Tag: Minister Prabhu Chauhan

  • ಕೆಲಸ ಮಾಡಿ ಇಲ್ಲವೇ ಜಾಗ ಖಾಲಿ ಮಾಡಿ: ಅಧಿಕಾರಿಗಳಿಗೆ ಸಚಿವ ಪ್ರಭು ಚವ್ಹಾಣ್ ಎಚ್ಚರಿಕೆ

    ಕೆಲಸ ಮಾಡಿ ಇಲ್ಲವೇ ಜಾಗ ಖಾಲಿ ಮಾಡಿ: ಅಧಿಕಾರಿಗಳಿಗೆ ಸಚಿವ ಪ್ರಭು ಚವ್ಹಾಣ್ ಎಚ್ಚರಿಕೆ

    ಬೆಂಗಳೂರು: ಇಲಾಖೆಯ ಬಲವರ್ಧನೆಗೆ ಶ್ರಮಿಸಿ ಇಲ್ಲವೇ ಜಾಗ ಖಾಲಿ ಮಾಡಿ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದರು.

    ಕೇಂದ್ರ ಸ್ಥಾನದಲ್ಲಿ ಅಧಿಕಾರಿಗಳು ಇರುವುದೇ ಇಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ ಎಂದು ಸಚಿವರು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು. ಕೃಷಿಯೊಂದಿಗೆ ರೈತಾಪಿ ವರ್ಗ ಪಶುಸಂಗೋಪನೆಯನ್ನು ಅವಲಂಬಿಸಿದ್ದಾರೆ. ಸಕಾಲದಲ್ಲಿ ಜಾನುವಾರುಗಳ ಆರೋಗ್ಯ ನೋಡಿಕೊಳ್ಳಲು ಅವರೆಲ್ಲ ನಮ್ಮ ಇಲಾಖೆಯನ್ನು ಅವಲಂಬಿಸಿದ್ದಾರೆ. ಇಂತಹ ಸಮಯದಲ್ಲಿ ಕರ್ತವ್ಯ ಲೋಪವಾದರೆ ಪಶುಪಾಲಕರಿಗೆ ಆರ್ಥಿಕ ಸಂಕಷ್ಟ, ಜಾನುವಾರುಗಳು ಜೀವ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಅವರು ಮಾತನಾಡಿದರು. ಇದನ್ನೂ ಓದಿ: ಕೋವಿಡ್ ಟಫ್‌ ರೂಲ್ಸ್‌ ಜಾರಿಯಾದ್ರೂ ಪಾದಯಾತ್ರೆ ಮಾಡೇ ಮಾಡ್ತೀವಿ: ಸಿದ್ದರಾಮಯ್ಯ

    ಉತ್ತರಪ್ರದೇಶದಲ್ಲಿ 17 ಸಾವಿರ ಜಾನುವಾರುಗಳಿಗೆ ಒಬ್ಬ ಪಶುವೈದ್ಯರಿದ್ದಾರೆ. ಆದರೆ ನಮ್ಮಲ್ಲಿ ಅಂದಾಜು 4 ಸಾವಿರ ಜಾನುವಾರುಗಳಿಗೆ ಒಬ್ಬ ಪಶುವೈದ್ಯರಿದ್ದಾರೆ. ಇಂತಹ ಸಮಯದಲ್ಲಿ ನಿರ್ಹವಣೆ ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮಲ್ಲಿ ಹೆಚ್ಚು ಒತ್ತಡವಿಲ್ಲ. ಹೀಗಾಗಿ ಜಾನುವಾರುಗಳಿಗೆ ಹೆಚ್ಚು ಸಮರ್ಪಕವಾಗಿ ಚಿಕಿತ್ಸೆ ನೀಡಬಹುದಾಗಿದೆ. ನಿಮಗೆ ಬೇರೆ ರಾಜ್ಯದ ಪಶುವೈದ್ಯರಷ್ಟು ಒತ್ತಡವಿಲ್ಲ. ಹೀಗಾಗಿ ಜವಾಬ್ದಾರಿಯಿಂದ ಸಮಯಪ್ರಜ್ಞೆಯಿಂದ ಕರ್ತವ್ಯ ನಿರ್ವಹಣೆ ಮಾಡಿ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿಯವರಿಗೆ ಮೆದುಳಿಗೆ ನಾಲಿಗೆಗೆ ಕನೆಕ್ಷನ್ ಇಲ್ಲ: ಶಿವರಾಜ್ ತಂಗಡಗಿ

  • ಪ್ರತಿ ಮನೆಯಲ್ಲಿ ಗೋವು ಪಾಲನೆಯಾಗಲಿ: ಪ್ರಭು ಚವ್ಹಾಣ್

    ಪ್ರತಿ ಮನೆಯಲ್ಲಿ ಗೋವು ಪಾಲನೆಯಾಗಲಿ: ಪ್ರಭು ಚವ್ಹಾಣ್

    ಬೀದರ್: ನಮ್ಮ ಪರಂಪರೆಯಲ್ಲಿ ತಾಯಿಯ ಸ್ಥಾನಮಾನ ಹೊಂದಿರುವ ಗೋವನ್ನು ಪ್ರತಿ ಮನೆಯಲ್ಲಿಯೂ ಪಾಲನೆ ಮಾಡಬೇಕೆನ್ನುವ ಸದಾಶಯ ಹೊಂದಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.

    ಔರಾದ್ ತಾಲೂಕಿನ ಬೋಂತಿ ತಾಂಡಾದಲ್ಲಿ ಜುಲೈ 6ರಂದು ಕೋವಿಡ್ ಲಸಿಕಾಕರಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗೋವು ಅತ್ಯಂತ ಪೂಜ್ಯನೀಯ ಪ್ರಾಣಿಯಾಗಿದೆ. ಹಾಲು, ಗೋಮೂತ್ರ ಹಾಗೂ ಸಗಣಿ ಹೀಗೆ ಗೋವಿನ ಪ್ರತಿ ಉತ್ಪನ್ನವೂ ಉಪಯೋಗಕ್ಕೆ ಬರುತ್ತದೆ. ಇವುಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಿ ಗೋಪಾಲನೆಯನ್ನು ಇನ್ನಷ್ಟು ಲಾಭದಾಯಕ ಕೆಲಸವನ್ನಾಗಿ ಮಾಡುವ ಪ್ರಯತ್ನಗಳು ನಡೆದಿವೆ. ಯೋಗ ಗುರು ಬಾಬಾ ರಾಮ್‍ದೇವ್ ಅವರೊಂದಿಗೆ ಮಾತುಕತೆಯೂ ನಡೆದಿದೆ ಎಂದರು.

    ಪಶು ಸಂಗೋಪನೆ ಇಲಾಖೆಯನ್ನು ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿದ್ದೇನೆ. ಧರ್ಮ ಗುರು ಸಂತ ಸೇವಾಲಾಲ ಮಹಾರಾಜರ ಆಶಯದಂತೆ ಗೋವುಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಹಿಂದೆ ಎಲ್ಲರೂ ತಾತ್ಸಾರದಿಂದ ನೋಡುತ್ತಿದ್ದ ಪಶು ಸಂಗೋಪನೆ ಇಲಾಖೆಯನ್ನು ಸಚಿವನಾದ ನಂತರ ಎಲ್ಲರೂ ಕಣ್ಣೆತ್ತಿ ನೋಡುವಂತೆ ಬದಲಾವಣೆ ತರಲಾಗಿದೆ ಎಂದರು.

  • ಕಾಲುಬಾಯಿ ರೋಗ ಹತೋಟಿಗೆ ಕ್ರಮ: ಸಚಿವ ಪ್ರಭು ಚವ್ಹಾಣ್

    ಕಾಲುಬಾಯಿ ರೋಗ ಹತೋಟಿಗೆ ಕ್ರಮ: ಸಚಿವ ಪ್ರಭು ಚವ್ಹಾಣ್

    ಬೆಂಗಳೂರು: ಆನೇಕಲ್, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರದಲ್ಲಿ ಕಾಲುಬಾಯಿ ರೋಗಕ್ಕೆ ಲಸಿಕೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಕಾಲುಬಾಯಿ ರೋಗೋದ್ರೇಕ ಕಂಡು ಬಂದ ತಕ್ಷಣ ಸಭೆ ನಡೆಸಿ ಖಾಸಗಿ ಲಸಿಕಾ ಸಂಸ್ಥೆಗಳಿಂದ ಲಸಿಕೆ ಖರೀದಿಸಿ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಪಶುಸಂಗೋಪನೆ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

    ಶನಿವಾರ ಟ್ವೀಟ್ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಲುಬಾಯಿ ರೋಗಕ್ಕೆ ಲಸಿಕಾ ಅಭಿಯಾನ ನಡೆಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಗೋವುಗಳ ಬಗ್ಗೆ ಅವರ ಕಾಳಜಿಗೆ ಅಭಿನಂದಿಸುತ್ತೇನೆ. ಕಾಲುಬಾಯಿ ರೋಗದ ಗಂಭೀರತೆ ಬಗ್ಗೆ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು ರೋಗೋದ್ರೇಕ ಕಂಡುಬಂದ ಜಿಲ್ಲೆಗಳಲ್ಲಿ ಖಾಸಗಿ ಸಂಸ್ಥೆಗಳಿಂದ ಲಸಿಕೆ ಖರೀದಿಸಿ ರಾಸುಗಳ ಆರೋಗ್ಯ ಕಾಪಾಡಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಯಾವುದೇ ರಾಸುಗಳ ಸಾವು ಸಂಭವಿಸಿಲ್ಲ. ರೋಗದ ಲಕ್ಷಣ ಕಂಡುಬಂದ ರಾಸುಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಈ ವ್ಯಾಪ್ತಿಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬೇರೆ ರಾಸುಗಳಿಗೂ ತಕ್ಷಣದಲ್ಲಿಯೇ ಅಧಿಕಾರಿಗಳು ಲಸಿಕೆ ನೀಡುತ್ತಿರುವುದರಿಂದ ಕಾಲುಬಾಯಿ ರೋಗ ಹತೋಟಿಯಲ್ಲಿದೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ಇದನ್ನೂ ಓದಿ: ಗೋವುಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂಥ ‘ಗೋ’ರಕ್ಷಣೆ? – ಕುಮಾರಸ್ವಾಮಿ ಪ್ರಶ್ನೆ

    ಲಸಿಕೆ ನೀಡಿದ ಜಿಲ್ಲೆಗಳು: ಚಿಕ್ಕಬಳ್ಳಾಪುರದಲ್ಲಿ 2100, ಆನೇಕಲ್ 1450 ಹಾಗೂ ರಾಮನಗರದ 70 ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ರಾಮನಗರದಲ್ಲಿ 5 ರಾಸುಗಳಲ್ಲಿ ರೋಗೋದ್ರೇಕ ಕಾಣಿಸಿಕೊಂಡಿತ್ತು. ಅದರಲ್ಲಿ 4 ರಾಸುಗಳು ಆರೋಗ್ಯ ಸ್ಥಿರವಾಗಿದ್ದು ಒಂದು ರಾಸುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಯಾವುದೇ ಜಿಲ್ಲೆಗಳಲ್ಲಿ ಕಾಲುಬಾಯಿ ರೋಗದಿಂದ ರಾಸುಗಳ ಸಾವು ಸಂಭವಿಸಿಲ್ಲ.

    ಕಳೆದ ನವೆಂಬರ್ – ಡಿಸೆಂಬರ್‌ನಲ್ಲಿ ಕಾಲುಬಾಯಿ ಲಸಿಕಾ ಅಭಿಯಾನ ಮಾಡಲಾಗಿದೆ. 2013 ರಿಂದ ಪ್ರತಿವರ್ಷ ಲಸಿಕೆ ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪ್ರತಿ ವರ್ಷ ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರ 60:40 ಅನುಪಾತದಲ್ಲಿ ಲಸಿಕಾ ಕಾರ್ಯಕ್ರಮ ನಡೆಯುತ್ತಿತ್ತು. ಕಳೆದ ವರ್ಷದಿಂದ ಕಾಲುಬಾಯಿ ರೋಗದ ಲಸಿಕಾ ಅಭಿಯಾನ ಸಂಪೂರ್ಣವಾಗಿ ಕೇಂದ್ರದ ಯೋಜನೆಯಾಗಿ ನಡೆಯುತ್ತಿದೆ. ಈ ಸಲ ಕೋವಿಡ್‌ನಿಂದಾಗಿ ಕೇಂದ್ರದಿಂದ ಲಸಿಕಾ ವೇಳಾಪಟ್ಟಿ ನೀಡುವುದು ವಿಳಂಬವಾಗಿದೆ.

    ಸದ್ಯ ಕೇಂದ್ರ ಸರ್ಕಾರದೊಂದಿಗೆ ಎಲ್ಲ ಅಗತ್ಯ ಸಂಹವನ ನಡೆಸಲಾಗಿದ್ದು ಜುಲೈ ತಿಂಗಳಿನಲ್ಲಿ ಸಾಮೂಹಿಕ ಲಸಿಕಾ ಅಭಿಯಾನ ನಡೆಯುವ ಮಾಹಿತಿ ಕೇಂದ್ರ ಸರ್ಕಾರದಿಂದ ದೊರೆತಿದೆ. ಸದ್ಯ ರೋಗೋದ್ರೇಕ ಕಂಡು ಬಂದಲ್ಲಿ ಸ್ಥಳೀಯವಾಗಿ ಅಗತ್ಯತೆಗೆ ಅನುಗುಣವಾಗಿ ಆಯಾ ಜಿಲ್ಲೆಗಳಲ್ಲಿ ಲಸಿಕೆ ಖರೀದಿಗೆ ತಾಂತ್ರಿಕ ಅನುಮೋದನೆ ನೀಡಲಾಗಿದ್ದು ರಾಸುಗಳ ಆರೋಗ್ಯದ ದೃಷ್ಟಿಯಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಲು ಈಗಾಗಲೇ ಅಧಿಕಾರಿಗಳಿಗೆ ತಿಳಿಸಲಾಗಿದೆ.

  • ನನ್ ಹತ್ರ ಉಲ್ಟಾ ಪಲ್ಟಾ ನಡೆಯಲ್ಲ- ಅಧಿಕಾರಿಗಳಿಗೆ ಸಚಿವ ಚವ್ಹಾಣ್ ಖಡಕ್ ವಾರ್ನಿಂಗ್

    ನನ್ ಹತ್ರ ಉಲ್ಟಾ ಪಲ್ಟಾ ನಡೆಯಲ್ಲ- ಅಧಿಕಾರಿಗಳಿಗೆ ಸಚಿವ ಚವ್ಹಾಣ್ ಖಡಕ್ ವಾರ್ನಿಂಗ್

    ಬೀದರ್: ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಪ್ಲ್ಯಾನಿಂಗ್ ಸಭೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಖಡಕ್ ವಾರ್ನಿಂಗ್ ಮಾಡಿದ್ದಾರೆ.

    ಜಿಲ್ಲಾಮಟ್ಟದ ಅಧಿಕಾರಿಗಳು ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿದರೆ ಕೆಳ ಹಂತದ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಆದರೆ ನೀವು ಮಾತ್ರ ನಗರದಲ್ಲೇ ಇದ್ದು ಕೆಲ ಮಾಡುತ್ತೀರಿ ಎಂದು ಸಚಿವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

    ಈ ವೇಳೆ ಸಬೂಬು ನೀಡಲು ಬಂದ ಅಧಿಕಾರಿಗಳ ವಿರುದ್ಧ ಗುಡುಗಿದ ಸಚಿವರು, ನನ್ನ ಹತ್ತಿರ ಉಲ್ಟಾ ಪಲ್ಟಾ ನಡೆಯಲ್ಲ. ಎಲ್ಲಾ ತಾಲೂಕು ಕೇಂದ್ರಗಳಿಗೆ ನೀವು ದಿಢೀರ್ ಭೇಟಿ ನೀಡಬೇಕು. ಅಭಿವೃದ್ಧಿ ಕೆಲಸಗಳು ಆಗಬೇಕು. ಆಗಿದ್ದು ಜನರಿಗೆ ಕಾಣಬೇಕು. ಮಾತಿನಿಂದ ಏನೂ ಆಗಲ್ಲ. ಮಾಡುತ್ತೇನೆ ಎಂದು ಹೇಳಿ ಜಾರಿಕೊಂಡರೆ ನನ್ನ ಹತ್ತಿರ ನಡೆಯಲ್ಲ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

    ನೀವು ಕುರ್ಚಿ ಬಿಟ್ಟು ತಾಲೂಕು ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಅಭಿವೃದ್ಧಿ ಕೆಲಸಗಳನ್ನು ಮಾಡಿದಾಗ ಮಾತ್ರ ನಾನು ನಿಮ್ಮನ್ನು ಪ್ರೀತಿಯಿಂದ ಕಾಣುತ್ತೇನೆ ಎಂದು ಹೇಳಿದರು. ಇದಕ್ಕೂ ಮೊದಲು ಬ್ರೀಮ್ಸ್ ಆಸ್ಪತ್ರೆಗೆ ರೋಗಿಗಳು ಬಂದ್ರೆ ಹೈದರಾಬಾದ್ ಹಾಗೂ ಸೊಲ್ಲಾಪುರ್‍ಗೆ ಕಳಿಸುತ್ತಾರೆ ಎಂಬ ಜನರ ಆರೋಪದ ಬಗ್ಗೆ ಮಾತನಾಡಿದ ಸಚಿವರು, ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಮಾಡಬೇಕು. ಈ ಮೂಲಕ ಹೈದ್ರಾಬಾದ್, ಸೊಲ್ಲಾಪುರ ಮುಕ್ತ ಬೀದರ್ ಆಗಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸಚಿವರು ಕ್ಲಾಸ್ ತೆಗೆದುಕೊಂಡರು.

  • ಪಶು ವಿವಿಯಲ್ಲಿ ಕಿಂಗ್ ಫಿಶರ್ ಬಿಯರ್ ಬಾಕ್ಸ್ – ವಿಸಿಗೆ ಸಚಿವರಿಂದ ತರಾಟೆ

    ಪಶು ವಿವಿಯಲ್ಲಿ ಕಿಂಗ್ ಫಿಶರ್ ಬಿಯರ್ ಬಾಕ್ಸ್ – ವಿಸಿಗೆ ಸಚಿವರಿಂದ ತರಾಟೆ

    – ನೀವಿಲ್ಲಿ ಪಾಠ ಮಾಡ್ತಿರೋ ಅಥವಾ ಪಾರ್ಟಿ ಮಾಡ್ತಿರೋ

    ಬೀದರ್: ಪಶು ವೈದ್ಯಕೀಯ, ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದಲ್ಲಿ ಕಿಂಗ್ ಫಿಶರ್ ಬಿಯರ್ ನ  ಖಾಲಿ ಬಾಕ್ಸ್ ಗಳು ಪತ್ತೆಯಾಗಿವೆ. ಇದನ್ನು ಕಂಡು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಕೆಂಡಾಮಂಡಲರಾಗಿದ್ದು, ಉಪಕುಲಪತಿ ನಾರಾಯಣ ಸ್ವಾಮಿಯ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.

    ಕಮಠಾಣಾ ಬಳಿಯ ಪಶು ವೈದ್ಯಕೀಯ, ಮೀನುಗಾರಿಕೆ ವಿಜ್ಞಾನಿಗಳ ವಿವಿಗೆ ಸಚಿವರು ದಿಢೀರ್ ಭೇಟಿ ನೀಡಿದ್ದ ವೇಳೆ ಕಿಂಗ್ ಫಿಶರ್ ಖಾಲಿ ಕಾಟನ್ ಬಾಕ್ಸ್ ಪತ್ತೆಯಾಗಿವೆ. ಈ ವೇಳೆ ಕಾಲೇಜು ಒಳಗಡೆ ಕಿಂಗ್ ಫಿಶರ್ ಬಾಕ್ಸ್ ಬಂದಿದ್ದು ಹೇಗೆ? ನೀವು ಪಾರ್ಟಿ ಮಾಡ್ತಿರಾ ಎಂದು ಉಪಕುಲಪತಿಯವರನ್ನು ಪ್ರಶ್ನಿಸಿದ್ದಾರೆ.

    ಪಶು ವಿವಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದು, ಕಿಂಗ್ ಫಿಶರ್ ಕಾಟನ್ ಬಾಕ್ಸ್ ಗಳನ್ನು ನೋಡಿ ಉಪಕುಲಪತಿ ನಾರಾಯಣ ಸ್ವಾಮಿಯವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ವಿಸಿ ಬೇರೆ ವಸ್ತುಗಳನ್ನು ಪ್ಯಾಕ್ ಮಾಡುವಾಗ ಇಂತಹ ಬಾಕ್ಸ್‍ಗಳಲ್ಲೇ ಪ್ಯಾಕ್ ಮಾಡುತ್ತಾರೆ ಎಂದು ಉತ್ತರಿಸಿದ್ದಾರೆ.

    ಇಷ್ಟಕ್ಕೇ ಸುಮ್ಮನಾಗದ ಸಚಿವರು, ಕಾಲೇಜಿನಲ್ಲಿ ಕಿಂಗ್ ಫಿಶರ್ ಬಾಟಲ್ ಬಾಕ್ಸ್ ಬಂದಿದ್ದು ಹೇಗೆ ಎಂದು ಫುಲ್ ಗರಂ ಆಗಿದ್ದಾರೆ. ನೋಡಿ ಇದರ ಮೇಲೆ ಕಿಂಗ್ ಫಿಶರ್ ಮೈಲ್ಡ್ ಬಿಯರ್ ಎಂದು ಬರೆದಿದೆ. ನೀವು ಇಲ್ಲಿ ಪಾಠ ಮಾಡುತ್ತೀರೋ ಅಥವಾ ಪಾರ್ಟಿ ಮಾಡುತ್ತಿರೋ ಎಂದು ಪ್ರಶ್ನಿಸಿ ಕೆಂಡಾಮಂಡಲರಾಗಿದ್ದಾರೆ.

  • ಕರ್ತವ್ಯಕ್ಕೆ ಗೈರಾಗಿದ್ದ ‘ಡಿ’ ಗ್ರೂಪ್ ನೌಕರನನ್ನ ಅಮಾನತು ಮಾಡಿದ ಪ್ರಭು ಚೌವ್ಹಾಣ್

    ಕರ್ತವ್ಯಕ್ಕೆ ಗೈರಾಗಿದ್ದ ‘ಡಿ’ ಗ್ರೂಪ್ ನೌಕರನನ್ನ ಅಮಾನತು ಮಾಡಿದ ಪ್ರಭು ಚೌವ್ಹಾಣ್

    ಕಲಬುರಗಿ: ಜಿಲ್ಲೆಯ ಪಶುಸಂಗೋಪನೆ ಇಲಾಖೆಗೆ ಸಚಿವ ಪ್ರಭು ಚೌವ್ಹಾಣ್ ಧಿಡೀರ್ ಭೇಟಿ ನೀಡಿದ್ದು, ಸತತ ಎರಡು ತಿಂಗಳಿನಿಂದ ಕರ್ತವ್ಯಕ್ಕೆ ಗೈರಾಗಿದ್ದ ‘ಡಿ’ ಗ್ರೂಪ್ ನೌಕರನನ್ನು ಅಮಾನತು ಮಾಡಿದ್ದಾರೆ.

    ‘ಡಿ’ ಗ್ರೂಪ್ ನೌಕರ ಉಪೇಂದ್ರರನ್ನು ಅಮಾನತುಗೊಳಿಸಲಾಗಿದೆ. ಸತತ 2 ತಿಂಗಳಿನಿಂದ ಕರ್ತವ್ಯಕ್ಕೆ ಬರದೆ ಉಪೇಂದ್ರ ಗೈರಾಗಿದ್ದರು. ಕಚೇರಿ ಭೇಟಿ ವೇಳೆ ಈ ವಿಚಾರ ತಿಳಿದ ಸಚಿವರು ಬೇಜವಾಬ್ದಾರಿ ತೋರಿದ ನೌಕರನ ಮೇಲೆ ಗರಂ ಆಗಿ ಅಮಾನತು ಮಾಡಿದ್ದಾರೆ. ಇದೇ ವೇಳೆ ಪಶು ಆಸ್ಪತ್ರೆ ಅವ್ಯವಸ್ಥೆ ಕಂಡು ಉಪನಿರ್ದೇಶಕ ಹನುಮಂತಪ್ಪ ಮೇಲೂ ಸಚಿವರು ಗರಂ ಆಗಿದ್ದು, ಆಸ್ಪತ್ರೆಯಲ್ಲಿನ ಎಕ್ಸ್-ರೇ ಮಷಿನ್, ಪಿಠೋಪಕರಣಗಳು ತುಕ್ಕು ಹಿಡಿದಿರುವುದನ್ನ ಕಂಡು ಎಲ್ಲವನ್ನು 1 ತಿಂಗಳಿನಲ್ಲಿ ಸರಿಪಡಿಸುವಂತೆ ಸೂಚಿಸಿದ್ದಾರೆ.

    ಈ ಹಿಂದೆ ಬೀದರ್‍ನಲ್ಲಿ ಪಶು ವೈದ್ಯಕೀಯ ಕಚೇರಿಗೆ ಪ್ರಭು ಚವ್ಹಾಣ್ ಅವರು ದಿಢೀರ್ ಭೇಟಿ ನೀಡಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲದ ಕಾರಣಕ್ಕೆ ಸಚಿವರನ್ನು ಕಂಡು ಕಂಗಾಲಾಗಿದ್ದರು. ಕಚೇರಿಯಲ್ಲಿ ಸ್ವಚ್ಛತೆ ಕಾಪಾಡದೇ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಜಾನುವಾರು ಅಭಿವೃದ್ಧಿ ಅಧಿಕಾರಿ ಎನ್. ಗಾಂಧಿ ಹಾಗೂ ‘ಡಿ’ ಗ್ರೂಪ್ ನೌಕರ ಬಾಬು ಗುಟ್ಕಾ ಹಾಗೂ ಮದ್ಯಪಾನ ಸೇವಿಸಿ ಕರ್ತವ್ಯಕ್ಕೆ ಬಂದಿದ್ದರು. ಇವರನ್ನು ಗಮನಿಸಿದ ಸಚಿವರು ಇಬ್ಬರನ್ನು ಅಮಾನತುಗೊಳಿಸುವಂತೆ ಆದೇಶ ನೀಡಿದ್ದರು.

    ಕೆಲಸಕ್ಕೆ ಗೈರಾದ ಅಧಿಕಾರಿಗಳಿಗೂ ಫುಲ್ ಕ್ಲಾಸ್ ತೆಗೆದುಕೊಳ್ಳಲಾಗಿತ್ತು. ಕೆಲಸಕ್ಕೆ ಹಾಜರಾಗದ 6ಕ್ಕೂ ಹೆಚ್ಚು ಅಧಿಕಾರಿಗಳ ಹೆಸರನ್ನು ಪಡೆದು ಅವರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದ್ದಾರೆ. ಅಲ್ಲದೆ ಕರ್ತವ್ಯ ಲೋಪ ಮಾಡುವ ಸಿಬ್ಬಂದಿ ಅಥವಾ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

  • ಮೋದಿ ಹುಟ್ಟುಹಬ್ಬ – ಬೆಂಬಲಿಗರೊಂದಿಗೆ ಐಸಿಯುಗೆ ನುಗ್ಗಿ ರೋಗಿಗಳಿಗೆ ಹಣ್ಣು ವಿತರಿಸಿದ ಸಚಿವ ಪ್ರಭು ಚೌವ್ಹಾಣ್

    ಮೋದಿ ಹುಟ್ಟುಹಬ್ಬ – ಬೆಂಬಲಿಗರೊಂದಿಗೆ ಐಸಿಯುಗೆ ನುಗ್ಗಿ ರೋಗಿಗಳಿಗೆ ಹಣ್ಣು ವಿತರಿಸಿದ ಸಚಿವ ಪ್ರಭು ಚೌವ್ಹಾಣ್

    ಬೀದರ್: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ. ಅದೇ ರೀತಿ ರೋಗಿಗಳಿಗೆ ಹಣ್ಣು ಹಂಚುವ ಸಂದರ್ಭದಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಎಡವಟ್ಟು ಮಾಡಿದ್ದು, ಹತ್ತಾರು ಬೆಂಬಲಿಗರೊಂದಿಗೆ ತುರ್ತುನಿಗಾ ಘಟಕ(ಐಸಿಯು)ಕ್ಕೆ ನುಗ್ಗಿ ಹಣ್ಣು ಹಂಚಿದ್ದಾರೆ.

    ಮೋದಿ ಜನ್ಮ ದಿನ ಆಚರಣೆ ಅಂಗವಾಗಿ ಇಂದು ಬೀದರ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ಹಂಚುತ್ತಿದ್ದರು. ಈ ವೇಳೆ ಕೇವಲ ವಾರ್ಡ್‍ನಲ್ಲಿರುವ ರೋಗಿಗಳಿಗೆ ಹಣ್ಣುಗಳನ್ನು ಹಂಚದೆ, ಐಸಿಯುನಲ್ಲಿರುವ ರೋಗಿಗಳಿಗೂ ಹಣ್ಣುಗಳನ್ನು ಹಂಚಿದ್ದು, ಈ ಮೂಲಕ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ರೋಗಿಗಳಿಗೆ ಸಚಿವರು ತೊಂದರೆ ಕೊಟ್ಟಿದ್ದಾರೆ.

    ಸಚಿವರು ಹಾಗೂ ಅವರೊಂದಿಗೆ 50ಕ್ಕೂ ಹೆಚ್ಚು ಬೆಂಬಲಿಗರು ಶೂ ಹಾಕಿಕೊಂಡೇ ಐಸಿಯುಗೆ ನುಗ್ಗಿದ್ದು, ತುರ್ತುನಿಗಾ ಘಟಕಕ್ಕೆ ಒಂದೇ ಸಮಯಕ್ಕೆ ಹತ್ತಾರು ಮಂದಿ ನುಗ್ಗಿದ್ದರಿಂದ ರೋಗಿಗಳು ತೊಂದರೆ ಅನುಭವಿಸುವಂತಾಯಿತು. ಐಸಿಯುನಲ್ಲಿರುವ ರೋಗಿಗಳನ್ನು ಭೇಟಿ ಮಾಡಲು ಅವಕಾಶ ನೀಡುವುದಿಲ್ಲ, ಒಂದು ವೇಳೆ ಹೋದರೂ ಸಹ ಒಬ್ಬಿಬ್ಬರು ಮಾತ್ರ ತೆರಳಬೇಕು. ಆದರೆ, ಸಚಿವರು ಇದಾವುದನ್ನೂ ಲೆಕ್ಕಿಸದೆ ಹತ್ತಾರು ಬೆಂಬಲಿಗರೊಂದಿಗೆ ನುಗ್ಗಿದ್ದಾರೆ.

    ಈ ಮೂಲಕ ಆಸ್ಪತ್ರೆಯ ನಿಯಮವನ್ನು ಗಾಳಿಗೆ ತೂರಿದ್ದು, ಸಾಮಾನ್ಯ ವಾರ್ಡ್‍ನಲ್ಲಿ ದಾಖಲಾಗಿರುವ ರೋಗಿಗಳಿಗೆ ಮಾತ್ರ ಹಣ್ಣು ವಿತರಣೆ ಮಾಡದೆ, ಐಸಿಯುಗೂ ನುಗ್ಗಿ ವೈದ್ಯರಿಗೂ ಸಹ ಇರುಸುಮುರುಸು ಉಂಟುಮಾಡಿದ್ದಾರೆ.