Tag: Minister HD Ravanna

  • ಈಶ್ವರಪ್ಪನಂಥವರನ್ನು ನಮ್ಮೂರಿನ ಶಿವನೇ ನುಂಗುತ್ತಾನೆ: ಎಚ್.ಡಿ.ರೇವಣ್ಣ

    ಈಶ್ವರಪ್ಪನಂಥವರನ್ನು ನಮ್ಮೂರಿನ ಶಿವನೇ ನುಂಗುತ್ತಾನೆ: ಎಚ್.ಡಿ.ರೇವಣ್ಣ

    – ಮಾನ ಮಾರ್ಯಾದೆ ಇದ್ರೆ ಬಿಎಸ್‍ವೈ ಕಾಲಿಗೆ ಈಶ್ವರಪ್ಪ ಬೀಳಲಿ

    ಹಾಸನ: ನಿಂಬೆಹಣ್ಣು ಸಹಿತ ರೇವಣ್ಣನನ್ನೇ ನುಂಗುತ್ತೇನೆ ಎಂದ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರಿಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿರುಗೇಟು ಕೊಟ್ಟಿದ್ದಾರೆ.

    ನಗರದಲ್ಲಿ ಮಾತನಾಡಿದ ಸಚಿವರು, ಕೆ.ಎಸ್.ಈಶ್ವರಪ್ಪನಂಥವರನ್ನು ನಮ್ಮೂರಿನ ಶಿವನೇ ನುಂಗುತ್ತಾನೆ. ಅವರು ಏನು ಅಂತ ಎಲ್ಲರಿಗೂ ಗೊತ್ತಿದೆ. ಅವನು ಒಂದು ರೀತಿ ಬುಡುಬುಡುಕೆ ಇದ್ದಂತೆ. ರಾಜ್ಯದಲ್ಲಿ ಯಾರೂ ಈಶ್ವರಪ್ಪನ ಹೆಸರು ಹೇಳುತ್ತಾರಾ? ಅವನಿಗೆ ಮಾನ ಮಾರ್ಯಾದೆ ಇದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೆ ಬೀಳಲಿ. ಈ ರೀತಿಯ ಈಶ್ವರಪ್ಪನಂಥವನನ್ನು ನಾನು ಎಷ್ಟೋ ಜನ ನೋಡಿದ್ದೇನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು. ಇದನ್ನು ಓದಿ: ನಿಂಬೆಹಣ್ಣಿನೊಂದಿಗೆ ಮಾಂಸದೂಟದಲ್ಲಿ ರೇವಣ್ಣರನ್ನು ನುಂಗುತ್ತೇನೆ: ಈಶ್ವರಪ್ಪ

    ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಹಾಸನ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ? ಸಮ್ಮಿಶ್ರ ಸರ್ಕಾರ ಹಾಸನಕ್ಕೆ ಹಲವು ಯೋಜನೆ ಕೊಟ್ಟರೆ ಇದು ಹಾಸನ ಬಜೆಟ್ ಅಂತ ಹೇಳುತ್ತಾರೆ. ಈ ರೀತಿ ಮಾತನಾಡುವವರು ಯಾವ ಮುಖ ಹೊತ್ತು ಈಗ ಮತ ಕೇಳುತ್ತಾರೋ ಗೊತ್ತಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಹೀಗಾಗಿ 8 ವಿಧಾನಸಭಾ ಕ್ಷೇತ್ರಗಳ ಜನರು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸುವ ತೀರ್ಮಾನ ಮಾಡಿದ್ದಾರೆ ಎಂದರು.

  • ಯುಗಾದಿಗೆ ಬರೋ ಪಂಚಾಂಗ ನಂತರ ಮುಂದೆ ಏನಾಗುತ್ತೆ ಅಂತ ಹೇಳ್ತೀನಿ: ರೇವಣ್ಣ

    ಯುಗಾದಿಗೆ ಬರೋ ಪಂಚಾಂಗ ನಂತರ ಮುಂದೆ ಏನಾಗುತ್ತೆ ಅಂತ ಹೇಳ್ತೀನಿ: ರೇವಣ್ಣ

    ಬೆಂಗಳೂರು: ನಾನು ಎರಡು ಪಂಚಾಂಗ ನೋಡಿದ್ದೀನಿ. ತಮಿಳುನಾಡು ಪಂಚಾಂಗದ ಪ್ರಕಾರ ಎಚ್.ಡಿ.ಕುಮಾರಸ್ವಾಮಿ 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಾರೆ. ಇನ್ನೊಂದು ಪಂಚಾಂಗ ಯುಗಾದಿಯಾದ ಬಳಿಕ ಬರುತ್ತದೆ. ಆಗ ಅದನ್ನು ನೋಡಿ ಮುಂದೆ ಏನಾಗುತ್ತದೆ ಅಂತ ತಿಳಿಸುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ವೈರಿಗಳನ್ನು ಸದೆಬಡಿಯಲು ಗುರುಗಳ ಆಶೀರ್ವಾದ ಬೇಕು. ಅದಕ್ಕಾಗಿ ಆಗಾಗ ಶೃಂಗೇರಿ ಗುರುಗಳನ್ನು ಭೇಟಿ ಆಗುತ್ತೇವೆ. ಪಂಚಾಂಗ ನೋಡಿಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪರೇಷನ್ ಕಮಲ ನಿಲ್ಲಿಸಿದರು. ತಮ್ಮ ಕೈಯಿಂದ ಏನೂ ಆಗಲ್ಲ ಅಂತಾನೆ ಸುಮ್ಮನಾಗಿದ್ದರೆ ಎಂದ ಅವರು, ಆಪರೇಷನ್ ಕಮಲಕ್ಕೆ ಮುಂದಾದ ಬಿಜೆಪಿಯವರು ಏನು ಮಾಡುತ್ತಾರೆ ಅಂತ ತಿಳಿಯಲು ಅವರ ಬಳಿಗೆ ನಾವೇ ಶಾಸಕರನ್ನು ಕಳಿಸಿಕೊಟ್ಟಿದ್ದೇವೆ ಎಂದು ಲೇವಡಿ ಮಾಡಿದರು.

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಳ್ಳೆಯವರು. ಆದರೆ ಅವರ ಗ್ರಹಚಾರ ಕೆಟ್ಟದಾಗಿರುವ ಕಾರಣಕ್ಕೆ ಹೀಗಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರು ಏನು ತೀರ್ಮಾನ ತಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧ. ಬೇಲೂರಿನಲ್ಲಿ ಕಳೆದ ಬಾರಿ ನನ್ನ ಮಗ ಅಥವಾ ಪತ್ನಿ ಯಾರೇ ನಿಂತಿದ್ದರು ಗೆಲ್ಲುತ್ತಿದ್ದರು. ಆದರೆ ದೇವೇಗೌಡರು ಎಲ್ಲ ಜಾತಿಗೂ ಸಮಾನವಾಗಿ ಕೊಡಬೇಕು ಅಂತಾ ಬೇರೆಯವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದರು ಎಂದು ತಿಳಿಸಿದರು.

    ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಮಾಜಿ ಸಚಿವ ಎ.ಮಂಜು ಅವರ ಹೇಳಿಕೆ ನಾನು ಪ್ರತಿಕ್ರಿಯೆ ನೀಡಲ್ಲ. ಒಂದು ವೇಳೆ ನಾನು ಮಾತನಾಡಿದರೆ ಪೊಳ್ಳೆದ್ದು ಹೋಗುತ್ತೇನೆ. ಸೀಟ್ ಹಂಚಿಕೆಯನ್ನು ದೊಡ್ಡವರು ನೋಡಿಕೊಳ್ಳುತ್ತಾರೆ ಎಂದರು.

    ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ವಿರುದ್ಧ ಗುಡುಗಿದ ಸಚಿವ ರೇವಣ್ಣ, ರಾಯರೆಡ್ಡಿ ಬಂಡವಾಳ ನನಗೇನು ಗೊತ್ತಿಲ್ವೇನ್ರೀ? ರಾಯರೆಡ್ಡಿ ಹತ್ರ ಹೇಳಿಸಿಕೊಂಡು ಕುಮಾರಸ್ವಾಮಿ ಅಧಿಕಾರ ನಡೆಸಬೇಕೆನ್ರೀ? ಸಚಿವರಾಗಿದ್ದಾಗ ಅವರು ಏನು ಮಾಡಿದ್ರು ಅಂತಾ ಗೊತ್ತಿದೆ. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವುದಕ್ಕೆ ಕುಮಾರಸ್ವಾಮಿ ಅವರೇ ಬರಬೇಕಾಯ್ತು ಎಂದು ಲೇವಡಿ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv