Tag: ministe H.D.Revanna

  • ಮಹಾಮಳೆಯಿಂದ ಲೋಕೋಪಯೋಗಿ ಇಲಾಖೆಗೆ 430.89 ಕೋಟಿ ನಷ್ಟ- ಎಲ್ಲೆಲ್ಲಿ ಎಷ್ಟು?

    ಮಹಾಮಳೆಯಿಂದ ಲೋಕೋಪಯೋಗಿ ಇಲಾಖೆಗೆ 430.89 ಕೋಟಿ ನಷ್ಟ- ಎಲ್ಲೆಲ್ಲಿ ಎಷ್ಟು?

    ಬೆಂಗಳೂರು: ಮಹಾಮಳೆಗೆ ರಾಜ್ಯದಲ್ಲಿ ಭಾರೀ ನಷ್ಟವಾಗಿದ್ದು, ದಕ್ಷಿಣ ವಲಯ, ಉತ್ತರ ವಲಯ ಹಾಗೂ ಈಶಾನ್ಯ ವಲಯಗಳಲ್ಲಿ ಲೋಕೋಪಯೋಗಿ ಇಲಾಖೆಗೆ ಒಟ್ಟು 430.89 ಕೋಟಿ ರೂ. ನಷ್ಟವಾಗಿದೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ಎಲ್ಲೆಲ್ಲಿ ಎಷ್ಟು ನಷ್ಟ?
    ದಕ್ಷಿಣ ವಲಯ ಜಿಲ್ಲೆಗಳಾದ ದಕ್ಷಿಣಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಉಡುಪಿ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರುಗಳಲ್ಲಿ ಒಟ್ಟು 365.95 ಕೋಟಿ ರೂ. ನಷ್ಟವಾಗಿದೆ. ಉತ್ತರ ವಲಯದ ಬೆಳಗಾವಿ, ಧಾರವಾಡ, ದಾವಣಗೆರೆ, ಚಿತ್ರದುರ್ಗ ಉತ್ತರ ಕನ್ನಡ ಜಿಲ್ಲೆಗಳಲ್ಲಿ 60.83 ಕೋಟಿ ರೂ., ಈಶಾನ್ಯ ವಲಯದ ಕಲಬುರಗಿ, ಬೀದರ್, ಬಳ್ಳಾರಿ, ಕೊಪ್ಪಳ, 5.10 ಕೋಟಿ ರೂ. ಹಾನಿಯಾಗಿದೆ ಎಂದು ಸಚಿವರು ಅಂಕಿ-ಅಂಶಗಳ ಮೂಲಕ ವಿವರಿಸಿದರು.

    ರಾಜ್ಯದಲ್ಲಿ ಒಟ್ಟು 538 ಸೇತುವೆಗಳು ನಾಶವಾಗಿದ್ದು, 78.49 ಕೋಟಿ ರೂ. ಹಾನಿಹಾಗಿದೆ. ಇನ್ನು ಕಟ್ಟಡ 34 ಕಟ್ಟಗಳು ಹಾನಿಯಾಗಿದ್ದು, ಇದರಿಂದ 5.48 ಕೋಟಿ ರೂ. ನಷ್ಟವಾಗಿದೆ. ಜೊತೆಗೆ 110 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಹಾಗೂ 1550.48 ಕಿ.ಮೀ. ರಾಜ್ಯ ಹೆದ್ದಾರಿ ಹಾಳಾಗಿದೆ ಎಂದರು.

    ಮಳೆ ನಿಲ್ಲುವವರೆಗೂ ದುರಸ್ತಿ ಕಾರ್ಯ ಪ್ರಾರಂಭಿಸುವುದು ಕಷ್ಟ. ಈಗಾಗಲೇ 25 ಜೆಸಿಬಿಗಳು ನಿರಂತರವಾಗಿ ಕೆಲಸ ಮಾಡುತ್ತಿವೆ. ಆದರೆ ಗುಡ್ಡ ಕುಸಿತ ಹೆಚ್ಚಾಗುತ್ತಿದೆ. ಸಕಲೇಶಪುರದ ಬಳಿ ಅರ್ಧಗುಡ್ಡ ರಸ್ತೆಗೆ ಬಿದ್ದಿದೆ. ರಸ್ತೆ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಲು 60 ಕೋಟಿ ರೂ. ಬೇಕಾಗುತ್ತದೆ. ಇದರಿಂದ ಮಣ್ಣು ತೆರವು ಕಾರ್ಯ ಬಿಟ್ಟು ಪರ್ಯಾಯ ಮಾರ್ಗ ನಿರ್ಮಿಸುವ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

    ಶಿರಾಡಿ ಘಾಟ್ ರಸ್ತೆ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆಗೆ ಮಾತನಾಡಿರುವೆ. ಒಟ್ಟು 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಾಲುವೆ ಹಾಗೂ ರಸ್ತೆ ನಿರ್ಮಾಣ ಮಾಡುವ ಉದ್ದೇಶವಿದೆ. ಈ ಕುರಿತು ಕೇಂದ್ರ ಸರ್ಕಾರದ ಜೊತೆಗೆ ಮಾತನಾಡುವಂತೆ ಹಾಸನ ಹಾಗೂ ಮಂಗಳೂರು ಸಂಸದರಿಗೆ ನಾನು ಮನವಿ ಮಾಡಲಿರುವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜನತೆ ಕ್ಷಮೆ ಕೇಳಬೇಕು ಅಂದ್ರೆ ಕೇಳ್ತೀನಿ- ಸಚಿವ ರೇವಣ್ಣ

    ಜನತೆ ಕ್ಷಮೆ ಕೇಳಬೇಕು ಅಂದ್ರೆ ಕೇಳ್ತೀನಿ- ಸಚಿವ ರೇವಣ್ಣ

    ಬೆಂಗಳೂರು: ಹಸಿವಿನಿಂದ ಮಕ್ಕಳು ಹಾಗೂ ಮಹಿಳೆಯರು ಬಿಸ್ಕೆಟ್ ಕೇಳುತ್ತಿದ್ದರು. ಹೀಗಾಗಿ ದೂರದಲ್ಲಿ ಕುಳಿತವರಿಗೆ ಬಿಸ್ಕೆಟ್ ಎಸೆದಿರುವೆ. ಈ ಕುರಿತಾಗಿ ಜನತೆ ಕ್ಷಮೆ ಕೇಳಬೇಕು ಎಂದರೆ ಕೇಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

    ರಾಮನಾಥಪುರದಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಬಿಸ್ಕೆಟ್ ಎಸೆದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ನಾನು ದೇವರನ್ನು ನಂಬುವ ವ್ಯಕ್ತಿ. ಘಟನೆಯಾದ ಮಾರನೇ ದಿನ ಸುದ್ದಿ ಮಾಡಲಾಗಿದೆ. ನನ್ನಿಂದ ತಪ್ಪಾಗಿದೆ ಬಿಡಿ ಎಂದರು.

    25 ವರ್ಷಗಳಿಂದ ಆಯ್ಕೆಯಾಗಿರುವ ನಾಯಕರು ಹಾಗೂ ಕೇಂದ್ರ ಸಚಿವರು ಸಂತ್ರಸ್ತರ ನೆರವಿಗೆ ಬರಲಿಲ್ಲ. ಇಂತಹ ಸಂದರ್ಭದಲ್ಲಿ ನಾನು ನೆರವಿಗೆ ನಿಂತಿದ್ದೆ. ಈಗ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ರೇವಣ್ಣ ದೂರಿದರು.

    ನಾನು ಬೇಕು ಅಂತಾ ಮಾಡಲಿಲ್ಲ. ಆ ರೀತಿಯ ಮನೋಭಾವನೆಯೂ ನನ್ನಲ್ಲಿ ಇಲ್ಲ. ಹಿಂದೆ ಕುಳಿತಿದ್ದ ಮಹಿಳೆಯರು ಒಂದೇ ಸಮನೇ ಬೇಕು ಅಂತಾ ಕೂಗುತ್ತಿದ್ದರು. ಹೀಗಾಗಿ ಅಲ್ಲಿಗೆ ಹೋಗಿ ಕೊಡುವುದಕ್ಕೆ ಆಗಲಿಲ್ಲ, ನಿಂತಲ್ಲಿಯೇ ಕೊಡಬೇಕಾದ ಪರಿಸ್ಥಿತಿ ಬಂದಿತ್ತು. ಅದನ್ನು ಎಸೆದಿದ್ದಾರೆ ಅಂತಾ ಹೇಳಿದರೆ ಹೇಗೆ? ಮಾಧ್ಯಮದವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ಎಲ್ಲಾ ಮಾಧ್ಯಮದವರು ಅಂದು ಅಲ್ಲಿಯೇ ಇದ್ದರು. ಆದರೆ ಅಂದೇ ಸುದ್ದಿ ಮಾಡಲಿಲ್ಲ ಎಂದರು.

    ನಿರಾಶ್ರಿತ ಕೇಂದ್ರದಲ್ಲಿ ಇದ್ದವರು ಶ್ರೀಮಂತರಲ್ಲ, ಎಲ್ಲರೂ ಬಡವರು. ನಾನು ಪ್ರವಾಹ ಪೀಡಿತ ಭಾಗಗಳಿಗೆ ರಾತ್ರಿ, ಹಗಲು ಹೋಗಿದ್ದೇನೆ. ಏನು ಗ್ರಹಚಾರಾನೋ ಏನೋ, ಸಾಮಾಜಿಕ ಜಾಲ ತಾಣಗಳಲ್ಲಿ ನನ್ನ ವಿರುದ್ಧ ಅಭಿಯಾನವೇ ಶುರುವಾಗಿದೆ ಎಂದು ಹೇಳಿದ ಸಚಿವರು, ಕೊಡಗು ಹಾಗೂ ಮಳೆಯಿಂದ ಹಾನಿಯಾಗಿರುವ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟ ಸಚಿವರು ಬಂದ ಪರಿಸ್ಥಿತಿಯನ್ನು ನೋಡಲಿ. ನಾನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವನಲ್ಲ, ಆದರೂ ನೆರವಿಗೆ ನಿಂತೆ. ಈಗ ನನ್ನ ಮೇಲೆ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಚುನಾವಣೆ ವೇಳೆ ರಾಜಕೀಯ ಮಾಡೋಣ, ಇಂತಹ ಸಂದರ್ಭದಲ್ಲಿ ಬೇಡ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv