– ಆಪರೇಷನ್ ಕಮಲದ ವೇಳೆ ಸಚಿವ ಸ್ಥಾನ ಆಫರ್ ಬಂದಿತ್ತು ಎಂದ ಶಾಸಕ
– ಪವರ್ ಶೇರಿಂಗ್ ವಿಚಾರ ಹೈಕಮಾಂಡ್ ಗುಪ್ತವಾಗಿಟ್ಟಿದೆ
ಚಿಕ್ಕಬಳ್ಳಾಪುರ: ನನಗೆ ಸಚಿವ ಸ್ಥಾನ ಕೇಳುವ ಹಕ್ಕಿದೆ, ನಾನು ಹಿರಿಯ ಶಾಸಕ, ಮುಂದಿನ ಬಾರಿ ಸಚಿವ ಸಂಪುಟ ಪುನಾರಚನೆ ವೇಳೆ ನನಗೆ ಸಚಿವ ಸ್ಥಾನ ಕೊಡಲೇಬೇಕು ಅಂತ ಡಿಮ್ಯಾಂಡ್ ಮಾಡ್ತಿದ್ದೇನೆ ಅಂತ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ (SN Subba Reddy) ಹೇಳಿದರು.
ಬಾಗೇಪಲ್ಲಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಆಯೋಜನೆಯ ಸಿದ್ಧತೆಗಳನ್ನ ಪರಿಶೀಲನೆ ಮಾಡಿ ಮಾತನಾಡಿದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಗೌರಿಬಿದನೂರು, ಎಲ್ಲಾ ಕ್ಷೇತ್ರದವರೂ ಸಚಿವರಾಗಿದ್ದಾರೆ. ಆದ್ರೆ ಇದುವರೆಗೂ ಬಾಗೇಪಲ್ಲಿಗೆ ಸಚಿವ ಸ್ಥಾನ ಸಿಕ್ಕಿಲ್ಲ, ಅದರಲ್ಲೂ ಬಿಜೆಪಿ ಅಪರೇಷನ್ ಕಮಲದ ವೇಳೆ ನನಗೆ ಸಚಿವ ಸ್ಥಾನದ ಆಫರ್ ಕೊಟ್ಟರು. ಆದ್ರೂ ನಾನು ಕಾಂಗ್ರೆಸ್ ಪಕ್ಷಕ್ಕೆ (Congress Party) ನಿಷ್ಟೆಯಿಂದ ಇದ್ದೆ ಎಂದು ಹೇಳಿದ್ದಾರೆ.
ನಾನು ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ನಂತರ ಕಾಂಗ್ರೆಸ್ ಪಕ್ಷಕ್ಕೆ ಬಂದೆ. ಇಲ್ಲಿ ಬಂದು ಪಕ್ಷಕ್ಕಾಗಿ ಸಾಕಷ್ಟು ಪ್ರಾಮಾಣಿಕವಾಗಿ ದುಡಿದಿದ್ದೇನೆ. ಹಾಗಾಗಿ ನನಗೆ ಈ ಬಾರಿ ಸಚಿವ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ಕೊಡಲೇಬೇಕು ಅಂತ ಸಿಎಂ ಹಾಗೂ ಡಿಸಿಎಂಗೆ ಡಿಮ್ಯಾಂಡ್ ಮಾಡುವುದಾಗಿ ಹೇಳಿದರು.
ಪವರ್ ಶೇರಿಂಗ್ ಗುಪ್ತವಾಗಿಟ್ಟಿದೆ:
ಇದೇ ವೇಳೆ ಸಿಎಂ-ಡಿಸಿಎಂ ನಡುವೆ ಪವರ್ ಶೇರಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೈಕಮಾಂಡ್‌ನಲ್ಲಿ ಆಗಿರುವ ತೀರ್ಮಾನಗಳು ನಮಗೆ ಗೊತ್ತಾಗಲ್ಲ. ಹೈಕಮಾಂಡ್ ಆ ವಿಚಾರವನ್ನು ಗುಪ್ತವಾಗಿ ಇಟ್ಟಿದೆ. ನಮಗೆ ಸಿಎಂ -ಡಿಸಿಎಂ ಇಬ್ಬರು ಎರಡು ಕಣ್ಣುಗಳು ಇದ್ದಂತೆ. ಇಬ್ಬರಲ್ಲಿ ಯಾರು ಸಿಎಂ ಆದರೂ ನನಗೆ ಸಂತೋಷ ಎಂದು ಹೇಳಿದ್ದಾರೆ.
ಚಿತ್ರದುರ್ಗ: ಮಂತ್ರಿ ಸ್ಥಾನ ಕೊಡಲೇಬೇಕೆನ್ನಲು ಅದು ನಮ್ಮ ಆಸ್ತಿ ಅಲ್ಲ ಎಂದು ಸಚಿವ ಸ್ಥಾನದಿಂದ ವಂಚಿತರಾಗಿ ಬಿಜೆಪಿ ವಿರುದ್ಧ ಮುನಿದಿದ್ದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಕೊವೇರಹಟ್ಟಿ ಗ್ರಾಮದಲ್ಲಿ ಶ್ರೀ ಕೆಂಪೇಗೌಡ ಪ್ರತಿಮೆ ಉದ್ಘಾಟನೆ ನೆರವೇರಿಸಿ, ಬಳಿಕ ಮಾತನಾಡಿದ ಅವರು, ಪ್ರಮಾಣವಚನ ಸ್ವೀಕರಿಸುವ ಕೊನೇ ಕ್ಷಣದಲ್ಲಿ ಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಬೇಸರವಿದೆ. ಆದರೆ ನಮ್ಮ ಪಕ್ಷದ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ. ಮಂತ್ರಿಗಿರಿ ನೀಡಲು ಈಗ ಪಕ್ಷ ಇನ್ನೂ ನಿರ್ಧರಿಸಿಲ್ಲ. ಹೀಗಾಗಿ ಅವಕಾಶ ಬರುವವರೆಗೆ ತಾಳ್ಮೆಯಿಂದ ಕಾಯಲು ನಿರ್ಧರಿಸಿದ್ದೇನೆ. ಅಲ್ಲದೆ ಹಿಂದುಳಿದ ವರ್ಗಕ್ಕೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ ಎಂದರು.
ಇತರೆ ಹಿಂದುಳಿದ ವರ್ಗಕ್ಕೂ ಅವಕಾಶ ನೀಡುವ ವಿಶ್ವಾಸವಿದೆ. ಆದರೆ ನಾನು ಮಂತ್ರಿಗಿರಿಗಾಗಿ ಲಾಬಿ ಮಾಡಿಲ್ಲ. ಸಂಪುಟದಲ್ಲಿ ಮಂತ್ರಿ ಸ್ಥಾನ ಕೊಟ್ಟರೆ ನಿಭಾಯಿಸುವೆ. ಹಾಗೆಯೇ ಪಕ್ಷದ ವಿಚಾರದಲ್ಲಿ ನಾನು ಯಾರ ಆಪ್ತಳೂ ಅಲ್ಲ, ಪೂರ್ಣಿಮಾ ಬಿಜೆಪಿಗೆ ಆಪ್ತಳಾಗಿದ್ದು, ಬಿಎಸ್ ವೈ ಅವರು ಪಾರ್ಟ್ ಆಫ್ ಬಿಜೆಪಿ ಎನಿಸಿದ್ದಾರೆ. ನಮ್ಮ ಪಕ್ಷದಲ್ಲಿ ಅವರಿಗೆ ಆಪ್ತರು, ಇವರಿಗೆ ಪರಮಾಪ್ತರು ಎಂಬ ಯೋಚನೆ ಇಲ್ಲ ಎಂದು ಸಷ್ಟಪಡಿಸಿದರು.
ಬಿಜೆಪಿಯಲ್ಲಿ ಬಿಎಸ್ ವೈ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸದಾನಂದಗೌಡ ಎಲ್ಲರೂ ನಮ್ಮ ನಾಯಕರು. ಎಲ್ಲರ ಮನೆಯಂತೆ ನಮ್ಮ ಪಕ್ಷದ ಸಚಿವ ಸಂಪುಟದಲ್ಲಿ ವ್ಯತ್ಯಾಸ ಸಹಜವಾಗಿದೆ. ಆ ಸಮಸ್ಯೆಯನ್ನು ಸಿಎಂ ಬೊಮ್ಮಾಯಿ ಹಾಗೂ ಕಟೀಲ್ ಅವರು ಸಮರ್ಥರಿದ್ದು, ಎಲ್ಲವನ್ನು ಸರಿಪಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶಿವಶರಣ ಮಾದಾರಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಹಾಗೂ ಕಬೀರಾನಂದ ಆಶ್ರಮದ ಶಿವಾಲಿಂಗಾನಂದ ಶ್ರೀ ಭಾಗಿಯಾಗಿದ್ದರು.
ತುಮಕೂರು: ಇಂದು ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವ ಬಿ.ಸಿ.ನಾಗೇಶ್ ಅವರು ಅಚ್ಚರಿಯ ಆಯ್ಕೆಯಾಗಿದ್ದು, ಹೊಸಬರಿಗೆ ಅವಕಾಶ ನೀಡಬೇಕೆಂಬ ಉದ್ದೇಶದಿಂದ ಬಿಜೆಪಿ ಹೈಮಾಂಡ್ ಈ ನಿರ್ಧಾರ ಕೈಗೊಂಡಿದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಬಿ.ಇ ಪದವೀಧರರಾಗಿರುವ ನೂತನ ಸಚಿವ ಬಿ.ಸಿ ನಾಗೇಶ್ ಅವರು ತಳಮಟ್ಟದ ಕಾರ್ಯಕರ್ತರಾಗಿ ಬೆಳೆದು ಬಂದ ರೀತಿ ಅಭೂತಪೂರ್ವವಾದುದು.
ವಿಧ್ಯಾರ್ಥಿಯಾಗಿದ್ದ ದಿನಗಳಲ್ಲೇ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಸೆರೆಮನೆ ವಾಸ ಅನುಭವಿಸಿದ್ದ ಇವರು, ನಂತರದ ದಿನಗಳಲ್ಲಿ ಎಬಿವಿಪಿ ಬೆಂಗಳೂರು ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಆರ್‍ಎಸ್‍ಎಸ್ ಸ್ವಯಂಸೇವಕರಾಗಿ, ನಂತರದ ದಿನಗಳಲ್ಲಿ ಸಂಘದ ಪ್ರಚಾರಕ್ ಆಗಿ(ಪೂರ್ಣಾವಧಿ ಕಾರ್ಯಕರ್ತ) ಸೇವೆ ಸಲ್ಲಿಸಿ, ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ ಇವರು 2008ರಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. 2013ರ ಚುನಾವಣೆಯಲ್ಲಿ ಸೋಲನ್ನನುಭವಿಸಿದ ಇವರು, 2018ರ ವಿಧಾನಸಭಾ ಚುನಾವಣೆಯಲ್ಲಿ 25 ಸಾವಿರಕ್ಕೂ ಹೆಚ್ಚು ಮತಗಳಿಂದ ಶಾಸಕರಾಗಿ ಆಯ್ಕೆಯಾದರು. ಸರಳ-ಸಜ್ಜನಿಕೆಗೆ ಹೆಸರುವಾಸಿಯಾಗಿರುವ, ಸಾಮಾನ್ಯ ಜನರ ಸಂಕಷ್ಟಕ್ಕೆ ಸದಾ ಸ್ಪಂದಿಸುವ ನಾಗೇಶ್ ಅವರನ್ನು ಇದೀಗ ಪ್ರಥಮ ಬಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಇದು ಜಿಲ್ಲೆಯ ಜನರಿಗೆ ಹೆಮ್ಮೆಯನ್ನುಂಟು ಮಾಡಿದೆ.
ಉಡುಪಿ: ಕೋಟಾ ಶ್ರೀನಿವಾಸ ಪೂಜಾರಿ ಅವರು ಮೂರನೇ ಬಾರಿಗೆ ಸಚಿವರಾಗಿದ್ದಾರೆ. ಸಿಂಪಲ್ ಶ್ರೀನಿವಾಸ ಎಂದೆ ಹೆಸರು ಪಡೆದಿರುವ ಕೋಟಾ ಗ್ರಾಮದ ಅವರ ಮನೆಯಲ್ಲಿ ಯಾವುದೇ ಸಂಭ್ರಮಾಚರಣೆ ಇರಲಿಲ್ಲ. ನಾಲ್ಕು ಜನ ಆಪ್ತರು ಮಾತ್ರ ಇಂದು ಸಿಹಿ ಹಂಚಿ, ತಿಂದು ಸಿಂಪಲ್ಲಾಗಿ ಖುಷಿಪಟ್ಟರು.
ಇದೇ ವೇಳೆ ಕೋಟಾ ಶ್ರೀನಿವಾಸ ಪೂಜಾರಿ ಪತ್ನಿ ಶಾಂತಾ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಪತಿ ಸಚಿವರಾಗಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಅವರು ಸಚಿವರಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಎರಡು ಅವಧಿಯಲ್ಲಿ ಅವರು ತುಂಬಾ ಚೆನ್ನಾಗಿ ಕೆಲಸ ಮಾಡಿರುವುದರಿಂದ ಈ ಬಾರಿ ಮತ್ತೆ ಸಚಿವ ಸ್ಥಾನ ಸಿಗಬಹುದು ಎಂಬ ನಂಬಿಕೆ ಇತ್ತು ಎಂದರು.
ಸಾಲ ಮಾಡಿ ಮನೆ ಕಟ್ಟುತ್ತಿದ್ದೇವೆ
ಮನೆ ಕಟ್ಟುತ್ತಿರುವಾಗ ಜನ ಆರು ಕೋಟಿ ಮನೆ ಎಂದು ಆರೋಪ ಮಾಡಿದರು. ಆದರೆ ನಾವು ಹಾಗೆ ಇಲ್ಲ, ಸಾಲ ಮಾಡಿ 13 ಸೆಂಟ್ಸ್ ಜಾಗ ತೆಗೆದುಕೊಂಡಿದ್ದೆವು. ಈಗ ಜಾಗದ ಮೇಲೆ ಸಾಲ ಮಾಡಿ ಮನೆ ಕಟ್ಟುತ್ತಿದ್ದೇವೆ. ಆರೋಪಗಳನ್ನೆಲ್ಲ ಕೇಳುವಾಗ ಮನಸ್ಸಿಗೆ ಬಹಳ ಬೇಸರವಾಗುತ್ತದೆ, ತುಂಬಾ ನೋವಾಗುತ್ತದೆ. ಮೂರು ವರ್ಷದಿಂದ ಮನೆಯ ಕೆಲಸ ಆಗುತ್ತಿದೆ ಇನ್ನೂ ಪೂರ್ಣಗೊಂಡಿಲ್ಲ ಎಂದರು.
ಪತಿ ಎರಡು ಬಾರಿ ಸಚಿವರಾಗಿದ್ದಾರೆ, ದಶಕಗಳಿಂದ ಶಾಸಕರಾಗಿ ಕೆಲಸಮಾಡುತ್ತಿದ್ದಾರೆ. ಜೀವನಪೂರ್ತಿ ರಾಜಕಾರಣ ಮಾಡಿಕೊಂಡು ಬಂದವರು, ನನ್ನ ಮಗ ಸ್ವಂತ ಉದ್ಯೋಗ ಮಾಡುತ್ತಿದ್ದಾರೆ. ನಾವು ಮನೆ ಕಟ್ಟುವುದು ತಪ್ಪಾ? ನಮ್ಮ ಬಳಿ ಕೋಟಿಗಟ್ಟಲೆ ಹಣ ಇದ್ದಿದ್ದರೆ ಯಾವತ್ತೋ ಮನೆ ಕಟ್ಟುತ್ತಿದ್ದೆವು. ಐಶಾರಾಮಿ ಜೀವನ ನಡೆಸುತ್ತಿದ್ದೆವು. ಹಣ ಇದ್ದಿದ್ದರೆ ಸರಳ ಜೀವನ ನಡೆಸಬೇಕಾಗಿರಲಿಲ್ಲ ಎಂದು ಶಾಂತಾ ಕಣ್ಣೀರಿಟ್ಟರು.
ಎಲ್ಲರಿಗೂ ಒಳ್ಳೆಯದೇ ಮಾಡಬೇಕು, ಪತಿ ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಮೇಲೆ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ದೇವರು ಆಯುಷ್ಯ, ಆರೋಗ್ಯ ಕೊಟ್ಟು ಕೆಲಸ ಮಾಡುವ ಶಕ್ತಿ ಸಿಗಲಿ. ನಾನು ಮೊದಲಿಂದಲೂ ಹೀಗೆ ಇದ್ದದ್ದು, ಮುಂದೆ ಹೇಗೆಯೇ ಇರುತ್ತೇನೆ. ಸಚಿವರ ಯಾವ ಕೆಲಸ ಕಾರ್ಯದಲ್ಲೂ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಸಚಿವರು ಇಲ್ಲದಂತಹ ಸಂದರ್ಭದಲ್ಲಿ ಕೆಲವು ಬೇಡಿಕೆಗಳನ್ನು ಜನ ತಂದುಕೊಡುತ್ತಾರೆ. ಅದನ್ನು ಸ್ವೀಕರಿಸಿ ಸಚಿವರಿಗೆ ಮುಟ್ಟಿಸುವುದು ಮಾತ್ರ ನನ್ನ ಕೆಲಸ. ನಾನು ಯಾರ ಪರವಾಗಿಯೂ ಕೆಲಸ ಮಾಡಿಕೊಡಿ ಎಂದು ಈವರೆಗೆ ಹೇಳಿಲ್ಲ, ಮುಂದೆಯೂ ಹೇಳುವುದಿಲ್ಲ. ಕಷ್ಟದಲ್ಲಿರುವವರಿಗೆ ಮಾತ್ರ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ ಎಂದರು.
ಅಪ್ಪ ಸಚಿವರಾಗಿದ್ದು ಖುಷಿಯಾಗಿದೆ
ಅಪ್ಪ ಸಚಿವರಾಗುತ್ತಾರೆ ಎಂದು ನಮಗೆ ಗೊತ್ತಿರಲಿಲ್ಲ. ಹಾಗಾಗಿ ನಾವು ಬೆಂಗಳೂರಿಗೆ ಹೋಗಿಲ್ಲ. ಅವರು ಕೂಡ ನಮಗೆ ಯಾವುದೇ ಮಾಹಿತಿಯನ್ನು ಕೊಟ್ಟಿಲ್ಲ. ಸಚಿವರಾಗುತ್ತಾರೆ ಎಂದು ಗೊತ್ತಿದ್ದರೆ ನಾವು ಖಂಡಿತ ಬೆಂಗಳೂರಿಗೆ ಹೋಗುತ್ತಿದ್ದೆವು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಗಳು ಸ್ವಾತಿ ಎಸ್.ಪೂಜಾರಿ ಹೇಳಿದರು.
ಮತ್ತೋರ್ವ ಮಗಳು ಶೃತಿ ಮಾತನಾಡಿ, ಮಾಧ್ಯಮಗಳಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರ ಬಗ್ಗೆ ಚರ್ಚೆ ಇಲ್ಲದಿದ್ದರೂ, ಅವರು ಮಂತ್ರಿ ಆಗಬಹುದು ಎಂಬ ನಂಬಿಕೆಯಲ್ಲಿ ನಾನಿದ್ದೆ. ಒಳ್ಳೆ ಕೆಲಸ ಮಾಡಿದ್ದಾರೆ ಅವರ ಕೆಲಸ ನೋಡಿ ಸ್ಥಾನಮಾನ ಸಿಕ್ಕಿದೆ ಎಂದರು. ಕೋಟಾ ಗ್ರಾಮದ ಮನೆಯ ಮುಂದೆ, ಸಾಲಿಗ್ರಾಮ ಜಂಕ್ಷನ್ ನಲ್ಲಿ ಶ್ರೀನಿವಾಸ ಪೂಜಾರಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಚಿತ್ರದುರ್ಗ: ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪರ ಗೊಲ್ಲ ಗುರುಪೀಠದ ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ ಧ್ವನಿ ಎತ್ತಿದ್ದಾರೆ. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಗೊಲ್ಲ ಸಮುದಾಯವನ್ನು ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಸರ್ಕಾರ ಆಸೆ ತೋರಿಸಿ ಆಚೆ ನೂಕುವ ಧೋರಣೆ ಮಾಡುತ್ತಿದೆ. ಜಾತಿ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಕೇವಲ ಲಿಂಗಾಯಿತ ಮತ್ತಿತರೆ ಮುಂದುವರೆದ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಹಿಂದುಳಿದ ಗೊಲ್ಲ ಸಮುದಾಯವನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೈ ತಪ್ಪಿದ ಸಚಿವ ಸ್ಥಾನ – ರೇಣುಕಾಚಾರ್ಯ ಕಣ್ಣೀರು
ರಾಜ್ಯದಲ್ಲಿ ನಡೆಯುವ ಪ್ರತಿ ಚುನಾವಣೆ ವೇಳೆ ಆಸೆ ತೋರಿಸಿ ಗೊಲ್ಲ ಸಮುದಾಯವನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದು ಅನ್ಯಾಯ ಮಾಡುತ್ತಿರುವ ಸರ್ಕಾರ ನಾಮಕಾವಸ್ಥೆಗೆ ಕಾಡುಗೊಲ್ಲ ಅಭಿವೃದ್ಧಿ ನಿಗಮ ಘೋಷಿಸಿದೆ. ಆ ಅಭಿವೃದ್ಧಿ ನಿಗಮಕ್ಕೆ ನಯಾಪೈಸ ಹಣ ಬಿಡುಗಡೆ ಮಾಡದೇ ವಂಚಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಸಮುದಾಯಕ್ಕೆ ನ್ಯಾಯ ನೀಡದ ಸರ್ಕಾರದ ವಿರುದ್ಧ ಸಮುದಾಯದಿಂದ ಹೋರಾಟಕ್ಕೆ ಮುಂದಾಗಲಿದ್ದೇವೆ. ಶೀಘ್ರದಲ್ಲೇ ಆಗಿರುವ ಅನ್ಯಾಯ ಸರಿಪಡಿಸದಿದ್ದರೆ ಸಮುದಾಯದ ವತಿಯಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ನಮ್ಮ ಹಕ್ಕನ್ನು ಪಡೆಯುತ್ತೇವೆಂದು ಎಚ್ಚರಿಸಿದ್ದಾರೆ.
ರಾಯಚೂರು: ಜಿಲ್ಲೆಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆ ನಗರದಲ್ಲಿ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದವು. ಸಚಿವ ಸ್ಥಾನ ನೀಡುವಲ್ಲಿ ಕಲ್ಯಾಣ ಕರ್ನಾಟಕದವರನ್ನು ಕಡೆಗಣಿಸಲಾಗುತ್ತಿದೆ ಎಂದು ಕಿಡಿಕಾರಿದರು.
ನಗರದ ಟಿಪ್ಪುಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿ ಅಸಮಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ನೂತನ ಸಚಿವ ಸಂಪುಟದಲ್ಲಿ ಇಡೀ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಜಿಲ್ಲೆಗೆ ಸಚಿವ ಸ್ಥಾನ ನೀಡದೆ ಪ್ರತೀ ಬಾರಿ ಸರ್ಕಾರಗಳು ಅನ್ಯಾಯ ಮಾಡುತ್ತಿವೆ. ಕಾಂಗ್ರೆಸ್ ಸರ್ಕಾರವಿದ್ದಾಗ ಸಿದ್ದರಾಮಯ್ಯನವರ ಐದು ವರ್ಷದ ಆಡಳಿತದಲ್ಲಿ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗಲಿಲ್ಲ. ಬೇರೆ ಜಿಲ್ಲೆಯವರೇ ಇಲ್ಲಿನ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದಾರೆ. ಇದೀಗ ಬಸವರಾಜ್ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆಯು ಹುಸಿಯಾಗಿದ್ದು, ಜಿಲ್ಲೆಯ ಜನರಿಗೆ ನಿರಾಶೆಯಾಗಿದೆ. ಎರಡನೇ ಬಾರಿ ನಡೆಯುವ ಸಚಿವ ಸಂಪುಟ ವಿಸ್ತರಣೆ ವೇಳೆಯಾದರೂ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.
ಬೆಂಗಳೂರು: ಸಚಿವಸ್ಥಾನಕ್ಕಾಗಿ ಹಲವರು ಲಾಬಿ ನಡೆಸುತ್ತಿರುವಾಗಲೇ ಸಹಜವಾಗಿ ರೇಣುಕಾಚಾರ್ಯ ಸಹ ಸಚಿವಸ್ಥಾನಕ್ಕಾಗಿ ಕಸರತ್ತು ನಡೆಸಿದ್ದಾರೆ. ಇದೇ ವೇಳೆ ಕೆಲವರು ಬ್ಲಾಕ್‍ಮೇಲ್ ಮಾಡುತ್ತಿದ್ದು, ಇದಕ್ಕೆ ಸ್ವತಃ ಶಾಸಕ ರೇಣುಕಾಚಾರ್ಯ ಉತ್ತರಿಸಿದ್ದಾರೆ.
ಈ ಕುರಿತು ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಯಾವುದೇ ತಪ್ಪು, ಅಪರಾಧ ಮಾಡಿಲ್ಲ. ಕೆಲವು ಪುಣ್ಯಾತ್ಮರು ರೇಣುಕಾಚಾರ್ಯನ ಅದಿದೆ, ಇದಿದೆ ಎಂದು ಬ್ಲ್ಯಾಕ್ ಮಾಡಬಹುದು, ನೋಡೋಣ. ಈಗ ಗ್ರಾಫಿಕ್ಸ್ ನಲ್ಲಿ ಏನು ಬೇಕಾದರು ಮಾಡಬಹುದು. ಯಾರದೋ ಕೈ, ಯಾರದೋ ಮೈ ಮುಖ ಪ್ಯಾಂಟು ಶರ್ಟ್ ಎಲ್ಲಾ ಗ್ರಾಫಿಕ್ಸ್ ಮಾಡಬಹುದು. ನಾನು ಬ್ಲ್ಯಾಕ್ ಮೇಲ್ ತಂತ್ರಕ್ಕೆ ಒಳಗಾಗಲ್ಲ, ಶಡ್ಯಂತ್ರಕ್ಕೆ ಬಗ್ಗಲ್ಲ. ಕೆಲವರು ನನ್ನನ್ನು ಬ್ಲ್ಯಾಕ್ ಮೇಲ್ ಮಾಡೋಕೆ ನೋಡುತ್ತಿದ್ದಾರೆ. ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಏನೇನು ಮಾಡಿದ್ದಾರೆ ಆತ್ಮವಲೋಕನ ಮಾಡಿಕೊಳ್ಳಲಿ ಎಂದರು.
ಯಾರ ಬಗ್ಗೆಯೂ ಮಾತನಾಡುವ ಅವಶ್ಯಕತೆ ಇಲ್ಲ. ಕೊರೊನಾ ಕಾಲದಲ್ಲಿ ರೇಣುಕಾಚಾರ್ಯ ಕೆಲಸ ಮಾಡಿರುವ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದು ಜೀವನದಲ್ಲಿ ತಪ್ಪು ಮಾಡಿದ್ದು ನಿಜ. ನಡೆಯುವ ಮನುಷ್ಯ ಎಡವುದು ಸಹಜ, ನಾನು ತಪ್ಪು ಮಾಡಿದರೆ ಕೇಳುವವರು ನಮ್ಮ ಕುಟುಂಬದ ಸದಸ್ಯರು. ನಾನು ಯಾವುದೇ ತಪ್ಪು ಮಾಡಿಲ್ಲ, ಯಾವ ತಪ್ಪೂ ಮಾಡಿಲ್ಲ, ನನ್ನ ವಿರುದ್ದ ಷಡ್ಯಂತ್ರ ಮಾಡಿದ್ದಾರೆ. ನನ್ನ ಬಗ್ಗೆ ಯಾರು ಅಪ ಪ್ರಚಾರ ಮಾಡಿದ್ದಾರೆ ಎನ್ನುವುದರ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಯೋಗೇಶ್ವರ್ ಹೆಸರು ಹೇಳದೆ ತಿರುಗೇಟು ನೀಡಿದರು.
ಕೋರ್ಟ್ ನಿಂದ ಸ್ಟೇ ತಂದಿರುವ ಬಗ್ಗೆ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ರೇಣುಕಾಚಾರ್ಯ, ಕೋರ್ಟ್ ಸ್ಟೇ ತಂದವರಿಗೆ ಸಚಿವ ಸ್ಥಾನ ಇಲ್ಲ ಎಂಬ ವಿಚಾರ ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.
ಇಂತಹವರನ್ನೇ ಸಚಿವರನ್ನಾಗಿ ಮಾಡುವಂತೆ ಹೇಳಲ್ಲ ಎಂದು ಯಡಿಯೂರಪ್ಪನವರು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಅದು ಸಿಎಂಗೆ ಬಿಟ್ಟ ವಿಚಾರ ಎಂದಿದ್ದಾರೆ. ಸಿಎಂ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡಿ ತಿರ್ಮಾನ ಮಾಡುತ್ತಾರೆ. ನಾನು ಯಾರ ಹೆಸರನ್ನೂ ಸೂಚನೆ ಮಾಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ಇದನ್ನು ಪಕ್ಷದ ನಾಯಕರು ತೀರ್ಮಾನಿಸುತ್ತಾರೆ. ಬಿಎಸ್‍ವೈ ನಾಯಕತ್ವದಲ್ಲಿ ಹಲವರು ಶಾಸಕರಾಗಿದ್ದಾರೆ. ರಾಷ್ಟ್ರೀಯ ನಾಯಕರ ಮಾತಿಗೆ ಗೌರವ ಕೊಟ್ಟು ಈ ಹಿಂದೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಈಗ ಸ್ವ ಇಚ್ಛೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅವರು ತೆಗೆದುಕೊಂಡ ತಿರ್ಮಾನದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಯಡಿಯೂರಪ್ಪನವರ ಸಾಮಥ್ರ್ಯ, ಅವರ ನಾಯಕತ್ವ, ಹೋರಾಟ, ನೂರಾರು ಪಾದಯಾತ್ರೆಯಿಂದ ನೂರಾರು ಕೇಸ್ ಹಾಕಿಸಿಕೊಂಡು, ಹಲವು ಬಾರಿ ಜೈಲಿಗೆ ಹೋಗಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಯಾರೋ ಮಾತಾಡಿದರೆ ಅವರ ಬೆಲೆ ಕಡಿಮೆ ಆಗಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ತಿರುಗೇಟು ನೀಡಿದರು.
ಯಡಿಯೂರಪ್ಪನವರು ಪುರಸಭೆ ಅಧ್ಯಕ್ಷರಾಗಿ ತಲೆಗೆ ಏಟು ತಿಂದು ಕೆಳಗೆ ಬಿದ್ದಾಗ ನಾವ್ಯಾರು ಅವರ ಜೊತೆ ಇರಲಿಲ್ಲ. ಶಿಕಾರಿಪುರದ ಜನ ಮಾತ್ರ ಅವರ ಜೊತೆ ಇದ್ದದ್ದು. ಅವರ ಹೋರಾಟದ ಶ್ರಮ ರಾಷ್ಟ್ರೀಯ ನಾಯಕರ ಆಶೀರ್ವಾದ, ಜನರ ಆಶೀರ್ವಾದದಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ. ಇಂತಹ ಯಡಿಯೂರಪ್ಪನವರ ಬಗ್ಗೆ ಮಾತನಾಡುವರು ಆತ್ಮವಲೋಕನ ಮಾಡಿಕೊಳ್ಳಬೇಕು. ಯಾರು ಮಾತಾಡ್ತಾರೋ ಅವರ ವರ್ಚಸ್ಸು ಕಡಿಮೆ ಆಗುತ್ತೆ. ಯಡಿಯೂರಪ್ಪ ನವರ ವಿರುದ್ಧ ಮಾತನಾಡುವವರನ್ನು ವಿಲನ್ ರೀತಿ ನೋಡುತ್ತಾರೆ. ಇವರು ಪಕ್ಷಾಂತರಿ, ಜೆಡಿಎಸ್ ಗೆ ಹೋದಾಗ ಹಿಂದುತ್ವ ಗೊತ್ತಿರಲಿಲ್ಲವೇ? ಈಗ ಹಿಂದುತ್ವ ನೆನಪಾಗಿದೆಯೇ ಎಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪನವರ ಚೇಲಾಗಳಾಗಿ ಮಠಾಧೀಶರು ಬಂದಿಲ್ಲ, ಅರಮನೆ ಮೈದಾನದಲ್ಲಿ ಯಾರೂ ಕಾರ್ಯಕ್ರಮ ಮಾಡಿಸಿಲ್ಲ. ಮನೆಗೆ ಹೋಗಿದ್ದಕ್ಕೆ ಗೌರವವಾಗಿ ಕಾಣಿಕೆಯನ್ನ ಕೊಟ್ಟಿದ್ದಾರೆ. ಅದು ಗೌರವ ಹಾಗೂ ಭಕ್ತಿಯ ಸಮರ್ಪಣೆ ಎಂದು ಸ್ವಾಮೀಜಿಗಳಿಗೆ ಬಿಎಸ್‍ವೈ ಮನೆಯಲ್ಲಿ ನೀಡಲಾಗಿದ್ದ ಪಾಕೆಟ್ ಕುರಿತು ಸ್ಪಷ್ಟಪಡಿಸಿದರು.
ಶಿವಮೊಗ್ಗ: ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಜಗದೀಶ್ ಶೆಟ್ಟರ್ ರೀತಿಯಲ್ಲಿ ನಾನು ಸಚಿವ ಸ್ಥಾನ ಬೇಡ ಎಂದು ಹೇಳುವುದಿಲ್ಲ, ಜೊತೆಗೆ ಲಾಬಿಯನ್ನೂ ಮಾಡುವುದಿಲ್ಲ. ಪಕ್ಷ ಉಪ ಮುಖ್ಯಮಂತ್ರಿ ಆಗು ಅಂದ್ರೆ ಆಗ್ತೇನೆ, ಸಚಿವನಾಗು ಅಂದ್ರೆ ಸಚಿವನಾಗುತ್ತೇನೆ. ಶಾಸಕನಾಗಿರು ಅಂದ್ರೆ ಶಾಸಕನಾಗಿಯೇ ಇರುತ್ತೇನೆ. ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಅತಿರಥ ಮಹಾರಥರು ಇದ್ದರೂ ಪಕ್ಷ ನನ್ನನ್ನು ಗುರುತಿಸಿ ಈ ಹಿಂದೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿತ್ತು. ಈ ಬಾರಿಯೂ ನನಗಿಂತಲೂ ಹಿರಿಯರು, ಪ್ರವೀಣರು ಇದ್ದಾರೆ. ಆದರೆ ನಾನು ಉಪ ಮುಖ್ಯಮಂತ್ರಿ ಆಗಬೇಕು ಎಂದು ಹಲವು ಸಮಾಜದ ಮುಖಂಡರು, ಸ್ವಾಮೀಜಿಗಳು ಒತ್ತಡ ಹಾಕುತ್ತಿದ್ದಾರೆ. ಆದರೆ ಯಾರು ಸಹ ಈ ರೀತಿ ಒತ್ತಡ ಹಾಕಬೇಡಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶೆಟ್ಟರ್ ನನಗೆ ತುಂಬಾ ಆತ್ಮೀಯರು, ಅವರ ಬಳಿ ಮಾತಾಡ್ತೀನಿ: ಬೊಮ್ಮಾಯಿ
ನಮಗೆ ರಾಮನ ರೀತಿಯಲ್ಲಿ ರಾಜಕಾರಣ ಮಾಡಲು ಬರುತ್ತದೆ. ಕೃಷ್ಣನ ರೀತಿಯಲ್ಲಿ ತಂತ್ರಗಾರಿಕೆಯೂ ಇರುತ್ತದೆ. ಕಾಂಗ್ರೆಸ್ ವಿರುದ್ಧ ಈಗ ಕೃಷ್ಣನ ರೀತಿ ತಂತ್ರಗಾರಿಕೆ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಬಂದಾಗ ಈ ಸರ್ಕಾರವೇ ಇರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವ್ಯಂಗ್ಯವಾಡಿದ್ದರು. ಈಗ ಎರಡು ವರ್ಷ ಅವರು ಏನಾದರೂ ಮಾತನಾಡಲಿ ನೋಡೋಣ ಎಂದರು.
ರಾಜ್ಯದಲ್ಲಿ ಕಳೆದ ಎರಡು ವರ್ಷದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸಗಳು ಆಗಿವೆ. ಉಳಿದ ಅವಧಿಯಲ್ಲಿ ಉತ್ತಮ ಆಡಳಿತ ನಡೆಸುವುದರ ಜೊತೆಗೆ ಪಕ್ಷವನ್ನು ಕಟ್ಟುತ್ತೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಯೋಜನೆ ರೂಪಿಸಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ದಾವಣಗೆರೆ: ಹೊಸ ಸಿಎಂ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ಹಲವು ಶಾಸಕರು ಸಚಿವ ಸ್ಥಾನಕ್ಕಾಗಿ ಕಳೆದ ಎರಡು ದಿನಗಳಿಂದ ಸಿಎಂ ಯಡಿಯೂರಪ್ಪನವರ ಮನೆಯಲ್ಲಿಯೇ ಠಿಕಾಣಿ ಹೂಡಿದ್ದಾರೆ.
ಜಿಲ್ಲೆಯ ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ನಿನ್ನೆಯಿಂದ ಸಿಎಂ ಮನೆಯಲ್ಲಿ ಇದ್ದು. ತಮಗೂ ಕೂಡ ಸಚಿವ ಸ್ಥಾನ ಕೊಡಿಸಬೇಕೆಂದು ಲಾಬಿ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಶಾಸಕ ಎಸ್.ವಿ.ರಾಮಚಂದ್ರಪ್ಪ, ನಾನು ಮೂರು ಬಾರಿ ಗೆಲುವು ಸಾಧಿಸಿದ್ದು, ಪಕ್ಷಕ್ಕೆ ನನ್ನದೇಯಾದ ಕೊಡುಗೆ ಇದೆ. ಅಲ್ಲದೆ ಸಿಎಂ ಯಡಿಯೂರಪ್ಪನವರಿಗೆ ನನ್ನ ಬಗ್ಗೆ ಒಲವು ಇದೆ. ಹೀಗಾಗಿ ಈ ಬಾರಿ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದರು.
ಬರದ ನಾಡಿಗೆ ಸಚಿವ ಸ್ಥಾನ ಸಿಗಲಿದೆ. ಈ ಹಿಂದೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದಾಗಲೇ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಕೆಲ ಗೊಂದಲಗಳಿಂದ ಸಿಗಲಿಲ್ಲ. ಈ ಸಲ ಅವಕಾಶ ನೀಡುವ ಬಗ್ಗೆ ಬಿಎಸ್‍ವೈ ಭರವಸೆ ನೀಡಿದ್ದಾರೆ. ಮೂರು ಸಲ ಶಾಸಕ ಹಾಗೂ ವಾಲ್ಮೀಕಿ ಸಮಾಜ ದವನಾದ ಹಿನ್ನೆಲೆ ಸಚಿವ ಸ್ಥಾನ ಸಿಗುವ ಭರವಸೆ ಇದೆ. ಅಲ್ಲದೆ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷರಾಗಿ ಯಡಿಯೂರಪ್ಪನವರೇ ಆಯ್ಕೆ ಮಾಡಿದ್ದರು. ಈ ಬಾರಿ ಸಚಿವ ಸ್ಥಾನ ಸಿಗುವ ಎಲ್ಲ ಲಕ್ಷಣಗಳು ಇದೆ. ಸಂಜೆ ಶಾಸಕಾಂಗದ ಸಭೆ ಇದೆ, ಅಲ್ಲಿ ನಿರ್ಧಾರ ವಾಗಲಿದೆ ಎಂದರು.
ಮೈಸೂರು: ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ಕರ್ನಾಟಕದಿಂದ ಮೈಸೂರು ಸಂಸದ ಪ್ರತಾಪ್ ಸಿಂಹಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ. ಈ ಬಗ್ಗೆ ಸ್ವತಃ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು, ನನಗೆ ಸಚಿವ ಸ್ಥಾನ ಸಿಗಲಿದೆ ಎಂಬ ಗಾಳಿ ಸುದ್ದಿಗೆ ಕಿವಿಗೊಡಬೇಡಿ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನನಗಿಂತಲೂ ಹಿರಿಯರು, ಅನುಭವಿಗಳು ರಾಜ್ಯದಲ್ಲಿ ಸಂಸದರಾಗಿದ್ದಾರೆ. ಅವರೆಲ್ಲರಿಗೂ ನಾನು ಶುಭಾಶಯ ತಿಳಿಸುತ್ತೇನೆ. ನನಗೆ ಸಚಿವ ಸ್ಥಾನ ಸಿಗಲಿದೆ ಎಂಬ ಗಾಳಿ ಸುದ್ದಿಗೆ ಕಿವಿಗೊಡಬೇಡಿ. ಮೈಸೂರು ಕೊಡಗಿನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸಕ್ಕೆ ತಕ್ಕಂತೆ ಸಾಕಷ್ಟು ಕೆಲಸ ಮಾಡಿದ್ದೇನೆ. ಸಂಸದನಾಗಿ ಇದಕ್ಕಿಂತ ದೊಡ್ಡ ಹುದ್ದೆ ಬೇರೆ ಯಾವುದು ಇಲ್ಲ. ಇದಕ್ಕಿಂತ ನಾನು ಬೇರೆನೂ ನಿರೀಕ್ಷೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಕೆಲಸ ಮಾಡೋಕೆ ನನಗೆ ಇನ್ನೂ ಸಮಯ ಬೇಕು. ಮೈಸೂರು ಕೊಡಗು ಜನರ ನಿರೀಕ್ಷೆಗಳನ್ನು ಈಡೇರಿಸುವ ಜವಬ್ದಾರಿ ಇದೆ. ಹೀಗಾಗಿ ಈ ಬಗ್ಗೆ ಇನ್ನು ಹೆಚ್ಚಿನದನ್ನು ಹೇಳಲ್ಲ ಎಂದರು.
ಮೈಸೂರಿನ ಮಾದರಿ ಸರ್ಕಾರಿ ಶಾಲೆ ಜಾಗದಲ್ಲಿ ವಿವೇಕ ಸ್ಮಾರಕ ನಿರ್ಮಾಣದ ಬಗ್ಗೆ ಸೃಷ್ಟಿಯಾಗಿರುವ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ವಿವೇಕಾನಂದರು ಯಾವ ಪ್ರಬಲ ಜಾತಿಗೆ ಸೇರಿದವರಲ್ಲ. ಅವರು ಪ್ರಬಲ ಜಾತಿಗೆ ಸೇರಿದವರಾಗಿದ್ದರೆ. ಇಂದು ಈ ವಿವಾದವೇ ಬರುತ್ತಿರಲಿಲ್ಲ. ಇಷ್ಟೊತ್ತಿಗೆ ಸ್ಮಾರಕ ನಿರ್ಮಾಣ ಆಗಿ ವರ್ಷಗಳೇ ಕಳೆಯುತ್ತಿದ್ದವು. ಅವರಿಗೆ ಜಾತಿ ಬೆಂಬಲ ಇಲ್ಲದ ಕಾರಣ ಈ ರೀತಿ ವಿವಾದ ಸೃಷ್ಟಿ ಮಾಡಲಾಗಿದೆ ಎಂದರು.
ಈ ವಿಚಾರ ವಿವಾದವಾಗಿದ್ದು ಮೈಸೂರಿಗೆ ಆಗುತ್ತಿರುವ ಅವಮಾನ. ವಿವೇಕಾನಂದರು ಜಾತಿಯ ಐಕಾನ್ ಅಲ್ಲ, ಅವರು ರಾಷ್ಟ್ರದ ಐಕಾನ್. ಮಹಾರಾಜರೇ ಅವರನ್ನು ಪ್ರೀತಿಯಿಂದ ಗೌರವದಿಂದ ಕಂಡಿದ್ದಾರೆ. ಇದನ್ನು ನಾವು ಮೊದಲು ನೆನಪಿಟ್ಟುಕೊಳ್ಳಬೇಕು. ಸ್ಮಾರಕ ವಿರೋಧ ಮಾಡುತ್ತಿರುವುದು ನಾಚೀಕೆಗೇಡಿನ ಸಂಗತಿ. ಸಂಕುಚಿತ ಮನೋಭಾವದ ಜನ ಸ್ಮಾರಕದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರಿನ ಫ್ಲೈಓವರ್ ಗೆ ಹೆಸರಿಡುವ ವಿಚಾರದಲ್ಲೂ ಹೀಗೆ ಮಾಡಿದರು. ಕೆಲವು ಸಂಕುಚಿತ ಮನೋಭಾವದ ಜನರು ಅಲ್ಲಿಯೂ ಹೀಗೆ ವಿರೋಧ ಮಾಡಿದರು. ಬಳಿಕ ಸಾರ್ವಕರ್ ಹೆಸರು ನಾಮಕರಣ ಮಾಡಲಾಯಿತು. ಮೈಸೂರಿನಲ್ಲಿ ಸಹ ಕೆಲ ಸಂಕುಚಿತ ಜನರು ಶಾಲೆಯ ನೆಪದಲ್ಲಿ ಹೋರಾಟ ಮಾಡುತ್ತಿದ್ದಾರೆ. ಬೇಕಿದ್ದರೆ ಈ ಶಾಲೆಯನ್ನು ಮುಂಭಾಗದ ಕಟ್ಟಡಕ್ಕೆ ಶಿಫ್ಟ್ ಮಾಡಬಹುದು ಅಥವಾ ಕೂಗಳತೆಯ ದೇವರಾಜ ಶಾಲೆಗೆ ವರ್ಗಾಯಿಸಬಹುದು. ಸಿಎಂ ಈ ಸರ್ಕಾರಿ ಶಾಲೆಯ ಜಾಗ ಹಸ್ತಾಂತರಕ್ಕೆ ಆದೇಶ ಮಾಡಿಕೊಡಲಿ. ನಾನು ಕೇವಲ ಎರಡೇ ಗಂಟೆಯಲ್ಲಿ ಕನ್ನಡ ಮಕ್ಕಳಿಗೆ ಅನ್ಯಾಯವಾಗದಂತೆ ಶಾಲೆಯನ್ನು ಶಿಫ್ಟ್ ಮಾಡಿ, ಸ್ಮಾರಕ ನಿರ್ಮಾಣಕ್ಕೆ ಮುಂದಾಗುತ್ತೇನೆ ಎಂದರು.