Tag: Migrant labourers

  • ‘ನಮ್ಮನ್ನು ಊರಿಗೆ ಕಳಿಸಿ, ಹಸಿವಿನಿಂದ ಸಾಯ್ತಿದ್ದೇವೆ’- ಮುಂಬೈನಲ್ಲಿ ಸಿಡಿದೆದ್ದ ವಲಸೆ ಕಾರ್ಮಿಕರು

    ‘ನಮ್ಮನ್ನು ಊರಿಗೆ ಕಳಿಸಿ, ಹಸಿವಿನಿಂದ ಸಾಯ್ತಿದ್ದೇವೆ’- ಮುಂಬೈನಲ್ಲಿ ಸಿಡಿದೆದ್ದ ವಲಸೆ ಕಾರ್ಮಿಕರು

    ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರವರಗೆ ಲಾಕ್‍ಡೌನ್ ವಿಸ್ತರಣೆ ಬೆನ್ನಲ್ಲೇ ಮುಂಬೈನಲ್ಲಿ ವಲಸೆ ಕಾರ್ಮಿಕರ ಆಕ್ರೋಶ ಕಟ್ಟೆ ಒಡೆದಿದೆ. ನಮ್ಮನ್ನು ಊರಿಗೆ ಕಳಿಸಿ, ಹಸಿವಿನಿಂದ ಸಾಯುತ್ತಿದ್ದೇವೆ ಎಂದು ಸಾವಿರಾರು ದಿನಗೂಲಿ ನೌಕರರು ಬಾಂದ್ರಾ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

    ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಆದಾಗಿನಿಂದ ಕಟ್ಟಡ ನಿರ್ಮಾಣ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದುಡಿಮೆ ಇಲ್ಲದೆ ಹೊತ್ತಿನ ಊಟಕ್ಕೂ ಅವರು ಪರದಾಡುವಂತಾಗಿದೆ. ಹೀಗಾಗಿ ಇಂದು ಮಧ್ಯಾಹ್ನದ ವೇಳೆ ಸಾವಿರಾರು ಕೂಲಿ ಕಾರ್ಮಿಕರು ಬಾಂದ್ರಾ ನಿಲ್ದಾಣದ ಬಳಿ ಜಮಾಯಿಸಿ, ನಮ್ಮ ಊರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಕಲ್ಪಿಸಿ. ನಾವು ನಿತ್ಯವೂ ಹಸಿವಿನಿಂದ ಸಾಯುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಲಾಕ್‍ಡೌನ್ ಉಲ್ಲಂಘಿಸಿ ಸಾವಿರಾರು ಜನರು ಜಮಾಯಿಸಿದ್ದರಿಂದ ಪೊಲೀಸರು ಲಾಠಿ ಚಾರ್ಜ್ ನಡೆಸಿ ಅವರನ್ನು ಚದುರಿಸಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿವೆ. ಮುಂಬೈನಲ್ಲಿ ಅತೀ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ. ಮುಂಬೈನ ಧಾರಾವಿಯಲ್ಲಿ ಇಂದು ಕೂಡ ಇಬ್ಬರು ಸಾವನ್ನಪ್ಪಿದ್ದಾರೆ.

    ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11 ಸಾವಿರ ದಾಟಿದೆ. ಕಳೆದ 24 ಗಂಟೆಯಲ್ಲಿ 1,200ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, 31 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೊನಾಗೆ ಮೃತಪಟ್ಟವರ ಸಂಖ್ಯೆ 365 ಆಗಿದೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಎರಡು ರಾಜ್ಯಗಳಲ್ಲಿ ಸೋಮವಾರ ಒಂದೇ ದಿನ 350ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಇಂದು ಕೂಡ ಮಹಾರಾಷ್ಟ್ರದಲ್ಲಿ 121 ಮಂದಿಗೆ ಸೋಂಕು ವ್ಯಾಪಿಸಿದೆ.

    ದೇಶದಲ್ಲಿ ಕೊರೊನಾ ಅಟ್ಟಹಾಸ:
    ರಾಜ್ಯ                ಸೋಂಕಿತರು        ಸಾವು
    ಮಹಾರಾಷ್ಟ್ರ        2,455               160
    ದೆಹಲಿ                1,510                 28
    ತಮಿಳುನಾಡು     1,173                 11
    ರಾಜಸ್ಥಾನ         945                    11
    ಗುಜರಾತ್         617                     26
    ಮಧ್ಯಪ್ರದೇಶ     614                     50