Tag: Minister Laxman Savadi

  • ಕೆಡಿಪಿ ಸಭೆ  – ಡಿಸಿಎಂ ಸವದಿಯಿಂದ ಅಧಿಕಾರಿಗಳಿಗೆ ತರಾಟೆ

    ಕೆಡಿಪಿ ಸಭೆ – ಡಿಸಿಎಂ ಸವದಿಯಿಂದ ಅಧಿಕಾರಿಗಳಿಗೆ ತರಾಟೆ

    ರಾಯಚೂರು: ಡಿಸಿ, ಸಿಇಓ ,ಎಸ್‍ಪಿ ಸೇರಿ ಜಿಲ್ಲೆಯ ಎಲ್ಲಾ ಅಧಿಕಾರಿಗಳು ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಿರಾ? ಅಕ್ರಮ ಮರಳುಗಾರಿಕೆ, ಮಟಕಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ನೀವುಗಳು ಇದರಲ್ಲಿ ಶಾಮೀಲಾಗಿದ್ದಾರಾ? ಅಕ್ರಮ ನಡೆಯುತ್ತಿದ್ದರೂ ಯಾಕೆ ಸುಮ್ಮನಿದ್ದೀರಿ ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ ಮುಂದೆ ನಾನು ಎಂತಹ ಉಸ್ತುವಾರಿ ಸಚಿವ ಎನ್ನುವುದನ್ನು ತೋರಿಸುತ್ತೇನೆ ಲಕ್ಷ್ಮಣ್ ಸವದಿ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡಿದ್ದಾರೆ.

    ನಗರದ ಜಿ.ಪಂ ಸಭಾಂಗಣದಲ್ಲಿ ಉಪಮುಖ್ಯಮಂತ್ರಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲೆಯ ಶಾಸಕರು ಜಿಲ್ಲಾಡಳಿತ ವಿರುದ್ಧ ಆರೋಪಗಳ ಸುರಿಮಳೆಗೈದರು. ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ ಜಿಲ್ಲೆಯಲ್ಲಿ ಕೆಲಸಗಳು ಆಗುತ್ತಿಲ್ಲ ಎಂದು ಸಭೆಯಲ್ಲಿ ಶಾಸಕ ದದ್ದಲ ಬಸನಗೌಡ ಹಾಗೂ ಶಿವನಗೌಡ ಆರೋಪಿಸಿದರು. ಶಾಸಕರು ಲಂಚಕೊಟ್ಟು ಅಧಿಕಾರಿಗಳ ಹತ್ತಿರ ಕೆಲಸ ಮಾಡಿಸಿಕೊಳ್ಳಬೇಕಿದೆ ಅಂತ ಶಿವನಗೌಡ ನಾಯಕ್ ಬೇಸರ ವ್ಯಕ್ತಪಡಿಸಿದರು.

    ಮರಳುಗಾರಿಕೆಗೆ ಬ್ರೇಕ್ ಬೀಳುತ್ತಿಲ್ಲ ಎಂದು ಶಾಸಕ ಬಸನಗೌಡ ಆಕ್ರೋಶಗೊಂಡರು. ದೊಡ್ಡ ಗಾಡಿಗಳಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆಗೆ ಬರುವ ಅನುದಾನವೇ ಕಡಿಮೆಯಿದೆ. ಹತ್ತಿ ಹೊತ್ತು ಬರುವ ರೈತರ ಗಾಡಿಗಳಿಗೆ ದಂಡ ಹಾಕ್ತಾರೆ ಮರಳು ಲಾರಿಗಳನ್ನ ಹಾಗೆಯೇ ಬಿಡುತ್ತಾರೆ ಎಂದು ಶಾಸಕ ಬಸನಗೌಡ ಹೇಳಿದರು.

    ಶಾಸಕರ ಆರೋಪ ಕುರಿತು ಅಧಿಕಾರಿಗಳನ್ನ ಪ್ರಶ್ನಿಸಿದ ಡಿಸಿಎಂ ಒಬ್ಬೊಬ್ಬರನ್ನೆ ತರಾಟೆಗೆ ತೆಗೆದುಕೊಂಡರು. ಆರ್ ಟಿ ಓ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಒಟ್ಟಾರೆ ಜಿಲ್ಲಾಡಳಿತ ಅಕ್ರಮದಲ್ಲಿ ಭಾಗಿಯಾಗಿದ್ದಾರಾ ಯಾಕೆ ಅಕ್ರಮ ತಡೆಯುತ್ತಿಲ್ಲ. ಅಕ್ರಮಕ್ಕೆ ಬ್ರೇಕ್ ಬೀಳದಿದ್ದರೆ ತಪ್ಪಿತಸ್ಥರನ್ನ ಅಮಾನತ್ತು ಮಾಡುವುದಾಗಿ ಎಚ್ಚರಿಕೆ ನೀಡಿದರು. ಮುಂದೆ ಅಕ್ರಮ ನಡೆದರೆ ಎಸ್ ಪಿ ಹಾಗೂ ಜಿಲ್ಲಾಧಿಕಾರಿಯೇ ಹೊಣೆಗಾರರಾಗುತ್ತಾರೆ ಎಂದರು.

    ಇನ್ನೂ ಫಸಲ್ ಭೀಮಾ ಯೋಜನೆ ವಿಮಾ ಹಣ ರೈತರಿಗೆ ಸರಿಯಾಗಿ ತಲುಪುತ್ತಿಲ್ಲ, ಅಧಿಕಾರಿಗಳ ಕಿವಿ ಹಿಡಿದು ಶಾಸಕರು ಕೆಲಸಮಾಡಿಸಬೇಕಿದೆ. ಹಾಗಾದರೆ ಮಾತ್ರ ರೈತರು ಕಟ್ಟಿದ ಇನ್ಸೂರೆನ್ಸ್ ಹಣ ರೈತರಿಗೆ ಸಿಗುತ್ತದೆ ಅಂತ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

    ಸಭೆಯಲ್ಲಿ ಮಾನ್ವಿ ಶಾಸಕ ವೆಂಕಟಪ್ಪ ನಾಯಕ್ ಟಿಎಲ್ ಬಿಸಿ ಕೆಳ ಭಾಗದ ರೈತರಿಗೆ ನೀರು ಕೊಡುವಂತೆ ಒತ್ತಾಯ ಮಾಡಿದರು. ಐಸಿಸಿ ನಿರ್ಣಯದಂತೆ 3300 ಕ್ಯೂಸೆಕ್ ನೀರು ಹರಿಸುತ್ತಿಲ್ಲ. ಇದರಿಂದ ರೈತರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಕೂಡಲೇ ನೀರು ಹರಿಸುವ ಕಡೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಹಿಂದೆ ಭದ್ರಾದಿಂದ ನೀರು ತರಲಾಗಿತ್ತು ಈಗಲೂ ಬೇರೆಡೆಯಿಂದ ನೀರು ತಂದು ಕೊಡಿ ಎಂದು ವೆಂಕಟಪ್ಪ ನಾಯಕ್ ಪಟ್ಟು ಹಿಡಿದರು. ಭದ್ರಾದಿಂದ ನೀರು ತರುವ ಬಗ್ಗೆ ಮಾತನಾಡುವುದಾಗಿ ಸಚಿವ ಲಕ್ಷ್ಮಣ್ ಸವದಿ ಭರವಸೆ ನೀಡಿದರು.

  • ದುರ್ದೈವದಿಂದ KSRTC, BMTC ನೌಕರರ ಸಂಬಳ ನೀಡಲು ಆಗಿಲ್ಲ: ಲಕ್ಷ್ಮಣ ಸವದಿ

    ದುರ್ದೈವದಿಂದ KSRTC, BMTC ನೌಕರರ ಸಂಬಳ ನೀಡಲು ಆಗಿಲ್ಲ: ಲಕ್ಷ್ಮಣ ಸವದಿ

    ಬೆಳಗಾವಿ: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಬಳ ನೀಡುವಲ್ಲಿ ವಿಳಂಬವಾಗಿದೆ. ಈ ಕುರಿತು ಸಾರಿಗೆ ನೌಕರರು ಅಳಲು ತೋಡಿಕೊಂಡಿದ್ದು ನಾನು ಒಪ್ಪಿಕೊಳ್ಳುತ್ತೇನೆ. ದುರ್ದೈವದಿಂದ ಸಂಬಳ ನೀಡಲು ಆಗಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಹೇಳಿದ್ದಾರೆ.

    ಎಂಟು ತಿಂಗಳಿಂದ ಕೊರೊನಾ ಬಂದಿದ್ದು, ಮೊದಲ ಎರಡು ತಿಂಗಳು ಸರ್ಕಾರದಿಂದ ಸಂಬಳ ನೀಡಿದ್ದೇವೆ. ಬಸ್‍ನಲ್ಲಿ ಸಾರ್ವಜನಿಕರು ಪ್ರಯಾಣಿಸುತ್ತಿಲ್ಲ, ಹೀಗಾಗಿ ಬರುತ್ತಿರುವ ಆದಾಯದಲ್ಲಿ ಬರಿ ಡೀಸೆಲ್‍ಗೆ ಸಾಕಾಗುತ್ತಿದೆ. ಈ ಕಾರಣಕ್ಕೆ ಸರ್ಕಾರಕ್ಕೆ ಸಂಬಳ ನೀಡುವಂತೆ ಪ್ರಸ್ತಾವನೆ ಕಳುಹಿಸಿದ್ದೇವು. ಪ್ರತಿ ತಿಂಗಳು 325 ಕೋಟಿ ರೂ. ಸಂಬಳಕ್ಕೆ ಹಣ ಬೇಕು. ಇನ್ನೂ ಮೂರು ತಿಂಗಳು ಸರ್ಕಾರವೇ ಹಣ ಕೊಡಬೇಕು ಅಂತಾ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.

    ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸಿಎಂಗೆ ಮನವರಿಕೆ ಮಾಡಿಕೊಟ್ಟು ಸಂಬಳ ನೀಡಲು ಮನವಿ ಮಾಡುತ್ತೇನೆ. ಮೂರು ತಿಂಗಳಿಂದ ಸಂಬಳಕ್ಕಾಗಿ ಎರಡು ಬಾರಿ ಪ್ರಸ್ತಾವನೆ ಕಳುಹಿಸಿದ್ದೇವು. ಎರಡು ಬಾರಿ ಪ್ರಸ್ತಾವನೆ ವಾಪಾಸ್ ಬಂದಿದೆ. ಮತ್ತೆ ಈಗ ಪ್ರಸ್ತಾವನೆ ಕಳುಹಿಸಿದ್ದೇವೆ. ಶೇಕಡಾ 70 ರಷ್ಟಾದ್ರೂ ಸರ್ಕಾರ ಹಣ ಕೊಟ್ಟರೆ ಉಳಿದ ಹಣವನ್ನು ಸಾಲ ಪಡೆದುಕೊಂಡಾದರೂ ಸಂಬಳ ನೀಡುತ್ತೇವೆ. ಸರ್ಕಾರದಲ್ಲಿ ಆದಾಯದ ಕೊರತೆ ಇರುವುದಕ್ಕೆ ಮುಂದಕ್ಕೆ ಹಾಕುತ್ತಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಸಂಬಳ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

    ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಈ ತಿಂಗಳ ಸಂಬಳವೇ ಆಗಿಲ್ಲ. ಸಂಸ್ಥೆ ಆರ್ಥಿಕ ನಷ್ಟದಲ್ಲಿದೆ ಎಂದು ಸಾರಿಗೆ ನಿಗಮ ಇನ್ನೂ ವೇತನ ಪಾವತಿ ಮಾಡಿಲ್ಲ. ಪ್ರತಿ ತಿಂಗಳು 4 ರಿಂದ 10ನೇ ದಿನಾಂಕದೊಳಗ ವೇತನ ಆಗುತ್ತಿತ್ತು. ಆದರೆ ಈಗಾಗಲೇ ಅರ್ಧ ತಿಂಗಳು ಕಳೆದಿದ್ದರೂ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಇನ್ನೂ ಸಂಬಳವಾಗಿಲ್ಲ. ಸಂಬಳವಿಲ್ಲದೇ ಹಬ್ಬ ಮಾಡೋಕೆ ಕಷ್ಟ ಆಗಿದೆ ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಅಳಲು ತೊಡಿಕೊಂಡಿದ್ದಾರೆ. ಲಾಕ್‍ಡೌನ್‍ನಿಂದ ನಾಲ್ಕು ಸಾರಿಗೆ ನಿಗಮಗಳು ಆರ್ಥಿಕ ನಷ್ಟದಲ್ಲಿತ್ತು. ಕಳೆದ ಸೆಪ್ಟೆಂಬರ್ ತಿಂಗಳ ತನಕ ರಾಜ್ಯ ಸರ್ಕಾರವೇ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳಿಗೆ ಸಂಬಳ ನೀಡಿತ್ತು. ಆದರೆ ಈಗ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿಯೇ ತನ್ನ ಸಿಬ್ಬಂದಿಗೆ ವೇತನ ನೀಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

  • ಕೊರೊನಾ ವಾರಿಯರ್ಸ್ ಲಿಸ್ಟ್‌ಗೆ ಸಾರಿಗೆ ಸಿಬ್ಬಂದಿ- ಸೋಂಕಿನಿಂದ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ

    ಕೊರೊನಾ ವಾರಿಯರ್ಸ್ ಲಿಸ್ಟ್‌ಗೆ ಸಾರಿಗೆ ಸಿಬ್ಬಂದಿ- ಸೋಂಕಿನಿಂದ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ

    ಬೆಂಗಳೂರು: ಕೊರೊನಾ ವಿರುದ್ಧ ನಡೆಯುತ್ತಿದ್ದ ಯುದ್ಧದಲ್ಲಿ ವೈದ್ಯರು, ಆಸ್ಪತ್ರೆ ಸಿಬ್ಬಂದಿ, ಪೌರಕಾರ್ಮಿಕರು, ಪೊಲೀಸರು, ಮಾಧ್ಯಮಗಳು ನಿರಂತರವಾಗಿ ದುಡಿಯುತ್ತಿದ್ದು, ಸದ್ಯ ಈ ಪಟ್ಟಿಗೆ ಸಾರಿಗೆ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ಸೇರ್ಪಡೆ ಮಾಡಿದೆ. ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರು, ನಿರ್ವಾಹಕರು ಮೃತಪಟ್ಟರೆ ಕುಟುಂಬಸ್ಥರಿಗೆ 30 ಲಕ್ಷ ಪರಿಹಾರ ನೀಡುವ ಮಹತ್ವದ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ.

    ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಈ ಕುರಿತು ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿ ಮಾಹಿತಿ ನೀಡಿದ್ದು, ಸರ್ಕಾರಿ ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ಮೇಲಿದ್ದಾಗ ಕೋವಿಡ್-19 ಪಿಡುಗಿಗೆ ತುತ್ತಾಗಿ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ 30 ಲಕ್ಷ ರೂಪಾಯಿಗಳನ್ನು ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಈ ಪರಿಹಾರವನ್ನು ಸಾರಿಗೆ ಇಲಾಖೆಯಿಂದ ನೀಡಲು ನಿರ್ಧರಿಸಲಾಗಿದೆ. ಮೇ 19 ರಿಂದ ಸಾರಿಗೆ ಸಂಸ್ಥೆಗಳ ಬಸ್ಸುಗಳು ಕಾರ್ಯನಿರ್ವಹಿಸಲಿದ್ದು, ಈ ಸಂದರ್ಭದಲ್ಲಿ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ಒದಗಿಸಲು ಕ್ರಮಕೈಗೊಳ್ಳಾಗಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವುದರೊಂದಿಗೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾರಿಗೆ ಸಂಸ್ಥೆಗಳ ಎಲ್ಲಾ ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿಗಳು ಗಮನಹರಿಸುವ ಮೂಲಕ ಕೋವಿಡ್-19 ರೋಗವನ್ನು ತಡಗಟ್ಟಲು ಸಹಕರಿಸಬೇಕೆಂದು ಸಚಿವ ಲಕ್ಷ್ಮಣ ಸವದಿ ಅವರು ಮನವಿ ಮಾಡಿಕೊಂಡಿದ್ದಾರೆ.

    ಪ್ರಯಾಣಿಕರು ಕೂಡ ಬಸ್ಸುಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಈ ಮುಂತಾದ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಸಚಿವರು ಮನವಿ ಮಾಡಿದ್ದಾರೆ.