Tag: Milind Naik

  • ಲೈಂಗಿಕ ಶೋಷಣೆ ಆರೋಪ – ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮಿಲಿಂದ್ ನಾಯ್ಕ್

    ಲೈಂಗಿಕ ಶೋಷಣೆ ಆರೋಪ – ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮಿಲಿಂದ್ ನಾಯ್ಕ್

    ಪಣಜಿ: ಗೋವಾ ನಗರಾಭಿವೃದ್ಧಿ ಸಚಿವ ಮತ್ತು ಬಿಜೆಪಿ ಶಾಸಕ ಮಿಲಿಂದ್ ನಾಯ್ಕ್ ಅವರು ಲೈಂಗಿಕ ಶೋಷಣೆ ಆರೋಪದ ಹಿನ್ನೆಲೆ ರಾಜ್ಯ ಸಂಪುಟಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ.

    ಈ ಕುರಿತಂತೆ ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಬುಧವಾರ ತಡರಾತ್ರಿ ಅಧಿಕೃತವಾಗಿ ಪ್ರಕಟಿಸಿದ್ದು, ಈ ಸಂಬಂಧ ಮುಕ್ತ ಮತ್ತು ನ್ಯಾಯಯುತ ತನಿಖೆ ಖಚಿತಪಡಿಸುವ ಉದ್ದೇಶದಿಂದ ಮಿಲಿಂದ್ ನಾಯ್ಕ್ ಅವರು ರಾಜೀನಾಮೆ ನೀಡಿದ್ದಾರೆ. ಇದೀಗ ಅವರ ರಾಜೀನಾಮೆಯನ್ನು ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದೆ.

    ಮಿಲಿಂದ್ ನಾಯ್ಕ್ ದಕ್ಷಿಣ ಗೋವಾದ ಮರ್ಮಗೋವ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಶಾಸಕ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟದಲ್ಲಿ ನಗರಾಭಿವೃದ್ಧಿ ಖಾತೆಯನ್ನು ನಿಭಾಯಿಸುತ್ತಿದ್ದರು. ಈ ಮುನ್ನ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನೇತೃತ್ವದ ಹಿಂದಿನ ಸಂಪುಟದಲ್ಲೂ ಸಚಿವರಾಗಿದ್ದರು. ಇದನ್ನೂ ಓದಿ: ಬಿಪಿನ್ ರಾವತ್ ಬಳಿಕ ಭಾರತದ ಮುಂದಿನ CDS ಯಾರು?

    ಕೆಲವು ದಿನಗಳ ಹಿಂದೆ ಮಿಲಿಂದ್ ನಾಯ್ಕ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಮಹಿಳೆಯೊಬ್ಬರ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಗೋವಾ ಅಧ್ಯಕ್ಷ ಗಿರೀಶ್ ಛೋಡನ್ಕರ್ ಆರೋಪಿಸಿದ್ದರು. ಅಲ್ಲದೇ ಅವರನ್ನು ಪ್ರಮೋದ್ ಸಾವಂತ್ ವಜಾಗೊಳಿಸಬೇಕು ಮತ್ತು ಅವರ ಮೇಲಿರುವ ಆರೋಪ ಕುರಿತಂತೆ ಸಮಗ್ರವಾಗಿ ತನಿಖೆ ಆರಂಭಿಸಬೇಕು ಎಂದು ಒತ್ತಾಯಿಸಿದ್ದರು.

    ಗಿರೀಶ್ ಛೋಡನ್ಕರ್ ಅವರು ಹದಿನೈದು ದಿನಗಳ ಹಿಂದೆಯೇ ಈ ವಿಚಾರವನ್ನು ಪ್ರಸ್ತಾಪಿಸಿದ್ದರು, ಆದರೆ ಆ ವೇಳೆ ಸಚಿವರ ಹೆಸರನ್ನು ಬಹಿರಂಗ ಪಡಿಸಿರಲಿಲ್ಲ. ಸಚಿವರನ್ನು ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿಗಳಿಗೆ 15 ದಿನಗಳ ಗಡವು ನೀಡಿದ್ದರು. ನಂತರ ಗಿರೀಶ್ ಛೋಡನ್ಕರ್ ಅವರಿಗೆ ಸಚಿವರ ಹೆಸರು ಬಹಿರಂಗ ಪಡಿಸಿ, ಅವರ ವಿರುದ್ಧ ಸಂತ್ರಸ್ತೆ ನೀಡಿರುವ ದೂರಿನ ಪ್ರತಿ ಸಲ್ಲಿಸುವಂತೆ ಪ್ರಮೋದ್ ಸಾವಂತ್ ಸೂಚಿಸಿದ್ದರು. ಇದನ್ನೂ ಓದಿ: ಸಿಎಂ ರ‍್ಯಾಲಿ ವೇಳೆ ನಿರುದ್ಯೋಗಿ ಶಿಕ್ಷಕರ ಮೇಲೆ ಪೊಲೀಸರ ದಬ್ಬಾಳಿಕೆ – ವೀಡಿಯೋ ವೈರಲ್

    ಮಿಲಿಂದ್ ನಾಯ್ಕ್ ಅವರ ಹೆಸರನ್ನು ಗಿರೀಶ್ ಛೋಡನ್ಕರ್ ಬಹಿರಂಗಪಡಿಸಿದರು. ನಂತರ ಗೋವಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಸಂಕಲ್ಪ್ ಅಮೋನ್ಕರ್ ಕೂಡ ಮಿಲಿಂದ್ ನಾಯ್ಕ್ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೇ ಈ ಸಂಬಂಧ ಅಮೋನ್ಕರ್ ಅವರು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಸಚಿವರು ಹಾಗೂ ಸಂತ್ರಸ್ತೆ ನಡೆಸಿರುವ ಸಂಭಾಷಣೆ ನಡೆಸಿರುವ ಆಡಿಯೋವನ್ನು ಬಿಡುಗಡೆಗೊಳಿಸಿದ್ದಾರೆ.