Tag: Milana Nagaraj

  • ಮೋಡಿ ಮಾಡುವ ತಯಾರಿಯಲ್ಲಿ ಡಾರ್ಲಿಂಗ್ ಕೃಷ್ಣ

    ಮೋಡಿ ಮಾಡುವ ತಯಾರಿಯಲ್ಲಿ ಡಾರ್ಲಿಂಗ್ ಕೃಷ್ಣ

    ಬೆಂಗಳೂರು: ಲವ್ ಮಾಕ್ಟೇಲ್ ಮೂಲಕ ಸಿನಿಮಾಸಕ್ತರಲ್ಲಿ ಮತ್ತು ತರಿಸಿರುವ ನಟ ನಿರ್ದೇಶಕ ಡಾರ್ಲಿಂಗ್ ಕೃಷ್ಣಾ ತಮ್ಮ ಮುಂದಿನ ಯೋಜನೆ ಕುರಿತು ಮಾತನಾಡಿದ್ದಾರೆ. ಲವ್ ಮಾಕ್ಟೇಲ್ ಸಿನಿಮಾ ಯಶಸ್ವಿ ಕಂಡಿದ್ದು, ವಿಭಿನ್ನ ಕಥಾ ಹಂದರದ ಮೂಲಕ ಡಾರ್ಲಿಂಗ್ ಕೃಷ್ಣ ಮನೆಮಾತಾಗಿದ್ದಾರೆ. ಇದೀಗ ಮತ್ತೆ ತಾವೇ ಚಿತ್ರಕಥೆ, ನಿರ್ದೇಶನ ಮಾಡಲು ಮುಂದಾಗಿದ್ದಾರೆ.

    ಸಿನಿಮಾ ಬಿಡುಗಡೆಯಾಗಿ ವಾರದ ನಂತರ ಒಂದೇ ಚಿತ್ರ ಮಂದಿರದಲ್ಲಿ ಇತ್ತು. ಇದರಿಂದ ಕೃಷ್ಣ ತೀವ್ರ ಆತಂಕಗೊಂಡಿದ್ದರು. ನಂತರದ ದಿನಗಳಲ್ಲಿ ಥೀಯೇಟರ್‍ಗಳು ಸಿಗಲು ಆರಂಭಿಸಿದವೂ ಅಷ್ಟೇ ಆಸಕ್ತಿಯಿಂದ ಪ್ರೇಕ್ಷಕರು ಸಹ ಬರಲಾರಂಭಿಸಿದರು. ಹೀಗಾಗಿ ಮಾಲ್‍ಗಳಲ್ಲಿಯೂ ಭರ್ಜರಿ ಮೂರು, ನಾಲ್ಕು ಪ್ರದರ್ಶನಗಳನ್ನು ಕಾಣಲು ಪ್ರಾರಂಭಿಸಿತು. ಹೀಗೆ ಥೀಯೇಟರ್‍ಗಳು ಹೆಚ್ಚಾಗುತ್ತಾ, ಲವ್ ಮಾಕ್ಟೇಲ್ ಹೌಸ್ ಫುಲ್ ಪ್ರದರ್ಶನ ಕಾಣಲು ಪ್ರಾರಂಭಿಸಿತು. ಜನವರಿ 31ರಂದು ತೆರೆಕಂಡ ಲವ್ ಮಾಕ್ಟೇಲ್ ಮೋಡಿ ಈಗಲೂ ಮುಂದುವರಿದಿದ್ದು, ಸತತ ಐದು ವಾರಗಳಿಂದ ಯಶಸ್ಸು ಕಾಣುತ್ತಿದೆ. ಈ ಚಿತ್ರಕ್ಕೆ ಸ್ವತಃ ಡಾರ್ಲಿಂಗ್ ಕೃಷ್ಣ ಅವರೇ ಬಂಡವಾಳ ಹಾಕಿ, ತಾವೇ ನಿರ್ದೇಶಿಸುವ ಸಾಹಸ ಮಾಡಿದ್ದರು. ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ ಕೂಡ. ಅದಕ್ಕೆ ಸಾಕ್ಷಿಯೇ ಚಿತ್ರದ ಸಕ್ಸಸ್.

    ಲವ್ ಮಾಕ್ಟೇಲ್ ಗುಂಗಲ್ಲೇ ಇರುವ ಪ್ರೇಕ್ಷಕರಿಗೆ ಇದೀಗ ನಟ ಡಾರ್ಲಿಂಗ್ ಕೃಷ್ಣ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಹೌದು ಅವರೂ ಸಹ ಇನ್ನೂ ಲವ್ ಮಾಕ್ಟೇಲ್ ಗುಂಗಲ್ಲೇ ಇದ್ದು, ಇದರ ಮಧ್ಯೆ ಈಗಾಗಲೇ ಅವರಿಗೆ ಎರಡ್ಮೂರು ಕಥೆಗಳು ತಲೆಗೆ ಬಂದಿವೆಯಂತೆ. ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎಂದು ತಲೆ ಕೆಡಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಇದೀಗ ಎರಡ್ಮೂರು ಕಥೆಗಳು ಹೊಳೆದಿವೆ, ಆದರೆ ಯಾವುದಕ್ಕೆ ಸಿನಿಮಾ ರೂಪ ನೀಡುವುದು ಎಂಬ ಗೊಂದಲದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

    ಸಿನಿಮಾ ಆಯ್ಕೆ ಮಾಡಿಕೊಳ್ಳುವುದು ಹಾಗೂ ನಿರ್ದೇಶಿಸುವುದರ ಕುರಿತು ತುಂಬಾ ಜಾಗೃತಿ ವಹಿಸಬೇಕಾಗಿದೆ. ಏಕೆಂದರೆ ಲವ್ ಮಾಕ್ಟೇಲ್ ಸಿನಿಮಾ ಮಾಡುವಾಗ ನಿರೀಕ್ಷೆಗಳು ಇರಲಿಲ್ಲ. ಆದರೆ ಇದೀಗ ನನ್ನ ಮೇಲೆ ನಿರೀಕ್ಷೆ ಹೆಚ್ಚಿದೆ. ಹೀಗಾಗಿ ಎಚ್ಚರಿಕೆಯಿಂದ ಸಿನಿಮಾ ಆಯ್ಕೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ. ಅಲ್ಲದೆ ಬೇರೆ ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಕಥೆಗಳನ್ನು ಕೇಳುತ್ತಿದ್ದೇನೆ, ಚೆನ್ನಾಗಿದ್ದರೆ ಖಂಡಿತ ನಟಿಸುತ್ತೇನೆ ಎಂದಿದ್ದಾರೆ.

    ಇನ್ನೂ ವಿಶೇಷ ಎಂದರೆ ಕನ್ನಡದಲ್ಲಿ ಯಶಸ್ವಿಯಾಗಿರುವ ಲವ್ ಮಾಕ್ಟೇಲ್ ಚಿತ್ರಕ್ಕೆ ಹಿಂದಿ, ತೆಲುಗು ಹಾಗೂ ತಮಿಳಿನಿಂದ ರಿಮೇಕ್ ಹಕ್ಕುಗಳಿಗೆ ಬೇಡಿಕೆ ಬಂದಿದೆಯಂತೆ. ಈ ಖುಷಿ ವಿಚಾರವನ್ನು ಸಹ ಡಾರ್ಲಿಂಗ್ ಕೃಷ್ಣ ಹಂಚಿಕೊಂಡಿದ್ದಾರೆ. ಅಲ್ಲದೆ ಲವ್ ಮಾಕ್ಟೇಲ್ ಸಕ್ಸಸ್ ಬೆನ್ನಲ್ಲೇ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ತಮ್ಮ ನೈಜ ಪ್ರೇಮ ಕಥೆ ಕುರಿತು ಸಹ ಹಂಚಿಕೊಂಡರು. ಇವರಿಬ್ಬರ ಈ ನೈಜ ಕೆಮಿಸ್ಟ್ರಿಯೇ ಸಿನಿಮಾ ಯಶಸ್ಸಿಗೂ ಕಾರಣ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

    ಡಾರ್ಲಿಂಗ್ ಕೃಷ್ಣ ಸದ್ಯ `ಲೋಕಲ್ ಟ್ರೇನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಸಿನಿಮಾ ಬಹುತೇಕ ಮುಕ್ತಾಯದ ಹಂತ ತಲುಪಿದೆ. ಇದು ಕಾಲೇಜಿನಲ್ಲಿ ನಡೆಯುವ ಪ್ರೀತಿಯ ಕಥಾ ಹಂದರವನ್ನು ಹೊಂದಿದೆಯಂತೆ. ಹಾಗೆಯೇ `ವರ್ಜಿನ್’ ಚಿತ್ರದ ಚಿತ್ರೀಕರಣ ಸಹ ನಡೆಯುತ್ತಿದ್ದು, ಇದು ಕಾಲೇಜು ನಂತರದ ಜೀವನದಲ್ಲಿ ನಡೆಯುವ ಪ್ರೀತಿಯ ಕಥೆಯನ್ನು ಹೊಂದಿದೆಯಂತೆ. ಈ ಎಲ್ಲದರ ಮಧ್ಯೆ ಕೃಷ್ಣ ಅವರು ತಮ್ಮಲ್ಲಿರುವ ಕಥೆಯನ್ನು ಸಿನಿಮಾ ಮಾಡುವ ಕುರಿತು ಸಹ ಚಿಂತನೆ ನಡೆಸಿದ್ದಾರೆ.

  • ಗಾಸಿಪ್‍ಗಳಿಗೆ ತೆರೆ- ಮಿಲನಾ ನಾಗರಾಜ್ ಕೈ ಹಿಡಿಯಲಿದ್ದಾರೆ ಡಾರ್ಲಿಂಗ್ ಕೃಷ್ಣ

    ಗಾಸಿಪ್‍ಗಳಿಗೆ ತೆರೆ- ಮಿಲನಾ ನಾಗರಾಜ್ ಕೈ ಹಿಡಿಯಲಿದ್ದಾರೆ ಡಾರ್ಲಿಂಗ್ ಕೃಷ್ಣ

    ಬೆಂಗಳೂರು: ಸ್ಯಾಂಡಲ್‍ವುಡ್ ನಲ್ಲಿ ಸಾಲು ಸಾಲಾಗಿ ನಟ-ನಟಿಯರ ಮದುವೆ ನಡೆಯುತ್ತಿದೆ. ನಟ ನಿಖಿಲ್ ಕುಮಾರಸ್ವಾಮಿ ನಿನ್ನೆಯಷ್ಟೇ ತನ್ನ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದು, ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟ ಹಸೆಮಣೆ ಏರಲು ಸಜ್ಜಾಗಿದ್ದಾರೆ.

    ಹೌದು. ಕೃಷ್ಣ ಅವರ ಮೊದಲ ಹೆಸರು ಸುನಿಲ್ ಕುಮಾರ್. ಕೃಷ್ಣ ರುಕ್ಮಿಣಿ ಎಂಬ ಧಾರಾವಾಹಿ ಮೂಲಕ ನಟನಾಕ್ಷೇತ್ರಕ್ಕೆ ಕಾಲಿಟ್ಟು, ಮದರಂಗಿ ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಡಾರ್ಲಿಂಗ್ ಕೃಷ್ಣ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಈ ಮೂಲಕ ಬಹುದಿನಗಳಿಂದ ಕೇಳಿಬರುತ್ತಿದ್ದ ಗಾಸಿಪ್ ಗಳಿಗೆ ತೆರೆಬಿದ್ದಿದೆ.

    ಕೆಲ ದಿನಗಳ ಹಿಂದೆ ನಟಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಬಗ್ಗೆ ಕೆಲವೊಂದು ಗಾಸಿಪ್ ಗಳು ಹರಿದಾಡುತ್ತಿದ್ದವು. ಆದರೆ ಇಬ್ಬರೂ ಈ ಬಗ್ಗೆ ಒಪ್ಪಿಕೊಂಡಿರಲಿಲ್ಲ. ಇದೀಗ ತಮ್ಮ ಪ್ರೀತಿಯ ಬಗ್ಗೆ ಇಬ್ಬರೂ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಟನೆಯ ‘ಲವ್ ಮಾಕ್ಟೇಲ್’ ಚಿತ್ರ ಇತ್ತೀಚೆಗೆ ತೆರೆಕಂಡಿದ್ದು, ಯಶಸ್ವಿ ಪ್ರದರ್ಶನ ಕಂಡಿದೆ. ಈ ಯಶಸ್ಸಿನ ಸಂಭ್ರಮದ ಬೆನ್ನಲ್ಲೇ ಜೋಡಿ ತಮ್ಮ ಮದುವೆಯ ಗುಟ್ಟನ್ನು ರಟ್ಟು ಮಾಡಿದೆ.

    ಸಿನಿಮಾ ಚಟುವಟಿಕೆಗಳಲ್ಲಿ ಜೊತೆಯಾಗಿಯೇ ಪಾಲ್ಗೊಳ್ಳುತ್ತಿದ್ದ ಇಬ್ಬರ ಮಧ್ಯೆ ಉತ್ತಮ ಒಡನಾಟವಿತ್ತು. ಇವರಿಬ್ಬರು ಪ್ರೀತಂ ಗುಬ್ಬಿ ನಿರ್ದೇಶನದ ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದಲ್ಲಿ ಮೊದಲು ಜೊತೆಯಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಇತ್ತೀಚೆಗೆ ಬಿಡುಗಡೆಯಾದ ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿಯೂ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿ ಜರ್ನಿಯೇ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿಕೊಳ್ಳಲು ಕಾರಣವಾಗಿದ್ಯಂತೆ.

    ಮೊದ್ಲು ಪ್ರಪೋಸ್ ಮಾಡಿದ್ದೇ ಕೃಷ್ಣ:
    ಡಾರ್ಲಿಂಗ್ ಕೃಷ್ಣ ತನ್ನ ಮನದ ಬಯಕೆಯನ್ನು ಮಿಲನಾ ಬಳಿ ಹಂಚಿಕೊಳ್ಳುತ್ತಿದ್ದಂತೆಯೇ ಇಬ್ಬರ ಮನೆಯಲ್ಲೂ ಮದುವೆ ಮಾತುಕತೆ ನಡೆದೇ ಹೋಗಿತ್ತು. ಆದರೆ ಈ ವಿಚಾರ ಆಪ್ತರು ಹಾಗೂ ಕುಟುಂಬದ ಸದಸ್ಯರಿಗೆ ಮಾತ್ರ ತಿಳಿದಿತ್ತೇ ವಿನಃ ಜೋಡಿ ಈ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ.

    ಇದೀಗ ತಮ್ಮ ‘ಲವ್ ಮಾಕ್ಟೇಲ್’ ಸಿನಿಮಾದ ಗೆಲುವಿನ ಖುಷಿಯಲ್ಲಿರುವ ಅವರು ಸುದ್ದಿಗೋಷ್ಠಿ ನಡೆಸಿದಾಗ ತಮ್ಮ ಪ್ರೀತಿಯನ್ನು ಬಹಿರಂಗ ಪಡಿಸಿದ್ದಾರೆ. ಸದ್ಯ ಈ ಇಬ್ಬರಿಗೂ ಎಲ್ಲರೂ ಶುಭ ಕೋರುತ್ತಿದ್ದು, ಆದರೆ ಮದುವೆ ಯಾವಾಗ ಎಂಬುದು ಇನ್ನೂ ನಿಗದಿಯಾಗಿಲ್ಲ.

    ಒಟ್ಟಿನಲ್ಲಿ ಈ ಜೋಡಿ ಸಿನಿಮಾ ಚಟುವಟಿಕೆಗಳಲ್ಲಿ ಬ್ಯುಸಿ ಆಗಿದ್ದು, ‘ನಮ್ಮಿಬ್ಬರ ನಡುವೆ ಆತ್ಮೀಯತೆ ಇದ್ದುದರಿಂದಲೇ ‘ಲವ್ ಮಾಕ್ಟೇಲ್’ ಸಿನಿಮಾವನ್ನು ಜೊತೆಯಾಗಿ ಮಾಡಲು ಸಾಧ್ಯವಾಯಿತು. ಸದ್ಯ ನಾವಿಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದೇವೆ. ಹೀಗಾಗಿ ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಅಲ್ಲದೆ ಮತ್ತೆ ಜೊತೆಯಾಗಿ ಸಿನಿಮಾ ಮಾಡುವ ಬಗ್ಗೆಯೂ ಸದ್ಯಕ್ಕೆ ಯಾವುದೇ ಪ್ಲಾನ್ ಮಾಡಿಲ್ಲ’ ಎಂದು ಮಿಲನಾ ತಿಳಿಸಿದ್ದಾರೆ.

  • ‘ಉದ್ಭವ’ದಲ್ಲಿ ಅಪ್ಪ ಕಿಲಾಡಿ ‘ಮತ್ತೆ ಉದ್ಭವ’ದಲ್ಲಿ ಮಗ ಪ್ರಳಯಾಂತಕ!

    ‘ಉದ್ಭವ’ದಲ್ಲಿ ಅಪ್ಪ ಕಿಲಾಡಿ ‘ಮತ್ತೆ ಉದ್ಭವ’ದಲ್ಲಿ ಮಗ ಪ್ರಳಯಾಂತಕ!

    ಈ ಹಿಂದೆ ಬಾಲಿವುಡ್, ಟಾಲಿವುಡ್‍ಗಳಲ್ಲಿ ಒಂದು ಸಿನಿಮಾ ಬಂದರೆ ಅದರ ಮುಂದುವರಿದ ಭಾಗವಾಗಿ ಮತ್ತದೇ ಹೆಸರಲ್ಲಿ ಸಿನಿಮಾ ಬರ್ತಾ ಇತ್ತು. ಇದೀಗ ಸ್ಯಾಂಡಲ್‍ವುಡ್‍ನ ಭಾಗ-2ರ ಅಬ್ಬರ ಜೋರಾಗಿದೆ. 1990ರಲ್ಲಿ ತೆರೆಕಂಡು ಯಶಸ್ಸು ಗಳಿಸಿದ ಸಿನಿಮಾವೊಂದು ಈ ಸಾಲಿಗೆ ಸೇರಿದೆ. ಬಿ.ವಿ.ವೈಕುಂಠರಾಜು ಅವರ ಕಾದಂಬರಿ ಆಧರಿಸಿ ಕೂಡ್ಲು ರಾಮಕೃಷ್ಣ ಅವರ ನಿರ್ದೇಶನದಲ್ಲಿ ಅನಂತ್ ನಾಗ್ ಅಭಿನಯದಲ್ಲಿ ಮೂಡಿಬಂದ ಚಿತ್ರ ‘ಉದ್ಭವ’. 29 ವರ್ಷಗಳ ಬಳಿಕ ಈ ಚಿತ್ರಕ್ಕೆ ಸೀಕ್ವೆಲ್ ಭಾಗ್ಯ ಸಿಕ್ಕಿದ್ದು ‘ಮತ್ತೆ ಉದ್ಭವ’ ಆರಂಭವಾಗುತ್ತಿದೆ.

    ‘ಉದ್ಭವ’ ನಿರ್ದೇಶಿಸಿದ್ದ ಕೂಡ್ಲು ರಾಮಕೃಷ್ಣ ಅವರೇ ‘ಮತ್ತೆ ಉದ್ಭವ’ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಅಂದಿನ ಸಿನಿಮಾಗಳಲ್ಲಿ ಇದ್ದಂತ ಕುತೂಹಲ ಈ ಸಿನಿಮಾದಲ್ಲೂ ಕ್ಯಾರಿ ಆಗಲಿವೆ. ‘ಉದ್ಭವ’ದಲ್ಲಿ ಅನಂತ್‍ನಾಗ್‍ಗೆ ಇಬ್ಬರು ಮಕ್ಕಳಿದ್ದರು 29 ವರ್ಷಗಳಲ್ಲಿ ಆ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ಇಂದಿನ ‘ಮತ್ತೆ ಉದ್ಭವ’ದಲ್ಲಿ ಮಕ್ಕಳ ಜೊತೆ ಜೊತೆ ಕಥೆ ಸಾಗುತ್ತದೆ.

    ‘ಉದ್ಭವ’ದಲ್ಲಿ ಅನಂತ್ ನಾಗ್ ಕಾರ್ಪೊರೇಟರ್ ಲೆವೆಲ್‍ನಲ್ಲಿ ತನ್ನ ಆಟವನ್ನ ತೋರಿಸಿದ್ರು. ಮಗ ‘ಮತ್ತೆ ಉದ್ಭವ’ದಲ್ಲಿ ಬೆಳೆದು ದೊಡ್ಡವನಾಗಿದ್ದಾನೆ. ಇಲ್ಲಿ ಯಾವ ರೀತಿಯ ಆಟವನ್ನ ತೋರಿಸುತ್ತಾನೆ ಅನ್ನೋ ಕುತೂಹಲ ನಮ್ಮದು. ಉದ್ಭವ ನೋಡಿದವರಿಗೆ ಅನಂತ್ ನಾಗ್ ನಟನೆ ಕಣ್ಣ ಮುಂದೆ ಇದ್ದೆ ಇರುತ್ತೆ. ಈ ಸಿನಿಮಾ ಮುಂದುವರಿದ ಭಾಗವಾಗಿರುವ ಕಾರಣ ಅಪ್ಪನಿಗೆ ಹೋಲಿಕೆಯಾಗುವಂತ ಪಾತ್ರ ಮುಂದುವರೆಯಲೇ ಬೇಕಾಗುತ್ತದೆ. ಒಂದು ಟೆಂಪಲ್ ಮಾಲ್ ಮೇಲೆ ಸಿನಿಮಾದ ಕಥೆ ಓಡುತ್ತದೆಯಂತೆ. ಈಗಾಗಲೇ ‘ಪ್ರೀಮಿಯರ್ ಪದ್ಮಿನಿ’ ಎಂಬ ಚಿತ್ರದಲ್ಲಿ ಸಕ್ಸಸ್ ಕಂಡಿರುವ ನಟ ಪ್ರಮೋದ್ ಮತ್ತೊಂದು ಹಿಟ್ ಚಿತ್ರ ಇದಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇನ್ನು ‘ಬೃಂದಾವನ’ ದಲ್ಲಿ ಎಂಟ್ರಿ ಕೊಟ್ಟ ನಟಿ ಮಿಲನಾ ನಾಗರಾಜ್ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸ್ತಾ ಇದ್ದಾರೆ. ಅವ್ರ ಪಾತ್ರ ಎರಡು ಶೇಡ್‍ಗಳಲ್ಲಿ ಮುಂದುವರಿಯಲಿದ್ದು, ಮಿಲನಾ ನಾಗರಾಜ್ ಸಿನಿಮಾಗೆ ಮಾತ್ರ ನಾಯಕಿ ಅಲ್ಲ ಸಿನಿಮಾದ ಒಳಗೂ ನಾಯಕಿಯ ಪಾತ್ರ ಮಾಡಿದ್ದಾರೆ. ಮತ್ತೊಂದು ಶೇಡ್‍ನಲ್ಲಿ ರಾಜಕಾರಣಿ ಪಾತ್ರದಲ್ಲಿ ಮಿಂಚಿದ್ದಾರೆ.

    ಚಿತ್ರವನ್ನು ನಿತ್ಯಾನಂದ ಭಟ್, ಸತ್ಯ, ಮಹೇಶ್ ಮುದ್ಗಲ್ ಮತ್ತು ರಾಜೇಶ್ ನಿರ್ಮಾಣ ಮಾಡಿದ್ದಾರೆ. ಅಂದು ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದ್ದ ‘ಉದ್ಭವ’ದಲ್ಲಿ ಅನಂತ್ ನಾಗ್, ಬಾಲಕೃಷ್ಣ, ಕೆ.ಎಸ್.ಅಶ್ವತ್ಥ್, ಸುಂದರ್ ರಾಜ್ ಕಾಣಿಸಿಕೊಂಡಿದ್ದರು. ‘ಮತ್ತೆ ಉದ್ಭವ’ದಲ್ಲಿ ಅನಂತ್ ನಾಗ್ ನಟಿಸುತ್ತಿಲ್ಲ ಅವರ ಪಾತ್ರವನ್ನು ರಂಗಾಯಣ ರಘು ನಿರ್ವಹಿಸುತ್ತಿದ್ದು, ಉಳಿದಂತೆ ಪ್ರಮೋದ್ ಪಂಜು, ಮಿಲನಾ ನಾಗರಾಜ್ ಮತ್ತಿತರರು ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕಾಮಿಡಿ, ಥ್ರಿಲ್ಲರ್ ಸೇರಿದಂತೆ ಮಿಕ್ಸ್ ಮಸಾಲೆ ಕೊಡೋಕೆ ಚಿತ್ರತಂಡ ರೆಡಿ ಆಗಿದೆ. ಜಯಂತ್ ಕಾಯ್ಕಣಿ, ಪ್ರಹ್ಲಾದ್ ಸಾಹಿತ್ಯದ ಮೂರು ಗೀತೆಗಳಿಗೆ ವಿ. ಮನೋಹರ್ ಸಂಗೀತ ನೀಡಿದ್ದಾರೆ. ಮೋಹನ್ ಛಾಯಾಗ್ರಹಣ ಮಾಡಿದ್ದಾರೆ.