ಬೆಂಗಳೂರು: ಅತೃಪ್ತ ಶಾಸಕರಿಗೆ ಕರುಣೆ ಬಂದು ದೋಸ್ತಿ ಸರ್ಕಾರ ಉಳಿಸಿಕೊಳ್ಳುತ್ತಾರೆ. ವಿಶ್ವಾಸಮತ ಸಂದರ್ಭದಲ್ಲಿ ನಮ್ಮ ಪರವಾಗಿ ಮತ ಹಾಕುತ್ತಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಕೆ ಗೆಸ್ಟ್ ಬಳಿ ಮಾತನಾಡಿದ ಸಚಿವರು, ನಾವು ಶಾಂತಿಪ್ರಿಯರು ಅಂತ ಬಿಜೆಪಿಯವರು ಇಂತಹ ಕೆಲಸ ಮಾಡಿದ್ದಾರೆ. ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ. ಈಗಾಗಲೇ ಕಾರ್ಯಕರ್ತರು, ಜನರು ಶಾಸಕರಿಗೆ ರಾಜೀನಾಮೆ ನೀಡದಂತೆ ಮನವಿ ಮಾಡುತ್ತಿದ್ದಾರೆ. ಶಾಸಕರು ರಾಜೀನಾಮೆ ವಾಪಸ್ ಪಡೆದು ಸರ್ಕಾರಕ್ಕೆ ಬೆಂಬಲ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.
ಸಚಿವ ಎಂಟಿಬಿ ನಾಗರಾಜ್ ಅವರು ಮುಂಬೈಗೆ ಹೋಗುವಾಗ ಬಿಜೆಪಿ ಮುಖಂಡ ಆರ್.ಅಶೋಕ್ ಉಪಸ್ಥಿತರಿದ್ದ ವಿಚಾರವಾಗಿ ವಾಗ್ದಾಳಿ ನಡೆಸಿದ ಸಚಿವರು, ರೆಬಲ್ ಶಾಸಕರ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ಸ್ನೇಹಿತರು ಎಲ್ಲರಿಗೂ ಕಿವಿ ಮೇಲೆ ಹೂ ಇಡುತ್ತಿದ್ದರು. ನಮಗೂ ಇದಕ್ಕೂ ಸಂಬಂಧವಿಲ್ಲ, ಇದು ಅವರ ಪಕ್ಷದ ಆಂತರಿಕ ವಿಚಾರ ನಾವು ಯಾವುದಕ್ಕೂ ತಲೆ ಹಾಕಲ್ಲ ಎಂದು ಹೇಳುತ್ತಿದ್ದರು. ಹೋಟೆಲ್, ಬಾಂಬೆ, ಫ್ಲೈಟ್, ದೆಹಲಿ, ವಿಶೇಷ ವಿಮಾನ ಸೇರಿದಂತೆ ಎಲ್ಲ ಸೌಕರ್ಯ ಒದಗಿಸಿಕೊಟ್ಟಿದ್ದು ಬಿಜೆಪಿಯವರೇ ಎಂದು ದೂರಿದರು.
ಮಾನ ಮರ್ಯಾದೆ ಇದ್ದರೆ, ಪ್ರಜಾಪ್ರಭುತ್ವದಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳಬೇಕು. ಈ ಆಪರೇಷನ್ ನಮ್ಮದೆ, ನಮಗೆ ಮುಖ್ಯಮಂತ್ರಿ ಚೇರ್ ಬೇಕು ಅಂತ ಬಿಜೆಪಿ ನಾಯಕರು ಒಪ್ಪಿಕೊಳ್ಳಲಿ ಎಂದು ಗುಡುಗಿದರು.
– ಸಿದ್ದರಾಮಯ್ಯ ಸಿಎಂ ಆಗೋದಾದ್ರೆ ಜೆಡಿಎಸ್ ಬೆಂಬಲ ಇಲ್ಲ
– ಖರ್ಗೆ ಸಿಎಂ ಮಾಡೋಕೂ ಎಚ್‍ಡಿಡಿ ವಿರೋಧ
ಬೆಂಗಳೂರು: ಒಪ್ಪಂದದ ಪ್ರಕಾರ ಐದು ವರ್ಷ ಜೆಡಿಎಸ್‍ಗೆ ಅಧಿಕಾರ ಕೊಟ್ಟರೆ ಮಾತ್ರ ಬೆಂಬಲ ಕೊಡುತ್ತೇವೆ. ಇಲ್ಲ ಅಂದರೆ ನಾವು ಸರ್ಕಾರಕ್ಕೆ ಕೊಟ್ಟ ಬೆಂಬಲ ವಾಪಸ್ ಪಡೆಯುತ್ತೇವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ಕಾಂಗ್ರೆಸ್ ಹೈಕಮಾಂಡ್‍ಗೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಪದ್ಮನಾಭನಗರದ ಎಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಟ್ರಬಲ್ ಶೂಟರ್, ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಅರ್ಧ ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಎಚ್.ಡಿ.ದೇವೇಗೌಡ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಶಿಷ್ಯರ ವಿರುದ್ಧ ಗುಡುಗಿದ್ದಾರೆ. ಅಷ್ಟೇ ಅಲ್ಲದೆ ಸಿಎಂ ಹುದ್ದೆ ಬದಲಾವಣೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕೆಲ ಶಾಸಕರು ಸಿದ್ದರಾಮಯ್ಯ ಅವರು ಸಿಎಂ ಆಗಲಿ ಎನ್ನುತ್ತಿದ್ದಾರೆ ಎಂದು ದೇವೇಗೌಡರ ಮುಂದೆ ಸಚಿವ ಡಿಕೆ ಶಿವಕುಮಾರ್ ಅವರು ವಿಷಯ ಪ್ರಸ್ತಾಪಿಸಿದ್ದಾರೆ. ಇದರಿಂದ ಕೆಂಡಾಮಂಡಲವಾದ ಎಚ್‍ಡಿಡಿ, ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗುವುದಾದರೆ ನಮ್ಮ ಬೆಂಬಲವಿಲ್ಲ. ಈ ಎಲ್ಲ ಬೆಳವಣಿಗೆಗೆ ಕಾರಣವೇ ಸಿದ್ದರಾಮಯ್ಯ. ಹೀಗಿದ್ದೂ ನಾವು ಅವರಿಗೆ ಸಿಎಂ ಸ್ಥಾನ ಕೊಡುವುದಕ್ಕೆ ಹೇಗೆ ಸಾಧ್ಯ? ಅವರ ಶಿಷ್ಯಂದಿರೇ ರಾಜೀನಾಮೆ ಕೊಟ್ಟಿದ್ದಾರೆ. ಮಾಜಿ ಸಿಎಂ ಶಿಷ್ಯರ ಮೂಲಕ ಹೀಗೆ ಹೇಳಿಸುತ್ತಿದ್ದಾರೆ. ನಮ್ಮವರು ಯಾರೂ ಅದಕ್ಕೆ ಒಪ್ಪುವುದಿಲ್ಲ. ನಾಲ್ಕಾರು ಶಾಸಕರು ಹೇಳಿದಾಕ್ಷಣ ಸಿಎಂ ಮಾಡುವುಕ್ಕೆ ಆಗುವುದಿಲ್ಲ ಎಂದು ಕಡ್ಡಿ ಮುರಿದಂತೆ ತಿಳಿಸಿದ್ದಾರೆ.
ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕೂ ಎಚ್.ಡಿ.ದೇವೇಗೌಡ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಮಾಡುವುಕ್ಕೂ ನಾವು ಒಪ್ಪುವುದಿಲ್ಲ. ದಲಿತ ಮುಖ್ಯಮಂತ್ರಿಯನ್ನು ಕಾಂಗ್ರೆಸ್ ಮಾಡಿಲ್ಲ. ಈಗ ನಾವ್ಯಾಕೆ ಮಾಡಬೇಕು. ಸರ್ಕಾರ ರಚಿಸಲು ಆಸಕ್ತಿ ತೋರಿದ್ದೇ ಕಾಂಗ್ರೆಸ್. ಈಗ ಸಿಎಂ ಬದಲಾವಣೆ ವಿಚಾರವನ್ನು ಪ್ರಸ್ತಾಪ ಮಾಡುವುದು ಎಷ್ಟು ಸರಿ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಪ್ರಶ್ನಿಸಿದ್ದಾರೆ.
ನೀವೇ ಸರ್ಕಾರ ಮಾಡಿ ಅಂದು ನಿಮ್ಮವರೇ ರಾಜೀನಾಮೆ ಕೊಡುತ್ತಿದ್ದಾರೆ. ನಿಮ್ಮ ಶಾಸಕರ ಜೊತೆ ನಮ್ಮ ಶಾಸಕರನ್ನು ಹಾಳು ಮಾಡಿದ್ದೀರಿ. ನಾವು ಬೇಡ ಅಂದರೂ ಸಿಎಂ ಆಗಿ ಅಂತ ಮಾಡಿ ಕೈ ಬಿಟ್ಟಿರಿ. ಸಿದ್ದರಾಮಯ್ಯ ಅವರ ಶಿಷ್ಯರೇ ಸರ್ಕಾರ ಬೀಳಿಸಲು ಪ್ಲ್ಯಾನ್ ಮಾಡಿದರೆ ಹೇಗೆ? ಸಿಎಂ ಬೆಂಗಳೂರಿಗೆ ಆಗಮಿಸಿದ ಮೇಲೆ ತೀರ್ಮಾನ ಕೈಗೊಳ್ಳುತ್ತೇವೆ. ಇನ್ನು ನಿಮ್ಮ ಸಹವಾಸ ಸಾಕು. ಕಾಂಗ್ರೆಸ್ ಹೈಕಮಾಂಡ್ ಜೊತೆ ನಾನೇ ಮಾತನಾಡುತ್ತೇನೆ. ಕಾಂಗ್ರೆಸ್ ಶಾಸಕರೇ ಮೈತ್ರಿ ಸರ್ಕಾರಕ್ಕೆ ಶತ್ರುಗಳಾಗಿದ್ದಾರೆ. ಹೀಗಾಗಿ ಸರ್ಕಾರ ಉಳಿಯಬೇಕು ಅಂತ ನಿಮಗೆ ಅನಿಸುತ್ತಿದೆಯಾ? ಕಾಂಗ್ರೆಸ್ ನಾಯಕರ ವರ್ತನೆಯಿಂದ ಬೇಸತ್ತಿದ್ದೇನೆ. ನಾವು ಎಷ್ಟು ಸಮಾಧಾನವಾಗಿ ಇದ್ದರೂ ನೀವೇ ತೊಂದರೆ ಕೊಡುತ್ತೀದ್ದೀರಾ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಸರ್ಕಾರ ಇರಬೇಕಾ? ಬೇಡವೇ ಎನ್ನುವುದನ್ನು ನೀವೇ ನಿರ್ಧಾರ ಮಾಡಿ. ನಿಮ್ಮ ನಾಯಕರ ಜೊತೆ ಮಾತನಾಡಿ ಫೈನಲ್ ಮಾಡಿ ಹೇಳಿ. ಸರ್ಕಾರದಿಂದ ಹಿಂದೆ ಸರಿಯಲು ನಮಗೆ ಯಾವುದೇ ಹಿಂಜರಿಕೆ ಇಲ್ಲ. ನಿಮ್ಮ ಶಾಸಕರನ್ನು ಮನವೊಲಿಸುವುದು, ಬಿಡುವುದು ನಿಮಗೆ ಬಿಟ್ಟ ವಿಚಾರ. ಇಂದು ಸಂಜೆ ಒಳಗೆ ಒಂದು ಫೈನಲ್ ನಿರ್ಧಾರ ಹೇಳಿ. ನಿಮ್ಮ ನಾಯಕರು ಶಾಸಕರ ಮನವೊಲಿಸಲು ವಿಫಲವಾದರೆ ಸಿಎಂ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆ. ಭಾನುವಾರ ಸಂಜೆ ನಮ್ಮ ಶಾಸಕರ ಸಭೆ ಇದೆ. ಸಭೆಯಲ್ಲಿ ನಮ್ಮ ನಿರ್ಧಾರ ಫೈನಲ್ ಮಾಡುತ್ತೇವೆ. ಇಷ್ಟೆಲ್ಲ ಗೊಂದಲ ಇಟ್ಟುಕೊಂಡು ಸರ್ಕಾರ ಮುನ್ನಡೆಸುವುದು ನಮಗೂ ಇಷ್ಟ ಇಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಜೊತೆ ಮಾತನಾಡಿ ನಿಮ್ಮ ನಿರ್ಧಾರ ತಿಳಿಸಿ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಸಂದೇಶ ರವಾನಿಸಿದ್ದಾರೆ.
ಎಚ್.ಡಿ.ದೇವೇಗೌಡ ಅವರ ಮಾತನ್ನು ಆಲಿಸಿದ ಸಚಿವರು, ಕೆ.ಸಿ.ವೇಣುಗೋಪಾಲ್ ಅವರ ಜೊತೆ ಸಭೆ ನಡೆಸಿ ನಿರ್ಧಾರ ತಿಳಿಸುವುದಾಗಿ ಹೊರಗಡೆ ಬಂದಿದ್ದಾರೆ. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಕೆಶಿ, ಸುಮಾರು ದಿನಗಳಿಂದ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿರಲಿಲ್ಲ. ಇಂದು ಭೇಟಿ ಮಾಡಲು ಬಂದಿದ್ದೇನೆ. ಇದು ಸೌಹಾರ್ದ ಭೇಟಿಯಷ್ಟೇ. ಬೇರೆ ಏನು ಕಾರಣವಿಲ್ಲ. ನಮ್ಮ ಪಕ್ಷದ ನಾಯಕರು ಸಂಜೆ ಸಭೆ ಮಾಡುತ್ತೇವೆ. ಈ ಮೂಲಕ ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಬೆಂಗಳೂರು: ರಾಜೀನಾಮೆ ಅಂಗೀಕಾರವೇ ಆಗಿಲ್ಲ. ಹೀಗಾಗಿ ಸರ್ಕಾರಕ್ಕೆ ಏನು ಆಗುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಮಾಜಿ ಸಿಎಂ, ನಾನು ಈಗ ಟಿವಿಯಲ್ಲಿ ಸುದ್ದಿ ನೋಡಿದೆ. ನಮ್ಮ ಶಾಸಕರಿಗೆ ಫೋನ್ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಸ್ಪೀಕರ್ ರಮೇಶ್ ಕುಮಾರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಒಟ್ಟು 11 ಮಂದಿ ಶಾಸಕರ ರಾಜೀನಾಮೆ ಪತ್ರ ಬಂದಿವೆ. ಯಾವ ಶಾಸಕರೂ ನನಗೆ ಮೊದಲೇ ಮಾಹಿತಿ ನೀಡಿ ಕಚೇರಿಗೆ ಬಂದಿಲ್ಲ. ಒಂದು ವೇಳೆ ತಿಳಿಸಿದ್ದರೆ ಕಚೇರಿಯಲ್ಲಿ ಇರುತ್ತಿದ್ದೆ ಅಂತ ಹೇಳಿದ್ದಾರೆ. ಹೀಗಾಗಿ ಮಂಗಳವಾರ ರಾಜೀನಾಮೆ ಅಂಗೀಕಾರದ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ರಾಜೀನಾಮೆ ಅಂಗೀಕಾರವೇ ಆಗದ ಕಾರಣ ಸರ್ಕಾರಕ್ಕೆ ಏನು ಆಗುವುದಿಲ್ಲ ಎಂದು ತಿಳಿಸಿದರು.
ಮುಂದಿನ ನಡೆ ಏನು ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಮಾಜಿ ಸಿಎಂ, ಸಚಿವ ಡಿ.ಕೆ.ಶಿವಕುಮಾರ್ ಅವರು ತಮ್ಮ ಕಾರಿನಲ್ಲಿ ಶಾಸಕರಾದ ಮುನಿರತ್ನ, ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಹಾಗೂ ರಾಮಲಿಂಗಾ ರೆಡ್ಡಿ ಅವರನ್ನು ನಿವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಅವರ ಜೊತೆಗೆ ಮಾತುಕತೆ ನಡೆಸಿ, ಮನವೊಲಿಸುತ್ತಿದ್ದಾರೆ. ಉಳಿದವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಮೈತ್ರಿ ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ರಾಜೀನಾಮೆ ಪರ್ವ ಆರಂಭವಾಗುತ್ತಿದ್ದಂತೆ ಮಾಜಿ ಸಿಎಂ ಕಾಂಗ್ರೆಸ್ ಸಭೆ ಕರೆದಿದ್ದಾರೆ. ಇತ್ತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಬೆಂಗಳೂರು: ರಾಜರಾಜೇಶ್ವರಿ ಶಾಸಕ ಮುನಿರತ್ನ ಅವರ ರಾಜೀನಾಮೆ ಪತ್ರವನ್ನು ಸಚಿವ ಡಿ.ಕೆ.ಶಿವಕುಮಾರ್ ಹರಿದು ಹಾಕಿದ್ದಾರಾ ಎಂಬ ಪ್ರಶ್ನೆ ಭಾರೀ ಚರ್ಚೆಯಾಗುತ್ತಿದೆ.
ಸ್ಪೀಕರ್ ರಮೇಶ್ ಕುಮಾರ್ ಅವರ ಕಚೇರಿಗೆ ಒಟ್ಟು 12 ಜನ ಅತೃಪ್ತ ಶಾಸಕರು ರಾಜೀನಾಮೆ ನೀಡಲು ತೆರಳಿದ್ದರು. ರಾಜೀನಾಮೆ ನೀಡುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಪೀಕರ್ ಕಚೇರಿಯನ್ನು ಡಿಕೆ ಶಿವಕುಮಾರ್ ಪ್ರವೇಶಿಸಿದ್ದಾರೆ. ಈ ವೇಳೆ ಮುನಿರತ್ನ ಅವರ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ದಾರೆ ಎನ್ನಲಾಗಿದೆ.
ಶಾಸಕರು ರಾಜೀನಾಮೆ ನೀಡಿದ ಬಳಿಕ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಕಾರಿನಲ್ಲಿ ಶಾಸಕರಾದ ಮುನಿರತ್ನ, ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಹಾಗೂ ರಾಮಲಿಂಗಾ ರೆಡ್ಡಿ ಅವರನ್ನು ನಿವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಈಗಾಗಲೇ ಮುನಿರತ್ನ ಅವರ ರಾಜೀನಾಮೆಯನ್ನು ತಪ್ಪಿಸಿರುವ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರು, ಉಳಿದ ಮೂವರು ಶಾಸಕರ ಮನವೊಲಿಸಿ ರಾಜೀನಾಮೆಯನ್ನು ಹಿಂಪಡೆಯುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ರಾಜೀನಾಮೆ ನೀಡಿದವರು ಯಾರ‍್ಯಾರು?:
ಗೋಕಾಕ್‍ನ ಶಾಸಕ ರಮೇಶ್ ಜಾರಕಿಹೊಳಿ, ಹೀರೆಕೆರೂರಿನ ಬಿ.ಸಿ.ಪಾಟೀಲ್, ಮಸ್ಕಿಯ ಪ್ರತಾಪ್‍ಗೌಡ ಪಾಟೀಲ್, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಅಥಣಿಯ ಮಹೇಶ್ ಕುಮಕಟಳ್ಳಿ, ಕೆ.ಆರ್.ಪೇಟೆಯ ನಾರಾಯಣಗೌಡ, ಜೆಡಿಎಸ್‍ನ ಗೋಪಾಲಯ್ಯ, ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ, ಯಶವಂತಪುರದ ಎಸ್.ಟಿ.ಸೋಮಶೇಖರ್ ಹಾಗೂ ಭೈರತಿ ಬಸವರಾಜು ರಾಜೀನಾಮೆ ನೀಡಿದ್ದಾರೆ. ಜೆಡಿಎಸ್ ಮಾಜಿ ಅಧ್ಯಕ್ಷ ಹುಣಸೂರು ಶಾಸಕ ವಿಶ್ವನಾಥ್, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ರಾಜೀನಾಮೆ ನೀಡಿದ್ದಾರೆ.
ಹುಬ್ಬಳ್ಳಿ: ಸಚಿವ ಡಿ.ಕೆ.ಶಿವಕುಮಾರ್ ಅವರು ನನ್ನ ಜೊತೆ ತಿರುಗಾಡುವ ಮುಖಂಡರೊಬ್ಬರಿಗೆ ಕಾಂಗ್ರೆಸ್ ಸೇರುವಂತೆ 5 ಲಕ್ಷ ರೂ. ಆಮಿಷ ಒಡ್ಡಿದ್ದಾರೆ ಎಂದು ಸಂಸದೆ ಶೋಭಾ ಕರಂದಾಜ್ಲೆ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಸಚಿವರು ನನಗೆ ಆಮಿಷ ಒಡ್ಡಿದ್ದಾರೆ ಎಂದು ನಮ್ಮ ಪಕ್ಷದ ಮುಖಂಡರು ನನ್ನ ಬಳಿ ಹೇಳಿಕೊಂಡಿದ್ದಾರೆ. ಆದರೆ ನಾವು ಖರೀದಿಗೆ ಇಲ್ಲ ಅಂತ ಸಚಿವರಿಗೆ ಕುಂದಗೋಳ ಕ್ಷೇತ್ರದ ಜನರು ತಿರುಗೇಟು ಕೊಟ್ಟಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಸಚಿವರು ಶಿವಮೊಗ್ಗಕ್ಕೆ ಹೋಗಿದ್ದರು. ಭದ್ರಾವತಿಯಲ್ಲಿ ಹಣ ಹಂಚಲು ಮುಂದಾಗಿದ್ದರು. ಆದರೆ ಕಾರಿನ ಟೈಯರ್ ನಲ್ಲಿ 2 ಕೋಟಿ ರೂ. ಸಿಕ್ಕಿಬಿತ್ತು. ಈ ಹಿಂದೆ ನಂಜನಗೂಡು ಉಪ ಚುನಾವಣೆ ಪ್ರಚಾರಕ್ಕೆ ಹೋಗಿದ್ದರು. ಆಗಲೂ ಲಾರಿಯಲ್ಲಿ ಹಣ ಸಾಗಿಸುವ ಪ್ರಯತ್ನ ಮಾಡಿ, ಸಿಕ್ಕಿಬಿದ್ದಿದ್ದರು. ಈ ಮೂಲಕ ಅಕ್ರಮವಾಗಿ ಚುನಾವಣೆ ಗೆಲ್ಲಲು ಸಚಿವರು ಮುಂದಾಗುತ್ತಿದ್ದಾರೆ ಎಂದು ದೂರಿದರು.
ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುತ್ತಾರೆ. ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತಾರೆ. ಅವರಿಗೆ ನಾವು ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಗೆಲುವಿನ ನೇತೃತ್ವದ ವಹಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರು ಈಗ ವಿರೋಧಪಕ್ಷದ ನಾಯಕ ಸ್ಥಾನದಲ್ಲಿ ಕುಳಿತಿದ್ದಾರೆ. ಕೇವಲ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾರೆ ಎಂದು ಗುಡುಗಿದರು.
ಬೆಳಗಾವಿ: ಜಲಸಂಪನ್ಮೂಲ ಹಾಗೂ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಆಯೋಜಿಸಿರುವ ಔತಣ ಕೂಟಕ್ಕೆ ನಾನು ಹೋಗಲ್ಲ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಮೂರು ಸಲ ಪುನರುಚ್ಚರಿಸಿದ್ದಾರೆ.
ಬೆಳಗಾವಿ ಅಧಿವೇಶಕ್ಕೆ ಬರುವ ಎಲ್ಲ ಶಾಸಕರಿಗೂ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸಹೋದರರು ಪ್ರತಿವರ್ಷ ಔತಣ ಕೂಟ ಆಯೋಜಿಸುತ್ತಿದ್ದರು. ಆದರೆ ಈ ಬಾರಿ ಜಾರಕಿಹೊಳಿ ಸಹೋದರರು ನಿರಾಸಕ್ತಿ ತೋರಿದ್ದರಿಂದ ಸಚಿವ ಡಿ.ಕೆ.ಶಿವಕುಮಾರ್ ಆಯೋಜಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಮೇಶ್ ಚಾರಕಿಹೊಳಿ ಅವರು, ನಾನು ಯಾವುದೇ ಕಾರಣಕ್ಕೂ ಔತಣ ಕೂಟದಲ್ಲಿ ಭಾಗವಹಿಸುವುದಿಲ್ಲ ಅಂತ ಹೇಳಿ ಮತ್ತೊಮ್ಮೆ ಮುನಿಸು ಹೊರಹಾಕಿದ್ದಾರೆ. ನನಗೆ ಗಂಟಲು ನೋವಿತ್ತು ಹೀಗಾಗಿ ಇಂದು ನಡೆದ ಸಿಎಲ್‍ಪಿ ಸಭೆಗೆ ಬರಲಿಲ್ಲ ಎಂದರು.
ಈ ಮೂಲಕ ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ವೈಮನಸ್ಸು ಮುಂದುವರಿದಿದೆ. ಲಕ್ಷ್ಮಿ ಹೆಬ್ಬಾಳ್ಕರ್ ವಿಚಾರದಿಂದ ಆರಂಭವಾದ ಒಡಕು ಈಗಲೂ ಎದ್ದು ಕಾಣುತ್ತಿದೆ ಎನ್ನಲಾಗಿದೆ.