Tag: Minister CS Shivalli

  • ಕುಂದಗೋಳಕ್ಕೆ ಮೇ 19 ರಂದು ಉಪಚುನಾವಣೆ

    ಕುಂದಗೋಳಕ್ಕೆ ಮೇ 19 ರಂದು ಉಪಚುನಾವಣೆ

    ಬೆಂಗಳೂರು: ರಾಜ್ಯ ಪೌರಾಡಳಿತ ಸಚಿವ ಸಿಎಸ್ ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಕುಂದಗೋಳ ಕ್ಷೇತ್ರಕ್ಕೆ ಮೇ 19 ರಂದು ಉಪಚುನಾವಣೆ ನಡೆಯಲಿದೆ.

    ಮೇ 19 ರಂದು ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನದ ದಿನವಾಗಿದ್ದು, ಅಂದೇ ಕುಂದಗೋಳದಲ್ಲೂ ಚುನಾವಣೆ ನಡೆಸಲು ಆಯೋಗ ತೀರ್ಮಾನಿಸಿದೆ. ನಾಮಪತ್ರ ಸಲ್ಲಿಸಲು ಏ.29 ಕೊನೆ ದಿನವಾಗಿದ್ದು, ಏ.30ಕ್ಕೆ ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಮೇ 2 ರಂದು ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನಾಂಕವಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶದ ದಿನಾಂಕ ಮೇ 23 ರಂದು ಕ್ಷೇತ್ರದ ಉಪಚುನಾವಣೆಯ ಫಲಿತಾಂಶವೂ ಪ್ರಕಟವಾಗಲಿದೆ.

    ಮಾರ್ಚ್ 22 ರಂದು ಹೃದಯಾಘಾತದಿಂದ ಸಚಿವರು ಮೃತ ಪಟ್ಟಿದ್ದರು. ಧಾರವಾಡ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದ ಶಿವಳ್ಳಿ ಅವರು ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ವಿಶ್ರಾಂತಿ ಇಲ್ಲದೇ ಸತತವಾಗಿ ಕಾರ್ಯನಿರ್ವಹಿಸಿದ ಕಾರಣದಿಂದ ಹೃದಯಾಘಾತ ಸಂಭವಿಸಿತ್ತು.

    ಮಹದಾಯಿ ನೀರಾವರಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಳ್ಳಿ ಅವರು 1994ರಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿದ್ದರು. ಕುಂದಗೋಳ ಕ್ಷೇತ್ರದ ಶಾಸಕರಾಗಿ ಮೂರು ಬಾರಿ ಆಯ್ಕೆ ಆಗಿ, ಈ ಬಾರಿ ಸಚಿವರಾಗಿದ್ರು. ಸಿದ್ದರಾಮಯ್ಯ ಆಪ್ತ ಅವರ ಮಾರ್ಗದರ್ಶನದಲ್ಲಿ ರಾಜಕಾರಣ ನಡೆಸಿದ್ದ ಶಿವಳ್ಳಿ ಅವರು 2004 ಗೆಲುವು ಪಡೆದರೆ, 2008 ರಲ್ಲಿ ಸೋಲುಂಡಿದ್ದರು. ಆದರೆ 2013, 2018 ರಲ್ಲಿ ಗೆಲುವು ಪಡೆದಿದ್ದು 2018ರ ಚುನಾವಣೆಯಲ್ಲಿ 64,871 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು. ಸರಳ ಸಜ್ಜನ ಜೀವನಕ್ಕೆ ಹೆಸರಾಗಿದ್ದ ಶಿವಳ್ಳಿ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

  • ತಂದೆ-ತಾಯಿ ಪಕ್ಕದಲ್ಲೇ ಚಿರನಿದ್ರೆಗೆ ಜಾರಿದ ಸಿ.ಎಸ್.ಶಿವಳ್ಳಿ

    ತಂದೆ-ತಾಯಿ ಪಕ್ಕದಲ್ಲೇ ಚಿರನಿದ್ರೆಗೆ ಜಾರಿದ ಸಿ.ಎಸ್.ಶಿವಳ್ಳಿ

    ಹುಬ್ಬಳ್ಳಿ: ತೀವ್ರ ಹೃದಯಾಘಾತದಿಂದ ನಿಧನರಾಗಿದ್ದ ಪೌರಾಡಳಿತ ಸಚಿವ ಸಿಎಸ್ ಶಿವಳ್ಳಿ ಅವರ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಧಾರವಾಡದ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ನಡೆಯಿತು.

    ಗ್ರಾಮದ ಬಳಿ ಇರುವ ಸಚಿವರ ಜಮೀನಿನಲ್ಲಿ ತಂದೆ ತಾಯಿ ಸಮಾಧಿಯ ಪಕ್ಕದಲ್ಲೇ ಶಿವಳ್ಳಿ ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು. ಇದಕ್ಕೂ ಮುನ್ನ ಸಚಿವರ ಪಾರ್ಥಿವ ಶರೀರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಸಚಿವರ ದಿಢೀರ್ ನಿಧನದಿಂದಾಗಿ ಶಿವಳ್ಳಿ ಹುಟ್ಟೂರಲ್ಲಿ ನೀರವ ಮೌನ ಆವರಿಸಿತ್ತು.

    ಜನಸಾಗರ: ಶಿವಳ್ಳಿ ಅವರ ನಿಧನ ಸುದ್ದಿ ಕೇಳಿ ಅಘಾತಗೊಂಡಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆಯಲು ನೂಕುನುಗ್ಗಲು ಸಂಭವಿಸಿತ್ತು. ಈ ವೇಳೆ ಜನರು ಸಚಿವರ ಸರಳ ವ್ಯಕ್ತಿತ್ವವನ್ನು ನೆನೆದು ಕೊಂಡಾಡಿದರು.

    ಇತ್ತ ಶಿವಳ್ಳಿ ಅವರ ಕುಟುಂಬ ಆಕ್ರಂದನ ಸ್ಥಳದಲ್ಲಿದ್ದವರ ಕಣ್ಣಲ್ಲು ನೀರು ತರಿಸಿತ್ತು. ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಸಂಪುಟದ ಸಚಿವರು, ಶಾಸಕರು, ಬಿಜೆಪಿ ಪಕ್ಷ ನಾಯಕರು ಕೂಡ ಶಿವಳ್ಳಿ ಅವರ ಅಂತಿಮ ದರ್ಶನ ಪಡೆದರು. ಸಂಪುಟದ ಗೆಳೆಯನನ್ನು ಕಳೆದುಕೊಂಡ ಸಚಿವ ಡಿಕೆ ಶಿವಕುಮಾರ್ ಮಾತನಾಡಿ, ನನಗೆ ಏನು ಹೇಳುವ ಶಕ್ತಿ ಇಲ್ಲ ಎಂದು ಅಗಲಿದ ಮಿತ್ರನನನ್ನು ಕಂಡು ಗಳಗಳನೆ ಕಣ್ಣೀರಿಟ್ಟರು.

    ಇತ್ತ ಶಿವಳ್ಳಿ ಅವರ ಪುತ್ರಿ, ಹುಬ್ಬಳಿಯ ಕೆಎಲ್‍ಇ ಇಂಗ್ಲಿಷ್ ಶಾಲೆಯಲ್ಲಿ ಓದುತ್ತಿದ್ದ ರೂಪ ಶಿವಳ್ಳಿ ಇಂದು ನಗರದ ಚೇತನಾ ಕಾಲೊನಿಯಲ್ಲಿರುವ ಸೇಂಟ್ ಅಂಟೋನಿ ಶಾಲೆಯಲ್ಲಿ ತಂದೆಯ ಸಾವಿನ ದುಃಖದ ನಡುವೆಯೂ ಕಣ್ಣೀರು ಹಾಕುತ್ತಲೇ ಪರೀಕ್ಷೆ ಬರೆದರು.

  • ಸಚಿವ ಸಿಎಸ್ ಶಿವಳ್ಳಿ ನಿಧನಕ್ಕೆ ಸಿಎಂ, ಗಣ್ಯರ ಸಂತಾಪ

    ಸಚಿವ ಸಿಎಸ್ ಶಿವಳ್ಳಿ ನಿಧನಕ್ಕೆ ಸಿಎಂ, ಗಣ್ಯರ ಸಂತಾಪ

    – ನಾಳೆ ಸಚಿವರ ಹುಟ್ಟೂರಲ್ಲಿ ಅಂತ್ಯಸಂಸ್ಕಾರ

    ಬೆಂಗಳೂರು: ಪೌರಾಡಳಿತ ಸಚಿವ ಸಿಎಸ್ ಶಿವಳ್ಳಿ ಅವರ ನಿಧನಕ್ಕೆ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಜಗದ್ದೀಶ್ ಶೆಟ್ಟರ್ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.

    ಹಾಸನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಕುಮಾರಸ್ವಾಮಿ ಅವರು ಮಾತನಾಡಿ, ನಿನ್ನೆ ತಾನೇ ಕಟ್ಟಡ ಕುಸಿತದ ಸ್ಥಳ ಪರಿಶೀಲನೆ ವೇಳೆ ನನ್ನ ಜೊತೆಗೆ ಇದ್ದರು. ಈಗ ವೇದಿಕೆಯಲ್ಲಿ ಇದ್ದಾಗ ಸುದ್ದಿ ತಿಳಿಯಿತು. ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ತಿಳಿಸಿದರು. ಬಳಿಕ ಒಂದು ನಿಮಿಷ ಮೌನಾಚರಣೆ ಮಾಡಿ ಸಂತಾಪ ಸೂಚಿಸಿದರು.

    ಇತ್ತ ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆಯ ಆಸ್ಪತ್ರೆಯಲ್ಲಿ ಸಚಿವರ ನಿಧನ ಸುದ್ದಿ ತಿಳಿಯುತ್ತಿದಂತೆ ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸಿದ್ದರು. ಅಲ್ಲದೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಸ್ಪತ್ರೆ ಮುಂದೆ ಜಮಾಸಿಯಿಸಿದ್ದರು.

    ಸದ್ಯ ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಹುಬ್ಬಳ್ಳಿ ಸ್ವಗೃಹ ಮದಿನಾ ಕಾಲೋನಿಯತ್ತ ಕೊಂಡ್ಯೊಲಾಗಿದೆ. ಹುಬ್ಬಳ್ಳಿಯ ಮನೆಯಲ್ಲಿ ಸಂಜೆ 6:30ರ ವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗಿನವರೆಗೂ ಕುಂದಗೋಳದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಬೆಳಿಗ್ಗೆ 6 ಘಂಟೆಗಳ ನಂತರ ಸ್ವಗ್ರಾಮ ಯರಗುಪ್ಪಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಬಳಿಕ ಕುಟುಂಬ ಒಪ್ಪಿಗೆಯಂತೆ ಅಂತಿಮ ಕಾರ್ಯ ನಡೆಸಲಾಗುವುದು ಎಂಬ ಮಾಹಿತಿ ಲಭಿಸಿದೆ.

    ಸಚಿವ ನಿಧನ ಸುದ್ದಿ ತಿಳಿದು ಮಾಜಿ ಸಚಿವ ವಿನಯ ಕುಲಕರ್ಣಿ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಈ ವೇಳೆ ನಗರದ ಹೊಸ ಬಸ್ ನಿಲ್ದಾಣದ ಎದುರಿನ ಲೈಫ್ ಲೈನ್ ಆಸ್ಪತ್ರೆಯ ಬಳಿ ಅಭಿಮಾನಿಗಳ ಗೋಳಾಟ ಮುಗಿಲು ಮುಟ್ಟಿತ್ತು. ಅಲ್ಲದೇ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಭೇಟಿ ನೀಡಿ, ಸಚಿವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

    ಮಹದಾಯಿ ನೀರಾವರಿ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಶಿವಳ್ಳಿ ಅವರು 1994ರಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿದ್ದರು. ಕುಂದಗೋಳ ಕ್ಷೇತ್ರದ ಶಾಸಕರಾಗಿ ಮೂರು ಬಾರಿ ಆಯ್ಕೆ ಆಗಿ, ಈ ಬಾರಿ ಸಚಿವರಾಗಿದ್ರು. ಸಿದ್ದರಾಮಯ್ಯ ಆಪ್ತ ಅವರ ಮಾರ್ಗದರ್ಶನದಲ್ಲಿ ರಾಜಕಾರಣ ನಡೆಸಿದ್ದ ಶಿವಳ್ಳಿ ಅವರು 2004 ಗೆಲುವು ಪಡೆದರೆ, 2008 ರಲ್ಲಿ ಸೋಲುಂಡಿದ್ದರು. ಆದರೆ 2013, 2018 ರಲ್ಲಿ ಗೆಲುವು ಪಡೆದಿದ್ದು. 2018ರ ಚುನಾವಣೆಯಲ್ಲಿ 64,871 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು. ಸರಳ ಸಜ್ಜನ ಜೀವನಕ್ಕೆ ಹೆಸರಾಗಿದ್ದ ಶಿವಳ್ಳಿ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

  • ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಇನ್ನಿಲ್ಲ

    ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಇನ್ನಿಲ್ಲ

    ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿಎಸ್ ಶಿವಳ್ಳಿ ಅವರು ತೀವ್ರ ಹೃದಯಾಘಾತದಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಧ್ಯಾಹ್ನ ಮೃತಪಟ್ಟಿದ್ದಾರೆ.

    ಧಾರವಾಡ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು ಕಾರ್ಯಾಚರಣೆ ನಡೆದ ಸ್ಥಳದಲ್ಲೇ ಹಾಜರಿದ್ದು, ಎಲ್ಲಾ ಕಾರ್ಯದ ಉಸ್ತುವಾರಿ ವಹಿಸಿದ್ದರು. ಈ ವೇಳೆಯೇ ಅವರು ಬಳಲಿದ್ದರು ಎಂಬ ಮಾಹಿತಿ ಲಭಿಸಿದೆ.

    ಕಳೆದ 2 ದಿನಗಳಿಂದ ಕಟ್ಟಡ ಕುಸಿತ ಸ್ಥಳದಲ್ಲೇ ಇದ್ದ ಅವರು ಗುರುವಾರ ಸಿಎಂ ಕುಮಾರಸ್ವಾಮಿ ಅವರು ಆಗಮಿಸಿದ್ದ ವೇಳೆಯೂ ಸಿಎಂ ಅವರೊಂದಿಗೆ ಇದ್ದು ಭಾಗವಹಿಸಿದ್ದರು. ಹೆಚ್ಚಿನ ಸಮಯದ ಸ್ಥಳದಲ್ಲೇ ಇದ್ದ ಸಚಿವರು ಬಳಲಿದ್ದ ಪರಿಣಾಮ ಕಿಮ್ಸ್ ಆಸ್ಪತ್ರೆಯ ವೈದ್ಯರು ಬಳಿ ಚಿಕಿತ್ಸೆ ಪಡೆದಿದ್ದರು. ಆ ಬಳಿಕ ಸಚಿವರು ಮತ್ತೆ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆಯಲು ಆಗಮಿಸಿದ್ದರು. ಆದರೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತ ಸಂಭವಿಸಿದೆ. ವೈದ್ಯರಿಂದ ಚ್ಚಿನ ಚಿಕಿತ್ಸೆ ಪಡೆಯುತ್ತಿದ್ದರು.

    ಕಳೆದ ತಿಂಗಳು ಅಭಿವೃದ್ಧಿ ಕಾರ್ಯಕ್ರಮಕ್ಕೆ ಉದ್ಘಾಟನೆ ನಡೆಸಿ ಅಲ್ಲಿ ಆಹಾರ ಸೇವಿಸಿದ್ದ ಸಚಿವರಿಗೆ ಅನಾರೋಗ್ಯ ಸಮಸ್ಯೆ ಉಂಟಾಗಿತ್ತು. ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು. ಆ ಬಳಿಕ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಿದ್ದರು. ಮೂರು ತಿಂಗಳಿಗೆ ಒಮ್ಮೆ ಅವರು ಆಸ್ಪತ್ರಗೆ ದಾಖಲಾಗಿ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಟ್ಟಡ ಕುಸಿತ ದುರಂತದ ಬಳಿಕ ಹೆಚ್ಚಿನ ವಿಶ್ರಾಂತಿ ಪಡೆಯದೆ ಜವಾಬ್ದಾರಿ ನಿರ್ವಹಿಸಿದ್ದರು. ಪರಿಣಾಮ ಹೃದಯಘಾತ ಸಂಭವಿಸಿತ್ತು ಎಂಬ ಮಾಹಿತಿ ಲಭಿಸಿದೆ.