Tag: Minister Jagadish Shettar

  • ಡಿಕೆಶಿ ಅರೆಸ್ಟ್ ಮಾಡಿ ಉಪಚುನಾವಣೆ ಗೆಲ್ಲಬೇಕಿಲ್ಲ, ಬಿಜೆಪಿ ಗೆಲುವು ಶತಸಿದ್ಧ- ಶೆಟ್ಟರ್ ವಿಶ್ವಾಸ

    ಡಿಕೆಶಿ ಅರೆಸ್ಟ್ ಮಾಡಿ ಉಪಚುನಾವಣೆ ಗೆಲ್ಲಬೇಕಿಲ್ಲ, ಬಿಜೆಪಿ ಗೆಲುವು ಶತಸಿದ್ಧ- ಶೆಟ್ಟರ್ ವಿಶ್ವಾಸ

    ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಕೇಸ್ ಹಾಕಿ. ಸಿಬಿಐ ದಾಳಿ ಮಾಡಿಸಿ, ಅವರನ್ನು ಬಂಧನ ಮಾಡಿಸಿಯೇ ಚುನಾವಣೆ ಗೆಲ್ಲಬೇಕಿಲ್ಲ. ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಶತಸಿದ್ಧವೆಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಸಚಿವರು, ಡಿಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ಕಾನೂನಿನ ಅಡಿಯಲ್ಲಿ ದಾಳಿ ಮಾಡಿದೆ. ಇದೂ ರಾಜಕೀಯ ಪ್ರೇರಿತ ದಾಳಿ ಅಲ್ಲ. ಕಾಂಗ್ರೆಸ್ ರಾಜಕೀಯ ಪ್ರೇರಿತ ದಾಳಿ ಅಂತಾ ಆರೋಪಿಸುವುದು ಸರಿಯಲ್ಲ ಎಂದರು.

    ಬಿಜೆಪಿ ಕಳೆದ 12 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ವೇಳೆ ಯಾರ ಮೇಲೂ ದಾಳಿ ಮಾಡಿಸಿಲ್ಲ. ಡಿಕೆ ಶಿವಕುಮಾರ್ ಅಕ್ರಮ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ. ಡಿಕೆಶಿ ವಿರುದ್ಧ ಇನ್ನೂ ತನಿಖೆ ನಡೆಯುತ್ತಿದೆ. ಅವರು ಜಾಮೀನಿನ ಮೇಲೆ ಹೊರಗಿದ್ದಾರೆ, ಅದನ್ನು ಮರೆಯಬಾರದು ಎಂದು ಶೆಟ್ಟರ್ ಡಿಕೆಶಿ ವಿರುದ್ಧ ಗುಡುಗಿದರು.

    ಸಿಬಿಐ ಸ್ವತಂತ್ರ ಸಂಸ್ಥೆವಾದ ಸಂಸ್ಥೆ. ಕಾಂಗ್ರೆಸ್ ನವರು ಈ ಹಿಂದೆ ಬಿಜೆಪಿಯವರು ಜೈಲಿಗೆ ಹೋಗಿ ಬಂದವರು ಅಂತಾ ಆರೋಪ ಮಾಡುತ್ತಿದ್ದರು. ಇದೀಗ ಜೈಲಿಗೆ ಹೋಗಿ ಬಂದ ಡಿಕೆಶಿಯನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅಲ್ಲದೇ ಉತ್ತರ ಪ್ರದೇಶದ ಸಿಎಂ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ಅವರು ಕೆಳಹಂತದ ಭಾಷೆಯಲ್ಲಿ ಆರೋಪ ಮಾಡುವುದು ಸರಿಯಲ್ಲ. ಕೆಳಹಂತದ ಭಾಷೆ ಬಳಸಿ ಆರೋಪ ಮಾಡುವುದು ನಮ್ಮ ಸಂಸ್ಕೃತಿ ಅಲ್ಲವೆಂದು ಶೆಟ್ಟರ್ ಕಿಡಿಕಾರಿದರು.

    ಬಿಜೆಪಿ ಪಕ್ಷ ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಅಂತಾ ಆರೋಪ ಮಾಡುವ ಕಾಂಗ್ರೆಸ್ ನಾಯಕರು, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಂಡಿತ್ತಾ? ಸಿಬಿಐ ದುರ್ಬಳಕೆ ಮಾಡಿಕೊಂಡು ಆಂಧ್ರಪ್ರದೇಶದ ಸಿಎಂ ಜಗಮೋಹನ್ ರೆಡ್ಡಿ ಅವರನ್ನು 2 ವರ್ಷ ಜೈಲಿನಲ್ಲಿ ಇರಿಸಿತ್ತಾ ಎಂದು ಪ್ರಶ್ನಿಸಿದ್ದಾರೆ. ಸಿಬಿಐ ದಾಳಿಯನ್ನು ಕಾಂಗ್ರೆಸ್ ನಾಯಕರು ರಾಜಕೀಯ ಪ್ರೇರಿತವಾಗಿ ನೋಡಬಾರದು ಎಂದು ಸಿಬಿಐ ದಾಳಿಯನ್ನು ಸಮರ್ಥಿಸಿಕೊಂಡರು.

  • ಸಿಎಂ ಬದಲಾವಣೆ ವಿಚಾರ ಮಾಧ್ಯಮಗಳ ಸೃಷ್ಟಿ: ಶೆಟ್ಟರ್

    ಸಿಎಂ ಬದಲಾವಣೆ ವಿಚಾರ ಮಾಧ್ಯಮಗಳ ಸೃಷ್ಟಿ: ಶೆಟ್ಟರ್

    ಹುಬ್ಬಳ್ಳಿ: ರಾಜ್ಯ ಮುಖ್ಯಮಂತ್ರಿಗಳ ಬದಲಾವಣೆ ಮಾಡುತ್ತಾರೆ ಎಂದು ಯಾರು ಹೇಳಿದ್ದು? ನಾನೇ ನಿಮಗೆ ಪ್ರಶ್ನೆ ಕೇಳುವೆ, ಮಾಧ್ಯಮದವರೇ ಸಿಎಂ ಬದಲಾವಣೆ ಎಂದು ಹೇಳುತ್ತಿದ್ದೀರಿ. ಆದರೆ ಸಿಎಂ ಬದಲಾವಣೆ ವಿಚಾರ ಇಲ್ಲವೇ ಇಲ್ಲ. ಸಿಎಂ ಖುರ್ಚಿ ಖಾಲಿಯಿಲ್ಲವೆಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಿಎಂ ಬದಲಾವಣೆ ವಿಚಾರದ ಪ್ರಶ್ನೆಗೆ ಪತ್ರಕರ್ತರಿಗೆ ಮರು ಪ್ರಶ್ನಿಸಿದರು. ನೀವೇ ಏನೆನೋ ಸೃಷ್ಟಿ ಮಾಡುತ್ತೀರಾ. ಆದರೆ ಸಿಎಂ ಬದಲಾವಣೆ ಮಾಡುವ ವಿಚಾರ ಇಲ್ಲವೇ ಇಲ್ಲವೆಂದು ಸ್ಪಷ್ಟಪಡಿಸಿದರು.

    ಸಿಎಂ ದೆಹಲಿಗೆ ಹೋಗುವ ಮುನ್ನವೇ ತಮ್ಮ ಭೇಟಿಯ ಬಗ್ಗೆ ಹೇಳಿ ಹೋಗಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಹಲವು ಸಚಿವರನ್ನು ಭೇಟಿ ಮಾಡಿ ಹಣಕಾಸು ವಿಚಾರ ಸೇರಿದಂತೆ ವಿವಿಧ ಇಲಾಖೆಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಅಲ್ಲದೇ ಡ್ರಗ್ಸ್ ಪ್ರಕರಣ ಯಾರಾದರೂ ಉಳಿದಿದ್ದರೇ ಹೆಸರು ಹೇಳಿ ನಾನೇ ಗೃಹ ಸಚಿವರು ಹಾಗೂ ಸಿಎಂಗೆ ದೂರು ನೀಡುವೆ. ಡ್ರಗ್ಸ್ ಮಾರಾಟ ಜಾಲದಲ್ಲಿ ಯಾರಾದರು ಇದ್ದರೇ ಹೆಸರು ಹೇಳಿ. ತನಿಖೆ ಮಾಡಲು ನಾನೇ ಗೃಹ ಸಚಿವರಿಗೆ ದೂರು ನೀಡುವೆ ಎಂದರು.

  • ಜಿಲ್ಲಾಡಳಿತ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಅಭಿಪ್ರಾಯ ಪಡೆದು ಲಾಕ್‍ಡೌನ್ ನಿರ್ಧಾರ: ಶೆಟ್ಟರ್

    ಜಿಲ್ಲಾಡಳಿತ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಅಭಿಪ್ರಾಯ ಪಡೆದು ಲಾಕ್‍ಡೌನ್ ನಿರ್ಧಾರ: ಶೆಟ್ಟರ್

    ಹುಬ್ಬಳ್ಳಿ: ಜಿಲ್ಲೆಯಲ್ಲಿ ಲಾಕ್‍ಡೌನ್ ಮುಂದುವರಿಸುವ ಕುರಿತು ಜಿಲ್ಲಾಡಳಿತ, ಜನಪ್ರತಿನಧಿಗಳು ಹಾಗೂ ಸಂಘ ಸಂಸ್ಥೆಗಳ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

    ನಗರದ ಮಧುರ ಕಾಲೋನಿಯ ನಿವಾಸದಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಜಿಲ್ಲೆಯಲ್ಲಿ ಲಾಕ್‍ಡೌನ್ ಮಾಡುವ ಅವಶ್ಯಕತೆ ಕುರಿತು ಚರ್ಚಿಸಲಾಯಿತು. ಮುಖ್ಯಮಂತ್ರಿಗಳು ಹಾಗೂ ಮುಖ್ಯಕಾರ್ಯದರ್ಶಿಗಳ ಒಪ್ಪಿಗೆ ಪಡೆದು ಜಿಲ್ಲೆಯಲ್ಲಿ ಜುಲೈ 24ರವರೆಗೆ ಲಾಕ್‍ಡೌನ್ ಮಾಡಲಾಗಿದೆ. ಕೊರೊನಾ ವೇಗವಾಗಿ ಹರಡುತ್ತಿರುವ ಹಿನ್ನೆಲೆ ಸೋಂಕಿನ ಸರಪಳಿ ಕತ್ತರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

    ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಹೆಚ್ಚುವರಿಯಾಗಿ 250 ಹಾಸಿಗೆಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಸಿದ್ಧಪಡಿಸಲಾಗುತ್ತಿದೆ. ಹಂತ ಹಂತವಾಗಿ ಕಿಮ್ಸ್ ನಲ್ಲಿ ಕೋವಿಡ್-19 ಚಿಕಿತ್ಸೆಗಾಗಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಮುಂದೆ ಬಂದಿವೆ. ಧಾರವಾಡದ ಎಸ್‍ಡಿಎಂ ಆಸ್ಪತ್ರೆಯಲ್ಲಿ ಈಗಾಗಲೇ 80 ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 500 ಹಾಸಿಗೆಗಳನ್ನು ಕೊರೊನಾ ರೋಗಿಗಳಿಗೆ ಸಿದ್ಧಪಡಿಸುವಂತೆ ಎಸ್‍ಡಿಎಂ ಆಸ್ಪತ್ರೆಗೆ ತಿಳಿಸಲಾಗಿದೆ ಎಂದರು.

    ಎಸ್‍ಡಿಎಂ ಎಂಜಿನಿಯರಿಂಗ್ ಹಾಸ್ಟೆಲ್‍ನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗುವುದು. ಹುಬ್ಬಳ್ಳಿಯ ಡಾಕ್ಟರ್ ಬಂಗಾರ ಶೆಟ್ಟರ್ ಅವರು ತಮ್ಮ 30 ಹಾಸಿಗೆಗಳ ಅಶೋಕ್ ಆಸ್ಪತ್ರೆಯನ್ನು ಕೋವಿಡ್-19 ಚಿಕಿತ್ಸೆಗಾಗಿ ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಜಿಲ್ಲಾಡಳಿತದಿಂದ ಹೆಚ್ಚುವರಿಯಾಗಿ 20 ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗುವುದು. ಸುಚಿರಾಯು, ತತ್ವದರ್ಶಿ ಸೇರಿದಂತೆ ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳಿಗೆ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ಜೊತೆ ಸಭೆ ನಡೆಸಿದ್ದಾರೆ. ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಯ ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೋವಿಡ್ ತುರ್ತುಪರಿಸ್ಥಿತಿಯನ್ನು ಎದುರಿಸಲಾಗುವುದು. ಜಿಲ್ಲಾಸ್ಪತ್ರೆಗೆ ಏಳು ಹೊಸ ಅಂಬುಲೆನ್ಸ್ ಗಳ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಶೀಘ್ರದಲ್ಲೇ ಹೊಸ ಅಂಬುಲೆನ್ಸ್ ಗಳು ಬರಲಿವೆ. ಒಟ್ಟು 2000 ಹಾಸಿಗೆಗಳನ್ನು ಜಿಲ್ಲೆಯಲ್ಲಿ ಸಿದ್ಧಪಡಿಸಲಾಗಿದೆ ಎಂದರು.

    ರಸಗೊಬ್ಬರ ಕೊರತೆಯಿಲ್ಲ
    ಜಿಲ್ಲೆಯಲ್ಲಿ ಯೂರಿಯಾ ಸೇರಿದಂತೆ ಯಾವುದೇ ರಸಗೊಬ್ಬರ ಕೊರತೆಯಿಲ್ಲ. ಸಾಕಷ್ಟು ಪ್ರಮಾಣದಲ್ಲಿ ರೈತರಿಗೆ ರಸಗೊಬ್ಬರ ಒದಗಿಸಲಾಗುವುದು. ಖಾಸಗಿ ರಸಗೊಬ್ಬರ ಅಂಗಡಿಗಳಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

  • ಖಾಸಗಿ ಸಹಭಾಗಿತ್ವದಲ್ಲಿ ಭದ್ರಾವತಿಯ ಎಂಪಿಎಂ ಕಾರ್ಖಾನೆ ಪುನರಾರಂಭಿಸಲು ಚಿಂತನೆ: ಸಚಿವ ಶೆಟ್ಟರ್

    ಖಾಸಗಿ ಸಹಭಾಗಿತ್ವದಲ್ಲಿ ಭದ್ರಾವತಿಯ ಎಂಪಿಎಂ ಕಾರ್ಖಾನೆ ಪುನರಾರಂಭಿಸಲು ಚಿಂತನೆ: ಸಚಿವ ಶೆಟ್ಟರ್

    ಶಿವಮೊಗ್ಗ: ಮೈಸೂರು ದಿವಾನರಾಗಿದ್ದ ದಿವಂಗತ ಸರ್ ಎಂ.ವಿಶ್ವೇಶ್ವರಯ್ಯ ಅವರು ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಸ್ಥಾಪಿಸಿದ್ದ ಮೈಸೂರು ಪೇಪರ್ ಮಿಲ್ ಹಲವು ಕಾರಣಗಳಿಂದ ಸ್ಥಗಿತಗೊಂಡಿತ್ತು. ಕಾರ್ಖಾನೆ ಸ್ಥಗಿತಗೊಂಡಿದ್ದರಿಂದ ಸಾವಿರಾರು ಮಂದಿ ಕಾರ್ಮಿಕರು ಅತಂತ್ರರಾಗಿದ್ದರು. ಸರ್ಕಾರ ಕೂಡ ಈ ಹಿಂದೆ ಕಾರ್ಖಾನೆಗೆ ಮರುಜೀವ ನೀಡಲು ಹಲವು ಬಾರಿ ಪ್ರಯತ್ನ ನಡೆಸಿತ್ತು. ಕಾರ್ಖಾನೆ ಆರಂಭಿಸುವಂತೆ ಕಾರ್ಮಿಕರು ಸಹ ಹಲವು ಬಾರಿ ಸರಕಾರಕ್ಕೆ ಮನವಿ ಮಾಡಿದ್ದರು. ಆದರೂ ಕಾರ್ಖಾನೆ ಪುನರ್ ಆರಂಭವಾಗಲೇ ಇಲ್ಲ.

    ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಕಾರ್ಮಿಕರ ಮನವಿ ಮೇರೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಇಂದು ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಗೂ ಇದೇ ವೇಳೆ ಜಿಲ್ಲೆಯ ಜನಪ್ರತಿನಿಧಿಗಳು, ಕಾರ್ಖಾನೆಯ ಎಂಡಿ ಹಾಗೂ ಕಾರ್ಮಿಕ ಮುಖಂಡರ ಜೊತೆ ಕಾರ್ಖಾನೆ ಆರಂಭ ಮಾಡುವ ಕುರಿತು ಚರ್ಚೆ ನಡೆಸಿದರು.

    ಬಳಿಕ ಮಾತನಾಡಿದ ಸಚಿವರು ಈಗಾಗಲೇ ಸರ್ಕಾರ ಕಾರ್ಖಾನೆ ಆರಂಭ ಮಾಡುವ ಬಗ್ಗೆ ಸಾಕಷ್ಟು ಪ್ರಯತ್ನ ನಡೆಸಿದೆ. ಜೊತೆಗೆ ಕೋಟ್ಯಾಂತರ ರೂಪಾಯಿ ನಷ್ಟ ಸಹ ಅನುಭವಿಸಿದೆ. ಈಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಖಾನೆ ಆರಂಭಿಸುವ ಬಗ್ಗೆ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆದಿದೆ. ಅಲ್ಲದೇ ಕಾರ್ಖಾನೆ ಆರಂಭಿಸುವ ಸಲುವಾಗಿ ಖಾಸಗಿ ಬಂಡವಾಳಗಾರರನ್ನು ಸಹ ಆಕರ್ಷಿಸುವ ಪ್ರಯತ್ನ ನಡೆದಿದೆ. ಈಗಾಗಲೇ ಹಲವು ಖಾಸಗಿ ಬಂಡವಾಳಗಾರರೊಂದಿಗೆ ಮಾತುಕತೆಯನ್ನು ಆರಂಭಿಸಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

  • ಎಚ್.ಕೆ.ಪಾಟೀಲ್ ಬೆಳಗ್ಗೆಯಿಂದ ಸಂಜೆವರೆಗೂ ಆರೋಪ ಮಾಡ್ತಾನೆ ಇರ್ತಾರೆ: ಸಚಿವ ಶೆಟ್ಟರ್

    ಎಚ್.ಕೆ.ಪಾಟೀಲ್ ಬೆಳಗ್ಗೆಯಿಂದ ಸಂಜೆವರೆಗೂ ಆರೋಪ ಮಾಡ್ತಾನೆ ಇರ್ತಾರೆ: ಸಚಿವ ಶೆಟ್ಟರ್

    ಧಾರವಾಡ: ನಮ್ಮ ರಾಜ್ಯಕ್ಕೆ ಕೇಳಿದಷ್ಟು ವೆಂಟಿಲೇಟರ್ ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂಬ ಮಾಜಿ ಸಚಿವ ಎಚ್ ಕೆ ಪಾಟೀಲ್ ಆರೋಪಕ್ಕೆ ಸಚಿವ ಜಗದೀಶ ಶೆಟ್ಟರ್ ತಿರುಗೇಟು ನೀಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಚ್.ಕೆ.ಪಾಟೀಲ್ ಮುಂಜಾನೆಯಿಂದ ಸಂಜೆವರೆಗೂ ಆರೋಪ ಮಾಡ್ತಾನೆ ಇರುತ್ತಾರೆ. ಕೇಂದ್ರ ನಮಗೆ ಕೊಟ್ಟಿರುವಷ್ಟು ವೆಂಟಿಲೇಟರ್ ಸಹ ಇನ್ನು ನಾವು ಉಪಯೋಗ ಮಾಡಿಲ್ಲ. ಈಗಿರುವುದಕ್ಕೆ ಏನು ವ್ಯವಸ್ಥೆ ಬೇಕು ಅದನ್ನು ಮಾಡುತ್ತಿದ್ದೇವೆ. ಕೊರೊನಾ ಕಾರಣ ಆರ್ಥಿಕ ಮುಗ್ಗಟ್ಟು ಶುರುವಾಗಿದೆ ಎಂದರು.

    ಸರ್ಕಾರದ ಆದಾಯಕ್ಕೂ ಮುಗ್ಗಟ್ಟು ಎದುರಾಗಿದ್ದು, ಹೀಗಾಗಿ ಸಿಆರ್‍ಎಫ್ ಅನುದಾನಗಳು ಬಿಡುಗಡೆಯಾಗಿಲ್ಲ. ಹಿಂದಿನ ಸರ್ಕಾರ ಆರು ತಿಂಗಳು ಬಾಕಿ ಉಳಿಸಿತ್ತು. ಈಗ ಅದರ ಬಗ್ಗೆ ನಾವು ಚಿಂತನೆ ನಡೆಸಿದಾಗಲೇ ಕೊರೊನಾ ಬಂದಿದೆ ಎಂದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪ್ರತಿಭಟನೆಗೆ ಕುರಿತು ಪ್ರತಿಕ್ರಿಯಿಸಿದ ಅವರು, ಡಿಕೆಶಿ ಹೊಸದಾಗಿ ಪಕ್ಷದ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಏನಾದರೂ ಮಾಡಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಪೆಟ್ರೋಲ್, ಡಿಸೇಲ್ ಸೆಸ್ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಹೆಚ್ಚಾಗಿದ್ದು, ಇವರು ಆಗ ಯಾಕೆ ಇಳಿಸಲಿಲ್ಲ ಎಂದು ಪ್ರಶ್ನಿಸಿದರು.

  • ನಮ್ಮೂರಿಗೂ ‘ಎಣ್ಣೆ’ ಅಂಗಡಿ ಮಂಜೂರಿ ಮಾಡಿಕೊಡಿ- ಸಚಿವ ಶೆಟ್ಟರ್‌ಗೆ ವ್ಯಕ್ತಿಯ ಮನವಿ

    ನಮ್ಮೂರಿಗೂ ‘ಎಣ್ಣೆ’ ಅಂಗಡಿ ಮಂಜೂರಿ ಮಾಡಿಕೊಡಿ- ಸಚಿವ ಶೆಟ್ಟರ್‌ಗೆ ವ್ಯಕ್ತಿಯ ಮನವಿ

    ಧಾರವಾಡ: ಲಾಕ್‍ಡೌನ್ ನಡುವೆಯೂ ಮದ್ಯದ ಮಾರಾಟ ಭರ್ಜರಿಯಾಗಿ ನಡೆಯುತ್ತಿರುವಾಗಲೇ ನಮ್ಮೂರಿಗೂ ಎಣ್ಣೆ ಅಂಗಡಿ ಮಂಜೂರಿ ಮಾಡಿಕೊಡಿ ಎಂದು ವ್ಯಕ್ತಿಯೊಬ್ಬ ಸಚಿವರಿಗೆ ಮನವಿ ಮಾಡಿಕೊಂಡಿರುವ ವಿಚಿತ್ರ ಪ್ರಸಂಗ ಧಾರವಾಡದಲ್ಲಿ ನಡೆದಿದೆ.

    ಹೌದು ತಮಗೆ ಇಂತಹದೊಂದು ಮನವಿ ಬಂದಿತ್ತು ಎಂಬುದನ್ನು ಸ್ವಂತ ಸಚಿವ ಜಗದೀಶ ಶೆಟ್ಟರ್ ಅವರೇ ಹೇಳಿಕೊಂಡಿದ್ದಾರೆ. ಧಾರವಾಡದಲ್ಲಿ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಅವರು, ನಮ್ಮೂರಿಗೆ ಎಂಎಸ್‍ಐಎಲ್ ಮಳಿಗೆ ಕೊಡಿ ಎಂದು ವ್ಯಕ್ತಿಯೊಬ್ಬ ಇವತ್ತು ಬೆಳಗ್ಗೆ ನನ್ನ ಬಳಿ ಮನವಿ ಹಿಡಿದುಕೊಂಡು ಬಂದಿದ್ದ. ಏನ್ ಮಾಡೋದು ಇಂತವರು ನಮ್ಮಲ್ಲಿ ಇದಾರೆ. ನಾನು ಅವನಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಊರ ಹಿರಿಯರ ಒಪ್ಪಿಗೆ ತೆಗೆದುಕೊಂಡು ಬಾ ಎಂದು ಹೇಳಿ ಸಾಗ ಹಾಕಿದ್ದೇನೆ ಎಂದು ಹೇಳಿದ ಶೆಟ್ಟರ್ ತಿಳಿಸಿದರು.

    ಜನರ ವಿರೋಧ ಬಂದ ಕಡೆಯ ಮದ್ಯದ ಮಳಿಗೆಗಳನ್ನು ನಾವು ಬಂದ್ ಮಾಡಿಸುತ್ತಿದ್ದೇವೆ. ಇಂತಹ ಸಮಯದಲ್ಲಿ ಹೊಸ ವೈನ್ ಶಾಪ್‍ಗಳಿಗೆ ಅನುಮತಿ ಕೊಡುವುದಿಲ್ಲ ಎಂದರು.

    ಇದೇ ವೇಳೆ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕುರಿತಂತೆ ಮಾತನಾಡಿದ ಅವರು, ರೈತರು ಮೆಕ್ಕೆಜೋಳ ಖರೀದಿ ಕೇಂದ್ರದ ಆಸೆ ಕೈ ಬಿಡುವಂತೆ ಹೇಳಿದ್ದಾರೆ. ಕೆಎಂಎಫ್ ಮೂಲಕ ದೊಡ್ಡ ಪ್ರಮಾಣದಲ್ಲಿ ಮೆಕ್ಕೆಜೋಳ ಖರೀದಿ ಆರಂಭಿಸಲಾಗಿತ್ತು. ಆದರೆ ಅದು ಯಶಸ್ಸು ಆಗಲಿಲ್ಲ. ಹೀಗಾಗಿ ಖರೀದಿ ಕೇಂದ್ರದ ಮೂಲಕ ಪಡೆಯಲು ಆಗುವುದಿಲ್ಲ ಎಂದು ಸರ್ಕಾರ ಐದು ಸಾವಿರ ರೂಪಾಯಿ ಸಬ್ಸಿಡಿ ಘೋಷಿಸಿದೆ. ಇನ್ನು ಮುಂದೆ ರೈತರು ಖರೀದಿ ಕೇಂದ್ರದ ವಿಚಾರ ಬಿಟ್ಟು ಮಾರ್ಕೆಟ್‍ನಲ್ಲಿ ತಮಗೆ ಯಾರಿಗೆ ಬೇಕೋ ಅವರಿಗೆ ಕೊಡಬಹುದು ಎಂದು ಶೆಟ್ಟರ್ ಹೇಳಿದರು.

  • ಚೈನಾದಿಂದ ಹೊರ ಬರುತ್ತಿರುವ ಕಂಪನಿಗಳನ್ನ ಸೆಳೆಯಲು ರಾಜ್ಯ ಸರ್ಕಾರದಿಂದ ಪ್ಲಾನ್

    ಚೈನಾದಿಂದ ಹೊರ ಬರುತ್ತಿರುವ ಕಂಪನಿಗಳನ್ನ ಸೆಳೆಯಲು ರಾಜ್ಯ ಸರ್ಕಾರದಿಂದ ಪ್ಲಾನ್

    – ಕೈಗಾರಿಕೋದ್ಯಮಿಗಳೊಂದಿಗೆ ಸಚಿವ ಜಗದೀಶ್ ಶೆಟ್ಟರ್ ಸಮಾಲೋಚನೆ

    ಬೆಂಗಳೂರು: ಕೋವಿಡ್-19 ಲಾಕ್‍ಡೌನ್ ನಂತರ ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡಲು ಹಾಗೂ ಚೈನಾ ದೇಶದಿಂದ ಹೊರ ಬರುತ್ತಿರುವ ಕಂಪನಿಗಳನ್ನು ರಾಜ್ಯಕ್ಕೆ ಸೆಳೆಯುವ ಬಗ್ಗೆ ಇಂದು ವಿಧಾನಸೌಧದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.

    ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಜೊತೆಯಲ್ಲಿ ರಾಜ್ಯದ ಪ್ರಮುಖ ಕೈಗಾರಿಕೋದ್ಯಮಿಗಳಾದ ಇನ್ಫೋಸಿಸ್‍ನ ನಾನ್ ಎಕ್ಸಿಕ್ಯೂಟಿವ್ ಚೇರ್ಮನ್ ನಂದನ್ ನೀಲೇಕಣಿ, ಬಯೋಕಾನ್ ಚೇರ್ ಪರ್ಸನ್ ಕಿರಣ್ ಮಜುಂದಾರ್ ಷಾ ಹಾಗೂ ಇನ್ಫೋಸಿಸ್‍ನ ಸಿಇಓ ಕ್ರಿಸ್ ಗೋಪಾಕೃಷ್ಣನ್ ಅವರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆಯನ್ನು ನಡೆಸಲಾಯಿತು.

    ವಿಡಿಯೋ ಕನ್ಫರೆನ್ಸ್ ನಲ್ಲಿ ಮಾತನಾಡಿದ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್, ಲಾಕ್‍ಡೌನ್ ಸಮಯದಲ್ಲಿ ಕೈಗಾರಿಕೆಗಳ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳು ಹಾಗೂ ಮುತುವರ್ಜಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಇದೇ ವೇಳೆ ರಾಜ್ಯ ಸರ್ಕಾರ ರಾಜ್ಯಕ್ಕೆ ಕೈಗಾರಿಕೆಗಳನ್ನು ಸೆಳೆಯುವ ನಿಟ್ಟಿನಲ್ಲಿ ಹೂಡಿಕೆ ಸ್ನೇಹಿ ಕ್ರಮಗಳನ್ನು ಕೈಗೊಳ್ಳುತ್ತಿರುವ ಬಗ್ಗೆ ತಿಳಿಸಿದರು.

    ಕೈಗಾರಿಕೋದ್ಯಮಿಗಳಾದ ನಂದನ್ ನೀಲೇಕಣಿ, ಕಿರಣ್ ಮಜುಂದಾರ್ ಷಾ ಹಾಗೂ ಕ್ರಿಸ್ ಗೋಪಾಕೃಷ್ಣನ್ ಕೊರೊನಾ ಮಹಾಮಾರಿಯನ್ನು ನಿಯಂತ್ರಣದಲ್ಲಿಡಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ಕೈಗಾರಿಕಾ ಕ್ಷೇತ್ರದ ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಹಲವಾರು ಸಲಹೆಗಳನ್ನು ನೀಡಿದರು. ಏಕಗವಾಕ್ಷಿ ಅರ್ಜಿಗಳ ವಿಲೇವಾರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವುದು, ಭೂಮಿಯನ್ನು ಕೊಳ್ಳುವ ಹಾಗೂ ಪರಭಾರೆ ಮಾಡಿಕೊಳ್ಳುವ ನಿಯಮಗಳ ಸಡಲಿಕೆ, ರಾಜ್ಯದಲ್ಲಿ ನೂತನ ಕಾರ್ಖಾನೆಯನ್ನು ಪ್ರಾರಂಭಿಸಲು ಇರುವ ನಿಯಮಗಳಲ್ಲಿ ಸ್ಪಷ್ಟತೆ ತರುವುದು ಹೀಗೆ ಹತ್ತು ಹಲವು ಸಲಹೆಗಳನ್ನು ನೀಡಿದರು.

    ಕೊರೊನಾ ಮಹಮಾರಿಯ ನಂತರ ಹಲವಾರು ಕಂಪನಿಗಳು ಚೈನಾ ದೇಶದಿಂದ ತಮ್ಮ ಉತ್ಪಾದನಾ ಕಾರ್ಖಾನೆಗಳನ್ನು ಹೊರ ಬರಲು ಯೋಚನೆ ನಡೆಸುತ್ತಿವೆ. ಈ ಸನ್ನಿವೇಶದ ಸದುಪಯೋಗವನ್ನು ಪಡೆದುಕೊಳ್ಳವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು. ಹೊರ ಬರುತ್ತಿರುವ ನೂರು ಕಂಪನಿಗಳ ಲಿಸ್ಟ್ ಅನ್ನು ತಯಾರಿಸಿ ಆ ಕಂಪನಿಗಳ ಜೊತೆ ಚರ್ಚೆ ಮಾಡಬೇಕು. ಈ ಹಂತದಲ್ಲಿ ಆ ಕೈಗಾರಿಕೆಗಳ ಸಿಇಓಗಳ ಜೊತೆ ಸಭೆ ನಡೆಸಲು ಕೈಗಾರಿಕೋದ್ಯಮಿಗಳು ಅಗತ್ಯ ಸಹಾಯ ನೀಡುವ ಭರವಸೆಯನ್ನು ನೀಡಿದರು.

    ಕೈಗಾರಿಕೋದ್ಯಮಿಗಳು ನೀಡಿದ ಸಲಹೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜೊತೆಗೆ ನೂತನ ಕೈಗಾರಿಕಾ ನೀತಿ ಸದ್ಯದಲ್ಲೇ ಹೊರ ಬೀಳಲಿದ್ದು, ಎಂಎಸ್‍ಎಂಇ ಕೈಗಾರಿಕೆಗಳಿಗೆ ಪರಿಹಾರ ನೀಡುವ ಪ್ಯಾಕೇಜ್ ತರುವ ಬಗ್ಗೆ ಸರ್ಕಾರದ ಜೊತೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

    ಸಭೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ, ಕೈಗಾರಿಕಾ ಇಲಾಖೆಯ ಆಯುಕ್ತೆ ಶ್ರಿಮತಿ ಗುಂಜನ್ ಕೃಷ್ಣ ಪಾಲ್ಗೊಂಡಿದ್ದರು.