ಹೈದರಾಬಾದ್: ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ತಮ್ಮ ಬಹುಕಾಲದ ಗೆಳತಿ ಮಿಹೀಕಾ ಬಜಾಜ್ ಅವರನ್ನು ವಿವಾಹವಾಗಿರುವುದು ತಿಳಿದೇ ಇದೆ. ಆದರೆ ಲಾಕ್‍ಡೌನ್ ಸಂದರ್ಭದಲ್ಲಿ ಕೇವಲ 30 ಜನರ ಮಧ್ಯೆ ವಿವಾಹವಾಗಿರುವ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಅಲ್ಲದೆ ತಂತ್ರಜ್ಞಾನದ ಮೂಲಕ ಹೆಚ್ಚು ಜನರನ್ನು ಹೇಗೆ ಭಾಗವಹಿಸುವಂತೆ ಮಾಡಬಹುದು ಎಂಬುದನ್ನೂ ಇದೇ ವೇಳೆ ತಿಳಿಸಿದ್ದಾರೆ.

ರಾಣಾ ದಗ್ಗುಬಾಟಿ ಆಗಸ್ಟ್ 8ರಂದು ರಾಮಾನಾಯ್ಡು ಫಿಲ್ಮ್ ಸ್ಟುಡಿಯೋದಲ್ಲಿ ಮಿಹೀಕಾ ಬಜಾಜ್ ಅವರ ಕೈ ಹಿಡಿದಿದ್ದಾರೆ. ಕೇವಲ 30 ಜನ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಆದರೆ ಬಳಿಕ ತಂತ್ರಜ್ಞಾನದ ಮೂಲಕ ಹೆಚ್ಚು ಜನರನ್ನು ತಲುಪಿದೆ. ಈ ಕುರಿತು ಸಂದರ್ಶನವೊಂದರಲ್ಲಿ ರಾಣಾ ಮನಬಿಚ್ಚಿ ಮಾತನಾಡಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಸಿನಿಮಾ ಸ್ಟುಡಿಯೋದಲ್ಲೇ ವಿವಾಹವಾಗಿದ್ದು ಅದ್ಭುತ ಐಡಿಯಾ. ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಹೇಗಿದ್ದರೂ ಸಿನಿಮಾ ಚಿತ್ರೀಕರಣ ನಡೆಯುತ್ತಿರಲಿಲ್ಲ. ಹೀಗಾಗಿ ಸಾಮಾಜಿಕ ಅಂತರ ಕಾಪಾಡುವುದು, ಕಡಿಮೆ ಜನ ಭಾಗವಹಿಸುವಂತೆ ನೋಡಿಕೊಳ್ಳಲು ಸ್ಟುಡಿಯೋಗಿಂತ ಸೂಕ್ತ ಜಾಗ ಬೇರೊಂದಿಲ್ಲ ಎನಿಸಿತು. ಹೀಗಾಗಿ ಸ್ಟುಡಿಯೋದಲ್ಲೇ ವಿವಾಹ ನಡೆಸಲು ಮುಂದಾದೆವು. ನಂತರ ಎಲ್ಲರೂ ಇದನ್ನು ಅದ್ಭುತ ಐಡಿಯಾ ಎಂದು ಹೇಳಿದರು. ಅಲ್ಲದೆ ರಾಮಾನಾಯ್ಡು ಫಿಲ್ಮ್ ಸ್ಟುಡಿಯೋ ನಮ್ಮ ಮನೆಯಿಂದ ಕೇವಲ 5 ನಿಮಿಷಗಳಷ್ಟು ದೂರ. ನನ್ನ ಇಬ್ಬರೇ ಸ್ನೇಹಿತರು ವಿವಾಹದಲ್ಲಿ ಭಾಗವಹಿಸಿದ್ದರು. 30ಕ್ಕಿಂತ ಕಡಿಮೆ ಜನ ಭಾಗವಹಿಸಿದ್ದರು. ಭಾಗವಹಸಿದ ಇಬ್ಬರು ಸ್ನೇಹಿತರು ಸಹ ನನ್ನೊಂದಿಗೆ ಇದ್ದವರು ಎಂದು ಹೇಳಿದ್ದಾರೆ.

ವಿವಾಹದಲ್ಲಿ ಬಳಸಿದ ತಂತ್ರಜ್ಞಾನದ ಕುರಿತು ಸಹ ಅವರು ಮಾತನಾಡಿದ್ದು, 30 ಜನ ಹೊರತುಪಡಿಸಿದರೆ ಉಳಿದೆಲ್ಲ ನನ್ನ ಸ್ನೇಹಿತರು ವರ್ಚುವಲ್ ರಿಯಾಲಿಟಿ(ವಿಆರ್) ಮೂಲಕ ಸಾಕ್ಷಿಯಾದರು. ನಮ್ಮ ದೊಡ್ಡ ಕುಟುಂಬ ಹಾಗೂ ಸ್ನೇಹಿತರಿಗಾಗಿ ವಿಆರ್ ಹೆಡ್ ಸೆಟ್ ಹಾಗೂ ಸಿಹಿ ತಿಂಡಿಗಳು ಹಾಗೂ ಇತರೆ ಸಾಮಗ್ರಿಗಳನ್ನು ಕಳುಹಿಸಿದ್ದೆವು ಎಂದಿದ್ದಾರೆ.

ನನ್ನ ವಿವಾಹದ ಸಂದರ್ಭವನ್ನು ವಿಆರ್ ಮೂಲಕ ಚಿತ್ರಿಸಿದ್ದೆವು, ವಿವಾಹದಲ್ಲಿ ಭಾಗವಹಿಸಲು ಸಾಧ್ಯವಾಗದ ನನ್ನ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ವಿಆರ್ ಹೆಡ್‍ಸೆಟ್ ಕಳುಹಿಸಿದ್ದೆನು. ಈ ಮೂಲಕ ಅವರು ವಿವಾಹದ ಕ್ಷಣಗಳನ್ನು ಕಣ್ತುಂಬಿಕೊಂಡಿದ್ದಾರೆ. ವಿವಾಹದ ಬಳಿಕ ವಿಆರ್ ಬಾಕ್ಸ್, ಸಿಹಿ ತಿಂಡಿ ಹಾಗೂ ಇತರೆ ಸಾಮಗ್ರಿಗಳನ್ನು ಕಳುಹಿಸಿದ್ದೆವು. ಈ ಮೂಲಕ ಅವರು ನೈಜವಾಗಿ ಕಣ್ತುಂಬಿಕೊಂಡ ಅನುಭವವನ್ನು ನಿಡಲಾಗಿದೆ. ಇದರಿಂದಾಗಿ ಅವರು ನಮ್ಮ ವಿವಾಹದಲ್ಲಿ ನೈಜವಾಗಿ ಭಾಗವಹಿಸಿದ ಅನುಭವವಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ವರ್ಚುವಲ್ ರಿಯಾಲಿಟಿ ವೀಕ್ಷಿಸಿದ್ದ ಟಾಲಿವುಡ್ ನಟ ನಾಣಿ ಟ್ವಿಟ್ಟರ್ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದರು. ವಿಆರ್ ಹೆಡ್‍ಸೆಟ್ ಹಾಕಿರುವ ಫೋಟೋ ಟ್ವೀಟ್ ಮಾಡಿ ಸಾಲುಗಳನ್ನು ಬರೆದಿದ್ದರು. ರಾಣಾ ದಗ್ಗುಬಾಟಿಯವರ ಬ್ಯಾಚುಲರ್ ಲೈಫ್ ಅಂತ್ಯವಾಗುವುದನ್ನು ವೀಕ್ಷಿಸುತ್ತಿದ್ದೇನೆ. ಅಭಿನಂದನೆಗಳು ಬಾಬೈ, ಏನಿದು ತಂತ್ರಜ್ಞಾನ ಎಂದು ಬರೆದುಕೊಂಡಿದ್ದರು.
ಆಗಸ್ಟ್ 8ರಂದು ಲಾಕ್‍ಡೌನ್ ವೇಳೆ ನಡೆದ ರಾಣಾ ದಗ್ಗುಬಾಟಿ ಹಾಗೂ ಮಿಹೀಕಾ ಬಜಾಜ್ ಅವರ ವಿವಾಹದಲ್ಲಿ ನಾಗಚೈತನ್ಯ, ಪತ್ನಿ ಸಮಂತಾ, ಅಲ್ಲು ಅರ್ಜುನ್, ರಾಮ್ ಚರಣ್, ಉಪಾಸನಾ ಕಮಿನೇನಿ ಹಾಗೂ ಇತರ ಕೆಲ ನಟ, ನಟಿಯರು ಮಾತ್ರ ಭಾವಹಿಸಿದ್ದರು.