ನವದೆಹಲಿ: ಪುಲ್ವಾಮಾ ಭಯೋತ್ಪಾದಕ ದಾಳಿ ಪ್ರತಿಕಾರವಾಗಿ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ದಾಳಿಯಲ್ಲಿ ಸುಮಾರು 250 ಉಗ್ರರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ರಕ್ಷಣಾಖಾತೆ ರಾಜ್ಯ ಸಚಿವ ವಿಕೆ ಸಿಂಗ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ವಾಯುಸೇನೆ ಪಾಕಿಸ್ತಾನ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸುಮಾರು 250 ಉಗ್ರರು ಸಾವನ್ನಪ್ಪಿರುವ ಸಾಧ್ಯತೆ ಇದೆ. ಭಾರತ ಏರ್ ಸ್ಟ್ರೈಕ್ ಉಗ್ರರ ನೆಲೆಗಳ ಮೇಲೆ ಮಾತ್ರ ನಡೆಸುವ ಉದ್ದೇಶ ಹೊಂದಿತ್ತು. ಏಕೆಂದರೆ ಜನವಸತಿ ಪ್ರದೇಶದಲ್ಲಿ ದಾಳಿ ನಡೆಸಿದರೆ ನಾಗರಿಕರು ಸಾವನ್ನಪ್ಪುವ ಕಾರಣದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಅದ್ದರಿಂದ ಜನವಸತಿಯಿಂದ ದೂರ ನಿರ್ಮಾಣ ಮಾಡಲಾಗಿದ್ದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಅಮಿತ್ ಶಾ 250 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಾಲಕೋಟ್ ಕಟ್ಟಡದಲ್ಲಿ ನೆಲೆಸಿದ್ದ ವ್ಯಕ್ತಿಗಳನ್ನು ಆಧಾರಿಸಿ ಅವರು ಹೇಳಿಕೆ ಕೊಟ್ಟಿದ್ದಾರೆ. ಅವರು ಅಧಿಕೃತವಾಗಿ 250 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿಲ್ಲ. ಅಷ್ಟು ಮಂದಿ ಸಾವನ್ನಪ್ಪಿರಬಹುದು ಎಂದು ಅಂದಾಜಿನಲ್ಲಿ ಹೇಳಿದ್ದಾರೆ ಅಷ್ಟೇ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ವಕ್ತಾರರದ ದಿಗ್ವಿಜಯ್ ಸಿಂಗ್ ಏರ್ ಸ್ಟ್ರೈಕ್ ನಡೆಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೇ ಪುಲ್ವಾಮಾ ದಾಳಿ ಒಂದು ಘಟನೆ ಆಕ್ಸಿಡೆಂಟ್ ಮಾತ್ರ ಎಂದು ಶಂಕೆ ವ್ಯಕ್ತಪಡಿಸಿದ್ದರು. ಈ ಹೇಳಿಕೆಗೆ ವಿಕೆ ಸಿಂಗ್ ತಿರುಗೇಟು ನೀಡಿ ದಿಗ್ವಿಜಯ್ ಸಿಂಗ್ ಸೇರಿಂದತೆ ಏರ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಬಗ್ಗೆ ಕಿಡಿಕಾರಿದ್ದಾರೆ. ನಾನು ದಿಗ್ವಿಜಯ್ ಸಿಂಗ್‍ರನ್ನು ಗೌರವದಿಂದ ಪ್ರಶ್ನೆ ಮಾಡುತ್ತಿದ್ದೇನೆ. ರಾಜೀವ್ ಗಾಂಧಿ ಅವರ ಹತ್ಯೆ ಅಪಘಾತವೇ ಅಥವಾ ಉಗ್ರರ ದಾಳಿಯೇ ಎಂದು ಪ್ರಶ್ನಿಸಿದರು.
ಗುಜರಾತ್‍ನಲ್ಲಿ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ, ಭಾರತದ ವಾಯುಪಡೆ ಬಾಲಕೋಟ್ ಮೇಲೆ ನಡೆಸಿದ ದಾಳಿಯಲ್ಲಿ 250ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ. ಉರಿಯಲ್ಲಿ ಉಗ್ರರ ದಾಳಿ ಬಳಿಕ ಭಾರತ ಪ್ರತೀಕಾರವಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದ ಉಗ್ರರು ಅಲರ್ಟ್ ಆಗಿದ್ದರಿಂದ ವಾಯು ದಾಳಿ ನಡೆಸಲಾಗಿದೆ. ಪುಲ್ವಾಮಾ ದಾಳಿಯ ಬಳಿಕ ಫೆಬ್ರವರಿ 26 ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಏರ್ ಸ್ಟ್ರೈಕ್ ನಡೆಸಲು ಅನುಮತಿ ನೀಡಿತ್ತು. ಭಾರತ ಯಶಸ್ವಿಯಾಗಿ ಉಗ್ರರ ತಾಣಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿ ಯಾವುದೇ ಹಾನಿಗೆ ಒಳಗಾಗದೇ ಭಾರತಕ್ಕೆ ಹಿಂದಿರುಗಿತ್ತು ಎಂದು ಹೇಳಿದ್ದರು.
ಏರ್ ಸ್ಟ್ರೈಕ್ ನಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಪ್ರಶ್ನೆಗೆ ವಾಯುಸೇನೆ ಉತ್ತರ ನೀಡಿರಲಿಲ್ಲ. ಏರ್ ಚೀಫ್ ಮಾರ್ಷಲ್ ಧನೋವಾ ಅವರು ಸತ್ತವರ ಹೆಣವನ್ನು ಲೆಕ್ಕಹಾಕುವುದು ನಮ್ಮ ಕೆಲಸವಲ್ಲ. ನಮಗೆ ಏನು ಗುರಿಯನ್ನು ನೀಡಲಾಗಿತ್ತೋ ಆ ಗುರಿಯನ್ನು ಯಶಸ್ವಿಯಾಗಿ ಹೊಡೆದು ಹಾಕಿದ್ದೇವೆ ಎಂದು ಹೇಳಿದ್ದರು.

ಕೇಂದ್ರ ಸರ್ಕಾರ ಅಧಿಕೃತವಾಗಿ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎನ್ನುವುದನ್ನು ತಿಳಿಸಿರಲಿಲ್ಲ. ಈ ಮಧ್ಯೆ ಅಮಿತ್ ಶಾ 250 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಕಾಂಗ್ರೆಸ್ ನಾಯಕರು ಕಿಡಿಕಾರಿ, ದೇಶದ ರಕ್ಷಣಾ ಮಾಹಿತಿ ಬಿಜೆಪಿ ಪಕ್ಷದ ಅಧ್ಯಕ್ಷರ ಕೈಗೆ ಹೇಗೆ ಸಿಕ್ಕಿತ್ತು ಎಂದು ಪ್ರಶ್ನಿಸಿದ್ದರು. ಈಗ ಏರ್ ಸ್ಟ್ರೈಕ್ ನಡೆದ ಬಳಿಕ ಇದೇ ಮೊದಲ ಬಾರಿಗೆ ವಿಕೆ ಸಿಂಗ್ 250 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ ನೀಡಬೇಕಾದ ಉತ್ತರವನ್ನು ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv