ನವದೆಹಲಿ: ಇನ್ಮುಂದೆ ಹೋಟೆಲ್, ಏರ್‍ಪೋರ್ಟ್ ಹಾಗೂ ಮಾಲ್‍ಗಳಲ್ಲಿ ನೀರಿನ ಬಾಟಲಿಗಳು ಒಂದೇ ಬೆಲೆಯಲ್ಲಿ ಲಭ್ಯವಿರಲಿದೆ ಎಂದು ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
ಈ ಬಗ್ಗೆ ಸೋಮವಾರದಂದು ಟ್ವೀಟ್ ಮಾಡಿರೋ ಪಾಸ್ವಾನ್, ವಿವಿಧ ಕಡೆ ನೀರಿನ ಬಾಟಲಿಯನ್ನು ಬೇರೆ ಬೇರೆ ದರಗಳಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಇಲಾಖೆಯಡಿ ಬರುವ ಗ್ರಾಹಕರ ವೇದಿಕೆಗೆ ಅನೇಕ ದೂರುಗಳು ಬರುತ್ತಿವೆ. ಕಂಪೆನಿಗಳು ಒಂದೇ ರೀತಿಯ ಮಿನರಲ್ ವಾಟರ್ ಬಾಟಲಿಗಳನ್ನು ಏರ್‍ಪೋರ್ಟ್ ಮಾಲ್‍ಗಳಂತಹ ವಿವಿಧ ಸ್ಥಳಗಳಲ್ಲಿ ವಿವಿಧ ದರದಲ್ಲಿ ಮಾರಲು ಅವುಗಳ ಮೇಲೆ ಬೇರೆ ಬೇರೆ ಎಂಆರ್‍ಪಿಯನ್ನ ಮುದ್ರಿಸಿವೆ. ಈ ಬಗ್ಗೆ ವಿವರಣೆ ನೀಡುವಂತೆ ಕಂಪೆನಿಗಳಿಗೆ ಇಲಾಖೆ ಸೂಚಿಸಿದೆ ಎಂದು ಹೇಳಿದ್ದಾರೆ.
ಅಲ್ಲದೆ ಇನ್ಮುಂದೆ ಏರ್‍ಪೋರ್ಟ್, ಮಾಲ್‍ಗಳು ಹಾಗೂ ಹೋಟೆಲ್‍ಗಳಲ್ಲಿ ಮಿನರಲ್ ವಾಟರ್ ಬಾಟಲಿಗಳು ಒಂದೇ ದರದಲ್ಲಿ ಸಿಗಲಿವೆ ಎಂದು ಪಾಸ್ವಾನ್ ಹೇಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್‍ನಲ್ಲಿ ಪಾಸ್ವಾನ್, ಏರ್‍ಪೋರ್ಟ್, ಮಲ್ಟಿಪ್ಲೆಕ್ಸ್ ಹಾಗೂ ಹೋಟೆಲ್‍ಗಳಲ್ಲಿ ಎಂಆರ್‍ಪಿಗಿಂತ ಹೆಚ್ಚಿನ ದರದಲ್ಲಿ ತಂಪು ಪಾನೀಯ ಹಾಗು ನೀರಿನ ಬಾಟಲಿಗಳನ್ನು ಮಾರಾಟ ಮಾಡಿದರೆ ಜೈಲು ಶಿಕ್ಷೆ ಹಾಗೂ ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದರು. ಎಂಆರ್‍ಪಿ ಗಿಂತ ಹೆಚ್ಚಿನ ಹಣ ಪಡೆಯುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ಆದ್ರೂ ಏರ್‍ಪೋರ್ಟ್, ಮಲ್ಟಿಪ್ಲೆಕ್ಸ್ ಹಾಗೂ ಹೋಟೆಲ್‍ಗಳಲ್ಲಿ ನೀರಿನ ಬಾಟಲಿಗಳನ್ನ ಎಂಆರ್‍ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಹೇಳಿದ್ದರು.
ನೀರಿನ ಬಾಟಲಿಗಳನ್ನು ನಿಗದಿತ ದರಕ್ಕಿಂತ ಶೇ.10 ರಿಂದ ಶೇ.20 ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗ್ತಿದೆ. ಕೆಲವೊಮ್ಮೆ ನೀರಿನ ಬಾಟಲಿಗಳ ಮೇಲೆ ಎಂಆರ್‍ಪಿಯನ್ನು ನಮೂದಿಸಿರುವುದಿಲ್ಲ. ಅಲ್ಲದೆ ತಂಪು ಪಾನೀಯವನ್ನು ಹೆಚ್ಚಿನ ಬೆಲೆಗೆ ಮಾರ್ತಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ನಮಗೆ ಎಲ್ಲಾ ರೀತಿಯ ಅಧಿಕಾರವಿದೆ. ಗ್ರಾಹಕರು ಈ ಬಗ್ಗೆ ದೂರು ನೀಡಿದ್ರೆ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ. ಅವರಿಗೆ ದಂಡ ಹಾಕಲಾಗುತ್ತದೆ. ಅಲ್ಲದೆ ಜೈಲು ಶಿಕ್ಷೆ ಕೂಡ ಇದೆ ಎಂದು ಪಾಸ್ವಾನ್ ಹೇಳಿದ್ದರು.