Tag: militant

  • ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು?

    ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು?

    – ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

    ಕಾರವಾರ: ದೇಶದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು ಬಿದ್ದಿದೆ ಎಂಬ ಭಯಾನಕ ಮಾಹಿತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಐಸಿಸ್ ಮುಖವಾಣಿ ಪತ್ರಿಕೆ ‘the VOICE OF HIND’ನಲ್ಲಿ ಮುರುಡೇಶ್ವರದ ಶಿವನ ಪ್ರತಿಮೆಯ ಫೋಟೋ ಹಾಕಿದ್ದು, ಅದರ ಮೇಲೆ Its time to Break False Gods’ ಎಂದು ಬರೆದಿರುವ ಫೋಟೋ ಪ್ರಕಟವಾಗಿದೆ ಎಂದು ಅಂಶುಲ್ ಸಕ್ಸೇನಾ ಎಂಬ ಹೆಸರಿನ ಫೇಸ್ ಬುಕ್ ಪೇಜಿನಿಂದ ಪೋಸ್ಟ್ ಮಾಡಲಾಗಿದೆ.

    ಫೋಟೋದಲ್ಲಿ ಶಿವನ ಪ್ರತಿಮೆಯನ್ನು ಅರ್ಧಕ್ಕೆ ಕತ್ತರಿಸಿ, ಅದರ ತುತ್ತ ತುದಿಗೆ ಐಸಿಸ್ ರೀತಿಯ ಧ್ವಜ ಹಾರಾಡುವಂತೆ ಚಿತ್ರಿಸಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಈ ಕೂಡಲೇ ಸುರಕ್ಷಾ ಕ್ರಮ ಕೈಗೊಳ್ಳಬೇಕು ಎಂದು ಅಂಶುಲ್ ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ?: ಕ್ಷಮೆ ಕೇಳಿದ ಹಂಸಲೇಖ

    ಸದ್ಯ ಈ ಫೋಟೋ ಮತ್ತು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರ ಸತ್ಯಾಸತ್ಯತೆ ಸಂಬಂಧಿಸಿದ ಇಲಾಖೆ ಕ್ರಮವಹಿಸಬೇಕು ಮತ್ತು ಇಂತಹ ದುಷ್ಕೃತ್ಯಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಕೊಂದ ಉಗ್ರ ಜಮ್ಮುವಿನಲ್ಲಿ ಅರೆಸ್ಟ್

    ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಕೊಂದ ಉಗ್ರ ಜಮ್ಮುವಿನಲ್ಲಿ ಅರೆಸ್ಟ್

    ಶ್ರೀನಗರ: ಆರ್‌ಎಸ್‌ಎಸ್ ಕಾರ್ಯಕರ್ತರ ಹತ್ಯೆಯಲ್ಲಿ ಭಾಗಿಯಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನನ್ನು ಮತ್ತು ಆತನ ಸಹಚರನನ್ನು ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಬಂಧಿಸಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.

    ಬಂಧಿತ ಉಗ್ರನನ್ನು ರುಸ್ತಮ್ ಅಲಿ ಎಂದು ಗುರುತಿಸಲಾಗಿದೆ. ಕಳೆದ ವರ್ಷ ಏಪ್ರಿಲ್‍ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಚಂದರ್ ಕಾಂತ್ ಶರ್ಮಾ ಮತ್ತು ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಎನ್‍ಐಎ ಸಲ್ಲಿಸಿದ್ದ ಚಾರ್ಜ್ ಶೀಟ್‍ನಲ್ಲಿ ಆತನ ಹೆಸರನ್ನು ಉಲ್ಲೇಖಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಮಂಗಳವಾರ ರಾತ್ರಿ ಉಗ್ರನನ್ನು ಕಿಶ್ತ್ವಾರ್ ಜಿಲ್ಲೆಯ ಹಂಜಲಾ ಪ್ರದೇಶದಿಂದ ಎನ್‍ಐಎ ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಪೊಲೀಸರು ಕಳೆದ ವರ್ಷ ಸೆಪ್ಟೆಂಬರ್ 23ರಂದು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರಾದ ನಿಸ್ಸಾರ್ ಅಹ್ಮದ್ ಶೇಖ್, ನಿಷಾದ್ ಅಹ್ಮದ್ ಮತ್ತು ಆಜಾದ್ ಹುಸೇನ್ ನನ್ನು ಬಂಧಿಸಿದ್ದರು. ಈ ಮೂವರ ತನಿಖೆ ಮಾಡಿ ಇವರು ನೀಡಿದ ಮಾಹಿತಿ ಮೇರೆಗೆ ಈಗ ರುಸ್ತಮ್ ಅಲಿಯನ್ನು ಎನ್‍ಐಎ ಬಂಧಿಸಿದೆ.

    2018ರಲ್ಲಿ ಇದೇ ಕಿಶ್ತ್ವಾರ್ ಪ್ರದೇಶದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಅನಿಲ್ ಪರಿಹಾರ್ ಅವರನ್ನು ಕೊಲೆ ಮಾಡಲಾಗಿತ್ತು. ನಂತರ 2019ರ ಏಪ್ರಿಲ್‍ನಲ್ಲಿ ಚಂದರ್ ಕಾಂತ್ ಶರ್ಮಾ ಮತ್ತು ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಈ ವಿಚಾರವಾಗಿ ಕಿಶ್ತ್ವಾರ್ ನಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈ ಎರಡು ಪ್ರಕರಣಗಳು ಕಿಶ್ತ್ವಾರ್ ಜಿಲ್ಲೆಯಲ್ಲಿ ಉಗ್ರಗಾಮಿತ್ವವನ್ನು ಪುನರುಜ್ಜೀವನಗೊಳಿಸಿತ್ತು.

  • ಜಮ್ಮು, ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – ಓರ್ವ ಉಗ್ರನನ್ನು ಸದೆಬಡಿದ ಸೇನೆ

    ಜಮ್ಮು, ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – ಓರ್ವ ಉಗ್ರನನ್ನು ಸದೆಬಡಿದ ಸೇನೆ

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ಜಂಟಿ ಕಾರ್ಯಚರಣೆ ವೇಳೆ ನಡೆದ ಎನ್‍ಕೌಂಟರ್ ನಲ್ಲಿ ಹಿಜ್ಬುಲ್‍ನ ಓರ್ವ ಉಗ್ರನನ್ನು ಸದೆಬಡಿಯಲಾಗಿದೆ.

    ಆವಂತಿಪುರದಲ್ಲಿ ಭಾರತೀಯ ಸೇನೆ, ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಜಮ್ಮು ಕಾಶ್ಮೀರದ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಎನ್‍ಕೌಂಟರ್ ಮಾಡಲಾಗಿದೆ. ಎನ್‍ಕೌಂಟರ್ ನಲ್ಲಿ ಹತ್ಯೆಯಾದ ಉಗ್ರನನ್ನು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ರಿಯಾಜ್ ನಾಯ್ಕು ಎಂದು ಗುರುತಿಸಲಾಗಿದೆ.

    ಪುಲ್ವಾಮಾದ ಶರ್ಸಾಲಿ ಗ್ರಾಮದಲ್ಲಿ ಇನ್ನಷ್ಟು ಉಗ್ರರು ಅಡಗಿರುವ ಮಾಹಿತಿ ಲಭ್ಯವಾದ ಹಿನ್ನೆಲೆ ಸೇನಾ ಪಡೆ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದ ಸುತ್ತಮುತ್ತಲಿನ 12ರಿಂದ 15 ಮನೆಗಳ ಜನರನ್ನು ಬೇರೆ ಜಾಗಕ್ಕೆ ಸ್ಥಳಾಂತರ ಮಾಡಲಾಗಿದ್ದು, ಉಗ್ರನನ್ನು ಸದೆಬಡಿದ ಸ್ಥಳದಲ್ಲಿ ಒಂದು ಎಕೆ-56 ರೈಫಲ್ ಅನ್ನು ವಶಕ್ಕೆ ಪಡೆಯಲಾಗಿದೆ.

    ಇಂದು ಮುಂಜಾನೆ ವೇಳೆಗೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಸೇನಾಪಡೆ ಕೂಡ ಪ್ರತಿದಾಳಿ ನಡೆಸಿದೆ. ಈ ವೇಳೆ ಗುಂಡೇಟಿಗೆ ಉಗ್ರ ಸಾವನ್ನಪ್ಪಿದ್ದಾನೆ.

    2 ದಿನಗಳ ಹಿಂದೆ ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ನಡೆಸಿದ್ದ ದಾಳಿಯಿಂದ ಮೂವರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ಭಾನುವಾರ ಹಂದ್ವಾರದಲ್ಲಿ ನಡೆದ ದಾಳಿಯಲ್ಲಿ ಐವರು ಭದ್ರತಾ ಪಡೆಯ ಸಿಬ್ಬಂದಿ ಉಗ್ರರ ಗುಂಡೇಟಿಗೆ ಹುತಾತ್ಮರಾಗಿದ್ದರು.

  • ಗಡಿಯಲ್ಲಿ ಉಗ್ರರ ಜೊತೆ ಹೋರಾಡಿ ವೀರಮರಣವನ್ನಪ್ಪಿದ ಬೆಳಗಾವಿ ಯೋಧ

    ಗಡಿಯಲ್ಲಿ ಉಗ್ರರ ಜೊತೆ ಹೋರಾಡಿ ವೀರಮರಣವನ್ನಪ್ಪಿದ ಬೆಳಗಾವಿ ಯೋಧ

    ಬೆಳಗಾವಿ: ದೇಶದ ಗಡಿಯಲ್ಲಿ ಅಪರೇಷನ್ ಟೆರರ್ ಕಾರ್ಯಾಚರಣೆಯಲ್ಲಿ ಉಗ್ರರ ವಿರುದ್ಧ ಹೋರಾಡಿ ಬೆಳಗಾವಿ ಯೋಧಯೊಬ್ಬರು ವೀರಮರಣವನ್ನಪ್ಪಿದ್ದಾರೆ.

    ಬೆಳಗಾವಿಯ ಉಚಗಾಂಗ ಮೂಲದ ಯೋಧ ರಾಹುಲ್ ಸುಳಗೇಕರ್ ಹುತಾತ್ಮರಾಗಿದ್ದಾರೆ. ಗಡಿಯಲ್ಲಿ ಒಂದೆಡೆ ಪಾಕಿಸ್ತಾನದ ಪ್ರಚೋದಿತ ಶೆಲ್ ದಾಳಿ, ಇನ್ನೊಂದೆಡೆ ಗಡಿಯಲ್ಲಿ ಉಗ್ರರ ನುಸುಳುವಿಕೆ ತಡೆ ಕಾರ್ಯಚರಣೆ ನಡೆಯುತ್ತಿತ್ತು. ಈ ಹಿನ್ನೆಲೆ ಕಳೆದ ರಾತ್ರಿ ಜಮ್ಮುವಿನ ಪೂಂಚ್ ವಲಯದಲ್ಲಿ ನಡೆದ ಅಪರೇಷನ್ ಟೆರರ್ ಕಾರ್ಯಾಚರಣೆಯಲ್ಲಿ ರಾಹುಲ್ ಅವರು ಭಾಗಿಯಾಗಿದ್ದರು.

    ಈ ವೇಳೆ ಉಗ್ರರು ಹಾಗೂ ಭಾರತೀಯ ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ದಾಳಿ ಪ್ರತಿದಾಳಿಯಲ್ಲಿ ಉಗ್ರರ ವಿರುದ್ಧ ಹೋರಾಡುವಾಗ ರಾಹುಲ್ ಅವರು ವೀರಮರಣವನ್ನಪ್ಪಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ರಾಹುಲ್ ಅವರು ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸುತ್ತಿದ್ದರು.

    ನಾಳೆ ರಾಹುಲ್ ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ತರಲಾಗುತ್ತಿದ್ದು, ಸಕಲ ಸರ್ಕಾರಿ ಗೌರವ ಹಾಗೂ ಸೇನಾ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ ನೆರವೇರಲಿದೆ.

  • ಭಾರತದ ಬಾಂಬ್ ದಾಳಿಗೆ ಜೈಷ್ ಉಗ್ರರ ಅತಿ ದೊಡ್ಡ ಕ್ಯಾಂಪ್ ಧ್ವಂಸ

    ಭಾರತದ ಬಾಂಬ್ ದಾಳಿಗೆ ಜೈಷ್ ಉಗ್ರರ ಅತಿ ದೊಡ್ಡ ಕ್ಯಾಂಪ್ ಧ್ವಂಸ

    ನವದೆಹಲಿ: ಭಾರತದ ವಾಯುಸೇನೆ ಜೈಷ್ ಸಂಘಟನೆಯ ಅತಿ ದೊಡ್ಡ ನೆಲೆಯ ಮೇಲೆ ಬಾಂಬ್ ದಾಳಿ ನಡೆಸಿ ಧ್ವಂಸ ಮಾಡಿದೆ.

    ಗಡಿನಿಯಂತ್ರಣ ರೇಖೆಯನ್ನು ದಾಟಿ ನಡೆದ ಏರ್ ಸ್ಟ್ರೈಕ್ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಜಯ್ ಗೋಖಲೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ಗುರಿಯಿದ್ದ ಪ್ರದೇಶಗಳು ಜೈಷ್ ಉಗ್ರರ ಕ್ಯಾಂಪ್ ಆಗಿತ್ತು. ಹಲವು ಉಗ್ರರು, ತರಬೇತಿದಾರರು ಮತ್ತು ಕಮಾಂಡರ್ ಗಳು ನಮ್ಮ ದಾಳಿಯಲ್ಲಿ ಹತ್ಯೆಯಾಗಿದ್ದಾರೆ. ದಾಳಿ ನಡೆದ ಸ್ಥಳಗಳು ಅರಣ್ಯ ಪ್ರದೇಶದಲ್ಲಿದ್ದು ಯಾವುದೇ ಜನರಿಗೆ ಹಾನಿಯಾಗಿಲ್ಲ ಎಂದು ತಿಳಿಸಿದರು.

    ಬಾಲಕೋಟ್ ಉಗ್ರರ ನೆಲೆಯನ್ನು ಮೌಲಾನ ಯೂಸೂಫ್ ಅಜರ್ ಅಲಿಯಾಸ್ ಉಸ್ತಾದ್ ನೋಡಿಕೊಳ್ಳುತ್ತಿದ್ದ. ಈತ ಜೈಷ್ ಮುಖ್ಯಸ್ಥ ಮಸೂದ್ ಅಜರ್ ಸಹೋದರನಾಗಿದ್ದಾನೆ ಎಂದು ಗೋಖಲೆ ಮಾಹಿತಿ ನೀಡಿದರು. ಬಾಲಕೋಟ್ ಜೈಷ್ ಸಂಘಟನೆಯ ಅತಿ ದೊಡ್ಡ ಕ್ಯಾಂಪ್ ಆಗಿತ್ತು ಎನ್ನುವ ಮಾಹಿತಿ ನೀಡಿದರು.

    ಉಗ್ರರ ಬಗ್ಗೆ ಭಾರತ ಹಲವು ಬಾರಿ ಮಾಹಿತಿ ನೀಡಿದರೂ ಪಾಕಿಸ್ತಾನ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ಹೀಗಾಗಿ ಈ ಬಾರಿ ನಾವೇ ನೇರವಾಗಿ ಹೋಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದೇವೆ ಎಂದು ದಾಳಿ ಬಗ್ಗೆ ಸಮರ್ಥನೆ ನೀಡಿದರು.

    ಇದೇ ವೇಳೆ ಜೈಷ್ ಸಂಘಟನೆ ದೇಶದ ಹಲವೆಡೆ ಆತ್ಮಾಹುತಿ ದಾಳಿ ನಡೆಸಲು ಸಿದ್ಧತೆ ನಡೆಸಿದೆ. ಈ ಬಗ್ಗೆ ನಮಗೆ ಖಚಿತ ಗುಪ್ತಚರ ಮಾಹಿತಿಗಳು ಸಿಕ್ಕಿವೆ ಎಂದು ಗೋಖಲೆ ತಿಳಿಸಿವೆ.

    https://www.youtube.com/watch?v=m8US3svZ58Q

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಗೆ ನುಗ್ಗಿದ ಉಗ್ರರು-5 ದಿನದಿಂದ ಊಟ ಮಾಡಿಲ್ಲ ಅಂತಾ ಬಿಸ್ಕೆಟ್, ಸೇಬು ಬ್ಯಾಗಿಗೆ ತುಂಬಿಕೊಂಡ್ರು

    ಮನೆಗೆ ನುಗ್ಗಿದ ಉಗ್ರರು-5 ದಿನದಿಂದ ಊಟ ಮಾಡಿಲ್ಲ ಅಂತಾ ಬಿಸ್ಕೆಟ್, ಸೇಬು ಬ್ಯಾಗಿಗೆ ತುಂಬಿಕೊಂಡ್ರು

    ಜಮ್ಮು: ಮೂವರು ಉಗ್ರರು ಕಳೆದ 5 ದಿನಗಳಿಂದ ಊಟ ಮಾಡಿಲ್ಲ ಎಂದು ಮನೆಗೆ ನುಗ್ಗಿ ಅಲ್ಲಿದ್ದ ಬಿಸ್ಕೆಟ್ ಮತ್ತು ಸೇಬುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಜಮ್ಮು-ಕಾಶ್ಮೀರ ರಾಜ್ಯದ ಉದಮಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

    ಜಮ್ಮು-ಶ್ರೀನಗರದ ಹೆದ್ದಾರಿಯಲ್ಲಿ ಫಾರೆಸ್ಟ್ ಗಾರ್ಡ್ ಮತ್ತು ಓರ್ವ ಸಿಆರ್ ಪಿಎಫ್ ಯೋಧನ ಮೇಲೆ ಮೂವರು ಗುಂಡಿನ ದಾಳಿ ನಡೆಸಿದ್ದರು. ಉಗ್ರರನ್ನು ಬಂಧಿಸಲು ಅಧಿಕಾರಿಗಳು ಎಲ್ಲೆಡೆ ಪೋಸ್ಟರ್ ಹಾಕಿದ್ದರು. ಭಾರತದ ಗಡಿಯಿಂದ ಹೊರಹೋಗದಂತೆ ಎಲ್ಲೆಡೆ ಕಟ್ಟೆಚ್ಚರವನ್ನು ಹಾಕಲಾಗಿದೆ. ಇದೇ ಉಗ್ರರು ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ತಿನ್ನಲು ಬಿಸ್ಕೆಟ್ ಮತ್ತು ಸೇಬು ಹಣ್ಣುಗಳನ್ನು ತೆಗೆದುಕೊಂಡು ಹೋಗಿದ್ದಾರೆ.

    ಈ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದಿರುವ ಯೋಧರು ಉಗ್ರರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಬುಧವಾರ ಸಂಜೆ 8 ಗಂಟೆ ವೇಳೆಗೆ ಮನೆಗೆ ಶಸ್ತ್ರಾಸ್ತ್ರಗಳೊಂದಿಗೆ ಒಳಪ್ರವೇಶಿದ ಉಗ್ರರು ತಮ್ಮ ಕುರಿತು ಯಾರಿಗೂ ಮಾಹಿತಿ ನೀಡದಂತೆ ಬೆದರಿಕೆ ಹಾಕಿದ್ದಾರೆ. ಬಳಿಕ ಐದು ದಿನಗಳಿಂದ ಏನು ತಿಂದಿಲ್ಲ ಎಂದು ಮನೆಯಲ್ಲಿದ್ದ ಬಿಸ್ಕೆಟ್ ಹಾಗೂ ಸೇಬು ಹಣ್ಣು ತೆಗೆದುಕೊಂಡು ಬ್ಯಾಗ್‍ನಲ್ಲಿ ತುಂಬಿಕೊಂಡಿದ್ದಾರೆ. ಈ ವೇಳೆ ಅಲ್ಲಿಂದ ತೆರಳಲು ಕಾರ್ ಬೇಕೆಂದು ಬೇಡಿಕೆ ಇಟ್ಟಿದ್ದು, ಆದರೆ ಮನೆಯ ಮಾಲೀಕನ ಬಳಿ ಕಾರು ಇಲ್ಲದ ಕಾರಣ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಉಗ್ರರ ಶೋಧ ಕಾರ್ಯಕ್ಕೆ ಹೆಲಿಕಾಪ್ಟರ್ ಹಾಗೂ ಡ್ರೋನ್ ಕ್ಯಾಮೆರಾಗಳನ್ನು ಬಳಕೆ ಮಾಡಲಾಗುತ್ತಿದೆ. ಅಲ್ಲದೇ ಆ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಈ ಘಟನೆಗೂ ಮುನ್ನ ಬುಧವಾರ ಬೆಳಗ್ಗೆ ಉಗ್ರರು ಪೊಲೀಸರಿಂದ ತಪ್ಪಿಸಿಕೊಳ್ಳಲು ಟ್ರಕ್ ಒಂದಕ್ಕೆ ಹತ್ತಿ ಪರಾರಿಯಾಗಲು ಯತ್ನಿಸಿದ್ದರು ಎಂಬ ಮಾಹಿತಿ ಆಧಾರಿಸಿ ಟ್ರಕ್ ಚಾಲಕ ಹಾಗೂ ನಿರ್ವಾಹಕನನ್ನ ವಶಕ್ಕೆ ಪಡೆಯಲಾಗಿದೆ.

    ಇದೇ ವೇಳೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ಜಮ್ಮು ಕಾಶ್ಮೀರ ಪೊಲೀಸರು ಸ್ಥಳೀಯರ ಸಹಕಾರವನ್ನು ಕೋರಿದ್ದು, ಈ ಕುರಿತು ಮಾಹಿತಿ ನೀಡಿದ ಸಾರ್ವಜನಿಕರಿಗೆ ಸೂಕ್ತ ಬಹುಮಾನ ನೀಡಲಾವುದು ಎಂದು ತಿಳಿಸಿದ್ದಾರೆ. ಉಳಿದಂತೆ ಗ್ರಾಮದ ಮನೆಗೆ ನುಗಿದ್ದ ಉಗ್ರರ ವಯಸ್ಸು 18 ರಿಂದ 22ರ ಒಳಗೆ ಇರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗನ ಹತೈಗೈದ ಉಗ್ರರನ್ನು 72 ಗಂಟೆಯೊಳಗೆ ಕೊಲ್ಲಿ: ಮೃತ ಸೈನಿಕನ ತಂದೆ ಆಗ್ರಹ

    ಮಗನ ಹತೈಗೈದ ಉಗ್ರರನ್ನು 72 ಗಂಟೆಯೊಳಗೆ ಕೊಲ್ಲಿ: ಮೃತ ಸೈನಿಕನ ತಂದೆ ಆಗ್ರಹ

    ಶ್ರೀನಗರ: ಮಗನನ್ನು ಅಪಹರಿಸಿ ಕೊಂದ ಉಗ್ರರನ್ನು 72ಗಂಟೆಯೊಳಗೆ ಹತ್ಯೆ ಮಾಡಿ ಎಂದು ಮೃತ ಯೋಧ ಔರಂಗಜೇಬ್‍ನ ತಂದೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಯೋಧನ ಸಾವಿಗೆ ಕಾರಣರಾದವರನ್ನು ಹಿಡಿದು ಶಿಕ್ಷೆಗೆ ಗುರಿಪಡಿಸಲು ಸರ್ಕಾರ ತಡಮಾಡುತ್ತಿದೆ ಯಾಕೆ? 72 ಗಂಟೆಯೊಳಗೆ ಸರ್ಕಾರ ಯಾವ ನಿರ್ಧಾರವನ್ನು ಪ್ರಕಟಿಸದಿದ್ದಲ್ಲಿ ನನ್ನ ಮಗನ ಸಾವಿಗೆ ಕಾರಣರಾದವರ ವಿರುದ್ಧ ನಾನೇ ಸೇಡು ತೀರಿಸಿಕೊಳ್ಳುತ್ತೇನೆ ಎಂದು ನಿವೃತ್ತ ಯೋಧ ಮೃತ ಯೋಧನ ತಂದೆ ಹೇಳಿದ್ದಾರೆ.

    ಜಮ್ಮು ಕಾಶ್ಮೀರದಲ್ಲಿ ಯೋಧರ ಸಾವಲ್ಲಿ ರಾಜಕೀಯ ಮಾಡುವವರ ವಿರುದ್ಧ ಹರಿಹಾಯ್ದಿರುವ ಮೃತ ಯೋಧನ ತಂದೆ ಪಾಕಿಸ್ತಾನದ ಬಗ್ಗೆ ಸಹಾನುಭೂತಿ ತೋರಿಸುವ ಪ್ರತ್ಯೇಕತಾವಾದಿಗಳ ವಿರುದ್ಧ ಕಿಡಿಕಾರಿದ್ದಾರೆ.

    ಔರಂಗಜೇಬ್‍ನ ಹತ್ಯೆ ಕೇವಲ ನಮ್ಮ ಕುಟುಂಬಕ್ಕೆ ಅಷ್ಟೆ ಆಘಾತಕಾರಿಯಲ್ಲ ಸೇನೆಗೂ ಕೂಡ ಹಿನ್ನಡೆಯಾಗಿದೆ. ಜಮ್ಮು ಕಾಶ್ಮೀರಕ್ಕೆ ಸೇರಿದವನಾಗಿ ಇಲ್ಲಿಯೇ ಸೇವೆ ಸಲ್ಲಿಸುತ್ತಿದ್ದ ಎಂದು ಬೇಸರ ವ್ಯಕ್ತಪಡಿಸಿದರು.

    ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು 2003 ರಿಂದ ತಡೆಯಲು ಏಕೆ ಸಾಧ್ಯವಾಗುತ್ತಿಲ್ಲ. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಪರಿಸ್ಥಿತಿ ಬದಲಾಗಬಹುದು ಎಂದು ಎಣಿಸಿದ್ದೆವು ಆದರೆ ಎಣಿಸಿದಷ್ಟು ಆಗಿಲ್ಲ. ಈ ವಿಚಾರದಲ್ಲಿ ರಾಜಕಾರಣ ಮಾಡುವವರನ್ನ ಹಾಗೂ ಪ್ರತ್ಯೇಕತಾವಾದಿಗಳನ್ನು ಕಾಶ್ಮೀರದಿಂದ ಓಡಿಸಬೇಕು. ಸೇನೆ ಹಾಗೂ ಇತರ ಭದ್ರತಾ ಸಂಸ್ಥೆಗಳು ಉಗ್ರರ ವಿರುದ್ಧ ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಂಜಾನ್ ಹಬ್ಬವನ್ನು ಔರಂಗಜೇಬ್‍ನ ಜೊತೆ ಆಚರಿಸುವ ಆಸೆ ಆದರೆ ಅವನಿಲ್ಲ ಎಂದು ನೋವನ್ನು ಹಂಚಿಕೊಂಡರು.

    ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್ ನನ್ನು ಎನ್ ಕೌಂಟರ್ ಮಾಡಿ ಔರಂಗಜೇಬ್ ಹತ್ಯೆ ಮಾಡಿದ್ದರು. ಇದರ ಸೇಡಿನಲ್ಲೇ ಉಗ್ರರು ಔರಂಗಜೇಬ್‍ನನ್ನು ಅಪಹರಿಸಿ ಹತ್ಯೆಗೈದಿದ್ದಾರೆ.ಇದನ್ನೂ ಓದಿ:ಉಗ್ರ ಸಮೀರ್ ನನ್ನು ಎನ್ ಕೌಂಟರ್ ಮಾಡಿದ್ದ ಯೋಧನ ಅಪಹರಣ