Tag: Mike Hesson

  • ಹೊಸ ಕೋಚ್ ನೇಮಿಸಿದ RCB – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ ಫ್ಯಾನ್ಸ್

    ಹೊಸ ಕೋಚ್ ನೇಮಿಸಿದ RCB – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ ಫ್ಯಾನ್ಸ್

    ಮುಂಬೈ/ಬೆಂಗಳೂರು: 16 ಆವೃತ್ತಿ ಕಳೆದರೂ IPL ಟ್ರೋಫಿ (IPL Trophy) ಗೆಲ್ಲುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕೋಚಿಂಗ್ ಬಳಗವನ್ನ ಬದಲಾಯಿಸಿದ್ದು, ಜಿಂಬಾಬ್ವೆಯ ದಿಗ್ಗಜ ಕ್ರಿಕೆಟಿಗ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ಮುಖ್ಯ ಕೋಚ್ ಆಂಡಿ ಫ್ಲವರ್ (Andy Flower) ಅವರನ್ನ ಆರ್‌ಸಿಬಿ ಮುಖ್ಯಕೋಚ್ ಆಗಿ ನೇಮಿಸಿಕೊಂಡಿದೆ.

    16 ಆವೃತ್ತಿಗಳಲ್ಲಿ ಮೂರ್ನಾಲ್ಕು ಬಾರಿ ಆರ್‌ಸಿಬಿ ತಂಡವನ್ನ ಪ್ಲೇ ಆಫ್ ತಲುಪಿಸುವಲ್ಲಿ ಯಶಸ್ವಿಯಾದರೂ ಒಂದು ಬಾರಿಯೂ ಟ್ರೋಫಿ ಗೆಲ್ಲದೇ ನಿರಾಸೆಗೊಂಡಿತ್ತು. 2023ರ 16ನೇ ಆವೃತ್ತಿಯ ಕೊನೆ ಪಂದ್ಯದಲ್ಲೂ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ್ದ ಆರ್‌ಸಿಬಿ ತಂಡ ಪ್ಲೇ ಆಫ್‌ನಿಂದ ಹೊರಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಕೋಚಿಂಗ್ ಬಳಗವನ್ನ RCB ಫ್ರಾಂಚೈಸಿ ಬದಲಾಯಿಸಿದೆ. ತಂಡದ ಕ್ರಿಕೆಟ್ ಡೈರೆಕ್ಟರ್ ಮೈಕ್ ಹೇಸನ್ (Mike Hesson) ಮತ್ತು ಮುಖ್ಯ ಕೋಚ್ ಸಂಜಯ್ ಬಾಂಗರ್ (Sanjay Bangar) ಜೊತೆಗಿನ ಒಪ್ಪಂದ ಅಂತ್ಯಗೊಳಿಸಿದೆ.

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಜಿಂಬಾಬ್ವೆ ತಂಡದ ಪರ 63 ಟೆಸ್ಟ್ ಮತ್ತು 213 ಏಕದಿನ ಕ್ರಿಕೆಟ್ ಪಂದ್ಯಗಳನ್ನ ಆಡಿದ್ದಾರೆ. ಜೊತೆಗೆ ಇಂಗ್ಲೆಂಡ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ತಂಡಗಳಿಗೆ ಕೋಚಿಂಗ್ ಮಾಡಿದ ಅನುಭವ ಹೊಂದಿದ್ದಾರೆ. 2010ರಲ್ಲಿ ಆಂಡಿ ಫ್ಲವರ್ ಕೋಚಿಂಗ್ ಬಲದೊಂದಿಗೆ ಇಂಗ್ಲೆಂಡ್ ತಂಡ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಗೆದ್ದಿತ್ತು. ಇದನ್ನೂ ಓದಿ: `ಮಹಿ’ಯಂತೆ ಸಕ್ಸಸ್‌ಫುಲ್ ಕ್ಯಾಪ್ಟನ್ ಆಗ್ತಾರಾ `ಪಾಂಡ್ಯ’?

    ಕಳೆದ ಎರಡು ವರ್ಷಗಳಿಂದ ಲಕ್ನೋ ಸೂಪರ್ ಜೈಂಟ್ಸ್ನ ಕೋಚ್ ಆಗಿದ್ದ ಅವರು, 2022 ರಲ್ಲಿ ಲಕ್ನೋ ಸೇರಿದ್ದರು. ಅವರು ಗೌತಮ್ ಗಂಭೀರ್ ಮತ್ತು ನಾಯಕ ರಾಹುಲ್ ಅವರೊಂದಿಗೆ ಕೆಲಸ ನಿರ್ವಹಿಸಿದ್ದಾರೆ.

    ಐಸಿಸಿ ಹಾಲ್ ಆಫ್ ಫೇಮರ್ ಮತ್ತು ಟಿ20 ವಿಶ್ವಕಪ್ ವಿಜೇತ ಕೋಚ್ ಆಂಡಿ ಫ್ಲವರ್ ಅವರನ್ನು ಆರ್‌ಸಿಬಿ ಪುರುಷರ ತಂಡದ ಮುಖ್ಯ ಕೋಚ್ ಆಗಿ ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಆರ್‌ಸಿಬಿ ಹೇಳಿಕೆಯಲ್ಲಿ ತಿಳಿಸಿದೆ.

    ಹಳೆ ಕೋಚ್ ಬಳಗಕ್ಕೆ ಗೇಟ್ ಪಾಸ್:
    2019ರಲ್ಲಿ ಆರ್‌ಸಿಬಿ ತಂಡ ನ್ಯೂಜಿಲೆಂಡ್‌ನ ಮೈಕ್ ಹೇಸನ್ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಮೊದಲ ವರ್ಷ ಮುಖ್ಯ ಕೋಚ್ ಆಗಿದ್ದ ಅವರನ್ನ ನಂತರ ಕ್ರಿಕೆಟ್ ಡೈರೆಕ್ಟರ್ ಮಾಡಿ, ಮುಖ್ಯ ಕೋಚ್ ಸ್ಥಾನಕ್ಕೆ ಸಂಜಯ್ ಬಾಂಗರ್ ಅವರನ್ನ ನೇಮಿಸಲಾಯಿತು. ಹೇಸನ್ ಮತ್ತು ಬಂಗಾರ್ ಜೋಡಿಯ ಸಾರಥ್ಯದಲ್ಲಿ 2020, 2021 ಮತ್ತು 2022ರ ಆವೃತ್ತಿಗಳಲ್ಲಿ ಸತತವಾಗಿ ಪ್ಲೇ ಆಫ್ ತಲುಪಿದ್ದ ಆರ್‌ಸಿಬಿ ಐಪಿಎಲ್ 2023 ಟೂರ್ನಿಯಲ್ಲಿ ನಾಕ್‌ಔಟ್ ಹಂತಕ್ಕೇರಲು ವಿಫಲವಾಯಿತು. 16ನೇ ಆವೃತ್ತಿಯಲ್ಲೂ ಉತ್ತಮ ತಂಡ ಹೊಂದಿದ್ದರೂ ಪ್ಲೇ ಆಫ್‌ನಿಂದ ಹೊರಗುಳಿದ ಕಾರಣ ಆರ್‌ಸಿಬಿ ಫ್ರಾಂಚೈಸಿ ಈ ನಿರ್ಧಾರಕ್ಕೆ ಬಂದಿದೆ. ಇದನ್ನೂ ಓದಿ: ಐಷಾರಾಮಿ ಬೇಡ, ಕನಿಷ್ಠ ಸೌಲಭ್ಯವನ್ನು ವೆಸ್ಟ್ ಇಂಡೀಸ್ ಮಾಡಿಲ್ಲ – ಹಾರ್ದಿಕ್ ಪಾಂಡ್ಯ ಗರಂ

    ಆಂಡಿ ಫ್ಲವರ್ ಯಾರು?
    2022ರ ಆವೃತ್ತಿಯಲ್ಲಿ ಐಪಿಎಲ್ ಪ್ರವೇಶಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದ ಆಂಡಿ ಫ್ಲವರ್ (55), ಚೊಚ್ಚಲ ಆವೃತ್ತಿಯಲ್ಲೇ ಫ್ಲೇ ಆಫ್ ಪ್ರವೇಶಿಸುವಂತೆ ಮಾಡಿದ್ದರು. 2023ರ ತನ್ನ 2ನೇ ಆವೃತ್ತಿಯಲ್ಲೂ ಕೆ.ಎಲ್ ರಾಹುಲ್ ಸಾರಥ್ಯದ ಲಕ್ನೋ ತಂಡ ಪ್ಲೇ-ಆಫ್ ಎಂಟ್ರಿ ಕೊಟ್ಟಿತ್ತು. 2022ರಲ್ಲಿ ಎಲ್‌ಎಸ್‌ಜಿ ತಂಡ ಸೇರಿದ್ದ ಫ್ಲವರ್, ಮೆಂಟರ್ ಗೌತಮ್ ಗಂಭೀರ್ ಜೊತೆಗೂಡಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇನ್ನೂ ಲಕ್ನೋ ತಂಡ ಆಸ್ಟ್ರೇಲಿಯಾದ ಮಾಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರನ್ನ ತನ್ನ ನೂತನ ಮುಖ್ಯ ಕೋಚ್ ಆಗಿ ತೆಗೆದುಕೊಂಡಿದೆ. ಆರ್‌ಸಿಬಿ ಮುಖ್ಯಕೋಚ್ ತೆಗೆದುಕೊಂಡಿರುವುದಕ್ಕೆ ಫ್ಲವರ್ ಸಂತಸ ವ್ಯಕ್ತಪಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆರ್​ಸಿಬಿ ತಂಡಕ್ಕೆ ಮೈಕ್ ಹೆಸನ್ ನೂತನ ಕೋಚ್

    ಆರ್​ಸಿಬಿ ತಂಡಕ್ಕೆ ಮೈಕ್ ಹೆಸನ್ ನೂತನ ಕೋಚ್

    ಬೆಂಗಳೂರು: ಯುಎಇಯಲ್ಲಿ ನಡೆಯಲಿರುವ ಐಪಿಎಲ್‍ನ ಎರಡನೇ ಭಾಗಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೈಕ್ ಹೆಸನ್ ಅವರನ್ನು ನೂತನ ಕೋಚ್ ಆಗಿ ನೇಮಕ ಮಾಡಿದೆ.

    ಈ ಹಿಂದೆ ಆರ್​ಸಿಬಿ ತಂಡದ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಸೈಮನ್ ಕ್ಯಾಟಿಚ್ ಅವರು ವೈಯಕ್ತಿಕ ಕಾರಣ ಹೇಳಿ ಐಪಿಎಲ್ ಕೋಚ್ ಸ್ಥಾನದಿಂದ ಹಿಂದೆ ಸರಿದಿದ್ದಾರೆ. ಅವರ ಬದಲು ಮೈಕ್ ಹಸನ್ ಅವರಿಗೆ ಮುಖ್ಯ ಕೋಚ್ ಹುದ್ದೆಯನ್ನು ನೀಡಲಾಗಿದೆ ಎಂದು ಆರ್​ಸಿಬಿ ತಂಡದ ವ್ಯವಸ್ಥಾಪಕರಾದ ರಾಜೇಶ್ ಮೆನನ್ ಸ್ಥಳೀಯ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಟ್ರೋಫಿಯ ಆನ್‍ಲೈನ್ ವಿಶ್ವದರ್ಶನ ಪ್ರಾರಂಭ

    ಕ್ಯಾಟಿಚ್ ಅವರು ಕೋಚ್ ಆಗಿ ಉತ್ತಮ ಕಾರ್ಯ ಆರ್​ಸಿಬಿ ತಂಡದ ಪರ ನಿರ್ವಹಿಸಿದ್ದರು ಅವರಿಗೆ ಧನ್ಯವಾದ. ಈ ಆವೃತ್ತಿಯ ಅಂತ್ಯದವರೆಗೆ ಮೈಕ್ ಹೆಸನ್ ಅವರು ಆರ್​ಸಿಬಿ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ತಂಡಕ್ಕೆ ಶ್ರೀಲಂಕಾದ ಆಲ್‍ರೌಂಡರ್ ವನಿಂದು ಹಸರಂಗ ಅವರನ್ನು ಆಸ್ಟ್ರೇಲಿಯಾದ ಆಟಗಾರ ಆ್ಯಡಂ ಜಂಪಾ ಅವರ ಸ್ಥಾನಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಐಪಿಎಲ್‍ಗೆ ವಿಶೇಷ ನಿಯಮ ಜಾರಿ ಮಾಡಿದ ಬಿಸಿಸಿಐ

    ಐಪಿಎಲ್ ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ಆರಂಭಗೊಂಡು, ಅಕ್ಟೋಬರ್ 15ಕ್ಕೆ ಅಂತ್ಯಗೊಳ್ಳಲಿದೆ. ಈಗಾಗಲೇ ಕೆಲ ತಂಡಗಳು ಯುಎಇಗೆ ತೆರಳಿ ಅಭ್ಯಾಸ ಆರಂಭಿಸಿದೆ.

  • ಕಪ್ ಗೆಲ್ಲಲು ಆರ್‌ಸಿಬಿ ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ

    ಕಪ್ ಗೆಲ್ಲಲು ಆರ್‌ಸಿಬಿ ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕಪ್ ಗೆಲ್ಲುವುದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ ತಂದಿದೆ.

    ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಮತ್ತು ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಅವರನ್ನು ಆರ್‌ಸಿಬಿ ಕೈಬಿಟ್ಟಿದೆ. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ಮಾಜಿ ಸಹಾಯಕ ಕೋಚ್ ಸೈಮನ್ ಕ್ಯಾಟಿಚ್, ಆರ್‌ಸಿಬಿ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

    ಆರ್‌ಸಿಬಿ ಫ್ರಾಂಚೈಸಿ ನೂತನ ಮುಖ್ಯ ಕೋಚ್ ಹೆಸರನ್ನು ಶುಕ್ರವಾರ ಪ್ರಕಟಿಸಿದ್ದಾರೆ. ನ್ಯೂಜಿಲೆಂಡ್‍ನ ಮಾಜಿ ಕೋಚ್ ಮೈಕ್ ಹೆಸ್ಸನ್‍ರನ್ನು ಕ್ರಿಕೆಟ್ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಸದ್ಯ ಆರ್‌ಸಿಬಿ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಸೈಮನ್ ಕ್ಯಾಟಿಚ್ ಅವರು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟ್ಸಮನ್ ಆಗಿದ್ದರು. ಜೊತೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಮಾಜಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ.

    ಆಶಿಶ್ ನೆಹ್ರಾ ಹಾಗೂ ಕರ್ಸ್ಟನ್ ಅವರು 2011ರ ವಿಶ್ವಕಪ್ ವಿಜೇತ ಭಾರತೀಯ ತಂಡದೊಂದಿಗೆ ಗುರುತಿಸಿಕೊಂಡಿದ್ದರು. ಆಗ ನೆಹ್ರಾ ತಂಡದಲ್ಲಿ ಬೌಲರ್ ಮತ್ತು ಕರ್ಸ್ಟನ್ ಭಾರತದ ತಂಡದ ಮುಖ್ಯ ಕೋಚ್ ಆಗಿದ್ದರು. ಹೀಗಾಗಿ ಈ ಜೋಡಿಗೆ ಆರ್‌ಸಿಬಿ ಮಣೆ ಹಾಕಿತ್ತು. ಆದರೆ ಐಪಿಎಲ್ 12 ಆವೃತ್ತಿಗಳಲ್ಲಿ ಯಾವುದರಲ್ಲಿಯೂ ಆರ್‌ಸಿಬಿ ಗೆಲುವು ಸಾಧಿಸಿಲ್ಲ. ಹೀಗಾಗಿ ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ ತರಲಾಗಿದೆ ಎಂದು ವರದಿಯಾಗಿದೆ.

    2018ರಲ್ಲಿ ನ್ಯೂಜಿಲೆಂಡ್‍ನ ಡೇನಿಯಲ್ ವೆಟೋರಿ ಬದಲಿಗೆ ಗ್ಯಾರಿ ಕರ್ಸ್ಟನ್ ಅವರಿಗೆ ಆರ್‌ಸಿಬಿ ಮಣೆ ಹಾಕಿತ್ತು. ಆದರೆ ಅವರ ತರಬೇತಿ ಅಡಿ ತಂಡದ ಸಾಧನೆ ನಿರಾಶಾದಾಯಕವಾಗಿತ್ತು. 2016ರಲ್ಲಿ ಫೈನಲ್‍ಗೆ ತಲುಪಿತ್ತು. ಆ ಬಳಿಕ ನಡೆದ 2018ರ ಹಾಗೂ 2019ರ ಆವೃತ್ತಿಯಲ್ಲಿ ಕ್ರಮವಾಗಿ ಆರು, ಎಂಟನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬೆಂಗಳೂರಿಗೆ ಇದುವರೆಗೂ ಒಂದು ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಕ್ಯಾಟಿಚ್ ಐಪಿಎಲ್‍ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಹೆಸ್ಸನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ತರಬೇತುದಾರರಾಗಿದ್ದರು.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್‌ಸಿಬಿ ತಂಡದ ಅಧ್ಯಕ್ಷ ಸಂಜೀವ್ ಚುರಿವಾಲಾ, ಬೆಂಗಳೂರು ತಂಡವು ವಿಶ್ವಾಸಾರ್ಹ, ಗೌರವಾನ್ವಿತ ಮತ್ತು ಅತ್ಯುತ್ತಮ ಟಿ-20 ಫ್ರ್ಯಾಂಚೈಸ್ ಆಗಿದೆ. ಹೆಸ್ಸನ್ ಮತ್ತು ಕ್ಯಾಟಿಚ್ ಇಬ್ಬರೂ ನಮ್ಮನ್ನು ವಿಜೇತ ತಂಡವನ್ನಾಗಿ ಮಾಡಲು ಅಗತ್ಯವಾದ ಅನುಭವವನ್ನು ಹೊಂದಿದ್ದಾರೆ. ಕ್ಯಾಟಿಚ್ ಅವರ ಅನುಭವ ಮತ್ತು ಬಲವಾದ ತಂಡಗಳನ್ನು ನಿರ್ಮಿಸಿದ ಹೆಸ್ಸನ್ ಅವರ ಅನುಭವವು ನಮ್ಮನ್ನು ಗೆಲ್ಲುವ ತಂಡವನ್ನಾಗಿ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಗೆಲ್ಲದ ತಂಡಗಳು:
    ಇಲ್ಲಿವರೆಗೆ ಐಪಿಎಲ್ 12 ಆವೃತ್ತಿಗಳು ನಡೆದಿದ್ದು, ಮೂರು ತಂಡಗಳು ಇಲ್ಲಿವರೆಗೂ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಆರ್‍ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಕಪ್ ಗೆಲ್ಲದೆ ಇರುವ ತಂಡಗಳಾಗಿದೆ.

    2019ರ ಐಪಿಎಲ್ ಆವೃತ್ತಿಯಲ್ಲಿ ಗೆಲ್ಲುವ ಮೂಲಕ ಮುಂಬೈ ನಾಲ್ಕನೇ ಬಾರಿ ಟ್ರೋಫಿ ತನ್ನದಾಗಿಸಿಕೊಂಡ ತಂಡವಾಗಿ ಹೊರ ಹೊಮ್ಮಿತು. ಈ ಮೂಲಕ ಐಪಿಎಲ್ ಸೀಸನ್‍ನಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದ ತಂಡವಾಗಿ ಮುಂಬೈ ಇಂಡಿಯನ್ಸ್ ಗುರುತಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ಚೊಚ್ಚಲ ಸೀಸನ್ (2008)ರಲ್ಲಿ ಗೆಲುವು ಸಾಧಿಸಿತ್ತು. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ 3, ಕೋಲ್ಕತ್ತಾ ನೈಟ್‍ರೈಡರ್ಸ್ 2 ಹಾಗೂ ಸನ್‍ರೈಸರ್ಸ್ ಹೈದರಾಬಾದ್ ಒಂದು ಬಾರಿ ಟ್ರೋಫಿ ಗೆದ್ದುಕೊಂಡಿದೆ.