Tag: Minister MTB Nagaraj

  • ಉಸ್ತುವಾರಿ ಆಯ್ತು, ಖಾತೆ ಬದಲಾವಣೆಗೆ ಪಟ್ಟು ಹಿಡಿದ ಎಂಟಿಬಿ ನಾಗರಾಜ್

    ಉಸ್ತುವಾರಿ ಆಯ್ತು, ಖಾತೆ ಬದಲಾವಣೆಗೆ ಪಟ್ಟು ಹಿಡಿದ ಎಂಟಿಬಿ ನಾಗರಾಜ್

    ಬೆಂಗಳೂರು: ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಕೊಡದಿದಕ್ಕೆ ಮುನಿಸಿಕೊಂಡಿದ್ದ ಎಂಟಿಬಿ ನಾಗರಾಜ್ ಗೆ ನಿನ್ನೆ ಸಚಿವ ಆರ್.ಅಶೋಕ್ ಅವರ ಬಳಿ ಇದ್ದ ಉಸ್ತುವಾರಿಯನ್ನ ನೀಡಿದೆ. ಆದರೂ ಸಮಾಧಾನಗೊಳ್ಳದ ಎಂಟಿಬಿ ಈಗ ಉತ್ತಮ ಖಾತೆ ನೀಡುವಂತೆ ಪಟ್ಟು ಹಿಡಿದಿದ್ದಾರೆ.

    ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ನೀಡಲಾಗಿದ್ದ ಹೊಸಕೋಟೆ ಕ್ಷೇತ್ರಕ್ಕೆ ಐದು ಸಾವಿರ ಫುಡ್ ಕಿಟ್‍ಗಳನ್ನ ಇಂದು ಮೊದಲ ಬಾರಿಗೆ ಪೋಸ್ಟ್ ಮಾಸ್ಟರ್ ಮತ್ತು ಪೋಸ್ಟ್ ಮ್ಯಾನ್ ಗಳಿಗೆ ಹೊಸಕೋಟೆ ಬಿಜೆಪಿ ಕಚೇರಿಯಲ್ಲಿ ಸಚಿವ ಎಂಟಿಬಿ ನಾಗರಾಜ್ ಆಹಾರ ಕಿಟ್ ಗಳನ್ನ ನೀಡುವ ಮೂಲಕ ಚಾಲನೆ ನೀಡಿದರು. ನಾಳೆಯಿಂದ ಕಟ್ಟಡ ಕಾರ್ಮಿಕರಿಗೆ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವಿತರಣೆ ಮಾಡುವುದಾಗಿ ಹೇಳಿದರು.

    ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಇದಕ್ಕೂ ಮೊದಲು ನನಗೆ ಸಿಎಂ ಅವರು ಕೋಲಾರ ಜಿಲ್ಲೆಯ ಉಸ್ತುವಾರಿ ನೀಡಿದ್ದರು. ನಾನು ಹೊಸಕೋಟೆಯಲ್ಲಿ ಮೂರು ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಿ ಇದಕ್ಕೂ ಮೊದಲು ಬೆ.ಗ್ರಾ. ಉಸ್ತುವಾರಿ ಆಗಿ ಕೆಲಸ ಮಾಡಿರುವ ಅನುಭವ ಇದೆ. ನನಗೆ ಬೆ.ಗ್ರಾ. ಜಿಲ್ಲೆಯನ್ನೆ ನೀಡಿ ಇಲ್ಲಿನ ನಾಡಿಮಿಡಿತ ಮತ್ತು ಪಕ್ಷ ಸಂಘಟನೆ ಬಗ್ಗೆ ಹೆಚ್ಚು ಅನುಭವ ಇದೆ. ಕೊಟ್ಟರೆ ಬೆಂಗಳೂರು ಗ್ರಾಮಾಂತರ ಕೊಡಿ ಇಲ್ಲದಿದ್ದರೆ ಯಾವುದು ಬೇಡ ಅಂತ ಹೇಳಿದ್ದೆ. ಆದ್ದರಿಂದ ಕೋಲಾರ ಜಿಲ್ಲೆ ವಾಪಸ್ ತೆಗೆದುಕೊಂಡು ನಿನ್ನೆ ಸಿಎಂ ಅವರು ಮತ್ತು ನಮ್ಮ ಎಲ್ಲಾ ನಾಯಕರು ಸೇರಿ ನನಗೆ ಉಸ್ತುವಾರಿ ವಹಿಸಿದ್ದಾರೆ ಎಂದರು.

    ಜಿಲ್ಲಾ ಉಸ್ತುವಾರಿ ಜೊತೆಗೆ ಖಾತೆ ಬದಲಾವಣೆ ಮಾಡಿಕೊಡಿ ಎಂದು ಮುಖ್ಯಮಂತ್ರಿಗಳ ಬಳಿ ಕೇಳಿಕೊಂಡೆ ಆದರೆ ಒಂದು ಮಾಡಿದ್ದಾರೆ ಇನ್ನೊಂದು ಮಾಡಿಲ್ಲ. ಅದನ್ನು ಕೆಲವು ದಿನಗಳಲ್ಲಿ ಮಾಡಿಕೊಡುವುದಾಗಿ ಹೇಳಿದ್ದಾರೆ. ಆದರೆ ಯಾವುದೇ ಖಾತೆ ನೀಡಿದರು ಪರವಾಗಿಲ್ಲ ಜನರ ಸೇವೆ ಮಾಡುತ್ತೇನೆ. ಈ ಮೊದಲು ವಸತಿ ಸಚಿವನಾಗಿದ್ದೆ, ಅದಕ್ಕೂ ಉತ್ತಮವಾದ ಖಾತೆ ನೀಡುವುದಾಗಿ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದಾರೆ ಕೊಡುತ್ತಾರೆ ಎಂದು ನಂಬಿಕೆ ಇದೆ ಎಂದು ಹೇಳಿದ್ದಾರೆ.

    ಮುಖ್ಯಮಂತ್ರಿಗಳು ಆದಷ್ಟು ಬೇಗ ಖಾತೆ ಬದಲಾವಣೆ ಮಾಡಿಕೊಡೂ ನಿರೀಕ್ಷೆಯಿದೆ, ಉಸ್ತುವಾರಿ ನೀಡಿರೂ ಕಾರಣ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಒಡಾಡುತ್ತೇನೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿ ಗೆಲುವನ್ನು ಸಾಧಿಸಲು ಉತ್ತಮ ರೀತಿಯಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು.

    ಆರ್.ಅಶೋಕ್ ಅವರು ಮೂರು ತಿಂಗಳ ಹಿಂದೆಯೇ ಉಸ್ತುವಾರಿ ಸಚಿವ ಸ್ಥಾನ ಬಿಟ್ಟುಕೊಡುವುದಾಗಿ ಹೇಳಿದ್ದರು. ಸಿಎಂಗೆ ಪತ್ರನೂ ಬರೆದಿದ್ದರು ಅದೇ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದರು. ಯೋಗೇಶ್ವರ್ ಬಗ್ಗೆ ನನಗೆ ಗೊತ್ತಿಲ್ಲ ಮುಂದಿನ ದಿನಗಳಲ್ಲಿ ಅವರಿಗೂ ನೀಡಬಹುದು. ಕೋಲಾರ ನೀಡುವುದಾಗಿ ಹೇಳುತ್ತಿದ್ದಾರೆ ಮಾತುಕತೆ ನಡೆಯುತ್ತಿದೆ ಎಂದರು.

  • ಸುಧಾಕರ್ ಜೊತೆಗಿನ ಸಂಧಾನ ಯತ್ನ ವಿಫಲ – ಸಿದ್ದರಾಮಯ್ಯ ಮನೆಗೆ ವಾಪಸ್ ಆದ ಎಂಟಿಬಿ

    ಸುಧಾಕರ್ ಜೊತೆಗಿನ ಸಂಧಾನ ಯತ್ನ ವಿಫಲ – ಸಿದ್ದರಾಮಯ್ಯ ಮನೆಗೆ ವಾಪಸ್ ಆದ ಎಂಟಿಬಿ

    ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದ ಶಾಸಕ ಸುಧಾಕರ್ ಅವರ ಮನವೊಲಿಕೆ ಯತ್ನ ವಿಫಲವಾಗಿದೆ ಎಂಬ ಮಾಹಿತಿ ಲಭಿಸಿದೆ. ಸಚಿವ ಜಮೀರ್ ಅಹಮದ್ ಅವರೊಂದಿಗೆ ತೆರಳಿದ್ದ ಸಚಿವ ಎಂಟಿಬಿ ನಾಗರಾಜ್ ಮತ್ತೆ ಸಿದ್ದರಾಮಯ್ಯ ಅವರ ನಿವಾಸಕ್ಕೆ ವಾಪಸ್ ಆಗಿದ್ದಾರೆ.

    ನಿನ್ನೆ ತಡರಾತ್ರಿಯಿಂದ ಆರಂಭವಾಗಿದ್ದ ರೆಬೆಲ್ ಶಾಸಕರ ಸಂಧಾನ ಯತ್ನ ದಿನ ಪೂರ್ತಿ ವಿವಿಧ ಬೆಳವಣಿಗೆಗಳಿಗೆ ಕಾರಣವಾಗಿತ್ತು. ಸುಮಾರು 3 ಗಂಟೆಗೂ ಹೆಚ್ಚು ಕಾಲ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಂಧಾನ ಸಭೆಯಲ್ಲಿ ಎಂಟಿಬಿ ನಾಗರಾಜ್ ಯಾವುದೇ ದೃಢ ನಿರ್ಧಾರಕ್ಕೆ ಬಂದಿರಲಿಲ್ಲ. ಅಲ್ಲದೇ ತಮ್ಮೊಂದಿಗೆ ರಾಜೀನಾಮೆ ನೀಡಿದ್ದ ಡಾ. ಸುಧಾಕರ್ ಅವರ ಮನವೊಲಿಕೆಗೆ ಎಂಟಿಬಿ ನಾಗರಾಜ್ ತೆರಳಿದ್ದರು. ಈ ವೇಳೆ ಅವರಿಗೆ ಜಮೀರ್ ಅಹಮದ್ ಸಾಥ್ ನೀಡಿದ್ದರು.

    ಇಬ್ಬರು ಶಾಸಕರು ಒಂದೇ ಬಾರಿ ರಾಜೀನಾಮೆ ನೀಡಿದ್ದ ಕಾರಣ ಹಾಗೂ ತಮ್ಮ ತೀರ್ಮಾನಕ್ಕೆ ಡಾ. ಸುಧಾಕರ್ ಅವರೊಂದಿಗೆ ಮಾತುಕತೆ ನಡೆಸಲೇ ಬೇಕು ಎಂದು ಎಂಟಿಬಿ ನಾಗರಾಜ್ ಅವರು ಹೇಳಿದ್ದರು. ಸಿದ್ದರಾಮಯ್ಯ ಅವರ ನಿವಾಸಕ್ಕೆ ಚರ್ಚೆಗೆ ಆಗಮಿಸಲು ಸುಧಾಕರ್ ನಿರಾಕರಿಸಿದ್ದಾರೆ. ಬೆಳಗ್ಗೆಯಿಂದಲೂ ಫೋನ್ ಸ್ವಿಚ್ ಆಫ್ ಮಾಡಿಕೊಂಡಿರುವ ಸುಧಾಕರ್ ಅವರ ಸಂಪರ್ಕ ಮಾಡಿದ ಸಂದರ್ಭದಲ್ಲಿ ಸ್ಪಷ್ಟ ಸಂದೇಶ ನೀಡಿರುವ ಅವರು, ಯಾವ ಕಾರಣಕ್ಕೂ ಸಂಧಾನಕ್ಕೆ ನಾನು ಬರಲ್ಲ ಹಾಗೂ ರಾಜೀನಾಮೆ ಹಿಂಪಡೆಯುವುದಿಲ್ಲ. ರಾಜೀನಾಮೆ ನೀಡಿದ್ದ ದಿನ ನನ್ನ ಮೇಲೆ ಹಲ್ಲೆ ಸಹ ಮಾಡಿದ್ದಾರೆ. ನನ್ನ ದಾರಿಗೆ ನನಗೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಸುಧಾಕರ್ ಮನವೊಲಿಕೆ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಎಂಟಿಬಿ ನಾಗರಾಜ್ ಅವರು ಸ್ಪಷ್ಟಪಡಿಸಿದ್ದಾರೆ. ಇತ್ತ ಎಂಟಿಬಿ ನಾಗರಾಜ್ ಅವರಿಗೆ ಸ್ಪಷ್ಟ ಸಂದೇಶ ನೀಡಿರುವ ಸುಧಾಕರ್ ಅವರು ಬಳಿಕ ಮುಂಬೈಗೆ ತೆರಳಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಂದು ಬೆಳಗ್ಗೆಯಿಂದಲೂ ಯಾರ ಸಂಪರ್ಕಕ್ಕೂ ಸಿಗದ ಸುಧಾಕರ್ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಸಂಜೆ ವೇಳೆಗೆ ಬೆಂಗಳೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣದಿಂದ ನೇರ ಮುಂಬೈಗೆ ತೆರಳಿದ್ದಾರೆ. ಮೊದಲೇ ಮೈತ್ರಿ ಸರ್ಕಾರದ ಮೇಲೆ ಅಸಮಾಧಾನ ಹೊಂದಿದ್ದ ಸುಧಾಕರ್ ಅವರ ಮೇಲೆ ಕಾಂಗ್ರೆಸ್ ನಾಯಕರು ಹಲ್ಲೆ ನಡೆಸಿದ್ದು ಕೂಡ ಅವರ ಸ್ಪಷ್ಟ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ರಾಜೀನಾಮೆ ನೀಡುವುದಕ್ಕೂ ಮುನ್ನವೇ ಪಕ್ಷ ತೊರೆಯುವ ಬಗ್ಗೆ ಸುಧಾಕರ್ ಸಾಕಷ್ಟು ಚಿಂತನೆ ನಡೆಸಿದ್ದರು.

    ಈಗಾಗಲೇ ಅಸಮಾಧಾನಿತ ಶಾಸಕರು ಮುಂಬೈನಲ್ಲಿ ಇರುವ ಕಾರಣ ಸುಧಾಕರ್ ಅವರನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಇತ್ತ ಪ್ರತಿಬಾರಿಯೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದ ಎಂಟಿಬಿ ನಾಗರಾಜ್ ಅವರು ಈಗ ಯಾವ ನಿರ್ಧಾರ ಮಾಡುತ್ತಾರೆ. ಸುಧಾಕರ್ ಅವರಂತೆ ರಾಜೀನಾಮ ಹಿಂಪಡೆಯದಿರುವ ನಿರ್ಧಾರ ಮಾಡುತ್ತಾರಾ ಅಥವಾ ವಾಪಸ್ ಪಡೆದು ಕಾಂಗ್ರೆಸ್‍ನೊಂದಿಗೆಯೇ ಇರುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ. ಆದರೆ ಸಿದ್ದರಾಮಯ್ಯ ಮನೆಯಿಂದ ತೆರಳುವುದಕ್ಕೂ ಮುನ್ನ ಮಾತನಾಡಿದ್ದ ಸಚಿವ ಜಮೀರ್, ಸಂಧಾನ ಯಶಸ್ವಿಯಾಗಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು. ಈಗ ಅವರಿಗೂ ಭಾರೀ ಹಿನ್ನಡೆಯಾಗಿದೆ.

  • ಖರ್ಗೆಗೆ ಸಿಎಂ ಎಚ್‍ಡಿಕೆ ತಮ್ಮ ಸ್ಥಾನ ಬಿಟ್ಟು ಕೊಡ್ತಾರಾ – ಸಚಿವ ಎಂಟಿಬಿ ಬಹಿರಂಗ ಸವಾಲು

    ಖರ್ಗೆಗೆ ಸಿಎಂ ಎಚ್‍ಡಿಕೆ ತಮ್ಮ ಸ್ಥಾನ ಬಿಟ್ಟು ಕೊಡ್ತಾರಾ – ಸಚಿವ ಎಂಟಿಬಿ ಬಹಿರಂಗ ಸವಾಲು

    ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವ ಅರ್ಹತೆ ಇದೆ ಎಂದು ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿ ಹೇಳಿಕೆ ವಿರುದ್ಧ ಕಾಂಗ್ರೆಸ್ ಸಚಿವರು ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ.

    ಸಚಿವ ಎಂಬಿಟಿ ನಾಗರಾಜ್ ಪ್ರತಿಕ್ರಿಯಿಸಿ, ಖರ್ಗೆ ಸಿಎಂ ಆಗಬೇಕಿತ್ತು ಎಂದು ಮಾತನಾಡುವ ಸಿಎಂ ಕುಮಾರಸ್ವಾಮಿ ತಮ್ಮ ಸ್ಥಾನ ಬಿಟ್ಟು ಕೊಡ್ತಾರಾ? ಅಷ್ಟು ಕಾಳಜಿ ಇದ್ದರೆ ಖರ್ಗೆಗೆ ಸಿಎಂ ಸ್ಥಾನ ಬಿಟ್ಟುಕೊಡಲಿ ಎಂದು ಸವಾಲ್ ಎಸೆದರು. ಅಷ್ಟೇ ಅಲ್ಲದೇ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಹಿಂದೆ ಯಾರೋ ಇದ್ದಾರೆ ಎಂದು ಆರೋಪಿಸಿದರು.

    ಇದೇ ವೇಳೆ ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎಂಬ ಹೇಳಿಕೆಯನ್ನ ಸಮರ್ಥಸಿಕೊಂಡ ಅವರು, ನಮ್ಮ ಪಕ್ಷದಲ್ಲಿ ಸಿಎಂ ಅಭ್ಯರ್ಥಿ ಯಾರು ಎಂಬುವುದಕ್ಕೂ ಸಿಎಂ ಕುಮಾರಸ್ವಾಮಿ ಅವರಿಗೂ ಏನು ಸಂಬಂಧ? ನಾವು ಶಾಸಕರೆಲ್ಲ ಸೇರಿ ತೀರ್ಮಾನಿಸಿದರೆ ಯಾರು ಬೇಕಾದ್ರು ಸಿಎಂ ಆಗಬಹುದು. ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಸಿದ್ದರಾಮಯ್ಯ ಸಿಎಂ ಆಗ್ಬೇಕು ಎಂದು ಕೈ ಶಾಸಕರು ತೀರ್ಮಾನಿಸಿದರೆ ಅದನ್ನು ತಡೆಯಲು ಯಾರಿಂದಲು ಸಾಧ್ಯವಿಲ್ಲ. ಕುಮಾರಸ್ವಾಮಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಪಕ್ಷದ ಬಗ್ಗೆ ಮಾತನಾಡಲು ಅವರಿಗೇನು ಸಂಬಂಧ ಎಂದು ಪ್ರಶ್ನಿಸಿ ನೇರವಾಗಿ ವಾಗ್ದಾಳಿ ನಡೆಸಿದರು.

    ಇತ್ತ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸಿಎಂ ಎಚ್‍ಡಿಕೆ ಅವರು ಹೇಳಿದ್ದು ಸರಿ ಇದೆ. ಖಗೆ ಅವರಿಗೆ ಅದಕ್ಕಿಂತಲೂ ಉನ್ನತ ಸ್ಥಾನದ ಆರ್ಹತೆ ಇದೆ. ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಅರ್ಹತೆ ಬಹಳ ನಾಯಕರಿಗೆ ಇದೆ. ಅವರಲ್ಲಿ ಎಚ್‍ಡಿ ರೇವಣ್ಣ ಕೂಡಾ ಇಬ್ಬರು.

  • ಸಿಎಂ ಎದುರಲ್ಲೇ ಅಸಮಾಧಾನ ಹೊರಹಾಕಿದ ವಸತಿ ಸಚಿವ ಎಂಟಿಬಿ ನಾಗರಾಜ್

    ಸಿಎಂ ಎದುರಲ್ಲೇ ಅಸಮಾಧಾನ ಹೊರಹಾಕಿದ ವಸತಿ ಸಚಿವ ಎಂಟಿಬಿ ನಾಗರಾಜ್

    ರಾಮನಗರ: ಈ ಬಾರಿಯ ಬಜೆಟ್‍ನಲ್ಲಿ ವಸತಿ ಇಲಾಖೆಗೆ ಅನುದಾನ ಕಡಿಮೆ ಮಾಡಿದ್ದಾರೆ. ಆದರೆ ಏಕೆ ಕಡಿಮೆ ಮಾಡಿದ್ದಾರೆ ಎಂಬುವುದು ಗೊತ್ತಿಲ್ಲ ಎಂದು ಸಿಎಂ ಕುಮಾರಸ್ವಾಮಿ ಎದುರಲ್ಲೇ ವಸತಿ ಸಚಿವ ಎಂಟಿಬಿ ನಾಗರಾಜ್ ಅಸಮಾಧಾನ ಹೊರಹಾಕಿದ್ದಾರೆ.

    ಚನ್ನಪಟ್ಟಣದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರು ಸಿಎಂ ಕುಮಾರಸ್ವಾಮಿ ಅವರೊಂದಿಗೆ ಭಾಗವಹಿಸಿದ್ದರು. ಈ ವೇಳೆ ಮಾತನಾಡಿ, ಬಜೆಟ್‍ನಲ್ಲಿ ಸಿಕ್ಕಿರುವ ಅನುದಾನ ಕಡಿಮೆಯಾಗಿದೆ. ವಸತಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಸಿಎಂಗೆ ನಿರಂತರವಾಗಿ ಬಡವರ ಆರ್ಶೀವಾದ ಮನೆ ನಿರ್ಮಿಸಿ ಕೊಟ್ಟರೆ ಸಿಗುತ್ತೆ ಎಂದರು.

    ಬಳಿಕ ಮಾತನಾಡಿದ ಸಿಎಂ ಎಚ್‍ಡಿಕೆ, ಕ್ಯಾಬಿನೆಟ್‍ನಲ್ಲಿ ಚರ್ಚೆ ಮಾಡುವುದನ್ನು ಬಿಟ್ಟು ಇಲ್ಲೇ ಪ್ರಸ್ತಾಪ ಮಾಡಿಬಿಟ್ಟರು. ನನ್ನ ಕಷ್ಟ ಅವರಿಗೇನೂ ಗೊತ್ತಿದೆ. ಸಚಿವ ಡಿಕೆ ಶಿವಕುಮಾರ್ ಅವರಿಗೆ ಈ ಬಗ್ಗೆ ಎಲ್ಲ ಗೊತ್ತಿದೆ. ನಾಗರಾಜ್ ಅವರು ಹೊಸದಾಗಿ ಮಂತ್ರಿಗಳಾಗಿದ್ದಾರೆ. ಆದ್ದರಿಂದ ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಹಿಂದಿನ ಸರ್ಕಾರದಲ್ಲಿ ನಿಗದಿಯಾಗಿದ್ದ ಮನೆಗಳ ಪೂರ್ಣಗೊಳಿಸಲು ಕೂಡ ಹಣ ಬಿಡುಗಡೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅನುದಾನವನ್ನು ಹೆಚ್ಚಿಸಲಾಗುವುದು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೂತನ ಸಚಿವರ ಮುಂದೆಯೇ ರೈತನಿಂದ ಆತ್ಮಹತ್ಯೆ ಬೆದರಿಕೆ

    ನೂತನ ಸಚಿವರ ಮುಂದೆಯೇ ರೈತನಿಂದ ಆತ್ಮಹತ್ಯೆ ಬೆದರಿಕೆ

    ಬೆಂಗಳೂರು: ರೈತರೊಬ್ಬರು ಸಚಿವರ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಘಟನೆ ನಗರದ ಕಾವೇರಿ ಭವನದ ಕಚೇರಿಯಲ್ಲಿ ನಡೆಯಿತು.

    ಗೃಹ ಮಂಡಳಿಯಿಂದ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಬ್ಯಾಲಾಳುವಿನ ರೈತ ಶ್ರೀನಿವಾಸ್ ಎಂಬವರು ಸಚಿವ ಎಂಟಿಬಿ ನಾಗರಾಜ್ ಮುಂದೆ ಅಳಲು ತೋಡಿಕೊಂಡರು. ಹೈ ಕೋರ್ಟ್ ಹೇಳಿದರು ಅಧಿಕಾರಿಗಳು ಹಣ ಕೊಟ್ಟಿಲ್ಲ. ಸಾಲ ಮಾಡಿಕೊಂಡಿದ್ದೇನೆ. ಹಣ ಕೊಡಿಸಲಿಲ್ಲ ಅಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದರು.

    ಕೂಡಲೇ ಅಧಿಕಾರಿಗಳಿಗೆ ಸೂಕ್ತ ಕ್ರಮವಹಿಸುವಂತೆ ಸಚಿವ ಎಂಟಿಬಿ ನಾಗರಾಜ್ ಅವರು ತಾಕೀತು ಮಾಡಿದರು. ಇದಕ್ಕೆ ಸ್ಪಷ್ಟನೆ ಕೊಟ್ಟ ಗೃಹ ಮಂಡಳಿ ಆಯುಕ್ತರು, ದಾಖಲೆಗಳು ಸರಿಯಾಗಿ ಇಲ್ಲ. ದಾಖಲೆ ತರುವಂತೆ ಸೂಚನೆ ನೀಡಲಾಗಿದೆ. ಗೋಮಾಳದ ಜಾಗ ಇದಾಗಿದ್ದು, ಸಿವಿಲ್ ಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದೆ. ಹೀಗಿದ್ದರು ನಾವು ನ್ಯಾಯಾಲಯದಲ್ಲಿ ಹಣ ಡೆಪಾಸಿಟ್ ಮಾಡಿದ್ದೇವೆ. ದಾಖಲೆ ಕೊಟ್ಟು ಅಲ್ಲೇ ಹಣ ಪಡೆಯಬಹುದು ಎಂದು ತಿಳಿಸಿದರು.

    ವಸತಿ ಸಚಿವರಾಗಿ ಅಧಿಕಾರವಹಿಸಿಕೊಂಡ ಎಂಟಿಬಿ ನಾಗರಾಜ್ ಅವರು ಮೊದಲ ಬಾರಿಗೆ ವಸತಿ ಇಲಾಖೆಯ ಪರಿಶೀಲನಾ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಇಲಾಖೆಯ ಪ್ರಗತಿ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ನನ್ನ ಅವಧಿಯಲ್ಲಿ ಪಾರದರ್ಶಕವಾಗಿ ಇಲಾಖೆ ನಡೆಸುತ್ತೇನೆ. ಪ್ರಾಮಾಣಿಕವಾಗಿ ಕೊಟ್ಟ ಜವಾಬ್ದಾರಿ ನಿರ್ವಹಣೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv