ, ಅವರ ಯಾವುದೇ ಆರೋಪಗಳಿಗೆ ನಾನು ಉತ್ತರ ಕೊಡಲ್ಲ. ಎಲ್ಲ ಜಿಲ್ಲೆಯ ಜನರು ತೀರ್ಮಾನ ಮಾಡಲಿದ್ದಾರೆ. ಚುನಾವಣೆ ಎದುರಿಸಲು ಶಕ್ತಿ ಇಲ್ಲದೇ ನನ್ನ ಕುಟುಂಬದ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ್ದರು. ಆದರೆ ನ್ಯಾಯಾಲಯ ಪ್ರಕರಣವನ್ನು ಡಿಸ್ಮಿಸ್ ಮಾಡಿದೆ. ಸಿದ್ದರಾಮಯ್ಯ ಅವರಿಗೆ ಟೋಪಿ ಹಾಕಿ, ಈಗ ಮೋದಿ ಹಿಂದೆ ಹೋಗಿದ್ದಾರೆ. ಅವರಿಗೆ ಯಾವಾಗ ಟೋಪಿ ಹಾಕುತ್ತಾರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

  • ಸಚಿವ ರೇವಣ್ಣ ವಿರುದ್ಧ ದೂರು ದಾಖಲು

    ಸಚಿವ ರೇವಣ್ಣ ವಿರುದ್ಧ ದೂರು ದಾಖಲು

    ಮಂಡ್ಯ: ಸುಮಲತಾ ಅಂಬರೀಶ್ ಅವರ ಬಗ್ಗೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈಗ ಮಂಡ್ಯದ ಬಿಜೆಪಿ ಮುಖಂಡರೊಬ್ಬರು ರೇವಣ್ಣ ವಿರುದ್ಧ ಸಲ್ಲಿಸಿದ್ದಾರೆ.

    ಬಿಜೆಪಿ ಮುಖಂಡ ಸಿಟಿ.ಮಂಜುನಾಥ್ ಮಂಡ್ಯ ಜಿಲ್ಲಾಧಿಕಾರಿ ಮುಖೇನ ಮಹಿಳಾ ಆಯೋಗಕ್ಕೆ ರೇವಣ್ಣರ ವಿರುದ್ಧ ದೂರು ಸಲ್ಲಿಸಿದ್ದಾರೆ. ಗಂಡ ಸತ್ತು ಒಂದೂವರೆ ತಿಂಗಳಾಗಿಲ್ಲ ಆಗಲೇ ರಾಜಕೀಯಕ್ಕೆ ಬರಬೇಕಾಗಿತ್ತ ಎಂದು ಸುಮಲತಾ ಅಂಬರೀಶ್ ವಿರುದ್ಧ ಸಚಿವ ರೇವಣ್ಣ ಕೀಳುಮಟ್ಟದ ಪದ ಬಳಸಿದ್ದಾರೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಕ್ಷಮೆ ಕೇಳಲ್ಲ ಅಂತಿದ್ದಾರೆ. ಹೀಗಾಗಿ ಸಚಿವರಿಗೆ ಛೀಮಾರಿ ಹಾಕಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಮಹಿಳಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ರೇವಣ್ಣ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ: ಜೆಡಿಎಸ್ ರಾಜ್ಯಾಧ್ಯಕ್ಷ

    ಸುಮಲತಾ ಅವರ ವಿರುದ್ಧ ಸಚಿವ ರೇವಣ್ಣ ಹೇಳಿದ್ದ ಹೇಳಿಕೆ ಮಂಡ್ಯ ಸೇರಿದಂತೆ ಅನೇಕ ಕಡೆ ಅಂಬರೀಶ್ ಅಭಿಮಾನಿಗಳು ಹಾಗೂ ರಾಜಕೀಯ ವ್ಯಕ್ತಿಗಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ರಾಜಕೀಯದ ಬಗ್ಗೆ ಕ್ರಿಕೆಟ್ ಟೀಂ ಎಂದು ಫೋಟೋ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪ್ರಧಾನಿ ಮೋದಿ ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ ಎಚ್‍ಡಿಕೆ

    ಪ್ರಧಾನಿ ಮೋದಿ ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ ಎಚ್‍ಡಿಕೆ

    ಬೆಂಗಳೂರು: ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಹೆಚ್ಚಾಗಿದ್ದು, ಬರನಿರ್ವಹಣೆಗೆ ಕೇಂದ್ರ ಸರ್ಕಾರ ರಾಜ್ಯದ ನೆರವಿನಿಗೆ ಆಗಮಿಸಬೇಕು ಎಂದು ಸಿಎಂ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

    ದೆಹಲಿಯಲ್ಲಿ ಪ್ರಧಾನಿಗಳ ಗೃಹಕಚೇರಿಯಲ್ಲಿ ಸಿಎಂ ಭೇಟಿ ಮಾಡಿ ಸರಾಜ್ಯದ ಬರದ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿದರು. ರಾಜ್ಯದಲ್ಲಿ 156 ತಾಲೂಕು ಬರಪೀಡಿತವಾಗಿದ್ದು, ಬರ ಪರಿಹಾರ ಹಾಗು ನರೇಗಾ ಬಾಕಿ ಅನುದಾನ ಬಿಡುಗಡೆ ಮಾಡಬೇಕು. ಬರನಿರ್ವಹಣೆಗೆ ರಾಷ್ಟ್ರೀಯ ವಿಕೋಪ ನಿರ್ವಹಣಾ ನಿಧಿ ಮಾರ್ಗ ಸೂಚಿಯನ್ವಯ 2064.30 ಕೋಟಿ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

    ರಾಜ್ಯಕ್ಕೆ ಇದುವರೆಗೂ ಕೇವಲ ಕೇವಲ 949 ಕೋಟಿ ರೂ. ಮಾತ್ರ ಪರಿಹಾರ ಬಂದಿದೆ. ಅಂದರೆ ಅರ್ಧದಷ್ಟು ಕೂಡ ಹಣ ಬಿಡುಗಡೆಯಾಗಿಲ್ಲ. ಹಿಂಗಾರು ಅವಧಿಯಲ್ಲಿ 11,384 ಕೋಟಿ ರೂ. ಮೌಲ್ಯ ಬೆಳೆ ನಷ್ಟಗಿದ್ದಾರೆ. ಹಿಂಗಾರು ಮತ್ತು ಮುಂಗಾರು ಸೇರಿ ಒಟ್ಟು 32,335 ಕೋಟಿ ರೂ. ರಾಜ್ಯಕ್ಕೆ ನಷ್ಟ ಆಗಿದೆ. ಇದು ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಮನ್ರೇಗಾ ಯೋಜನೆಯಡಿ ಕೇಂದ್ರದಿಂದ 1,351 ಕೋಟಿ ರೂ. ಬಾಕಿ ಬಿಡುಗಡೆ ಆಗಬೇಕಾಗಿತ್ತು. ಆದ್ದರಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಎಂದು ಕೋರಿದ್ದಾರೆ.

    ಇದೇ ವೇಳೆ ದೆಹಲಿಯ ಕೃಷ್ಣ ಮೆನನ್ ಮಾರ್ಗ್ ನಲ್ಲಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನ ಸಿಎಂ ಭೇಟಿ ಮಾಡಿದರು. ಈ ವೇಳೆ ಹಾಸನದ ನ್ಯಾಯಾಲಯದ ಸಂಕೀರ್ಣ ಉದ್ಘಾಟನೆಗೆ ಆಹ್ವಾನ ನೀಡಿದರು. ಸಿಎಂ ಕುಮಾರಸ್ವಾಮಿ ಅವರಿಗೆ ಲೋಕೋಪಯೋಗಿ ಸಚಿವ ರೇವಣ್ಣ ಸಾಥ್ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೂರು ದಶಕಗಳಿಂದ ಸುಮಲತಾ ಮಂಡ್ಯದ ಮಗಳು – ರೇವಣ್ಣ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ

    ಮೂರು ದಶಕಗಳಿಂದ ಸುಮಲತಾ ಮಂಡ್ಯದ ಮಗಳು – ರೇವಣ್ಣ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ

    ಉಡುಪಿ: ಲೋಕೋಪಯೋಗಿ ಸಚಿವ ರೇವಣ್ಣ, ಸುಮಲತಾ ಅಂಬರೀಶ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಅಕ್ಷಮ್ಯ. ಅವರು ಕೂಡಲೇ ಅವರು ಕ್ಷಮೆ ಕೇಳಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಮಲತಾ ಮೂರು ದಶಕದಿಂದ ಮಂಡ್ಯದ ಮಗಳು. ಅವರಿಗೆ ಈಗ ಅಂಬರೀಶ್ ಅವರಂತೆ ಜನಸೇವೆ ಮಾಡುವ ಮನಸ್ಸಾಗಿದೆ. ಸಚಿವ ರೇವಣ್ಣ ಜವಾಬ್ದಾರಿಯುತ ರಾಜಕಾರಣಿಯಾಗಿ ಈ ರೀತಿ ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ. ಅಂಬರೀಶ್ ಸಾಯಲು ಸುಮಲತಾ ಕಾರಣವಲ್ಲ. ಈ ಹಿಂದೆ ಅಂಬರೀಶ್ ಅವರು ಕಾವೇರಿ ವಿಚಾರಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದರು. ಅಂತಹ ವ್ಯಕ್ತಿಯ ಪತ್ನಿ ಬಗ್ಗೆ ಕೀಳಾಗಿ ಮಾತನಾಡಿದ್ದು ಸರಿಯಲ್ಲ ಎಂದರು.

    ಗಂಡ ಸತ್ತವರು ರಾಜಕೀಯಕ್ಕೆ ಬರಲು ಇಷ್ಟೇ ದಿನ ಆಗಬೇಕಾಗಿಲ್ಲ. ಅವರು ರಾಜಕಾರಣಿಯಾಗಿ ಜನಸೇವೆ ಮಾಡುತ್ತಾ ತಮ್ಮ ದುಃಖ ಮರೆಯುವ ಪ್ರಯತ್ನದಲ್ಲಿದ್ದಾರೆ. ಸಮಾಜಸೇವೆಗೆ ಬರುವ ಹೆಣ್ಣು ಮಕ್ಕಳ ಬಗ್ಗೆ ಹೀಗೆಲ್ಲಾ ಮಾತನಾಡಿದ್ದು ಸರಿಯಲ್ಲ. ಅದ್ದರಿಂದ ರೇವಣ್ಣ ಅವರು ಕೂಡಲೇ ಕ್ಷಮೆ ಯಾಚಿಸಲಿ. ಗಂಡ ಕಳೆದುಕೊಂಡ ನೋವಲ್ಲಿರುವವರಿಗೆ ಮತ್ತೆ ನೋವು ಕೊಡಬೇಡಿ. ಅದು ಕೂಡ ಮಹಿಳಾ ದಿನಾಚರಣೆ ದಿನ ರೇವಣ್ಣ ಅವರು ಹೀಗೆ ಮಾತನಾಡಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸುಮಲತಾ ಸ್ಪರ್ಧೆ ಮಾಡುವ ಬಗ್ಗೆ ಪಕ್ಷದ ನಾಯಕರು ಸ್ಪಷ್ಟಪಡಿಸಿದ್ದು, ಅವರು ಪಕ್ಷೇತರವಾಗಿ ನಿಂತರೆ ಬಿಜೆಪಿ ಬೆಂಬಲ ನೀಡುತ್ತದೆ. ಆದರೆ ಈಗ ಸುಮಲತಾ ಅವರು ಕಾಂಗ್ರೆಸ್ ಮನೆಯ ರಾಜಕಾರಣಿ. ಅವರು ಬಿಜೆಪಿಗೆ ಬಂದರೆ ಸ್ವಾಗತ ಮಾಡುತ್ತೇವೆ ಎಂದರು.

    ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶದಲ್ಲಿ ಕಾಂಗ್ರೆಸ್ ಸೋಲುವ ಭೀತಿಯಲ್ಲಿದೆ. ಹೀಗಾಗಿ ಕೀಳು ರಾಜಕಾರಣಕ್ಕೆ ಕಾಂಗ್ರೆಸ್ ಇಳಿದಿದೆ. ದೇಶದ ಸೈನಿಕರಿಗೆ ಅವರನ್ನು ಅವಮಾನ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬರಲ್ಲ ಎಂದು ಗೊತ್ತಿದ್ದು ನಾಯಕರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ದೇಶದ ವಿರುದ್ಧವಾಗಿ ಮಾತನಾಡಿದವರಿಗೆ ಕಾಂಗ್ರೆಸ್ ಪಕ್ಷ ಇದುವರೆಗೂ ಶಿಕ್ಷೆ ಕೊಟ್ಟಿಲ್ಲ. ಇಷ್ಟೆಲ್ಲಾ ಮಾತನಾಡುವ ನೀವು ಪುಲ್ವಾಮಾ ಘಟನೆ ಬಗ್ಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ವಿರುದ್ಧ ಕಿಡಿಕಾರಿದರು.

    ಮುಸಲ್ಮಾನರು ಒಪ್ಪಿದ್ರೆ ಎಲ್ಲ ಸಮಸ್ಯೆ ಬಗೆ ಹರಿಯುತ್ತೆ: ಮುಸಲ್ಮಾನರು ರಾಮ ಮಂದಿರ ನಿರ್ಮಾಣಕ್ಕೆ ಒಪ್ಪಿಗೆ ನೀಡಲಿ. ಆಗ ಎಲ್ಲಾ ಸಮಸ್ಯೆ ಬಗೆ ಹರಿದು, ಹಿಂದುಗಳ ಕನಸು ನನಸಾಗುತ್ತದೆ. ರಾಮಮಂದಿರ ವಿವಾದ ಸುಪ್ರೀಂ ಆದೇಶದಂತೆ ಸಂಧಾನದಲ್ಲೇ ಬಗೆಹರಿಯಲಿ. ಅಯೋಧ್ಯೆಯ ರಾಮಮಂದಿರ ವಿಚಾರವನ್ನು ನಾವು ಚುನಾವಣೆಗೆ ಬಳಸಲ್ಲ. ಅಯೋಧ್ಯೆ ಭಕ್ತಿಯ ಶ್ರದ್ಧಾಕೇಂದ್ರ. ಈ ಬಗ್ಗೆ ನ್ಯಾಯಾಲಯ ನೀಡಿದ ಆದೇಶಕ್ಕೆ ತಲೆಬಾಗುತ್ತೇವೆ. ಎಂಟು ವಾರದ ಗಡುವಿನಲ್ಲಿ ಏನಾಗುತ್ತೋ ಗೊತ್ತಿಲ್ಲ. ಮಾತುಕತೆ ಪ್ರಯತ್ನದಿಂದ ಸಮಸ್ಯೆ ಬಗೆಹರಿದರೆ ಸಂತಸ ಎಂದರು.

    2014 ರಲ್ಲಿ ಮೋದಿ ಅವರು ಜನತೆಯ ಮುಂದಿಟ್ಟ ನಾಲ್ಕು ಭರವಸೆ ಈಡೇರಿದೆ. ಇನ್ನೆರಡು ದಿನಗಳಲ್ಲಿ ಚುನಾವಣೆ ಘೋಷಣೆ ಆಗಲಿದೆ. 2014 ರಲ್ಲಿ ನೀಡಿರುವ ಭರವಸೆಯಂತೆ ಭ್ರಷ್ಟಾಚಾರ ರಹಿತ, ಅಭಿವೃದ್ಧಿ, ಸ್ವಚ್ಛತೆ, ವಿದೇಶಾಂಗ ನೀತಿ, ಕೃಷಿ ಸಹಿತ ರಕ್ಷಣೆ ಒತ್ತು ಕೊಟ್ಟಿದ್ದೇವೆ. ದೇಶದ ಸೈನಿಕರು ಮೋದಿ ಸರ್ಕಾರದ ಆಡಳಿತ ಮೆಚ್ಚಿದ್ದಾರೆ. ಒನ್ ರಾಂಕ್ ಒನ್ ಪೆನ್ಶನ್ ನಂತರ ಸೈನಿಕರು ಖುಷಿಯಲ್ಲಿದ್ದಾರೆ ಎಂದರು.

    ರಾಜ್ಯ ಸರ್ಕಾರ ಕೇಂದ್ರದ ಅನುದಾನ ಬಿಡುಗಡೆಯೇ ಮಾಡಿಲ್ಲ. ಟೆಂಡರ್ ಕರೆಯದೆ ಕೋಟಿ ಕೋಟಿ ರೂ. ಹಣ ನೆನೆಗುದಿಗೆ ಬಿದ್ದಿದೆ. ರಾಜ್ಯದಲ್ಲಿ ಅತೀ ಹೆಚ್ಚು ಅನುದಾನ ಉಡುಪಿ-ಚಿಕ್ಕಮಗಳೂರಿಗೆ ಬಂದಿದೆ. ರಸ್ತೆ, ಪಾಸ್ ಪೋರ್ಟ್, ಸಖಿ ಸೆಂಟರ್ ಸ್ಥಾಪನೆಯಾಗಿದೆ ತಮ್ಮ ಐದು ವರ್ಷದ ರಿಪೋಟ್ ಕಾರ್ಡನ್ನು ತೆರೆದಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ಕಾರ್ಯಕ್ರಮ- ವೇದಿಕೆಯಲ್ಲಿ ಮೊದ್ಲ ಸಾಲಿನಲ್ಲೇ ಕುಳಿತ ಸೂರಜ್ ರೇವಣ್ಣ

    ಸಿಎಂ ಕಾರ್ಯಕ್ರಮ- ವೇದಿಕೆಯಲ್ಲಿ ಮೊದ್ಲ ಸಾಲಿನಲ್ಲೇ ಕುಳಿತ ಸೂರಜ್ ರೇವಣ್ಣ

    – ರಾಜ್ಯಮಟ್ಟದ ಅಧಿಕಾರಿಗಳ ಮಧ್ಯೆ ಕುಳಿತ ಸೂರಜ್

    ಹಾಸನ: ಸೋಮವಾರ ಹಾಸನದಲ್ಲಿ ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಸಚಿವ ರೇವಣ್ಣ ಪುತ್ರ ಸೂರಜ್ ರೇವಣ್ಣ ಅವರಿಗೆ ವೇದಿಕೆಯಲ್ಲಿ ಮೊದಲ ಸಾಲಿನಲ್ಲಿ ಆಸನ ನೀಡಿದ್ದು, ಈ ವಿಷಯ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

    ರಾಜ್ಯ ಸರ್ಕಾರದ ರೈತರ ಸಾಲಮನ್ನಾ ಹಕ್ಕು ಪತ್ರ ವಿತರಣೆಯ ಕಾರ್ಯಕ್ರಮವನ್ನು ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಸೌಟು ಹಿಡಿದ ಭವಾನಿ ರೇವಣ್ಣ!

    ಈ ಕಾರ್ಯಕ್ರಮ ಆರಂಭವಾಗುವ ಕೆಲವೇ ನಿಮಿಷಗಳ ಮುಂಚಿತವಾಗಿ ವೇದಿಕೆಗೆ ಆಗಮಿಸಿದ ಸಚಿವ ರೇವಣ್ಣನವರು ತಮ್ಮ ಪುತ್ರ ಸೂರಜ್‍ಗೆ ವೇದಿಕೆಯಲ್ಲಿ ಮುಂದಿನ ಸಾಲಿನಲ್ಲಿಯೇ ಆಸನವನ್ನು ವ್ಯವಸ್ಥೆ ಮಾಡಿಕೊಟ್ಟರು.

    ಯಾವುದೇ ಚುನಾಯಿತ ಪ್ರತಿನಿಧಿಯೂ ಅಲ್ಲ ಆದರೂ ವೇದಿಕೆಯಲ್ಲಿ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಸೂರಜ್ ವೇದಿಕೆಯಲ್ಲಿ ಕುಳಿತು ಗಮನ ಸೆಳೆದರು. ಒಂದು ಕಡೆ ಪೊಲೀಸ್ ಐಜಿ ಮತ್ತೊಂದೆಡೆ ಎಸ್‍ಪಿ ನಡುವೆ ಸೂರಜ್ ಕುಳಿತುಕೊಂಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಲ್ಲವನ್ನೂ ನಾನೇ ಮಾಡಿದ್ದೇನೆ ಎನ್ನೋ ಗರ್ವ ಇರಬಾರದು: ಪ್ರಧಾನಿ ಮೋದಿಗೆ ಎಚ್‍ಡಿಡಿ ಟಾಂಗ್

    ಎಲ್ಲವನ್ನೂ ನಾನೇ ಮಾಡಿದ್ದೇನೆ ಎನ್ನೋ ಗರ್ವ ಇರಬಾರದು: ಪ್ರಧಾನಿ ಮೋದಿಗೆ ಎಚ್‍ಡಿಡಿ ಟಾಂಗ್

    – ರೇವಣ್ಣನಿಗೆ ನನ್ನನ್ನು ಮೀರಿ ಕೆಲಸ ಮಾಡೋ ಶಕ್ತಿ ಇದೆ

    ಹಾಸನ: ಎಲ್ಲವನ್ನೂ ನಾನೇ ಮಾಡಿದ್ದೇನೆ ಎನ್ನುವ ಗರ್ವ ಇರಬಾರದು ಎಂದು ಹೇಳುವ ಮೂಲಕ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಟ್ ಕೊಟ್ಟಿದ್ದಾರೆ.

    ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ದೇವೇಗೌಡರು, ತಮ್ಮ ಆಡಳಿತ ಅವಧಿಯ ಐದು ವರ್ಷದಲ್ಲಿ ಎಲ್ಲವನ್ನೂ ನಾನು ಸಾಧನೆ ಮಾಡಿದ್ದೇನೆ ಅಂತ ಪ್ರಧಾನಿ ಮೋದಿ ಹೇಳುತ್ತಾರೆ. ಹಾಗಾದರೆ ಈ ಹಿಂದೆ ಯಾರೂ ಅಭಿವೃದ್ಧಿ ಕೆಲಸ ಮಾಡಿಲ್ಲವೇ? ಬ್ರಿಟಿಷರ ಕಾಲದಿಂದಲೂ ಅನೇಕ ಪುಣ್ಯಾತ್ಮರು ಕೆಲಸ ಮಾಡಿಲ್ಲವೇ? ಬ್ರಿಟಿಷರಿಂದ ಭಾರತವನ್ನ ಉಳಿಸಿಕೊಳ್ಳಲಿಲ್ಲವೇ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

    ಇದೇ ವೇಳೆ ಲೋಕೋಪಯೋಗಿ ಸಚಿವ, ಪುತ್ರ ಎಚ್.ಡಿ.ರೇವಣ್ಣರನ್ನು ದೇವೇಗೌಡ ಹೊಗಳಿದರು. ರೇವಣ್ಣ ರಾಜಕೀಯಕ್ಕೆ ಬರಬೇಕೆಂದು ನಾನು ಯೋಚನೆ ಮಾಡಿರಲಿಲ್ಲ. ರೇವಣ್ಣನೂ ಯೋಚನೆ ಮಾಡಿರಲಿಲ್ಲ. ಅವನಿಗೆ ಬೆಂಗಳೂರಿನಲ್ಲಿ ಒಂದು ಕಾರ್ಖಾನೆ ಮಾಡೋಣ ಎಂದುಕೊಂಡಿದ್ದೆ. ಆದರೆ ಈಗ ನನ್ನನ್ನು ಮೀರಿ ಕೆಲಸ ಮಾಡುವ ಶಕ್ತಿ ರೇವಣ್ಣನಿಗೆ ಬಂದಿದೆ ಎಂದು ಹೇಳಿದರು.

    ನಾನು ಪ್ರಧಾನಿಯಾಗಿ ಅವಿಶ್ವಾಸಮತ ನಿರ್ಣಯವಾದಾಗಲೂ ರೇವಣ್ಣ ರೈಲ್ವೇ ಮಾರ್ಗ ನಿರ್ಮಾಣವಾಗಬೇಕು ಅಂತ ಹಠ ಹಿಡಿದಿದ್ದ. ದೈವ ಇಚ್ಛೆಯಿಂದ ನಮಗೆ ಅಧಿಕಾರ ಬಂದಿದೆ. ನಮ್ಮ ತಂದೆ ತಾಯಿಗಳು ಈಶ್ವರನ ಪೂಜೆ ಮಾಡಿದ್ದಾರೆ. ನಾವೇನಾದರೂ ಇಷ್ಟು ಬೆಳೆದಿದ್ದರೆ ಈಶ್ವರನ ಅನುಗ್ರಹವೇ ಕಾರಣ ಎಂದರು.

    ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗುತ್ತಾರೆ ಅಂತ ಯಾರೂ ಊಹೆ ಮಾಡಿರಲಿಲ್ಲ. ಇದೇ ದೈವದ ಆಟ ಅವರು ಮುಖ್ಯಮಂತ್ರಿಯಾದರು. ನಮ್ಮ ವಂಶಸ್ಥರು ಅಂದುಕೊಂಡಿದ್ದನ್ನ ಮಕ್ಕಳು ಸಾಧಿಸಿದ್ದಾರೆ. ತಾಂತ್ರಿಕ ವಿಶ್ವವಿದ್ಯಾಲಯವನ್ನು ಹಾಸನಕ್ಕೆ ತರಲು ಕುಮಾರಸ್ವಾಮಿ ಮತ್ತು ರೇವಣ್ಣ ನಡುವೆ ತರ್ಕ ನಡೆದಿತ್ತು. ಈಗ ರೇವಣ್ಣನ ಇಚ್ಛೆಯಂತೆ ತಾಂತ್ರಿಕ ವಿಶ್ವವಿದ್ಯಾಲಯ ಜಿಲ್ಲೆಗೆ ಬಂದಿದೆ ಎಂದು ಮಕ್ಕಳನ್ನು ಕೊಂಡಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಧಾನಸೌಧಕ್ಕೆ ಬರಿಗಾಲಲ್ಲಿ ನಡೆದು ಬಂದ ಸಚಿವ ರೇವಣ್ಣ

    ವಿಧಾನಸೌಧಕ್ಕೆ ಬರಿಗಾಲಲ್ಲಿ ನಡೆದು ಬಂದ ಸಚಿವ ರೇವಣ್ಣ

    ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ವಿಧಾನಸೌಧಕ್ಕೆ ಚಪ್ಪಲಿ ಹಾಕದೇ ಬರಿಗಾಲಲ್ಲಿ ನಡೆದುಕೊಂಡು ಬಂದಿದ್ದಾರೆ.

    ಈ ವೇಳೆ ರೇವಣ್ಣ ಮಾಧ್ಯಮಗಳೊಂದಿಗೆ ಮಾತನಾಡಿ, “ಏನೂ ಆಗಲ್ಲ, ಇಂದು ಬಜೆಟ್ ನಡೆಸುತ್ತೇವೆ. ಏನೂ ಆಗಲ್ಲ ನೀವು ತಲೆ ಕಡಿಸಿಕೊಳ್ಳಬೇಡಿ. ಬಿಜೆಪಿಗೆ ರಾಜ್ಯದ ಬಗ್ಗೆ ಯಾವುದೇ ಚಿಂತನೆ ಇಲ್ಲ. ಇಂದು ಬಜೆಟ್ ಮಂಡನೆ ಆಗುತ್ತೆ. ರೈತರ ಪರ, ಬಡವರ ಪರ ಸರ್ಕಾರ ಬಜೆಟ್ ಇರುತ್ತೆ. ಯಾರನ್ನು ಆಪರೇಷನ್ ಮಾಡುವುದಕ್ಕೆ ಆಗಲ್ಲ. ಯಡಿಯೂರಪ್ಪ ಆಪರೇಷನ್ ಮಾಡುವುದಕ್ಕೆ ಹೋಗಿ ಫೇಲ್ ಆಗಿದ್ದಾರೆ. ಆಪರೇಷನ್ ಮಾಡುವುದಕ್ಕೆ 15 ದಿನ ಆಪರೇಷನ್ ಥಿಯೇಟರ್ ಖಾಲಿ ಇಲ್ಲ” ಎಂದು ಹೇಳಿದ್ದಾರೆ.

    ಇದೇ ವೇಳೆ ಸಿಎಂ ಕುಮಾರಸ್ವಾಮಿ ಬಗ್ಗೆ ಮಾತನಾಡಿದ ಅವರು, “ಕುಮಾರಸ್ವಾಮಿ ಅವರನ್ನು ಟಚ್ ಮಾಡಿದವರಿಗೆ ಏನಾದರೂ ಆಗುತ್ತೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಹಾಗಾಗಿ ಸರ್ಕಾರಕ್ಕೆ ಏನು ಆಗುವುದಿಲ್ಲ. ಯಡಿಯೂರಪ್ಪ ಆಪರೇಷನ್ ಫೇಲ್ ಆಗಿದೆ. ಸರ್ಕಾರಕ್ಕೆ ಏನು ಆಗುವುದಿಲ್ಲ” ಎಂದು ಸಚಿವ ರೇವಣ್ಣ ಹೇಳಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕೋಪಯೋಗಿ ಸಚಿವರ ಕೆಲಸಕ್ಕೆ ಪತ್ನಿ ಭವಾನಿ ರೇವಣ್ಣ ಫುಲ್‌ ಮಾರ್ಕ್ಸ್‌

    ಲೋಕೋಪಯೋಗಿ ಸಚಿವರ ಕೆಲಸಕ್ಕೆ ಪತ್ನಿ ಭವಾನಿ ರೇವಣ್ಣ ಫುಲ್‌ ಮಾರ್ಕ್ಸ್‌

    – ರಾಜ್ಯವೇ ಒಂದು ಕಣ್ಣಾದ್ರೆ, ಹಾಸನವೇ ಒಂದು ಕಣ್ಣಿನಂತೆ!

    ಹಾಸನ: ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಅವರು ಇಲಾಖೆಯಲ್ಲಿ ಬಿಡುವಿಲ್ಲದೇ ಕಾರ್ಯನಿರ್ವಹಿಸುತ್ತಿದ್ದು, ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ ಎಂದು ಹಾಸನ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು ಆಗಿರುವ ಭವಾನಿ ರೇವಣ್ಣ ಅವರು ಹೇಳಿದ್ದಾರೆ.

    ಜಿಲ್ಲೆಯ ಚಿಕ್ಕಹೊನ್ನೇನಹಳ್ಳಿಯಲ್ಲಿ ಗ್ರಾಮದ ಟ್ರಸ್ಟ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪತಿ ರೇವಣ್ಣ ಅವರು ಯಾವಾಗ್ಲು ದೊಡ್ಡ ಕೆಲಸದ ಬಗ್ಗೆಯೇ ಯೋಚನೆ ಮಾಡುತ್ತಾರೆ. ಜನರು ಸಣ್ಣ ಪುಟ್ಟ ಕೆಲಸ ಕೇಳಿದರೆ ಕೂಡ ಮಾಡಿಸೋಣ ಎಂದು ಯಾವುದನ್ನೂ ಕೈಬಿಡದೆ ಮಾಡುತ್ತಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದು, ಅದಕ್ಕೆ ತಕ್ಕಂತೆ ಸಾಕಷ್ಟು ಅನುದಾನ ತಂದು ಕೆಲಸ ಮಾಡುತ್ತಿದ್ದಾರೆ ಎಂದು ಹಾಡಿ ಹೊಗಳಿದರು.

    ರೇವಣ್ಣ ಅವರ ಬಳಿ ಆಗುವುದಿಲ್ಲ ಎಂಬ ಪದವೇ ಇಲ್ಲ. ಅವರು ಹಾಸನದಿಂದ ಚನ್ನರಾಯಪಟ್ಟಣ ಕ್ರಾಸ್ ಮಾಡಿ ತೆರಳಿದ್ದಾರೆ ಎಂದರೆ ಯಾವುದೋ ಫೈಲ್ ಹಿಡಿದು ಬೆಂಗಳೂರಿಗೆ ಹೊರಟಿದ್ದಾರೆ ಎಂದರ್ಥ. ಆ ಕಡೆಯಿಂದ ನೆಲಮಂಗಲ ಬಿಟ್ಟು ಬಂದಿದ್ದರೆ ಅಂದರೆ ಆ ಕೆಲಸ ಮಾಡಿಸಿಕೊಂಡು ವಾಪಸ್ ಬರುತ್ತಿದ್ದಾರೆ ಎಂದರ್ಥ ಎಂದು ಯೋಚನೆ ಮಾಡುತ್ತೇವೆ. ಒಂದೊಮ್ಮೆ ಅವರು ಬೆಂಗಳೂರಿನಲ್ಲೇ ಉಳಿದರೆ ಹೋದ ಕೆಲಸಕ್ಕೆ ಸಂಬಂಧ ಪಟ್ಟ ಸಚಿವರೋ ಅಥವಾ ಅಧಿಕಾರಿಯೋ ಸಿಕ್ಕಿಲ್ಲ ಎಂದರ್ಥ ಎಂದು ತಿಳಿಸಿದರು.

    ರಾಜ್ಯವೇ ಅವರಿಗೆ ಒಂದು ಕಣ್ಣಾದ್ರೆ, ಹಾಸನವೇ ಒಂದು ಕಣ್ಣಿನಂತೆ ಎಂದು ಜನ ಹೇಳುತ್ತಾರೆ. ಆದರಂತೆ ಅವರು ಹೆಚ್ಚಿನ ಅನುದಾನ ತಂದು ಕೆಲಸ ಮಾಡಿಸುತ್ತಾರೆ. ಅವರಿಗೆ ನಮ್ಮ ಕುಟುಂಬದ ಸಂಪೂರ್ಣ ಬೆಂಬಲ ಇದ್ದು, ಕೆಲಸ ಮಾಡುವುದಲ್ಲಿ ರೇವಣ್ಣರವರು ಯಾವತ್ತೂ ಮೊದಲ ಸ್ಥಾನಕ್ಕೆ ಬರುತ್ತಾರೆ ಎಂದು ಪತಿ ಕೆಲಸದ ಬಗ್ಗೆ ಪತ್ನಿ ಭವಾನಿ ರೇವಣ್ಣ ಅವರು ಫುಲ್ ಮಾರ್ಕ್ಸ್‌ ಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv