Tag: Minister Puttaraju

  • ಮತ್ತೆ ಸಚಿವ ಪುಟ್ಟರಾಜು ಮನೆ ಮೇಲೆ ಐಟಿ ರೇಡ್

    ಮತ್ತೆ ಸಚಿವ ಪುಟ್ಟರಾಜು ಮನೆ ಮೇಲೆ ಐಟಿ ರೇಡ್

    ಮೈಸೂರು: ಸಚಿವ ಪುಟ್ಟರಾಜು ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

    ಮೈಸೂರಿನ ಯಾದವಗಿರಿಯಲ್ಲಿರುವ ಪುಟ್ಟರಾಜು ನಿವಾಸದ ಮೇಲೆ ಐಟಿ ದಾಳಿ ನಡೆಸಿದೆ. ಕಳೆದ 20 ದಿನಗಳ ಹಿಂದೆಯಷ್ಟೇ ಐಟಿ ದಾಳಿ ಎದುರಿಸಿದ್ದ ಇವರು ಮತ್ತೆ ಐಟಿ ದಾಳಿಯನ್ನ ಎದುರಿಸುತ್ತಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ದ್ವೇಷ ರಾಜಕಾರಣ ಪರಿಣಾಮ ಮತ್ತೆ ಐಟಿ ದಾಳಿ ನಡೆದಿದೆ. ನಾನು ಹಾಗೂ ಪುತ್ರ ಇಬ್ಬರು ಮಂಡ್ಯದ ಚುನಾವಣಾ ಪ್ರಚಾರದಲ್ಲಿ ಇದ್ದೇವೆ. ಆದರೆ ಈಗ ದಾಳಿ ನಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ. ಆದರೆ ನನಗೆ ಯಾವುದೇ ಮಾಹಿತಿಯನ್ನು ಐಟಿ ಅಧಿಕಾರಿಗಳು ನೀಡಿ ಮನೆಗೆ ಬರುವಂತೆ ತಿಳಿಸಿಲ್ಲ. ನನಗೆ ಮಾಹಿತಿ ಲಭಿಸಿದ ಬಳಿಕ ಸ್ಥಳಕ್ಕೆ ತೆರಳುವ ನಿರ್ಧಾರ ಮಾಡಿದ್ದು, ಪ್ರಚಾರ ಕಾರ್ಯ ನಡೆಸಿ ಮನೆಗೆ ಹೋಗುತ್ತೇನೆ. ಬಿಜೆಪಿ ಅವರ ಕುಮ್ಮಕ್ಕಿನಿಂದ ಈ ದಾಳಿಗಳು ನಡೆಯುತ್ತಿವೆ ಎಂದರು.

    ಕಳೆದ 20 ದಿನಗಳ ಹಿಂದೆ ಪುಟ್ಟರಾಜು ಅವರ ನಿವಾಸ ಹಾಗೂ ಸಂಬಂಧಿಕರ ಮನೆ ಮೇಲೆ ದಾಳಿ ನಡೆದಿತ್ತು. ಈ ವೇಳೆಯೂ ದಾಳಿಯ ಕುರಿತು ಕಿಡಿ ಕಾರಿದ್ದ ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಆ ಬಳಿಕ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಆತ್ಮಾನಂದ ಮನೆ ಮೇಲಿನ ಐಟಿ ದಾಳಿ ವಿರುದ್ಧವೂ ಪುಟ್ಟರಾಜು ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಇಂತಹ ಸಾವಿರ ಐಟಿ ದಾಳಿ ಮಾಡಿದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರನ್ನು ಹೆದರಿಸಲು ಸಾಧ್ಯವಿಲ್ಲ. ಮೈತ್ರಿ ಪಕ್ಷಗಳ ಮುಖಂಡರ ಸಭೆ ಆತ್ಮಾನಂದ ಅವರ ಮನೆಯಲ್ಲಿ ನಡೆದಿತ್ತು. ಈ ಮೂಲಕ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ನಡೆಸುವ ಹುನ್ನಾರ ಎನ್ನುವುದು ನಮಗೆ ಗೊತ್ತಾಗುತ್ತಿದೆ ಎಂದು ಹೇಳಿದ್ದರು.

  • ಮಂಡ್ಯದಲ್ಲಿ ಮತ್ತೊಂದು ಭೀಕರ ಅಪಘಾತ – ಆಟೋಗೆ ಟಿಪ್ಪರ್ ಡಿಕ್ಕಿಯಾಗಿ 5 ಮಂದಿ ದುರ್ಮರಣ

    ಮಂಡ್ಯದಲ್ಲಿ ಮತ್ತೊಂದು ಭೀಕರ ಅಪಘಾತ – ಆಟೋಗೆ ಟಿಪ್ಪರ್ ಡಿಕ್ಕಿಯಾಗಿ 5 ಮಂದಿ ದುರ್ಮರಣ

    – ಮೃತದೇಹಗಳು ಛಿದ್ರ ಛಿದ್ರ

    ಮಂಡ್ಯ: ಜಿಲ್ಲೆಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಆಟೋಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಐದು ಮಂದಿ ಮೃತಪಟ್ಟಿರುವ ಘಟನೆ ನಾಗಮಂಗಲ ತಾಲೂಕಿನ ಸಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಶುಕ್ರವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಮೃತರನ್ನು ಮಂಡ್ಯ ಜಿಲ್ಲೆಯ ಸುಖದಾರೆ ಗ್ರಾಮದ ಕುಮಾರ್ (42), ಕಾಳೇನಹಳ್ಳಿಯ ಅರಸಮ್ಮ(40), ಆಟೋ ಡ್ರೈವರ್ ಸತೀಶ್(40), ಬೋರಲಿಂಗ(40) ಮತ್ತು ತಮಿಳುನಾಡಿನ ಸುರೇಶ್ ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಳ್ಳೂರು ಕ್ರಾಸ್‍ನಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮೃತರು ಹಾಗೂ ಗಾಯಾಳುಗಳೆಲ್ಲರೂ ಶುಕ್ರವಾರ ಸಂತೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ನಾಗಮಂಗಲಕ್ಕೆ ಆಟೋದಲ್ಲಿ ಹೋಗಿದ್ದರು. ಬಳಿಕ ಕೆಲಸ ಮುಗಿಸಿಕೊಂಡು ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದರು. ಆದರೆ ಸಂಕನಹಳ್ಳಿ ಗೇಟ್ ಬಳಿ ಆಟೋ ಬರುತ್ತಿದ್ದಂತೆ ಎದುರಿನಿಂದ ಬಂದ ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೆ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಟಿಪ್ಪರ್ ನ ಕೆಳಗೆ ಸಿಲುಕಿದ್ದು, ಸುಮಾರು ಅರ್ಧ ಕಿಲೋ ಮೀಟರ್ ದೂರದವರೆಗೆ ಆಟೋವನ್ನು ಟಿಪ್ಪರ್ ಎಳೆದುಕೊಂಡು ಹೋಗಿದೆ. ಪರಿಣಾಮ ಟಿಪ್ಪರ್ ಕೆಳಗೆ ಸಿಲುಕಿದ ಆಟೋದಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಸ್ತುವಾರಿ ಸಚಿವ ಪುಟ್ಟರಾಜು ಅವರು ಮೃತರ ಕುಟುಂಬಸ್ಥರು ಮತ್ತು ಗಾಯಾಳುಗಳ ಮನೆಯವರು ಆಸ್ಪತ್ರೆಗೆ ತೆರಳಲು ಖಾಸಗಿ ಬಸ್ ವ್ಯವಸ್ಥೆ ಮಾಡಿದರು. ಅವರು ಕೂಡ ಆಸ್ಪತ್ರೆಗೆ ತೆರಳಿ ಮೃತರ ಕುಟುಂಬದವರಿಗೆ, ಗಾಯಾಳುಗಳಿಗೆ ಸಾಂತ್ವನ ಹೇಳಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.

    ಈ ಕುರಿತು ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.