– ಮುಂದಿನ ತಿಂಗ್ಳು ಮದ್ವೆ ನಿಶ್ಚಯವಾಗಿದ್ದ ಯುವಕ
– ದೇವರ ದರ್ಶನಕ್ಕೆ ಹೊರಟಿದ್ದ ಕುಟುಂಬ
– ನಿದ್ದೆಯಲ್ಲಿದ್ದವರು ಏಳಲೇ ಇಲ್ಲ
ಗಾಂಧಿನಗರ: ಗುಜರಾತಿನ ವಡೋದರ ಬಳಿ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿ 11 ಜನರು ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಇಡೀ ಕುಟುಂಬವೊಂದು ನಾಶವಾಗಿದೆ. ಮೂವರು ಪುರುಷರು ಸೇರಿದಂತೆ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮೃತ ಸುರೇಶ್ ಮದುವೆ ಮುಂದಿನ ತಿಂಗಳು ನಿಶ್ಚಯವಾಗಿತ್ತು. ಸೂ ರತ್ ನಗರದ ನಿವಾಸಿಯಾಗಿದ್ದ ಕುಟುಂಬ ವಾಸಿಸುತ್ತಿದ್ದ ಸೊಸೈಟಿಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಆಸ್ಪತ್ರೆಗೆ ಬರುವ ಮೊದಲೇ ಒಂಬತ್ತು ಜನರು ಸಾವನ್ನಪ್ಪಿದ್ದರು. ಇನ್ನಿಬ್ಬರಿಗೆ ಚಿಕಿತ್ಸೆ ನೀಡುವಷ್ಟರಲ್ಲಿ ಪ್ರಾಣ ಬಿಟ್ಟಿದ್ದರು. ಐವರು ಮಹಿಳೆಯರು, ನಾಲ್ಕು ಜನ ಪುರಷರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 11 ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೆಚ್ಚು ರಕ್ತಸ್ರಾವವಾದ ಹಿನ್ನೆಲೆ ಎಲ್ಲರ ಸಾವು ಆಗಿದೆ ಎಂದು ವಡೋದರ ಸಯ್ಯಾಜಿ ಆಸ್ಪತ್ರೆಯ ವೈದ್ಯ ರಂಜನ್ ಮಾಹಿತಿ ನೀಡಿದ್ದಾರೆ.

ಮಲಗಿದ್ದವರು ಏಳಲೇ ಇಲ್ಲ: ವಡೋದರ ಜಿಲ್ಲೆಯ ವಾಘೋಡಿಯಾ ಚೌಕ್ ಬಳಿಯಲ್ಲಿ ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ಅಪಘಾತ ಸಂಭವಿಸಿದೆ. ಮೃತರು ಮಿನಿ ಟ್ರಕ್ ಬಾಡಿಗೆ ಪಡೆದು ಸೂರತ್ ನಿಂದ ಪಾಗಾಗಢದ ಮೂಲಕ ಡಾಕೋರ್ ದೇವಸ್ಥಾನಕ್ಕೆ ತೆರಳುತ್ತಿದ್ದರು. ಅಪಘಾತದ ವೇಳೆ ಪ್ರಯಾಣಿಕರೆಲ್ಲರೂ ನಿದ್ರೆಯಲ್ಲಿದ್ದರು. ಘಟನೆಯ ಬಳಿಕ ಪ್ರಯಾಣಿಕರು ಚೀರಾಟ ಕೇಳಿದ ಸ್ಥಳೀಯರು ಸಹಾಯಕ್ಕೆ ಆಗಮಿಸಿ ಅಂಬುಲೆನ್ಸ್ ಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಜನರು ವಾಹನದಲ್ಲಿ ಸಿಲುಕಿದ್ದವರು ರಕ್ಷಣಾ ಕಾರ್ಯಕ್ಕೆ ಮುಂದಾಗಿ ಪ್ರಾಣ ಉಳಿಸಲು ಹರಸಾಹಸಪಟ್ಟಿದ್ದರು.
ವಾಘೋಡಿಯಾ ಚೌಕ್ ಬಳಿ ದೇವಸ್ಥಾನಕ್ಕೆ ಹೊರಟ್ಟಿದ್ದ ಮಿನಿ ಟ್ರಕ್ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ 11 ಜನರು ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿಯ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಗುಜರಾತ ಸಿಎಂ ವಿಜಯ್ ರೂಪಾನಿ ಸೂಚಿಸಿದ್ದಾರೆ.