Tag: Millet

  • ಬಿಜೆಪಿಯನ್ನು ನಾಯಿ, ಇಲಿ ಎಂದು ಟೀಕಿಸಿದ ಖರ್ಗೆ ಜೊತೆ ಊಟ ಮಾಡಿದ ಮೋದಿ

    ಬಿಜೆಪಿಯನ್ನು ನಾಯಿ, ಇಲಿ ಎಂದು ಟೀಕಿಸಿದ ಖರ್ಗೆ ಜೊತೆ ಊಟ ಮಾಡಿದ ಮೋದಿ

    ನವದೆಹಲಿ: ಬಿಜೆಪಿಯನ್ನು (BJP) ನಾಯಿ ಹಾಗೂ ಇಲಿ ಎಂದು ಟೀಕಿಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಔತಣ ಕೂಟದಲ್ಲಿ ಭಾಗಿಯಾಗಿ ಸಿರಿಧಾನ್ಯ ಖಾದ್ಯ ಭೋಜನ ಸವಿದಿದ್ದಾರೆ.

    2023ರ ರಾಗಿ ವರ್ಷದ ಅಂಗವಾಗಿ ಸಂಸತ್ತಿನಲ್ಲಿ ಕೃಷಿ ಸಚಿವ ನರೇಂದ್ರ ತೋಮರ್ (Narendra Tomar) ಅವರು ಆಯೋಜಿಸಿದ್ದ ಸಿರಿಧಾನ್ಯ ಖಾದ್ಯ ಭೋಜನ ಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Devegowda) ಹಾಗೂ ಇತರ ಸಂಸದರೂ ಹಾಜರಿದ್ದರು.

    ಔತಣ ಕೂಟದಲ್ಲಿ ಖಿಚಡಿ, ರಾಗಿ ದೋಸೆ, ರಾಗಿ ರೊಟ್ಟಿ, ಜೋಳದ ರೊಟ್ಟಿ, ಹಲ್ದಿ ಸಬ್ಜಿ, ಬಾಜ್ರಾ, ಕುರ್ಮಾ ಹಾಗೂ ರಾಗಿಯಿಂದ ಸಿಹಿ ತಿನಿಸುಗಳನ್ನು ಸಿದ್ಧಪಡಿಸಲಾಗಿತ್ತು. ವಿಶೇಷ ಖಾದ್ಯಗಳನ್ನು ತಯಾರಿಸಲು ಕರ್ನಾಟಕದಿಂದ ಬಾಣಸಿಗರನ್ನು ಕರೆತರಲಾಗಿತ್ತು. ಇದನ್ನೂ ಓದಿ: ಈ ದೇಶಕ್ಕಾಗಿ BJP ನಾಯಕನ ಮನೆ ನಾಯಿಯೂ ಸತ್ತಿಲ್ಲ – ಕೋಲಾಹಲ ಎಬ್ಬಿಸಿದ ಖರ್ಗೆ ಹೇಳಿಕೆ

    ಬಳಿಕ ಪ್ರಧಾನಿ ಮೋದಿ ಅವರು, 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಆಚರಿಸಲು ತಯಾರಿ ನಡೆಸುತ್ತಿರುವಾಗ, ಸಂಸತ್ತಿನಲ್ಲಿ ಸಿರಿಧಾನ್ಯ ಭೋಜನಕೂಟದಲ್ಲಿ ಭಾಗವಹಿಸಿದ್ದೇವೆ. ಪಕ್ಷಾತೀತವಾಗಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಊಟದ ಕೆಲವು ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ – 33 ಲಕ್ಷ ಚಂದಾದಾರರಿದ್ದ 3 ಯೂಟ್ಯೂಬ್ ಚಾನೆಲ್ ಪತ್ತೆ

    ಪ್ರಧಾನಿ ನರೇಂದ್ರ ಮೋದಿಯವರ ಉಪಕ್ರಮದ ಮೇರೆಗೆ ವಿಶ್ವಸಂಸ್ಥೆಯು 2023ನೇ ವರ್ಷವನ್ನು ಅಂತರರಾಷ್ಟ್ರೀಯ ರಾಗಿ ವರ್ಷ ಎಂದು ಘೋಷಿಸಿದೆ. ಭಾರತ ಸರ್ಕಾರವು 2018ರಲ್ಲಿ ರಾಗಿಯನ್ನು ಪೌಷ್ಠಿಕ ಧಾನ್ಯವೆಂದು ಘೋಷಿಸಿತ್ತು. ಜೊತೆಗೆ ಪೋಷಣ್ ಮಿಷನ್ ಅಭಿಯಾನದಲ್ಲಿ ಸೇರಿಸಲಾಯಿತು. ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಅಡಿಯಲ್ಲಿ 14 ರಾಜ್ಯಗಳ 212 ಜಿಲ್ಲೆಗಳಲ್ಲಿ ರಾಗಿಗಾಗಿ ಪೌಷ್ಟಿಕ ಏಕದಳ ಘಟಕವನ್ನು ಅಳವಡಿಸಲಾಗಿದೆ.

    `ಭಾರತ್ ಜೋಡೋ ಯಾತ್ರೆ’ ರ‍್ಯಾಲಿಯನ್ನು ಟೀಕಿಸಿದ್ದ ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರು ಹರಿಹಾಯ್ದಿದ್ದರು. ಸ್ವಾತಂತ್ರ‍್ಯ ಹೋರಾಟಕ್ಕಾಗಿ ಬಿಜೆಪಿಯ ಒಂದು ನಾಯಿ ಕೂಡ ಸತ್ತಿಲ್ಲ ಎಂದು ಟೀಕಿಸಿದ್ದರು. ಇದರಿಂದ ಮಂಗಳವಾರ ಸಂಸತ್ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಯಾಯಿತು. ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿದ ಬಿಜೆಪಿ, ರಾಜ್ಯಸಭೆ ಕಲಾಪದ ವೇಳೆ ಕ್ಷಮೆ ಕೋರುವಂತೆ ಖರ್ಗೆ ಅವರನ್ನು ಒತ್ತಾಯಿಸಿತು. ಆದರೆ, ಸಂಸತ್ತಿನ ಹೊರಗೆ ಆಡಿದ ಮಾತುಗಳಿಗೆ ಕ್ಷಮೆ ಕೋರುವುದಿಲ್ಲ ಎಂದು ಖರ್ಗೆ ಹೇಳಿದ್ದಕ್ಕೆ ಭಾರೀ ಗಲಾಟೆಯೇ ನಡೆದಿತ್ತು.

    Live Tv
    [brid partner=56869869 player=32851 video=960834 autoplay=true]

  • ರಾಗಿ ಖರೀದಿ ಕೇಂದ್ರದಲ್ಲಿ ಗೋಲ್‌ಮಾಲ್ – ಕೇಂದ್ರಕ್ಕೆ ಬೀಗ ಜಡಿದ ರೈತರು

    ರಾಗಿ ಖರೀದಿ ಕೇಂದ್ರದಲ್ಲಿ ಗೋಲ್‌ಮಾಲ್ – ಕೇಂದ್ರಕ್ಕೆ ಬೀಗ ಜಡಿದ ರೈತರು

    ದಾವಣಗೆರೆ: ರಾಗಿಯ ಬೆಂಬಲ ಬೆಲೆ ಖರೀದಿ ಕೇಂದ್ರದ ಅವ್ಯವಸ್ಥೆ ಖಂಡಿಸಿ ದಾವಣಗೆರೆಯಲ್ಲಿ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

    ಸರ್ಕಾರದಿಂದ ರೈತರಿಗಾಗಿ ಖರೀದಿ ಕೇಂದ್ರಗಳನ್ನು ತೆರೆದರೆ ಅದು ಕೇವಲ ದಲ್ಲಾಳಿಗಳಿಗೆ ಮಾತ್ರ ಲಾಭ. ರೈತರು ಏನಾದರೂ ನೊಂದಣಿ ಮಾಡಿಕೊಳ್ಳಲು ಹೋದರೆ ಸಾಕು, ಸರ್ವರ್ ಬ್ಯುಸಿ ಬರುತ್ತಿದೆ. ಕೇವಲ ಸಣ್ಣ ರೈತರಿಗಷ್ಟೇ ಖರೀದಿ ಕೇಂದ್ರ ಉಪಯೋಗವಾಗುತ್ತಿದ್ದು, ದೊಡ್ಡ ರೈತರನ್ನು ನಿರ್ಲಕ್ಷಿಸಲಾಗಿದೆ. ಸಣ್ಣ ರೈತರ ಹೆಸರನ್ನು ದಲ್ಲಾಳಿಗಳು ಉಪಯೋಗಿಸಿಕೊಂಡು ಅಕ್ರಮ ನೊಂದಣಿ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

    ದಾವಣಗೆರೆ ಎಪಿಎಂಸಿ ಮಾರುಕಟ್ಟೆ ಆವರಣದ ರಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ನುಗ್ಗಿದ ಆಲೂರು, ಮಲ್ಲಾಪುರ, ರೈತರು, ರೈತಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ದಿನಗಳಿಂದ ಸರ್ವರ್ ಸಮಸ್ಯೆ ಇದೆ ಎಂದು ಹೇಳಿದ ರೈತರು ದಲ್ಲಾಳಿಗಳು ಕೊಟ್ಟ ರೈತರ ಲಿಸ್ಟ್ ಅನ್ನು ಪ್ರೂಟ್ ಐಡಿಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ಅಡಿಕೆ, ಗುಲಾಬಿ ತೋಟವಿರುವ ರೈತರೂ ಇದ್ದಾರೆ. ಜಿಪಿಎಸ್ ಮಾಡುವಾಗ ರಾಗಿ ಬೆಳೆ ಬೆಳೆದ ರೈತರನ್ನು ಬಿಟ್ಟು ಬೇರೆಯವರ ಹೆಸರನ್ನು ಅಪ್ಲೋಡ್ ಮಾಡಲಾಗಿದೆ. ಆದ ಕಾರಣ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಪಾರದರ್ಶಕತೆ ಕಾಪಾಡಬೇಕೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪ್ಪು ನೆನಪಿನಾರ್ಥ ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸಿದ ಮಳಮಾಚನಹಳ್ಳಿ ಗ್ರಾಮಸ್ಥರು

    ದೊಡ್ಡ ರೈತರು ಜಿಲ್ಲೆಯಲ್ಲಿ ಸಾಕಷ್ಟು ರಾಗಿ ಬೆಳೆದಿದ್ದಾರೆ. ಪ್ರತಿ ಕ್ವಿಂಟಾಲ್‌ಗೆ 3,377 ರೂ. ನಿಗದಿಪಡಿಸಲಾಗಿದ್ದು, ಹೊರಗಿನ ಮಾರುಕಟ್ಟೆಯಲ್ಲಿ ಕೇವಲ 1,500-1,800 ರೂ.ಗೆ ಮಾರಾಟವಾಗುತ್ತಿದೆ. ಮುಂಗಾರು ಬೆಳೆಗೆ ಮಾತ್ರ ಅವಕಾಶ ನೀಡಿದ್ದು, ಹಿಂಗಾರಿನಲ್ಲಿ ಬಂದಿರುವ ರಾಗಿಯನ್ನು ಏನು ಮಾಡಬೇಕೆಂದು ರೈತರು ಆಕ್ರೋಶ ವ್ಯಕ್ತಪಡಿಸಿ, ನಗರದ ಪಿಬಿ ರಸ್ತೆ ತಡೆದು ಸಂಚಾರ ಅಸ್ತವ್ಯಸ್ತವಾಗುವಂತೆ ಮಾಡಿದ್ದಾರೆ.

    2 ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದ ಆಲೂರು, ಮಲ್ಲಾಪುರ, ಹಳೇ ಬೇತೂರು ಗ್ರಾಮದ ರೈತರು ದಾವಣಗೆರೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡುವಂತೆ ಆಗ್ರಹಿಸಿದರು. ಸಾರಿಗೆ ಸಂಚಾರ ವ್ಯತ್ಯಯವಾಗಿದ್ದರಿಂದ ಪೊಲೀಸರು ಮತ್ತು ಪ್ರತಿಭಟನೆ ನಿರತ ರೈತರೊಡನೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಎಸಿ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಭೇಟಿ ನೀಡಿ, ರೈತರ ಮನವೊಲಿಸಿ ಪೋರ್ಟಲ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಪ್ರೂಟ್ ಐಡಿಯಲ್ಲಿ ಪಾರದರ್ಶಕತೆ ಕಾಪಾಡದ ಹೊರತು ಯಾರಿಂದಲೂ ರಾಗಿ ಖರೀದಿಸದಂತೆ ರೈತರು ಒತ್ತಾಯ ಮಾಡಿದರು. ಇದನ್ನೂ ಓದಿ: ಹಿರಿಯ ನಟಿ ತಾರಾ ತಾಯಿ ಪುಷ್ಪಾ ವಿಧಿವಶ

    ಸರ್ಕಾರದ ಆದೇಶದಂತೆ 2021-22ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೆಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳ ಎಪಿಎಂಸಿ ಪ್ರಾಂಗಣದಲ್ಲಿ ರೈತರ ನೋಂದಣಿ ಮತ್ತು ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ದಾವಣಗೆರೆ, ಹರಿಹರ, ಚನ್ನಗಿರಿ, ಜಗಳೂರು ಮತ್ತು ಹೊನ್ನಾಳಿ ತಾಲೂಕುಗಳಲ್ಲಿ ರಾಗಿ ಮಾರಾಟ ಮಾಡಲು ಬಾಕಿ ಇರುವ ರೈತರು ಕೃಷಿ ಇಲಾಖೆಯಿಂದ ಪಡೆದುಕೊಂಡಿರುವ ‘ಪ್ರೂಟ್ ಐಡಿ’ಯೊಂದಿಗೆ ಆಯಾ ತಾಲೂಕಿನ ಖರೀದಿ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಸಿಕೊಂಡು ರಾಗಿ ಮಾರಾಟ ಮಾಡತಕ್ಕದ್ದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸರ್ಕಾರದ ಆದೇಶದಲ್ಲಿ ಸೂಚಿಸಿರುವಂತೆ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಪ್ರತಿ ಕ್ವಿಂಟಾಲ್‌ಗೆ 3,377 ರೂ. ದರದಲ್ಲಿ ಖರೀದಿಸಲಾಗುವುದು. ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗುವುದು. ಉತ್ತಮ ಗುಣಮಟ್ಟದ ರಾಗಿ ಮಾತ್ರ ಖರೀದಿ ಮಾಡಲಾಗುವುದು. ರಾಜ್ಯದಲ್ಲಿ 1.14 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಿದ್ದು, 1.14 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ನೋಂದಣಿಯಾದ ಕೂಡಲೇ ಖರೀದಿ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದ್ದಾರೆ.

  • ರಾಗಿ ಸೇವನೆಯಿಂದ ಆರೋಗ್ಯಕ್ಕೆ ಸಿಗಲಿದೆ ಹಲವಾರು ಪ್ರಯೋಜನ

    ರಾಗಿ ಸೇವನೆಯಿಂದ ಆರೋಗ್ಯಕ್ಕೆ ಸಿಗಲಿದೆ ಹಲವಾರು ಪ್ರಯೋಜನ

    ಸಿರಿಧಾನ್ಯಗಳಲ್ಲಿ ಒಂದಾಗರುವ ರಾಗಿಯನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ ಆರೋಗ್ಯಕ್ಕೆ ಹಲವು ಲಾಭಗಳು ಸಿಗುತ್ತದೆ. ಇದು ದೇಹಕ್ಕೆ ತಂಪು ಮತ್ತು ಶಕ್ತಿಯನ್ನು ನೀಡುವುದರ ಜೊತೆಗೆ ಹಲವು ರೋಗಗಳನ್ನು ನಿವಾರಿಸುವ ಶಕ್ತಿ ರಾಗಿಗೆ ಇದೆ. ನಮ್ಮ ಆಹಾರ ಪದ್ದತಿಯಲ್ಲಿ ರಾಗಿ ಬಳಕೆ ಮಾಡುವುದರಿಂದ ಹಲವಾರು ಲಾಭಗಳು ಸಿಗಲಿದೆ.

    ಪ್ರಯೋಜನ ಏನು?
    * ಬಿಸಿಲಿನ ಬೇಗೆ ಪ್ರಾರಂಭವಾಗಿದೆ. ಮುಂಜಾವಿನಲ್ಲಿ ಟಿ ಮಾಡಿ ಕುಡಿಯುವ ಬದಲಾಗಿ ರಾಗಿ ಗಂಜಿಯನ್ನು ಸೇವಿಸಿದರೆ ದೇಹಕ್ಕೆ ತಂಪು ಮತ್ತು ಆರೋಗ್ಯಕರವಾಗಿರುತ್ತದೆ.

    * ಬೇರೆ ಧಾನ್ಯಗಳಿಗಿಂತ ಕೊಬ್ಬಿನಾಂಶವು ತುಂಬಾ ಕಡಿಮೆ ಇರುತ್ತದೆ. ದೇಹಕ್ಕೆ ಅಗತ್ಯ ಇರುವ ಒಳ್ಳೆಯ ಕೊಬ್ಬನ್ನು ನೀಡುತ್ತದೆ.

    * ರಾಗಿಯು ಹೊಟ್ಟೆ ತುಂಬಿದಂತೆ ಮಾಡುವುದರ ಜೊತೆಗೆ ತಂಪನ್ನು ನೀಡುತ್ತದೆ.

    * ತೂಕ ಇಳಿಸಿಕೊಳ್ಳಲು ಬಯಸುವವರು ಅನ್ನ, ಗೋಧಿ ಬದಲಿಗೆ ರಾಗಿ ಬಳಕೆ ಮಾಡಬಹುದು.

    * ಮಕ್ಕಳಿಗೆ ಆಹಾರ ಕ್ರಮದಲ್ಲಿ ರಾಗಿ ನೀಡಿದರೆ ಅದರಿಂದ ಮೂಳೆಗಳು ಬಲಗೊಳ್ಳುವುದು ಮತ್ತು ಹಲ್ಲುಗಳು ಕೂಡ ಬಲಿಷ್ಠವಾಗುತ್ತದೆ.

    * ರಾಗಿ ಜ್ಯೂಸ್, ದೋಸೆ, ರೊಟ್ಟಿ ಸೇವನೆಯಿಂದ ರಾಗಿಯಲ್ಲಿರುವ ಟ್ರೈಪ್ಟೊಫಾನ್ ಅಂಶ ನಿದ್ರಾಹೀನತೆ ಕಡಿಮೆ ಮಾಡಿ ಆರೋಗ್ಯಕಾರಿ ನಿದ್ರೆ ನೀಡುತ್ತದೆ.

    * ಬೆಳೆಯುವ ಮಕ್ಕಳಿಗೆ ರಾಗಿ ನೀಡಿದರೆ ದೇಹಕ್ಕೆ ಬೇಕಾಗಿರುವ ಕ್ಯಾಲ್ಸಿಯಂ, ಪ್ರೋಟಿನ್ ಜೊತೆಗೆ ಪೋಷಕಾಂಶಗಳನ್ನು ಒದಗಿಸುವ ಅಂಶವನ್ನು ಹೊಂದಿದೆ.

    * ರಾಗಿಯಲ್ಲಿರುವ ಅಮಿನೋ ಆಮ್ಲವು ನೈಸರ್ಗಿಕ ಖಿನ್ನತೆ ನಿವಾರಣೆ ಹಾಗೂ ಮೈಗ್ರೇನ್ ಸಮಸ್ಯೆ ಎದುರಿಸುತ್ತಿರುವವರಿಗೆ ಇದು ಒಳ್ಳೆಯದಾಗಿದೆ.

    * ರಾಗಿಯಲ್ಲಿ ಇರುವಂತಹ ನಾರಿನಾಂಶವು ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

  • ಭತ್ತ, ರಾಗಿ, ಬಿಳಿ ಜೋಳ, ತೊಗರಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ – ಯಾವುದಕ್ಕೆ ಎಷ್ಟು ರೂ.?

    ಭತ್ತ, ರಾಗಿ, ಬಿಳಿ ಜೋಳ, ತೊಗರಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ – ಯಾವುದಕ್ಕೆ ಎಷ್ಟು ರೂ.?

    ಬೆಂಗಳೂರು: ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಆಹಾರ ಧಾನ್ಯಗಳನ್ನು ಖರೀದಿಸುವ ಸಂಬಂಧವಾಗಿ ಇಂದು ವಿಧಾನಸೌಧದಲ್ಲಿ ಸಚಿವ ಸಂಪುಟದ ಉಪಸಮಿತಿಯ ಸಭೆ ನಡೆಯಿತು. ಸಚಿವರಾದ ಮಾಧುಸ್ವಾಮಿ, ಬಿ.ಸಿ. ಪಾಟೀಲ್, ಎಸ್.ಟಿ.ಸೋಮಶೇಖರ್, ಪ್ರಭು ಚೌವಾಣ್, ಗೋಪಾಲಯ್ಯ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ ಹನುಮನಗೌಡ ಬೆಳಗುರ್ಕಿ ಅವರು ಈ ಸಭೆಯಲ್ಲಿ ಭಾಗವಹಿಸಿದ್ದರು.

    ಪ್ರಮುಖ ನಿರ್ಧಾರಗಳು
    ಭತ್ತ ಖರೀದಿ: 2020-21 ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ ಭತ್ತ ಖರೀದಿ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ಈ ಕೆಳಗಿನಂತೆ ನಿರ್ಧರಿಸಲಾಯಿತು.

    ಈ ಸಾಲಿನಲ್ಲಿ ಕೇಂದ್ರ ಸರ್ಕಾರವು 1,10 ಲಕ್ಷ ಮೆಟ್ರಿಕ್‌ ಟನ್‌ ಭತ್ತವನ್ನು ಖರೀದಿ ಮಾಡಲು ಅನುಮತಿ ನೀಡಿದೆ. ಹೆಚ್ಚುವರಿಯಾಗಿ ಇನ್ನೂ 1 ಲಕ್ಷ ಮೆಟ್ರಿಕ್‌ ಟನ್‌ ಭತ್ತ ಖರೀದಿ ಪ್ರಮಾಣಕ್ಕೆ ಅಂದರೆ ಒಟ್ಟು ಸುಮಾರು 2.10 ಲಕ್ಷ ಟನ್ ನಷ್ಟು ಭತ್ತವನ್ನು ಖರೀದಿಸಲು ಪ್ರಸ್ತಾವನೆಯನ್ನು ಸಲ್ಲಿಸಲು ನಿರ್ಧರಿಸಲಾಯಿತು.

    ಭತ್ತ ಖರೀದಿಗಾಗಿ ರೈತರ ನೋಂದಣಿ ಈಗಾಗಲೇ ಆರಂಭಿಸಿದ್ದು, ಖರೀದಿ ಕಾರ್ಯವನ್ನು ತಕ್ಷಣದಿಂದಲೇ ಆರಂಭಿಸುವಂತೆ ನಿರ್ಧರಿಸಲಾಯಿತು. ರೈತರ ನೋಂದಣಿಯನ್ನು ಜನವರಿ ಅಂತ್ಯದವರೆಗೂ ಮುಂದುವರೆಸುವಂತೆ ತೀರ್ಮಾನಿಸಲಾಯಿತು.

    ಭತ್ತ ಖರೀದಿ ಪ್ರಮಾಣದ ಮಿತಿಯನ್ನು ಪ್ರತಿ ಎಕರೆಗೆ 25 ಕ್ವಿಂಟಾಲ್‌ ನಂತೆ ಗರಿಷ್ಟ ಪ್ರತಿ ರೈತರಿಂದ 75 ಕ್ವಿಂಟಾಲ್‌ ನಿಗದಿಪಡಿಸುವಂತೆ ತೀರ್ಮಾನಿಸಲಾಯಿತು.

    ಬೆಲೆ ಎಷ್ಟು?
    ಭತ್ತ ಸಾಮಾನ್ಯ: 1868 ರೂ. (ಪ್ರತಿ ಕ್ವಿಂಟಾಲ್ ಗೆ)
    ಭತ್ತ ಗ್ರೇಡ್ ಎ: 1888 ರೂ. (ಪ್ರತಿ ಕ್ವಿಂಟಾಲ್ ಗೆ)

    ರಾಗಿ ಮತ್ತು ಬಿಳಿಜೋಳ:
    ರಾಗಿ ಮತ್ತು ಬಿಳಿಜೋಳ ಖರೀದಿಗಾಗಿ ರೈತರ ನೋಂದಣಿಯನ್ನು ತಕ್ಷಣದಿಂದಲೇ ಆರಂಭಿಸುವಂತೆ ಹಾಗೂ ಖರೀದಿಯನ್ನು ಇದೇ ಡಿಸೆಂಬರ್‌15 ರಿಂದ ಆರಂಭಿಸಲು ನಿರ್ಧರಿಸಲಾಯಿತು. ರಾಗಿ ಖರೀದಿ ಪ್ರಮಾಣದ ಮಿತಿಯನ್ನು ಪ್ರತಿ ಎಕರೆಗೆ 10 ಕ್ವಿಂಟಾಲ್‌ ನಂತೆ ಗರಿಷ್ಟ ಪ್ರತಿ ರೈತರಿಂದ 50 ಮಿತಿ ಕ್ವಿಂಟಾಲ್ ನಿಗದಿಪಡಿಸಿರುವುದನ್ನು ಮುಂದುವರೆಸುವಂತೆ ತೀರ್ಮಾನಿಸಲಾಗಿದೆ.

    ರಾಗಿ ಖರೀದಿ ಪ್ರಮಾಣದ ಒಟ್ಟು ಗುರಿಯನ್ನು ಈಗಿರುವ 3 ಲಕ್ಷ ಮೆಟ್ರಿಕ್ ಟನ್‌ ಜೊತೆಗೆ ಇನ್ನೂ 1ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ಪ್ರಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.

    ಬಿಳಿಜೋಳ ಖರೀದಿಗೆ ಮುಂಗಾರು ಪ್ರಮಾಣ 4000 ಮೆಟ್ರಿಕ್ ಟನ್‌ ಈಗಾಗಲೇ ನಿಗದಿಯಾಗಿದ್ದು, ಇದನ್ನು 1 ಲಕ್ಷ ಮೆಟ್ರಿಕ್‌ ಟನ್‌ ಗೆ ನಿಗದಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು. ಬಿಳಿಜೋಳ ಖರೀದಿ ಪ್ರಮಾಣದ ಮಿತಿಯನ್ನು ಪ್ರತಿ ಎಕರೆಗೆ 15 ಕ್ವಿಂಟಾಲ್‌ ನಂತೆ ಗರಿಷ್ಟ ಪ್ರತಿ ರೈತರಿಂದ 75 ಕ್ವಿಂಟಾಲ್‌ ಮಿತಿ ನಿಗದಿಪಡಿಸಿರುವುದನ್ನು ಮುಂದುವರೆಸುವಂತೆ ತೀರ್ಮಾನಿಸಲಾಯಿತು.

    ಬೆಲೆ ಎಷ್ಟು?
    ರಾಗಿ: ರೂ. 3295 (ಪ್ರತಿ ಕ್ವಿಂಟಾಲ್ ಗೆ)
    ಬಿಳಿ ಜೋಳ ಹೈಬ್ರಿಡ್: 2,620 ರೂ. (ಪ್ರತಿ ಕ್ವಿಂಟಾಲ್ ಗೆ)
    ಬಿಳಿ ಜೋಳ ಮಾಲ್ದಂಡಿ: 2,640 ರೂ. (ಪ್ರತಿ ಕ್ವಿಂಟಾಲ್ ಗೆ)

    ತೊಗರಿ:
    ಉತ್ತರ ಕರ್ನಾಟಕದ ಪ್ರಮುಖ ಬೆಳೆಯಾದ ತೊಗರಿ ಖರೀದಿಗೆ ರೈತರ ನೊಂದಣೆಯನ್ನು ಡಿಸೆಂಬರ್‌ 15 ರಿಂದ ಪ್ರಾರಂಭಿಸಲು ಮತ್ತು ಖರೀದಿ ಪ್ರಕ್ರಿಯೆಯನ್ನು ಜನವರಿ 1 ರಿಂದ ಪ್ರಾರಂಭಿಸಲು ನಿರ್ಧರಿಸಲಾಯಿತು. ಖರೀದಿ ಅವಧಿ 90 ದಿನಗಳು. ಪ್ರತಿ ಎಕರೆಗೆ ಗರಿಷ್ಟ 7.5 ಕ್ವಿಂಟಾಲ್ ಮತ್ತು ಗರಿಷ್ಟ ಒಟ್ಟು 20 ಕ್ವಿಂಟಾಲ್ ವರೆಗೆ ಒಬ್ಬ ರೈತರಿಂದ ಖರೀದಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಯಿತು. ಕನಿಷ್ಟ ಬೆಂಬಲ ಬೆಲೆ ಅಡಿಯಲ್ಲಿ ಪ್ರತಿ ಕ್ವಿಂಟಾಲ್‌ಗೆ 6 ಸಾವಿರ ರೂ. ದರವನ್ನು ನಿಗದಿ ಮಾಡಲಾಗಿದೆ.

    ಹೆಸರುಕಾಳು:
    ಕಳೆದ 14 ಸೆಪ್ಟೆಂಬರ್ 2020 ರಿಂದಲೇ ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದರೂ ಹೆಚ್ಚಿನ ಆವಕಗಳು ಬಂದಿರುವುದಿಲ್ಲ. ಆದರೂ ರೈತರಿಗೆ ಮುಂದೆ ಅನುಕೂಲ ಕಲ್ಪಿಸಲು ಪ್ರತಿ ರೈತರಿಂದಲೂ ಗರಿಷ್ಟ 20 ಕ್ವಿಂಟಾಲ್ ವರೆಗೆ ಖರೀದಿಸಲು ನಿರ್ಧಾರಿಸಲಾಯಿತು. ಮುಂದಿನ ವರ್ಷದಿಂದ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿಯೇ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಲು ನಿರ್ಧರಿಸಲಾಯಿತು.

    ಉದ್ದು:
    ಉದ್ದಿನ ಖರೀದಿ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದ್ದರೂ ಹೆಚ್ಚಿನ ಆವಕಗಳು ಬಂದಿರುವುದಿಲ್ಲ. ಮುಂದಿನ ವರ್ಷದಿಂದ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿಯೇ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಲು ನಿರ್ಧರಿಸಲಾಯಿತು.

    ಶೇಂಗಾ:
    ಶೇಂಗಾ ಖರೀದಿ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದ್ದು, 173 ರೈತರು ಮಾತ್ರ ಈವರೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಕನಿಷ್ಟ ಬೆಂಬಲ ಬೆಲೆ ಅಡಿಯಲ್ಲಿ ಪ್ರತಿ ಕ್ವಿಂಟಾಲ್‌ಗೆ 5,275 ರೂ. ದರವನ್ನು ನಿಗದಿ ಮಾಡಲಾಗಿದೆ.