Tag: minister M.B. Patil

  • ಎಂಬಿಪಿ, ವಿನಯ್ ಕುಲಕರ್ಣಿ ವಿರುದ್ಧ ಅವಹೇಳನಕಾರಿ ಹೇಳಿಕೆ – ಯುವತಿ ಅರೆಸ್ಟ್

    ಎಂಬಿಪಿ, ವಿನಯ್ ಕುಲಕರ್ಣಿ ವಿರುದ್ಧ ಅವಹೇಳನಕಾರಿ ಹೇಳಿಕೆ – ಯುವತಿ ಅರೆಸ್ಟ್

    ಧಾರವಾಡ: ಗೃಹ ಸಚಿವ ಎಂ.ಬಿ.ಪಾಟೀಲ್ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಯುವತಿಯನ್ನು ಧಾರವಾಡ ಪೊಲೀಸರು ಬಂಧಿಸಿದ್ದಾರೆ.

    ಧಾರವಾಡ ಜಿಲ್ಲೆಯ ಗರಗ ಗ್ರಾಮದ ನಿವಾಸಿ ಶೃತಿ ಬೆಳ್ಳಕ್ಕಿ (24) ಬಂಧಿತ ಯುವತಿ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಶೃತಿ, ಎಂ.ಬಿ.ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ಅವರ ವಿರುದ್ಧ ಮಾತನಾಡಿದ್ದ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಸ್ಥಳೀಯ ಕಾಂಗ್ರೆಸ್ ಮುಖಂಡ ದಶರಥ ದೇಸಾಯಿ ಅವರು ಶೃತಿ ಬೆಳ್ಳಕ್ಕಿ ವಿರುದ್ಧ ಚುನಾವಾಣಾ ಆಯೋಗಕ್ಕೆ ದೂರು ನೀಡಿದ್ದರು. ಮತದಾನಕ್ಕೂ ಮುನ್ನವೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗಾಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೂಡ ದಾಖಲಾಗಿದೆ. ರಾಜಕೀಯ ನಾಯಕರ ವಿರುದ್ಧ ಶೃತಿ ಬೆಳ್ಳಕ್ಕಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ವಿವಿಧ ಸಮುದಾಯ, ವರ್ಗ ಹಾಗೂ ಧರ್ಮಗಳ ಮಧ್ಯೆ ವೈರತ್ವ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿಡಿಯೋದಲ್ಲಿ ಏನಿತ್ತು?
    ನಾನು ಭಾರತೀಯಳು ಹಾಗೂ ಹಿಂದೂ ವೀರಶೈವ ಲಿಂಗಾಯತ ಧರ್ಮದ ಯುವತಿ. ಸಚಿವ ಎಂ.ಬಿ.ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ಅವರು ನಮ್ಮ ಜಾತಿಯವರು. ಎಂ.ಬಿ.ಪಾಟೀಲ್ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರವು ಬಹಿರಂಗವಾಗಿದೆ ಎಂದು ಶೃತಿ ಬೆಳ್ಳಕ್ಕಿ ಹೇಳಿದ್ದಳು.

    ಒಡೆದು ಆಳುವ ನೀತಿಯ ಮೂಲಕ ಹಿಂದೂ ಧರ್ಮವನ್ನು ನಿರ್ನಾಮ ಮಾಡಿ, ಭಾರತವನ್ನು ಇಸ್ಲಾಮಿಕ್ ಹಾಗೂ ಕ್ರಿಶ್ಚಿಯನ್ ರಾಷ್ಟ್ರವಾಗಿ ಮಾರ್ಪಡಿಸುವ ಉದ್ದೇಶವು ಪತ್ರದಲ್ಲಿದೆ. ಹಿಂದೂ ಧರ್ಮದ ಉಪಜಾತಿಯಲ್ಲಿ ಬರುವ ಎಂ.ಬಿ.ಪಾಟೀಲ ಅವರು ಇಂತಹದ್ದಕ್ಕೆ ಸಾಥ್ ನೀಡುತ್ತಿದ್ದಾರೆ. ಹೀಗಾಗಿ ಕೆಲವೇ ದಿನಗಳಲ್ಲಿ ಹಿಂದೂ ಧರ್ಮ ನಿರ್ನಾಮವಾಗಲಿದೆ ಎಂದು ತಿಳಿಸಿದ್ದಳು.

    ಎಂ.ಬಿ.ಪಾಟೀಲ್ ಅವರಂತಹ ಸ್ವಾರ್ಥ ರಾಜಕಾರಣಿಗಳಿಂದ ದೇಶ ನಾಶವಾಗುತ್ತಿದೆ. ಲಿಂಗಾಯತ ಧರ್ಮವನ್ನು ಪ್ರತ್ಯೇಕಿಸಲು ಕೆಲವು ಇಸ್ಲಾಮಿಕ್ ಹಾಗೂ ಕ್ರಿಶ್ಚಿಯನ್ ಸಂಘಟನೆಗಳು ಹಣ ಸಹಾಯ ಮಾಡಿದ್ದಾರೆ. ಆರ್ ಎಸ್‍ಎಸ್ ದೇಶದಲ್ಲಿ ಹಿಂದುತ್ವವನ್ನು ಬಲಗೊಳಿಸುತ್ತಿದೆ. ಅವರಿಗೆ ಬಿಜೆಪಿ ಬೆಂಬಲ ಸಿಕ್ಕಿದೆ. ಹೀಗಾಗಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅಂತ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಶೃತಿ ಬೆಳ್ಳಕ್ಕಿ ಆರೋಪಿಸಿದ್ದಳು.

  • ಸುಮಲತಾ ಅಂಬರೀಶ್ ಸ್ಪರ್ಧೆಗೆ ನನ್ನ ಬೆಂಬಲವಿದೆ: ಎಂ.ಬಿ.ಪಾಟೀಲ್

    ಸುಮಲತಾ ಅಂಬರೀಶ್ ಸ್ಪರ್ಧೆಗೆ ನನ್ನ ಬೆಂಬಲವಿದೆ: ಎಂ.ಬಿ.ಪಾಟೀಲ್

    – ಮಂಡ್ಯ ಕ್ಷೇತ್ರ ಕಾಂಗ್ರೆಸ್‍ಗೆ ಹಂಚಿಕೆಯಾದ್ರೆ ಸುಮಲತಾ ನಮ್ಮ ಅಭ್ಯರ್ಥಿ
    – ಹಿಂದೂ, ಮುಸ್ಲಿಂ ಮಧ್ಯೆ ಜಗಳ ಹಚ್ಚೋ ಅನಂತಕುಮಾರ್ ಹೆಗ್ಡೆಗೆ ಜನ ಬುದ್ಧಿ ಕಲಿಸ್ತಾರೆ

    ಬಾಗಲಕೋಟೆ: ನಟಿ ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನನ್ನ ಬೆಂಬಲವಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

    ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಸೀಟು ಹಂಚಿಕೆಯಾಗಬೇಕಿದೆ. ಮಂಡ್ಯ ಕ್ಷೇತ್ರ ಜೆಡಿಎಸ್‍ಗೆ ಹೋಗುತ್ತೋ ಅಥವಾ ಕಾಂಗ್ರೆಸ್‍ಗೆ ಬರುತ್ತೋ ಗೊತ್ತಿಲ್ಲ. ಒಂದು ವೇಳೆ ಮಂಡ್ಯ ಕ್ಷೇತ್ರ ಕಾಂಗ್ರೆಸ್ಸಿಗೆ ಹಂಚಿಕೆಯಾದರೆ ಸುಮಲತಾ ಅವರೇ ನಮ್ಮ ಅಭ್ಯರ್ಥಿ. ಸುಮಲತಾ ಅಂಬರೀಶ್ ಅವರ ಹೆಸರು ಶಿಫಾರಸ್ಸಿಗೆ ನನ್ನ ಮೊದಲ ಬೆಂಬಲವಿದೆ ಎಂದು ಹೇಳಿದರು.

    ದಿವಂಗತ ಅಂಬರೀಶ್ ನನ್ನ ಆತ್ಮೀಯ ಸ್ನೇಹಿತ. ಅವರ ನಿಧನದ ಅನುಕಂಪದ ಸಹಕಾರದಿಂದ ಸುಮಲತಾ ಮಂಡ್ಯದಿಂದ ಗೆಲ್ಲುತ್ತಾರೆ. ಹೀಗಾಗಿ ಅವರಿಗೆ ನನ್ನ ಬೆಂಬಲವಿದೆ ಎಂದು ತಿಳಿಸಿದರು.

    ಹಿಂದೂ-ಮುಸ್ಲಿಮರ ಮಧ್ಯೆ ಜಗಳ ಹಚ್ಚುವ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಅವರಿಗೆ ಕಾರವಾರ ಜನ ಬುದ್ಧಿ ಕಲಿಸುತ್ತಾರೆ. ರಾಮಕೃಷ್ಣ ಹೆಗಡೆ ಸೇರಿದಂತೆ ಹೆಗಡೆ ಮನೆತನಗಳ ಹೆಸರಿಗೆ ಅನಂತಕುಮಾರ್ ಹೆಗ್ಡೆ ಮಸಿ ಬಳಿಯುತ್ತಿದ್ದಾರೆ ಎಂದು ಕಿಡಿಕಾರಿದರು.

    ಒಂದು ವೇಳೆ ನಾನು ಕೇಂದ್ರ ಕೌಶಾಲ್ಯಾಭಿವೃದ್ಧಿ ಸಚಿವನಾಗಿದ್ದರೆ ಯುವಕರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ದೊಡ್ಡ ಆಂದೋಲನವನ್ನೇ ಆರಂಭಿಸುತ್ತಿದ್ದೆ. ಆದರೆ ಸಂವಿಧಾನದ ಅರ್ಹತೆ, ಅವಕಾಶಗಳ ಆಧಾರದ ಮೇಲೆ ಲೋಕಸಭೆ ಸದಸ್ಯರಾಗಿರುವ ಅನಂತಕುಮಾರ್ ಹೆಗ್ಡೆ, ಸಂವಿಧಾನವನ್ನೇ ಬದಲಾವಣೆ ಮಾಡಲು ಹೊಟಿದ್ದಾರೆ ಎಂದು ಎಂ.ಬಿ.ಪಾಟೀಲ್ ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv