Tag: militants

  • ಸೇನೆಯ ಗುಂಡಿನ ದಾಳಿಗೆ ಎದ್ನೋ ಬಿದ್ನೋ ರೀತಿ ಓಡಿದ ಉಗ್ರರು – ವಿಡಿಯೋ ವೈರಲ್

    ಸೇನೆಯ ಗುಂಡಿನ ದಾಳಿಗೆ ಎದ್ನೋ ಬಿದ್ನೋ ರೀತಿ ಓಡಿದ ಉಗ್ರರು – ವಿಡಿಯೋ ವೈರಲ್

    ಶ್ರೀನಗರ: ಗಡಿಯಲ್ಲಿ ನುಸುಳಲು ಯತ್ನಿಸುತ್ತಿದ್ದಾಗ ಭಾರತೀಯ ಸೇನೆ ಗುಂಡಿನ ದಾಳಿಗೆ ಹೆದರಿ ಉಗ್ರರು ದಿಕ್ಕಾಪಾಲಾಗಿ ಓಡಿ ಹೋಗುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

    ಜುಲೈ 30 ರಂದು ಕುಪ್ವಾರಾ ಸೆಕ್ಟರ್ ನಲ್ಲಿರುವ ಗಡಿನಿಯಂತ್ರಣ ರೇಖೆಯ ಬಳಿ ಮಧ್ಯಾಹ್ನ 1:32ರ ವೇಳೆಗೆ ಉಗ್ರರು ಭಾರತದತ್ತ ನುಸುಳಲು ಯತ್ನಿಸುತ್ತಿದ್ದರು. ಉಗ್ರರು ನುಸುಳುವುದನ್ನು ನೋಡುತ್ತಿದ್ದಂತೆ ಭಾರತೀಯ ಸೇನೆ ಗುಂಡಿನ ಮಳೆಯನ್ನೇ ಸುರಿಸಿದೆ.

    ಸೇನೆಯ ಒಂದೇ ಸಮನೆ ಗುಂಡಿನ ದಾಳಿ ನಡೆಸುವುದನ್ನು ಕಂಡು ಉಗ್ರರು ದಿಕ್ಕಾಪಾಲಾಗಿ ಓಡಿ ಪಾಕ್ ಗಡಿಯತ್ತ ಓಡಿದ್ದಾರೆ. ಸುದ್ದಿ ಸಂಸ್ಥೆಯೊಂದು ಈ ವಿಡಿಯೋವನ್ನು ಪ್ರಕಟಿಸಿದೆ.

    ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನ ಅವರ ಮೇಲೆ ಗುಂಡಿನ ದಾಳಿ ನಡೆಸಬಾರದಿತ್ತು. ಬಾಂಬ್ ಹಾಕಬೇಕಿತ್ತು ಎಂದು ಕಮೆಂಟ್ ಹಾಕುತ್ತಿದ್ದಾರೆ.

  • ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರ ಕಸಿದು ಉಗ್ರರು ಪರಾರಿ

    ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರ ಕಸಿದು ಉಗ್ರರು ಪರಾರಿ

    ಶ್ರೀನಗರ: ಕರ್ತವ್ಯ ನಿರತ ಭದ್ರತಾ ಸಿಬ್ಬಂದಿ ಬಳಿ ಶಸ್ತ್ರಾಸ್ತ್ರ ಕಸಿದ ಉಗ್ರರು ಪರಾರಿಯಾದ ಹಿನ್ನೆಲೆಯಲ್ಲಿ ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

    ಸ್ಥಳೀಯ ಪಿಡಿಪಿ ಮುಖಂಡ ಶೇಖ್ ನಾಸಿರ್ ಅವರ ಭದ್ರತೆಗಾಗಿ ನಿಯೋಜಿಸಲಾಗಿದ್ದ ಸಿಬ್ಬಂದಿಯ ಬಳಿ ಉಗ್ರರು ಶಸ್ತ್ರಸ್ತ್ರ ಕಸಿದುಕೊಂಡು ಪರಾರಿಯಾಗಿದ್ದಾರೆ. ಮುಖಂಡನ ಬೆಂಬಲಿಗರ ಗುಂಪಿನಲ್ಲಿ ಸೇರಿಕೊಂಡಿದ್ದ ಶಂಕಿತ ಉಗ್ರರು ಕರ್ತವ್ಯ ನಿರತ ಸಿಬ್ಬಂದಿಯ ಬಂದೂಕು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಇದೀಗ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗೃತ ಕ್ರಮವಾಗಿ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಮೂಲಗಳು ಪ್ರಕಾರ, ಭದ್ರತಾ ಸಿಬ್ಬಂದಿಯ ಒಂದು ಎಕೆ 47 ಬಂದೂಕನ್ನು ಶಂಕಿತ ಉಗ್ರರು ಕಸಿದುಕೊಂಡು ಓಡಿಹೋಗಿದ್ದಾರೆ. ಬಂದೂಕು ಕಸಿದ ಉಗ್ರರನ್ನು ಸೆರೆಹಿಡಿಯಲು ಭಾರತೀಯ ಸೇನೆ ತೀವ್ರ ಶೋಧ ನಡೆಸುತ್ತಿದೆ. ಅಲ್ಲದೆ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ತಲುಪಿಸಿದ್ದಾರೆ. ಸೈನಿಕರ ಜೊತೆ ಸ್ಥಳೀಯ ಪೊಲೀಸರು ಕೂಡ ಶೋಧಕಾರ್ಯಕ್ಕೆ ಸಾಥ್ ನೀಡಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಇದೀಗ ನಾಕಾಬಂದಿ ಹಾಕಲಾಗಿದೆ.

    ಈ ವರ್ಷದಲ್ಲಿ ಹೀಗೆ ಉಗ್ರರು ಭದ್ರತಾ ಸಿಬ್ಬಂದಿಯ ಬಂದೂಕು ಕಸಿದು ಪರಾರಿಯಾಗಿರುವುದು ಇದು 2ನೇ ಪ್ರಕರಣವಾಗಿದೆ. ಈ ಹಿಂದೆ ಮಾರ್ಚ್ 8ರಂದು ಮುಸುಕುಧಾರಿ ಉಗ್ರರು ಶಾಹಿಗ್ ಮಜಾರ್ ಪ್ರಾಂತ್ಯದ ಪಿಎಸ್‍ಒ ದುಲೀಪ್ ಕುಮಾರ್ ಅವರ ಮನೆಗೆ ನುಗ್ಗಿ, ಅವರ ಬಳಿಯಿದ್ದ ಒಂದು ಎಕೆ 47 ಬಂದೂಕನ್ನು ಕಸಿದಿದ್ದರು. ಅದರ ಜೊತೆಗೆ ಉಗ್ರರು 90 ಬುಲೆಟ್‍ಗಳನ್ನೂ ಕೂಡ ತೆಗೆದುಕೊಂಡು ಓಡಿಹೋಗಿದ್ದರು.

    ಈ ಬಗ್ಗೆ ಕಿಶ್ತ್ವಾರ್ ಡಿಸಿ ಎ.ಎಸ್ ರಾಣಾ ಅವರು ಮಾತನಾಡಿ, ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದೇವೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಜಾಗೃತರಾಗಿರುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದರು.

  • ರಾಜ್ಯದ ಮೇಲೆ ಉಗ್ರರ ಕಣ್ಣು- ನಂದಿಗಿರಿಯಲ್ಲಿ ಎಕೆ 47 ಹಿಡಿದು ಪೊಲೀಸರ ತಾಲೀಮು

    ರಾಜ್ಯದ ಮೇಲೆ ಉಗ್ರರ ಕಣ್ಣು- ನಂದಿಗಿರಿಯಲ್ಲಿ ಎಕೆ 47 ಹಿಡಿದು ಪೊಲೀಸರ ತಾಲೀಮು

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಎಕೆ 47 ರೈಫಲ್ ಗಳನ್ನು ಹಿಡಿದು ಜಿಲ್ಲಾ ವಿಶೇಷ ಶಸ್ತ್ರಾಸ್ತ್ರ ಹಾಗೂ ಯುದ್ಧತಂತ್ರ ಪಡೆಯ ವಿಶೇಷ ಪೊಲೀಸ್ ತಂಡ ನಂದಿಗಿರಿಧಾಮದಲ್ಲಿ ತಾಲೀಮು ನಡೆಸಿದೆ.

    ನಂದಿಗಿರಿಧಾಮದ ಚೆಕ್ ಪೋಸ್ಟ್ ಬಳಿ ಎಕೆ 47 ಹಾಗೂ ಇನ್ಪಾಸ್ ರೈಫಲ್ ಹಿಡಿದು 10 ಮಂದಿ ಪೊಲೀಸರ ತಂಡ ಕಾವಲು ನಡೆಸಿದ್ದು, ನಂದಿಗಿರಿಧಾಮಕ್ಕೆ ಬಂದು ಹೋಗುವ ಎಲ್ಲಾ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಇನ್ನೂ ನಂದಿಗಿರಿಧಾಮದ ಮೂಲೆ ಮೂಲೆಯಲ್ಲಿ ಅಲೆದಾಡುತ್ತಿರುವ ವಿಶೇಷ ಪೊಲೀಸ್ ಪಡೆ ಡಿ ಸ್ವಾಟ್ ತಂಡದ ಪೊಲೀಸರು ಪಹರೆ ನಡೆಸಿದ್ದಾರೆ.

    ರಾಜ್ಯದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಅಲರ್ಟ್ ಆಗಿರುವ ರಾಜ್ಯ ಗೃಹ ಇಲಾಖೆಯಿಂದ, ರಾಜ್ಯದ ಎಲ್ಲಾ ಜಿಲ್ಲೆಯ ಎಲ್ಲಾ ಎಸ್‍ಪಿ ಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ವಿಶೇಷ ಯುದ್ಧತಂತ್ರಪಡೆ ರಚಿಸಿ ಅಲರ್ಟ್ ಆಗಿರುವಂತೆ ಸೂಚಿಸಿತ್ತು. ಹೀಗಾಗಿ ಎಚ್ಚೆತ್ತಿರುವ ಚಿಕ್ಕಬಳ್ಳಾಪುರ ಎಸ್‍ಪಿ ಸಂತೋಷ್ ಬಾಬು ಜಿಲ್ಲಾ ವಿಶೇಷ ಶಸ್ತ್ರಾಸ್ತ್ರ ಹಾಗೂ ಯುದ್ಧ ತಂತ್ರ ಪಡೆ ರಚಿಸಿದ್ದು, ಈ ತಂಡ ಜಿಲ್ಲೆಯ ಎಲ್ಲಾ ಪ್ರವಾಸಿತಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುವ ಮೂಲಕ ಉಗ್ರ ಚಟುವಟಿಕೆಗಳನ್ನು ನಿಗ್ರಹಿಸುವ ಕೆಲಸ ಮಾಡುತ್ತಿದೆ.

    ಡಿ ಸ್ವಾಟ್ ತಂಡದಲ್ಲಿ ವಿಶೇಷ ತರಬೇತಿ ಪಡೆದ 10 ಮಂದಿ ಪೊಲೀಸರಿದ್ದು, ಉಗ್ರರ ದಾಳಿ, ಭಯೋತ್ಪಾದನಾ ಚಟುವಟಿಕೆ ಸೇರಿದಂತೆ ನಕ್ಸಲ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿರುತ್ತದೆ. ಅತ್ಯಾಧುನಿಕ ಶಸ್ತ್ರಾಸ್ತ್ರ ಸಮೇತ ಸಜ್ಜಾಗಿ ನಿಲ್ಲುವ ಈ ಪಡೆ ಸಾರ್ವಜನಿಕರಲ್ಲಿ ಉಗ್ರರ ದಾಳಿಯ ವೇಳೆ ಮೂಡುವ ಭಯದ ವಾತಾವಾರಣವನ್ನು ಹೋಗಲಾಡಿಸಿ, ಪರಿಸ್ಥಿತಿಯನ್ನು ನಿಭಾಯಿಸಿ ಉಗ್ರರ ದಮನ ಮಾಡುವ ಕಾರ್ಯ ನಡೆಸಲಿದೆ. ಆದರೆ ಮತ್ತೊಂದೆಡೆ ನಂದಿಗಿರಿಧಾಮದಲ್ಲಿ ರೈಫಲ್ ಸಮೇತ ವಿಶೇಷ ಪೊಲೀಸ್ ಪಡೆ ಕಂಡ ಪ್ರವಾಸಿಗರು, ಪ್ರೇಮಿಗಳು ಅರೇ ಏನಾಯ್ತಪ್ಪ ಎಂದು ಬೆಚ್ಚಿಬಿದ್ದಿದ್ದಾರೆ.

  • ಪುಲ್ವಾಮಾ ರೀತಿಯಲ್ಲಿ ಮೊತ್ತೊಂದು ದಾಳಿಗೆ ಸಂಚು – 7 ರಾಜ್ಯಗಳಲ್ಲಿ ಹೈಅಲರ್ಟ್

    ಪುಲ್ವಾಮಾ ರೀತಿಯಲ್ಲಿ ಮೊತ್ತೊಂದು ದಾಳಿಗೆ ಸಂಚು – 7 ರಾಜ್ಯಗಳಲ್ಲಿ ಹೈಅಲರ್ಟ್

    ನವದೆಹಲಿ: ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ 370 ನೇ ವಿಧಿಯನ್ನು ರದ್ದು ಮಾಡಿದ ನಂತರ ಪುಲ್ವಾಮಾ ರೀತಿಯಲ್ಲಿ ಮೊತ್ತೊಂದು ದಾಳಿಗೆ ಉಗ್ರರು ಸಂಚು ಮಾಡಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಏಳು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ (ಜೆಎಂ) ಕಾಶ್ಮೀರ ಕಣಿವೆಯಲ್ಲಿ ಮತ್ತು ಭಾರತದ ಏಳು ರಾಜ್ಯಗಳಲ್ಲಿ ಭಾರಿ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆಯ ತಿಳಿಸಿದೆ.

    ಈ ಮಾಹಿತಿಯ ಪ್ರಕಾರ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‍ಐ) ಭಯೋತ್ಪಾದಕ ಸಂಘಟನೆಗೆ ದಾಳಿ ನಡೆಸಲು ಸಹಾಯ ಮಾಡುತ್ತಿದೆ. 2019 ರ ಫೆಬ್ರವರಿಯ ಪುಲ್ವಾಮಾ ದಾಳಿಯ ಮಾದರಿಯಲ್ಲಿ ಸೇನೆ, ಪೊಲೀಸ್ ಮತ್ತು ಇತರ ಕಾನೂನು ಜಾರಿ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ವರದಿಯಾಗಿದೆ.

    ದೆಹಲಿ, ರಾಜಸ್ಥಾನ, ಪಂಜಾಬ್, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಹೆಚ್ಚಿನ ಎಚ್ಚರಿಕೆ ನೀಡಲಾಗಿದೆ. ಈ ರಾಜ್ಯಗಳಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ತನ್ನ ದುಷ್ಕೃತ್ಯದ ಯೋಜನೆಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

    ಇದ್ದರಿಂದ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ವಹಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಿರುವ ಕೇಂದ್ರ ಸರ್ಕಾರ ಆಗಸ್ಟ್ 15ರ ವರೆಗೆ ದೇಶದಲ್ಲಿ ಇರುವ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸುವಂತೆ ಎಚ್ಚರಿಕೆ ನೀಡಿದೆ. ಆಗಸ್ಟ್ 10 ರಿಂದ 20 ರವರೆಗೆ ಬೋರ್ಡಿಂಗ್ ಪಾಸ್ ಇರುವ ಪ್ರಯಾಣಿಕರನ್ನು ಮಾತ್ರ ನಿಲ್ದಾಣದ ಒಳಗೆ ಬಿಡಲಾಗುತ್ತದೆ. ಪ್ರಯಾಣಿಕರ ಜೊತೆ ಬರುವ ಇತರರ ಪ್ರವೇಶವನ್ನು ನಿರ್ಬಂಧ ಮಾಡಲಾಗುತ್ತದೆ.

    ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ರಾಜ್ಯವನ್ನಾಗಿ ಮಾಡಿದ್ದನ್ನು ಪಾಕಿಸ್ತಾನ ವಿರೋಧಿಸಿದ್ದು, ಭಾರತದ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಮುರಿದುಕೊಂಡಿದೆ ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸಿದೆ.

  • ಐವರು ಯೋಧರನ್ನು ಬಲಿ ಪಡೆದಿದ್ದ ಜೈಷ್ ಸಂಘಟನೆಯ ಇಬ್ಬರು ಉಗ್ರರ ಹತ್ಯೆ

    ಐವರು ಯೋಧರನ್ನು ಬಲಿ ಪಡೆದಿದ್ದ ಜೈಷ್ ಸಂಘಟನೆಯ ಇಬ್ಬರು ಉಗ್ರರ ಹತ್ಯೆ

    ಶ್ರೀನಗರ: ಭಾರತೀಯ ಸೇನೆ ಅನಂತ್‍ನಾಗ್‍ನ ಬಿಜ್‍ಬೆಹರಾ ಪ್ರದೇಶದಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಜೈಷ್-ಇ-ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರು ಹತರಾಗಿದ್ದಾರೆ.

    ಘಟನೆ ಕುರಿತು ಪೊಲೀಸ್ ವಕ್ತಾರರು ಮಾಹಿತಿ ನೀಡಿದ್ದು, ಜೈಷ್-ಇ-ಮೊಹಮ್ಮದ್ ಸಂಘಟನೆಯ ಫಯಾಜ್ ಪಂಝೂ ಹಾಗೂ ಆತನ ಸಹಚರ ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿ ವೇಳೆ ಹತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಪಂಝೂ ಜೈಷ್ ಸಂಘಟನೆಯ ಉನ್ನತ ಕಮಾಂಡರ್ ಆಗಿದ್ದು, ಪದೇ ಪದೆ ಸಿಆರ್‍ಪಿಎಫ್ ಯೋಧರ ಮೇಲೆ ದಾಳಿ ನಡೆಸುತ್ತಿದ್ದ. ಈ ಮೂಲಕ ಯೋಧರ ಮೇಲೆ ದಾಳಿ ನಡೆಸುವದನ್ನೇ ಕೆಲಸವನ್ನಾಗಿ ಮಾಡಿಕೊಂಡಿದ್ದ. ಜೂನ್ 12 ರಂದು ಅನಂತ್‍ನಾಗ್ ನಗರದ ಬಳಿ ಸಿಆರ್‍ಪಿಎಫ್ ಯೋಧರ ಮೇಲೆ ದಾಳಿ ನಡೆಸಿ 5 ಸಿಆರ್‍ಪಿಎಫ್ ಯೋಧರನ್ನು ಹತ್ಯೆಗೈದಿದ್ದ. ಅಲ್ಲದೆ, ಇದೇ ಸಂದರ್ಭದಲ್ಲಿ ಯೋಧ ಶೋ ಅರ್ಷದ್ ಖಾನ್ ಗಂಭೀರವಾಗಿ ಗಾಯಗೊಂಡಿದ್ದರು ಎಂದು ಮಾಹಿತಿ ನೀಡಿದ್ದಾರೆ.

    ಸೈನಿಕರ ಮೇಲೆ ಪದೆ ಪದೇ ದಾಳಿ ನಡೆಸುತ್ತಿದ್ದ ಈ ಇಬ್ಬರನ್ನು ಇಂದು ನಡೆದ ಎನ್‍ಕೌಂಟರ್‍ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

  • ಪಾಕ್‍ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ ಓರ್ವ ಸೈನಿಕ ಹುತಾತ್ಮ

    ಪಾಕ್‍ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ ಓರ್ವ ಸೈನಿಕ ಹುತಾತ್ಮ

    ಶ್ರೀನಗರ: ಪಾಕಿಸ್ತಾನ ಮತ್ತೆ ತನ್ನ ಕೋತಿ ಬುದ್ಧಿ ತೋರಿಸಿದ್ದು, ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಗಡಿ ಭದ್ರತಾ ರೇಖೆ (ಎಲ್‍ಓಸಿ) ಬಳಿ ಪಾಕಿಸ್ತಾನ ಹಾಗೂ ಭಾರತ ಸೈನಿಕರ ಮಧ್ಯೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ.

    ಹುತಾತ್ಮ ಯೋಧರನ್ನು ರಾಷ್ಟ್ರೀಯ ರೈಫಲ್ಸ್‍ನ ಲ್ಯಾನ್ಸ್ ನಾಯಕ್ ರಾಜೇಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಕುಪ್ವಾರಾ ಜಿಲ್ಲೆಯ ಮಚಿಲ್ ಸೆಕ್ಟರ್‍ನಲ್ಲಿ ಎಲ್‍ಓಸಿ ಬಳಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೈನಿಕರು ಭಾರತದ ಗಡಿಯ ಹೊರ ಠಾಣೆಗಳನ್ನು ಗುರಿಯಾಗಿಸಿಕೊಂಡು ಭಾರೀ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ರಾಜೇಂದರ್ ಸಿಂಗ್ ಹುತಾತ್ಮರಾಗಿದ್ದಾರೆ.

    ಪಾಕಿಸ್ತಾನ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಭಾರತವೂ ಸಹ ತೀವ್ರವಾಗಿ ಪ್ರತೀಕಾರ ತೀರಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಪಾಕಿಸ್ತಾನ ಸೈನಿಕರು ನಡೆಸಿದ ಗುಂಡಿನ ಚಕಮಕಿ ವೇಳೆ ರಾಷ್ಟ್ರೀಯ ರೈಫಲ್ಸ್‍ನ ಲ್ಯಾನ್ಸ್ ನಾಯಕ್ ರಾಜೇಂದರ್ ಸಿಂಗ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಹತ್ತಿರದ ವೈದ್ಯಕೀಯ ಘಟಕಕ್ಕೆ ಸ್ಥಳಾಂತರಿಸಲಾಯಿತು. ಗಂಭೀರ ಗಾಯವಾಗಿದ್ದರಿಂದ ಅವರು ಹುತಾತ್ಮರಾದರು ಎಂದು ಸೇನೆಯ ಮೂಲಗಳು ತಿಳಿಸಿವೆ.

    ಘಟನೆ ಕುರಿತು ಸೇನೆಯು ಅಧಿಕೃತವಾಗಿ ದೃಢಪಡಿಸಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ರಾಷ್ಟ್ರೀಯ ರೈಫಲ್ ಸೈನಿಕರು ಎಲ್‍ಓಸಿ ಗಡಿಯ ಮೇಲೆ ಜಾಗೃತೆ ವಹಿಸಿದ್ದರು ಎಂದು ತಿಳಿದು ಬಂದಿದೆ.

    ಇಂದು ಬೆಳಗ್ಗೆ ಸಹ ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ.

  • ದೇಶದೊಳಗಿನ ಭಯೋತ್ಪಾದನೆಯನ್ನು ಮೋದಿ ನಿಲ್ಲಿಸಿದ್ದಾರೆ – ಪ್ರಮೋದ್ ಮುತಾಲಿಕ್

    ದೇಶದೊಳಗಿನ ಭಯೋತ್ಪಾದನೆಯನ್ನು ಮೋದಿ ನಿಲ್ಲಿಸಿದ್ದಾರೆ – ಪ್ರಮೋದ್ ಮುತಾಲಿಕ್

    ಧಾರವಾಡ: ದೇಶದೊಳಗಿನ ಭಯೋತ್ಪಾದನೆಯನ್ನು ಮೋದಿ ನಿಲ್ಲಿಸಿದ್ದಾರೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದನೆ ಅನ್ನೋದು ಈಗ ಜಮ್ಮ-ಕಾಶ್ಮೀರಕ್ಕೆ ಮಾತ್ರ ಸಿಮೀತವಾಗಿದೆ. ಅದನ್ನು ಈ ಐದು ವರ್ಷದ ಅವಧಿಯಲ್ಲಿ ಮೋದಿ ನಿಶ್ಚಿತವಾಗಿ ಅಲ್ಲಿಯೂ ನಿಲ್ಲಿಸುತ್ತಾರೆ ಎಂದು ಹೇಳಿದರು.

    ಪಾಕ್ ಪ್ರಧಾನಿ ಇಮ್ರಾನ್ ಖಾನ್ 40 ಸಾವಿರ ಭಯೋತ್ಪಾದಕರು ಪಾಕಿಸ್ತಾನದಲ್ಲಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಅವರನ್ನು ಪಾಕಿಸ್ತಾನ ನಾಶ ಮಾಡಬೇಕು. ಪಾಕ್ ಭಯೋತ್ಪಾದಕ ರಾಷ್ಟ್ರ ಎಂದು ಘೋಷಣೆ ಮಾಡಲು ಇಮ್ರಾನ್ ಖಾನ್ ಹೇಳಿಕೆಯೇ ಸಾಕು. 40 ಸಾವಿರ ಭಯೋತ್ಪಾದಕರು ಅಂದರೆ ಇಡೀ ಜಗತ್ತು ನಡಗುವಂತಹ ವಿಷಯ ಇದು. ಭಯೋತ್ಪಾದಕರನ್ನು ನಾಶ ಮಾಡಲು ಭಾರತದ ಸಹಾಯವನ್ನು ಪಾಕ್ ಪಡೆದುಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಕರ್ನಾಟಕ ರಾಜಕಾರಣ ವಿಚಾರವಾಗಿ ಮಾತನಾಡಿದ ಮುತಾಲಿಕ್, ರಾಜ್ಯದಲ್ಲಿ ರಾಜಕೀಯ ಅಸಭ್ಯ, ಅಶ್ಲೀಲ ಮತ್ತು ಅಸಹ್ಯವಾಗಿ ನಡೆಯುತ್ತಿದೆ. ಅದು ಯಾವುದೇ ಪಕ್ಷ ಇರಬಹುದು ಜನ ಛಿ ಥೂ ಅಂತಾ ಇದ್ದಾರೆ. ಈಗ ನಡೆಯುತ್ತಿರುವ ಬೆಳವಣಿಗೆ ಸರಿಯಲ್ಲ. ಇಂತಹ ಸಂದರ್ಭದಲ್ಲಿ ಸಿಎಂ ಆಗುತ್ತಿರುವ ಯಡಿಯೂರಪ್ಪನವರಿಗೆ ಅಭಿನಂದನೆ ಹೇಳುತ್ತೇನೆ ಎಂದು ಹೇಳಿದರು.

  • ಉಗ್ರರು ಭ್ರಷ್ಟಾಚಾರ ಮಾಡುವ ರಾಜಕಾರಣಿಗಳನ್ನು ಕೊಲ್ಲಲಿ: ಜಮ್ಮು ಕಾಶ್ಮೀರ ರಾಜ್ಯಪಾಲ

    ಉಗ್ರರು ಭ್ರಷ್ಟಾಚಾರ ಮಾಡುವ ರಾಜಕಾರಣಿಗಳನ್ನು ಕೊಲ್ಲಲಿ: ಜಮ್ಮು ಕಾಶ್ಮೀರ ರಾಜ್ಯಪಾಲ

    ಶ್ರೀನಗರ: ಉಗ್ರರು ಮುಗ್ದ ಜನರು ಹಾಗೂ ಭದ್ರತಾ ಸಿಬ್ಬಂದಿಯನ್ನು ಕೊಲ್ಲುವ ಬದಲು ಸಂಪತ್ತನ್ನು ಲೂಟಿ ಮಾಡಿದ ಭ್ರಷ್ಟ ರಾಜಕಾರಣಿಗಳನ್ನು ಕೊಲ್ಲಲಿ ಎಂದು ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಭಾರೀ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಕಾರ್ಗಿಲ್‍ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಗನ್ ಹಿಡಿದ ಉಗ್ರರು ತಮ್ಮ ಜನರು ಹಾಗೂ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರನ್ನು ಕೊಲ್ಲುತ್ತಿದ್ದಾರೆ. ಇವರನ್ನು ಯಾಕೆ ಕೊಲ್ಲುತ್ತೀರಿ. ಕಾಶ್ಮೀರದ ಸಂಪತ್ತನ್ನು ಲೂಟಿ ಮಾಡಿದ ಭ್ರಷ್ಟ ರಾಜಕಾರಣಿಗಳನ್ನು ಕೊಲ್ಲಿ. ಲೂಟಿ ಮಾಡಿದವರನ್ನು ಎಂದಾದರೂ ಕೊಲೆ ಮಾಡಿದ್ದೀರಾ ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ.

    ತಮ್ಮ ಹೇಳಿಕೆ ಕುರಿತು ವಿವಾದ ಸೃಷ್ಟಿಯಾಗುತ್ತಿದ್ದಂತೆ ಈ ಕುರಿತು ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಇಂದು ಸ್ಪಷ್ಟನೆ ನೀಡಿದ್ದು, ಭ್ರಷ್ಟಾಚಾರದಿಂದ ಬೇಸತ್ತು ಆಕ್ರೋಶದಲ್ಲಿ ಆ ರೀತಿಯ ಹೇಳಿಕೆ ನೀಡಿದ್ದೇನೆ. ಒಬ್ಬ ರಾಜ್ಯಪಾಲನಾಗಿ ಆ ರೀತಿಯ ಹೇಳಿಕೆ ನೀಡಿಲ್ಲ. ನನ್ನ ವೈಯಕ್ತಿಕ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ. ಹಲವು ರಾಜಕೀಯ ನಾಯಕರು ಹಾಗೂ ಉನ್ನತ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಭಾನುವಾರ ನಾನು ಮಾಡಿದ ಭಾಷಣವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಅಲ್ಲದೆ, ಕಾಶ್ಮೀರದ ಬೃಹತ್ ಕುಟುಂಬಗಳು ಸಾರ್ವಜನಿಕರ ಹಣವನ್ನು ಲೂಟಿ ಮಾಡಿರುವ ಮೂಲಕ ಪ್ರಪಂಚದಾದ್ಯಂತ ಆಸ್ತಿ ಸಂಪಾದಿಸಿದ್ದಾರೆ ಎಂದು ಕಾಶ್ಮೀರದ ರಾಜಕೀಯ ಮುಖಂಡರ ವಿರುದ್ಧ ರಾಜ್ಯಪಾಲರು ಕಿಡಿಕಾರಿದ್ದಾರೆ.

  • ಭಾರತ ಸೈನ್ಯ, ಆರ್ಥಿಕತೆಯನ್ನು ಧ್ವಂಸಗೊಳಿಸಿ ರಕ್ತಪಾತ ನಡೆಸಿ – ಅಲ್ ಖೈದಾ ಮುಖ್ಯಸ್ಥ

    ಭಾರತ ಸೈನ್ಯ, ಆರ್ಥಿಕತೆಯನ್ನು ಧ್ವಂಸಗೊಳಿಸಿ ರಕ್ತಪಾತ ನಡೆಸಿ – ಅಲ್ ಖೈದಾ ಮುಖ್ಯಸ್ಥ

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿನ ಭಾರತೀಯ ಸೇನೆ ಮತ್ತು ಸರ್ಕಾರದ ಮೇಲೆ ನಿರಂತರವಾಗಿ ಪ್ರಹಾರ ನಡೆಸಿ ರಕ್ತಪಾತ ಮಾಡಿ ಎಂದು ಕಾಶ್ಮೀರದ ಮುಜಾಹಿದೀನ್‍ಗಳಿಗೆ ಅಲ್-ಖೈದಾ ಮುಖ್ಯಸ್ಥ ಕರೆ ನೀಡಿದ್ದಾನೆ.

    ಅಲ್-ಖೈದಾದ ಮಾಧ್ಯಮ ಘಟಕ ಬಿಡುಗಡೆ ಮಾಡಿರುವ ‘ಡೋಂಟ್ ಫರ್ಗೆಟ್ ಕಾಶ್ಮೀರ್’ ಎಂಬ 14 ನಿಮಿಷಗಳ ವಿಡಿಯೊದಲ್ಲಿ ಮುಖ್ಯಸ್ಥ ಆಯ್ಮಾನ್-ಅಲ್-ಜವಾಹಿರಿ ಭಾರತದ ಆರ್ಥಿಕತೆಗೆ ಧಕ್ಕೆಯಾಗುವಂತೆ ದಾಳಿ ಮಾಡಿ ಎಂದು ಹೇಳಿದ್ದಾನೆ.

    ಈ ಹಂತದಲ್ಲಿ ಕಾಶ್ಮೀರದಲ್ಲಿರುವ ಮುಜಾಹಿದೀನ್(ಹೋರಾಟಗಾರರು)ಗಳು ಭಾರತೀಯ ಸೇನೆ ಮತ್ತು ಸರ್ಕಾರದ ಮೇಲೆ ಪ್ರಬಲ ಪ್ರಹಾರ ಮಾಡುವತ್ತ ಗಮನ ಹರಿಸಬೇಕು. ಇದರಿಂದ ಭಾರತೀಯ ಆರ್ಥಿಕತೆಗೆ ಧಕ್ಕೆಯಾಗಬೇಕು. ಭಾರತ ಸರ್ಕಾರಕ್ಕೆ ಅಪಾರ ಪ್ರಮಾಣದಲ್ಲಿ ಮಾನವಸಂಪನ್ಮೂಲ ಮತ್ತು ಉಪಕರಣಗಳು ನಷ್ಟವಾಗಬೇಕು ಎಂದು ಜವಾಹಿರಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾನೆ.

    ಕಾಶ್ಮೀರದಲ್ಲಿ ನಡೆಯುತ್ತಿರುವುದು ಪ್ರತ್ಯೇಕ ಹೋರಾಟ ಮಾತ್ರವಲ್ಲ. ಅದು ವಿಶ್ವಾದ್ಯಂತ ವ್ಯಾಪಕ ಶಕ್ತಿಗಳ ವಿರುದ್ಧ ಮುಸ್ಲಿಂ ಸಮುದಾಯ ನಡೆಸುತ್ತಿರುವ ಜಿಹಾದ್(ಧರ್ಮ ಹೋರಾಟ) ಒಂದು ಭಾಗವಾಗಿದೆ. ಈ ಸಂದೇಶವನ್ನು ಭಾರತದಲ್ಲಿರುವ ಮುಸ್ಲಿಂ ಸಮುದಾಯಗಳಿಗೆ ಪ್ರಸಾರ ಮಾಡಿ ಎಂದು ಅಲ್-ಖೈದಾ ಮುಖ್ಯಸ್ಥ ಇಸ್ಲಾಮ್ ವಿದ್ವಾಂಸರಿಗೆ ಕರೆ ನೀಡಿದ್ದಾರೆ.

    ಕಾಶ್ಮೀರ, ಫಿಲಿಪೈನ್ಸ್, ಚೆಚನ್ಯಾ, ಮಧ್ಯ ಏಷ್ಯಾ, ಇರಾಕ್, ಸಿರಿಯಾ, ಅರೇಬಿಯಾ, ಸೊಮಾಲಿಯಾ, ತುರ್ಕಿಸ್ತಾನ್ ಭಾಗಗಳಲ್ಲಿ ಜಿಹಾದ್‍ಗೆ ಬೆಂಬಲ ನೀಡುವುದು ಎಲ್ಲ ಮುಸ್ಲಿಮರ ಕರ್ತವ್ಯ. ಮುಸ್ಲಿಮರ ನಾಡುಗಳಿಂದ ಮುಸ್ಲಿಮೇತರ ಆಡಳಿತ ತೊಲಗಿಸುವಷ್ಟು ಶಕ್ತಿ ಸಿಗುವವರೆಗೂ ಮುಸ್ಲಿಮರು ಮುಜಾಹಿದೀನ್ ಗಳ ಹೋರಾಟಕ್ಕೆ ಬೆಂಬಲ ನೀಡಬೇಕು ಎಂಬ ಸಂದೇಶವನ್ನು ನೀವೆಲ್ಲಾ ರವಾನಿಸಬೇಕು ಎಂದು ಜವಾಹಿರಿ ಆದೇಶಿಸಿದ್ದಾನೆ.

    ಅಮೆರಿಕದ ಕೈಗೊಂಬೆ: ಇದೇ ವೇಳೆ, ಪಾಕಿಸ್ತಾನೀ ಸೇನೆ ಮತ್ತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಅಮೆರಿಕದ ಕೈಗೊಂಬೆ ಎಂದು ಜರಿದಿದ್ದಾನೆ. ಹಾಗೆಯೇ, ತಾಲಿಬಾನ್ ಉಗ್ರ ಸಂಘಟನೆಯಂತೆಯೇ ಪಾಕಿಸ್ತಾನೀ ಸರ್ಕಾರ ಮತ್ತು ಸೇನೆ ಕೆಲಸ ಮಾಡುತ್ತಿದೆ ಎಂದೂ ಜವಾಹಿರಿ ಆರೋಪಿಸಿದ್ದಾನೆ. ಅಮೆರಿಕದ ಗುಪ್ತಚರ ಸಂಸ್ಥೆಗಳು ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಬಿಕ್ಕಟ್ಟನ್ನು ನಿರ್ವಹಿಸುತ್ತಿವೆ. ಅರಬ್‍ನ ಮುಜಾಹಿದೀನ್ ಪಡೆಯು ಕಾಶ್ಮೀರಕ್ಕೆ ಬರುವುದನ್ನು ತಡೆದಿದ್ದು, ಪಾಕಿಸ್ತಾನವೇ ಎಂದು ಅಲ್-ಖೈದಾ ಮುಖ್ಯಸ್ಥ ಕಿಡಿಕಾರಿದ್ದಾರೆ. 2001ರಲ್ಲಿ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ ದಾಳಿಯ ನಂತರ ಪಾಕಿಸ್ತಾನ ಡಬಲ್ ಗೇಮ್ ಆಡಿದೆ ಎಂದು ಜವಾಹಿರಿ ದೂರಿದ್ದಾನೆ.

    ಕಾಶ್ಮೀರದಲ್ಲಿ ಮುಜಾಹಿದೀನ್‍ಗಳು ಭಾರತೀಯ ಸೇನೆ ಮತ್ತು ಸರ್ಕಾರದ ಆಸ್ತಿಗಳ ಮೇಲಷ್ಟೇ ದಾಳಿ ಮಾಡಬೇಕೇ ಹೊರತು ಮುಸ್ಲಿಮರಿಗೆ ಸೇರಿದ ಮಸೀದಿ, ಮಾರುಕಟ್ಟೆ ಮೊದಲಾದ ಸ್ಥಳಗಳನ್ನು ಗುರಿಯಾಗಿಸಬಾರದು ಎಂದು ಮನವಿ ಮಾಡಿದ್ದಾನೆ.

    ಕಾಶ್ಮೀರದಲ್ಲಿ ಹೊರಗಿನಿಂದ ಒಳನಸುಳುವವರ ಪ್ರಮಾಣದಲ್ಲಿ ಶೇ.43ರಷ್ಟು ಇಳಿಕೆಯಾಗಿದೆ ಎಂದು ಕೆಲ ದಿನಗಳ ಹಿಂದೆ ಗೃಹ ಸಚಿವಾಲಯ ಸಂಸತ್‍ನಲ್ಲಿ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲೇ ಅಲ್-ಖೈದಾ ಸಂಘಟನೆ ಈ ವಿಡಿಯೋ ಬಿಡುಗಡೆ ಮಾಡಿದೆ.

  • ಉಗ್ರರ ದಾಳಿಗೆ ಬಲಿಯಾದ ಪೊಲೀಸ್ ಮನೆಗೆ ಅಮಿತ್ ಶಾ ಭೇಟಿ

    ಉಗ್ರರ ದಾಳಿಗೆ ಬಲಿಯಾದ ಪೊಲೀಸ್ ಮನೆಗೆ ಅಮಿತ್ ಶಾ ಭೇಟಿ

    ಶ್ರೀನಗರ: ಜಮ್ಮ ಕಾಶ್ಮೀರದ ಅನಂತ್‍ನಾಗ್‍ನಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಇನ್ಸ್ ಪೆಕ್ಟರ್ ಮನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

    ಜೂನ್ 21 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಜಮ್ಮು ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ಇನ್ಸ್ ಪೆಕ್ಟರ್ ಅರ್ಷದ್ ಅಹ್ಮದ್ ಖಾನ್ ಎಂಬುವವರು ಮೃತಪಟ್ಟಿದ್ದರು. ಇಂದು ಗೃಹ ಮಂತ್ರಿಯಾದ ಮೇಲೆ ಮೊದಲ ಬಾರಿಗೆ ಜಮ್ಮು ಕಾಶ್ಮೀರಕ್ಕೆ ಭೇಡಿ ನೀಡಿದ ಅಮಿತ್ ಅಹ್ಮದ್ ಖಾನ್ ಕುಟುಂಬವನ್ನು ಬಾಲ್ ಗಾರ್ಡನ್ ಪ್ರದೇಶದಲ್ಲಿರುವ ಅವರ ಮನೆಗೆ ಹೋಗಿ ಭೇಟಿ ಮಾಡಿದ್ದಾರೆ.

    37 ವರ್ಷದ ಅಹ್ಮದ್ ಖಾನ್ ಅವರಿಗೆ ನಾಲ್ಕು ಮತ್ತು ಒಂದು ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಜೂನ್ 21 ರಂದು ಜೈಶ್-ಇ- ಮೊಹಮ್ಮದ್ ಸಂಘಟನೆಯ ಉಗ್ರರು ಗಸ್ತು ತಿರುಗುತ್ತಿದ್ದ ಭದ್ರತಾ ಪಡೆಗಳ ಮೇಲೆ ದಾಳಿಮಾಡಿದ್ದರು. ಈ ವೇಳೆ ಐವರು ಯೋಧರು ಮೃತ ಪಟ್ಟಿದ್ದರು. ಈ ದಾಳಿಯಲ್ಲಿ ಗಭೀರವಾಗಿ ಗಾಯಗೊಂಡಿದ್ದ ಅರ್ಷದ್ ಅಹ್ಮದ್ ಖಾನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆಂಬುಲೆನ್ಸ್ ಮೂಲಕ ದೆಹಲಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

     

    ಉಗ್ರರು ದಾಳಿ ತಿಳಿಯುತ್ತಿದ್ದಂತೆ ಅನಂತ್‍ನಾಗ್‍ನ ಸದ್ದಾರ್ ಪೊಲೀಸ್ ಠಾಣೆಯಲ್ಲಿ ಇದ್ದ ಖಾನ್ ತಕ್ಷಣ ತಮ್ಮ ವಾಹನದಲ್ಲಿ ಘಟನಾ ಸ್ಥಳವನ್ನು ತಲುಪಿದ್ದಾರೆ. ಅವರು ತಮ್ಮ ವಾಹನದಿಂದ ಕೆಳಗೆ ಇಳಿದ ತಕ್ಷಣ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಖಾನ್ ಅವರು ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.