Tag: Minister Dr K Sudhakar

  • ಚಿಕ್ಕಬಳ್ಳಾಪುರದಲ್ಲಿ ಮಾದರಿ ಗೋಶಾಲೆ ನಿರ್ಮಾಣಕ್ಕೆ ಸುಧಾಕರ್ ಚಾಲನೆ

    ಚಿಕ್ಕಬಳ್ಳಾಪುರದಲ್ಲಿ ಮಾದರಿ ಗೋಶಾಲೆ ನಿರ್ಮಾಣಕ್ಕೆ ಸುಧಾಕರ್ ಚಾಲನೆ

    – ಗೋಸಂರಕ್ಷಣೆಗೆ ಮಹತ್ವದ ಯೋಜನೆ

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾನೂನು ಜಾರಿಯಾದ ಬಳಿಕ, ಗೋವು ಸಂರಕ್ಷಣೆಗಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಮಾದರಿ ಗೋಶಾಲೆ ಸ್ಥಾಪನೆಗೆ ಚಾಲನೆ ದೊರೆತಿದೆ.

    ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಶನಿವಾರ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ಹೋಬಳಿ ನಾಗರೆಡ್ಡಿಹಳ್ಳಿ ಬಳಿ ಪಶುಸಂಗೋಪನಾ ಇಲಾಖೆಯಿಂದ ನಿರ್ಮಿಸಲುದ್ದೇಶಿಸಿರುವ ಗೋಶಾಲೆ ಕಾಮಗಾರಿಗೆ ಚಾಲನೆ ನೀಡಿದರು. ಈ ಹಿಂದೆಯೇ ರಾಜ್ಯ ಸರ್ಕಾರ ಗೋ ಸಂರಕ್ಷಣೆಗೆ ಆದ್ಯತೆ ನೀಡಿ ಕಠಿಣ ಕಾನೂನು ಜಾರಿ ಮಾಡಿದೆ. ಇದಕ್ಕೆ ಪೂರಕವಾಗಿ ಗೋಶಾಲೆಗಳನ್ನು ಸಹ ನಿರ್ಮಿಸಲಾಗಿದೆ. ಈ ಹಿನ್ನೆಲೆ ಇಂದು ಸುಧಾಕರ್ ಅವರು ರಾಜ್ಯದ ಮೊದಲ ಮಾದರಿ ಗೋಶಾಲೆ ಸ್ಥಾಪನೆಗೆ ಚಾಲನೆ ನೀಡಿದರು.

    ಪ್ರಥಮ ಮಾದರಿ ಗೋಶಾಲೆ
    ಪ್ರತಿ ಜಿಲ್ಲೆಗೆ ಒಂದು ಗೋಶಾಲೆ ನಿರ್ಮಿಸಲಾಗುತ್ತಿದ್ದು, ಚಿಕ್ಕಬಳ್ಳಾಪುರದ ಈ ಗೋಶಾಲೆ ರಾಜ್ಯದಲ್ಲಿಯೇ ಪ್ರಥಮ ಮಾದರಿ ಗೋಶಾಲೆಯಾಗಲಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಸಂತಸದ ವ್ಯಕ್ತಪಡಿಸಿದರು.

    10 ಎಕರೆ ಪ್ರದೇಶದಲ್ಲಿ ಸುಮಾರು 50 ಲಕ್ಷ ವೆಚ್ಚದಲ್ಲಿ ಈ ಗೋಶಾಲೆ ನಿರ್ಮಾಣವಾಗಲಿದ್ದು, ವಯಸ್ಸಾದ, ರೋಗಗ್ರಸ್ಥ, ಅಂಗವಿಕಲ ಜಾನುವಾರುಗಳಿಗೆ ಪುನರ್ವಸತಿ ಕಲ್ಪಿಸಲಿದೆ. ಗೋಶಾಲೆಯ ಉಪ ಉತ್ಪನ್ನಗಳಿಂದ ತಯಾರಿಸಿದ ವಸ್ತುಗಳಿಗೆ ಖಾದಿ ಗ್ರಾಮೋದ್ಯೋಗ, ಕೆಎಂಎಫ್ ಮೂಲಕ ಮಾರುಕಟ್ಟೆ ಕಲ್ಪಿಸಿ, ಸುಸ್ಥಿರ ಸಂಪನ್ಮೂಲದ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

    ಗೋವು ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ಜಿಲ್ಲೆಗೊಂದರಂತೆ ಗೋಶಾಲೆ ಆರಂಭಿಸಲು 50 ಲಕ್ಷ ರೂ. ನಿಗದಿಪಡಿಸಿದೆ. ನಾಗರೆಡ್ಡಿಹಳ್ಳಿ ಗ್ರಾಮದ ಸರ್ವೆ ನಂ.41ರಲ್ಲಿ 10 ಎಕರೆಯನ್ನು ಗೋಶಾಲೆಗೆ ಮೀಸಲಿಟ್ಟಿದ್ದು, 2021ರ ಅಕ್ಟೋಬರ್ 2 ರೊಳಗಾಗಿ ಇದನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ ಜಾರಿಯಲ್ಲಿರುವ ಕೊಟ್ಟಿಗೆ, ಕೃಷಿ ಹೊಂಡ, ಮೇವು ಉತ್ಪಾದನೆ ಮೊದಲಾದ ಯೋಜನೆಗಳನ್ನು ಒಂದು ಮಾಡಲು ಉದ್ದೇಶಿಸಲಾಗಿದೆ.

    ಗೋಶಾಲೆಯ ಉಪ ಉತ್ಪನ್ನಗಳನ್ನು ಖಾದಿ ಗ್ರಾಮೋದ್ಯೋಗ, ಕೆಎಂಎಫ್ ಅಥವಾ ಕೆಎಪಿಎಲ್ ನಿಂದ ಮಾರಾಟ ಮಾಡಿ, ಸಂಪನ್ಮೂಲ ಕ್ರೋಢೀಕರಣ ಮಾಡಲಾಗುತ್ತದೆ. ಗೋಶಾಲೆಯ ಸುಸ್ಥಿರತೆ, ನಿರ್ವಹಣೆಗೆ ಮೇವು ಬೆಳೆಯುವುದು, ಉತ್ಪನ್ನ ಮಾರಾಟ ಮಾಡಲು ಜಿಲ್ಲಾ ಪ್ರಾಣಿ ದಯಾ ಸಂಘಕ್ಕೆ ಅವಕಾಶ ನೀಡಲಾಗಿದೆ. ಒಂದು ವೇಳೆ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಜಾನುವಾರುಗಳನ್ನು ನೋಡಿಕೊಳ್ಳಲು ಮುಂದೆ ಬಂದರೆ, ಅದಕ್ಕೂ ಅವಕಾಶವಿದೆ.

    ರಾಜ್ಯದಲ್ಲಿ ಗೋಶಾಲೆಗಳ ನಿರ್ಮಾಣಕ್ಕಾಗಿ ಪ್ರತಿ ಜಿಲ್ಲೆಗೆ ಮೊದಲ ಹಾಗೂ ಎರಡನೇ ಕಂತು ಸೇರಿ 24 ಲಕ್ಷ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಸರ್ಕಾರ ಅಥವಾ ಸಂಸ್ಥೆಗಳಿಂದ ನಡೆಸುವ ಗೋಶಾಲೆಯಲ್ಲಿ ಪ್ರತಿ ಜಾನುವಾರು ವೆಚ್ಚ ದಿನಕ್ಕೆ 17.30 ರೂ. ನಿಗದಿಪಡಿಸಲಾಗಿದೆ. ಜಿಲ್ಲೆಯ ಒಟ್ಟು ಜಾನುವಾರು ಪೈಕಿ ಶೇ.0.75 ರಷ್ಟು ಜಾನುವಾರುಗಳಿಗೆ ಸ್ಥಳಾವಕಾಶ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. 2018ರ ಗಣತಿ ಪ್ರಕಾರ ಜಿಲ್ಲೆಯಲ್ಲಿ 2,13,815 ದನಗಳು ಹಾಗೂ 26,397 ಎಮ್ಮೆಗಳಿವೆ.

  • ಯಾವ ಎಕ್ಸಾಂ ಬರೆದಿದ್ದಾರೆ ಗೊತ್ತಿಲ್ಲ- ಯೋಗೇಶ್ವರ್‌ಗೆ ಸುಧಾಕರ್ ಟಾಂಗ್

    ಯಾವ ಎಕ್ಸಾಂ ಬರೆದಿದ್ದಾರೆ ಗೊತ್ತಿಲ್ಲ- ಯೋಗೇಶ್ವರ್‌ಗೆ ಸುಧಾಕರ್ ಟಾಂಗ್

    ದಾವಣಗೆರೆ: ನಾವು 17 ಜನ ರಾಜೀನಾಮೆ ಕೊಟ್ಟು ಪರೀಕ್ಷೆ ಬರೆದಿದ್ದೆವು, ಅವರು ಯಾವ ಎಕ್ಸಾಂ ಬರೆದಿದ್ದಾರೆ ಗೊತ್ತಿಲ್ಲ ಎಂದು ಸಚಿವ ಯೋಗೇಶ್ವರ್ ಗೆ ಆರೋಗ್ಯ ಸಚಿವ ಸುಧಾಕರ್ ಟಾಂಗ್ ನೀಡಿದರು.

    ಪರೀಕ್ಷೆ ಬರೆದಿದ್ದೇವೆ, ಫಲಿತಾಂಶಕ್ಕೆ ಕಾಯುತ್ತಿದ್ದೇವೆ ಎಂಬ ಯೋಗೇಶ್ವರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಾವು 17 ಜನ ರಾಜೀನಾಮೆ ಕೊಟ್ಟು ಪರೀಕ್ಷೆ ಬರೆದಿದ್ದೆವು, ಬಳಿಕ ಪಾಸ್ ಆಗಿ ಸಚಿವರಾಗಿದ್ದೇವೆ. ಯೋಗೇಶ್ವರ್ ಯಾವ ಪರೀಕ್ಷೆ ಬರೆದಿದ್ದಾರೋ ಗೊತ್ತಿಲ್ಲ ಎಂದು ಸುಧಾಕರ್ ವ್ಯಂಗ್ಯವಾಡಿದರು.

    ರಮೇಶ್ ಜಾರಕಿಹೊಳಿ, ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡಲ್ಲ ಎಂದು ಹೇಳಿದ್ದೆ, ಕೊಟ್ಟಿಲ್ಲ ಎಂದು ಸ್ಪಷ್ಟ ಪಡಿಸಿದರು.

    ಲಸಿಕೆ ಹೆಚ್ಚು ಮಾಡಲಿಕ್ಕೆ ನಾನು ದೆಹಲಿಗೆ ಹೋಗಿದ್ದೆ, ಬೇರೆ ಅರ್ಥ ಕಲ್ಪಿಸುವುದು ಬೇಡ. 250 ಪಿಎಚ್ ಸಿ ಮೇಲ್ದರ್ಜೆಗೆ ಏರಿಸಲಾಗುವುದು, ಐದು ವರ್ಷದಲ್ಲಿ ಮೇಲ್ದರ್ಜೆಗೆ ಉದ್ದೇಶ ಹೊಂದಲಾಗಿದೆ. ಇದರ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿದ್ದೆ ಎಂದರು. ಲಸಿಕೆ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕಕ್ಕೆ ಎರಡುವರೆ ಕೋಟಿ ಲಸಿಕೆ ಸುಳ್ಳು ಲೆಕ್ಕಾನಾ, ದೇಶದಲ್ಲಕ 38 ಕೋಟಿ ಜನಕ್ಕೆ ಲಸಿಕೆ ನೀಡಲಾಗಿದ್ದು, ಅಮೇರಿಕದಲ್ಲಿ ಎಷ್ಟು ಕೊಟ್ಟಿದ್ದಾರೆ ಕೇಳಿ ಒಮ್ಮೆ, ಸಿದ್ದರಾಮಯ್ಯನವರಿಗೆ ಸುಳ್ಳು ಲೆಕ್ಕ ಹೇಳುವ ಅಭ್ಯಾಸ ಇರಬೇಕು ಎಂದು ತಿರುಗೇಟು ನೀಡಿದರು.

  • ಹೊಸ ಡೆಲ್ಟಾ ಪ್ಲಸ್ ವೈರಾಣು ಪತ್ತೆಗೆ ಜೀನೋಮ್ ಸೀಕ್ವೆನ್ಸ್: ಸುಧಾಕರ್

    ಹೊಸ ಡೆಲ್ಟಾ ಪ್ಲಸ್ ವೈರಾಣು ಪತ್ತೆಗೆ ಜೀನೋಮ್ ಸೀಕ್ವೆನ್ಸ್: ಸುಧಾಕರ್

    – ಗಡಿ ಭಾಗಗಳಲ್ಲಿ ಸಾಧ್ಯವಾದಷ್ಟು ಪರೀಕ್ಷೆ

    ಬೆಂಗಳೂರು/ಚಿಕ್ಕಬಳ್ಳಾಪುರ: ಕೋವಿಡ್ ಹೊಸ ಡೆಲ್ಟಾ ಪ್ಲಸ್ ವೈರಾಣು ನಿಯಂತ್ರಣಕ್ಕೆ ಜೀನೋಮ್ ಸೀಕ್ವೆನ್ಸ್ ಮಾಡುತ್ತಿದ್ದು, 600 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಡೆಲ್ಟಾ ಪ್ಲಸ್ ವೈರಾಣು ಸೋಂಕಿನ ಇಬ್ಬರು ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನೂ 600 ಮಾದರಿಗಳನ್ನು ಜೀನೋಮ್ ಸೀಕ್ವೆನ್ಸ್ ಗೆ ಕಳುಹಿಸಲಾಗಿದೆ, ಈ ವರದಿ ಇಂದು ಬರಲಿದೆ. ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿರುವ ಕೊರೊನಾ ಆತಂಕ ನಮ್ಮಲ್ಲಿ ಇನ್ನೂ ಬಂದಿಲ್ಲ. ಆದರೆ ಮಹಾರಾಷ್ಟ್ರ ಮತ್ತು ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ರಾಜ್ಯಕ್ಕೆ ಪ್ರವೇಶಿಸುವವರಿಗೆ ರ್ಯಾಂಡಮ್ ಟೆಸ್ಟ್ ಮಾಡಲು ಸೂಚಿಸಲಾಗಿದೆ ಎಂದರು.

    ಬೇರೆ ರಾಜ್ಯಗಳಿಂದ ಬರುವವರನ್ನು ನೂರಕ್ಕೆ ನೂರು ವೈದ್ಯಕೀಯ ತಪಾಸಣೆ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ಸಾಧ್ಯವಾದಷ್ಟು ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಕೇರಳ ಒಂದರಿಂದಲೇ ಕೆಲವು ಲಕ್ಷ ಜನರು ರಾಜ್ಯದೊಳಗೆ ಬರುತ್ತಿದ್ದಾರೆ. ಆದರೂ ಇದನ್ನು ಗಂಭೀರವಾಗಿ ಪರಿಗಣಿಸಿ ಸಾಧ್ಯವಾದಷ್ಟು ಜನರಿಗೆ ಪರೀಕ್ಷೆ ಮಾಡಲಾಗುತ್ತಿದೆ. ಜನರು ಲಸಿಕೆ ಪಡೆಯಲೇಬೇಕು. ಪಡೆದ ನಂತರವೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಇದರಿಂದಲೇ ಕೋವಿಡ್ ನಿಂದ ದೂರವಿರಲು ಸಾಧ್ಯ ಎಂದರು.

    ಬೆಂಗಳೂರಿನಲ್ಲಿ 50 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ದೇಶದ ಯಾವುದೇ ನಗರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡಿಲ್ಲ. ಹೀಗಾಗಿ ಇದೊಂದು ದಾಖಲೆಯಾಗಿದೆ. ರಾಜ್ಯದಲ್ಲಿ ಮೊದಲನೇ ಡೋಸ್ ಪಡೆದವರ ಪ್ರಮಾಣ ಶೇ.40ರಷ್ಟಿದೆ(1.85 ಕೋಟಿ). 45 ಲಕ್ಷಕ್ಕೂ ಹೆಚ್ಚು ಜನರು ಎರಡೂ ಡೋಸ್ ಪಡೆದಿದ್ದಾರೆ. ಲಸಿಕೆ ನೀಡಲು ಆದ್ಯತೆಯಲ್ಲಿ ಕೆಲ ಗುಂಪುಗಳನ್ನು ರಚಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಡಿ ವಿದ್ಯಾರ್ಥಿಗಳು, ಆರೋಗ್ಯ ಸಿಬ್ಬಂದಿಯ ಕುಟುಂಬದವರು, ಪೊಲೀಸರ ಕುಟುಂಬದವರು, ಮಾಧ್ಯಮದವರು ಹೀಗೆ ಜನಸಂಪರ್ಕ ಹೆಚ್ಚು ಇರುವವರನ್ನು ರಕ್ಷಣೆ ಮಾಡಲು ಆದ್ಯತೆ ನೀಡಲಾಗಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಲಕರಿಗೆ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುವುದು ಎಂದರು.

    ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಜಟಾಪಟಿ ಹೊಸದಲ್ಲ. ಅದು ಹುಟ್ಟಿದಾಗಿನಿಂದಲೂ ಇದೆ. ದಲಿತ ಸಿಎಂ ಬಗ್ಗೆ ಅವರು ಹೇಳುತ್ತಾರೆ ಹೊರತು, ಅವರು ಮಾಡುವುದಿಲ್ಲ. ಕಾಂಗ್ರೆಸ್ ನವರು ಪ್ರಧಾನಿ, ಮುಖ್ಯಮಂತ್ರಿ ಸ್ಥಾನಕ್ಕೆ ದಲಿತರನ್ನು ಆರಿಸುವುದಿಲ್ಲ. ಅಲ್ಪಸಂಖ್ಯಾತರ ಶೈಕ್ಷಣಿಕ ಆರ್ಥಿಕ, ಸಾಮಾಜಿಕ ಉದ್ಧಾರಕ್ಕೂ ಕಾಂಗ್ರೆಸ್ ನವರು ಏನೂ ಮಾಡಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಶಿಸ್ತುಬದ್ಧವಾಗಿ ಪ್ರತಿ ಸಮುದಾಯಕ್ಕೆ ಕಾರ್ಯಕ್ರಮ ನೀಡಿ ಬದಲಾವಣೆ ತರುವ ಪ್ರಯತ್ನ ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

    ಮಕ್ಕಳ ದತ್ತು
    ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಚಿಕ್ಕಬಳ್ಳಾಪುರ ಜಿಲ್ಲೆಯ 9 ಮಕ್ಕಳನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ದತ್ತು ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಜಿಲ್ಲಾಡಳಿತಕ್ಕೆ ಈ ಕುರಿತು ಮಾಹಿತಿ ನೀಡಲಾಗಿದೆ. ಈ ಮಕ್ಕಳ ಶೈಕ್ಷಣಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಪ್ರತಿ ಮಕ್ಕಳಿಗೆ ತಲಾ 1 ಲಕ್ಷ ರೂ. ನೀಡಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಈ ರೀತಿ ದತ್ತು ಪಡೆಯುವ ಅಗತ್ಯವಿದೆ. ಮುಖ್ಯಮಂತ್ರಿಗಳು ಇದಕ್ಕಾಗಿ ಯೋಜನೆಯನ್ನು ಈಗಾಗಲೇ ಜಾರಿ ಮಾಡಿದ್ದಾರೆ ಎಂದರು.

    ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವಿಗೀಡಾದ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು ಎಂದರು. ಇದೇ ವೇಳೆ ಶ್ರೀ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು 47 ಲ್ಯಾಪ್ ಟಾಪ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.

    ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ನಾಡಪ್ರಭು ಕೆಂಪೇಗೌಡರು ಜಾತಿ, ಸಮುದಾಯ ನೋಡದೆ ಲೋಕಕಲ್ಯಾಣಕ್ಕಾಗಿ ಕ್ರಮ ಕೈಗೊಂಡರು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಉದ್ದೇಶದ ಆಡಳಿತವನ್ನು ಕೆಂಪೇಗೌಡರು ಆರಂಭಿಸಿದರು. ವೈಜ್ಞಾನಿಕವಾಗಿ ಬೆಂಗಳೂರು ನಗರವನ್ನು ನಿರ್ಮಿಸಿ ಬೆಳೆಸಿದರು. ಒಂದೊಂದು ವರ್ಗಕ್ಕೂ ಒಂದೊಂದು ಪೇಟೆಗಳನ್ನು ಕಟ್ಟಿದರು. ಅವರ ಆಶಯಗಳಿಗೆ ತಕ್ಕಂತೆ ಜಾತ್ಯತೀತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.

    ಬೆಂಗಳೂರಿಗೆ ಪರ್ಯಾಯವಾಗಿ ಚಿಕ್ಕಬಳ್ಳಾಪುರವನ್ನು ಬೆಳೆಸಬೇಕು. ಕೆಲ ಪ್ರಮುಖ ಕೈಗಾರಿಕೆಗಳನ್ನು ಇಲ್ಲಿಗೆ ತರಲಾಗುತ್ತಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಿಸುತ್ತಿದ್ದು, ಮುಂದಿನ ವರ್ಷ ಉದ್ಘಾಟನೆಯಾಗಲಿದೆ. ಜಿಲ್ಲೆಯಲ್ಲಿ ಮೂರು ಕಡೆ 28 ಕೋಟಿ ರೂ. ಖರ್ಚು ಮಾಡಿ ಅಂತಾರಾಷ್ಟ್ರೀಯ ದರ್ಜೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

  • ಮದುವೆ ಸಮಾರಂಭಕ್ಕೆ ಮಾರ್ಷಲ್ ನಿಯೋಜನೆ: ಡಾ.ಕೆ.ಸುಧಾಕರ್

    ಮದುವೆ ಸಮಾರಂಭಕ್ಕೆ ಮಾರ್ಷಲ್ ನಿಯೋಜನೆ: ಡಾ.ಕೆ.ಸುಧಾಕರ್

    – ಲಾಕ್‍ಡೌನ್ ಹೇರುವ ಪರಿಸ್ಥಿತಿ ತರಬೇಡಿ
    – ಕೋವಿಡ್ 2 ನೇ ಅಲೆಯನ್ನು ತಡೆಯಲೇಬೇಕು

    ಬೆಂಗಳೂರು: ಮದುವೆ ಸಮಾರಂಭಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಲು ಮಾರ್ಷಲ್ ನಿಯೋಜಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

    ಎಲ್ಲ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದುವೆ ಸಮಾರಂಭಗಳಲ್ಲಿ ಜನರು ಅಂತರ ಕಾಯ್ದುಕೊಳ್ಳುತ್ತಿಲ್ಲ. ನಾನೇ ಸಮಾರಂಭಕ್ಕೆ ಹೋದರೆ ಮಾಸ್ಕ್ ತೆಗೆಯಿರಿ ಎಂದು ಹೇಳುತ್ತಾರೆ. ಹೀಗಾಗಿ ಮದುವೆ ಸಮಾರಂಭಗಳಲ್ಲಿ ಒಬ್ಬ ಮಾರ್ಷಲ್ ನೇಮಿಸಲು ತೀರ್ಮಾನ ಕೈಗೊಳ್ಳಲಾಗಿದೆ. 500 ಕ್ಕಿಂತ ಹೆಚ್ಚು ಜನರಿರಬಾರದು, ಎಲ್ಲರೂ ಮಾಸ್ಕ್ ಧರಿಸುವ ನಿಯಮವನ್ನು ಪಾಲಿಸಲು ಈ ಕ್ರಮ ವಹಿಸಲಾಗುವುದು. ಆಹಾರ ಪೂರೈಕೆ ಮಾಡುವವರಿಗೂ ಪರೀಕ್ಷೆ ಮಾಡಿಸಲು ಸೂಚಿಸಲಾಗಿದೆ ಎಂದರು.

    ಕೋವಿಡ್ ಮಾರ್ಗಸೂಚಿಗೆ ವಿರುದ್ಧವಾಗಿ ಸಭೆ, ಸಮಾರಂಭ, ಹೋರಾಟ ನಡೆಯುತ್ತಿದೆ. ಇದನ್ನು ಪಾಲಿಸದೇ ಕೋವಿಡ್ ಸೋಂಕು ಹೆಚ್ಚಾದರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಈಗಾಗಲೇ ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಲಾಕ್‍ಡೌನ್ ಆಗಿದ್ದು, ಅದೇ ಪರಿಸ್ಥಿತಿ ರಾಜ್ಯಕ್ಕೆ ಬರಬೇಕೆ ಎಂದು ಆಲೋಚಿಸಬೇಕು ಎಂದು ಕಿವಿಮಾತು ಹೇಳಿದರು.

    ಸರ್ಕಾರಿ ಇಲಾಖೆಗಳಲ್ಲಿ 2,90,000 ಮಂದಿ ಇದ್ದು, ಆರೋಗ್ಯ ಇಲಾಖೆಯ 4,24,573 ಮಂದಿಗೆ ಮೊದಲ ಕೋವಿಡ್ ಡೋಸ್ ನೀಡಲಾಗಿದೆ. 1,20,176 ಮುಂಚೂಣಿ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು ಎರಡು ಬಾರಿ ನೋಂದಣಿ ಮಾಡಿಸಿಕೊಂಡಿದ್ದು ಅದನ್ನು ತೆಗೆದು ಹಾಕಲಾಗುತ್ತಿದೆ. ಇದರಿಂದಾಗಿ ನಾವು ಮುಟ್ಟಿದ ಗುರಿ ಇನ್ನೂ ಹೆಚ್ಚಾಗಲಿದೆ. ಆರೋಗ್ಯ ಸಿಬ್ಬಂದಿ ಮತ್ತು ಮುಂಚೂಣಿ ಸಿಬ್ಬಂದಿಯಲ್ಲಿ ಶೇ.80 ರಿಂದ ಶೇ.90 ಮಂದಿಗೆ ಫೆಬ್ರವರಿ 28 ರೊಳಗೆ ಲಸಿಕೆ ನೀಡಬೇಕು ಎಂದು ಸೂಚಿಸಲಾಗಿದೆ. ಮುಂಚೂಣಿ ಸಿಬ್ಬಂದಿಗೆ ಫೆಬ್ರವರಿ 22, 23, 24 ಲಸಿಕೆ ಅಭಿಯಾನ ಮಾಡಲಾಗುತ್ತಿದೆ. ಎಲ್ಲ ಅಧಿಕಾರಿಗಳಿಗೆ ಲಸಿಕೆ ಪಡೆಯಲು ತಾಕೀತು ಮಾಡಲಾಗಿದೆ ಎಂದು ತಿಳಿಸಿದರು.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಲಸಿಕೆ ಅಭಿಯಾನ ಕುರಿತು ಮಾಹಿತಿ ಪಡೆಯುತ್ತಿದ್ದು, ವಾರದೊಳಗೆ ಈ ಕುರಿತು ಎಲ್ಲ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಲಿದ್ದಾರೆ. ಆರೋಗ್ಯ ಸಿಬ್ಬಂದಿಯ ಲಸಿಕೆ ಅಭಿಯಾನದಲ್ಲಿ ಬೆಂಗಳೂರು ಹಿಂದುಳಿದಿದೆ. ಬಾಗಲಕೋಟೆ, ದಾವಣಗೆರೆ, ಬೆಂಗಳೂರು ನಗರ, ಧಾರವಾಡ ಜಿಲ್ಲೆಗಳು ಶೇ.50 ಕ್ಕಿಂತ ಕಡಿಮೆ ಇದೆ. ಚಿಕ್ಕಬಳ್ಳಾಪುರ (79%), ತುಮಕೂರು (78%), ಉತ್ತರ ಕನ್ನಡ (73%), ಗದಗ (71%), ಚಿಕ್ಕಮಗಳೂರು (70%), ಚಾಮರಾಜನಗರ (70%) ಜಿಲ್ಲೆಗಳಲ್ಲಿ ಶೇ.70 ಕ್ಕಿಂತ ಹೆಚ್ಚು ಸಾಧನೆಯಾಗಿದೆ. ಮುಂಚೂಣಿ ಸಿಬ್ಬಂದಿಗೆ ಲಸಿಕೆ ನೀಡುವಲ್ಲಿ ಗದಗ (84%) ತುಮಕೂರು (71%) ಮುಂದಿದೆ. ಬಾಗಲಕೋಟೆ (23%), ಬೆಂಗಳೂರು ನಗರ (26%), ಚಾಮರಾಜನಗರ (27%) ಹಿಂದುಳಿದಿದ್ದು, 80% ಗುರಿ ಸಾಧಿಸಬೇಕು ಎಂದು ಸೂಚಿಸಲಾಗಿದೆ ಎಂದರು.

    ಕೇರಳ, ಮಹಾರಾಷ್ಟ್ರ ಜನರ ಪ್ರಯಾಣಕ್ಕೆ ನಿರ್ಬಂಧ ಹೇರಲಿಲ್ಲ. ಆದರೆ ರಾಜ್ಯದೊಳಗೆ ಬರುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ ಹಾಗೂ ಶಾಲೆಗಳನ್ನು ಹಂತಹಂತವಾಗಿ ತೆರೆಯುತ್ತಿದ್ದು, ಕೋವಿಡ್ ಸೋಂಕು ಹೆಚ್ಚಳದ ಸಮಸ್ಯೆಯಾಗಿಲ್ಲ. ಕೋವಿಡ್ 2 ನೇ ಅಲೆ ಬರದಂತೆ ಕ್ರಮ ವಹಿಸಲಾಗುತ್ತಿದೆ. ಮಾರ್ಚ್‍ನಿಂದ ಸಾಮಾನ್ಯ ಜನರಿಗೆ ಲಸಿಕೆ ನೀಡುವ ಬಗ್ಗೆ ಕೇಂದ್ರ ಸರ್ಕಾರ ಶೀಘ್ರವೇ ನಿರ್ಣಯ ಕೈಗೊಳ್ಳಲಿದೆ ಎಂದು ನುಡಿದರು.

  • ನಮ್ಮಲ್ಲಿರುವುದು ಕೆಂಪು, ಬಿಳಿ ರಕ್ತ ಕಣ, ಡಿ.ಕೆ.ಸುರೇಶ್‍ಗೆ ಬಯಾಲಜಿ ಪುಸ್ತಕ ಕೊಡಿ- ಸುಧಾಕರ್ ಟಾಂಗ್

    ನಮ್ಮಲ್ಲಿರುವುದು ಕೆಂಪು, ಬಿಳಿ ರಕ್ತ ಕಣ, ಡಿ.ಕೆ.ಸುರೇಶ್‍ಗೆ ಬಯಾಲಜಿ ಪುಸ್ತಕ ಕೊಡಿ- ಸುಧಾಕರ್ ಟಾಂಗ್

    ಕೋಲಾರ: ಸಂಸದ ಡಿ.ಕೆ.ಸುರೇಶ್ ಅವರ ಕೇಸರಿ ರಕ್ತ ಹೇಳಿಕೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ.ಸುಧಾಕರ್ ಟಾಂಗ್ ನೀಡಿದ್ದು, ನಮ್ಮಲ್ಲಿರುವುದು ಕೆಂಪು ಹಾಗೂ ಬಿಳಿ ರಕ್ತ ಕಣಗಳು ಎಂದಿದ್ದಾರೆ.

    ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಸುರೇಶ್ ಕೇಸರಿ ರಕ್ತ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿ, ಅವರಿಗೆ ಬಯಾಲಜಿ ಪುಸ್ತಕ ಕೊಡಿಸುತ್ತೇನೆ ನೋಡಿಕೊಳ್ಳಲಿ. ನನಗೆ ಗೊತ್ತಿರೋದು ಬಿಳಿ ಹಾಗೂ ಕೆಂಪು ರಕ್ತ ಕಣ ಅಷ್ಟೆ ಕೇಸರಿ ರಕ್ತ ಕಣ ಇರೋದು ನನಗೆ ಗೊತ್ತಿಲ್ಲ. ಆರ್.ಆರ್.ನಗರದಲ್ಲಿ ವಿಷಯಾಧಾರಿತ ಚರ್ಚೆ ಬಿಟ್ಟು ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ನಾನು ವೈಯಕ್ತಿಕ ಟೀಕೆಗಳಿಗೆ ಉತ್ತರ ನೀಡುವುದಿಲ್ಲ. ಇನ್ನು ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. 6 ಸ್ಥಾನಗಳು ಖಾಲಿ ಇರುವುದುರಿಂದ ಆದಷ್ಟು ಶೀಘ್ರವಾಗಿ ಆಗುತ್ತದೆ ಎಂದು ತಿಳಿಸಿದರು.

    ಕಾರ್, ಬೈಕ್‍ನಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಧರಿಸುವ ನಿಯಮವನ್ನು ತಜ್ಞರ ಸಲಹೆಯಂತೆ ಜಾರಿಗೆ ತರಲಾಗಿದೆ. ಕಾರ್‍ನಲ್ಲಿ ಒಬ್ಬರೇ ಹೋಗುವಾಗ ಮಾಸ್ಕ್ ಕಡ್ಡಾಯವಲ್ಲ, ಆದರೆ ಬೈಕ್ ನಲ್ಲಿ ಹೋಗುವಾಗ ಮಾಸ್ಕ್ ಹಾಕಿಕೊಳ್ಳಬೇಕು ಇದು ತಜ್ಞರ ಅಭಿಪ್ರಾಯವಾಗಿದೆ. ಕೊರೊನಾ ವಾರಿಯರ್ಸ್ ಸುಮಾರು 8 ಗಂಟೆಗಳ ಕಾಲ ಪಿಪಿಇ ಕಿಟ್‍ಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಾರೆ. ನಾವು ಮಾಸ್ಕ್ ಹಾಕುವುದರಲ್ಲಿ ತಪ್ಪಿಲ್ಲ, ಸರ್ಕಾರ ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಧರಿಸವುದು ಕಡ್ಡಾಯ ಮಾಡಿದೆ ಎಂದು ತಿಳಿಸಿದರು.

  • ಕೊರೊನಾ ನಾಗಾಲೋಟ ಯಾರೂ ನಿಲ್ಲಿಸಲು ಆಗಲ್ಲ: ಸಚಿವ ಸುಧಾಕರ್

    ಕೊರೊನಾ ನಾಗಾಲೋಟ ಯಾರೂ ನಿಲ್ಲಿಸಲು ಆಗಲ್ಲ: ಸಚಿವ ಸುಧಾಕರ್

    – ಮರಣ ಪ್ರಮಾಣ ನಿಯಂತ್ರಿಸಬೇಕಿದೆ
    – ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ

    ಬೆಂಗಳೂರು: ಕೊರೊನಾ ನಾಗಾಲೋಟವನ್ನು ಯಾರೂ ನಿಲ್ಲಿಸಲು ಆಗಲ್ಲ. ಆದರೆ ಸಾವಿನ ಪ್ರಮಾಣ ಕಡಿಮೆ ಮಾಡುವುದೇ ಮುಖ್ಯವಾಗಿದೆ. ಲಸಿಕೆ ಬರೋವರೆಗೂ ಕೊರೊನಾ ಸಾವಿನ ಪ್ರಮಾಣ ಹೆಚ್ಚಾಗೋದು ಸ್ವಾಭಾವಿಕ. ಲಸಿಕೆ ಬರೋವರೆಗೆ ಜನ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

    ರಾಜಾಜಿನಗರದ ಇಎಸ್‍ಐ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಮಾತನಾಡಿದ ಅವರು, ಅಮೆರಿಕದಲ್ಲಿ ನಮಗಿಂತ ಹೆಚ್ಚು ಸೋಂಕು, ಸಾವು ಇದೆ. ನಮ್ಮ ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದ್ದರೂ, ಕೊರೊನಾವನ್ನು ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ನಿರ್ಧಾರಗಳಿಂದ ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ನಮ್ಮಲ್ಲಿ ಸಾವಿನ ಪ್ರಮಾಣ ಸಹ ನಿಯಂತ್ರಣದಲ್ಲಿದೆ ಎಂದು ತಿಳಿಸಿದರು.

    ಸೋಂಕಿತರ ಚಿಕಿತ್ಸೆ, ಸೌಲಭ್ಯ ಕುರಿತು ವೈದ್ಯರಿಂದ ಸಚಿವ ಸುಧಾಕರ್ ಮಾಹಿತಿ ಪಡೆದಿದ್ದು, ಇಎಸ್‍ಐ ಆಸ್ಪತ್ರೆಯಲ್ಲಿ ಮರಣ ಪ್ರಮಾಣ ಹೆಚ್ಚಳವಾಗಿದ್ದು, ಈ ಕುರಿತು ಪರಿಶೀಲಿಸಿ ಇದಕ್ಕೆ ಕಾರಣ ತಿಳಿಯಲು ಸಮಿತಿ ರಚನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಈ ವರೆಗೆ 421 ಕೊರೊನಾ ರೋಗಿಗಳು ದಾಖಲಾಗಿದ್ದಾರೆ. ಇದರಲ್ಲಿ 54 ಸೋಂಕಿತರು ಮೃತಪಟ್ಟಿದ್ದಾರೆ. ಮರಣ ಪ್ರಮಾಣ ಶೇ.12.8 ರಷ್ಟಿದೆ. ಈ ರೀತಿ ಮರಣ ಹೆಚ್ಚಳವಾಗಲು ಕಾರಣ ಪತ್ತೆ ಮಾಡಬೇಕು. ಇದಕ್ಕಾಗಿ ಸಮಿತಿ ರಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಕ್ಯಾನ್ಸರ್ ಇರುವ ರೋಗಿಗಳು ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ಇನ್ನೂ ಹಲವು ರೋಗಿಗಳು ತಡವಾಗಿ ಬಂದು ದಾಖಲಾಗಿದ್ದಾರೆ. ಹೀಗಾಗಿ ಮರಣ ಪ್ರಮಾಣ ಹೆಚ್ಚಿದೆ. ಮರಣಕ್ಕೆ ಸಂಬಂಧಿಸಿದಂತೆ ಆಡಿಟ್ ವರದಿ ರೂಪಿಸಲು ಆದೇಶಿಸಲಾಗಿದೆ. ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ವೈದ್ಯಾಧಿಕಾರಿಗಳು ಸಚಿವರಿಗೆ ತಿಳಿಸಿದ್ದಾರೆ.

  • ರಾಜ್ಯದಲ್ಲಿ ಮಹಾರಾಷ್ಟ್ರ, ದೆಹಲಿಗಿಂತ ಮರಣ ದರ ಕಡಿಮೆ: ಸಚಿವ ಡಾ.ಕೆ.ಸುಧಾಕರ್

    ರಾಜ್ಯದಲ್ಲಿ ಮಹಾರಾಷ್ಟ್ರ, ದೆಹಲಿಗಿಂತ ಮರಣ ದರ ಕಡಿಮೆ: ಸಚಿವ ಡಾ.ಕೆ.ಸುಧಾಕರ್

    -ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ

    ಬೆಂಗಳೂರು: ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಮರಣ ದರ ಕಡಿಮೆಯಾಗಿದೆ. ಇದು ಸಮಾಧಾನಕರ ವಿಚಾರ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

    ಕರ್ನಾಟಕದಲ್ಲಿ ಕೋವಿಡ್ ಮರಣ ಪ್ರಮಾಣ ಇತರೆ ರಾಜ್ಯಗಳಿಗಿಂತ ಸಮಾಧಾನಕರವಾಗಿದೆ. ಪ್ರತಿ 10 ಲಕ್ಷ ಜನಸಂಖ್ಯೆಗೆ ಕೋವಿಡ್ ನಿಂದ ಮರಣ ಹೊಂದುತ್ತಿರುವವವರ ಸಂಖ್ಯೆ ಕರ್ನಾಟಕಕ್ಕಿಂತ ದೆಹಲಿಯಲ್ಲಿ 5 ಪಟ್ಟು ಮತ್ತು ಮಹಾರಾಷ್ಟ್ರದಲ್ಲಿ 3 ಪಟ್ಟು ಹೆಚ್ಚಿದೆ. ಬೆಂಗಳೂರಿನಲ್ಲಿ ಮರಣ ಪ್ರಮಾಣವು ಇತರೆ ಮಹಾನಗರಗಳಿಗಿಂತ ಕಡಿಮೆ ಇದೆ. 10 ಲಕ್ಷ ಜನಸಂಖ್ಯೆಗೆ ರಾಜ್ಯದಲ್ಲಿ 39 ಮತ್ತು ಬೆಂಗಳೂರಿನಲ್ಲಿ 115 ಕೋವಿಡ್ ಮರಣ ದರವಿದೆ ಎಂದು ಸಚಿವರು ತಿಳಿಸಿದ್ದಾರೆ.

    ಅಧಿಕಾರಿಗಳಿಗೆ ಎಚ್ಚರಿಕೆ: ಆಸ್ಪತ್ರೆಗಳಲ್ಲಿ ರೋಗಿಗಳ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

    ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋಗಲು ವಿಳಂಬ ಮಾಡಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮೃತದೇಹ ತೆರವುಗೊಳಿಸಲು ವಿಳಂಬ ಮಾಡಿರುವ ಘಟನೆ ನನ್ನ ಗಮನಕ್ಕೆ ಬಂದಿದೆ. ಇದನ್ನು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ರೀತಿ ನಿರ್ಲಕ್ಷ್ಯ ತೋರುವ ವೈದ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸುಧಾಕರ್ ಎಚ್ಚರಿಸಿದ್ದಾರೆ.

  • ಕೊರೊನಾ ಪರೀಕ್ಷೆಗೆ ಸರ್ಕಾರದಿಂದ ದರ ನಿಗದಿ

    ಕೊರೊನಾ ಪರೀಕ್ಷೆಗೆ ಸರ್ಕಾರದಿಂದ ದರ ನಿಗದಿ

    ಬೆಂಗಳೂರು: ಸರ್ಕಾರ ಕೊರೊನಾ ಪರೀಕ್ಷೆಯ ದರವನ್ನು ನಿಗದಿ ಪಡಿಸಿದ್ದು, ಸರ್ಕಾರ ಸೂಚಿಸಿದ ರೋಗಿಗಳಿಗೆ 2000 ಹಾಗೂ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡರೆ 3000 ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

    ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಬಳಿಕ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ದರ ಇಳಿಕೆ ಮಾಡಲಾಗಿದ್ದು, ಸರ್ಕಾರದಿಂದ ಸೂಚಿಸಿದ ರೋಗಿಗಳ ಟೆಸ್ಟ್ ಗೆ 2000 ರೂ. ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಟೆಸ್ಟ್ ಮಾಡಿಸಿದರೆ 3000 ರೂ. ನಿಗದಿ ಮಾಡಲಾಗಿದೆ. ಅಲ್ಲದೆ ಖಾಸಗಿ ಆಸ್ಪತ್ರೆಯಲ್ಲಿ ತಾಯಿ ಮಕ್ಕಳ ವಿಭಾಗ ಬಿಟ್ಟು ಉಳಿದ ಬೆಡ್ ತೆಗೆದುಕೊಳ್ಳಲು ಸೂಚಿಸಲಾಗಿದೆ. ಆದರೆ ಖಾಸಗಿಯವರಿಂದ ಶೇ.50 ಬೆಡ್ ಸರ್ಕಾರ ಪಡೆದುಕೊಳ್ಳಲಿದೆ. ಉಳಿದ ಶೇ.50ರಷ್ಟು ಬೆಡ್‍ಗಳನ್ನು ಅವರು ಯಾವುದಕ್ಕೆ ಬೇಕಾದರೂ ಬಳಸಿಕೊಳ್ಳಬಹುದು. ಸರ್ಕಾರಕ್ಕೆ ನೀಡಿರುವ ಶೇ.50ರಷ್ಟು ಬೆಡ್ ಗಳನ್ನು ಕೋವಿಡ್ ಹೊರತುಪಡಿಸಿ ಬೇರೆ ಯಾವುದಕ್ಕೂ ಬಳಕೆ ಮಾಡಬಾರದು ಸೂಚಿಸಿದರು.

    ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಎನ್‍ಡಿಆರ್ ಎಫ್, ಕೆಪಿಎಂಇ, ಎಪಿಡಮಿಕ್ ಕಾಯ್ದೆ ಇದೆ. ಈ ನಿಟ್ಟಿನಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗಿದೆ. ಸಂಘರ್ಷದ ಹಾದಿ ಬೇಡ ಎಂದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಸಿಎಂ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸುಧಾಕರ್ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಸಿದ್ದಾರೆ.

    ಈಗ ಒಂದು ಲಕ್ಷ ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್ ಇವೆ, ನಾಲ್ಕು ಲಕ್ಷ ಆಂಟಿಜೆನ್ ಟೆಸ್ಟ್ ಕಿಟ್ ಖರೀದಿ ಮಾಡುತ್ತೇವೆ. ಒಟ್ಟು 5 ಲಕ್ಷ ಕಿಟ್ ಬಳಸುತ್ತೇವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆಂಟಿಜೆನ್ ಟೆಸ್ಟ್ ಕಿಟ್ ಬಳಸುತ್ತೇವೆ. 35 ಲಕ್ಷ ಪಿಪಿಇ ಕಿಟ್, 35 ಲಕ್ಷ ಮಾಸ್ಕ್ ಖರೀದಿಗೆ ಅನುಮೋದನೆ ನೀಡಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಇಂದು ಸುಮಾರು 500 ಕೋಟಿ ರೂ. ಅನುದಾನಕ್ಕೆ ಅನುಮೋದನೆ ಮಾಡಿದ್ದೇವೆ ಎಂದರು.

    ನರ್ಸ್‍ಗಳ ವೇತನವನ್ನು 30 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. 6 ತಿಂಗಳ ಕಾಲ ನರ್ಸ್‍ಗಳ ವೇತನ ಹೆಚ್ಚಳವಾಗಲಿದೆ. ಬಿಬಿಎಂಪಿ, ಆರೋಗ್ಯ, ಆಯುಷ್ ಎಲ್ಲ ನರ್ಸ್ ಗಳಿಗೂ ವೇತನ ಹೆಚ್ಚಳ ಅನ್ವಯವಾಗಲಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಆಯುಷ್ಮಾನ್ ಭಾರತ್ ಯೋಜನೆ ಅಡಿ ದರ ಪಡೆಯಬೇಕು ಎಂದು ಸೂಚಿಸಿದರು.

    ಜಿಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆ ಮಾಡಲು ನಿರ್ಣಯ ಮಾಡಲಾಗಿದೆ. ಜಿಲ್ಲಾ ಕೇಂದ್ರದ ಖಾಸಗಿ ಆಸ್ಪತ್ರೆಗಳು ನಾನ್ ಕೋವಿಡ್ ಸೇವೆಗೆ ಲಭ್ಯವಿರುತ್ತವೆ. ಆಯುಷ್ ವೈದ್ಯರ ವೇತನವನ್ನು 48 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ತಾತ್ಕಾಲಿಕವಾಗಿ ಕೋವಿಡ್ ಕಾರ್ಯನಿರ್ವಹಣೆಗೆ ನೇಮಕ ಮಾಡಿಕೊಳ್ಳುವ ಎಂಬಿಬಿಎಸ್ ವೈದ್ಯರಿಗೆ 80 ಸಾವಿರ ರೂ. ವೇತನ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

    ನಾನ್ ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ತೀರ್ಮಾನ ಮಾಡಲಾಗಿದ್ದು, ಒಪಿಡಿ ದರ 10 ರೂಪಾಯಿ ಕೊಡುವಂತಿಲ್ಲ. ಅಲ್ಲದೆ ರೋಗಿಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಲು ಆಯುಷ್ ಇಲಾಖೆಯಿಂದ ಪ್ರಸ್ತಾವನೆ ಬಂದಿತ್ತು. ಆ ಪ್ರಸ್ತಾವನೆಯನ್ನು ಉನ್ನತ ಮಟ್ಟದ ಸಮಿತಿಗೆ ನೀಡಲಾಗಿದೆ. ಮುಂದಿನ ವಾರ ವರದಿ ನೀಡಲಿದೆ ಎಂದರು.

  • ದಿನಕ್ಕೆ 1 ಸಾವಿರ ಕೋವಿಡ್-19 ಟೆಸ್ಟ್ ಗುರಿ- ಸಚಿವ ಸುಧಾಕರ್

    ದಿನಕ್ಕೆ 1 ಸಾವಿರ ಕೋವಿಡ್-19 ಟೆಸ್ಟ್ ಗುರಿ- ಸಚಿವ ಸುಧಾಕರ್

    – ಟೆಸ್ಟ್ ಹೆಚ್ಚಿಸುವಂತೆ ಮೆಡಿಕಲ್ ಕಾಲೇಜು, ಖಾಸಗಿ ಸಂಸ್ಥೆಗಳಿಗೆ ಸೂಚನೆ
    – 10- 15 ದಿನಗಳಲ್ಲಿ ಟೆಸ್ಟ್ ಹೆಚ್ಚಿಸಲು ಗಡುವು

    ಬೆಂಗಳೂರು: ಕೋವಿಡ್-19 ಪರೀಕ್ಷೆ ವಿಷಯದಲ್ಲಿ ನಿರ್ಲಕ್ಷ್ಯ ತೋರಿಸುವ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಮುಂದಿನ 10-15 ದಿನಗಳಲ್ಲಿ ಪ್ರತಿ ದಿನ 500ರಿಂದ 1 ಸಾವಿರ ಟೆಸ್ಟ್ ಗಳವರೆಗೆ ಗುರಿ ತಲುಪಬೇಕು. ಈ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಸರ್ಕಾರ ಕಳೆದ ನಾಲ್ಕು ತಿಂಗಳಿಂದ ಅನೇಕ ಸೂಚನೆಗಳನ್ನು ನೀಡಿದೆ. ಲ್ಯಾಬ್ ಸ್ಥಾಪನೆಗೆ ಅಗತ್ಯವಿರುವ ನೆರವು ನೀಡಲಾಗಿದೆ. ಸಿಬ್ಬಂದಿಗೆ ನಿಮ್ಹಾನ್ಸ್ ಮೂಲಕ ತರಬೇತಿ ನೀಡಲಾಗಿದೆ. ಆದರೂ ಸರ್ಕಾರದ ಜೊತೆ ಕೈಜೋಡಿಸುತ್ತಿಲ್ಲ. ಇಂತಹ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮೆಡಿಕಲ್ ಕಾಲೇಜುಗಳಲ್ಲಿ ಪ್ರಯೋಗಾಲಯ ಸ್ಥಾಪನೆ ಮಾಡುವುದು ಕಡ್ಡಾಯ. ಎಂಸಿಐನಿಂದ ಸ್ಪಷ್ಟ ನಿದರ್ಶನಗಳಿವೆ. ಆದರೂ ಕೆಲವರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇನ್ನು ಇಂತಹ ಮೀನಮೇಷ ವರ್ತನೆಯನ್ನು ಸಹಿಸುವುದಿಲ್ಲ ಎಂದರು.

    ರಾಜ್ಯದಲ್ಲಿ ಸೋಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಟೆಸ್ಟ್ ಫಲಿತಾಂಶ ವಾರಗಳವರೆಗೆ ಬರುತ್ತಿಲ್ಲ ಎಂಬ ದೂರುಗಳಿವೆ. ಇನ್ನು ಮುಂದೆ 24 ರಿಂದ 30 ಗಂಟೆಗಳಲ್ಲಿ ವರದಿ ಕೈಸೇರಬೇಕು. ಈ ಉದ್ದೇಶದಿಂದ ಹಿರಿಯ ಅಧಿಕಾರಿ ಶಾಲಿನಿ ರಜನೀಶ್ ಅವರಿಗೆ ಇದರ ಉಸ್ತುವಾರಿಗೆ ನಿಯೋಜಿಸಲಾಗಿದೆ ಎಂದರು.

    ಕೊಪ್ಪಳ ಆಸ್ಪತ್ರೆಯಲ್ಲಿ ಕನಿಷ್ಠ ಸಿಬ್ಬಂದಿ ಇಟ್ಟುಕೊಂಡು 1200 ಟೆಸ್ಟ್‍ಗಳನ್ನು ಮಾಡಿ ರಾಜ್ಯಕ್ಕೆ ಮಾದರಿಯಾಗಿದೆ. ಉಳಿದ ಸಂಸ್ಥೆಗಳು ಈ ಗುರಿ ತಲುಪಬೇಕು. ಅದಕ್ಕಾಗಿ ಅಗತ್ಯ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ಅಳವಡಿಸಬೇಕು. ಪ್ರತಿದಿನ ಮಾಡುವ ಟೆಸ್ಟ್ ಮತ್ತು ಬಾಕಿ ಉಳಿದ ಸ್ಯಾಂಪಲ್ ವಿವರಗಳನ್ನು ರಾಜ್ಯದ ಡ್ಯಾಷ್ ಬೋಡ್9ನಲ್ಲಿ ಸಿಗುವಂತೆ ಎಲ್ಲರೂ ಮಾಹಿತಿ ಒದಗಿಸಬೇಕು. ಇದಕ್ಕಾಗಿಯೇ ಡಾಟಾ ಆಪರೇಟರ್ ಗಳನ್ನು ನೇಮಕ ಮಾಡಬೇಕು. ಇನ್ನು ಮುಂದೆ ನೆಪಗಳನ್ನು ಹೇಳುವಂತಿಲ್ಲ ಎಂದರು.

    ರೋಗ ಲಕ್ಷಣ ಇದ್ದವರು ಮತ್ತು ಇಲ್ಲದವರ ಸ್ಯಾಂಪಲ್ ಗಳನ್ನು ಸರ್ಕಾರ ನೀಡಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಟೆಸ್ಟ್ ಮಾಡಬೇಕು. ಚೌಕಾಸಿ ಪ್ರಶ್ನೆಯೇ ಇಲ್ಲ. ಮೆಡಿಕಲ್ ಕಾಲೇಜು ಹೊರತು ಪಡಿಸಿ ಇರುವ ಖಾಸಗಿ ಪ್ರಯೋಗಾಲಯಗಳ ಜೊತೆ ಬುಧವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ಪರಾಮರ್ಶೆ ಮಾಡಲಾಗುತ್ತದೆ ಎಂದು ಸಚಿವರು ಎಂದು ತಿಳಿಸಿದರು.

    ಪ್ರಯೋಗಾಲಯ ಸ್ಥಾಪನೆ, ಸಿಬ್ಬಂದಿ ತರಬೇತಿ ಹಾಗೂ ನಾನಾ ಸಂಸ್ಥೆಗಳ ಅಕ್ರಡೇಶನ್ ಕೊಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತಿರುವ ನಿಮ್ಹಾನ್ಸ್ ನ ಡಾ.ರವಿ ಅವರನ್ನು ಸಚಿವರು ಅಭಿನಂದಿಸಿದರು. ಮುಂದಿನ ಹತ್ತು ದಿನಗಳಲ್ಲಿ ಬಾಕಿ ಇರುವ 25 ರಿಂದ 30 ಪ್ರಯೋಗಾಲಯಗಳನ್ನು ಸ್ಥಾಪಿಸಿ ಟೆಸ್ಟ್ ಗಳ ವಿಷಯದಲ್ಲಿ ಗೊಂದಲ ಉದ್ಭವಿಸದಂತೆ ನೋಡಿಕೊಳ್ಳಬೇಕು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದರು.

  • ಬೂತ್ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿ- ವಲಯವಾರು ಅಧಿಕಾರಿಗಳಿಗೆ ಸಚಿವ ಸುಧಾಕರ್ ಸೂಚನೆ

    ಬೂತ್ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿ- ವಲಯವಾರು ಅಧಿಕಾರಿಗಳಿಗೆ ಸಚಿವ ಸುಧಾಕರ್ ಸೂಚನೆ

    – ಬೂತ್ ಮಟ್ಟದ ಕಾರ್ಯಪಡೆ ರಚನೆ, ತರಬೇತಿ, ಸಮೀಕ್ಷೆಗೆ ಕಾಲಮಿತಿ ನಿಗದಿ
    – ವಾರದೊಳಗೆ ಮಾದರಿಗಳು ಬಾಕಿ ಉಳಿಯದಂತೆ ನೋಡಿಕೊಳ್ಳಿ

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಪರಿಣಾಮಕಾರಿ ಕಾರ್ಯತಂತ್ರ ರೂಪಿಸಿದ್ದು, ಅದರನ್ವಯ ಕಾರ್ಯ ನಿರ್ವಹಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಲಯವಾರು ಉಸ್ತುವಾರಿ ಅಧಿಕಾರಿಗಳಿಗೆ ಸೂಚಿಸಿದರು.

    ಎರಡು ತಾಸಿಗೂ ಹೆಚ್ಚು ಕಾಲ ಅಧಿಕಾರಗಳ ಜೊತೆ ವಿಡಿಯೋ ಸಂವಾದದ ಮೂಲಕ ಚರ್ಚಿಸಿ ಮಾಹಿತಿ ಪಡೆದ ಅವರು, ನಿರ್ದಿಷ್ಟ ಹೊಣೆಗಾರಿಕೆ ವಹಿಸಿಕೊಂಡಿರುವ ಅಧಿಕಾರಿಗಳು ಇತರೆ ಸಹೋದ್ಯೋಗಿಗಳ ಜೊತೆ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು. ಲಾಕ್‍ಡೌನ್ ಅವಧಿ ಮುಕ್ತಾಯಗೊಳ್ಳುವ ಮುನ್ನ ಬೂತ್ ಮಟ್ಟದಲ್ಲಿ ಸಮಿತಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕು. ಅದಕ್ಕಾಗಿ ಸಮಿತಿಗಳ ರಚನೆ, ತರಬೇತಿ ಪ್ರಕ್ರಿಯೆಯನ್ನು ಒಂದೆರಡು ದಿನಗಳಲ್ಲಿ ಮುಗಿಸಬೇಕು. ನಂತರ ಸಮಿತಿ ಸದಸ್ಯರು ತಮಗೆ ನಿಗದಿಗೊಳಿಸಿರುವ ಬೂತ್‍ಗಳಲ್ಲಿ ಮನೆ ಮನೆ ಸಮೀಕ್ಷೆ ನಡೆಸಬೇಕು ತಿಳಿಸಿದರು.

    ಸಮೀಕ್ಷೆ ವೇಳೆ ಐಎಲ್‍ಐ ಮತ್ತು ಸಾರಿ ಪ್ರಕರಣಗಳ ತಪಾಸಣೆ ನಡೆಸಿ ರೋಗ ಲಕ್ಷಣ ಆಧರಿಸಿ ಅವರನ್ನು ಹೋಮ್ ಐಸೋಲೇಷನ್, ಕೋವಿಡ್-19 ಕೇರ್ ಸೆಂಟರ್ ಮತ್ತು ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸುವ ಕೆಲಸ ಮಾಡಬೇಕು. ಮಾರ್ಗಸೂಚಿ ಬಗ್ಗೆ ಸಮಿತಿ ಸದಸ್ಯರಿಗೆ ತರಬೇತಿ ಸಮಯದಲ್ಲೇ ಮನವರಿಕೆ ಮಾಡಿಕೊಡಬೇಕು. ಪಲ್ಸ್ ಆಕ್ಸಿಮೀಟರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಯಂತ್ರಗಳನ್ನು ಸದಸ್ಯರಿಗೆ ಒದಗಿಸಬೇಕು. ಅಂಬುಲೆನ್ಸ್ ಒದಗಿಸುವುದು ಸಮಿತಿಯ ಜವಾಬ್ದಾರಿ ಆಗಬೇಕು. ಸಂಪರ್ಕಿತರ ಪತ್ತೆ ಕಾರ್ಯವೂ ಮರು ಆರಂಭ ಆಗಬೇಕು ಎಂದು ತಿಳಿಸಿದರು.

    ವಲಯವಾರು ಉಸ್ತುವಾರಿ ಅಧಿಕಾರಿಗಳು ಪ್ರತಿದಿನ ಈ ಎಲ್ಲ ಕೆಲಸಗಳ ಮೇಲೆ ನಿಗಾವಹಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ಜೊತೆಗೆ ತಮ್ಮ ವ್ಯಾಪ್ತಿಗೆ ಸೇರಿರುವ ಲ್ಯಾಬ್ ಗಳ ಪರೀಕ್ಷೆ ಮತ್ತು ಕಾರ್ಯ ನಿರ್ವಹಣೆ ಮೇಲೂ ನಿಗಾ ಇಡಬೇಕು. ಇನ್ನೊಂದು ವಾರದೊಳಗೆ ಯಾವುದೇ ಸ್ಯಾಂಪಲ್ ಬಾಕಿ ಇಲ್ಲದಂತೆ ನೋಡಿಕೊಳ್ಳಬೇಕು. ಇದರ ಸಮನ್ವಯವನ್ನು ಹಿರಿಯ ಅಧಿಕಾರಿ ಶಾಲಿನಿ ರಜನೀಶ್ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

    ಕೊಳಚೆ ಪ್ರದೇಶ ಮತ್ತು ಹೋಮ್ ಕ್ವಾರಂಟೈನ್ ಸೌಲಭ್ಯಗಳಿಲ್ಲದ ಜನವಸತಿ ಪ್ರದೇಶಗಳಲ್ಲಿ ಪಾಸಿಟಿವ್ ಆದವರನ್ನು ಸರ್ಕಾರಿ ವ್ಯವಸ್ಥೆಯ ಕ್ವಾರಂಟೈನ್ ಕೇಂದ್ರಗಳಲ್ಲಿ ಇಡುವ ಕೆಲಸ ಆಗಬೇಕು. ಇದಕ್ಕಾಗಿ ಮುಂಬೈನ ಧಾರಾವಿಯಲ್ಲಿ ಅಳವಡಿಸಿಕೊಂಡಿರುವ ರೀತಿಯ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂದರು.

    ವಲಯವಾರು ಅಗತ್ಯವಿರುವ ವಾಹನ ಮತ್ತು ಸಿಬ್ಬಂದಿ ಕೊರತೆಯನ್ನು ಬಿಬಿಎಂಪಿ ಆಯುಕ್ತರು ನಿರ್ವಹಿಸಬೇಕು. ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿ ಕೊರತೆ ನಿವಾರಿಸುವ ಕೆಲಸವನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ನೋಡಿಕೊಳ್ಳಬೇಕು ಎಂದು ಆದೇಶಿಸಿದರು.